ನಮ್ಮೊಳಗಿನ ಮಾನವೀಯತೆ ಸಾಯುತ್ತಿದೆಯೆ?

ನಮ್ಮೊಳಗಿನ ಮಾನವೀಯತೆ ಸಾಯುತ್ತಿದೆಯೆ?

ಕೆಲವು ತಿಂಗಳ ಹಿಂದೆ ಕೋಲಾರದಲ್ಲಿ ದ್ವಿಚಕ್ರವಾಹನ ಅಪಘಾತಕ್ಕಿಡಾಗಿ ಒಬ್ಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದರೆ ಇನ್ನೊಬ್ಬ ರಕ್ತದ ಮಡುವಿನಲ್ಲಿ ಬಿದ್ದು ನೀರು ಕೊಡಿ ನನ್ನನ್ನು ಆಸ್ಪತ್ರೆಗೆ ಸೇರಿಸಿ ಅಂಗಲಾಚುತ್ತಿದ್ದರೂ ಬೇಡುತ್ತಿದ್ದರೂ ಅದನ್ನು ನೋಡಿಯೂ ಸುಮ್ಮನೇ ನಮಗೇಕೆ ಎಂದು ಹೋಗುತ್ತಿದ್ದ ಜನ ಒಂದು ಕಡೆಯಾದರೆ, ಮನುಷ್ಯತ್ವ ಮರೆತ ಕೆಲವು ಜನ ದೃಶ್ಯವನ್ನು ಚಿತ್ರೀಕರಿಸಿ ಅದನ್ನು ವಾಟ್ಸಪ್ ನಲ್ಲಿ ಕಳಿಸುವತ್ತ ಮಗ್ನರಾಗಿದ್ದರು, ಇದರ ಬದಲು ಅಪಘಾತದ ಸ್ಥಳದಲ್ಲಿ ನೆರೆದ ಜನ ವೀಡಿಯೋ ಮಾಡುವುದನ್ನು ಬಿಟ್ಟು ಅವನನ್ನು ಆಸ್ಪತ್ರೆಗೆ ಧಾಖಲಿಸಿದ್ದರೆ ಆ ಯುವಕ ಬದುಕುಳಿಯುತ್ತಿದ್ದನೋ ಏನೋ! ಅಲ್ಲಿದ್ದ ಜನ ಅಮಾನವೀಯತೇ ಮೆರೆದರೆ? ಅಥವಾ ನಮ್ಮೊಳಗಿನ ಮಾನವೀಯತೆ ಸಾಯುತ್ತಿದೆಯೆ? ರಸ್ತೆ ಮಧ್ಯದಲ್ಲಿ ಬಿದ್ದು ನರಳಾಡುತ್ತಿದ್ದ ಆ ಯುವಕರ ದೃಶ್ಯ ಮನಕಲಕುವಂತಿತ್ತು, ಅಫಘಾತವಾದ ಕೆಲಸಮಯದಲ್ಲೇ ಆ ದೃಶ್ಯ ವಾಟ್ಸಪ್ ನಲ್ಲಿ ಹರಿದಾಡುತ್ತಿತ್ತು. ಮೊಬ್ಯೆಲ್ ಇರುವುದೇ ಇಂಥಹ ಚಿತ್ರಗಳನ್ನು ಚಿತ್ರೀಕರಿಸಿ ವಾಟ್ಸಪ್ ನಲ್ಲಿ ಕಳಿಸಲು ಎಂಬ ಮನೋಸ್ಥಿತಿಯಲ್ಲಿ ನಾವಿದ್ದೇವೆಯೇ? ಛೇ, ಇದೆಂತಹ ಅಮಾನವಿಯತೇ? ಜೀವಕ್ಕೆ ಬೆಲೆಯಿಲ್ಲವೇ? ಇಂಥಹ ಘಟನೆಗಳು ನಮ್ಮ ಮನೆಯವರಿಗೋ ಅಥವಾ ಸಂಭಂದಿಕರಿಗೋ ಸಂಭವಿಸಿದ್ದರೆ ಅಗಲೂ ನಾವು ಸುಮ್ಮನೆ ನೋಡುತ್ತಾ ವೀಡಿಯೋ ಮಾಡುತ್ತಿದ್ದೆವೆ?

ಇತ್ತೀಚಿನ ದಿನಗಳಲ್ಲಿ ಎಲ್ಲಾದರೂ ಅಪಘಾತ ನೆಡೆದರೆ ಅಲ್ಲಿ ಅಪಘಾತಕ್ಕಿಡಾಗಿ ಒದ್ದಾಡುವ ವ್ಯಕ್ತಿಗೆ ಸಹಾಯ ಮಾಡುವ ಬದಲು ಅದನ್ನು ಮೊಬ್ಯೆಲ್‌ನಲ್ಲಿ ಚಿತ್ರೀಕರಿಸಿ ವಾಟ್ಸಪ್‌ನಲ್ಲಿ ಫಾರ್ವರ್ಡ್ ಮಾಡುವುದೇ ಅತಿ ಮುಖ್ಯವೆನಿಸುತ್ತಿದೆ, ಮೊಬೈಲ್, ವಾಟ್ಸಪ್ ಫೇಸ್ಬುಕ್ ನಿಂದಾಗಿ ಮಾನವೀಯತೆಗೆ ಬೆಲೆ ಇಲ್ಲದಂತಾಗಿದೆ ಎಂದರೆ ತಪ್ಪಾಗಲಾರದು. ಕೊನೆಯುಸಿರೆಳೆಯುತ್ತಿರುವ ಜೀವದ ಅಂತಿಮ ಕ್ಷಣಗಳನ್ನು ವೀಡಿಯೋ ಮಾಡಿ ಅದನ್ನು ಇನ್ನೊಬ್ಬರಿಗೆ ಫಾರ್ವರ್ಡ್ ಮಾಡುವುದು ಎಂಥಹ ಮನೋಸ್ಥಿತಿ? ಇಂಥಹ ವೀಡಿಯೋ ತುಣುಕು ನಮ್ಮ ಮೊಬೈಲ್‌ನಲ್ಲಿ ಬಂದದ್ದೆ ಸಾಕು, ಅದನ್ನು ನೋಡಿ ಹಿಂದೂ ಮುಂದು ನೋಡದೇ ಮತ್ತೊಬ್ಬರಿಗೆ ಫಾರ್ವರ್ಡ್ ಮಾಡುವ ಖಾಯಾಲಿ ಜಾಸ್ತಿಯಾಗುತ್ತಿದೆ.

ಕೆಲವು ವರ್ಷಗಳ ಹಿಂದೆ ಚಿತ್ರೀಕರಣ ಸಮಯದಲ್ಲಿ ಮೃತರಾದ ನಟ ಉದಯ್ ಮತ್ತು ಅನಿಲ್‌ರವರು ನೀರಿನಲ್ಲಿ ಮುಳುಗುತ್ತಿರುವ ವೀಡಿಯೋ ಟೀವಿಯಲ್ಲಿ ಪ್ರಸಾರವಾಗುವುದಕ್ಕೇ ಮುಂಚೆ ವಾಟ್ಸಪ್‌ನಲ್ಲಿ ಹರಿದಾಡುತ್ತಿದ್ದದ್ದು ಇದಕ್ಕೆ ತಾಜಾ ಉದಾಹರಣೆ. ಇದೇಕೆ ಇಂಥಹ ಮನಸ್ಥಿತಿಗೆ ತಲುಪಿದ್ದೇವೆ? ಅಪಘಾತದ ದೃಶ್ಯಗಳನ್ನು ಚಿತ್ರೀಕರಣ ಮಾಡುವ ಆತುರದಲ್ಲಿ ನಮ್ಮೊಳಗಿರುವ ಮಾನವೀಯತೆ ಸಾಯುತ್ತಿದೆಯೆ?

ಇಂಥಹ ದೃಶ್ಯಗಳನ್ನು ಚಿತ್ರೀಕರಿಸುವವರಿಗೆ ಅಪಘಾತಕ್ಕಿಡಾಗಿ ಓದ್ದಾಡುತ್ತಿರುವ ವ್ಯಕ್ತಿಯ ಭಾವನೆಗೆ ಬೆಲೆ ಕೊಡದೆ ಇಂಥಹ ಸನ್ನಿವೇಷಗಳನ್ನು ಬರಿ ಘಟನೆಯನ್ನಾಗಿ ಮಾತ್ರ ನೋಡುವ, ಚಿತ್ರಿಕರಿಸುವವರಿಗೆ ಮಾನವೀಯತೆ ಜೊತೆಗೆ ಸಂವೇದನೆಯೂ ಸತ್ತು ಹೋಗಿದೆಯೆಂದರೆ ತಪ್ಪಾಗಲಾರದು. ಕರ್ತವ್ಯ ಪ್ರಜ್ಞೆ ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಅಪಘಾತವಾದಾಗ ಅಪಘಾತಕ್ಕೀಡಾದ ವ್ಯಕ್ತಿಗೆ ಸಹಾಯ ಮಾಡುವ ಬದಲು ಅದನ್ನು ಚಿತ್ರೀಕರಿಸುವ ಖಾಯಿಲೆ ಬಂದುಬಿಟ್ಟಿದೆ ಎಂದರೆ ತಪ್ಪಾಗಲಾರದು. ಕೆಲ ತಿಂಗಳ ಹಿಂದೆ ನೆಲಮಂಗಲದ ಬಳಿ ಹರೀಶ್ ಎಂಬ ಹುಡುಗ ಅಪಘಾತಕ್ಕಿಡಾದಾಗಲೂ ಇದೇ ಸ್ಥಿತಿ, ತಾನು ಬದುಕುವುದಿಲ್ಲಾ ಎಂದು ಗೊತ್ತಾಗುತ್ತಲೇ ತನ್ನ ಅಂಗಾಂಗವನ್ನು ದಾನ ಮಾಡಿ ಎಂದು ಸಾವಿನಲ್ಲೂ ಆತ ಮಾನವೀಯತೆ ಹಾಗೂ ಸಾರ್ಥಕತೆ ಮೆರೆದಿದ್ದ, ಅದರೆ ಅದನ್ನು ವೀಡಿಯೋ ಮಾಡುತ್ತಿದ್ದ ಜನರ ಮಾನವೀಯತೆ ಸಂವೇಧನೆ ಸತ್ತು ಹೋಗಿತ್ತು.

ಇಂಥಹ ಘಟನೆಗಳು ನೆಡೆದಾಗ ದುರಂತ ಸ್ಥಳದಲ್ಲಿ ನೆರೆಯುವ ಸಾರ್ವಜನಿಕರ ಮಾನವೀಯತೆ ಮತ್ತೆ ಮತ್ತೆ ಸಾಯುತ್ತಿದೆ! ಅಪಘಾತಗಳಾದಾಗ ಸಂತ್ರಸ್ತರಿಗೆ ಸಹಾಯ ಮಾಡುವಂತೆ ಸಾರ್ವಜನಿಕರ ಮನವೋಲಿಸುವ ಕೆಲಸವಾಗಬೇಕಿದೆ. ಕೋರ್ಟು ಕಚೇರಿ ಅಲೆಯಬೇಕಾಗಬಹುದೆಂಬ ಭಯ ಕೂಡ ಸಹಾಯ ಮಾಡಲು ಹಿಂಜರಿಕೆ ಇರಬಹುದು. ಹೀಗೆ ಸಹಾಯ ಮಾಡಿದರೆ ಯಾವುದೇ ರೀತಿಯ ತೊಂದರೆ ಸಹಾಯ ಮಾಡಿದವರಿಗೆ ಆಗುವುದಿಲ್ಲಾ ಎಂದು ಜಾಗೃತಿ ಮೂಡಿಸುವ ಕೆಲಸ ಸರ್ಕಾರದಿಂದ ಆಗಬೇಕಿದೆ.

ಅಮಾನವೀಯರಂತೆ ವರ್ತಿಸುವ ಬದಲು ಸಂತ್ರಸ್ತರಿಗೆ ಸಹಾಯ ಮಾಡಲು ಮುಂದಾಗಿ, ಅಪಘಾತಕ್ಕಿಡಾದವರು ಯಾರದೋ ಮಗ ಮಗಳಾಗಿರಬಹುದು, ಅಪ್ಪನಾಗಿರಬಹು, ತಂದೆಯೋ ಅಥವಾ ತಾಯಿಯೂ ಅಗಿರಬಹುದು, ಇಂಥಹ ಘಟನಾವಳಿಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುವವರಿಗೆ ಹೃದಯ ಕಲಕುವುದಿಲ್ಲವೇ? ಇಂಥಹ ವೀಡಿಯೋ ಫಾರ್ವರ್ಡ್ ಆಗುತ್ತಾ ಆಗುತ್ತಾ ದುರಂತಕ್ಕೊಳಗಾದವರ ಮನೆಯವರ ಮೊಬೈಲ್‌ಗೂ ತಲುಪಿದರೆ ಮತ್ತೆ ಅವರಿಗೆ ನೋವಾಗುವುದಿಲ್ಲವೇ? ದುರಂತಕ್ಕೀಡಾಗಿ ನರಳುತ್ತಿರುವ ವ್ಯಕ್ತಿಯ ಭಾವನೆಗಳಿಗೆ ಬೆಲೆ ಕೊಡಬೇಕು ಅದು ಬಿಟ್ಟು ಅದನ್ನು ಚಿತ್ರೀಕರಿಸಿ ಬೆರೋಬ್ಬರಿಗೆ ವೀಡಿಯೋ ಕಳಿಸುವುದು ಮಾನವೀಯತೆಯಲ್ಲಾ! ಇಂಥಹ ಅಪಘಾತವೊಂದನ್ನು ನೀವು ವೀಡಿಯೋ ಮಾಡುತ್ತಿದ್ದಿರೆಂದರೆ ನಿಮ್ಮಲ್ಲಿರುವ ಸಂವೇದನೆ ಹಾಗೂ ಮಾನವೀಯತೆ ಎರಡು ಸತ್ತುಹೋಗಿದೆಎಂದೇ ಅರ್ಥ! ಜೀವಕ್ಕೆ ಬೆಲೆಯಿರಲಿ, ಮಾನವೀಯತೆ ಸಾಯದಿರಲಿ.

ಡಾ. ಪ್ರಕಾಶ್ ಕೆ. ನಾಡಿಗ್

Related post

1 Comment

  • ನಿಜ, ಮಾನವೀಯತೆಯನ್ನು ಮನುಷ್ಯ ಮರೆಯಬಾರದು. ಉಪಯುಕ್ತ ಲೇಖನ.

Leave a Reply

Your email address will not be published. Required fields are marked *