ನನ್ನ ಭಯಾಗ್ರಫಿ – ಬೀಚಿ

ನನ್ನ ಭಯಾಗ್ರಫಿ – ಬೀಚಿ

ಬದುಕನ್ನ ನೋಡೋ ರೀತಿ, ಒಂದು ಟೇಸ್ಟ್, ರೂಢಿಸಿಕೊಂಡ ಶಿಸ್ತು, ಸಹಾನುಭೂತಿಯಿಂದ ಶುರುವಾಗೋ ಪ್ರೀತಿ ಇದೆಲ್ಲದರ ಜೊತೆಗೆ ಮನುಷ್ಯನ ಎಲ್ಲಾ ಕ್ರಿಯೆ, ಪ್ರತಿಕ್ರಿಯೆಗಳಿಗೆ ಅಂದಿನ ಪರಿಸ್ಥಿತಿನೇ ಕಾರಣ. ಆ ಮನಸ್ಥಿತಿಯ ಮೇಲೆ ಮನುಷ್ಯರು ನಿರ್ಧರಿಸೋದು ತಮ್ಮ ಬೇಕುಬೇಡಗಳಿಗೆ, ವೈಯಕ್ತಿಕ ಬದುಕಿಗೆ ಬಡಿದಾಡೋದ ಅಥವಾ ಸುಮ್ಮನಿರೋದ ಅಂತ. ವೈಯಕ್ತಿಕ ಬದುಕಿನ ದುರಂತಗಳಲ್ಲೇ ಸಾಮಾಜಿಕ ಪ್ರಜ್ಞೆ ಪ್ರಜ್ವಲಿಸೋದು. ಕನ್ನಡ ಸಾಹಿತ್ಯದಲ್ಲಿ ಹಾಸ್ಯ ಸಾಹಿತಿಗಳೆಂದೇ ಪ್ರಸಿದ್ಧಿ ಹೊಂದಿ ಹಾಗೂ ಕನ್ನಡದ “ಬರ್ನಾಡ್ ಷಾ” ಎಂದು ಪ್ರಖ್ಯಾತಿ ಹೊಂದಿರುವ “ಬೀಚಿ” ಯವರ ಆತ್ಮ ಕಥನವಿದು.

ಆತ್ಮಚರಿತ್ರೆ ಬರೆಯುವವನು ತನ್ನಿಂದ ತಾನು ಸಾಧ್ಯವಾದಷ್ಟು ದೂರನಿಂತು ಇದು ತನ್ನ ಕಥೆ ಎಂಬುದನ್ನು ಮರೆತು ತನ್ನ ಜೀವನದ ಘಟನೆಗಳನ್ನು ಪ್ರಾಮಾಣಿಕವಾಗಿ ವರದಿ ಮಾಡಬೇಕು. ಅಂತೆಯೇ ಜೀವನದಲ್ಲಿ ಬಂದವು ಜೀವನ ಚರಿತ್ರೆಯಲ್ಲೂ ಬರಬೇಕೆಂದು ತೀರ್ಮಾನಿಸಿ ಸುಮಾರು 48 ಆಯಾಮಗಳಲ್ಲಿ ತಮ್ಮ ಜೀವನ ಕಥೆಯನ್ನು ಭಯದಲ್ಲಿ, ಪ್ರೀತಿಯಲ್ಲಿ ಯಾವುದೇ ಮುಚ್ಚು ಮರೆಯಿಲ್ಲದೆ ವಿವರಿಸಿದ್ದಾರೆಂಬುದು ಸೋಜಿಗವೆನಿಸುತ್ತದೆ. ಕೆಲವು ಕಥೆಗಳು ಅಗತ್ಯ ಅನ್ನಿಸೋಲ್ಲ, ಕೆಲವು ಬೋರ್ ಹೊಡೆಯುತ್ತವೆ. ಇವರ “ನಂಬರ್ 55” ಪುಸ್ತಕ ಓದಿಯೇ ಈ ಪುಸ್ತಕ ತಂದದ್ದು, ಹಾಗೆ ಸಂಧ್ಯಾರಾಗ ಪುಸ್ತಕ ಓದಿದಮೇಲೆ ಈ ಪುಸ್ತಕ ಓದಿದ್ದು ಮತ್ತೊಂದು ವಿಶೇಷ.

ಮೊದಲ ‘ಅಂತೆ’ ಯಲ್ಲಿನ ಇವರ ಹುಟ್ಟು ಮತ್ತು ಮರುಜನನ. ಒಂದು ದೃಷ್ಟಿಯಿಂದ ಹೇಳುವುದಾದರೆ ಬೀಚಿಯವರಿಗೆ ಬಾಲ್ಯವೇ ಇರಲಿಲ್ಲ ಎನ್ನುವುದು ಹೆಚ್ಚು ಸೂಕ್ತ. ತಾಯಿ ಸತ್ತೊಡನೆ ಇವರ ಬಾಲ್ಯವು ಸಾಯುತ್ತದೆ. ಅವರ ಹುಟ್ಟಿನೊಡನೆ ಅವರ ತಂದೆ ಸಾಯಲಿಲ್ಲ. ಅವರು ಗುರುತಿಸುವ ಒಳಗಾಗಿಯೇ ಸತ್ತರು. ಇನ್ನು ಹರಪ್ಪನಹಳ್ಳಿಯ ಜನತೆ ಇದ್ದುದ್ರಲ್ಲೇ ತೃಪ್ತಿಯಿಂದ ಬದುಕುತ್ತಿರುವ ಕಾಲದಲ್ಲಿ ಅದರ ಜೊತೆಗೆ ಕೊಳೆತು ನಾರುತ್ತಿರುವ ಮಡಿ, ಆಚಾರ, ವಿಚಾರ, ಸಂಸ್ಕೃತಿ ಇದೆಲ್ಲದರ ಬಗ್ಗೆ ತುಂಬಾ ವಿಷಾದ ವ್ಯಕ್ತಪಡಿಸಿದ್ದಾರೆ. ಸುಧಾರಣೆಗೊಳ್ಳದ ಒಂದು ಊರು ಅಂದ್ರೆ ಅದು ಹರಪ್ಪನಹಳ್ಳಿಯಂತೆ.

ಈ ಪ್ರಶ್ನೆಗಳು ನಿಮ್ಮನ್ನು ಪುಸ್ತಕ ಓದುವಂತೆ ಮಾಡಬಹುದು, ಇಂತಿವೆ…..
• ಅಂದು ವಿಧವಾ ವಿವಾಹದ ನಿರ್ಧಾರ ಮಾಡಿದುದೇಕೆ? ನಂತರ ಮಹಾ ಮಡಿವಂತರ ಕನ್ಯೆಯನ್ನು ವಿವಾಹ ಆದುದೇಕೆ?
• ಅಪ್ಪಟ ನಾಸ್ತಿಕರಾದ ಬೀಚಿಯವರು ಅತಿಯಾಗಿ ದೇವರನ್ನು ನಂಬುವ ಗೀಳಿಗೆ ಮಾರ್ಪಾಡಾಗಿದ್ದು ಹೇಗೆ?
• ಮತ್ತೆ “ನಂಬಿಕೆ” ಯಲ್ಲಿನ ದೇವರ ಪಾಠಗಳಲ್ಲಿ ಕೊನೆಗೂ ದೇವರಿದ್ದಾನೋ ಇಲ್ಲವೋ ಎಂಬುದು ಇತ್ಯರ್ಥವಾಗಲೇ ಇಲ್ಲವೇ?
• ಶುದ್ಧ ಆಸ್ತಿಕರಾದ “ಅ.ನ,ಕೃ” ರವರನ್ನು ಗುರುಗಳಾಗಿ ಸ್ವೀಕರಿಸಿ ಅವರ ಒಡನಾಟದಿಂದಿರುವ ಕಾರಣಗಳೇನು?
• ರಾಯಸಂ ಭೀಮಸೇನ ರಾವ್ – ಬೀಚಿ ಆಗಿದ್ದುದರ ವಿಶೇಷವೇನು?
• “ಡಿವಿಜಿ” ಯವರ ‘ತಿಮ್ಮ’ ನಿಗೂ ಹಾಗೂ ಬೀಚಿಯವರ ‘ತಿಂಮ’ ನಿಗೂ ಇರುವ ವ್ಯತ್ಯಾಸವೇನು?
• ಕನ್ನಡ ಪುಸ್ತಕ ಓದದೇ ಇರುವ ಬೀಚಿ ಯವರು ಕನ್ನಡದಲ್ಲೇ ಪುಸ್ತಕ ಬರೆಯುವುದಕ್ಕೆ ಪ್ರೇರೇಪಿತವಾದ ಆ 6 ಪುಸ್ತಕಗಳ್ಯಾವುವು? ಅದರಿಂದ ಕಲಿತ ವಿಷಯಗಳೇನು?
• ಬೀಚಿ ಯವರು ಅತಿಯಾಗಿ ದುಃಖಿಸುವುದಕ್ಕೆ ಕಾರಣ? ಇನ್ನೂ ಮುಂತಾದವುಗಳು…
• ಕುಡಿತದ ಕಥೆಯಲ್ಲಿನ ಪ್ರಸಂಗಗಳಲ್ಲಿ ಕಾರಣವಾದ ಸಂಗತಿಯು ಹಾಸ್ಯಭರಿತವಾಗಿದೆ. • “ತಿಪ್ಪೆ ವಾಸನೆ, ಆದ್ರೆ ತಿಪ್ಪೆಗೆ ವಾಸನೆ ಎಲ್ಲಿರುತ್ತೆ ಮೊದಲು ತಿಪ್ಪೆಯಾಗಿ ಹೋಗ್ಬೇಕು ನಂತರ ನೆಮ್ಮದಿ.”

ಈ ಪುಸ್ತಕವನ್ನೊಮ್ಮೆ ಓದಿ ಕಥೆ/ಕಾದಂಬರಿಯ ಪಾತ್ರಗಳು, ವಸ್ತುಗಳು ನಮ್ಮನ್ನು ಕಾಡೋದು ಸಹಜ ಆದರೆ ಒಂದು ಆತ್ಮಕಥೆಯಲ್ಲಿನ ಆತ್ಮವನ್ನು ತಮ್ಮದಾಗಿಸಿಕೊಳ್ಳುವುದಕ್ಕೆ ಭಿನ್ನ ಪ್ರಯತ್ನವೇ ಸರಿ.

ಈ ಪುಸ್ತಕದಲ್ಲಿ ಒಳ್ಳೊಳ್ಳೆ ಸಂದೇಶವಿದೆ ಅತಿ ಹೆಚ್ಚು ಅಂತಾನೆ ಹೇಳಬಹುದು. ಕೆಲವೊಂದು ಹೀಗಿವೆ.

• ತಾನು ಅಂತರಂಗದಲ್ಲಿ ಒಪ್ಪೋಲ್ಲೋಲ್ಲದ ಸತ್ಯವನ್ನು ಮುಚ್ಚಿಡಲು ಮನಸ್ಸು ಏನೇನೋ ಸಮಾಧಾನಗಳನ್ನು ಹುಡುಕಿಕೊಳ್ಳುತ್ತದೆ. ಮಾನವನ ಮನಸ್ಸಿನಂತಹ ಕಪಟ ಸನ್ಯಾಸಿ ಇನ್ನೊಂದಿಲ್ಲ.
• ಎಲ್ಲಾ ದುಃಖಗಳು ಕಾಲಕ್ರಮೇಣ ಕಡಿಮೆ ಆಗಿಯೇ ಆಗುತ್ತದೆ. ಕಾಲದ ಪ್ರಭಾವದಿಂದ ಎಂತಹ ದುಃಖದ ಒತ್ತಡವು ಇಳಿಮುಖ ಆಗಲೇಬೇಕು ಇದಕ್ಕೆ ದೇವೆರೇ ಬೇಕೇನು? ಆಸ್ತಿಕನ ದುಃಖಕ್ಕೂ ಮಾಸುವ ಅಭ್ಯಾಸವಿದೆ.
• ಸತ್ಯ ಅಂದ್ರೇನು? ಯಾವುದು ಸತ್ಯ? ತ್ರಿಕಾಲಬಾಧಿತವಾಗಿರುವುದೇ ಸತ್ಯ. ಅವಿರೋಧವಾದ ತಿಳುವಳುಕೆಯೇ ಸತ್ಯ. ನಿದ್ರೆಯಲ್ಲಿ ನಾವು ಕನಸು ಕಾಣುತ್ತೇವೆ ಆಗ ಅದೇ ಸತ್ಯವೆಂದು ತೋರುತ್ತದೆ. ನಿದ್ರೆಯಿಂದ ಎಚ್ಚೆತ್ತ ನಂತರ? ನಾವು ಕಂಡ ಕನಸು ಕಂಡೆವು ಎಂಬಷ್ಟೇ ಸತ್ಯ. ಆದ್ರೆ ಕನಸಿನಲ್ಲಿ ಕಂಡುದೊಂದು ಸತ್ಯವಲ್ಲ ಎಂಬುದು ನಮ್ಮ ಮನಕ್ಕೆ ಸ್ವಷ್ಟವಾಗುತ್ತದೆ.

ಇನ್ನು ಮುಂತಾದವುಗಳು…….

ವಜ್ರದ ಮೂಗು ಬಟ್ಟು ಕಳೆದಿದೆ, ಆದರೆ ಧರಿಸಿದ್ದ ತೂತು ಹಾಗೆ ಇದೆ“. ನಾವು ನಮ್ಮ ಕಥೆಗಳನ್ನು ಬರೆಯುವಂತೆ ಪ್ರೇರೇಪಿಸುವ ಒಂದೊಳ್ಳೆ ಬೈಯೋಪಿಕ್ “ನನ್ನ ಭಯಾಗ್ರಫಿ”.

ಕೊನೆಯ ಮಾತು – “ಯಾವನ ಬಾಳು ಬಾಳಲಾರದಷ್ಟು ಕಷ್ಟವಲ್ಲ, ಕನಿಷ್ಠವೂ ಅಲ್ಲ. ಬಾಳಿನಿಂದ ಓಡಿಹೋಗಬೇಡ. ಅದನ್ನು ಇದಿರಿಸು ಅದನ್ನೇ ಬಾಳು. ಇದು ಬಾಳಿನಿಂದ ನಾನು ಕಲಿತ ಪಾಠ. ನಿನ್ನ ಬಾಳು ನಿನ್ನಷ್ಟು ಕೆಡುಕಲ್ಲ. ಅದನ್ನು ಪ್ರೀತಿಸು, ಪ್ರೀತಿ ನಿನ್ನ ಬಾಳ ಹೊರೆಯನ್ನು ಹಗುರ ಮಾಡುತ್ತದೆ. ನಿನ್ನ ಹೃದಯದಲ್ಲಿ ದ್ವೇಷಕ್ಕೆ ಮಾತ್ರ ಎಂದೂ ಇಂಬು ಕೊಡಬೇಡ. ಪ್ರೇಮವೇ ಬೆಳಕು, ದ್ವೇಷವೇ ಕತ್ತಲು ನೀನೇ ಸೃಷ್ಟಿಸಿಕೊಂಡ ಕತ್ತಲಲ್ಲಿ ನೀನೇ ದಾರಿ ತಪ್ಪೀಯಾ! ಎಡವಿ ಬಿದ್ದೀಯಾ, ಎಚ್ಚರಿಕೆ…” – ಇಂತಿ ನಿಮ್ಮ ಬೀಚಿ.

ರಾಜು . ಸಿ
“ಹೊತ್ತಿಗೊಂದು ಹೊತ್ತಿಗೆ” – ಪುಸ್ತಕಗ್ರಾಮ್

Related post

Leave a Reply

Your email address will not be published. Required fields are marked *