ನಗರ ಕೇಂದ್ರ ಮಧ್ಯೆ…!
ನಗರ ಕೇಂದ್ರ ಮಧ್ಯೆ
ಮೊದಲಿಗೆ
ದೊಡ್ಡ ಮಾರುಕಟ್ಟೆ
ಮುಂಜಾನೆ ಎಚ್ಚರದಿಂದ
ಮುಚ್ಚಳ ಮುಚ್ಚುವ ಕತ್ತಲೆವರೆಗೂ
ಇದು ಗಡಿಬಿಡಿ ಕೋಲಾಹಲ ಕಟ್ಟೆ!
ಇಲ್ಲಿ ಇರಬೇಕಾದುದೆಲ್ಲ ಇದೆ
ಇರಲೇಬಾರದ ನಿಷಿದ್ಧ ಸಹ!
ಹೇಳಿಕೊಳ್ಳಲು ಯಾವುದೂ
ಇಲ್ಲ ಒಪ್ಪ ಓರಣ
ಎಲ್ಲ ಒಡೆದು ಚೆಲ್ಲಾಪಿಲ್ಲಿ
ಹಾಳಾದ ಹಸಿ ಮೊಟ್ಟೆ!
ಕೋಕೋ ಕೂಗಿದ್ದೇ ಕೋಳಿ
ದಿನಂಪ್ರತಿ ಯುದ್ಧೋಪಾದಿ
ಹಾಜರು ನೂರಾರು
ಎಲ್ಲ ಊರಿನ ಎಲ್ಲ ನಮೂನೆ ಜನರು
ಹೊತ್ತು ಥರಾವರಿ ಸರಕು
ಮತ್ತು ಆಪ್ತ ಯೋಜನೆಗಳ ಚೂರುಪಾರು
ತಮ್ಮ ತಮ್ಮ ತುತ್ತಿಗಾಗಿ
ಅವರವರ ಕಾಲು ಮಾತು ಕೇಳುವವರೆಗೆ
ಅಥವ ಕೋಲು ಹಿಡಿವವರೆಗೆ
ಮತ್ತು ಬರುತ್ತಲೇ ಇರುವರು
ಮತ್ತೆ ಮತ್ತೆ ಹೊಚ್ಚ ಹೊಸಬರು
ಮುಚ್ಚುವುದಂತೂ ಇಲ್ಲ ಎಂದೆಂದಿಗು
ಕೇಂದ್ರ ಮಾರುಕಟ್ಟೆ
ಒಬ್ಬೊಬ್ಬರಿಗೊಂದೊಂದು ಬಿಡಾರ
ವೈಯಕ್ತಿಕ ವ್ಯವಹಾರ
ಯಾರಿಗೆಷ್ಟೆಷ್ಟು ದಿನವೋ ಏನೋ
ಮಾರುಕಟ್ಟೆ ನಂಟು
ಯಾವ ಘಳಿಗೆ ಸುತ್ತುವರೋ ಏನೋ
ತಮ್ಮ ತಮ್ಮ ಗುಡಾರ
ಎಲ್ಲ ಯಂತ್ರ ವರ್ತುಲ ವಹಿವಾಟು!
ಪಕ್ಕದಲೊಂದು ಹಳೆಯ ಆಸ್ಪತ್ರೆ
ಅಂಥ ಜೀವದಾನದ ‘ಜೀವ’ಕ್ಕೇ ಇಲ್ಲ
ಭದ್ರ ಉಸಿರ ಭಿತ್ತಿ
ಆದರೂ ರೋಗಗಳಿಗಿಲ್ಲ ದಾರಿದ್ರ್ಯ!
ತದೇಕ ಒಳ ಹೊರ ರೋಗಿಗಳ ಧಾವಂತ
ಮತ್ತಲ್ಲಿಂದಲೇ ಕೆಲವರು ಮಸಣದತ್ತ…!
ಅನತಿ ದೂರದಲ್ಲೊಂದು
ಕಸಾಯಿಖಾನೆ!
ಕಸಾಬನ ಕೈಲೊಂದು ಮಚ್ಚು
ಅದರ ನಿರಂತರ ಎದೆಯಿಲ್ಲದ ಕೊಚ್ಚು
ಅಲ್ಲೂ ನಿಷ್ಕಪಟ ಸರಣಿಯಲಿ
ತಲೆಯೊಪ್ಪಿಸುವ ಕುರಿ ಕೋಳಿ
ಹೋಗಲಾರವಾದರೂ ಜೀವಂತ ಮರಳಿ…
ಹಗಲಿರುಳೆನ್ನದೆ ನಿರಂತರ ಸಾಂದ್ರ
ನಗರ ಕೇಂದ್ರ
ಅದರ ಪರಿಧಿಯಾಚೆಗು
ಎತ್ತೆತ್ತ ನೋಟ ನೆಟ್ಟರೂ ಅತ್ತತ್ತ
ಕಣ್ಣು ಕುಕ್ಕುವ ಸೌಧಸಾಲು
ವೈವಿಧ್ಯ ಉದ್ದಿಮೆಗಳ ಹರವು
ಕಣ್ಣು ಕ್ಷಿತಿಜ ದಾಟುವವರೆಗು
ಐಶ್ವರ್ಯ ಚಲ್ಲುವ ಐಷಾರಾಮಿ ನಗರ
ಹೆಮ್ಮೆಯ ಸೈತಾನ ಸ್ಲಮ್ಮು!
ಡಾ. ಅರಕಲಗೂಡು ನೀಲಕಂಠ ಮೂರ್ತಿ
ಮೊಬೈಲ್: 98446 45459