ನಿನ್ನ ದೇಹಕ್ಕಿದು ತಿಳಿದಿಲ್ಲ

ಹೇ ನೀನು,

ನಿನ್ನ ದೇಹಕ್ಕಿದು ತಿಳಿದಿಲ್ಲ ;
ನೀನು ಯಾರೆಂದು
ನಿನೆಷ್ಟು ಮುಖ್ಯ ಮನೆಯವರಿಗೆಂದು
ನೀನೆನು ಕೆಲಸ ಮಾಡುತ್ತೀ ಎಂದು
ನೀನು ನಡೆಯುವವನೋ, ಓಡುವವನೋ, ಹಾರುವವನೋ ಎಂದು…

ನಿನ್ನ ದೇಹಕ್ಕಿದು ತಿಳಿದಿಲ್ಲ ;
ನಿನ್ನನು ಮೆಚ್ಚುವವರೆಷ್ಟೆಂದು
ನಿನ್ನ ನಿಂದಿಸಿ ಹಣಿಯಲು ಹಪಹಪಿಸುವರೆಷ್ಟೆಂದು
ನಿನ್ನಿಂದ ಒಳಿತುಂಡವರ್ಯಾರೆಂದು
ನೀನು ವಂಚಿಸಿದವರು ಏನಾದರೆಂದು

ನಿನ್ನ ದೇಹಕ್ಕಿದು ತಿಳಿದಿಲ್ಲ ;
ನೀನ್ಯಾವ ಜಾತಿಯವನೆಂದು
ನೀನೇನು ತಿನ್ನುತ್ತೀ ಎಂದು
ನೀನು ಪೂಜಿಸುವ ದೇವರ್ಯಾರೆಂದು
ನೀನು ಆಸ್ತಿಕನೋ,ನಾಸ್ತಿಕನೋ ಎಂದು

ನಿನ್ನ ದೇಹಕ್ಕಿದು ತಿಳಿದಿಲ್ಲ ;
ನೀನು ಗೆದ್ದ ಪ್ರಶಸ್ತಿಗಳು
ಸೋತ ಪಂದ್ಯಗಳು ಎಷ್ಟೆಂದು
ನಿನ್ನ ಪ್ರೀತಿಸುವವರೆಷ್ಟು
ನಿನ್ನ ದ್ವೇಷಿಸುವವರೆಷ್ಟೆಂದು

ನಿನ್ನ ದೇಹಕ್ಕಿದು ತಿಳಿದಿಲ್ಲ ;
ನೀನು ಕವಿಯೆಂದು
ನೀನು ಕಾರ್ಮಿಕನೆಂದು
ನೀನೊಬ್ಬ ಅಪ್ಪನೂ,ಅಮ್ಮಳೂ
ಅಣ್ಣನೂ ,ತಂಗಿಯೂ ಆಗಿದ್ದೀಯೆಂದು

ನಿನ್ನ ದೇಹಕ್ಕಿದು ತಿಳಿದಿಲ್ಲ ;
ನೀನು ಇಂದು ಎಲ್ಲಿದ್ದೀಯ
ನಾಳೆ ಎಲ್ಲಿರುತ್ತೀಯಾ ಎಂದು
ಸ್ವದೇಶವೋ , ವಿದೇಶವೋ
ಸಕುಟುಂಬವೋ , ಸ್ನೇಹಿತರೊಂದಿಗೋ ಎಂದು

ಅದಕ್ಕೆ ಒಂದು ತಿಳಿದಿದೆ ;
ಅದು ಕೃಶವಾಗುತ್ತದೆ
ಕಾಲನ ವಶವಾಗುತ್ತದೆ

ಶಿವಕುಮಾರ ಮಾವಲಿ

Related post

Leave a Reply

Your email address will not be published. Required fields are marked *