ನಂಬಿಕೆಯ ಮುನ್ನುಡಿ

ನಂಬಿಕೆಯ ಮುನ್ನುಡಿ

ಕುಳಿರ್ಗಾಳಿಗೆ ಬಳುಕುವ ತರುಲತೆಗಳು
ಅಪ್ಪಿಹವು ಮರಗಳನು ನಂಬಿಕೆಯಲಿ!
ಎಂದಿಗೂ ತಮ್ಮನು ನಡುಹಾದಿಯಲಿ..
ಕೈಬಿಡಲಾರವವು ಎಂಬ ವಿಶ್ವಾಸದಲಿ!!

ಅಳವ ಕಂದನೆಂದಿಗೂ ನಂಬಿಹುದು
ತನ್ನಮ್ಮನ ಬೆಚ್ಚನೆಯ ಅಪ್ಪುಗೆ!
ತನ್ನನೆಂದೂ ಶಿಕ್ಷಿಸಲವಳು ಮಾಡದ ತಪ್ಪಿಗೆ…
ನಗಿಸುವಳವಳು ತಾನೆಂದಾದರೂ..
ಕುಳಿತಾಗ ಬೇಸರದಲಿ ಸಪ್ಪಗೆ!!

ವಸುಧೆಯೂ ನಂಬಿಹಳು ರವಿ-ಶಶಿಯ
ನಲ್ಮೆಯಲಿ ಕಾಯ್ವ ಗೆಳೆಯರಿವರೆಂದು!
ಚಂದ್ರಿಕೆಗಿರುವಂತೆ ಚಂದಿರನಲಿ ನಂಬಿಕೆ…
ತಾರೆಗಳ ಸಮ್ಮಿಲನಕೆ ನಭವೇ ಕಾಣಿಕೆ!!

ಜೀವನದಲಿರಲಿ ನಂಬಿಕೆಯ ಮುನ್ನುಡಿ
ವಾಸ್ತವ ಬದುಕಲಿ ಅದುವೇ ಕೈಗನ್ನಡಿ!
ಬಾಳಲಿರುವ ಸವಿನಂಬುಗೆಯ ಚೈತನ್ಯಕೆ..
ಒಲವಿನ ಸಾಕ್ಷಾತ್ಕಾರಕೆ..ಬೇರೆ ಸಾಕ್ಷಿಯೇತಕೆ !!

ಸುಮನಾ ರಮಾನಂದ

Related post

Leave a Reply

Your email address will not be published. Required fields are marked *