ನದಿಯ ಕಾತುರ
ನನ್ನ ಪಾಲಿನ ಕಡಲು
ನೀನೇ ಆದರೂ
ಅದೆಷ್ಟು ದೂರ ನೀನು!
ನಿನ್ನ ಸೇರಬಯಸುವ
ನದಿಯೇ ನಾನು
ಹೌದಾದರೂ
ನೀನೇ ಹೇಳು
ಎಷ್ಟೆಂದು ಹರಿಯಲಿ ನಾನು?
ನಿನ್ನ ಸೇರ ಬಯಸುವ
ಸಾವಿರಾರು ನದಿಗಳಲಿ
ನಾನೂ ಒಂದೆಂದು
ನನಗೆ ತಿಳಿದೇ ಇದೆ
ಆದರೂ
ತೀರಕ್ಕೆ ಬಂದು
ಅಪ್ಪಳಿಸುವ ಅಲೆಗಳೆಲ್ಲವೂ
ಕೈಚಾಚಿ ನನ್ನನ್ನೇ
ಕರೆಯುತ್ತಿವೆಯೇನೋ
ಎನ್ನುವ ಭ್ರಮೆಯಲ್ಲಿ
ಮತ್ತೆ ಮತ್ತೆ ನಿನ್ನೆಡೆಗೇ
ಆಕರ್ಷಿತಳಾಗುತ್ತೇನೆ
ಸವೆಸುವ ದಾರಿಗೊಂದು
ಗುರಿಯಿರಬೇಕಂತೆ
ಆ ಗುರಿ ನೀನೇ
ಇರಬಹುದೆನ್ನುವ ಆಸೆಯಲಿ
ಮುನ್ನುಗ್ಗಿ ಧುಮ್ಮಿಕ್ಕಿ
ಅಡ್ಡ ಬಂದುದನು ಹಿಂದಿಕ್ಕಿ
ಹಿರಿ ಹಿರಿ ಹಿಗ್ಗುತ್ತಾ ಬರುತ್ತಿದ್ದೇನೆ
ತಲುಪಬೇಕಾದ ಗಮ್ಯ
ನೀನೇ ಆದರೂ
ತಲುಪುವ ದಾರಿಯಲಿ
ನಾನು ಅಗಮ್ಯಳಾಗುತ್ತಿದ್ದೇನೆ!!
ಸೌಜನ್ಯ ದತ್ತರಾಜ