ಧೈರ್ಯಂ ಸರ್ವತ್ರ ಸಾಧನಂ – ಪುಸ್ತಕ ವಿಮರ್ಶೆ
ಪುಸ್ತಕದ ಹೆಸರು : ಧೈರ್ಯಂ ಸರ್ವತ್ರ ಸಾಧನಂ
ಲೇಖಕರು : ಸಂತೋಷ್ ರಾವ್ ಪೆರ್ಮುಡ
ಪ್ರಕಾಶಕರು : ನಿರಂತರ
‘ಧೈರ್ಯಂ ಸರ್ವತ್ರ ಸಾಧನಂ’ ನೈಜ ಘಟನೆಗಳಿಂದ ಕೂಡಿದ ಕಾಲ್ಪನಿಕ ಕಥಾ ಸಂಕಲನ. ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಸಂತೋಷ್ ರಾವ್ ಪೆರ್ಮುಡ ಅವರು ತಾವು ನೋಡಿದ, ಕೇಳಿದ, ಅನುಭವಿಸಿದ ಕೆಲವೊಂದು ಘಟನೆಗಳಿಗೆ ಕಲ್ಪನೆಯ ಸ್ಪರ್ಶ ನೀಡಿ ಹೆಣೆದ ಒಟ್ಟು 66 ಬರಹಗಳು ಇದರಲ್ಲಿವೆ.
ಧೈರ್ಯವೊಂದಿದ್ದರೆ ಜೀವನದಲ್ಲಿ ಎದುರಾಗುವ ಎಲ್ಲಾ ಸವಾಲುಗಳನ್ನು ಅರ್ಧ ಗೆದ್ದಂತೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇಂತಹ ವ್ಯಕ್ತಿತ್ವ ವಿಕಸನದ ಪ್ರತೀ ಸಂಗತಿಗಳನ್ನು ಇಲ್ಲಿ ಲೇಖಕರು ಒಂದೊಂದು ಕಥೆಯೊಡನೆ ಹೇಳುವುದು ವಿಶೇಷವಾಗಿದೆ. ಈ ಪುಸ್ತಕ ಓದಲು ಯಾವುದೇ ವಯಸ್ಸಿನ ನಿರ್ಬಂಧವಿಲ್ಲ. ಆಬಾಲವೃದ್ಧರಾದಿಯಾಗಿ ಇದನ್ನು ಓದಬಹುದು. ನನ್ನ ಮಗನ ಕನ್ನಡ ಓದಿನ ಆಸಕ್ತಿ ಬೆಳೆಯಲು ಈ ಪುಸ್ತಕದ ಕೆಲವೊಂದು ಕಥೆಗಳನ್ನು ಓದಿಸಿ ಅದರಲ್ಲಿ ಸಫಲಳಾಗಿದ್ದೇನೆ. ಈಗ ಇಲ್ಲಿ ಕೆಲವೊಂದು ಆಯ್ದ ಕಥೆಗಳ ಪರಿಚಯವನ್ನು ಮಾಡಲು ಬಯಸುತ್ತೇನೆ.
ದೃಢವಾದ ನಿರ್ಧಾರವಿರಲಿ: ಆಶ್ರಮದಲ್ಲಿ ವಾಸವಾಗಿದ್ದ ದಿವ್ಯತೇಜ ಎನ್ನುವ ಸನ್ಯಾಸಿಯೊಬ್ಬರು ನದಿಯಲ್ಲಿ ಸಂಧ್ಯಾ ವಂದನೆ ಮಾಡಿ ಸೂರ್ಯನಿಗೆ ಅರ್ಘ್ಯವನ್ನು ನೀಡಲು ಬೊಗಸೆಯಲ್ಲಿ ನೀರನ್ನು ಎತ್ತಲು ಅದರಲ್ಲಿ ಸುಂದರವಾದ ಬಣ್ಣ ಬಣ್ಣದ ಮೀನೊಂದನ್ನು ನೋಡಿ ಆಶ್ರಮಕ್ಕೆ ತಂದು ಸಾಕುತ್ತಾರೆ. ಆದರೆ ದಿನಕಳೆದಂತೆ ಮೀನು ಗಾತ್ರದಲ್ಲಿ ದೊಡ್ಡದಾಗಿ ಮುನಿಗಳು ಅದರ ಪಾತ್ರೆಯನ್ನು ಬದಲಾಯಿಸಬೇಕಾಗುತ್ತದೆ. ಕೊನೆಗೆ ಈ ಮೀನಿನ ನಿರಂತರ ಬೆಳವಣಿಗೆಯನ್ನು ನೋಡಿ, ಮೀನು ಆಶ್ರಮದ ಗಾಜಿನ ಪಾತ್ರೆಯಲ್ಲಿ ಇರುವ ಬದಲು ನದಿಯಲ್ಲಿ ಇರುವುದೇ ಸೂಕ್ತ ಎಂದು ಮೀನನ್ನು ಮತ್ತೆ ನದಿಗೆ ಬಿಟ್ಟು ಬರುತ್ತಾರೆ. ಈ ಕಥೆಯ ಮೂಲಕ ಗುರಿ ಸ್ಪಷ್ಟವಾಗಿದ್ದರೆ ಮಾತ್ರ ಸತತ ಪ್ರಯತ್ನದಿಂದ ಅದನ್ನು ಸುಲಭವಾಗಿ ತಲುಪಬಹುದು ಎಂಬ ಸಂದೇಶ ಕೊಡುತ್ತಾರೆ.
ಎಲ್ಲಕ್ಕಿಂತ ಮೊದಲು ಕೋಪವನ್ನು ಗೆಲ್ಲಬೇಕು : ಮಾದಪ್ಪ ತುಂಬಾ ಕೋಪಿಷ್ಟ. ಎಲ್ಲಾದರೂ ಸ್ವಲ್ಪ ವ್ಯತ್ಯಾಸವಾದರೂ ಅವನಿಗೆ ಕೋಪ ನೆತ್ತಿಗೇರುತ್ತಿತ್ತು. ಒಮ್ಮೆ ಕಾಶಿ ಯಾತ್ರೆಗಾಗಿ ಹೋದ ಅವನು ತನ್ನಲ್ಲಿರುವ ಕೋಪವನ್ನು ಬಿಟ್ಟು ಬರಬೇಕು ಎಂದು ನಿರ್ಧರಿಸಿದನು. ಕಾಶಿಯಿಂದ ಮರಳಿ ಬಂದ ಮಾದಪ್ಪನಿಗೆ ಮೊಮ್ಮಗಳು ‘ಅಜ್ಜಾ, ನೀವು ನಿಜವಾಗಿಯೂ ಕೋಪವನ್ನು ಬಿಟ್ಟು ಬಂದಿದ್ದೀರಾ’ ಎಂದು ಕೇಳಿದಾಗ ಮಾದಪ್ಪ ಶಾಂತವಾಗಿ ಹೌದು ಮಗು ಎನ್ನುತ್ತಾನೆ. ಆದರೆ ಮೊಮ್ಮಗಳು ಪದೇ ಪದೇ ಅದೇ ಪ್ರಶ್ನೆಯನ್ನು ಕೇಳಿದಾಗ ಕೋಪಗೊಂಡ ಮಾದಪ್ಪ ಅವಳಿಗೆ ಸರಿಯಾಗಿ ಬೈಯ್ಯುತ್ತಾನೆ. ಎಷ್ಟೇ ಕಠಿಣ ಸಂದರ್ಭದಲ್ಲೂ ಸಹನೆಯಿಂದ ವರ್ತಿಸುವುದೇ ನಿಜವಾದ ಜೀವನ ಎಂಬುದೇ ಈ ಕಥೆಯ ನೀತಿಯಾಗಿದೆ. ಕೋಪದ ಕೈಗೆ ಬುದ್ಧಿ ಕೊಟ್ಟರೆ ಅಮೂಲ್ಯ ಸಂಬಂಧಗಳೂ ನಾಶವಾಗಬಹುದೆಂಬ ಸಂದೇಶವಿದೆ.
ಕಚ್ಚದಿದ್ದರೂ ಪರವಾಗಿಲ್ಲ ; ಬುಸುಗುಡುವುದನ್ನು ಮರೆಯಬಾರದು :ಈ ಮೊದಲಿನ ಕಥೆಯಲ್ಲಿ ಕೋಪದ ದುಷ್ಪರಿಣಾಮಗಳ ಬಗ್ಗೆ ಲೇಖಕರು ತಿಳಿ ಹೇಳಿದರೆ ಈ ಕಥೆಯಲ್ಲಿ ಅಗತ್ಯ ಸಂದರ್ಭದಲ್ಲಿ ಕೋಪ ಮಾಡಿಕೊಳ್ಳದೇ ಇದ್ದರೆ ಯಾವ ರೀತಿ ಪರಿಣಾಮ ಬೀರಬಹುದು ಎಂದು ಹೇಳಿದ್ದಾರೆ. ಒಂದು ಕೋಪಿಷ್ಟ ನಾಗರಹಾವು ಊರಿನ ಎಲ್ಲರನ್ನೂ ಕಚ್ಚಿ ಆ ಊರಿನ ಜನರನ್ನು ಭಯಭೀತರನ್ನಾಗಿ ಮಾಡಿತ್ತು. ಜನರು ಚಾಲಾಕಿಯಾದ ಹಾವನ್ನು ಕೊಲ್ಲಬೇಕೆಂಬ ನಿರ್ಧಾರ ಮಾಡುತ್ತಾರೆ ಆದರೆ ಅದು ಅವರ ಕೈಗೆ ಸಿಗದೆ ಕಚ್ಚಿ ಮರೆಯಾಗಿ ಬಿಡುತ್ತಿತ್ತು. ಒಂದು ದಿನ ಒಬ್ಬ ಸನ್ಯಾಸಿ ಆ ದಾರಿಯಾಗಿ ಬರಲು ಈ ನಾಗರಹಾವು ಕಚ್ಚಲು ಬಂದಿತು. ಸನ್ಯಾಸಿ ಸಮಾಧಾನದಿಂದ ನಾಗರಹಾವನ್ನು ಪ್ರಶ್ನಿಸಿದರು. ತನ್ನನ್ನು ನೋಡಿ ಎಲ್ಲರೂ ಭಯಪಡುವಾಗ ಸನ್ಯಾಸಿ ಧೈರ್ಯವಾಗಿದ್ದಾರಲ್ಲಾ ಎಂದು ಹಾವಿಗೆ ಆಶ್ಚರ್ಯವಾಗುತ್ತದೆ. ನೀನು ಊರಿಗೆಲ್ಲಾ ಕೆಟ್ಟವನಾಗಿ ಹೀಗೆ ತಲೆಮರೆಸಿ ಓಡಾಡುವುದಕ್ಕಿಂತ ಒಳ್ಳೆಯವನಾಗಿ ಕಚ್ಚುವುದನ್ನು ಬಿಟ್ಟು ಬಿಡು. ಆಗ ಊರಿನ ಜನರು ನಿನ್ನನ್ನು ಪ್ರೀತಿಸುತ್ತಾರೆ ಎಂದು ಆ ಸನ್ಯಾಸಿ ಬುದ್ಧಿ ಹೇಳಿ ಮುಂದೆ ಹೋಗುತ್ತಾರೆ. ಸ್ವಲ್ಪ ತಿಂಗಳುಗಳು ಕಳೆದು ಆ ಸನ್ಯಾಸಿ ಅದೇ ದಾರಿಯಲ್ಲಿ ವಾಪಸು ಬರುವಾಗ ಅಲ್ಲಿ ಅದೇ ಹಾವು ಗಾಯಗೊಂಡು ನರಳಾಡುತ್ತಾ ಬಿದ್ದುಕೊಂಡಿತ್ತು. ಸನ್ಯಾಸಿಯು ವಿಚಾರಿಸಲು, ಹಾವು ಸನ್ಯಾಸಿಯ ಮಾತಿನಂತೆ ಕಚ್ಚುವುದನ್ನು ನಿಲ್ಲಿಸಿದರೂ ಜನರಿಗೆ ನಾನು ಸಾಧುವಾಗಿದ್ದು ತಿಳಿಯಲೇ ಇಲ್ಲ. ಹಾಗಾಗಿ ಅವರು ನಾನು ಸಿಕ್ಕಿದ ಕಡೆಯೆಲ್ಲಾ ಹೊಡೆದು ಹಿಂಸೆ ಕೊಟ್ಟರು ಎಂದು ಹೇಳುತ್ತದೆ. ಆಗ ಸನ್ಯಾಸಿಯು ‘ಅಯ್ಯೋ ದಡ್ಡ ಹಾವೇ, ನಾನು ನಿನಗೆ ಕಚ್ಚಬೇಡ ಎಂದು ಹೇಳಿದ್ದು ನಿಜ, ಆದರೆ ನಿನಗೆ ಅಪಾಯ ಬಂದಾಗ ಜೋರಾಗಿ ಭುಸುಗುಟ್ಟಿ ಅವರನ್ನು ಭಯ ಪಡಿಸಬೇಡ ಎಂದೇನೂ ಹೇಳಿಲ್ಲವಲ್ಲಾ’ ಎಂದರು. ಮುಂದೆ ಹಾವು ಸನ್ಯಾಸಿಯ ಮಾತಿನಂತೆಯೇ ನಡೆದು ಬದುಕತೊಡಗಿತು. ಹೀಗೆ ಕೋಪ ಮಾಡಿಕೊಳ್ಳುವ ಸಂದರ್ಭದಲ್ಲಿ ಸಹನೆ ತೋರಿಸಿದರೆ ಯಾವ ರೀತಿಯ ಪರಿಣಾಮ ಆಗಬಹುದು ಎಂದು ಲೇಖಕರು ಹೇಳಿದ್ದಾರೆ.
ತಾಯಿಗಿಂತ ಅನ್ಯ ದೇವರಿಲ್ಲ :ಬಹಳ ವರ್ಷಗಳ ಹಿಂದೆ ಒಂದು ದೇಶದಲ್ಲಿ ವೃದ್ಧ ತಂದೆ ತಾಯಿಯನ್ನು ದಟ್ಟವಾದ ಕಾಡಿನಲ್ಲಿ ಬಿಟ್ಟು ಬರುವ ವಿಭಿನ್ನ ಪದ್ಧತಿಯಿತ್ತು. ಈ ಸಂಪ್ರದಾಯದಂತೆ ಹಳ್ಳಿಯ ಒಬ್ಬ ಮಗ ತನ್ನ ತಾಯಿಯನ್ನು ಹೊತ್ತುಕೊಂಡು ಅರಣ್ಯದ ದಾರಿಯಲ್ಲಿ ನಡೆಯುತ್ತಿರಲು ಆ ವೃದ್ಧೆ ಅಕ್ಕಪಕ್ಕದ ಮರಗಳ ಎಲೆಗಳನ್ನು, ಕಡ್ಡಿಗಳನ್ನು ಮುರಿದು ದಾರಿಯುದ್ದಕ್ಕೂ ಹಾಕುತ್ತಿದ್ದಳು. ಇದನ್ನು ಮಗ ಪ್ರಶ್ನಿಸಿದಾಗ ಆಕೆ ‘ಮಗನೇ, ನನ್ನನ್ನು ಬಿಟ್ಟು ಹೋಗುವಾಗ ನಿನಗೆ ದಾರಿ ತಪ್ಪದಿರಲಿ ಎಂದು ಇದನ್ನು ಮಾಡುತ್ತಿರುವೆ’ ಎಂದು ಹೇಳುತ್ತಾಳೆ. ಮಗನಿಗೆ ಅಮ್ಮನ ಹೃದಯದ ಅರಿವಾಗಿ ಪಶ್ಚಾತ್ತಾಪದಿಂದ ಅಲ್ಲಿನ ಸಾಂಪ್ರದಾಯ ಮುರಿದು ತನ್ನ ತಾಯಿಯನ್ನು ವಾಪಸು ಕರೆದುಕೊಂಡು ಹೋಗುತ್ತಾನೆ. ಹೀಗೆ ಸಾಂಪ್ರದಾಯಗಳು ಏನೇ ಇದ್ದರೂ ತನ್ನ ತಾಯಿಗೋಸ್ಕರ ಅದನ್ನು ಮೀರುವುದು ತಪ್ಪಲ್ಲ ಎಂಬ ಸಂದೇಶವನ್ನು ಈ ಕಥೆ ಸಾರುತ್ತದೆ.
ಸುಖವಾಗಿ ಬದುಕುವುದನ್ನು ಕಲಿಯಬೇಕು :ತೇಜಸ್ ಮತ್ತು ಸುಂದರಿಯಾದ ರೀತಾ ಒಬ್ಬರನ್ನೊಬ್ಬರು ಮೆಚ್ಚಿ ಮದುವೆಯಾಗುತ್ತಾರೆ. ವಯಸ್ಸಾದಂತೆ ರೀತಾಳ ಸೌಂದರ್ಯ ಕುಂದುತ್ತಾ ಬಂದು ಆಕೆ ಹೆಚ್ಚು ಹೆಚ್ಚು ಸೌಂದರ್ಯ ವರ್ಧಕಗಳನ್ನು ಉಪಯೋಗಿಸಿ ಚರ್ಮರೋಗಕ್ಕೆ ಬಲಿಯಾಗುತ್ತಾಳೆ.ಇದೇ ಸಮಯ ಕಾರು ಅಪಘಾತದಲ್ಲಿ ತೇಜಸ್ ತನ್ನ ಎರಡೂ ಕಣ್ಣುಗಳನ್ನು ಕಳೆದುಕೊಳ್ಳುತ್ತಾನೆ. ಆದರೆ ಇಬ್ಬರೂ ಒಬ್ಬರಿನ್ನೊಬ್ಬರಿಗೆ ಹೆಗಲಾಗಿ ಒಳ್ಳೆಯ ಜೀವನ ಸಾಗಿಸುತ್ತಿದ್ದರು. ಒಂದು ದಿನ ಚರ್ಮ ರೋಗ ಉಲ್ಬಣವಾಗಿ ರೀತಾ ಅಸುನೀಗುತ್ತಾಳೆ. ತೇಜಸ್ ನ ಗೆಳೆಯ ಬಂದು ‘ಕುರುಡನಾಗಿರುವ ನೀನು ಮುಂದೆ ಹೇಗೆ ಜೀವನ ಸಾಗಿಸುತ್ತೀಯಾ’ ಎಂದು ಅನುಕಂಪ ತೋರಿಸಿದಾಗ ತೇಜಸ್ ‘ನಾನು ಕುರುಡನಲ್ಲ, ಕುರುಡನಂತೆ ನಟಿಸುತ್ತಿದ್ದೆ. ಚರ್ಮರೋಗದಿಂದ ಕುರೂಪಿಯಾದ ರೀತಾಳಿಗೆ ಕೀಳರಿಮೆ ಉಂಟಾಗಬಾರದೆಂದು ಈ ತರ ನಾಟಕವಾಡಬೇಕಾಯಿತು’ ಎಂದು ಹೇಳುತ್ತಾನೆ. ಈ ಕಥೆಯ ಮೂಲಕ ಸೌಂದರ್ಯ ಪ್ರಜ್ಞೆ ಇದ್ದರೂ ಬಾಹ್ಯ ಸೌಂದರ್ಯವೇ ಸರ್ವಸ್ವವಲ್ಲ ಎಂದು ಹೇಳುವಲ್ಲಿ ಸಫಲರಾಗಿದ್ದಾರೆ.
ಪುಸ್ತಕ ಕೊಳ್ಳುವ ಆಸಕ್ತರು ಮೊಬೈಲ್ ನಂಬರ್ 9742884160 ಗೆ ಸಂಪರ್ಕಿಸಿ.
ವಿದ್ಯಾನಾಯಕ್