ದೊಡ್ಡ ಗುಣದ “ದೊಡ್ಡ ಪತ್ರೆ”

“ದೊಡ್ಡ ಪತ್ರೆ” ತಮ್ಮ ದುಂಡನೆಯ ದಪ್ಪ ಹಾಗು ಅಗಲವಾದ ಎಲೆಗಳಿಂದ ಕೂಡಿದ ಸಸ್ಯ.

ಲ್ಯಾಮಿನೋಸಿ” ಎಂಬ ಸಸ್ಯ ಕುಟುಂಬಕ್ಕೆ ಸೇರಿದ ದೊಡ್ಡ ಪತ್ರೆಯ ಸಸ್ಯ ಶಾಸ್ತ್ರೀಯ ಹೆಸರು  ”ಕೋಲಿಯಸ್ ಆರೋಮಾಟಿಕಸ್” ಅಥವಾ  “ಪ್ಲೆಕ್ಟ್ರಂತಸ್ ಅಂಬೋಯಿನಿಕಸ್” ಎಂದು, ಇವು ಸುಮಾರು ಮೂವತ್ತರಿಂದ ತೊಂಬತ್ತು ಸೆ.ಮೀ ಎತ್ತರದವರೆಗೆ ಬೆಳೆಯಬಲ್ಲದು.  ದಕ್ಷಿಣ ಹಾಗು ಪೂರ್ವ ಆಫ್ರಿಕಾ ಮೂಲದ ಈ ಸಸ್ಯ ಇಂಡಿಯನ್ ಬೋರ್ಏಜ್, ಇಂಡಿಯನ್ ಮಿಂಟ್, ಮೆಕ್ಸಿಕನ್ ಮಿಂಟ್, ಸೂಪ್ ಮಿಂಟ್, ಫ್ರೆಂಚ್ ಥೀಮ್, ಸ್ಪ್ಯಾನಿಷ್ ಥೀಮ್ ಎಂದು ಹೆಸರುವಾಸಿ ಹಾಗು ಸುಗಂಧವನ್ನು ಕೂಡ ಸೂಸುತ್ತದೆ.

ದೊಡ್ಡ ಪತ್ರೆಯ ಗಿಡಗಳು ಹಳ್ಳಿಯ ಕಡೆ ಮನೆ ಮನೆಗಳ ಹಿತ್ತಲುಗಳಲ್ಲಿ ರಾಶಿ ರಾಶಿ ಬೆಳೆದಿರುವುದನ್ನು ನೋಡಬಹುದು. ಈ ಸಸಿಯು ಕೇವಲ ಒಂದು ಕಡ್ಡಿಯನ್ನು ನೆಟ್ಟರೆ ಸಾಕು ಫಲವತ್ತಾಗಿ ಹಬ್ಬಿಕೊಳ್ಳುತ್ತದೆ. ಅಗಲವಾದ ಗುಂಡನೆಯ ಆಕಾರದಲ್ಲಿ ದಪ್ಪ ಎಲೆಗಳನ್ನು ಹೊಂದಿರುವ ದೊಡ್ಡ ಪತ್ರೆಯನ್ನು ಕರ್ಪೂರವಳ್ಳಿ ಎಂದು ಸಹ ಕರೆಯುತ್ತಾರೆ.ಈ ಸಸ್ಯವು ನಮ್ಮ ದಕ್ಷಿಣ ಭಾರತದಲ್ಲಿ ಬಹಳಷ್ಟು ಬಳಕೆ ಮಾಡುತ್ತಾರೆ. ಎಷ್ಟೋ ದೇಶಗಳಲ್ಲಿ ದೊಡ್ಡ ಪತ್ರೆಯ ಎಲೆಗಳನ್ನು ಅಡಿಗೆಯಲ್ಲಿನ ರುಚಿ ಹಾಗು ಘಮಲನ್ನು ಹೆಚ್ಚಿಸಲು ಬಳಸುತ್ತಾರೆ. ನಮ್ಮ ಭಾರತದಲ್ಲಂತೂ ದೊಡ್ಡ ಪತ್ರೆ ಎಲೆಗಳಿಂದ ಚಟ್ನಿ, ತೊಕ್ಕು, ಬಜ್ಜಿ, ಉಪ್ಪಿನಕಾಯಿ ಮತ್ತು ಇನ್ನಿತರ ಖಾದ್ಯಗಳನ್ನು ತಯಾರಿಸುತ್ತಾರೆ. ಇದರಿಂದ ಮಾಡಿದ ಖಾದ್ಯಗಳನ್ನು ಸವಿಯುತಿದ್ದರೆ ಅದರ ಸುಗಂಧ ಮೂಗಿಗೆ ಏರಿ ಇನ್ನಷ್ಟು ತಿನ್ನುವ ಬಯಕೆ ಹೆಚ್ಚುತ್ತದೆ. ಇದರ ಎಲೆಗಳನ್ನು ಕೊಯ್ದು ಸ್ವಲ್ಪ ಬೆಂಕಿಯಲ್ಲಿ ಬಾಡಿಸಿ ಹಿಂಡಿದರೆ ನೀರು ಸಿಗುತ್ತದೆ.

ದೊಡ್ಡ ಪತ್ರೆಯ ಸಸಿಯು ಚಿಕ್ಕದಾಗಿ ಚೊಕ್ಕವಾಗಿ ಬೆಳೆದರು ಅದರ ಗುಣಗಳನ್ನು ತಿಳಿದುಕೊಂಡರೆ ಎಷ್ಟು ಬಳಸಿದರು ಕಡಿಮೆ ಎನಿಸುತ್ತದೆ. ಬಾಣಂತಿಯರಲ್ಲಿ ಎದೆ ಹಾಲು ಹೆಚ್ಚು ಉತ್ಪತ್ತಿಯಾಗಲು ಹಳ್ಳಿಗಳಲ್ಲಿ ಇಂದಿಗೂ ಉಪಯೋಗಿಸುತ್ತಾರೆ. ಶೀತ, ಕೆಮ್ಮು, ಜ್ವರ, ಗಂಟಲು ಬೇನೆ ಇದ್ದಲ್ಲಿ ಹಿತ್ತಲಿನಿಂದ ಒಂದೆರಡು ಎಲೆಗಳನ್ನು ತಂದು ನೀರಿನಲ್ಲಿ ಕುಡಿಸಿ ಕುಡಿದರೆ ಎಷ್ಟೋ ಆರಾಮೆನಿಸುತ್ತದೆ. ಚರ್ಮ ವ್ಯಾದಿಗಳಿಗಂತೂ ಇದು ಅತೀ ಉಪಾಯಕಾರಿ. ಎಲೆಯ ರಸವನ್ನು ಸವರಿದರೆ ತುರಿಕೆ, ಉರಿಯಂತಹ ತೊಂದರೆ ಹತ್ತಿರವೂ ಸುಳಿಯದು. ಅಜೀರ್ಣ, ಮುಟ್ಟಿನ ತೊಂದರೆಗಳನ್ನು ಸರಿಪಡಿಸುವ ಸದ್ಗುಣ ದೊಡ್ಡ ಪತ್ರೆಯಲ್ಲಿದೆ.

ವಿಟಮಿನ್ ‘ಸಿ’ ಹಾಗು ‘ಎ’ ಅಂಶಗಳು ಇದರಲ್ಲಿ ಹೆಚ್ಚಾಗಿ ಸಿಗುವುದಲ್ಲದೆ ಅದರಿಂದ ದೊಡ್ಡ ಪತ್ರೆಯನ್ನು ನಮ್ಮ ಆಹಾರ ಪದ್ದತಿಯಲ್ಲಿ ಸೇರಿಸಿಕೊಂಡರೆ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ದೃಷ್ಟಿ ದೋಷ ಕೂಡ ನಿವಾರಣೆಯಾಗುತ್ತದೆ ಎಂದು ನಂಬಿಕೆ. ಕ್ಯಾಲ್ಸಿಯಂ, ಮ್ಯಾಗ್ನೇಸಿಯಂ, ಐರನ್, ಸೋಡಿಯಂ, ಹಾಗು ಇತರೆ ಪೌಷ್ಠಿಕಾಂಶಗಳಿಂದ ಕೂಡಿದ್ದು ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣ ಲಕ್ಷಣಗಳನ್ನು ಹೊಂದಿರುತ್ತದೆ. ಇದರ ರಸವನ್ನು ಸೇವಿಸುವುದರಿಂದ ಮಾನಸಿಕ ಒತ್ತಡಗಳು ಕೂಡ ಕಡಿಮೆಯಾಗುತ್ತದೆ ಜೊತೆಗೆ ರಕ್ತದಲ್ಲಿ ಸೇರಿರುವ ಅಪಾಯಕಾರಿ ಟಾಕ್ಸಿನ್ಸ್ ಗಳನ್ನೂ ಹೊರ ಹಾಕುತ್ತದೆ. ಗಾಯ ಅಥವಾ ಚೇಳು ಕಡಿತವಾದಾಗ ನಂಜು ಏರದಿರಲು ಪ್ರಥಮ ಚಿಕಿತ್ಸೆಯಾಗಿ ಇದರ ಎಲೆಗಳನ್ನು ಜಜ್ಜಿ ಬಳಸಲಾಗುತ್ತದೆ.

ದೊಡ್ಡ ಪತ್ರೆ ಉಪಯೋಗದಲ್ಲಿನ ಅನುಕೂಲತೆಯ ಜೊತೆಗೆ ಅನಾನುಕೂಲವು ಸ್ವಲ್ಪ ಮಟ್ಟಿಗೆ ಇದೆ. ಇದರ ಖಾದ್ಯಗಳಲ್ಲಿ ಹೆಪಟೊಟಾಕ್ಸಿಕ್ (hepatotoxic) ಪಿರ್ರೋಲಿಝಿಡಿನೇ (pyrrolizidine) ಹಾಗು ಅಲ್ಕಲೋಯ್ಡ್ಸ್ (alkaloids) ಇರುವುದರಿಂದ ಲಿವರ್ ಕಾಯಿಲೆ ಇರುವವರಿಗೆ ಇದರ ಸೇವನೆ ನಿಷಿದ್ಧ ಹಾಗು ರಕ್ತಸ್ರಾವದ ಸಮಸ್ಯೆ ಇರುವವರು ವೈದ್ಯರ ಸಲಹೆ ಮೇರೆಗೆ ಇದರ ಸೇವನೆ ಮಾಡಬೇಕು.

ಇಷ್ಟೆಲ್ಲಾ ಉಪಯುಕ್ತವಾಗಿರುವ ದೊಡ್ಡ ಪಾತ್ರೆಯದ್ದು ದೊಡ್ಡತನವೇ ನಿಜ. ಇಂತಹ ಸಸ್ಯವನ್ನು ನಿಮ್ಮ ಮನೆಯ ಅಂಗಳದಲ್ಲಿ ಬೆಳೆಸಿ ಇದರ ಉಪಯೋಗಗಳನ್ನು ನೀವು ಪಡೆದುಕೊಂಡು ನಿಮ್ಮ ನೆರೆ ಹೊರೆಯವರಿಗೂ ತಿಳಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಲ್ಲವೇ?

ಶಿಲ್ಪ

Related post

5 Comments

  • Good health tips. Some more health tips in the next post

  • Super

  • Very good info useful

  • Thank you very good article

  • Informative article

Leave a Reply

Your email address will not be published. Required fields are marked *