ನೀರುನಾಯಿ – The Otter

ನೀರುನಾಯಿ – The Otter

ನೀರು ನಾಯಿಗಳು ಮಾಂಸಹಾರಿ ಗಣದ ‘ಮುಸ್ಟಲಿಡೀ’ (mustelidae) ಕುಟುಂಬಕ್ಕೆ ಸೇರಿದ್ದು ವೀಸಲ್ ಗಳು (weasel), ಮಾರ್ಟೆನ್ಗಳು (Martens), ಬ್ಯಾಜರ್ (Badger) ಇನ್ನೂ ಅನೇಕ ಪ್ರಾಣಿಗಳು ಈ ಕುಟುಂಬದಲ್ಲಿ ಬರುತ್ತವೆ. ಈ ಗುಂಪುಗಳ ಪ್ರಾಣಿಗಳು ಒಂದಕ್ಕೊಂದು ವಿಭಿನ್ನವಾಗಿದ್ದರೂ ಕೆಲವೊಂದು ಲಕ್ಷಣಗಳಲ್ಲಿ ಸಾಮ್ಯತೆ ಇರುವುದರಿಂದ ಒಂದೇ ಕುಟುಂಬದಲ್ಲಿ ಇರಿಸಲಾಗಿದೆ. ಉದ್ದ ದೇಹ, ಗಿಡ್ಡ ಕಾಲು, ಬಾಲದ ಬುಡದಲ್ಲಿ ವಾಸನಾ ಗ್ರಂಥಿ ಅಭಿವೃದ್ಧಿ ಹೊಂದಿದ ಮಾಂಸದ ಹಲ್ಲುಗಳು ಈ ಕುಟುಂಬದ ಪ್ರಾಣಿಗಳ ಲಕ್ಷಣಗಳಾಗಿವೆ.

ವಿಶ್ವದಲ್ಲಿ 13 ಜಾತಿಯ ನೀರು ನಾಯಿಗಳಿವೆ. ಕೆಲವು ದೇಶಗಳಲ್ಲಿ ನೀರು ನಾಯಿಯನ್ನು ಸಾಕಿ ಮೀನು ಹಿಡಿಯಲು ಬಳಸುತ್ತಾರೆ. ನಮ್ಮ ದೇಶದಲ್ಲಿ 3 ಜಾತಿಯ ನೀರು ನಾಯಿಗಳನ್ನು ಗುರುತಿಸಲಾಗಿದೆ.
ನುಣುಪು ಮೈಯಿನ ನೀರು ನಾಯಿ – Smooth- coated Otter
ಯುರೇಷಿಯನ್ ನೀರು ನಾಯಿ – Eurasian Otter
ಏಶಿಯನ್ ಸಣ್ಣ ಕಾಲುಗಳ ನೀರು ನಾಯಿ – Asian Small-Clawed Otter

ನುಣುಪು ಮೈಯಿನ ನೀರು ನಾಯಿ – Smooth- coated Otter

ಇದು ಕಡು ಕಂದು ಬಣ್ಣದ ನುಣುಪಾದ ಮೈಯುಳ್ಳ ಪ್ರಾಣಿ ಬಯಲು ಸೀಮೆಯ ದೊಡ್ಡ ನದಿ ಜಲಾಶಯಗಳಲ್ಲಿ ಗುಂಪಾಗಿ ಕಂಡು ಬರುತ್ತದೆ. 7-11 ಕಿಲೋ ತೂಗುವ ಇವು 1.3 ಮೀಟರ್ ಉದ್ದವಿರುತ್ತವೆ, ಮೀನುಗಳು ಇವುಗಳ ಮುಖ್ಯ ಆಹಾರ ಅಲ್ಲದೆ ಕಪ್ಪೆಗಳು, ಆಮೆಗಳು, ನೀರು ಹಾವು, ಏಡಿಗಳನ್ನು ಸಹ ತಿನ್ನುತ್ತವೆ. ಈ ಜಾತಿಯ ನೀರು ನಾಯಿಗಳನ್ನು ಸಂರಕ್ಷಣೆ ಮಾಡಲು ದೇಶದಲ್ಲೇ ಪ್ರಥಮವಾಗಿ ತುಂಗಭದ್ರ ನೀರುನಾಯಿ ಸಂರಕ್ಷಣಾ ಮೀಸಲು (Tungabhadra Otter Conservation Reserve) ಸ್ಥಾಪಿಸಲಾಗಿದೆ. ಇವುಗಳನ್ನು ಭಾರತದ ಬಹುತೇಕ ಕಡೆ ಕಾಣಬಹುದು.

ಯುರೇಷಿಯನ್ ನೀರು ನಾಯಿ – Eurasian Otter

ಇದು ತವುಡು ಕಂದು ಬಣ್ಣದಿಂದ ಕೂಡಿದ ದೇಹ ಹೊಂದಿದೆ, ನದಿ ಕೆರೆಗಳಲ್ಲಿ ವಾಸ ಮಾಡುವ ಇದರ ಹಿಂಗಾಲು ಮುಂಗಾಲಿನಲ್ಲಿ ಜಾಲವಿರುವುದರಿಂದ ನಿಪುಣ ಈಜುಗಾರ, ಮೀನು ಪಕ್ಷಿಗಳನ್ನು ಬೇಟೆಯಾಡುತ್ತದೆ. 6-12 ಕಿಲೋ ತೂಗುವ ಇವು 1, 2 ಮೀಟರ್ ಉದ್ದ ಬೆಳೆಯಬಲ್ಲವು, ಬೆಟ್ಟಗುಡ್ಡಗಳ ನದಿ ತೊರೆಗಳಲ್ಲಿ ಕಂಡುಬರುವ ಇವು ಗುಂಪು ಜೀವಿಗಳಲ್ಲ, ನಮ್ಮ ಭಾರತದ ಹಿಮಾಲಯ ಪ್ರದೇಶಗಳ ತಪ್ಪಲಿನಲ್ಲಿ ಹಾಗು ದಕ್ಷಿಣ ಭಾರತದ ಪಶ್ಚಿಮ ಘಟ್ಟದ ಬಹುತೇಕ ಪ್ರದೇಶಗಳಲ್ಲಿ ಕಾಣಬಹದಾಗಿದೆ.

ಏಶಿಯನ್ ಸಣ್ಣ ಕಾಲುಗಳ ನೀರು ನಾಯಿ – Asian Small-Clawed Otter

ಇದು ವಿಶ್ವದ ಅತೀ ಚಿಕ್ಕ ಜಾತಿಯ ನೀರು ನಾಯಿ, ಇದರ ಉಗುರುಗಳು ಅಷ್ಟಾಗಿ ಬೆಳೆದಿಲ್ಲ ಹಾಗಾಗಿ Claw less Otter ಎಂದೂ ಕರೆಯುತ್ತಾರೆ. ನಮ್ಮಲ್ಲಿ ಕೊಡಗಿನ ಎತ್ತರದ ಶಿಖರಗಳು ಹಾಗು ನೆರೆಯ ನೀಲಗಿರಿಯ ಉನ್ನತ ಪರ್ವತ ಶ್ರೇಣಿಗಳ ತೊರೆಗಳಲ್ಲಿ ಕಾಣಬಹುದು. ಹೆಚ್ಚಾಗಿ ಏಡಿಗಳನ್ನು ತಿನ್ನುವ ಇವು 2-5 ಕಿಲೋ ತೂಗುತ್ತವೆ. ನೀರಿನಲ್ಲಿ ಮಳುಗಿ 5 ನಿಮಿಷದವರೆಗೂ ಇವು ಉಸಿರನ್ನು ತಡೆ ಹಿಡಿದು ಬೇಟೆಯಾಡಬಲ್ಲವು. ಸಣ್ಣ ಗುಂಪುಗಳಲ್ಲಿ ಇವುಗಳನ್ನು ಕಾಣಬಹುದು.

ನಾಗರಾಜ್ ಬೆಳ್ಳೂರು
Nisarga Conservation Trust

Related post

Leave a Reply

Your email address will not be published. Required fields are marked *