ನಂ.ದ.ನಾ.ರ ಖ್ಯಾತ ವ್ಯಂಗ್ಯಚಿತ್ರಗಾರರ ನಗೆ-ಸುಗ್ಗಿ!

ನಂ.ದ.ನಾ.ರ ಖ್ಯಾತ ವ್ಯಂಗ್ಯಚಿತ್ರಗಾರರ ನಗೆ-ಸುಗ್ಗಿ!

ಕನ್ನಡ ನಾಡಿನ ಈ ದಿನಮಾನದ ಖ್ಯಾತ ವ್ಯಂಗ್ಯಚಿತ್ರಕಾರರ ಪಟ್ಟಿಯಲ್ಲಿರುವ ನಂಜುಂಡ ಸ್ವಾಮಿ, ದತ್ತಾತ್ರಿ ಎಂ ಎನ್, ನಾಗನಾಥ್ ಗೌರಿಪುರ ಹಾಗೂ ರಘುಪತಿ ಶೃಂಗೇರಿ ಅವರು `ನಗೆ-ಸುಗ್ಗಿ!’ ಎಂಬ ಹೆಸರಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಡ್ ಕಲ್ಚರ್ ಅವರ ಆಶ್ರಯದಲ್ಲಿ ವ್ಯಂಗ್ಯಚಿತ್ರ ಪ್ರದರ್ಶನವನ್ನು ಏರ್ಪಡಿಸಿದ್ದಾರೆ.

ಇದೇ ಜನವರಿ 28ರ ಶನಿವಾರ ಸಂಜೆ 4-30ಕ್ಕೆ ಈ ವ್ಯಂಗ್ಯಚಿತ್ರಗಳ ಪ್ರದರ್ಶನವು ಆರಂಭಗೊಳ್ಳಲಿದೆ.

ಸತತ ಹತ್ತು ದಿನಗಳ ಕಾಲ ಬೆಳಗ್ಗೆ 10 ರಿಂದ ಸಂಜೆ 7 ರವರೆಗೆ ಬೆಂಗಳೂರಿನ ಬಸವನಗುಡಿಯ ಬಿ ಪಿ ವಾಡಿಯಾ ರಸ್ತೆಯಲ್ಲಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಡ್ ಕಲ್ಚರ್ ಅವರ ಗ್ಯಾಲರಿಯಲ್ಲಿ ಈ ವ್ಯಂಗ್ಯಚಿತ್ರಗಳ ಪ್ರದರ್ಶನವಿರುತ್ತದೆ.

ನಾಡಿನ ಹಿರಿಯ ಚಿತ್ರಕಲಾವಿದರಾದ ಚಂದ್ರನಾಥ್ ಆಚಾರ್ಯ ಅವರು, ‘ಅಪರಂಜಿ’ ಹಾಸ್ಯ ಮಾಸ ಪತ್ರಿಕೆಯ ಸಂಪಾದಕರಾದ ಶಿವಕುಮಾರ್ ಅವರು, ಹಿರಿಯ ಹಾಸ್ಯ ಸಾಹಿತಿಗಳಾದ ಭುವನೇಶ್ವರಿ ಹೆಗಡೆ ಅವರು ಹಾಗೂ ಹಿರಿಯ ವ್ಯಂಗ್ಯಚಿತ್ರಕಾರರಾದ ಎಂ ಎನ್ ಸುಬ್ರಹ್ಮಣ್ಯ ಅವರು ಆಗಮಿಸಿ ವ್ಯಂಗ್ಯಚಿತ್ರ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.

ದಿನವೂ ಹೊರಬೀಳುವ ಸುದ್ದಿಗಳಿಗೆ ಗುದ್ದು, ಟೀಕೆಗಳಿಗೆ ಟಿಪ್ಪಣಿ ಹಾಗೂ ನ್ಯೂಸ್‍ನ ಹಿಂದಿನ ನಾನ್ಸೆನ್ಸ್, ಹೀಗೆ ದಿನನಿತ್ಯದ ಸರ್ವೇ ಸಾಮಾನ್ಯ ಸಂಗತಿಗಳನ್ನು ಹಾಗೂ ವಾಸ್ತವದ ರಾಜಕೀಯ ಪರಿಸ್ಥಿತಿಯನ್ನು ತಮ್ಮದೇ ಆದ ಶೈಲಿಯಲ್ಲಿ ಪನ್‍ಗಳ ಮೂಲಕ ವ್ಯಂಗ್ಯಚಿತ್ರಗಳನ್ನು ರಚಿಸುತ್ತಾ ಬಂದಿದ್ದಾರೆ ಈ ನಾಲ್ವರು! ಹೀಗೆ ರಚಿಸಿದ ವ್ಯಂಗ್ಯಚಿತ್ರಗಳಲ್ಲಿ ಆಯ್ದ ಕೆಲವನ್ನು ಇಲ್ಲಿ ಇವರು ಪ್ರದರ್ಶಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಮೆಚ್ಚುಗೆ ಗಳಿಸಿರುವುದೇ ಅಲ್ಲದೇ, ಹೆಚ್ಚೆಚ್ಚು ಶೇರ್ ಕಂಡು, ಸಾಕಷ್ಟು ವಾಟ್ಸಪ್ ಗ್ರೂಪ್‍ಗಳಲ್ಲಿ ಹರಿದಾಡುವ ಕನ್ನಡದ ಕೆಲವು ವ್ಯಂಗ್ಯಚಿತ್ರಗಾರರ ಅಗ್ರಪಟ್ಟಿಯಲ್ಲಿರುವ ಈ ನಾಲ್ವರೂ ಇದ್ದಾರೆ ಎನ್ನುವುದೇ ಇಲ್ಲಿ ವಿಶೇಷ! ಈ ನಾಲ್ವರ ವೈವಿಧ್ಯಮಯವಾದ ವ್ಯಂಗ್ಯಚಿತ್ರಗಳ ಮೂಲ ಪ್ರತಿಗಳನ್ನು ಈ ಪ್ರದರ್ಶನದಲ್ಲಿ ನೇರಾನೇರ ನೋಡಬಹುದು. ಅಲ್ಲದೇ ಈ ಪ್ರದರ್ಶನಕ್ಕಾಗಿಯೇ ರಚಿಸಿದ ಹೊಚ್ಚ ಹೊಸ ಸರಕೂ ಈ ಪ್ರದರ್ಶನದಲ್ಲಿ ಇವೆ ಎನ್ನುವುದು ಮತ್ತೊಂದು ಗಮನಾರ್ಹ ಸಂಗತಿ!


ನಂಜುಂಡಸ್ವಾಮಿ ವೈ ಎಸ್

ಶಿವಮೊಗ್ಗದವರು. ತಂದೆ ವೈ ಕೆ ಶ್ರೀಕಂಠಯ್ಯನವರು. ಚಿತ್ರಕಲಾವಿದರೂ, ವಾಗ್ಗೇಯಕಾರರೂ ಆಗಿದ್ದರು. ಹಾಗಾಗಿ ಬಾಲ್ಯದಲ್ಲಿಯೇ ಸ್ವಾಮಿ ಅವರಿಗೆ ಸಂಗೀತ ಹಾಗೂ ಚಿತ್ರಕಲೆಗಳೆರಡೂ ಒಗ್ಗಿ ಬಂತು. ತಂದೆಯೇ ಮೊದಲ ಕಲಾ ಗುರು. ಆನಂತರದಲ್ಲಿ ಶಿಲ್ಪಿ ಕೆ ಜ್ಞಾನೇಶ್ವರ್ ಅವರಲ್ಲಿ ರೇಖಾಶಾಸ್ತ್ರ, ಶಿಲ್ಪಶಾಸ್ತ್ರಗಳಲ್ಲದೇ ಸಾಂಪ್ರದಾಯಿಕ ಕಲೆಯನ್ನೂ ಕಲಿತರು. ಶಿವಮೊಗ್ಗದಲ್ಲಿ ಕಲಾಮಾಧ್ಯಮದಲ್ಲಿ ತೊಡಗಿ ವಾಣಿಜ್ಯ ಹಾಗೂ ಸಾಂಪ್ರದಾಯಿಕ ಕಲೆಗಳಲ್ಲಿ ಹಲವು ಪ್ರಯೋಗಳನ್ನು ಮಾಡಿದರು. `ಅಲ್ಲಿನ ಖ್ಯಾತ ಕಲಾವಿದರಾದ ರಾಮಧ್ಯಾನಿ, ಸುಬ್ರಹ್ಮಣ್ಯ, ಜೇಮ್ಸ್‍ವಾಜ್ ಹಾಗೂ ಮತ್ತಿತರರೊಂದಿಗಿನ ನಿಕಟ ಸಂಪರ್ಕವು ತಮ್ಮ ಏಳಿಗೆಗೆ ಕಾರಣವಾಯಿತು’ ಎನ್ನುತ್ತಾರೆ.

ಐವತ್ತನೇ ವರ್ಷದಲ್ಲಿ ಬೆಂಗಳೂರಿಗೆ ಬಂದು ಪ್ರಿಂಟ್‍ಮೀಡಿಯಾದಲ್ಲಿ ವೃತ್ತಿ ಆರಂಭಿಸಿದರು. ಪ್ರವೃತ್ತಿಗಾಗಿ ಕಾರ್ಟೂನ್ ರಚನೆಯನ್ನು ಆಯ್ಕೆ ಮಾಡಿಕೊಂಡರು. ‘ಹಾಗೇ ಸುಮ್ಮನೆ’ ಎಂಬಂತೆ ರಚಿಸಿದ ಕಾರ್ಟೂನ್ ಹಾಗೂ ಕ್ಯಾರಿಕೇಚರ್‍ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದರು. ದಿನ ಬೆಳಗಾಗುವುದರೊಳಗೆ ಸ್ವಾಮಿ ಅವರ ರಚನೆಗಳು ಕಾರ್ಟೂನ್ ಕ್ಷೇತ್ರದ ದಿಗ್ಗಜರ ಕಣ್ಣಿಗೆ ಬಿದ್ದು ಪ್ರೋತ್ಸಾಹದ ಹೊಳೆಯೇ ಹರಿಯಿತು. ನಂಜುಂಡ ಸ್ವಾಮಿ ಕನ್ನಡ ಕಾರ್ಟೂನ್ ಕ್ಷೇತ್ರದ ಕಣ್ಮಣಿಯಾದರು. ಎಲ್ಲೆಲ್ಲೂ ಸಂಗೀತವೇ ಎಂಬಂತೆ ಎಲ್ಲೆಲ್ಲೂ ಸ್ವಾಮಿ ಅವರ ಕಾರ್ಟೂನ್-ಕ್ಯಾರಿಕೇಚರ್‍ಗಳೇ ಹರಿದಾಡಿ ಮುದ ಕೊಡ ಹತ್ತಿವೆ. ನಾಡಿನ ದಿಗ್ಗಜರ ಕ್ಯಾರಿಕೇಚರ್ ರಚನೆಗಳು ಸಾಕಷ್ಟು ದೊಡ್ಡ ಹೆಸರನ್ನು ತಂದಿದೆ.

ಸ್ವಾಮಿ ಅವರೇ ಹೇಳುವಂತೆ ಇವರಲ್ಲಿರುವ ಹೊಸ ಶೈಲಿಯನ್ನು ಮೊದಲು ಗುರುತಿಸಿ ಪ್ರೋತ್ಸಾಹಿಸಿದವರು ಮೇಗರವಳ್ಳಿ ಸುಬ್ರಹ್ಮಣ್ಯ ಅವರು. ತದನಂತರ ನಿರಂತರ ಸಂಪರ್ಕದಲ್ಲಿದ್ದು ಬೆಳವಣಿಗೆಗೆ ಕಾರಣರಾದವರು ನಾಡಿನ ಖ್ಯಾತ ವ್ಯಂಗ್ಯಚಿತ್ರಕಲಾವಿದರಾದ ಗುಜ್ಜಾರ್ ಅವರು. ಹಿರಿಯ ವ್ಯಂಗ್ಯಚಿತ್ರಕಾರರಾದ ನರೇಂದ್ರ ಅವರ ಮಾರ್ಗದರ್ಶನದಲ್ಲಿ ಕ್ಯಾರಿಕೇಚರ್‍ಗಳ ಏಕವ್ಯಕ್ತಿ ಪ್ರದರ್ಶನವೂ ಆಯ್ತು. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಡ್ ಕಲ್ಚರ್ ಅವರ ಆಶ್ರಯದಲ್ಲಿ ಸ್ವಾಮಿ ಅವರು ರಚಿಸಿದ ದೇಶದ ಖ್ಯಾತ ಸಂಗೀತ ದಿಗ್ಗಜರ ಕ್ಯಾರಿಕೇಚರ್‍ಗಳ ಪ್ರದರ್ಶನವು ಏರ್ಪಟ್ಟಿತ್ತು. ಇದು ಸಂಗೀತ ಕ್ಷೇತ್ರದ ಹಾಗೂ ಚಿತ್ರಕಲಾ ಕ್ಷೇತ್ರದ ಬಂಧಕ್ಕೆ ನಾಂದಿಯಾಯ್ತು. ಎರಡೂ ಕ್ಷೇತ್ರವನ್ನು ಬೆಸೆಯಲು ಸಹಕಾರಿಯೂ ಆಯ್ತು!

ಐದಾರು ವರ್ಷಗಳಲ್ಲಿಯೇ ಸಾವಿರಾರು ಕಾರ್ಟೂನ್‍ಗಳನ್ನೂ, ಕ್ಯಾರಿಕೇಚರ್‍ಗಳನ್ನೂ ರಚಿಸಲು ನನಗೆ ಸಿಕ್ಕಿರುವ ಪ್ರೋತ್ಸಾಹವೇ ಮುಖ್ಯ ಬಲವಾಗಿದೆ! ಎಲ್ಲಾ ಸಹೃದಯರು ನನ್ನ ಕಾರ್ಟೂನ್‍ಗಳನ್ನು ಮೆಚ್ಚಿ ಪೂರಕ ಪ್ರತಿಕ್ರಿಯೆ ನೀಡುತ್ತಾ ನನ್ನನ್ನು ತಿದ್ದಿ ಬೆಳೆಸುತ್ತಿದ್ದಾರೆ ಎಂಬುದು ಸ್ವಾಮಿ ಅವರ ಮನದ ಮಾತಾಗಿದೆ.

ದೇಶ-ವಿದೇಶಗಳ ಸ್ಪರ್ಧೆಗಳಲ್ಲಿ ಆಯ್ಕೆಯೂ ಆಯ್ತು, ಬಹುಮಾನ, ಪ್ರಶಸ್ತಿಗಳೂ ಬಂತು. ಅಲ್ಲದೇ ಹಲವು ಖ್ಯಾತ ವ್ಯಂಗ್ಯಚಿತ್ರ ಹಾಗೂ ಕ್ಯಾರಿಕೇಚರ್‍ಗಳ ಸ್ಪರ್ಧೆಗಳಿಗೆ ತೀರ್ಪುಗಾರರೂ ಆದರು!


ದತ್ತಾತ್ರಿ ಎಂ ಎನ್

ತೀರ್ಥಹಳ್ಳಿ ಸಮೀಪದ ಕಟ್ಟೆಹಕ್ಕಲು. ವಿದ್ಯಾಭ್ಯಾಸ ಕಟ್ಟೆಹಕ್ಕಲು ಹಾಗೂ ತೀರ್ಥಹಳ್ಳಿಗಳಲ್ಲಿ! ಸದ್ಯಕ್ಕೀಗ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಯೂ ಐ ಡಿಸೈನರ್ ಆಗಿದ್ದಾರೆ.

ಬಾಲ್ಯದಿಂದಲೇ ವ್ಯಂಗ್ಯಚಿತ್ರಗಳ ಬಗ್ಗೆ ಆಸಕ್ತಿ. ಕಾಲೇಜು ದಿನಗಳಲ್ಲಿ ಹಿರಿಯ ವ್ಯಂಗ್ಯಚಿತ್ರಕಾರರಾದ ನಟರಾಜ್ ಅರಳಸುರಳಿ ಅವರು ಪ್ರಾಧ್ಯಾಪಕರಾಗಿದ್ದರು. ಅಲ್ಲಿ ಅರಳಸುರಳಿ ಅವರಿಂದ ವ್ಯಂಗ್ಯಚಿತ್ರ ರಚನೆಯ ಬಗ್ಗೆ ಉತ್ತೇಜನ ಸಿಕ್ಕಿತು. ತೀರ್ಥಹಳ್ಳಿಯ ಸಹ್ಯಾದ್ರಿ ಪಾಲಿಟೆಕ್ನಿಕ್ನಲ್ಲಿ 3 ವರ್ಷದ ಕಂಪ್ಯೂಟರ್ ಸೈನ್ಸ್ ಡಿಪ್ಲೋಮೊ ಮಾಡಿದ್ದಾರೆ. ಅಲ್ಲಿನ ಪ್ರಾಂಶುಪಾಲರಾದ ಸುಂದರೇಶ್ ಅವರ ನಿರಂತರ ಪ್ರೋತ್ಸಾಹವೂ ದತ್ತಾತ್ರಿ ಅವರಿಗೆ ಕಾರ್ಟೂನ್ ಕ್ಷೇತ್ರದಲ್ಲಿ ಕೆಲಸ ಮಾಡುವಲ್ಲಿ ಸಹಕಾರಿಯಾಯ್ತು.

ಅಲ್ಲಿಂದ ಬದುಕು ಕಟ್ಟಿಕೊಳ್ಳಲು ಬೆಂಗಳೂರಿನತ್ತ ಪಯಣ. ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಸಿಕ್ಕರೂ ಅಲ್ಲಿ ಹೆಚ್ಚು ದಿನಗಳು ಇರಲಾರಲಿಲ್ಲ. ಆ ಕೆಲಸಕ್ಕೆ ಗುಡ್ ಬೈ’ ಹೇಳಿ ಹೆಸರಾಂತ ಕಲಾವಿದ ಗುಜ್ಜಾರ್ ಅವರ ಆನಿಮೇಷನ್ ಸ್ಟುಡಿಯೋದಲ್ಲಿ ಕೆಲಸಕ್ಕೆ ಸೇರಿದರು. ಅಲ್ಲಿಂದ ತಮ್ಮ ಬದುಕಿನಲ್ಲಿ ದೊಡ್ಡ ತಿರುವು ಸಿಕ್ಕಿತು’ ಎನ್ನುವುದು ದತ್ತಾತ್ರಿ ಅವರ ಮನದ ಮಾತು. ಆಗಿಂದ ಈವರೆಗೂ ಗುರುಗಳಾದ ಗುಜ್ಜಾರ್ ಅವರ ಬಗ್ಗೆ ಅಪಾರ ಗೌರವ!

ದಿನನಿತ್ಯದ ಲಘು ಹಾಸ್ಯಗಳು ನನ್ನ ಬಹುತೇಕ ವ್ಯಂಗ್ಯಚಿತ್ರಗಳ ವಿಷಯಗಳಾಗಿವೆ’ ಎನ್ನುತ್ತಾರೆ. ಹೀಗೆ ಹಲವು ವರ್ಷಗಳಿಂದ ತಮ್ಮ ವೃತ್ತಿಯ ಜೊತೆ ಜೊತೆಗೆ ತಮ್ಮಲ್ಲಿನ ವ್ಯಂಗ್ಯಚಿತ್ರ ಬರೆಯುವ ಪ್ರಕ್ರಿಯೆಯನ್ನು ರೂಢಿಸಿಕೊಂಡು ಬಂದಿದ್ದಾರೆ ಅವರೇ ಹೇಳುವಂತೆ ಬರೆದದ್ದು ಮಾತ್ರ ಬೆರಳೆಣಿಕೆಯಷ್ಟು! ಆದರೆ ಕನ್ನಡಿಗರ ಉದಾರತೆ ಹಾಗೂ ಪ್ರೀತಿಯೇ ನನ್ನನ್ನು ಹೀಗೆ ಹವ್ಯಾಸಿ ವ್ಯಂಗ್ಯಚಿತ್ರಕಾರನನ್ನಾಗಿಸಿದೆ’.


ನಾಗನಾಥ್ ಗೌರೀಪುರ

ಊರು ಗೌರೀಪುರ, ನಾಗನಾಥ್ ಜಿ ಎಸ್ ಎಂದೇ ಖ್ಯಾತಿ. ನಮ್ಮ ಕಾಲಘಟ್ಟದ ಮಹಾನ್ ಕಲಾವಿದರಲ್ಲೊಬ್ಬರು.

ಹುಟ್ಟಿದ್ದು ಚಳ್ಳಕೆರೆಯಲ್ಲಿ. ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಗೌರಿಪುರ ಗ್ರಾಮದವರು. ಶಿವಮೊಗ್ಗ ಜಿಲ್ಲೆಯಲ್ಲಿ ಬಾಲ್ಯ ಹಾಗೂ ವಿದ್ಯಾಭ್ಯಾಸವಾಯಿತು. ಪಿಯುಸಿ ಓದುವಾಗಲೇ ವ್ಯಂಗ್ಯಚಿತ್ರ ರಚನೆಯಲ್ಲಿ ತೊಡಗಿದ್ದರು. ಆಗಿಂದಲೇ ರೇಖಾಚಿತ್ರಗಳಲ್ಲೂ ಪರಿಣತಿ ಪಡೆದು ಸ್ಪಾಟ್ ಕ್ಯಾರಿಕೇಚರ್ ರಚನೆಯನ್ನೂ ರೂಡಿಸಿಕೊಂಡಿದ್ದರು.

ದಾವಣಗೆರೆಯ ಕಲಾಶಾಲೆಯಲ್ಲಿ ಕಲಾವ್ಯಾಸಂಗ ಮಾಡಿದ್ದಾರೆ. ಜಾಹಿರಾತುಗಳನ್ನು ಸಿದ್ದಗೊಳಿಸುವ ಹಲವಾರು ಪ್ರಸಿದ್ಧ ಆ್ಯಡ್ ಏಜೆನ್ಸಿಗಳಲ್ಲಿ ಕೆಲಸ ಮಾಡಿದ್ದಾರೆ. ಮಲ್ಟಿಮೀಡಿಯಾದಲ್ಲೂ ಅನಿಮೇಟರ್ ಆಗಿ ಕೆಲಸ ಮಾಡಿದ್ದಾರೆ. ಪ್ರಸಿದ್ಧ ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಕಲಾವಿನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರಕಲಾವಿದರಾಗಿಯೂ ಹಾಗೂ ವ್ಯಂಗ್ಯಚಿತ್ರಕಲಾವಿದರಾಗಿಯೂ ಹೆಸರಾಗಿದ್ದಾರೆ. ಸತತವಾಗಿ ಜಲವರ್ಣದ ಲ್ಯಾಂಡ್‍ಸ್ಕೇಪ್‍ಗಳನ್ನು ಮಾಡುತ್ತಾ ಕಲಾಭ್ಯಾಸವನ್ನು ನಿರಂತರವಾಗಿ ಇಟ್ಟುಕೊಂಡಿದ್ದಾರೆ.

‘ಸುಧಾ’ ವಾರಪತ್ರಿಕೆಯಿಂದ ಆರಂಭಗೊಂಡ ವ್ಯಂಗ್ಯಚಿತ್ರದ ನಂಟು ಈವರೆಗೆ ಹತ್ತು ಸಾವಿರಕ್ಕೂ ಹೆಚ್ಚು ವ್ಯಂಗ್ಯಚಿತ್ರಗಳನ್ನು ರಚಿಸುವಲ್ಲಿಗೆ ಬಂದಿದೆ. ನಾಡಿನ ಎಲ್ಲಾ ಪತ್ರಿಕೆಗಳಲ್ಲೂ ಇವರ ವ್ಯಂಗ್ಯಚಿತ್ರಗಳು ಪ್ರಕಟವಾಗಿವೆ. `ಆರ್ ಕೆ ಲಕ್ಷ್ಮಣ್ ಅವರ ಮುಂದಾಳತ್ವದಲ್ಲಿ 1996ರಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದ ವ್ಯಂಗ್ಯಚಿತ್ರ ಕಾರ್ಯಗಾರದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಸಿದ್ದು’ ಮರೆಯಲಾಗದ ಕ್ಷಣಗಳು ಎನ್ನುತ್ತಾರೆ.

ಎನ್ಜಿಓಗಳಿಗೆ ಹೆಚ್ಚೆಚ್ಚು ರೇಖಾಚಿತ್ರಗಳನ್ನು ರಚಿಸಿದ್ದಾರೆ. ಹೊಟೇಲ್ ಹಾಗೂ ಹಲವಾರು ಹೊಸ ಪದಾರ್ಥಗಳನ್ನು ಮಾರುಕಟ್ಟೆಗೆ ಪರಿಚಯಿಸಲು ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಕಲಾ ಸಾಮಗ್ರಿಗಳನ್ನು ರಚಿಸುತ್ತಿದ್ದಾರೆ. ಅನೇಕ ಕಿರಿಯರಿಗೆ ಇವರ ಅಕ್ಕರೆಯ ಮಾರ್ಗದರ್ಶನವೂ ಸಲ್ಲುತ್ತಿದೆ. ದೇಶ-ವಿದೇಶದ ವ್ಯಂಗ್ಯಚಿತ್ರ ಸ್ಪರ್ಧೆ ಹಾಗೂ ಪ್ರದರ್ಶನಗಳಲ್ಲಿ ನಿರಂತರವಾಗಿ ಭಾಗವಹಿಸುತ್ತಾ ಬಂದಿದ್ದಾರೆ.

ರಾಜ್ಯಾದ್ಯಂತ ಸಂಚರಿಸಿ ಅನೇಕ ಶಿಬಿರಗಳಲ್ಲಿ ಮಾರ್ಗದರ್ಶಿ ಪ್ರಾತ್ಯಕ್ಷಿಕೆಗಳನ್ನು ನೀಡುತ್ತಿದ್ದಾರೆ. ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯಲ್ಲಿ ಟ್ರಸ್ಟಿಯಾಗಿಯೂ, ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದಲ್ಲಿ ಉಪಧ್ಯಾಕ್ಷರಾಗಿದ್ದಾರೆ. ರಾಷ್ಟ್ರೀಯ ಪತ್ರಿಕೆ ‘ಕಾರ್ಟೂನ್ ವಾಚ್’ ನೀಡಿದ ಜೀವಮಾನ ಸಾಧನಾ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.


ರಘುಪತಿ ಶೃಂಗೇರಿ

ಊರು ಶೃಂಗೇರಿ, ರಘುಪತಿ ಶೃಂಗೇರಿ ಎಂದೇ ಖ್ಯಾತಿ!

ದಾವಣಗೆರೆಯ ಕಲಾಶಾಲೆಯಲ್ಲಿ ಫೈನ್ ಆರ್ಟ್ಸ್ ನಲ್ಲಿ ಪದವಿ ಪಡೆದಿದ್ದಾರೆ. ನಾಡು ಕಂಡ ಖ್ಯಾತ ವ್ಯಂಗ್ಯಚಿತ್ರಕಾರರಲ್ಲೊಬ್ಬರಾದ ದಿವಂಗತ ಡಾ. ಸತೀಶ್ ಶೃಂಗೇರಿ ಅವರ ಸಹೋದರ. ಮೊದ ಮೊದಲು ಅಣ್ಣನ ನೆರಳಲ್ಲಿಯೇ ಬೆಳೆದರೂ ಆನಂತರ ತಮ್ಮದೇ ಆದ ಶೈಲಿಯಲ್ಲಿ ಗುರುತಿಸಿಕೊಂಡು ವ್ಯಂಗ್ಯಚಿತ್ರ ಹಾಗೂ ಕ್ಯಾರಿಕೇಚರ್‍ಗಳ ರಚನೆಯಲ್ಲಿ ಹೆಸರು ಮಾಡಿದರು.

ಮಲ್ಟಿಮೀಡಿಯಾದ ಮೂಲಕ ವೃತ್ತಿಯನ್ನು ಆರಂಭಿಸಿದ ರಘು ಅವರು ಹಲವಾರು ಪ್ರತಿಷ್ಟಿತ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ. ಈಗ ಅಂತಾರಾಷ್ಟ್ರೀಯ ಸಂಸ್ಥೆಯಲ್ಲಿ ಹಿರಿಯ ಗ್ರಾಫಿಕ್ ಡಿಸೈನರ್ ಆಗಿದ್ದಾರೆ.

ಪ್ರವೃತ್ತಿಯಲ್ಲಂತೂ ರಘು ಅವರ ಕುಂಚದ ಸಾಮರ್ಥ್ಯವು ಅಗಾಧ! ಒಬ್ಬ ಮನುಷ್ಯ ಇಷ್ಟು ಕೆಲಸವನ್ನು ಮಾಡಬಹುದೇ ಎಂಬ ಅನುಮಾನ ಬರುವಂತೆ ನಿರಂತರ ಕಲಾ ಚಟುವಟಿಕೆಯಲ್ಲಿ ಇರುತ್ತಾರೆ. ನಾಡಿನ ಎಲ್ಲಾ ಮ್ಯಾಗಜೀನ್‍ಗಳಲ್ಲೂ ಹಾಗೂ ವಿಶೇಷಾಂಕಗಳಲ್ಲೂ ರಘು ಅವರ ಚಿತ್ರಗಳು ಇರಲೇ ಬೇಕು. ನಾಡಿನ ಖ್ಯಾತನಾಮರ ಪುಸ್ತಕಗಳಿಗೆ ಇವರ ರೇಖಾಚಿತ್ರ ಇಲ್ಲವೇ ವ್ಯಂಗ್ಯಚಿತ್ರಗಳ ಛಾಪು ಬೇಕೇ ಬೇಕು! ಸಾಕಷ್ಟು ಪುಸ್ತಕಗಳಿಗೆ ಕಥಾನಕ, ರೇಖಾಚಿತ್ರ, ವ್ಯಂಗ್ಯಚಿತ್ರ, ಕ್ಯಾರಿಕೇಚರ್‍ಗಳನ್ನು ಬರೆಯುತ್ತಲೇ ಇರುತ್ತಾರೆ.

ಪ್ರತಿದಿನವೂ ಎರಡೆರಡು ವ್ಯಂಗ್ಯಚಿತ್ರಗಳನ್ನು ತಪ್ಪದೇ ಬರೆಯುತ್ತಾ ಸಾಮಾಜಿಕ ಜಾಲತಾಣದಲ್ಲಿನ ವೀಕ್ಷಕರಿಗೆ ಹಾಗೂ ವೃತ್ತಪತ್ರಿಕೆಯ ಓದುಗರಿಗೆ ಹೆಚ್ಚು ಹತ್ತಿರವಾಗಿದ್ದಾರೆ. `ವ್ಯಂಗ್ಯತರಂಗ ಕ್ಯಾರಿಕೇಚರ್ ಸ್ಪರ್ಧೆ’ ಅನ್ನು ನಡೆಸುತ್ತಾ ಅನೇಕ ಯುವ ಪ್ರತಿಭೆಗಳನ್ನು ಬೆಳಕಿಗೆ ತರುತ್ತಿದ್ದಾರೆ. ಇವಲ್ಲದೇ ವೆಬ್ ಡಿಸೈನಿಂಗ್ ಹಾಗೂ ಅನಿಮೇಶನ್‍ಗಳನ್ನೂ ರೂಢಿಸಿಕೊಂಡಿದ್ದಾರೆ.

ಅಲ್ಲದೇ ದೇಶವಿದೇಶಗಳ ಕಾರ್ಟೂನ್ ಸ್ಪರ್ಧೆಗಳಲ್ಲೂ ಸ್ಪರ್ಧಿಸುತ್ತಾ ಸತತವಾಗಿ ಬಹುಮಾನ-ಪ್ರಶಸ್ತಿಗಳನ್ನು ಗಳಿಸುತ್ತಲೇ ಇರುತ್ತಾರೆ. ರಘು ಅವರ ಚಿತ್ರರೂಪಕಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ನಿರಂತರವಾಗಿ ಬೆಳೆಯುತ್ತಲೇ ಇದ್ದಾರೆ. ಚಂದ್ರಯಾನ ಸಾಧನೆಯು ಕೊಂಚ ಏರುಪೇರಾದ ಸಂದರ್ಭದಲ್ಲಿ `ಇಡೀ ಭಾರತ ನಿಮ್ಮೊಂದಿಗಿದೆ’ ಎಂದು ರಚಿಸಿದ ಚಿತ್ರವಂತೂ ದೇಶದೆಲ್ಲೆಡೆ ಸುದ್ದಿ ಮಾಡಿ ಹರಿದಾಡಿತು. ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದಲ್ಲಿ ಪ್ರಧಾನ ಕಾರ್ಯದರ್ಶಿಗಳಾಗಿದ್ದಾರೆ. ಈಗ ನಾಡಿನಲ್ಲೆಡೆ ಖ್ಯಾತರಾಗಿ ಸೆಲೆಬ್ರೆಟಿ ಕಲಾವಿದರಾಗಿದ್ದಾರೆ!


ಬೆಂಗಳೂರಿನ ಬಸವನಗುಡಿಯ ಬಿ ಪಿ ವಾಡಿಯಾ ರಸ್ತೆಯಲ್ಲಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಡ್ ಕಲ್ಚರ್ ಅವರ ಗ್ಯಾಲರಿಯಲ್ಲಿ ಸತತ ಹತ್ತು ದಿನಗಳ ಕಾಲ ಬೆಳಗ್ಗೆ 10 ರಿಂದ ಸಂಜೆ 7 ರವರೆಗೆ ಈ ವ್ಯಂಗ್ಯಚಿತ್ರಗಳ ಪ್ರದರ್ಶನವು ಇರುತ್ತದೆ.

ಪ್ರವೇಶ ಉಚಿತ! ನಕ್ಕು ಹೊಟ್ಟೆ ಹುಣ್ಣಾಗುವುದು ಖಚಿತ!

ತುಂಕೂರ್ ಸಂಕೇತ್

Related post

Leave a Reply

Your email address will not be published. Required fields are marked *