ನಲಿವ ನಾಗದಳಿ

ಹಳ್ಳಿಗಳಲ್ಲಿ ಹಿತ್ತಲಿನತ್ತ ನಡೆದರೆ ಪುಟ್ಟ ಹಸಿರನ ತೋಟ ಕಾಣ ಬರುತ್ತದೆ. ಈ ಹಸಿರಿನ ತೋಟದಲ್ಲಿ ಅತಿ ಬಳಕೆಯ ಸಸ್ಯಗಳು ಹೂ ಬಿಡುವ ಸಸ್ಯಗಳು ಸಾಮಾನ್ಯವಾಗಿ ಕಂಡು ಬರುತ್ತದೆ. ಇವುಗಳ ನಡುವೆ ನಾಗದಳಿ ಸಸ್ಯವು ಕೂಡ ಕಾಣಬಹುದು. ನೋಡಲು ಎಳೆ ಬೂದು ಹಸಿರಿನ, ಪುಟ್ಟ ಎಲೆಗಳು, ಸೂಕ್ಷ್ಮವಾದ ಹಳದಿ ಹೂವುಗಳನ್ನು ಹೊಂದಿರುವ ಗಿಡಮೂಲಿಕೆ ನಾಗದಳಿ.

ನಾಗದಳಿಯ ವಿಶೇಷತೆ ಎಂದರೆ ಹತ್ತಿರ ಸುಳಿದರೆ ಸಾಕು ಸುಗಂಧವನ್ನು ಸೂಸುತ್ತದೆ. ಹಳ್ಳಿಗಳಲ್ಲಿ ಕಡ್ಡಾಯವಾಗಿ ಈ ಸಸ್ಯವನ್ನು ಬೆಳೆಸಲು ಕಾರಣ ಈ ಗಿಡಮೂಲಿಕೆ ಬೆಳದಲ್ಲಿ ವಿಷಜಂತುಗಳಾದ ಹಾವು ಚೇಳು ಇತ್ಯಾದಿ ಸುಳಿಯುವುದಿಲ್ಲ. ಅಲ್ಲದೆ ಬೇರೆ ಸಸ್ಯಗಳಿಗೆ ಯಾವ ರೋಗವು ತಗಲುವುದಿಲ್ಲ ಎಂಬ ನಂಬಿಕೆ.

ರೂಟ ಗ್ರಾವಿಯೋಲೆನ್ಸ್ ( Ruta Graveolens ) ಎಂಬ ವೈಜ್ಞಾನಿಕ ಹೆಸರುಳ್ಳ ರೋಟೇನಿ ಕುಟುಂಬಕ್ಕೆ ಸೇರಿದ ಈ ಸುಗಂಧಿ ಸಸ್ಯವು ದಕ್ಷಿಣ ಏಷ್ಯಾ ಖಂಡದಲ್ಲಿ ಚಿರಪರಿಚಿತವಾದದ್ದು. ಆದಿ ಕಾಲದಿಂದಲೂ ಈ ಗಿಡಮೂಲಿಕೆಯನ್ನು ಆಯುರ್ವೇದದಲ್ಲಿ ಉಪಯೋಗಿಸಲಾಗುತ್ತಿತ್ತು.

ನಾಗದಳಿ ಸಸ್ಯವು ಕ್ರಿಮಿಗಳನ್ನು ದೂರವಿಡುವ ಸಾಮರ್ಥ್ಯ ಹೊಂದಿದ್ದು ಬಹಳಷ್ಟು ಔಷಧೀಯ ಗುಣಗಳನ್ನು ಸಹ ಹೊಂದಿದೆ. ಆಂಟಿಆಕ್ಸಿಡೆಂಟ್ ನಿಂದ ಹೇರಳವಾಗಿ ತುಂಬಿರುವ ನಾಗದಳಿ ಸಸ್ಯವು ಚರ್ಮ ವ್ಯಾಧಿಗಳನ್ನು ದೂರಮಾಡಬಲ್ಲದು. ಮುಖದ ಸುಕ್ಕನ್ನು ಹೋಗಲಾಡಿಸಿ ಚರ್ಮದ ಕಾಂತಿಯನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ.

ತಲೆ ಕೂದಲಿನಲ್ಲಿ ಹೊಕ್ಕ ಹೇನುಗಳನ್ನು ಹೋಗಲಾಡಿಸಲು ಈ ಸಸ್ಯದ ರಸವನ್ನು ಲೇಪಿಸಲಾಗುತ್ತದೆ. ನೆತ್ತಿಯಲ್ಲಿ ಕಂಡುಬರುವ ಹೊಟ್ಟಿನ ಸಮಸ್ಯೆ, ತುರಿಕೆಯಂತಹ ತೊಂದರೆಗಳನ್ನು ದೂರ ಮಾಡಬಹುದಾಗಿದೆ. ನಾಗದಳಿ ಸಸ್ಯದ ಎಣ್ಣೆಯನ್ನು ಕೂದಲಿಗೆ ಲೇಪಿಸುವುದರಿಂದ ಕೂದಲಿನ ಕಾಂತಿ ಹೆಚ್ಚಿ ದಟ್ಟವಾಗಿ ಬೆಳೆಯಲು ಉಪಯುಕ್ತ.
ಮೂತ್ರಪಿಂಡದ ತೊಂದರೆ ಆಹಾರ ಸೋಂಕು ಕಂಡುಬಂದಲ್ಲಿ, ಸೋಂಕು ನಿವಾರಣೆಗೆ ನಾಗದಳಿ ಸಸ್ಯದ ಚಹಾ ಬಹಳ ಸಹಾಯಕಾರಿ. ಹಲ್ಲುಗಳಲ್ಲಿ ಕಂಡು ಬರುವ ಹುಳುಕು ಮತ್ತು ಅದರ ನೋವನ್ನು ಕ್ಷೀಣಿಸಿ ಹುಳುಕಿನಲ್ಲಿರುವ ಕ್ರಿಮಿಗಳನ್ನು ನಾಶಪಡಿಸುತ್ತದೆ. ನೆಗಡಿ ಕೆಮ್ಮು ಉಸಿರಾಟದ ತೊಂದರೆ ಕಂಡು ಬಂದಲ್ಲಿ ಈ ಸಸ್ಯದ ಎಲೆಗಳನ್ನು ನೀರಿನಲ್ಲಿ ಕುದಿಸಿ ಆವಿ ತೆಗೆದುಕೊಂಡಲ್ಲಿ ಶೀಘ್ರ ಗುಣವಾಗುವ ಪ್ರಾಭಲ್ಯವು ಹೆಚ್ಚು.


ಹೀಗೆ ಹಲವಾರು ಸದ್ಬಳಿಕೆಯುಳ್ಳ ನಾಗದಳಿ ಸಸ್ಯವು ನಮ್ಮ ಕೈತೋಟದಲ್ಲಿ ನಲಿದರೆಷ್ಟು ಚೆಂದ ಅಲ್ಲವೇ…

ಶಿಲ್ಪ

Related post

Leave a Reply

Your email address will not be published. Required fields are marked *