ನಾಯಿಯ ಕುಟುಂಬ – DOG FAMILY

ನಾಯಿಯ ಕುಟುಂಬದಲ್ಲಿ ಸಾಕುನಾಯಿ ಕಾಡುನಾಯಿ ತೋಳ ನರಿ ಕಯೋಟಿ ಹಾಗು ಆಸ್ಟ್ರೇಲಿಯಾದ ಡಿಂಗೋನಾಯಿ ಸೇರಿಕೊಂಡಿದೆ , ಇವೆಲ್ಲವು ಮಾಂಸಾಹಾರಿಗಣದ canidae ಕುಟುಂಬಕ್ಕೆ ಸೇರಿವೆ.ಈ ಕುಟುಂಬದ ಪ್ರಾಣಿಗಳು ನ್ಯೂಝಿಲ್ಯಾಂಡ್ ನ್ಯೂಗಿನಿ ಆಸ್ಟ್ರೇಲಿಯ ಮಡಗಾಸ್ಕರ್ ಮೊದಲಾದ ನಡುಗಡ್ಡೆಗಳನ್ನು ಬಿಟ್ಟು ಎಲ್ಲಾ ಕಡೆ ನೆಲೆಸಿವೆ.ಮರುಭೂಮಿ ಆರ್ಕಟಿಕ್ ಟಂಡ್ರಾ ಉಷ್ಣವಲಯದ ಕಾಡು ಈ ಎಲ್ಲ ವೈಪರೀತ್ಯದ ಪರಿಸರಗಳಿಗೆ ಹೊಂದಿಕೊಂಡಿವೆ. ಇವುಗಳಲ್ಲಿ ಅನೇಕ ಜಾತಿ, ಪ್ರಭೇದಗಳಿವೆ, ಭಾರತದಲ್ಲಿ ಎಂಟು ಜಾತಿಗಳಿದ್ದರೆ ಪ್ರಪಂಚದಲ್ಲಿ ಸುಮಾರು 34 ಜಾತಿಗಳಿವೆ.

ಆಕಾರ ಅಳತೆ ಬಣ್ಣದಲ್ಲಿ ಬೇರೆ ಬೇರೆಯಾದರೂ ಇವೆಲ್ಲವೂ ಒಂದೇ ತರದ ಮೈಕಟ್ಟಿನವು, ಬಲವಾದ ಸ್ನಾಯುಗಳಿಂದ ಕೂಡಿದ ಉದ್ದ ಕಾಲುಗಳು ಮೊನಚು ಮುಸುಡಿ ಮೆದುವಾದ ನಾಲಿಗೆ ಪೊದೆ ಬಾಲ, ಎದ್ದು ನಿಲ್ಲವ ದೊಡ್ಡ ಕಿವಿಗಳು ಇವುಗಳ ಲಕ್ಷಣಗಳು. ಮುಂಗಾಲಲ್ಲಿ ನಾಲ್ಕು, ಹಿಂಗಾಲಲ್ಲಿ 5 ಬೆರಳುಗಳಿಗೆ ಬಲವಾದ ಮೊಂಡು ಉಗುರುಗಳಿವೆ, ಉಗುರುಗಳು ಬೆಕ್ಕುಗಳಂತೆ ಒಳ ಸೇರುವುದಿಲ್ಲ, ಇವು ಬೆರಳಿನ ಮೇಲೆ ನಡೆಯುತ್ತವೆ. ದಣಿಯದೆ ಸಾಕಷ್ಟು ದೂರ ಓಡಬಲ್ಲವು, ಈ ಕುಟುಂಬದ ಎಲ್ಲಾ ಪ್ರಾಣಿಗಳು ಈಜ ಬಲ್ಲವು ಆದರೆ ಸುಮ್ಮನೆ ನೀರಿಗೆ ಇಳಿಯುವುದಿಲ್ಲ, ಕಣ್ಣು, ಕಿವಿಗಳಿಗಿಂತ ಮೂಗು ತೀಕ್ಷ್ಣ ,ವಾಸನೆಯಿಂದ ಬೇಟೆಯ ಜಾಡು ಹಿಡಿದು ಕೊನೆಯವರೆಗೂ ಓಡಬಲ್ಲವು.ನಾಯಿಗಳು ವಾಸನೆಯಿಂದ ತಮ್ಮ ಪರಿಚಯದವರನ್ನ ಗುರುತಿಸುತ್ತವೆ. ಪಾದಗಳನ್ನು ಊರಿದಾಗ ಉಗುರಿನ ಗುರುತು ಬೀಳುವುದರಿಂದ ಬೆಕ್ಕಿನ ಹೆಜ್ಜೆಗಳಿಂದ ಬೇರೆಯಾಗಿ ಗುರುತಿಸಬಹುದು. ಮೂತ್ರವನ್ನು ಸಿಂಪಡಿಸಿ ತಮ್ಮ ಪ್ರದೇಶಗಳನ್ನು ಗುರುತಿಸುತ್ತವೆ. ಬೆಕ್ಕಿನ ಜಾತಿಯ ಪ್ರಾಣಿಗಳಂತೆ ಅವಿತು ಕುಳಿತು ಒಮ್ಮೆಲೇ ಬೇಟೆಯ ಮೇಲೆರಗದೆ ದೂರದವರೆಗೂ ಬೆನ್ನಟ್ಟಿ ಹಿಡಿಯುತ್ತವೆ. ಸಾಮಾನ್ಯವಾಗಿ ಗುಹೆ, ಬಿಲ, ಮರದ ದೊಗರು, ಕಲ್ಲುಗಳ ಸಂಧಿಗಳಲ್ಲಿ ವಾಸಿಸುತ್ತವೆ,

ಇವುಗಳಲ್ಲಿ ಕೆಲವು ಮಾಂಸಾಹಾರಿಗಳಾದರೂ ಗೆಡ್ಡೆ ಗೆಣಸು, ಹಣ್ಣು ಕಾಯಿಗಳನ್ನು ತಿನ್ನುತ್ತವೆ, ಮರಿಗಳು ಹುಟ್ಟಿದಾಗ ಕುರುಡಾಗಿದ್ದು ಮುಂದೆ 8-10 ದಿನಗಳಲ್ಲಿ ಕಣ್ಣು ತೆರೆಯುತ್ತವೆ.

ನಾಯಿಯೇ ಮಾನವ ಸಾಕಿದ ಮೊದಲ ಪ್ರಾಣಿ ಕ್ರಿ, ಪೂ, 10000 ವರ್ಷಗಳ ಮೊದಲೇ ಕಾಡಿನಲ್ಲಿದ್ದ ನಾಯಿಯನ್ನು ಹಿಡಿದು ಪಳಗಿಸಿದನೆಂದು ಹೇಳಬಹುದು.ಆಸ್ಟ್ರೇಲಿಯಾದ ಡಿಂಗೋ ನಾಯಿ ಅಲ್ಲಿನ ಸ್ಥಳೀಯ ಪ್ರಾಣಿಯಲ್ಲ ಮನುಷ್ಯ ಮೊದಲು ಅಲ್ಲಿಗೆ ಹೋದಾಗ ಒಯ್ದದ್ದು, ಮಾನವ ಪರಿಚಯಿಸಿದ(introduced) ತಳಿಗಳು ಆಸ್ಟ್ರೇಲಿಯಾದಲ್ಲಿವೆ. ಕತ್ತೆ ಕಿರುಬಗಳು ನೋಡಲು ನಾಯಿಯಂತೆ ಕಂಡರೂ ಅದರ ಅಂಗರಚನೆ ಸಾಕಷ್ಟು ತೆರದಲ್ಲಿ ಬೆಕ್ಕಿನ ಕುಟುಂಬಕ್ಕೂ ಹತ್ತಿರವಾಗಿದೆ, ಹಾಗಾಗಿ ಕತ್ತೆ ಕಿರುಬಗಳನ್ನು Hyaenidae ಎಂಬ ಪ್ರತ್ಯೇಕ ಕುಟುಂಬಕ್ಕೆ ಸೇರಿಸಲಾಗಿದೆ.

ಡಿಂಗೊ ನಾಯಿ

ನಮ್ಮ ರಾಜ್ಯದಲ್ಲಿ ನಾಲ್ಕು ಜಾತಿ ನಾಯಿ ಬಳಗದ ಪ್ರಾಣಿಗಳನ್ನು ನೋಡಬಹುದು .

ತೋಳ(Wolf):ತೋಳಗಳು ನೋಡಲು ಸಾಕು ನಾಯಿ ಕುಟುಂಬಕ್ಕೆ ಹತ್ತಿರ ಎನಿಸುತ್ತವೆ, ಕುರುಚಲು ಕಾಡುಬಯಲು ಸೀಮೆಗಳಲ್ಲಿ ಕಾಣುತ್ತವೆ. ಮೈಸೂರು, ಧಾರವಾಡ, ಮಂಡ್ಯ, ಚಿತ್ರದುರ್ಗ, ರಾಯಚೂರು ಬಳ್ಳಾರಿ ಜಿಲ್ಲೆಗಳಲ್ಲಿ ವಿರಳವಾಗಿ ನೋಡಬಹುದು, ಕೃಷ್ಣಮೃಗ, ಹಂದಿ ಮೊಲ ಜಿಂಕೆ ಚಿಂಕಾರಗಳನ್ನು ಬೇಟೆಯಾಡುವುದರ ಜೊತೆಗೆ ಸಾಕುವ ಕುರಿಗಳನ್ನು ಬಲಿ ಪಡೆಯುತ್ತವೆ, ಗುಂಪಾಗಿ ಬೇಟೆಯಾಡುತ್ತವೆ, ಗಂಡು ಹೆಣ್ಣು ಜೊತೆಯಾಗಿ ಸಂಸಾರ ನಡೆಸಿ ಮರಿಗಳ ಪಾಲನೆಯನ್ನು ಜೊತೆಯಾಗಿ ಮಾಡುತ್ತವೆ. ಸಾಮಾನ್ಯವಾಗಿ ನಿಶಾಚರಿಗಳಾದ ಇವು ಹಗಲಿರುಳು ಬೇಟೆಯಾಡುತ್ತದೆ. ಇವು ಕೆಲವು ಸಲ ಮನಷ್ಯನ ಮೇಲೆರಗಿದ ದಾಖಲೆಗಳಿವೆ.

Indian Wolf

ಗಂಡು ಹೆಣ್ಣುಗಳು ಲೈಂಗಿಕವಾಗಿ ಕೂಡಿ 60-65 ದಿನಗಳಲ್ಲಿ ಹೆಣ್ಣು 2 – 9 ಮರಿಗಳಿಗೆ ಜನ್ಮ ನೀಡುತ್ತದೆ.

ಬಯಲು ಸೀಮೆಗಳಲ್ಲಿ ತೋಳಗಳ ಬಲಿ ಪ್ರಾಣಿಗಳ ಸಂಖ್ಯೆ ಕ್ಷೀಣಿಸಿದ್ದರಿಂದ ತೋಳಗಳು ಅಪರೂಪವಾಗುತ್ತಿವೆ, ಕುರಿಹಿಂಡಿನ ದಾಳಿ ಮಾಡುತ್ತಿರುವುದರಿಂದ ಕುರಿಗಾಯಿಗಳಿಂದಲೂ ಅಪಾಯ ಎದುರಿಸುತ್ತಿವೆ.

ಸೀಳು ನಾಯಿ (Dhole): ಕೆನ್ನಾಯಿ, ವೈಲ್ಡ್ ಡಾಗ್ ಎನ್ನುವ ಇವು ಮಲೆನಾಡಿನ ಕಾಡುಗಳಲ್ಲಿ ಕಾಣಬಹುದು , ಊರು ನಾಯಿ ಗಾತ್ರದ ಇವು ಕೆಂಚು-ಕಂದು ಬಣ್ಣ ಹೊಂದಿವೆ, ಗುಚ್ಚು ಬಾಲದ ತುದಿ ಕಪ್ಪು, ಹೊಟ್ಟೆಯ ಕೆಳಗೆ ಮಾಸಿದ ಬಿಳಿ ಬಣ್ಣ.

ಸೀಳು ನಾಯಿ (Dhole)

ಇವು ಅರಣ್ಯವಾಸಿಗಳು ಹಾಗು ಸಂಘ ಜೀವಿಗಳು ಒಂದು ತಂಡದಲ್ಲಿ 30 – 40 ನಾಯಿಗಳು ಇರಬಹುದು, ಹಗಲಿನಲ್ಲಿ ಗುಂಪಾಗಿ ಬೇಟೆಯಾಡುತ್ತವೆ, ಮೂಗು ತೀಕ್ಷ್ಣವಿರುವುದರಿಂದ ದೂರದವರೆಗೂ ಬೇಟೆಯನ್ನು ಬೆನ್ನತ್ತಿ, ಓಡುವ ಸಮಯದಲ್ಲೇ ಹರಿದು ಹರಿದು ತಿನ್ನುತ್ತವೆ, ಬಲಿ ಪ್ರಾಣಿ ರಕ್ತ ಸ್ರಾವದಿಂದಲೇ ಸುಸ್ತಾಗಿ ನೆಲಕಚ್ಚುತ್ತದೆ, ಕೆಲವು ಸಲ ಬಲಿ ಪ್ರಾಣಿ ನೀರಿಗೆ ಇಳಿದರೂ ಬಿಡುವುದಿಲ್ಲ, ನಾಯಿಯಂತೆ ಬೊಗಳುವುದಿಲ್ಲ, ಮನುಷ್ಯ ಹತ್ತಿರ ಹೋದರೆ ಕೆಲವು ಸಲ ಗುರುಗುಟ್ಟಿ ಹೆದರಿಸುತ್ತವೆ.

ಜಿಂಕೆ, ಕಡವೆ, ಕಾಡು ಹಂದಿ ಕಾಡೆಮ್ಮೆ, ಕಾಟಿಗಳ ಮರಿಗಳನ್ನು ಬೇಟೆಯಾಡುತ್ತವೆ, ಕರಡಿ ಹುಲಿ, ಚಿರತೆಗಳನ್ನು ಬೆನ್ನತ್ತಿ ಹೆದರಿಸಬಲ್ಲವು, ಇವುಗಳಿಗೆ ಕೊಳೆತ ಮಾಂಸ ಆಗುವುದಿಲ್ಲ.

ಗರ್ಭಾವಧಿ ಸುಮಾರು 70 ದಿನಗಳು, 4-6 ಮರಿಗಳನ್ನು ಮುಳ್ಳುಹಂದಿ ಬಿಲ,ಗುಹೆಗಳಲ್ಲಿ ಹಾಕುತ್ತವೆ, ಕೆಲವು ಸಲ ಬೇರೆ ಗುಂಪಿನ ನಾಯಿಗಳ ಜೊತೆಗೆ ಮಿಲನವಾಗುವುದಿದೆ.ತಾವು ತಿಂದ ಆಹಾರವನ್ನ ವಾಂತಿ ಮಾಡಿ ಮರಿಗಳಿಗೆ ತಿನ್ನಿಸುತ್ತವೆ.

ಸೀಳು ನಾಯಿಗಳು ಕಾಡಿನ ಸಂಮೃದ್ಧಿಯ ಸಂಕೇತಗಳಾಗಿವೆ, ಸೀಳು ನಾಯಿಗಳ ಗುಂಪು ಕಾಡಲ್ಲಿ ಇದೆ ಎಂದರೆ ಅಲ್ಲಿ ಸಸ್ಯಹಾರಿಗಳ ಸಂಖ್ಯೆ ಸಾಕಷ್ಟಿದೆ ಎನ್ನಬಹುದು, ಕಾಡಲ್ಲಿ ಪ್ರಾಣಿಗಳ ಸಂಖ್ಯೆ ಕುಸಿದಂತೆ ಇವುಗಳ ಸಂಖ್ಯೆಯೂ ಕುಸಿಯುತ್ತದೆ. ಬೇಟೆ ಸಿಗದೆ ತುಂಬಾ ಹಸಿವಾದಾಗ ಕೆಲವು ಸಲ ಕಾಡಿಗೆ ಹೋದ ಸಾಕು ಎಮ್ಮೆಜಾನುವಾರುಗಳ ಮೇಲೆ ದಾಳಿ ಮಾಡಿ ತಿಂದ ದಾಖಲೆಗಳಿವೆ. ಕೆಲವು ಸಲ ಸಾಂಕ್ರಾಮಿಕ ರೋಗಕ್ಕೆ ಇಡೀ ಗುಂಪೇ ಬಲಿಯಾಗುವುದಿದೆ.

ಗುಳ್ಳೆನರಿ(Jackal): ರಾಜ್ಯದ ಎಲ್ಲಾ ಪರಿಸರಕ್ಕೂ ಹೊಂದಿಕೊಂಡ ಇದನ್ನು ಗುಳ್ಳೆ ನರಿ, ನರಿ, ಗೋಲ್ಡನ್ ಜಕಲ್ ಎಂದೂ ಕರೆಯುತ್ತಾರೆ, ಬೇರೆ ಪ್ರಾಣಿಗಳು ತಿಂದುಬಿಟ್ಟ ಮಾಂಸವನ್ನು ತಿನ್ನುವುದರಿಂದ ಇದನ್ನು Scavenger ಎಂದು ಕರೆವರು, ಇಲಿ ಹೆಗ್ಗಣ ಕೋಳಿ , ಪಕ್ಷಿಗಳ ಜೊತೆಗೆ ಕಬ್ಬು,ಜೋಳವನ್ನು ತಿನ್ನಬಲ್ಲದು.

ಗುಳ್ಳೆನರಿ(Jackal)

ಹಳ್ಳಿ, ಪಟ್ಟಣಗಳ ಅಕ್ಕಪಕ್ಕ ಗಿಡಗಂಟಿ ಸಮೀಪ ಇಲ್ಲವೆ ಬಿಲಗಳಲ್ಲಿ ವಾಸಿಸುತ್ತವೆ, 4-6 ಮರಿಗೆ ಜನ್ಮ ನೀಡುತ್ತವೆ. ಹಗಲು ರಾತ್ರಿ ಸಂಚರಿಸುತ್ತ ಬೇಟೆ ಅರಸುತ್ತವೆ.

ನರಿಗಳು ಹೆಚ್ಚಾಗಿ ಹೊಲಗದ್ದೆಗಳಲ್ಲಿ ಇಲಿ ಏಡಿಗಳನ್ನು ತಿನ್ನುವುದನ್ನು ನೋಡಬಹುದು, ಗದ್ದೆಗಳಲ್ಲಿ ಏಡಿ ನಾಶ ಮಾಡಲು ಔಷದಿ ಬಳಸುತ್ತಿರುವುದರಿಂದ, ಸತ್ತ ಏಡಿಯನ್ನು ತಿಂದು ಅಸು ನೀಗುತ್ತಿದ್ದು ಅವುಗಳ ಸಂಖ್ಯೆ ಕುಸಿಯುತ್ತಿದೆ. ಕೆಲವು ಸಲ ನವಿಲುಗಳನ್ನೂ ಬೇಟೆಯಾಡುತ್ತಿದ್ದವು, ಈಗ ನರಿಗಳ ಸಂಖ್ಯೆ ಕಡಿಮೆಯಾದಂತೆ ನವಿಲುಗಳ ಸಂಖ್ಯೆ ಹೆಚ್ಚುತ್ತಿದೆ. ಇವು ರಾತ್ರಿಯ ವೇಳೆಯಲ್ಲಿ ತಮ್ಮ ಇರುವಿಕೆಯನ್ನು ತನ್ನ ಬಳಗದ ಸದಸ್ಯರಿಗೆ ವ್ಯಕ್ತಪಡಿಸಲು ಹಾಗು ಇತರ ಪ್ರಾಣಿಗಳನ್ನು ಹಿಮ್ಮೆಟ್ಟಿಸಲು ಸಾಮೂಹಿಕವಾಗಿ ಊಳಿಡುವುದನ್ನು ಕೇಳಬಹುದು

ಕಂಕನರಿ ಅಥವಾ ಕುಳ್ಳನರಿ (Fox): ಗುಳ್ಳೆ ನರಿಗಿಂತ ಚಿಕ್ಕದಾದ ನರಿಯೇ ಕಂಕನರಿ, ಮಲೆನಾಡಲ್ಲಿ ಅಥವಾ ದಟ್ಟ ಕಾಡಲ್ಲಿ ಕಾಣುವುದಿಲ್ಲ, ಬಯಲು ಸೀಮೆಯ ಒಣ ಪ್ರದೇಶ ಇವುಗಳ ಆವಾಸ, ಚಿಕ್ಕ ತಲೆ ದೊಡ್ಡ ಕಿವಿಗಳಿಂದ ಇವುಗಳನ್ನು ಸುಲಭವಾಗಿ ಗುರುತಿಸಬಹುದು, ನಿಧಾನವಾಗಿ ನಡೆಯುವಾಗ ಬಾಲ ನೆಲಕ್ಕೆ ಎಳೆಯುತ್ತದೆ.

ಕುಳ್ಳನರಿ (Fox)

ಇಲಿ ಕಪ್ಪೆ ಕ್ರಿಮಿ ಕೀಟ, ಪಕ್ಷಿಗಳನ್ನು ಬೇಟೆಯಾಡುತ್ತದೆ, ಹುತ್ತದಿಂದ ಏಳುವ ಗೆದ್ದಲು ಹುಳುಗಳನ್ನು ಸಹ ತಿನ್ನುತ್ತದೆ.

ನಾಯಿ ಜಾತಿಯ ಇತರ ಪ್ರಾಣಿಗಳ ಬಗ್ಗೆ ಹೇಳಿದ ಮೇಲೆ ಸಾಕು ನಾಯಿಯ ಬಗ್ಗೆ ಒಂಚೂರು ಹೇಳಲೇಬೇಕಿದೆ.ನಾಯಿಗಳು ಬಲು ನಂಬಿಕಸ್ಥ ಪ್ರಾಣಿಗಳು, ಇವು ತಮ್ಮ ಗಡಿಯನ್ನು ಉಚ್ಚೆ ಹುಯ್ಯುವುದರ ಮೂಲಕ ಗುರುತಿಸುತ್ತವೆ. ಯಾವುದೇ ವಾಹನ ತಂದು ನಿಲ್ಲಿಸಿದರೂ ಮೊದಲು ಮೂಸಿ ಪರೀಕ್ಷಿಸುತ್ತವೆ, ಬೇರೆ ನಾಯಿ ಮೂತ್ರ ಮಾಡಿದ್ದರೆ ತಕ್ಷಣ ಕಾಲೆತ್ತಿ ಮೂತ್ರ ಮಾಡಿ ಇದು ತನ್ನ ಸೀಮೆಯ ವಸ್ತು ಎಂದು ಗುರುತು ಹಾಕುತ್ತದೆ. ಒಂದು ವೇಳೆ ಯಾವುದೇ ನಾಯಿಯ ಮೂತ್ರದ ವಾಸನೆ ಇಲ್ಲದ್ದಿದ್ದರೆ ತಾನೇ ಮೂತ್ರ ಮಾಡಿ ಇದು ತನ್ನ ಗಡಿಗೆ ಸಂಬಂಧಿಸಿದ್ದು ಎಂದು ಗುರುತು ಹಾಕುತ್ತದೆ.

ಬಹಳ ಜನ ತಿಳಿದುಕೊಂಡಿರುವುದು ನಾಯಿಗೆ ರಾತ್ರಿ ವೇಳೆ ಬಹಳ ಸ್ಪಷ್ಟವಾಗಿ ದೃಷ್ಟಿ ಇದೆ ಅಂತ,ಆದರೆ ನಿಜ ಸಂಗತಿ ಎಂದರೆ ನಾಯಿಗೆ ರಾತ್ರಿಯ ವಸ್ತುಗಳು ಮಬ್ಬು ಮಬ್ಬು, ನಮಗೆ ಬೆಳದಿಂಗಳಲ್ಲಿ ಕಂಡಂತೆ.
ನಾವು ರಾತ್ರಿ ಹೊರಗಡೆಯಿಂದ ಮನೆಗೆ ಬಂದಾಗ ನಮ್ಮ ನಾಯಿ ನಮ್ಮನ್ನು ನೋಡಿಯೇ ಬೊಗಳುತ್ತವೆ (ಹಗಲು ಮನೆಯವರು ಬಂದರೆ ಸುದ್ದಿಯೇ ಇಲ್ಲ, ಅಪರಿಚಿತರು ಬಂದಾಗ ಮಾತ್ರ ಬೊಗಳುತ್ತವೆ) ಇಲ್ಲಿ ಅವಕ್ಕೆ ವ್ಯಕ್ತಿ ಬಂದಿದ್ದು ಕಾಣುತ್ತದೆ, ಆದರೆ ಆಕಾರ ಮಬ್ಬಾಗಿ ಕಾಣುತ್ತದೆ, ಆಗ ಅವು ನಮ್ಮ ಹಿಂದಿನಿಂದ ಬಂದು ವಾಸನೆ ಹಿಡಿದು ನಮ್ಮವ ಅಂತ ಸುಮ್ಮನಾಗುತ್ತವೆ, ಇಲ್ಲವೆ ನಾವು ಕರೆದರೆ ನಮ್ಮ ಧ್ವನಿಯನ್ನು ಗುರುತಿಸಿ ದೂರದಿಂದಲೇ ಸುಮ್ಮನಾಗುತ್ತವೆ.
ನಾಯಿಗಳು ಪರಿಚಿತರ ಧ್ವನಿ ಮತ್ತು ವಾಸನೆಯನ್ನು ಸ್ಪಷ್ಟವಾಗಿ ಗುರುತಿಸುತ್ತವೆ.

ನಾಗರಾಜ್ ಬೆಳ್ಳೂರು

ನಿಸರ್ಗ ಕನ್ಜರ್ವೇಷನ್ ಟ್ರಸ್ಟ್

Related post