ನಿನ್ನಂತಹ – ಬಿಸಿಲು
ಇದೆಂಥಾ ಉರಿ ಬಿಸಿಲೋ ಮಹರಾಯಾ
ಚರ್ಮ ಉರಿಯುವ
ನೆತ್ತಿ ಸುಡುವ ಬಿರು ಬಿಸಿಲು
ಸುಡು ಸುಡು ಬಿಸಿಲು
ಬಿಸಿ ಬಿಸಿ ಉರಿಬಿಸಿಲು
ಕಿಂಚಿತ್ತು ಕಾರಣ ಸಿಕ್ಕರೂ
ಸಾಕು ಕೆಂಡಮಂಡಲನಾಗಿ
ಉರಿದುರಿದು ಉರುಟುವ
ನಿನ್ನ ಸಿಟ್ಟು ಸೆಡವುಗಳಂಥದ್ದೇ ಈ ಬಿಸಿಲು
ಶಿವನು ತನ್ನ ಮೂರನೆಯ
ಕಣ್ಣನ್ನು ಒಂದರೆಘಳಿಗೆಗೆ
ತೆರೆದಿದ್ದನೋ ಏನೋ ಎಂಬಂತೆ
ನಿಗಿ ನಿಗಿ ಕೆಂಡದಂತೆ
ಕುದಿಯುತ್ತಿದ್ದಾನೆ
ಎಲ್ಲಾ ಬಣ್ಣಗಳ ನುಂಗಿರುವ
ಬಿಳಿಮೊಗದ ಸೂರ್ಯ
ಥೇಟು ಕೋಪ ತುಂಬಿದ
ನಿನ್ನ ಜೋಡಿ ಕಣ್ಣುಗಳಂತೆ
ನಿನ್ನಂತೆಯೇ ಸೂರ್ಯನೋ
ಸೂರ್ಯನಂಥವನು ನೀನೋ
ಆಗಾಗ ಕಾರಣವಿಲ್ಲದೇ
ಉರಿದುರಿದು ಬೀಳುತ್ತೀರಿ ಇಬ್ಬರೂ
ಸಮಯ ಸರಿದಂತೆ
ನಕ್ಷತ್ರ ಲೋಕ ಕಣ್ತೆರೆಯುತ್ತಿದ್ದಂತೆ
ತುಂಟ ಮಗುವಿನೊಲು
ನಿರುಮ್ಮಳವಾಗಿ ಕಣ್ಣುಮುಚ್ಚಿ
ಮುದ್ದಾಗಿ ಮಲಗುವ ಹಾಗೆ
ಕೋಪವುಕ್ಕಿದ ಕಾರಣಗಳಿಗೆ
ನೀವು ಕುರುಡಾಗಿ ಕಿವುಡಾಗಿ
ತಣ್ಣಗಾಗಿಬಿಡುತ್ತೀರಿ
ಏನೂ ಅರಿಯದ ಮುಗ್ಧರಂತೆ
ನೀವು ಉರಿಯುವಾಗ
ಸುಟ್ಟು ಸುರುಟಿ ಕರಟಿ
ನೀವು ತಂಪಾದಾಗ
ನಿಮ್ಮೊಲುಮೆಯ ತಂಗಾಳಿಯಲಿ
ನಾವೂ ಒಂದಿಷ್ಟು ಹರಟಿ
ಚಂದಿರನನು ನೋಡುತ್ತಾ
ರೆಪ್ಪೆಗಳ ಮೇಲೆ ಹೊಂಗನಸುಗಳ
ಭಾರವನಿಟ್ಟು ಕಣ್ಣು ಮುಚ್ಚುತ್ತೇವೆ
ನಾನೂ ಮತ್ತು ಭೂಮಿ…
ಸೌಜನ್ಯ ದತ್ತರಾಜ