ನವದುರ್ಗೆಯರ ನವರಾತ್ರಿ ವೈಭವ
ಒಂದೊಮ್ಮೆ, ಮಹಿಷಾಸುರ ಎನ್ನುವ ಅಸುರ ದೇವತೆಗಳನ್ನೆಲ್ಲಾ ಪೀಡಿಸುತ್ತಿದ್ದು, ಆ ದೇವತೆಗಳೆಲ್ಲಾ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರನ್ನು ಕಾಪಾಡುವಂತೆ ಬೇಡಿದರು. ತ್ರಿಮೂರ್ತಿಗಳು ತಮ್ಮ ಶಕ್ತಿಯನ್ನೆಲ್ಲಾ ಪಾರ್ವತಿಗೆ ಧಾರೆಯೆರೆದು, ದೇವಿಯು ಹತ್ತು ಕೈಗಳನ್ನು ಹೊಂದಿ ದುರ್ಗೆಯ ಅವತಾರವೆತ್ತಿದಳು. ಶಿವನು ತ್ರಿಶೂಲವನ್ನು, ವಿಷ್ಣುವು ಚಕ್ರವನ್ನು, ವರುಣ ದೇವನು ಪಾಶವನ್ನು, ಇಂದ್ರನು ವಜ್ರಾಯುಧವನ್ನು, ವಾಯುವು ಬಾಣಗಳನ್ನು, ಪರ್ವತರಾಜನು ವಾಹನವಾದ ಸಿಂಹವನ್ನು ದುರ್ಗೆಗೆ ನೀಡಿದರು.
ಈ ಎಲ್ಲಾ ಆಯುಧ ಹಾಗೂ ವಾಹನಗಳಿಂದ ಸನ್ನದ್ಧಳಾದ ದುರ್ಗೆಯು ಮಹಿಷಾಸುರನ ಸೈನ್ಯದ ಮೇಲೆ ಆಕ್ರಮಣ ಮಾಡಿದಳು. ಒಂಭತ್ತು ದಿನಗಳ ಕಾಲ ನಡೆದ ಯುದ್ಧದಲ್ಲಿ ದುರ್ಗೆಯು ಮಹಿಷಾಸುರನನ್ನು ಸಂಹರಿಸಿದಳು. ಆ ದಿನದ ವಿಜಯೋತ್ಸವದ ಸಂಭ್ರಮಾಚರಣೆಯನ್ನೇ ವಿಜಯ ದಶಮಿ ಎನ್ನುವುದು. ಯುದ್ಧ ನಡೆದ ಈ ಒಂಭತ್ತು ದಿನಗಳನ್ನು ನವರಾತ್ರಿ ಎಂದು ಕರೆಯಲಾಗುತ್ತದೆ. ದುರ್ಗೆಯನ್ನು ಈ ಒಂಭತ್ತು ದಿನಗಳಲ್ಲಿ ಅವಳ ಒಂಭತ್ತು ಅವತಾರಗಳಲ್ಲಿ ದಿನಕ್ಕೊಂದು ಅವತಾರದಂತೆ ಆರಾಧಿಸಲಾಗುತ್ತದೆ.
ನವರಾತ್ರಿಯ ಮೊದಲ ದಿನ ಶೈಲಪುತ್ರಿಯ ರೂಪವನ್ನು ಆರಾಧಿಸಲಾಗುತ್ತದೆ. ಶೈಲಪುತ್ರಿ ಎಂದರೆ ಪರ್ವತರಾಜನ ಮಗಳು ಎಂದರ್ಥ. ಶೈಲಪುತ್ರಿಯು ಹಿಂದೆ ದಕ್ಷನ ಮಗಳು ದಾಕ್ಷಾಯಿಣಿ ಆಗಿದ್ದಳು. ದಕ್ಷನು ತನ್ನ ಪತಿ ಶಿವನಿಗೆ ಅವಮಾನ ಮಾಡಿದ್ದಕ್ಕಾಗಿ, ದಕ್ಷ ಮಾಡುತ್ತಿದ್ದ ಯಜ್ಞ ಕುಂಡಕ್ಕೆ ಜಿಗಿದು ಪ್ರಾಣಾರ್ಪಣೆ ಮಾಡಿಬಿಟ್ಟಳು. ಶಿವನನ್ನು ಪುನಃ ಪಡೆಯುವ ಸಲುವಾಗಿ ಪರ್ವತರಾಜನ ಮಗಳಾಗಿ ಹುಟ್ಟಿದಳು. ಇವಳನ್ನೇ ಶೈಲಪುತ್ರಿ ಎಂದು ಪೂಜಿಸುವುದು. ದಾಕ್ಷಾಯಿಣಿಯ ಸಾವಿನ ನಂತರ ಶಿವ ದೀರ್ಘವಾದ ತಪಸ್ಸಿನಲ್ಲಿ ಮುಳುಗಿಹೋಗಿದ್ದ. ಹೀಗಾಗಿ ಶೈಲಪುತ್ರಿ ಕಾಡಿಗೆ ಹೋಗಿ ಹದಿನಾರು ವರ್ಷ ಕಠಿಣ ತಪಸ್ಸಿನಲ್ಲಿ ತೊಡಗಿ ನಂತರ ಶಿವನನ್ನು ಪಡೆದಳು.
ಶಿವನನ್ನು ಪತಿಯಾಗಿ ಪಡೆಯಲು ನಾರದರ ಉಪದೇಶದಂತೆ ಕಠಿಣ ತಪಸ್ಸು ಮಾಡಿದ ಈಕೆಯನ್ನೇ ಬ್ರಹ್ಮಚಾರಣೀ ಎಂದು ನವರಾತ್ರಿಯ ಎರಡನೆಯ ದಿನ ಪೂಜಿಸುವುದು. ದುರ್ಗಾಮಾತೆಯು ಶಿವನನ್ನು ಮದುವೆಯಾಗಲು ಹೋದಾಗ, ಶಿವ ಭಯಂಕರ ಸ್ವರೂಪದಲ್ಲಿ ಇದ್ದನಂತೆ. ಆ ರೂಪವನ್ನು ನೋಡಿ, ತಾನೂ ರೌದ್ರ ಸ್ವರೂಪವಾದ ಚಂದ್ರಘಂಟಾ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ. ಶಿವನಿಗೆ ಸುಂದರ ಸ್ವರೂಪವನ್ನು ಹೊಂದುವಂತೆ ಕೇಳಿಕೊಳ್ಳುತ್ತಾಳೆ. ಅದಕ್ಕೆ ಒಪ್ಪುವ ಶಿವ ಸುಂದರ ರೂಪವನ್ನು ತಾಳುತ್ತಾನೆ. ಚಂದ್ರಘಂಟ ರೂಪದಲ್ಲಿದ್ದ ದುರ್ಗೆಯೂ ಸೌಮ್ಯ ಸ್ವರೂಪ ಹೊಂದಿ, ಶಿವನನ್ನು ವರಿಸುತ್ತಾಳೆ. ನವರಾತ್ರಿಯ ಮೂರನೇ ದಿನ ದುರ್ಗೆಯ ರೌದ್ರ ಸ್ವರೂಪವಾದ ಚಂದ್ರಘಂಟಾ ರೂಪವನ್ನು ಆರಾಧಿಸಲಾಗುತ್ತದೆ.
ನಾಲ್ಕನೇ ದಿನದಂದು ಕೂಷ್ಮಾಂಡ ದೇವಿಯ ರೂಪವನ್ನು ಪೂಜಿಸಲಾಗುತ್ತದೆ. ಕೂಷ್ಮಾಂಡಿನಿಯನ್ನು ಈ ಭೂಮಿಯ ಸೃಷ್ಟಿಕರ್ತೆ ಎಂದು ಕರೆಯಲಾಗುತ್ತದೆ. ಇವಳಿಗೆ ಎಂಟು ಭುಜಗಳಿರುವ ಕಾರಣ ಅಷ್ಟಭುಜಾದೇವಿ ಎಂದೂ ಕರೆಯಲಾಗುತ್ತದೆ. ಸೃಷ್ಟಿಯ ಅಸ್ತಿತ್ವವೇ ಇಲ್ಲದಿರುವಾಗ ಎಲ್ಲೆಡೇ ಅಂಧಕಾರ ತುಂಬಿದ್ದಾಗ ದೇವಿಯು ಬ್ರಹ್ಮಾಂಡವನ್ನು ಸೃಷ್ಟಿಸುತ್ತಾಳೆ. ಅದಕ್ಕೇ ಅವಳನ್ನು ಕೂಷ್ಮಾಂಡ ದೇವಿ ಎನ್ನಲಾಗುತ್ತದೆ. ನಂತರ ದೇವಿಯನ್ನು ಐದನೇ ದಿನ ಸ್ಕಂದ ಮಾತೆ ಎಂದು ಆರಾಧಿಸಲಾಗುತ್ತದೆ. ಸ್ಕಂದ ಎಂದರೆ ದೇವಿಯ ಮಗ ಮುರುಗ ಅಥವಾ ಕಾರ್ತಿಕೇಯ. ಅವನನ್ನು ತೊಡೆಯ ಮೇಲೆ ಕೂರಿಸಿಕೊಂಡು ಕೂತಿರುವ ದೇವಿಯೇ ಸ್ಕಂದ ಮಾತೆ. ನವರಾತ್ರಿಯ ಆರನೇ ದಿನ ಕಾತ್ಯಾಯನಿಯ ರೂಪವನ್ನು ಪೂಜಿಸಲಾಗುತ್ತದೆ. ಕಾತ್ಯಾಯನ ಎನ್ನುವವನೊಬ್ಬ ಋಷಿ. ಅವನಿಗೆ ಪಾರ್ವತಿ ದೇವಿಯೇ ತನ್ನ ಮಗಳಾಗಿ ಜನಿಸಬೇಕೆಂಬ ಬಯಕೆ. ಅವನ ತಪಸ್ಸಿಗೆ ಮೆಚ್ಚಿ, ದೇವಿಯು ಅವನ ಮಗಳಾಗಿ ಹುಟ್ಟಿ ಕಾತ್ಯಾಯಿನಿ ಎಂಬ ಹೆಸರು ಪಡೆಯುತ್ತಾಳೆ. ದೊಡ್ಡವಳಾದ ಮೇಲೆ ತನ್ನ ಹತ್ತು ಕೈಗಳಲ್ಲಿ ಶಸ್ತ್ರಾಸ್ತ್ರ ಹಿಡಿದು ದುಷ್ಕೃತ್ಯ ಎಸಗುವ ಅಸುರರನ್ನೆಲ್ಲಾ ಮಟ್ಟ ಹಾಕಲು ಜಗತ್ತನ್ನು ಸುತ್ತುತ್ತಾಳೆ.
ನವರಾತ್ರಿಯ ಏಳನೇ ದಿನದಂದು ಕಾಳ ರಾತ್ರಿ ಎಂಬ ರೂಪದಲ್ಲಿ ದೇವಿಯನ್ನು ಪೂಜಿಸಲಾಗುತ್ತದೆ. ಕಾಳ ರಾತ್ರಿ ಎಂಬ ಹೆಸರಿಗೆ ತಕ್ಕಂತೆ ದೇವಿ ಈ ರೂಪದಲ್ಲಿ ಬಹಳ ಕಪ್ಪಾಗಿಯೂ, ರೌದ್ರವಾಗಿಯೂ ಕಾಣುತ್ತಾಳೆ. ತನ್ನ ಬಂಗಾರ ಬಣ್ಣದ ಮೈಬಣ್ಣವನ್ನು ತ್ಯಜಿಸಿ, ಕಾಳರಾತ್ರಿಯ ರೂಪ ಧಾರಣೆ ಮಾಡಿ ರಾಕ್ಷಸರ ವಿರುದ್ಧ ಹೋರಾಡುವ ಇವಳನ್ನು ದುಷ್ಟಶಕ್ತಿ, ನಕಾರಾತ್ಮಕ ಶಕ್ತಿ, ಭೀತಿಗಳನ್ನು ದೂರ ಮಾಡುವ ದೇವತೆ ಎನ್ನಲಾಗುತ್ತದೆ. ಎಂಟನೇ ದಿನ ದೇವಿಯನ್ನು ಮಹಾಗೌರಿಯ ರೂಪದಲ್ಲಿ ಆರಾಧಿಸಲಾಗುತ್ತದೆ. ಗೌರಿ ಎಂದರೆ ಗಿರಿ ಅಥವಾ ಪರ್ವತನ ಮಗಳು ಎಂದರ್ಥ. ಗೂಳಿ ಮೇಲೆ ಪ್ರಯಾಣಿಸುವ ಗೌರಿ ತನ್ನ ಕೈಯಲ್ಲಿ ತ್ರಿಶೂಲದೊಂದಿಗೆ ಢಮರುವನ್ನು ಹಿಡಿದುಕೊಂಡಿರುತ್ತಾಳೆ. ನವರಾತ್ರಿಯ ಒಂಭತ್ತನೇ ದಿನದಂದು ದೇವಿಯನ್ನು ಸಿದ್ಧಧಾತ್ರಿಯ ರೂಪದಲ್ಲಿ ಪೂಜಿಸಲಾಗುತ್ತದೆ. ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಆಧ್ಯಾತ್ಮಿಕ ವೈಭವ ಹಾಗೂ ಪರಿಪೂರ್ಣತೆಯನ್ನು ನೀಡುವವಳೇ ಸಿದ್ಧಧಾತ್ರಿ. ಪರಿಪೂರ್ಣತೆ, ಶಕ್ತಿ, ವೈಭವಗಳ ಮೂಲ ಈ ರೂಪ ಎನ್ನಲಾಗಿದೆ. ಇದುವೇ ನವದುರ್ಗೆಯರ ನವರಾತ್ರಿ ವೈಭವ!
ಆಶಾ ರಘು
ಚಿತ್ರಗಳು: ಅಂತರ್ಜಾಲ
1 Comment
Very informative and very well explained
Thank you so much ❤️.