ನೀರಿನಲ್ಲಿನ ಕಾಗೆ! – Cormorants

ಕಪ್ಪಗಿದೆ ಎಂಬ ಕಾರಣದಿಂದ ಕಾಗೆ ಎನಿಸಿಕೊಂಡಿರುವ ಹಕ್ಕಿ ನೀರುಕಾಗೆ. ಹೆಸರೇ ಹೇಳುವಂತೆ ಇದು ಒಂದು ನೀರ ಹಕ್ಕಿ. ಇಂಗ್ಲಿಷಿನಲ್ಲಿ ಇದನ್ನು ಕಾರ್ಮೊರಂಟ್ (Cormorants) ಎನ್ನುತ್ತಾರೆ. ಭಾರತ ಉಪಖಂಡದಲ್ಲಿ ನಾಲ್ಕು ಮತ್ತು ಜಗತ್ತಿನಲ್ಲಿ ಸುಮಾರು ನಲವತ್ತು ಬಗೆಯ ನೀರು ಕಾಗೆಗಳಿವೆ. ಪ್ರಧಾನವಾಗಿ ಕಪ್ಪು ಬಣ್ಣದವು. ಮೀನೇ ಪ್ರಧಾನವಾದ ಆಹಾರ. ಉಪಖಂಡದಲ್ಲಿ ಪಿಗ್ಮಿ ನೀರುಕಾಗೆ, ಸಣ್ಣ ನೀರುಕಾಗೆ, ದೊಡ್ಡ ನೀರುಕಾಗೆ ಮತ್ತು ಇಂಡಿಯನ್ ಶಾಗ್ ಎಂದು ಕರೆಯಲಾಗುವ ಇನ್ನೊಂದು ಬಗೆಯ ನೀರುಕಾಗೆ ಕಂಡುಬರುತ್ತವೆ.

ಒಳ್ಳೆಯ ಮುಳುಗು ಹಕ್ಕಿಗಳು. ನೀರಿನೊಳಗೆ ಮುಳುಗಿಯೂ ಮೀನು ಹಿಡಿಯಬಲ್ಲವು. ಹಿಡಿದ ಮೀನು ಜಾರಿಹೋಗದಂತೆ ಹಿಡಿಯಲು ಕೊಕ್ಕಿನಲ್ಲಿ ಗರಗಸದಂತಹ ರಚನೆಯಿದೆ. ಕೆಲವೊಮ್ಮೆ ಹೆಜ್ಜಾರ್ಲೆಗಳಂತೆ ಗುಂಪಿನಲ್ಲಿ ಮೀನು ಹಿಡಿಯುವುದು ಉಂಟೆಂದು ಸಲೀಂ ಅಲಿ ಹೇಳುತ್ತಾರೆ. ಇವುಗಳ ಮೀನು ಹಿಡಿಯುವ ಕೌಶಲವನ್ನು ಮಾನವನೂ ಬಳಸಿಕೊಳ್ಳುತ್ತಾನೆ! ಜಪಾನಿನಲ್ಲಿ ಇವುಗಳನ್ನು ಬಳಸಿ ಮೀನು ಹಿಡಿಯಲಾಗುತ್ತದೆ. ಇವು ಹಿಡಿದ ಮೀನನ್ನು ನುಂಗಲು ಆಗದಂತೆ ಗಂಟಲಿಗೆ ಉಂಗುರವನ್ನು ತೊಡಿಸಿರುತ್ತಾರೆ. ಹಕ್ಕಿಯು ಮೀನು ಹಿಡಿದು ದಡಕ್ಕೆ ಬಂದಾಗ ಮೀನನ್ನು ಬಾಯಿಯಿಂದ ಕಸಿದುಕೊಂಡು ಮತ್ತೆ ಹಕ್ಕಿಯನ್ನು ನೀರಿಗೆ ಬಿಡುತ್ತಾರೆ.

ಇಂಡಿಯನ್ ಶಾಗ್ (Indian Cormorant (Indian Shag) Phalacrocorax fuscicollis) ಎಂಬುದು ಕೊಕ್ಕು ತೆಳುವಾಗಿರುವುದನ್ನು ಸೂಚಿಸಲು ಬಳಸಲಾಗುತ್ತದೆಯಾದರೂ ಕಾರ್ಮೊರೆಂಟ್ ಮತ್ತು ಶಾಗ್ ಎಷ್ಟೋಬಾರಿ ಅದಲುಬದಲಾಗಿ ಬಳಕೆಯಾಗಿಬಿಡುತ್ತದೆ. ಆದರೆ, ಅವು ಬೇರೆ ಬೇರೆ ಹಕ್ಕಿಗಳು ಎಂಬುದು ಸಿದ್ಧ. ಸಣ್ಣ ನೀರು ಕಾಗೆ (Little Cormorant Microcarbo niger) ಮತ್ತು ದೊಡ್ಡ ನೀರುಕಾಗೆಗಳೆಂದು (Great Cormorant Phalacrocorax carbo) ಗಾತ್ರವನ್ನು ಅನುಸರಿಸಿಯೇ ಹೇಳುವುದು. ಆದರೆ, ದೊಡ್ಡ ನೀರುಕಾಗೆಗೆ ಗಂಟಲ ಬಳಿಯ ಕಿತ್ತಳೆ ಬಣ್ಣ ಮತ್ತು ಬಿಳಿಯ ಗಲ್ಲವಿದ್ದು ಸುಲಭವಾಗಿ ಗುರುತು ಸಿಗುತ್ತದೆ. ಸಾಮಾನ್ಯವಾಗಿ ಮರಿಗಳಿಗೆ ಹೊಟ್ಟೆಯ ಭಾಗ ಬೆಳ್ಳಗಿರುತ್ತದೆ. ಪ್ರೌಢಹಕ್ಕಿಗಳು ಸರಿಸುಮಾರು ಪೂರ್ತಿ ಕಪ್ಪುಬಣ್ಣದವು (ಮೇಲೆ ಹೇಳಿದಂತೆ ಕೊಕ್ಕು ಮತ್ತು ಅದರ ಸುತ್ತಲಿನ ಭಾಗಬಿಟ್ಟು). ಮೇಲ್ಕೊಕ್ಕಿನ ತುದಿ ಕೊಕ್ಕೆಯಂತೆ ಬಾಗಿರುತ್ತದೆ. ಮರಿ ಮಾಡುವ ಕಾಲದಲ್ಲಿ ದೊಡ್ಡ ನೀರು ಕಾಗೆಯ ತಲೆ ಹೆಚ್ಚು ಬಿಳಿಬಣ್ಣವನ್ನು ಹೊಂದಿರುತ್ತದೆ, ಇಂಡಿಯನ್ ಶಾಗ್ ಕಿವಿಯ ಸಮೀಪ ಬಿಳಿಯ ಚುಕ್ಕೆಯನ್ನು ಪಡೆಯುತ್ತದೆ. ಭಾರತದಲ್ಲಿ ಕೆಲವೆಡೆ ಇವು ನಿವಾಸಿ ಹಕ್ಕಿಗಳಾದರೆ ಮತ್ತೆ ಕೆಲವೆಡೆ ಚಳಿಗಾಲದಲ್ಲಿ ವಲಸೆ ಬರುವಂತಹವು.

ಸಾಮಾನ್ಯವಾಗಿ ಇವು ದಂಡೆಯ ಮೇಲಿದ್ದಾಗ ಬಿಸಿಲು ಕಾಯಿಸುವಂತೆ ರೆಕ್ಕೆಗಳನ್ನು ಅಗಲಿಸಿಕೊಂಡು ಕುಳಿತಿರುತ್ತವೆ. ಇದೇ ಭಂಗಿಯಲ್ಲಿ ಹೆಚ್ಚು ನಾವು ಇದನ್ನು ಕಾಣುವುದು ನಿಜವಾದರೂ ಇವು ನೀರಿನಲ್ಲಿಯೂ ಹೆಚ್ಚು ಸಮಯ ಕಳೆಯುತ್ತವೆ. ಉತ್ತಮ ಹಾರಾಟದ ಹಕ್ಕಿಯೂ ಸಹ.

ಗೂಡುಗಳು ಇತರ ನೀರ ಹಕ್ಕಿಗಳೊಂದಿಗೆ ಮರಗಳ ಮೇಲೆ ಕಟ್ಟುತ್ತದೆ. ಉತ್ತರ ಮತ್ತು ದಕ್ಷಿಣ ಭಾರತಗಳಲ್ಲಿ ಇವುಗಳ ಮರಿಮಾಡುವ ಕಾಲ ಬೇರೆ ಬೇರೆ. ಇವನ್ನು ನೀವು ಕಂಡರೆ ksn.bird@gmail.com ಗೆ ಬರೆದು ತಿಳಿಸಿ.

ಕಲ್ಗುಂಡಿ ನವೀನ್‌

ಚಿತ್ರಗಳು: ಶ್ರೀ ಜಿ ಎಸ್ ಶ್ರೀನಾಥ ಹಾಗು ದೇವದತ್ತ ಕುಮಾರ್

ಈ ಶತಮಾನ ವನ್ಯಜೀವಿ ಮತ್ತು ಸಂರಕ್ಷಣೆಯ ಸುವರ್ಣ ಪರ್ವ

Related post

Leave a Reply

Your email address will not be published. Required fields are marked *