ನವೋಲ್ಲಾಸದ ದಿನಕರ
ವಿಷಾದದ ವಿಷಮ ಗಳಿಗೆಯನು ಮರೆಸಿ
ಮೋಡದ ಮರೆಯಿಂದ ಕಣ್ಹೊಡೆದು ತಾ ಇಣುಕಿ!
ಹೊಸಭಾವದ ಹಾದಿಯಲಿ ಜಗವ ನಡೆಸಿ..
ಹೊಸ ಬೆಳಕನು ತಂದಿಹನು ದಿನಕರ!!
ಕಾಣುತಿದೆ ಸೊಗದಿ ಹೊಸ ಚಿಗುರು
ಪಸರಿಸಿದೆ ಎಲ್ಲೆಡೆ ನವ ನವೋಲ್ಲಾಸ!
ಕಂಡಿದೆ ಧರೆಯ ಮೊಗದಿ ಅದೇ ಹಸಿರು..
ಅವಳ ಬದುಕಲಿ ನಿತ್ಯ ಬೆರೆತಿಹನು ಭಾಸ್ಕರ!!
ಹೊನ್ನಿನಾಗಸದಿ ಬಂದಿದೆ ಬೆಳಕು
ಸುಂದರ ಮುಂಜಾವಿನದೇ ನವ ಚಿತ್ತಾರ!
ನಲಿವ ಬುವಿಗೆ ಅವನೇ ಬದುಕು..
ಹರುಷದಿ ನಗಿಸಿ ಬೇಸರ ಕಳೆದಿಹನು ನೇಸರ!!
ಮಂಜು ಕವಿದು ಮುಸುಕಿರಲು ಸುತ್ತ
ಹೊಮ್ಮಿದೆ ಅಂಬರದಿ ಕಾಂತಿಯ ಹೊಳಪು!
ಹೊಂಗಿರಣದಿ ತಮದ ತೆರೆಯ ಸರಿಸಿ ಅತ್ತ..
ನೋವ ಮರೆಸಲು ಮತ್ತೆ ಬಂದಿಹನು ಅಹಸ್ಕರ!!
ಸುಮನಾ ರಮಾನಂದ