ಕರ್ನಾಟಕದಲ್ಲಿ ನಾಗಮಂಡಲವು ಸಾಂಸ್ಕೃತಿಕ, ಜಾನಪದೀಯ, ಚಿತ್ರಕಲಾತ್ಮಕ, ಆಚರಣ ಸಿದ್ಧಾಂತಗಳ ದೃಷ್ಠಿಕೋನದಲ್ಲಿ ಬಹಳ ಮುಖ್ಯವಾದ ಆಧ್ಯನಶೀಲ ಅಂಶವಾಗಿದೆ. ರಾಜಸ್ಥಾನದ ನಿಮಾಡ್ ಮತ್ತು ಅದರ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಮಂಡಣ ಎಂಬ ರಂಗೋಲಿ ಬಿಡಿಸುವ ಪದ್ದತಿ ಇದೆ. ವಿಶೇಷವೆಂದರೆ ನಾವು ಕರ್ನಾಟಕದ ಕರಾವಳಿಯಲ್ಲಿ ಬಳಸುವ ಮಂಡಲ ಮತ್ತು ರಾಜಾಸ್ಥಾನದಲ್ಲಿ ಬಳಸುವ ಮಂಡಣ ಎಂಬ ಪದವು ಅಧ್ಯಯನದ ದೃಷ್ಠಿಯಲ್ಲಿ ಬಹಳ ಪ್ರಮುಖ ಎನಿಸುತ್ತದೆ. ಪದೋಚ್ಛಾರಣೆಯು ಒಂದೇ ರೀತಿಯಾಗಿದ್ದರೂ ಆ ಚಿತ್ತಾರಗಳು ಬಿತ್ತರಿಸಿಕೊಳ್ಳುವ ಗುರಿ ಮಾತ್ರ ಬೇರೆಯಾಗಿರುತ್ತದೆ. ಹಾಗೆಯೇ ಭಾರತದ ವಿವಿಧ ರಾಜ್ಯಗಳಲ್ಲಿ ರಚಿಸಲ್ಪಡುವ ಮನೆಯ ಮುಂದಿನ ರಂಗೋಲಿಗಳಿಗೆ ಬೇರೆ ಬೇರೆಯಾದ ಪದಗಳು ಮತ್ತು ಉದ್ದೇಶಗಳು ಇರುತ್ತವೆ ಎಂಬುದನ್ನು ನಾವು ಗ್ರಹಿಸಬೇಕಾಗಿದೆ.
ನಾವು ನಾಗಮಂಡಲದ ಚಿತ್ತಾರಗಳನ್ನು ಬಣ್ಣ ಬಣ್ಣದ ನೆಲಮೂಲದ ಬಣ್ಣಗಳಿಂದ ಚಿತ್ರಿಸಿದರೆ ಮಂಡಣಗಳು ನೆಲದಲ್ಲಿ ದೊರೆಯುವ ಮಣ್ಣಿನ ಬಣ್ಣಗಳಾದ ಕೆಂಪು, ಹಳದಿ ಮತ್ತು ಬಿಳಿಯ ಬಣ್ಣಗಳಿಂದ ಚಿತ್ರಿಸುತ್ತಾರೆ. ನಾಗಮಂಡಲವನ್ನು ನೆಲದಲ್ಲಿ ಮಾತ್ರ ಚಿತ್ರಿಸಿದರೆ ಮಂಡಣವು ನೆಲ ಮತ್ತು ಸಂದರ್ಭಾನುಸಾರ ಗೋಡೆಗಳ ಮೇಲೂ ಚಿತ್ರಿಸಲ್ಪಡುತ್ತವೆ. ನಾನು ಈ ಎರಡೂ ಪದಗಳನ್ನು ಒಂದೇ ರಿತಿಯ ಉಚ್ಛಾರಗಳೆನ್ನುವ ಕಾರಣಕ್ಕೆ ಹೋಲಿಕೆಯ ಅಂಶಗಳನ್ನು ನೀಡುತ್ತ ಚರ್ಚಿಸುತ್ತಿದ್ದೇನೆ. ಇದೇ ರೀತಿಯಾಗಿ ಒರಿಸ್ಸಾ, ಬಂಗಾಳದ ಪಟಚಿತ್ರಗಳು ಮತ್ತು ನಾಗಾಲ್ಯಾಂಡ್ ಮತ್ತು ಮಣಿಪುರದ ಪಟಚಿತ್ರಗಳು ಪದೋಚ್ಛಾರಣೆಯಲ್ಲಿ ಒಂದೇ ಎನಿಸಿದರೂ ಚಿತ್ರಿತವಾಗುವ ಚಿತ್ರದ ಉದ್ದೇಶ ಮತ್ತು ಗುರಿಯು ಬೇರೆ ಬೇರೆಯಾಗಿಯೇ ಇರುತ್ತದೆ.
ಪುರಾಣದ ಉಲ್ಲೇಖದಲ್ಲಿ ನಾಗಮಂಡಲ
‘ಕ್ಷತ್ರಿಯ ರಾಜನಿಂದ ಹತನಾದ ತನ್ನ ತಂದೆಯನ್ನು ನೋಡಿ ರೇಣುಕಾ ದೇವಿಯು ಅತಿ ದು:ಖದಿಂದ ೨೧ ಬಾರಿ ತನ್ನ ಎದೆಯನ್ನು ಬಡಿದುಕೊಳ್ಳುತ್ತಿದ್ದಳು. ಅಳುತ್ತಿರುವ ತನ್ನ ತಾಯಿಯನ್ನು ನೋಡಿದ ಪರಶುರಾಮ ೨೧ ಸಲ ಇಡೀ ಭೂಮಂಡಲವನ್ನು ತಿರುಗಿ ಕಣ್ಣೆದುರು ಕಂಡ ಕ್ಷತ್ರಿಯರನ್ನು ಸಂಹಾರ ಮಾಡಿದ್ದನು. ಮಹಿಮೆಯಿರುವ ತನ್ನ ಪರಶುವನ್ನು ತೆಗೆದುಕೊಂಡು ಕಾರ್ತವೀರ್ಯನ ಮಕ್ಕಳನ್ನು ಸಂಹರಿಸಿ ಅವರ ಸಾಮಂತರಾದ ಎಲ್ಲಾ ರಾಜಕುಲವನ್ನು ಸಂಹರಿಸಿ ಧರ್ಮ ಸಂಸ್ಥಾಪನೆಗೈದನು.
ತಾನು ಜಯಿಸಿದ ಭೂಮಿಯಲ್ಲಿಯೇ ಕ್ಷತ್ರಿಯ ಸಂಹಾರದ ಪಾಪ ಪರಿಹಾರಕ್ಕಾಗಿ ಅಶ್ವಮೇಧ ಯಾಗವನ್ನು ಮಾಡಿದನು. ಯಾಗ ಮುಗಿದ ಬಳಿಕ ಕಶ್ಯಪ ಮಹರ್ಷಿಗೆ ಆ ಭೂಮಿಯನ್ನು ದಾನವಿತ್ತು ಪರಶುರಾಮನು ತಪಸ್ಸಿಗೆ ತೆರಳುತ್ತಾನೆ. ಕಶ್ಯಪ ಮಹರ್ಷಿಗಳು ಭೂಮಿಯನ್ನು ಪ್ರತಿಗ್ರಹ ಮಾಡಿದ್ದರಿಂದ ಈ ಭೂಮಿಗೆ ಕಶ್ಯಪೀ ಎಂದು ನಾಮಕರಣವಾಯಿತು. ಪರಶುರಾಮನಿಗೆ ತಪಸ್ಸು ಮಾಡಲು ತನ್ನದೇ ಭೂಮಿ ಬೇಕೆಂಬ ದೃಷ್ಠಿಯಿಂದ ಸಮುದ್ರದ ಮುಂದೆ ಬಂದು ಪರಶುವನ್ನು ಎತ್ತಿದನು. ಪಾತಾಳ ಲೋಕದ ರಾಜನಾದ ಅನಂತನು ಸಮುದ್ರ ರಾಜನೊಂದಿಗೆ ಶರಣಾಗಿ “ನಿಮ್ಮ ಕೊಡಲಿ ಬೀಳುವ ಪ್ರದೇಶದವರೆಗಿನ ಜಾಗವನ್ನು ನಿಮಗೆ ಒಪ್ಪಿಸುತ್ತೇನೆ” ಎಂದು ಹೇಳಿದಾಗ ಪರಶುರಾಮನು ಕೊಡಲಿ ಬೀಸಿದನು. ಆಗ ಅಲ್ಲಿವರೆಗೆ ಸಮುದ್ರವು ಹಿಂದೆ ಸರಿಯಿತು. ನಾನು ಇಲ್ಲಿ ಒಂದು ದೇಶವನ್ನು ಸ್ಥಾಪಿಸುತ್ತೇನೆ. ಹಾಗೂ ಇಲ್ಲಿ ಧರ್ಮ ಸಂಸ್ಥಾಪನೆ ಮಾಡುತ್ತೇನೆ. ಇಲ್ಲಿ ಎಲ್ಲ ದೇವರ ದೇವಾಲಯಗಳನ್ನು ನಿರ್ಮಿಸುತ್ತೇನೆ ಎಂದು ಅನೇಕ ದೇವರಿಗೆ ವರವನ್ನು ಅನುಗ್ರಹಿಸುತ್ತಾನೆ. ಹಾಗಾಗಿ ಇಲ್ಲಿ ಅನೇಕ ಕಡೆಗಳಲ್ಲಿ ನಾಗಾರಾಧನೆಯು ನಡೆಯುತ್ತದೆ. ಅಷ್ಟೇ ಅಲ್ಲದೆ ಎಲ್ಲಾ ದೇವರ ದೇವಾಲಯಗಳು ಇವೆ.
ಸ್ಕಂದ ಪುರಾಣದ ಉಲ್ಲೇಖದಲ್ಲಿ ನಾಗಮಂಡಲ
ಹಿಂದೆ ಮಹಾಭಾರತ ಕಾಲದಲ್ಲಿ ಪರೀಕ್ಷಿತನ ಮಗನಾದ “ಜನಮೇಜಯ” ಉತ್ತಂಕನೆಂಬುವನಿಂದ ಪ್ರೇರಿತನಾಗಿ ತನ್ನ ತಂದೆಯ ಮರಣದ ಹಗೆಯನ್ನು ಸಾಧಿಸುವುದಕ್ಕಾಗಿ ಸರ್ಪಕುಲವನ್ನೇ ನಾಶಪಡಿಸುವಂತಹ “ಸರ್ಪಯಾಗ”ವನ್ನು ಮಾಡುತ್ತಾನೆ. ಇದಕ್ಕೆ ಕದ್ರುವಿನ ಶಾಪವೂ ಪೂರಕವಾಗಿರುತ್ತದೆ. ಹೀಗಾಗಿ ಸರ್ಪಯಾಗದಲ್ಲಿ ಅನೇಕಾನೇಕ ಸರ್ಪಗಳು ಅಗ್ನಿದೇವನಿಗೆ ಅರ್ಪಿತವಾದುವು. ಕೊನೆಗೆ ತಕ್ಷಕನೆಂಬ ಸರ್ಪವು ಇಂದ್ರನ ಆಶ್ರಯದಲ್ಲಿ ಇರುತ್ತಾನೆ. ಇದನ್ನು ಗಮನಿಸಿದ ಹೋತೃಗಳು, ಇಂದ್ರನ ಸಮೇತ ತಕ್ಷಕನನ್ನು ಆಹ್ವಾನಿಸುತ್ತಾರೆ. ಇನ್ನೇನು ಇಂದ್ರನೊಂದಿಗೆ ತಕ್ಷಕ ಅಗ್ನಿಗೆ ಬೀಳುವುದರಲ್ಲಿದ್ದಾಗ ಜರಾತ್ಕಾರುವಿನ ಮಗನಾದ ಅಸ್ತಿಕನೆಂಬ ಜ್ಞಾನಿಯು ಯಾಗವನ್ನು ನಿಲ್ಲಿಸುತ್ತಾನೆ.
ಇದರಿಂದ ಅಲ್ಪ- ಸ್ವಲ್ಪ ನಾಗಗಳು ಬದುಕಿದವು. ಕ್ರಮೇಣ ಮಹಾಭಾರತದ ದ್ವಾಪರಯುಗವು ಮುಗಿಯಿತು. ಕಲಿಯುಗದಲ್ಲಿ ಮಾನವರು ನಾಗಗಳ ವಂಶವನ್ನು ನಾಶಪಡಿಸತೊಡಗಿದರು. ನಾಗರೂಪದ ಸ್ಕಂದನು ನಾಗಗಳ ವಂಶವನ್ನು ಉದ್ಧಾರ ಮಾಡುವುದಕ್ಕೋಸ್ಕರ ಮನುಷ್ಯರನ್ನು ಕಚ್ಚತೊಡಗಿದನು. ಮನುಷ್ಯರಿಗೆ ನಾಗಗಳ ಭಯ ಹುಟ್ಟಿತು. ಇದಕ್ಕೆ ಪರಿಹಾರವೆಂಬಂತೆ ನಾಗಗಳ ಆರಾಧನೆ ಪ್ರಾರಂಭವಾಯಿತು . ಈ ರೀತಿಯಾಗಿ ಆರಂಭವಾದ ನಾಗನ ಸ್ತುತಿಗೆ “ನಾಗಮಂಡಲ”ವೆಂದು ಹೆಸರಾಯಿತು. ಈ ಮಂಡಲವನ್ನು ಶ್ರದ್ಧೆಯಿಂದ ಮಾಡಿದವರಿಗೆ ನಾಗ ಕೃಪೆ ಹಾಗೂ ಸುಬ್ರಹ್ಮಣ್ಯನ ಅನುಗ್ರಹ ಸದಾ ಇರುತ್ತದೆ ಎಂದು ನಂಬಲಾಯಿತು. ಆ ಕಾರಣದಿಂದ ಕರಾವಳಿಯ ಭಾಗದಲ್ಲಿ ನಾಗಮಂಡಲದ ಆಚರಣೆಯನ್ನು ಬಹಳ ವಿಜೃಂಭಣೆಯಿಂದ ಮಾಡುತ್ತಾರೆ.
ತುಳುನಾಡಿನ ಜನಪದ
ಕರಾವಳಿ ಕರ್ನಾಟಕದ ಉಡುಪಿ-ಮಂಗಳೂರು ಭಾಗಗಳನ್ನು ತುಳುನಾಡು ಎಂದು ಗುರುತಿಸಿ. ಪಶ್ಚಿಮದಲ್ಲಿ ಅರಬ್ಬಿ ಸಮುದ್ರ ಮತ್ತು ಪೂರ್ವದಲ್ಲಿ ಸಹ್ಯಾದ್ರಿ ಪರ್ವತಗಳ ಆವೃತಗೊಂಡ ಭೌಗೋಳಿಕ ರೇಖೆಗಳನ್ನು ತುಳುನಾಡಿನ ಗಡಿಗಳೆಂದು ಭಾವಿಸಲಾಗಿದೆ. ಇಲ್ಲಿನ ಜಾನಪದ ಪರಂಪರೆಯು ತುಂಬಾ ವಿಶಿಷ್ಟವಾಗಿದ್ದು ಅತ್ಯಂತ ಶ್ರೀಮಂತವಾಗಿದೆ. ‘ಇಲ್ಲಿ ನಾಗಬ್ರಹ್ಮಸ್ಥಾನ, ದೈವದ ಮನೆ, ಸಾನ, ಅಲಗಡೆ, ಗರಡಿ, ಅಗೆಲ್, ಕೋಲ, ಢಕ್ಕಲಗೇರಿ, ಬ್ರಹ್ಮ ಕಲಶ, ನಾಗಮಂಡಲ ಮೊದಲಾದವು ಈ ಜಾನಪದ ಪರಂಪರೆಯ ಕೊಡುಗೆಗಳು. ಇದರ ಉಗಮ ಮತ್ತು ಬೆಳವಣಿಗೆಯು ಲಕ್ಷಾಂತರ ವರ್ಷಗಳು ಎಂದು ಸ್ಥಳೀಯರು ಹೇಳುತ್ತಾರೆ. ಇಲ್ಲಿನ ಜನಪದರ ಜೀವನಶೈಲಿ ಮತ್ತು ಸಂಸ್ಕೃತಿಯನ್ನು ಎಂದೂ ನಾವು ಬೇರೆ ಮಾಡಿ ನೋಡಲು ಸಾಧ್ಯವೇ ಇಲ್ಲ. ನಾಗರೀಕತೆಯು ಯಾವಾಗಲೂ ನಿರಂತರವಾಗಿ ಸಂಸ್ಕೃತಿಯೊಂದಿಗೆ ಬೆಳೆಯುತ್ತದೆ ಹಾಗಾಗಿ ತುಳುನಾಡಿನ ಜನಪದವೂ ಕೂಡ ಇಲ್ಲಿನ ಜನಜೀವನ ಮತ್ತು ನಾಗರೀಕತೆಯೊಂದಿಗೆ ಬೆಸೆದುಕೊಂಡಿದೆ. ಇಲ್ಲಿನ ಕಲೆಯೂ ಹಾಗೆ ಈ ಜನರ ಬದುಕಿನೊಂದಿಗೆ ತಾಳೆ ಹಾಕಿಕೊಂಡು ಬೆಸೆದುಕೊಂಡಿದೆ. ತುಳುವರ ದೈನಂದಿನ ಜೀವನ, ನಡೆನುಡಿ, ಆಚರಣೆ, ಆರಾಧನೆ, ಸಂಪ್ರದಾಯ, ಪಧ್ಧತಿ, ಕಟ್ಟುಪಾಡುಗಳು, ಆಚಾರವಿಚಾರ, ಉಡುಗೆತೊಡುಗೆ ಎಲ್ಲಕ್ಕೂ ವಿಶೇಷವಾದ ಸ್ಥಾನಮಾನಗಳಿಲ್ಲದಿದ್ದರೂ ಕಲೆಯು ತನ್ನಪಾಡಿಗೆ ತಾನು ಅವರ ಜೀವನಗಳನ್ನು ಆವರಿಸಿ ಬದುಕುಗಳನ್ನು ಸುಂದರವಾಗಿಸಿದೆ. ಅವರ ಆಚಾರ ವಿಚಾರಗಳು ಊರ್ಜಿತಗೊಂಡಷ್ಟೂ ಕಲೆಯು ಅದರ ಶೈಲಿ, ಲಕ್ಷಣಗಳು, ಪ್ರಾದೇಶಿಕತೆಗಳಲ್ಲಿ ಪ್ರತ್ಯೇಕತೆಯನ್ನು ಗುರುತಿಸಿಕೊಂಡಿದೆ’.
ನಾಗಮಂಡಲದಲ್ಲಿ ವೈದ್ಯ ಅರ್ಧನಾರಿಯ ವೇಷವನ್ನು ತೊಡುವ ಹಿನ್ನೆಲೆ
ಈ ಸ್ತ್ರೀವೇಷವು ಕೆಂಪು ಬಣ್ಣದ ಚೌಕುಳಿ ಸೀರೆ, ಕಾಲಿಗೆ ಪಾಡಗದ ಗೆಜ್ಜೆ, ಎದೆಗೆ ತೋಳಿಲ್ಲದ ರವಿಕೆ, ಕೊರಳಿಗೆ ಗುಂಡುಸರ, ಸೊಂಟಕ್ಕೆ ಬೆಳ್ಳಿಪಟ್ಟಿ, ಕೈಗೆ ಚಿನ್ನದ ಕಡಗ, ತಲೆಗೆ ಮುಂಡಾಸು ಅದರ ಸುತ್ತ ಜರಿರುಮಾಲು ಅದರ ತುದಿಗೆ ಕೋರೆ ಬಂಗಾರ ಇದಿಷ್ಟು ಅರ್ಧನಾರಿಯ ವೇಷಭೂಷಣ. ನಾಗಯಕ್ಷನನ್ನು ತನ್ನಲ್ಲಿ ಅವಾಹಿಸಿಕೊಳ್ಳುವ ಪಾತ್ರಿಗೆ ವಿಶೇಷ ವೇಷಭೂಷಣಗಳಿಲ್ಲ. ಮುಂಗೈಗೆ ಕಡಗ, ಮೈಗೆ ಕೆಂಪುಬಟ್ಟೆ, ಕೆದರಿದ ತಲೆಕೂದಲು ಕುಣಿತಕ್ಕೆ ಭಯಾನಕತೆಯನ್ನೂ ರೌದ್ರತೆಯನ್ನೂ ತುಂಬಿಕೊಡುತ್ತದೆ. ತೆಕ್ಕೆ ತುಂಬ ಒತ್ತಿಕೊಂಡಿರುವ ಹಿಂಗಾರದ ಹೂಗಳನ್ನು ಮುಖಕ್ಕೆ ಆಗಿಂದಾಗ್ಗೆ ತುರುಬಿಕೊಳ್ಳುತ್ತಾರೆ ಹೀಗೆ ಅದರ ಕಾಳುಗಳು ಮುಖದಲ್ಲಿ ಒತ್ತೊತ್ತಾಗಿ ಅಂಟಿಕೊಂಡು ಪಾತ್ರಿಯ ಮೊಗವು ನಾಗನ ರೂಪದಂತೆ ತೋರುತ್ತದೆ. ನಾಗಪಾತ್ರಿ ರಂಗೋಲಿಯ ನಾಗನನ್ನು ಪ್ರತಿನಿಧಿಸಿದರೆ, ಅರ್ಧನಾರಿವೇಷ ತೊಟ್ಟ ವೈಧ್ಯ ರಂಗೋಲಿಯು ಗಣಪತಿಯನ್ನು, ಶ್ರೀ ಚಕ್ರವನ್ನೂ ಪ್ರತಿನಿಧಿಸುತ್ತಾರೆ. ನಾಗಮಂಡಲಗಳು ಫಲವಂತಿಕೆಯ ಕ್ರಿಯೆಯಾಗಿದ್ದ, ಮೂಲತಃ ಸ್ತ್ರೀಯೇ ಎಲ್ಲಾ ಆರಾಧನಾ ವಿಧಿಗಳಲ್ಲಿ ಪಾಲ್ಗೊಳ್ಳುತ್ತಾಳೆ. ಪಿತೃ ಪ್ರಧಾನ ಕುಟುಂಬ ವ್ಯವಸ್ಥೆ ನೆಲೆಗೊಳ್ಳುತ್ತಾ ಮಹಿಳೆಯರ ಕಾರ್ಯ ಪುರುಷರಿಗೆ ವರ್ಗಾವಣೆಗೊಂಡು ಹೋಯಿತು. ಆದರೂ ಅವರು ಪುರುಷರಾಗಿ ಈ ಆರಾಧನೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ಪುರುಷರು ಸ್ತ್ರೀವೇಷ ಧರಿಸಿ ಮಾತ್ರ ಆರಾಧನೆ ವಿಧಿಯಲ್ಲಿ ಪಾಲ್ಗೊಳ್ಳಬಹುದು.
ನಾಗಮಂಡಲ ಚಿತ್ತಾರ ಮಾಡುವ ಕ್ರಮ
‘ನಾಗಮಂಡಲ ವಿಧಿ ಆಚರಣೆಯಲ್ಲಿ ಪವಿತ್ರ ಗಂಟುಗಳು’
೪ ಪವಿತ್ರ ಗಂಟುಗಳಿದ್ದರೆ, ಕಾಲು ಅಂಶ (೧/೪) ಮಂಡಲ,
೮ ಪವಿತ್ರ ಗಂಟುಗಳಿದ್ದರೆ ಅರ್ಧ ಅಂಶ (೧/೨) ಮಂಡಲ,
೧೬ ಪವಿತ್ರ ಗಂಟುಗಳಿದ್ದರೆ ಇದ್ದರೆ ಪೂರ್ಣ ಮಂಡಲ
ವಿಶಾಲವಾದ ಬಯಲಿನ ನಡುವೆ ಎತ್ತರಿಸಿದ ವೇದಿಕೆಯನ್ನು ಸಜ್ಜು ಮಾಡಿ, ರಂಗದ ನಡುವೆ ಕಂಬ ಬಾರದ ಚಪ್ಪರ, ಅದರ ಕೆಳಗೆ ಮೇಲ್ಗಟ್ಟು ಕಟ್ಟಿ ವಸ್ತ್ರದ ಜಾಲರಿ ಇಳಿ ಬಿಡುತ್ತಾರೆ. ಇಳಿಬಿಟ್ಟ ಸಿರಿಯೊಲಿಯ ತೆಂಗಿನ ಮರದ ಎಳೆಗರಿಯಿಂದ ತಾವರೆ ಮೊಗ್ಗು, ಹೂ, ಗಿಳಿ ಮುಂತಾದ ರಚನೆ ಮಾಡಿ ಮೇಲ್ಗಟ್ಟಿನಿಂದ ಇಳಿಬಿಡುತ್ತಾರೆ. ನಾಗಮಂಡಲದ ಸ್ವರೂಪಕ್ಕೆ ಅನುಸಾರ ವೈದ್ಯರು ಬಾಳೆ ದಿಂಡಿನ ಹೊರ ಕವಚವನ್ನು ಅಳತೆಪಟ್ಟಿಯಿಂದ ಮಂಡಲಕ್ಕೆ ಹೊರ ಚೌಕಟ್ಟನ್ನು ನೀಡಿ, ಹಳದಿ ಬಣ್ಣದ ಹುಡಿಯಿಂದ ರೇಖಿಸುತ್ತಾರೆ. ಮೊದಲು ಮಂಡಲದ ಮಧ್ಯಭಾಗದಲ್ಲಿ ಗಣಪತಿ, ನಂತರ ನಾಗಮಂಡಲವನ್ನು ನಡೆಸುವ ವೈದ್ಯರ ಯಜಮಾನ, ಪುರೋಹಿತರ ಸಮಕ್ಷಮದಲ್ಲಿ ಮಂಡಲ ರಚನೆಗೆ ಅಡೆತಡೆ ಬಾರದಂತೆ ಪಾರ್ಥನೆ ಸಲ್ಲಿಸುತ್ತಾರೆ. ಪೂರ್ಣ ಮಂಡಲಕ್ಕೆ ರಂಗೋಲಿ ಬರೆಯಲು ೬ ಮಂದಿಗೆ ಸುಮಾರು ೬ ಗಂಟೆ ಬೇಕಾಗುತ್ತದೆ. ೭ ಹೆಡೆಯ ಸರ್ಪದ ಭೀಮಕಮನೀಯ ಆಕೃತಿಯನ್ನು ಸುರುಳಿ ಸುರುಳಿಯಾಗಿ ಪವಿತ್ರ ಗಂಟುಗಳೊಂದಿಗೆ ಬರೆಯುವ ಮೊದಲು ಜೀವ ಅಥವ ಆಧಾರ ರೇಖೆಯನ್ನು ಎಳೆಯುತ್ತಾರೆ.
ನಾಗವನ್ನು ಒಬ್ಬನೇ ಮೊದಲಿನಿಂದ ಕೊನೆಯವರೆಗೆ ಒಬ್ಬನೇ ಚಿತ್ರಿಸುವ ಪರಿಪಾಠವಿದ್ದು. ಬಣ್ಣಗಳನ್ನು ಈ ಕೆಳಕಂಡಂತೆ ಬಳಸುತ್ತಾರೆ.
ಹಳದಿ ಬಣ್ಣ : ಮಂಡಲ ಸ್ವರೂಪಕ್ಕೆ ಅನುಸಾರ ಪವಿತ್ರ ಗಂಟುಗಳನ್ನು ಹಾಕಿ ಜೀವರೇಖೆಯ ಇಕ್ಕೆಲಗಳಲ್ಲಿ ಹಳದಿ ಬಣ್ಣದ ಹಾವಿನ ನಕ್ಷೆ ಬಿಡಿಸುತ್ತಾರೆ.
ಕೆಂಪು ಬಣ್ಣ : ಹಾವಿನ ಕಣ್ಣಿಗೆ- ಕೆಂಪು ಬಣ್ಣವನ್ನು ಬಳಸುತ್ತಾರೆ.
ಕಪ್ಪು ಬಣ್ಣ : “ಪವಿತ್ರ”ದೊಳಗಿನ ಹೊಗ್ಗೂ ಹೊರಡುವಿಕೆಯನ್ನು ಕಪ್ಪು ಬಣ್ಣದಲ್ಲಿ ಬಿಡಿಸುತ್ತಾರೆ.
ಬಿಳಿ ಬಣ್ಣ : ಹುಡಿಯಿಂದ ಚುಕ್ಕಿ-ಚುಕ್ಕಿ ಆಕಾರದಲ್ಲಿ ನಾಗನಿಗೆ ಕಾಲು, ನಾಗನ ಆಕೃತಿಯ ನಡ ನಡುವೆ ಮರಿಮೊಟ್ಟೆ ಬಿಡಿಸುತ್ತಾರೆ.
ಹಸುರು, ಬಿಳಿ, ಅರಸಿನ, ಕೆಂಪು, ಕಪ್ಪು : ನಾಗನನ್ನು ಚಿತ್ರಿಸುವಾಗ ಮೇಲಿನಿಂದ ಕೆಳಗಿನವರೆಗೆ ಮೊದಲು ಹಸುರು, ಬಿಳಿ, ಅರಸಿನ, ಕೆಂಪು, ಕಪ್ಪು-ಹೀಗೆ ೫ ಬಣ್ಣ ಬಳಸಿ ಹೆಡೆಯ ಹುಬ್ಬನ್ನು ಬಿಡಿಸುತ್ತಾರೆ.
ಹೆಡೆಯ ಕೆಳಭಾಗದಲ್ಲಿ ವಿಷ್ಣು ಪಾದ ರೇಖಿಸುತ್ತಾರೆ. ಇದು ಕೃಷ್ಣ ಕಾಳಿಂಗನ ಹೆಡೆ ಮುಟ್ಟಿದ ಸಂಕೇತವಾಗಿದ್ದು ಹೆಡೆಯ ಮೇಲೆ ಪ್ರಭಾವಳಿ, ಕಪ್ಪು ಬಣ್ಣದಲ್ಲಿ ‘೨’ ಇಂಚು ಅಗಲ ಅದರ ಕೆಳಗೆ ಬ್ರಹ್ಮನ ಮುಖ, ದ್ರಾಕ್ಷಿಬಳ್ಳಿ, ಎಲೆ ಬಿಡಿಸುತ್ತಾರೆ. ಜಂಗಮನ ಸೊಪ್ಪಿನ ಹಸಿರು ಹುಡಿಯಿಂದ ದಂಡೆಕಟ್ಟಿ ಅದರ ಮೇಲೆ ಸ್ವಸ್ತಿಕ, ಚಿತ್ತಾರದ ಪಕ್ಕದಲ್ಲಿ ಸೀಯಾಳ, ಹಿಂಗಾರ, ಅಡಕೆ, ವೀಳ್ಯದೆಲೆ, ಹಣ್ಣಿನ ರಾಶಿ ಇರಿಸುತ್ತಾರೆ.
ನಾಗಮಂಡಲ ಕುಣಿತದ ಕ್ರಮ
ಸುಂದರವಾಗಿ ರೇಖಿಸಿದ ಮಂಡಲದ ಸುತ್ತಲೂ ಪಾತ್ರಿ ಮತ್ತು ವೈದ್ಯರು ಕ್ರಮವಾಗಿ ಪುರುಷ ಮತ್ತು ಪ್ರಕೃತಿಯರು ಕುಣಿಯುತ್ತಾರೆ. ನಾಗಪಾತ್ರಿ ಮೊದಲು ಕುಪಿತನಾಗಿ, ಸುತ್ತಿ ಸುಳಿದು, ಶರೀರವನ್ನು ಸುರುಳಿ ಸುರುಳಿಯಾಗಿ ಗಂಟಿಕ್ಕಿಕೊಂಡು ಹಡೆ ಎತ್ತುತ್ತಾನೆ. ಮುಂದೆ ಪ್ರಕೃತಿಯ ಭಕ್ತಿಗೆ ಮಣಿದು ಒಲಿಯುತ್ತಾನೆ. ಈ ಭಾವನೆ ಕುಣಿತದ ತರಂಗಿತತೆಗೆ ಎಡೆ ಮಾಡಿಕೊಡುತ್ತದೆ. ಹಾಡುವ ಹಾಡು ನಾಗನನ್ನು ಕುರಿತಾಗಿರುತ್ತದೆ. ಕುಣಿತದಲ್ಲಿ ಒಮ್ಮೆ ಕಲಹ ಇನ್ನೊಮ್ಮೆ ಸ್ನೇಹ, ಧೀನತೆ, ಆಕ್ರೋಶ ಹೀಗೆ ಬಗೆ ಬಗೆಯ ಭಾವ ಪ್ರದರ್ಶನ ಕಾಣುತ್ತದೆ. ನಾಗಮಂಡಲದ ವೈದ್ಯರ ಕುಣಿತದಲ್ಲಿ ಅನೇಕ ಮುದ್ರೆಗಳೂ ಬಳಕೆಯಾಗುತ್ತದೆ. ಕೆಲವೊಂದು ಭರತನಾಟ್ಯದಲ್ಲಿರುವಂತದ್ದು, ಇನ್ನೂ ಕೆಲವು ಹೊಸದಾದವು.
ನಾಗಮಂಡಲ ಆರಾಧನಾ ವಿಧಿಗಳು
ಹಂತ ಹಂತವಾಗಿ ವಿಧಿಪೂರ್ವಕವಾಗಿ ಮಾಡಬೇಕಾಗಿದ್ದು ಈ ಕೆಳಗಿನಂತೆ ಇರುತ್ತವೆ.
‘ಪಾತಕ ಹಸ್ತ – ನಾಗದೇವತೆಯನ್ನು ಶಾಂತಗೊಳ್ಳುವಂತೆ ಪ್ರಾರ್ಥಿಸುವ ಸಂದರ್ಭ.
ತ್ರಿಪಾತಕ – ದೇವಾನುದೇವತೆಗಳ ಪ್ರಾರ್ಥನೆಯ ಸಂದರ್ಭ
ಅರ್ಧಚಂದ್ರ – ಪ್ರಾರ್ಥನಾ ಸಂದರ್ಭ
ಸೂಚಕ – ಕ್ರೋಧ ಅಸಹನೆಯ ಅಭಿವ್ಯಕ್ತಿಯ ಸಂದರ್ಭ
ಅನುಪಲ್ಲವಿ, ಪದ್ಮಕೋಶ, ಶಿಖರ, ಸರ್ಪಶೀರ್ಷ – ನಾಗನ ಸೂಚಕ, ಮೃಗಶೀರ್ಷ, ಸಿಂಹಮುಖ, ಕಪಿತ್ಥ, ಅಂಗುಲ, ಅಭಯ, ಕರ್ತರಿ ಮುಖ, ಸುಖ ತುಂಡ.
ಇನ್ನು ಅವರು ಬಳಸುವ ಬಣ್ಣಗಳು ಸಾಂಕೇತಿಕ ಅರ್ಥಗಳನ್ನು ಹೊಂದಿದ್ದು ಈ ಕೆಳಕಂಡಂತೆ ಬಿಂಬಿತವಾಗಿವೆ.
ಹಳದಿ ಬಣ್ಣ – ಅರಸಿನ ಬೇರಿನ ಹುಡಿ,
ಕೆಂಪು ಬಣ್ಣ – ಅರಸಿನ+ಸುಣ್ಣದ ಹುಡಿ,
ಕಪ್ಪು ಹುಡಿ – ಭತ್ತದ ಹುಟ್ಟನ್ನು ಸುಟ್ಟ ಕರಿ ಹುಡಿ,
ಹಸಿರು ಬಣ್ಣ – ಜಂಗಮನ ಎಲೆಯ ಹುಡಿ,
ಬಿಳಿ ಬಣ್ಣ – ಬೆಳ್ತಿಗೆ ಅಕ್ಕಿಯ ಹುಡಿಗಳನ್ನು ನೈಸರ್ಗಿಕವಾಗಿ ಪಡೆದು ಚಿತ್ರಗಳಿಗೆ ಬಳಸುತ್ತಾರೆ’ .
ಈ ಬಣ್ಣಗಳು ಯಾವುದೇ ರಾಸಾಯನಿಕ ಮಿಶ್ರಣದ ಬಣ್ಣಗಳಾಗಿರದೆ ಕೇವಲ ಹರಿತಾ ಮತ್ತು ನೈಸರ್ಗಿಕ ಬಣ್ಣಗಳ ಮಿಶ್ರಣವಾಗಿರುತ್ತದೆ. ಆದ್ದರಿಂದಲೇ ಈ ಬಣ್ಣಗಳಿಂದ ಚರ್ಮದ ಅಲರ್ಜಿ ಮತ್ತಿತರ ಆರೋಗ್ಯದ ತೊಂದರೆಗಳು ಸಂಭವಿಸುವುದಿಲ್ಲ. ಇಂಥ ಬಣ್ಣಗಳನ್ನು ತಯಾರಿಸಿ ಸಿದ್ಧಪಡಿಸಿಕೊಳ್ಳಲು ಸುದೀರ್ಘವಾದ ಸಮಯಾವಕಾಶ ಮತ್ತು ನಿರಂತರ ಶ್ರಮ ಬೇಕಾಗುತ್ತದೆ. ಹೀಗೆ ಸಿದ್ಧವಾದ ಬಣ್ಣಗಳನ್ನು ತಂಡಿ ಮತ್ತು ನೀರಿನಿಂದ ತೇವವಾಗಿ ಗಂಟು ಆಗದಂತೆ ಒಣ ವಾತಾವಾರಣದಲ್ಲಿ ಪ್ಲಾಸ್ಟಿಕ್ ಅಥವ ಇತರೆ ವಸ್ತುಗಳಿಂದ ಗಾಳಿ ಹೋಗದಂತೆ ಗಟ್ಟಿಯಾಗಿ ಮುಚ್ಚಿ ಕಾಪಾಡಿಕೊಳ್ಳುತ್ತಾರೆ.
ನಾಗಮಂಡಲ ಆರಾಧನಾ ವಿಧಿಗಳು ಅಲ್ಲಿನ ಕಲೆಯ ಅಂಶವನ್ನು ಖಚಿತವಾಗಿ ಗುರುತಿಸಬಹುದು. ಧಾರ್ಮಿಕ ಅಂಶಗಳು ಪ್ರಧಾನವಾಗಿದ್ದರೂ ಒಬ್ಬ ಕಲಾ ವಿಮರ್ಶಕ ಅದರೊಳಗಿನ ಕಲೆಯ ಹಲವು ಅಂಶಗಳನ್ನು ಗುರುತಿಸುತ್ತಾನೆ. ನಾಗಮಂಡಲದ ರಂಗ ಪರಿಕರ, ಮಂಡಲಚಿತ್ತಾರ, ಕುಣಿತ, ಗೀತೆ, ಪ್ರಕೃತಿಯ ಗೂಢತೆ, ಅದೃಶ್ಯದ ಶಕ್ತಿಯ ಕುರಿತು ಭಯ ಒಳಿಸಿಕೊಂಡು ಸಂತೃಪ್ತಿಗೊಳಿಸುವುದು, ಮಂಡಲದ ಬಣ್ಣಗಳ ಹದವಾದ ಮೈತ್ರಿ, ಅರ್ಧನಾರಿ ವೇಷಧಾರಿಯ ವೇಷಭೂಷಣ, ಉಪಯೋಗಿಸುವಂತಹ ವಾದ್ಯಗಳು, ಶ್ರಾವ್ಯಾತ್ಮಕ ವಾತಾವರಣ, ಬಾಗು ಬಳುಕು, ತರಂಗಿತತೆ ಹಾಡುವ ವೈದ್ಯನ ಸಾಹಿತ್ಯ ನಿರ್ಮಿಸುವ ರಾಗ ಸಂಚಾರ ಇವೆಲ್ಲವೂ ಪ್ರೇಕ್ಷಕ ವರ್ಗದಲ್ಲಿ ಉಂಟಾಗುವ ಆನಂದ, ತೃಪ್ತಿಯ ಜೊತೆಗೆ ಕಲೆಯ ಅಸ್ತಿತ್ವವನ್ನು ಗುರುತಿಸಬಹುದು.
ತುಳುನಾಡಿನಲ್ಲಿ ರಂಗೋಲಿಯನ್ನು ಮಂಡಲಗಳ ರೂಪದಲ್ಲಿ ಕಾಣಬಹುದು. ಮಂಡಲ ಎಂದರೆ ರೇಖೆಗಳ ಪರಿಷ್ಕೃತ ರೂಪ ಆಶ್ಲೇಷ ಬಲಿ, ಸರ್ಪ ಬಲಿ, ವಾಸ್ತು ಬಲಿ, ವಾಸ್ತು ಮಂಡಲ, ತನು ಮಂಡಲ, ದುರ್ಗಾ ಮಂಡಲ, ಶಕ್ತಿ ಮಂಡಲ, ಚಕ್ರಾಬ್ಜ ಮಂಡಲ, ಶಕ್ತಿ ದಂಡಕ ಮಂಡಲ, ನವಗ್ರಹ ಮಂಡಲ, ನಾಗ ಮಂಡಲ ಮೊದಲಾದ ಆಚರಣೆಗಳಲ್ಲಿ ವಿವಿಧ ಮಂಡಲಗಳು ಪ್ರಧಾನವಾಗಿರುತ್ತದೆ. ಈ ಮಂಡಲಗಳ ವಿನ್ಯಾಸ, ಗೆರೆ ಮತ್ತು ಬಣ್ಣಗಳಲ್ಲಿ ಒಂದರಿಂದ ಒಂದು ವಿಭಿನ್ನವಾಗಿರುತ್ತದೆ. ಆಕೃತಿಗಳನ್ನು ಬೇರ್ಪಡಿಸಲು ಬಿಳಿ ಮತ್ತು ಕಪ್ಪು ಗೆರೆಗಳನ್ನು ಬಳಸುತ್ತಾರೆ ಅಂಥಾ ಗೆರೆಗಳನ್ನು “ಜೀವಗೆರೆ” ಎನ್ನುತ್ತಾರೆ. ಹೀಗೆ ಆ ಗೆರೆಗಳನ್ನು ಮೂಡಿಸಲು ವಿಶೇಷವಾದ ಪರಿಣಿತಿ ಬೇಕಾಗುತ್ತದೆ. ಇವರನ್ನು ಪ್ರಧಾನ ವ್ಯಕ್ತಿಎಂದು ಗುರುತಿಸಿ ಅವರಿಗೆ ವಿಶೇಷಗೌರವವನ್ನು ನೀಡುತ್ತಾರೆ ಇದು ಜಾನಪದ ಆಚರಣೆಯಲ್ಲಿ ಅಘೋಷಿತ ಕಲಾವಿದನಿಗೆ ದೊರೆಯಬಹುದಾದ ಪುರಸ್ಕಾರವಾಗಿದೆ. ಒಮ್ಮೆ ಜೀವಗೆರೆಗಳನ್ನು ಮೈದುಂಬಿತೆಂದರೆ ಆ ಮಂಡಲವು ಸಂಪೂರ್ಣವಾಯಿತೆಂದೇ ಅರ್ಥ. ಹೀಗೆ ಸಿಧ್ಧವಾದ ಮಂಡಲವು ಜನರಲ್ಲಿ ಭಕ್ತಿಭಾವ ತಳೆದು ಪೂಜನೀಯವಾಗುತ್ತದೆ. ಇಲ್ಲಿಂದ ಮುಂದಿನ ಧಾರ್ಮಿಕ ವಿಧಿ ವಿಧಾನಗಳು ಆರಂಭವಾಗುತ್ತವೆ.
ನಾಗಮಂಡಲ ಸಂಪ್ರದಾಯದಲ್ಲಿ ಮಂಡಲ ಹಾಕುವವುದನ್ನೇ ಕಸುಬನ್ನಾಗಿ ಮಾಡಿಕೊಂಡ ‘ವೈದ್ಯ’ ಎಂಬ ಸಮುದಾಯವಿದೆ. ತುಳುನಾಡಿನಂತೆಯೇ ಕೇರಳದಲ್ಲೂ ಈ ಮಂಡಲಗಳನ್ನು ಹಾಕುವ ಜನಾಂಗದವರಿದ್ದಾರೆ. ಅವರನ್ನು “ಪುಲ್ಲವ”ರೆಂದು ಕರೆಯುತ್ತಾರೆ. ನಾಗಮಂಡಲವನ್ನು ರಚಿಸುವ ಮುನ್ನ ಅದನ್ನು ಮಾಡಿಸುವ ನಾಯಕರು ಊರಿನ ಜನರ ಮುಂದೆ ಅನುಮತಿಯನ್ನು ಪಡೆಯುತ್ತಾರೆ. ನಂತರ ಮಂಡಲ ರಚಿಸುವ ಕಾರ್ಯವನ್ನು ವೈದ್ಯರಿಗೆ ನೀಡುತ್ತಾರೆ. ಹೀಗೆ ಮಂಡಲ ರಚಿಸುವ ಜವಾಬ್ದಾರಿಯನ್ನು ಪಡೆದ ವೈದ್ಯರು ದೇವತಾ ಪ್ರಾರ್ಥನೆಯನ್ನು ಮಾಡಿ ‘ಶ್ರೀ’ ಎಂದು ಬರೆದು ‘ಗುರು ಗಣಪತಿ’ ಮಂಡಲವನ್ನು ರಚಿಸುತ್ತಾರೆ. ಅಲ್ಲಿಂದ ನಾಗಮಂಡಲದ ರಚನಾ ಕಾರ್ಯ ನಡೆಯುತ್ತದೆ. ಮೊದಲಿಗೆ ಹಳದಿ ಬಣ್ಣವನ್ನು ತುಂಬಿ ಅದರ ಸೌಂದರ್ಯವನ್ನು ಹೆಚ್ಚಿಸಲು ಕೆಂಪು ಮತ್ತು ಕಪ್ಪು ರೇಖೆಗಳನ್ನು ರಚಿಸುತ್ತಾರೆ. ಕೊನೆಗೆ ಬಿಳಿ ಜೀವಗೆರೆಗಳನ್ನು ಹಾಕಿ ಮಂಡಲವನ್ನು ಮುಕ್ತಾಯ ಮಾಡುತ್ತಾರೆ. ಇಲ್ಲಿ ಕಾಣುವ ಕಪ್ಪು, ಬಿಳಿ ಮತ್ತು ಕೆಂಪು ಬಣ್ಣಗಳು ತುಂಬಾ ವಿಶೇಷವಾಗಿ ಕಾಣುತ್ತವೆ.
ಮಂಡಲ ಪೂರ್ಣಗೊಂಡ ಬಳಿಕ ಹೂವುಗಳಿಂದ ಅಲಂಕರಿಸಿ ಪೂಜೆ ಮಾಡುತ್ತಾರೆ. ಎಲ್ಲ ಕಾರ್ಯಗಳೂ ಸಮಾಪ್ತಿಯಾದ ಬಳಿಕ ಜೀವರೇಖೆಯನ್ನು ಅಳಿಸುತ್ತಾರೆ ಹೀಗೆ ಜೀವರೇಖೆಯನ್ನು ಅಳಿಸುವ ಒಂದು ಪೂಜಾವಿಧಿಯೇ ಇದೆ. ತನುಮಂಡಲದಲ್ಲಿಯೂ ರಚಿಸಲಾದ ಸರ್ಪಗಳ ಸುಂದರವಾದ ರೇಖಾ ಚಿತ್ರಗಳನ್ನು ಹಾಲನ್ನು ವಿಶಿಷ್ಟವಾಗಿ ಅವುಗಳ ಮೇಲೆ ಚೆಲ್ಲುವ ಮೂಲಕ ಮಂಡಲವಿಸರ್ಜನೆಯನ್ನು ಮಾಡುತ್ತಾರೆ. ಇದೇ ರೀತಿಯ ಪೂಜಾವಿಧಾನವನ್ನು ನವಗ್ರಹಗಳ ಮಂಡಲದಲ್ಲೂ ಕಾಣಬಹುದು. ರೇಖೆಗಳಲ್ಲಿ ದೈವತ್ವವನ್ನು ಕಾಣುವ ಇಂಥಾ ಪೂಜ್ಯಭಾವನೆ ಇನ್ನೆಲ್ಲೂ ಸಿಗಲಿಕ್ಕೆ ಇಲ್ಲ. ತುಳುನಾಡಿನಲ್ಲಿ ಗೋಡೆಗಳ ಮೇಲೆ ರೇಖಾ ಚಿತ್ರಗಳು ತೀರಾ ಕಡಿಮೆ. ಆದಾಗ್ಯೂ ಪೂಜಾ ವಿಧಾನಗಳ ಆಚರಣೆಗಳಲ್ಲಿ ಮಂಡಲ ಪ್ರಕಾರದ ರೇಖಾಚಿತ್ರಗಳು ಮಹತ್ವ ಸ್ಥಾನವನ್ನು ಪಡೆದುಕೊಂಡಿವೆ.
ಲಕ್ಷ್ಮೀನಾರಾಯಣ ಟಿ
3 Comments
Very good information Sir
ನಾಗಮಂಡಲ ನಾಗಪೂಜೆ ಬಗ್ಗೆ ಕೇಳಿದ್ದೆ . ಈ ಅಂಕಣದಲ್ಲಿ ಪೂರ್ತಿ ಹಿನ್ನೆಲೆ ಓದಿದ ನಂತರ ನನಗೆ ನೈಜ ದರ್ಶನವಾಯಿತು.
Thank you Sir