ಧನಾತ್ಮಕ ದೃಷ್ಟಿ

ಧನಾತ್ಮಕ ದೃಷ್ಟಿ

ಆರೋಗ್ಯಕರವಾದ ದೇಹದಲ್ಲಿ ಆರೋಗ್ಯಕರವಾದ ಮನಸ್ಸು ಇರುತ್ತದೆ. ಸಜ್ಜನರ ಸಂಗ, ಉತ್ತಮ ಗ್ರಂಥಗಳ ವಾಚನ, ಚಿಂತನೆ ಮತ್ತು  ಆತ್ಮಾವಲೋಕನದಿಂದ ಧನಾತ್ಮಕ ದೃಷ್ಟಿ ಬೆಳೆಯುತ್ತದೆ.
        ಬುದ್ಧ, ಸಾಕ್ರಟೀಸ್,  ಏಸು, ಬಸವ, ತುಕಾರಾಂ,  ಗಾಂಧಿ ಮೊದಲಾದ ಮಹಾನ್ ವ್ಯಕ್ತಿಗಳು ಧನಾತ್ಮಕವಾಗಿ ಯೋಚಿಸುತ್ತಿದ್ದರು. ತಮ್ಮನ್ನು ಕೊಲ್ಲಲು ಬಂದ ಅಂಗುಲಿಮಾಲನ ಮನಸ್ಸನ್ನು ಬುದ್ಧರು ತಮ್ಮ ಧನಾತ್ಮಕ ಮಾತುಗಳಿಂದ ಪರಿವರ್ತಿಸಿದರು.

ಸಾಕ್ರಟೀಸನ ಹೆಂಡತಿ ಕೋಪಿಷ್ಠೆಯಾಗಿದ್ದಳು. ಹೆಂಡತಿ ಎಷ್ಟೇ ಬೈದರೂ ಸಾಕ್ರಟೀಸ್ ಸದಾ ನಗುತ್ತ ಇರುತ್ತಿದ್ದ. ಒಮ್ಮೆ ಅವಳು ಹೊಲಸು ನೀರು ತಂದು ಹಾಕಿದಳು. ‘ಮೋಡ ಗರ್ಜನೆ ನಂತರ ಮಳೆ ಬಂದಿತು‘ ಎಂದು ಸಾಕ್ರಟೀಸ್ ಸಮಾಧಾನದಿಂದಲೇ ನುಡಿದರು. ಒಮ್ಮೆ ಒಬ್ಬ ಯುವಕ ಸಾಕ್ರಟೀಸರ ಬಳಿ ಬಂದು ಮದುವೆಯ ಬಗ್ಗೆ ಸಲಹೆ ಕೇಳಿದನಂತೆ. ‘ಧಾರಾಳವಾಗಿ ಮದುವೆಯಾಗು, ಒಳ್ಳೆಯ ಹೆಂಡತಿ ಸಿಕ್ಕರೆ ಜೀವನದ ಸುಖವನ್ನು ಅನುಭವಿಸುವಿ, ಇಲ್ಲದಿದ್ದರೆ ನನ್ನ ಹಾಗೆ ತತ್ವಜ್ಞಾನಿಯಾಗುವಿ‘ ಎಂದರಂತೆ.

 ಏಸು ಅವರನ್ನು ಕಂಬಕ್ಕೆ ಮೊಳೆ ಹೊಡೆದು ಕಟ್ಟಿ, ಹೊಡೆಯುತ್ತ ಎಳೆದೊಯ್ದರು. ಆದರೂ ಏಸು ಅವರು ತಮ್ಮ ಧನಾತ್ಮಕ ದೃಷ್ಟಿ ಬಿಡಲಿಲ್ಲ. ‘ಓ ದೇವರೆ, ಇವರನ್ನು ಕ್ಷಮಿಸು. ಏಕೆಂದರೆ ಇವರು ತಪ್ಪು ಮಾಡುತ್ತಿದ್ದಾರೆ ಎಂಬುದು ಅವರಿಗೆ ಗೊತ್ತಿಲ್ಲ‘ ಎಂದು ಅವರು ಪ್ರಾರ್ಥಿಸಿದರು.

ಒಂದು ಸಲ ಬಸವಣ್ಣನವರು ಆರಂಭಿಸಿದ ದಾಸೋಹದಲ್ಲಿ ಕೆಲವು ಉಡಾಳ ಜನರು ಬಿಟ್ಟಿ ಊಟದ ಸವಿ ನೋಡಲು ಬಂದಿರುತ್ತಾರೆ. ಊಟ ಆರಂಭಿಸುವ ಮೊದಲು ಇಷ್ಟಲಿಂಗಕ್ಕೆ ನೈವೇದ್ಯ ತೋರಿಸುವ ಸಂಪ್ರದಾಯ ಇರುತ್ತದೆ. ಅದು ಅವರಿಗೆ ಗೊತ್ತಿರುವುದಿಲ್ಲ. ಆ ಜನರು ಅಲ್ಲಿ ಪಕ್ಕದಲ್ಲಿರುವ ಬದನೆಯಕಾಯಿಗಳನ್ನು ಕೈಯಲ್ಲಿ ಹಿಡಿದುಕೊಳ್ಳುತ್ತಾರೆ. ಬಸವಣ್ಣನವರು ಬಂದು ಇದನ್ನು ನೋಡುತ್ತಾರೆ. ಅವರು ಸಿಟ್ಟಿಗೆ ಬರಬಹುದು ಎಂದು ಅವರು ಗಾಬರಿಯಾಗುತ್ತಾರೆ. ಆದರೆ ಬಸವಣ್ಣನವರು ‘ಇಷ್ಟಲಿಂಗವನ್ನೇ ಬದನೆಯಕಾಯಿ ಎಂದು ಲೇವಡಿ ಮಾಡುವ ಜನ ಹೆಚ್ಚುತ್ತಿರುವ ಇಂದಿನ ಕಾಲದಲ್ಲಿ ಬದನೆಯಕಾಯಿಯಲ್ಲಿ ಇಷ್ಟಲಿಂಗವನ್ನು ಕಂಡ ನೀವೇ ನಿಜವಾದ ಶರಣರು‘ ಎಂದು ಅವರಿಗೆ ವಂದಿಸುತ್ತಾರೆ. ಅವರೆಲ್ಲರ ಮನ ಪರಿವರ್ತನೆಯಾಗಿ ಅವರೆಲ್ಲ ಬಸವಣ್ಣನವರ ಅನುಯಾಯಿಗಳಾಗುತ್ತಾರೆ.

ಒಂದು ದಿನ ರಾತ್ರಿ ಪಕ್ಕದ ಊರಿನ ಕಳ್ಳರು ಬಂದು ಅರಮನೆಯ  ಆಕಳುಗಳನ್ನು ಕದ್ದು ಒಯ್ಯತ್ತಾರೆ. ಮರುದಿನ ದರ್ಬಾರಿನಲ್ಲಿ ಇದರ ಬಗ್ಗೆ ಚರ್ಚೆ ನಡೆಯುತ್ತದೆ. ಬಸವಣ್ಣನವರು ಕರುಗಳನ್ನೂ ಕೂಡ ಒಯ್ದು ಕಳ್ಳರಿಗೆ ಕೊಡುವ ಸಲಹೆ ನೀಡುತ್ತಾರೆ. ಅರಸ ಹಾಗೆಯೇ ಮಾಡುತ್ತಾರೆ. ಕಳ್ಳರು ತಮ್ಮ ಕೆಲಸಕ್ಕೆ ನಾಚಿ ಬಸವಣ್ಣನವರ ಬಳಿ ಬಂದು ಕ್ಷಮೆ ಕೇಳುತ್ತಾರೆ.

ಒಂದು ರಾತ್ರಿ ಬಸವಣ್ಣನವರ ಮನೆಗೆ ಕಳ್ಳ ಬಂದು ನೀಲಾಂಬಿಕೆಯವರ ಒಂದು  ಕಿವಿಯೋಲೆ ಕದಿಯುತ್ತಾನೆ. ನೀಲಾಂಬಿಕೆಯವರು ‘ಕಳ್ಳ, ಕಳ್ಳ’ ಎಂದು ಕೂಗುತ್ತಾರೆ. ಕಾವಲುಗಾರರು ಕಳ್ಳನನ್ನು ಹಿಡಿದು ತಂದು ನಿಲ್ಲಿಸುತ್ತಾರೆ. ‘ಇನ್ನೊಬ್ಬರ ಬಳಿ‌ ಇಲ್ಲದಷ್ಟು ಸಂಪತ್ತು ಕೂಡಿಡುವ ನಾವೇ ನಿಜವಾದ ಕಳ್ಳರು, ಇನ್ನೊಂದು ಓಲೆಯನ್ನು ತೆಗೆದುಕೊಡು‘ ಎಂದು ಆಜ್ಞಾಪಿಸುತ್ತಾರೆ. ನೀಲಾಂಬಿಕೆಯವರು ಆ ಮಾತನ್ನು ಪಾಲಿಸುತ್ತಾರೆ. ಕಳ್ಳ ತನ್ನ ಕೃತ್ಯಕ್ಕೆ ನಾಚಿ‌ಶರಣಾಗುತ್ತಾನೆ. ಬಸವಣ್ಣನವರ ಜೀವನದಲ್ಲಿ ಧನಾತ್ಮಕ ದೃಷ್ಟಿಯ ಇಂತಹ ಅನೇಕ ಘಟನೆಗಳನ್ನು ಉದಾಹರಿಸಬಹುದಾಗಿದೆ.
         ತುಕಾರಾಮರು ಒಮ್ಮೆ ಮನೆಯಲ್ಲಿಯ ಪೂಜೆಗಾಗಿ ಕಬ್ಬು ತರಲು ಹೋಗಿದ್ದರು. ಬರುವಾಗ ದಾರಿಯಲ್ಲಿ ಮಕ್ಕಳು ಕಬ್ಬು ಬೇಡಿದರು. ಮಕ್ಕಳಿಗೆ ಹಂಚಿ ಒಂದು ಕಬ್ಬನ್ನು ಮಾತ್ರ ಕೈಯಲ್ಲಿ ಹಿಡಿದುಕೊಂಡು ಬಂದರು. ಕೋಪಗೊಂಡ ಹೆಂಡತಿ ಅದೇ ಕಬ್ಬಿನಿಂದ ಅವರಿಗೆ ಹೊಡೆದಳು. ಕಬ್ಬು ಎರಡು ತುಂಡಾಯಿತು. ‘ನಾನೇ ನಿನಗೆ ಎರಡು ತುಂಡು ಮಾಡಿ ಕೊಡಬೇಕು ಎಂದಿದ್ದೆ‘ ಎಂದು ತುಕಾರಾಮರು ಶಾಂತವಾಗಿಯೇ ನಗೆ ಚಟಾಕಿ ಹಾರಿಸಿದರಂತೆ.
         ಮಹಾತ್ಮ ಗಾಂಧಿಯವರು ಒಮ್ಮೆ ಜೈಲಿನಲ್ಲಿ ಇದ್ದಾಗ ಕೋಪದಲ್ಲಿ ಇದ್ದ ಕೈದಿಯೊಬ್ಬ ಅವರ ಕೆನ್ನೆಗೆ ಹೊಡೆದನಂತೆ. ‘ನಿನ್ನ ಕೋಪ ಶಾಂತವಾಗಿರದಿದ್ದರೆ ನನ್ನ ಇನ್ನೊಂದು ಕೆನ್ನೆಗೆ ಹೊಡೆಯಬಹುದು. ನಿನ್ನ ಕೈ ನೋವಾಯಿತೇ?‘ ಎಂದು ಗಾಂಧಿಯವರು ಕೇಳಿದಾಗ ಆ ಕೈದಿ ತನ್ನ ತಪ್ಪಿಗೆ ನಾಚಿ ಗಾಂಧಿಯವರಲ್ಲಿ ಕ್ಷಮೆ ಕೇಳಿದನಂತೆ.
         ಗುಡ್ಡಗಾಡು ಪ್ರದೇಶದಲ್ಲಿ ವಾಸವಾಗಿದ್ದ ಓರ್ವ ಬಾಲಕಿ ಅವಳಿಗಿಂತ ಕೊಂಚ ಕಿರಿಯನಾದ  ಬಾಲಕನನ್ನು ಬೆನ್ನ ಮೇಲೆ ಹೊತ್ತು ಗುಡ್ಡ ಏರುತ್ತ ಮನೆಯತ್ತ ಹೊರಟಿದ್ದಳಂತೆ. ದಾರಿಯಲ್ಲಿ ಓರ್ವ ವ್ಯಕ್ತಿ ‘ಇಷ್ಟು ಭಾರ ಹೊತ್ತು ನಡೆಯಲು ನಿನಗೆ ಹೇಗೆ ಸಾಧ್ಯ?’ ಎಂದು ಕೇಳಿದನಂತೆ. ‘ಇದು ಭಾರ ಅಲ್ಲ, ನನ್ನ ತಮ್ಮ‘ ಎಂದು ಆ ಬಾಲಕಿ ಉತ್ತರಿಸಿದಳಂತೆ.
      ಜೀವನದಲ್ಲಿಯ ಎಲ್ಲ ಘಟನೆಗಳತ್ತ ಸದಾ ಧನಾತ್ಮಕವಾಗಿ ನೋಡಿದ ಅನೇಕ ಮಹಾನುಭಾವರ  ಇಂತಹ ಅನೇಕ ಉದಾಹರಣೆಗಳು ನಮ್ಮ ಮುಂದೆ ಇವೆ. ನಾವು ಕೂಡ ಇಂದಿನಿಂದ ಧನಾತ್ಮಕ ದೃಷ್ಟಿಯನ್ನು ಬೆಳೆಸಿಕೊಳ್ಳೋಣ ಬನ್ನಿ.

ಡಾ. ಗುರುಸಿದ್ಧಯ್ಯಾ ಸ್ವಾಮಿ
ಅಕ್ಕಲಕೋಟ, ಮಹಾರಾಷ್ಟ್ರ

Related post

Leave a Reply

Your email address will not be published. Required fields are marked *