ನನಗೊಂದಾಸೆ

ನನಗೊಂದಾಸೆ

ಭಾರತಾಂಬೆಯೇ ಎಷ್ಟು ಚೆಂದ ನಿನ್ನ ಮೈಮಾಟ
ಹೊತ್ತಿರುವೆ ಗಿರಿ, ಶಿಖರ, ನದಿ, ಸಮುದ್ರ, ಕಾಡು, ಪಟ್ಟಣ

ಭಾರತಾಂಬೆಯೇ ಕೇಳು, ನನಗೊಂದಾಸೆ
ನಿನ್ನ ಮೈಯ ತೊಳೆದು, ಹಸಿರನುಡಿಸಲು

ನಿನ್ನೊಡಲಲ್ಲಿರುವುದು ಹಲವು ದೇವಾಲಯ, ಆಶ್ರಮಗಳು
ಇರುವುದಲ್ಲಿ ಚೆಂದದ ಉದ್ಯಾನವನ, ಹೂದೋಟಗಳು

ಎಷ್ಟು ಚೆಂದ ನೆಲವ ಉಜ್ಜಿ ಥಳಥಳಿಸುವಂತೆ ಮಾಡುವರಲ್ಲಿ
ನಿನ್ನ ಮೈಯ ಮಲಿನ ಮಾಡುವರು ನೋಡಲೇ ಕಷ್ಟವಿಲ್ಲಿ

ತೋರುವುದೇನು ಸೌಜನ್ಯ, ಸೇವಾ ಮನೋಭಾವಗಳಲ್ಲಿ
ತೋರುವರು ನಿನಗೆ ಅಸಡ್ಡೆ, ಅನಾದರ, ಅನಾಚಾರಗಳಿಲ್ಲಿ

ಕೈಯ, ಕಾಲ ತೊಳೆದದ್ದೇನು, ಸ್ವಚ್ಛತೆಯ ಕಾಪಾಡುವಲ್ಲಿ
ಕ್ಯಾಕರಿಸಿ ಉಗಿದು, ಮಲಮೂತ್ರಗಳ ಮಾಡಿ ಮಲಿನಗೊಳಿಸುವರಿಲ್ಲಿ

ಮಾತೇ ಮುತ್ತಾಗಿ, ಶಬ್ಧವಾಗುವುದೆಂದು ಪಿಸುಗುಟ್ಟುವರಲ್ಲಿ
ನಿನ್ನ ಕಿವಿಯೊಡೆಯುವಂತೆ ಕರ್ಕಶದಿ ಕಿರುಚುವರಿಲ್ಲಿ

ಎಲ್ಲರ ಮನ, ಹೃದಯ ವಿಶಾಲವಲ್ಲಿ
ತೋರುವರು ವಿಕೃತ ಮನ, ಕಲ್ಲು ಹೃದಯ ನಿನಗಿಲ್ಲಿ

ಹುಲ್ಲು, ಗಿಡ, ಮರ, ಬಳ್ಳಿಯ ಬೆಳೆಸಿ ಸುಂದರ ಉದ್ಯಾನವನವಲ್ಲಿ
ಮರವ ಕಡಿದು, ಕಾಡ ಅಳಿಸಿ, ನಿನ್ನಳಿಸಿ ನಗರವಾಗಿಸುವವರಿಲ್ಲಿ

ಭಾರತಾಂಬೆಯೇ ನನಗೊಂದಾಸೆ,
ನೀನು ನಲಿವ ಪರಿಯ ನೋಡಲು
ಆಶ್ರಮ, ದೇವಾಲಯದಂತೆ ಎಲ್ಲಾ ಸೇರಿ ನಿನ್ನ ಸಿಂಗರಿಸಲು
ನಿನ್ನ ಮೈಯ ತೊಳೆದು, ಸ್ವಚ್ಛ ಮಾಡೆ, ಹಸಿರನುಡಿಸಲು!!

ಮಾಲಿನಿ ಮುರಳೀಧರ
ಚೆನ್ನೈ

Related post

Leave a Reply

Your email address will not be published. Required fields are marked *