ನಾಪಲ್ಮ್ ಹುಡುಗಿ – ಕಿಮ್ ಪುಕ್ (ಯುದ್ಧ ಸಂತ್ರಸ್ತೆ)

ಕಿಮ್ ಪುಕ್ ಎಂಬ ನೇಪಲ್ಮ್ ಹುಡುಗಿ

ಸಾವಿರದ ಒಂಬೈನೂರ ಎಪತ್ತರೆಡು (1972) ದಕ್ಷಿಣ ವಿಯೆಟ್ನಾಂ ಹಾಗೂ ಉತ್ತರ ವಿಯೆಟ್ನಾಂ ಮದ್ಯೆ ಯುದ್ಧ ಹತ್ತಿ ಉರಿಯುತ್ತಿದ್ದ ಕಾಲ. ಕಮ್ಯುನಿಸ್ಟ್ ಒಕ್ಕೊಟದ ಜೊತೆ ಸೇರಿ ಉತ್ತರ ವಿಯೆಟ್ನಾಂ ದಕ್ಷಿಣ ವಿಯೆಟ್ನಾಂ ಮೇಲೆ ಮುಗಿಬಿದ್ದಿತ್ತು.  ಉತ್ತರ ವಿಯೆಟ್ನಾಂ ವಿಯೆಟ್-ಕಾಂಗ್ ಎಂಬ ಕಮ್ಯುನಿಸ್ಟ್ ಪಡೆಗಳ ಜೊತೆ ಸೇರಿ ದಕ್ಷಿಣ ವಿಯೆಟ್ನಾಂ ವಶಪಡಿಸಿಕೊಂಡು ಕಮ್ಯುನಿಸ್ಟ್ ರಾಷ್ಟ್ರಗಳ ಆಡಳಿತವನ್ನು ಹೇರುವುದೇ ಗುರಿಯಾಗಿತ್ತು. ಆಗ ಅಮೇರಿಕಾ, ದಕ್ಷಿಣ ವಿಯೆಟ್ನಾಂಗೆ ಬಹಿರಂಗವಾಗಿ ಬೆಂಬಲ ಸೂಚಿಸಿ ತನ್ನ ಅರೆ ಸೇನಾ ಪಡೆಗಳನ್ನು ಕಳುಹಿಸಿತ್ತು.

ಜೂನ್ ಮಾಸದ ಒಂದು ದಿನ ದಕ್ಷಿಣ ಪಡೆಯನ್ನು ಮುನ್ನೆಡೆಸುತ್ತಿದ ಅಮೇರಿಕಾ ಸೈನ್ಯದ ಅಧಿಕಾರಿಗಳಿಗೆ ಉತ್ತರ ಪಡೆಗಳ ಶತ್ರುಗಳು “ಟ್ರಾಂಗ್ ಬ್ಯಾಂಗ್” ಎಂಬ ನಿಷೇಧಿತ  ಹಳ್ಳಿಯಲ್ಲಿ ಅವಿತುಕೊಂಡು ಕಾರ್ಯಾಚರಣೆ ಮಾಡುತ್ತಿದ್ದಾರೆಂದು ಬೇಹುಪಡೆಗಳಿಂದ ಮಾಹಿತಿ ಬಂದು ತನ್ನ ಪಡೆಗಳಿಗೆ ಆ ಹಳ್ಳಿಯ ಮೇಲೆ ಬಾಂಬ್ ದಾಳಿಗೆ ಆದೇಶಿಸಿತು. ಆ ಹಳ್ಳಿಯಲ್ಲಿ ಕೆಲವು ಜನ ಒಂದು ದೇವಾಲಯದಲ್ಲಿ ಉಳಿದುಕೊಂಡಿತ್ತು. ದಕ್ಷಿಣ ಪಡೆಗಳ ಬಾಂಬರ್ ವಿಮಾನಗಳು ಹಳ್ಳಿಯ ಮೇಲೆ ಹಾರತೊಡಗಿದ್ದೆ ತಡ ಜನರೆಲ್ಲರೂ ಭಯಭೀತರಾಗಿ ದೇವಾಲಯದಿಂದಾಚೆ ಓಡತೊಡಗಿದರು. ಇವರುಗಳನ್ನು ಉತ್ತರ ಪಡೆಯ ಶತ್ರುಗಳೆಂದು ತಪ್ಪಾಗಿ ಬಾವಿಸಿ ದಕ್ಷಿಣ ಪಡೆಗಳು ತನ್ನ ಜನರ ಮೇಲೆಯೇ ನೇಪಲ್ಮ್ ಎನ್ನುವ ಅಪಾಯಕಾರಿಯಾದ  ಬಾಂಬುಗಳ ಮಳೆಯನ್ನೇ ಸುರಿಸಿದಾಗ “ಕಿಮ್ ಪುಕ್” ಎನ್ನುವ ಒಂಬತ್ತು ವರ್ಷದ ಹುಡುಗಿ ಮೈ ಉರಿ ತಾಳಲಾರದೆ ತನ್ನ ಬಟ್ಟೆಗಳನ್ನೆಲ್ಲ ಬಿಸುಟಿ ಸಂಪೂರ್ಣ ನಗ್ನಳಾಗಿ ಉರಿ ಉರಿ ಎನ್ನುತ್ತಾ ಇತರೆ ಜನರೊಡನೆ ಓಡಿ ಬರತೊಡಗಿದಳು. ಅವರೆಲ್ಲರನ್ನು ದಕ್ಷಿಣ ಸೇನಾ ಪಡೆಗಳು ರಕ್ಷಿಸಿದರೂ ಕೂಡ ಕಿಮ್ ಪುಕ್ ನ ಬೆನ್ನಿಗೆ, ಕಾಲಿಗೆ ಹಾಗೂ ಎದೆಗೆ ನೇಪಲ್ಮ್ ಬಾಂಬಿನ ಅಂಟಿನ ಶಾಖದಿಂದ ಸಂಪೂರ್ಣ ಸುಟ್ಟಿಹೋಗಿತ್ತು. ಆಶ್ಚರ್ಯವೆಂಬಂತೆ ಹಾಗ ತೆಗೆದಿದ್ದ ಈ ಮೇಲಿನ ಚಿತ್ರ ಮುಂದೆ ಅವಳ ಬಾಳನ್ನೇ ರೂಪಿಸಿತು. ಚಿತ್ರದಲ್ಲಿನ ಅನೇಕ ಮಕ್ಕಳ ಜೊತೆ ಪುಟ್ಟ ಕಂದಳಾದ ಕಿಮ್ ಪೂರ್ತಿ ನಗ್ನಳಾಗಿ ಓಡೋಡಿ ಬರುತ್ತಿದ್ದರೆ ಹಿಂದೆ ಬಾಂಬ್ ಸ್ಪೋಟದಿಂದಾದ ಕರಾಳ ಅವಘಡ ನಿಚ್ಚಳವಾಗಿ ಕಂಡು ಯುದ್ಧದ ಕರಾಳತೆಯನ್ನು ಬಿಂಬಿಸಿತು.

ಕ್ರಿಸ್ಟೋಫರ್ ವೈನ್” ಎಂಬ ಯುದ್ಧ ವರದಿಗಾರ ಅವಳ ಮೈ ಮೇಲೆ ಆ ತಕ್ಷಣಕ್ಕೆ ನೀರು ಸುರಿದು ಅವಳನ್ನು ಮಿಲಿಟರಿ ಆಸ್ಪತ್ರೆಗೆ ದಾಖಲಿಸಿದ ಹಾಗೂ ಅವಳ ಜೊತೆ ನಿರಂತರ ಸಂಪರ್ಕವನ್ನಿಟ್ಟುಕೊಂಡು ಮಾನಸಿಕವಾಗಿ ಧೈರ್ಯ ತುಂಬುತ್ತಾ ಅವಳ ಪರವಾಗಿ ಅನೇಕ ಸಂಘ ಸಂಸ್ಥೆಗಳಿಂದ ದೇಣಿಗೆಯನ್ನು ಎತ್ತಿ ಅವಳು ಬದುಕಲು ನೆರವಾದ.

ಮುಂದೆ ಈ ಚಿತ್ರವು ಪ್ರಖ್ಯಾತ ನ್ಯೂಯೋರ್ಕ್ ಟೈಮ್ಸ್ ನಲ್ಲಿ ಪ್ರಕಟವಾಗಿ ಪ್ರಸಿದ್ಧ ಪುಲಿಟ್ಝೆರ್ ಪ್ರಶಸ್ತಿ ದೊರಕಿ ಯುದ್ಧ ಕಾಲದ  ಅಂತಾರಾಷ್ಟ್ರೀಯ ಮಾಧ್ಯಮ ಚಿತ್ರ ಎಂದು ಪುರಸ್ಕೃತವಾಯಿತು ಹಾಗೂ ಕಿಮ್ ನೇಪಲ್ಮ್ ಹುಡುಗಿ ಎಂದೇ ಹೆಸರುವಾಸಿಯಾದಳು.

ಆಸ್ಪತ್ರೆಯಲ್ಲಿ ಹದಿನಾಲ್ಕು ತಿಂಗಳು ಹಾಗೂ ಹದಿನೇಳು ಶಸ್ತ್ರಚಿಕಿತ್ಸೆ ನಂತರ ಕಿಮ್ ಬದುಕುಳಿದಳೆಂದರೆ ನೇಪಲ್ಮ್ ಬಾಂಬಿನ ತೀವ್ರತೆ ಇನ್ನೆಷ್ಟಿದ್ದಿರಬಹುದು. ಸುಟ್ಟ ಗಾಯಗಳಿಂದಾದ ವಿಕಾರತೆಯಿಂದ ಕಿಮ್ ಮಾನಸಿಕವಾಗಿ ನರಳಿದಳು. ಮುಂದೆ ವಿದ್ಯಾಭ್ಯಾಸಕ್ಕಾಗಿ ಔಷದಿ ರಂಗವನ್ನೆ ಆಯ್ದುಕೊಂಡರು ಕೂಡ  ಕಮ್ಯುನಿಸ್ಟ್ ಸರಕಾರದ ದೋರಣೆಯಿಂದ ನುಚ್ಚುನೂರಾಯಿತು. ತಡೆಯಲಸಾದ್ಯವಾದ ಸುಟ್ಟ ಗಾಯಗಳ ನೋವಿನಿಂದ ಕಿಮ್ ಆತ್ಮಹತ್ಯೆಗೆ ಕೂಡ ಯತ್ನಿಸಿದ್ದಳು.

 ಸಂದರ್ಶನಗಳಲ್ಲಿ ಕಿಮ್ ಗೆ ಸುಟ್ಟ ಗಾಯಗಳ ನೋವಿನ ಬಗ್ಗೆ ಪ್ರಶ್ನಿಸಲಾಗಿ ಕಿಮ್ “ ನೋವು ತಡೆಯದಾದಾಗ ತಾನು ಸಂಪೂರ್ಣವಾಗಿ ಬೇರೆ ಚಿಂತನೆಗಳನ್ನು ಮಾಡುತ್ತಾ ಹಾಗೂ ಯಾರೊಂದಿಗಾದರೂ ಮಾತನಾಡುತ್ತ ಕಾಲ ಕಳೆಯುತಿದ್ದಾಗಿ ಹೇಳಿದಳು. ಹಾಗೂ ಇದ್ದಕ್ಕೆ ಕಾರಣವಾದವರ ಬಗ್ಗೆ ಅಭಿಪ್ರಾಯ ಕೇಳಿದಾಗ ತಾನು ವೈರಿಗಳಾದರು ಸರಿ ಅವರ ಬಗ್ಗೆ ದೇವರಲ್ಲಿ ಪ್ರಾರ್ಥನೆ ಮಾಡುವುದಾಗಿ ಹಾಗೂ ಮನುಕುಲವು ಯುದ್ದೋನ್ಮುಕ ಮನಸ್ಥಿತಿಯಿಂದ ಹೊರಬರಬೇಕೆಂದು ಹೇಳುತ್ತಿದ್ದಳು.

ನಿರಂತರ ಯುದ್ಧ ಸಂದರ್ಶನಗಳಿಂದ ವಿದ್ಯಾಭ್ಯಾಸಕ್ಕೆ ತೊಂದರೆಯುಂಟಾಗಿ ಕಿಮ್  ವಿಯೆಟ್ನಾಂನ ಆಗಿನ ಪ್ರಧಾನಿ “ಪಾಮ್ ವ್ಯಾನ್ ಡಾಂಗ್”ನನ್ನು ಕಂಡು ವಿನಂತಿಸಿಕೊಂಡು ಕ್ಯೂಬಾ ದೇಶದಲ್ಲಿ ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಿದಳು.

ಮುಂದೆ 1997 ರಲ್ಲಿ “ಕಿಮ್ ಫುಕ್ ಫೌಂಡೇಶನ್” ಎಂಬ ಸಂಸ್ಥೆಯನ್ನು ತೆರೆದು ವಿಶ್ವಾದ್ಯಂತ ತನ್ನ ತಂಡದೊಂದಿಗೆ ಸಂಚರಿಸಿ ಯುದ್ದದಿಂದ ನರಳುತ್ತಿದ್ದ ಅನೇಕ ಮಕ್ಕಳಿಗೆ ಕಿಮ್ ಔಷದೋಪಚಾರ ಹಾಗೂ ಮಾನಸಿಕ ಬೆಂಬಲತೆಯನ್ನು ನೀಡಿ ಹೊಸದೊಂದು ಬದುಕು ಕೊಟ್ಟಳು.

1994 ರಲ್ಲಿ ಡೆನಿಸ್ ಚೊನ್ಗ್ ಎಂಬ ಲೇಖಕ ಕಿಮ್ ಳ ಜೀವನ ಚರಿತ್ರೆ “ಚಿತ್ರದಲ್ಲಿನ ಹುಡುಗಿ “(The Girl in the picture) ಪ್ರಕಟಿಸಿ ಅದು ಪ್ರಸಿದ್ಧಿಯಾಗಿ ಒಳ್ಳೆಯ ಲಾಭ ಗಳಿಸಿತು. ಅಷ್ಟೂ ಲಾಭವನ್ನು ಪ್ರಕಾಶಕರು “ಕಿಮ್ ಪುಕ್ ಫೌಂಡೇಶನ್” ಗೆ ದೇಣಿಗೆ ನೀಡಿದರು. ಕಿಮ್ ಜೀವನಚರಿತ್ರೆಯಿಂದಾಗಿ ಅವಳು “ಯುನೆಸ್ಕೋ ಸದ್ಬಾವನೆ ರಾಯಬಾರಿ”ಯಾದಳು. ಯುದ್ಧಕಾಲದಲ್ಲಿ ನರಳಿದ ಮಕ್ಕಳಿಗೆ ಅವರ ಬಾಲ್ಯದಲ್ಲಿ ವ್ಯದ್ಯಕೀಯ ಹಾಗೂ ಮಾನಸಿಕವಾಗಿ ಅವಳ ಸಂಸ್ಥೆ ವಿಶ್ವಾದ್ಯಂತ ನೆರವಾದದ್ದರಿಂದ ಮುಂದೆ ಅವಳಿಗೆ ಅನೇಕ ಡಾಕ್ಟರೇಟ್ಗಳು ಹುಡುಕಿ ಬಂದವು.

ವಿಯೆಟ್ನಾಂ ಯೋಧರ ದಿನಾಚರಣೆಯಲ್ಲಿ ಕಿಮ್ ತನ್ನ ಭಾಷಣದಲ್ಲಿ

ನಾನು ಯುದ್ದದಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ನರಳಿ ಬದುಕಿನಲ್ಲಿ ಆಶಾಭಾವನೆಯೇ ಕಳೆದುಕೊಂಡಿದ್ದೆ ಆದರೆ ಭಗವಂತ ನನ್ನ ಮೇಲೆ ಕರುಣೆಯಿಟ್ಟು ಇದರಿಂದ ಹೊರಬರವಂತೆ ಮಾಡಿ ಹೊಸ ಬದುಕಿಗೆ ಅನೇಕ ಜನರ ಮೂಲಕ ನೆರವಾದನನ್ನ ಮೇಲೆ ಬಾಂಬು ಹಾಕಿದ ಯೋಧನಿಗೆ ನಾನು ಹೇಳುವುದು ಇಷ್ಟೇ ನಾವು ಇತಿಹಾಸವನ್ನು ಬದಲಾಯಿಸಲಾರೆವು ಆದರೆ ಒಳ್ಳೆಯ ಉದ್ದೇಶಗಳಿಂದ ಕೂಡಿದ ಕೆಲಸವನ್ನು ಮಾಡಿದರೆ ಮುಂದೆ ಇಂತಹ ಪ್ರಸಂಗಗಳು ದೂರವಾಗುತ್ತವೆ ಹಾಗೂ ಜಗತ್ತು ತನ್ನ ಯುದ್ಧದಾಹಿ ಹಾಗೂ ಸ್ವಾರ್ಥ ಮನಸಿನಿಂದ ಹೊರಬರಬೇಕಾಗಿಯೆಂದು ಹೇಳಲು ಇಚ್ಛಿಸುತ್ತೇನೆ

ಕಿಮ್ ಳ ಮಾನವ ಶಾಂತಿ ಯಿಂದ ಕೂಡಿದ ಸುದೀರ್ಘ ಭಾಷಣಕ್ಕೆ ಅಲ್ಲಿ ಸೇರಿದ್ದ  ಅಷ್ಟೂ ಯೋಧರು ಎರಡು ಸಾರಿ ನಿಂತು ಗೌರವಾರ್ಪಣೆ ಮಾಡಿದರು.

ಕಮ್ಯುನಿಸ್ಟ್ ರಾಷ್ಟ್ರಗಳ ಸಹವಾಸವೇ ಬೇಡ ಎಂದು ತನ್ನ ಪತಿ “ಬುಯಿ ಹೂಯ್ ತೋಯಾನ್” ನೊಂದಿಗೆ ಕೆನಡಿಯನ್ ಪೌರತ್ವ ಪಡೆದು ತನ್ನ ಎರಡು ಮುದ್ದಾದ ಮಕ್ಕಳೊಂದಿಗೆ ಕಿಮ್ ಜೀವನ ಸಾಗಿಸುತ್ತಿದ್ದಾಳೆ.

ಯುದ್ಧದ ಕರಾಳತೆಯಲ್ಲಿ ನರಳಿ ಹೂವಾಗಿ ಅರಳಿ ಅನೇಕ ಮಕ್ಕಳಿಗೆ ದಾರಿದೀಪವಾದ ಕಿಮ್ ಎಂಬ ವ್ಯಕ್ತಿತ್ವವನ್ನು ಈ ವಿಶಾಲ ಜಗತ್ತು ಇನ್ನಷ್ಟು ಗಳಿಸಲಿ ಎಂದು ಸರ್ವಜನರ ಆಶಯ.

ಕು ಶಿ ಚಂದ್ರಶೇಖರ್

ತಾ 01-11-2020

ವಿಷಯ ಮಾಹಿತಿ : ಮೀಡಿಯಂ.ಕಾಂ ಹಾಗೂ ವಿಕೀಪಿಡಿಯ

Related post