ಇಲ್ಲಿ ಎಲ್ಲರೂ ನಟ-ನಟಿಯರೇ..
ಯಾರಿಗೂ ಅನುಮಾನ ಬರದಂತೆ
ನಟನೆಯೇ ಹೆದರುವಂತೆ
ಮನೋಜ್ಞವಾಗಿ ನಟಿಸುತ್ತೇವೆ
ಪರದೆಯ ಒಳಗೂ, ಹೊರಗೂ
ವ್ಯತ್ಯಾಸವಿಲ್ಲದಂತೆ
ಸಭ್ಯಸ್ಥರಂತೆ ಕಣ್ಣು ಮುಚ್ಚಿಕೊಂಡು
ಯಾರ್ ಯಾರನ್ನೋ ನೆನೆಸಿಕೊಂಡು
ಕನಸಿನಲ್ಲಿಯೇ ಸ್ಖಲಿಸುತ್ತೇವೆ
ಒದ್ದೆಯಾದ ನಂತರ
ನಮ್ಮ ಮೇಲೆ ನಮಗೇ ಅಸಹ್ಯ ಹುಟ್ಟುತ್ತದೆ
ಎಲ್ಲವೂ
ಪ್ರಕೃತಿಯ ಸಹಜ ಕ್ರಿಯೆಗಳೇ ಸರಿ
ಆದರೆ ವಿಕೃತ ಮನಸ್ಥಿತಿಗಳ ಕಥೆ ಹಾಗಲ್ಲ
ಅವರಿಗೇನೋ ತುಡಿತ
ಮತ್ತೇನನ್ನೋ ಪಡೆಯುವ ಹಂಬಲ
ಎಲ್ಲದರ ಬಗ್ಗೆ ವಿಪರೀತ ಆಸೆಗಳು
ಎಲ್ಲರೊಟ್ಟಿಗೂ ಬೆರೆತು
ತಮ್ಮನ್ನು ತಾವು ಮರೆಯುವ ಹೆಬ್ಬಯಕೆ
ಪರಿಚಿತರ ಜೊತೆ
ನಂಬಿಕಸ್ಥರ ಜೊತೆ
ಸ್ವಲ್ಪ ಹೆಚ್ಚೇ ಮಾತಡಬಹುದು
ಅದರಲ್ಲೇನೂ ತಪ್ಪಿಲ್ಲ ಬಿಡಿ!
ಆದರೆ ವಿನಾಕಾರಣ ಚುಚ್ಚುತ್ತಾ..
ಯಾರನ್ನೂ ಬಿಡದೆ ಹಿಂಬಾಲಿಸುತ್ತಾ..
ಸಮಯ ಕಾಯ್ದು ಚಪಲ ಹಿಂಗಿಸಿಕೊಳ್ಳುವ
ಮಹಾನುಭಾವಿಗಳು ನಮ್ಮೆಲ್ಲರಿಗೂ ಗೊತ್ತು!
ಮೊದಲು ಹಾಯ್
ನಂತರ ಫೋಟೋ..
ಆಮೇಲೆ ವೀಡಿಯೋ..
ಅನಂತರ ಬ್ಲಾಕ್ ಮೇಲ್!!
ಕೆಲವೊಬ್ಬರಿಗೆ ಮನಸ್ಸಿನಲ್ಲೇನೂ ಇರದು
ಅಂಥವರು ವಿಷಯ ಸಂಗ್ರಹಣೆಗೆ ಹಾತೊರೆಯುತ್ತಾರೆ.
ಇನ್ನೂ ಕೆಲವೊಬ್ಬರು ಒಳ್ಳೆಯವರಂತೆ ನಟಿಸುತ್ತಾರೆ
ಅವರ ತಲೆಯಲ್ಲಿ
ನಗ್ನ ಚಿತ್ರಗಳು, ಪೋಲಿ ಕಥೆಗಳು
ಈಡೇರದ ಬಯಕೆಗಳೇ ತುಂಬಿರುತ್ತವೆ.
ನಮ್ಮೆಲ್ಲರಿಗೂ ಆರಿಸಿಕೊಳ್ಳುವ ಆಯ್ಕೆಯಿದೆ
ಯೋಚಿಸುವ, ನಿರ್ಧರಿಸುವ ಶಕ್ತಿ ಇದೆ
ಯೋಚಿಸೋಣ ಹೆಜ್ಜೆ ಮುಂದಿಡುವ ಮುಂಚೆ
ಅಷ್ಟೇ..!
ಅನಂತ ಕುಣಿಗಲ್