ಉರಿದುರಿದು ಬೀಳುವವರಿಗೆ
ಉರುವಲಾಗಲಿ ನಮ್ಮ ನಗುವು
ಇರಲಿಬಿಡಿ ಬೆಚ್ಚಗೆ ಕೆಲವರಾದರೂ
ನಗುವು ನಮಗದು ಸಹಜ ಧರ್ಮ
ಉರಿದುಕೊಳ್ಳುವುದು ಅವರ ಕರ್ಮ
ಆಗಿರಲಿ ಇದುವೇ ಬಾಳಮರ್ಮ
ನಾವು ಅತ್ತರೂ ಕೊರಗದವರು
ನಾವು ನಕ್ಕಾಗ ಸೊರಗಿಹರು
ನಮ್ಮವರೆಂದಿಗೂ ಆಗದ ಇವರು
ತೋರಿಕೆಯ ಸೋಗಲಾಡಿ ಸುಭಗರು
ಇರುತ್ತಾರೆ ಸುತ್ತಲೂ ಇಂಥವರು
ಹುಳಿ ಹಿಂಡುವ ಕಾಯಕದವರು
ಬಲಿಬೀಳದಿರಿ ಇವರು ನರಿಗಳಂಥವರು
ನಕ್ಕು ನಗಿಸುವುದು ಸುಲಭವೆನ್ನದಿರಿ
ನಗುವಿನೊಳಗೂ ಇರಬಹುದು
ಕಡಲಂಥ ದುಃಖ ದುಮ್ಮಾನ ನೂರು
ಸ್ವಸ್ಥ ನಗುವ ಲೇಪನವೊಂದೇ
ಹೆಚ್ಚಿಸುವುದು ಮೊಗದ ಚೆಲುವಿಂಗೆ
ಹರಿಸುವುದದು ಸ್ನೇಹದ ಪರಿಶುದ್ಧಗಂಗೆ
ಉರಿದುರಿದು ಬೀಳುವವರಿಗೆ
ಉರುವಲಾಗಲಿ ನಮ್ಮ ನಗುವು
ಇರಲಿಬಿಡಿ ಬೆಚ್ಚಗೆ ಕೆಲವರಾದರೂ
ಸೌಜನ್ಯ ದತ್ತರಾಜ
ಚಿತ್ರಗಳು : pininterest