ನೀ ದೂರ ಹೋದಾಗ – ಫೌಝಿಯಾ ಸಲೀಂ

ನೀ ದೂರ ಹೋದಾಗ – ಫೌಝಿಯಾ ಸಲೀಂ

ಪುಸ್ತಕ : ನೀ ದೂರ ಹೋದಾಗ
ಲೇಖಕರು : ಫೌಝಿಯಾ ಸಲೀಂ
ಬೆಲೆ : 220/- ರೂ.
ಪ್ರಕಾಶಕರು : ವೀರಲೋಕ ಬುಕ್ಸ್

ಲೇಖಕರ ಪರಿಚಯ : ಮಂಗಳೂರಿನವರಾದ ಫೌಝಿಯಾ ಸಲೀಂ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಗಳಿಸಿದ್ದಾರೆ. ಅರ್ಥಶಾಸ್ತ್ರದ ಉಪನ್ಯಾಸಕಿಯಾಗಿ ಮಂಗಳೂರಿನ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಇವರು ದುಬೈನಲ್ಲಿ ವಾಸಿಸುತ್ತಿದ್ದು, ದುಬೈಯಲ್ಲಿರುವ ಕಂಪನಿಯೊಂದರ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮನಸ್ಸಾರೆ, ನಿನ್ನನ್ನೇ ಪ್ರೀತಿಸುವೆ ಎಂಬ ಕಿರು ಕಾದಂಬರಿಗಳು, ಬಾಳ ಪಯಣ ಹಾಗು ನೀ ದೂರ ಹೋದಾಗ ಎಂಬ ಕಾದಂಬರಿಗಳು ಪ್ರಕಟವಾಗಿವೆ. 2022 ರಲ್ಲಿ ಪ್ರಕಟವಾದ ಇವರ “ಬಾಳ ಪಯಣ” ಕಾದಂಬರಿಯು, ಜಾಗತಿಕ ಮಟ್ಟದಲ್ಲಿರುವ ಅಂತಾರಾಷ್ಟ್ರೀಯ ಬೃಹತ್ ಗ್ರಂಥಾಲಯವಾದ ದುಬೈಯ ಮುಹಮ್ಮದ್ ಬಿನ್ ರಾಶಿದ್ ಲೈಬ್ರರಿಯಲ್ಲಿ ಸ್ಥಾನ ಪಡೆದಿದೆ.

ಫೌಝಿಯಾ ಸಲೀಂ ರವರ ಕಾದಂಬರಿ  “ನೀ ದೂರ ಹೋದಾಗ” ಇದು ಒಬ್ಬ  ಹೆಣ್ಣೊಬ್ಬಳು ಸ್ವತಂತ್ರಕ್ಕಾಗಿ
ಹೋರಾಡುವ ಜೀವನದ ಕಥನ ಎಂದರೆ ತಪ್ಪಾಗಲಾರದು. ತನಗಾಗಿ ತನ್ನತನಕ್ಕಾಗಿ ಪ್ರತಿಕ್ಷಣವೂ ಹೋರಾಡುತ್ತ
ಬದುಕುತ್ತಾಳೆ. ಅವಳಿಗೆ ಅವಳದೇ ಆದ ಕೆಲವೊಂದು ಕಟ್ಟುಪಾಡುಗಳಿವೆ. ಬದುಕಿಗೆ ಹಾಕಿಕೊಂಡ ರೀತಿ
ನಿಯಮಗಳಿವೆ. ಅವಳೆಷ್ಟೆ ಮುಂದುವರಿದಿದ್ದರೂ ತನ್ನೊಳಗಿನ ಚೌಕಟ್ಟು ಮೀರಲಾರಳು. ತಾನು ಅಂದುಕೊಂಡ
ರೇಖೆಯನ್ನು ಬದಲಿಸಲಾರಳು. ಇದು ಪ್ರತಿಯೊಬ್ಬ ಹೆಣ್ಣಿನೊಳಗಿರುವ ಸ್ವಭಾವ.  ಒಮ್ಮೆ ಬಿರುಗಾಳಿಯಾದರೆ
ಮತ್ತೊಮೆ ಶಾಂತಮೂರ್ತಿಯಾಗಿ ಸಂತೈಸುವವಳೇ ಈ ಹೆಣ್ಣು. ಹೆಣ್ಣೆಂದರೆ ಜೀವ ಚೈತನ್ಯವಿದ್ದಂತೆ. ನೋವಲ್ಲೂ
ನಗುವನ್ನ ಕಲಿತವಳು. ಸೋತಾಗ ಸಂತೈಸಿ ಮೈದಡವುವ ಕರುಣಾಮಯಿ. ಅತ್ತಾಗ ಮಡಿಲಲ್ಲಿ ಸಾಂತ್ವನಿಸುವ
ಮಮತಾಮಯಿ. ಅದಕ್ಕೆ ಹೆಣ್ಣೆಂದರೆ ಶಕ್ತಿ.

ಸ್ತ್ರೀಯರು ವಿದ್ಯೆಯಿಂದ ವಂಚಿತರಾದದ್ದು, ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲಿ ಸಾರ್ವಜನಿಕ
ಜೀವನದಲ್ಲಿ ಭಾಗಿಯಾಗುವ ಹೆಚ್ಚಿನ ಅವಕಾಶಗಳು ಸೃಷ್ಟಿಯಾಗದೇ ಹೋದದ್ದು, ಸ್ವಾತಂತ್ರ್ಯವಿರದ ಅವಲಂಬನೆಯ ಜೀವನವೇ ಪ್ರಧಾನವಾದದ್ದು – ಇಂಥ ಅನೇಕ ಕಾರಣಗಳಿಂದಾಗಿ ಮಹಿಳೆ ಕನ್ನಡ ಸಾಹಿತ್ಯದ ಮುಖ್ಯವಾಹಿನಿಯಲ್ಲಿ ಬಹುಕಾಲದವರೆಗೆ ಅನನ್ಯತೆಯನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಇದು ಎಲ್ಲಾ ಹೋರಾಟರ್ಗಾತಿಯ ಕಥೆ  ಫೌಝಿಯಾ ಸಲೀಂ ರವರು ಬರೆದಿರುವ ಕಾದಂಬರಿ.

ನೀ ದೂರ ಹೋದಾಗ ಕಾದಂಬರಿಯು ಒಂದು ಚಿಕ್ಕ ಹಳ್ಳಿಯಲ್ಲಿ ಬೆಳೆದ ಹೆಣ್ಣು ಮಗಳು ಒಬ್ಬಳು ವಿದೇಶದಲ್ಲಿ
ಯಾವ ರೀತಿ ಬದುಕುತ್ತಿದ್ದಾಳೆ ಎಂಬುದರ ಸತ್ಯ ಘಟನೆ ಆಧಾರಿತವಾದ ಕಾದಂಬರಿ. ಸ್ತ್ರೀಸಂವೇದನೆಯ ನೆಲೆಗಳು
ಮುಟ್ಟುತ್ತಿರುವ ಹಾದಿಗಳನ್ನು ಗುರುತಿಸುವ ಪುಟ್ಟ ಪ್ರಯತ್ತ ಇದು ಎನ್ನಬಹದು. ಹಾಗೆಯೇ ಇಲ್ಲಿ ವಿಶ್ಲೇಷಣೆಗೆ ಹೆಚ್ಚು ಗಮನಹರಿಸಿ ಉದಾಹರಣೆಗಳನ್ನು ಕ್ವಚಿತ್ತಾಗಿ ಬಳಸಿ ಕೊಳ್ಳಲಾಗಿದೆ. ಸದ್ಯದ ವರ್ತಮಾನದಲ್ಲಿ ಬರೆಯತ್ತಿರುವ ಸ್ತ್ರೀ ಲೇಖಕಿಯರ ಬರವಣಿಗೆಗಳ ಬಗ್ಗೆಯೇ ನಾನು ಹೆಚ್ಚು ಕುತೂಹಲಿ ಎಂದರೆ ತಪ್ಪಾಗಲಾರದು.
ಈ ಪುಸ್ತಕವು  ಮೊದಲಿಗೆ ಪ್ರಾರಂಭವಾಗುವುದೇ  ಮಂಗಳೂರಿನ ಕೆಲವೇ ಕಿಲೋಮೀಟರ್ ಗಳ ದೂರದಲ್ಲಿರುವ ಸೂರತ್ಕಲ್ ಹೆದ್ದಾರಿಯ ರಸ್ತೆಯಲ್ಲಿ ಸಾಗುವಾಗ ಸಿಗುವ ಕೋಡಿಕಲ್  ಎಂಬ ಗ್ರಾಮದ ಒಂದು ಸ್ಥಳದಲ್ಲಿ 32 ವರ್ಷದ ಒಬ್ಬ ವ್ಯಕ್ತಿಯ ಶರೀರವು ಬಾವಿಯಲ್ಲಿ ಬಿದ್ದಿರುತ್ತದೆ. ಆ ದೇಹವನ್ನು ಹೊರ ತೆಗೆಯುವುದನ್ನು ನೋಡಲು ಅಲ್ಲಿಗೆ ಬಂದ ಜನ ಜಂಗುಳಿಗಳು ಅವರ ಸಂಬಂಧಿಕರ ರೋಧನೆ ಕೂಗು, ನರಳಾಟ, ಕಿರುಚಾಟ ಎಲ್ಲರ ಕಣ್ಣುಗಳನ್ನು ಒದ್ದೆಗೊಳಿಸುತ್ತದೆ. ಆದರೆ ಆ ಸುಂದರವಾದ ತೋಟಗಳ ಕೊನೆಯ ಮೂಲೆಯಲ್ಲಿ ಆ ಬಾವಿಯ ಸುತ್ತ
ಬೆಳೆದ ಹೂ ಹಾಗೂ  ಅನೇಕ ಹಣ್ಣಿನ ಮರಗಳನ್ನು ನೋಡುವುದು ಎಷ್ಟು ಸೊಗಸಾಗಿ ಇತ್ತೆಂದರೆ. ಸುತ್ತ ಬೆಳೆದ ಗುಲಾಬಿ ಹೂವುಗಳು ಒಂದು ಕ್ಷಣ ಮೈ ಮರೆಸುತ್ತದೆ. ಆದರೆ ಇದು ಯಾವುದರ ಪರಿವೇ ಇಲ್ಲದೆ ಆ ಮನೆಯ
ಮಾಲೀಕನಾದ ಬೆಡ್ ಮೇಕರ್ (ಹಾಸಿಗೆಯನ್ನು ತಯಾರಿಸುವ) ಎಂದೇ ಪ್ರಖ್ಯಾತಿಯಾಗಿರುವ ಸಾಹುಲ್ ಹಮೀದ್ ನ ಎರಡನೇ ಮಗ ಸಲೀಂ ಚಿರನಿದ್ರೆಗೆ ಜಾರಿದ ಅವನ ಮಡದಿ, ಮೂರು ಚಿಕ್ಕ ಮಕ್ಕಳ  ಹಾಗೂ ತಾಯಿ  ರೋಧಿಸುತ್ತಿದ್ದರೆ  ಎಂಥ ಕಲ್ಲು ಮನಸ್ಸನ್ನು ಕಣ್ಣೀರು ಬರಿಸುತ್ತದೆ.

ಸಲೀಮ್ ತೀರಿಕೊಂಡ ಮೇಲೆ ಅಮಿನಾ ತವರು ಮನೆ ಸೇರುತ್ತಾಳೆ. ಅಲ್ಲೇ ಅವರ ನಾಲ್ಕು ಮಕ್ಕಳು ಕೂಡ
ಬೆಳೆದು ದೊಡ್ಡವರು ಆಗುತ್ತಾರೆ. ಆ ಮಕ್ಕಳನ್ನು ಕಂಡರೆ  ಸೋದರರಿಗೂ ಹಾಗೂ ಸಂಬಂಧಿಕರು ಊರಿನವರಿಗೆಲ್ಲ
ಅಮೀನಾಳ ಮಕ್ಕಳು ಅಚ್ಚುಮೆಚ್ಚು ಆಗಿದ್ದರು. ಎಲ್ಲರೂ ಒಟ್ಟಿಗೆ ಅವರ ದೊಡ್ಡ ಮನೆಯಲ್ಲಿ ಬೆಳೆಯತೊಡಗಿದರು ಅವರ ತಾತ ಕೃಷಿ ಜಮೀನಿನ ಒಡೆಯನಾಗಿದ್ದರು. ನೀ ದೂರ ಹೋದಾಗ…   ದೊಡ್ಡ ಕುಟುಂಬದಲ್ಲಿ ಬೆಳೆಯುವ ಹೆಣ್ಣು ಮಕ್ಕಳ ಕಥಾನ ವಸ್ತು ಆಗಿದೆ.

ಇದರಲ್ಲಿ ಬರುವ ಮುಖ್ಯ ಪಾತ್ರದಾರಿಯೇ ಫೌಝಿಯಾ.  ಪಿಯುಸಿ ಎಕ್ಸಾಮ್ ಮುಗಿಸಿ ರಜೆಯಲ್ಲಿ
ಇರಬೇಕಾದರೆ ತಂದೆಯ ಸೋದರಿಯ ಕುಟುಂಬದ ಮದುವೆಗೆ ತಂದೆಯ ಊರಿಗೆ ಹೋಗುತ್ತಾಳೆ. ಅಲ್ಲಿ ನಡೆಯುವ
ಕೆಲವು ಘಟನೆಗಳನ್ನು ಮನ ಮಿಡಿಯುವ ರೀತಿ ವಿವರಣಾತ್ಮಕವಾಗಿ ಪ್ರತಿಯೊಂದು ಎಳೆ ಎಳೆಯಾಗಿ
ಕಾದಂಬರಿಗಾರ್ತಿಯು ತಿಳಿಸಿಕೊಟ್ಟಿದ್ದಾರೆ. ಮದುವೆ ಸಮಾರಂಭದಲ್ಲಿ ಕೆಲವೊಂದು ಶಾಸ್ತ್ರ ಸಂಪ್ರದಾಯಗಳನ್ನು
ಹೆಣ್ಣು ಮಕ್ಕಳು ಯಾವ ರೀತಿ ಇರಬೇಕು ತಂದೆಯಿಲ್ಲದ ಹೆಣ್ಣು ಮಕ್ಕಳನ್ನು ಅವರ ಸಂಬಂಧಿಕರು ಯಾವ ರೀತಿ
ನೋಡುತ್ತಾರೆ ಆ ಹೆಣ್ಣನ್ನು ಯಾವ ರೀತಿ ಕಷ್ಟಗಳಿಗೆ ದೂಡುತ್ತಾರೆ ಎಂಬುದನ್ನು ಇಲ್ಲಿ ತಿಳಿಸಿದ್ದಾರೆ. ಒಂದೆರಡು
ದಿನಗಳ ನಂತರ ಮದುವೆ ಕಾರ್ಯಗಳು ಎಲ್ಲವೂ ಮುಗಿದ ಮೇಲೆ ಮನೆಯಲ್ಲಿದ್ದ ರುಕಿಯಾ, ಮುಂತ, ಮೈಮುನಾ,
ಅತ್ತೆ ಎಂದಿರುವ ಹಾಗೂ ಅವರ ತಾಯಿ ತಂಗಿಯಂದಿರು, ಊರಿಗೆ ಹೋದರೆ. ನೌಶಾದ್ ಮದುವೆಗೆ ಬಾರದೆ ಇದ್ದ
ಅಣ್ಣ.

ಕುಟುಂಬದಲ್ಲಿ ನಡೆಯುವ ಕೆಲವು ಸಂಸಾರದ ಸಾಂಗಿತ್ಯಗಳನ್ನು ಹಾಗೂ  ಅಜ್ಜ ಅಜ್ಜಿಯರು ಕುಟುಂಬ
ವರ್ಗದವರು ಅವರ ಜೊತೆ ಯಾವ ರೀತಿ ಒಬ್ಬ ಹೆಣ್ಣು ಮಗಳು ಬದುಕುತ್ತಾಳೆ ಎಂಬುದನ್ನು ತಿಳಿಸಿದ್ದಾರೆ. ಇಲ್ಲಿ ಬರುವ ಪ್ರಮುಖ ಅಂಶಗಳು ಎಂದರೆ, ತವರು ಮನೆ ಬೆಳಕಾದಾಗ, ಮಿಡಿದ ಹೃದಯ, ಕಾಯಿನ್ ಬಾಕ್ಸ್ ಟೆಲಿಫೋನ್,
ಹೃದಯ ಬಡಿತ ನಿಂತಾಗ, ಮರೆಯದ ನೆನಪು ಇದು ಕಾಲೇಜಿನಲ್ಲಿ ಶಿಕ್ಷಕ ಹಾಗೂ ಸ್ನೇಹಿತರ ಒಂದು ಒಡನಾಟ ಬಗ್ಗೆ
ತಿಳಿಸುವ ಅಂಶ. ಪ್ರತಿಯೊಬ್ಬರ ಜೀವನದಲ್ಲೂ ನಡೆದಿರುವ ಅಂಶಗಳನ್ನು ಹಾಗೂ ಹೆಣ್ಣು ಮಕ್ಕಳು ಸಮಾಜದಲ್ಲಿ
ಯಾರದೇ ಸಹಾಯವಿಲ್ಲದೆ ಯಾವ ರೀತಿ ಬದುಕಬೇಕೆಂಬುದನ್ನು ತೋರಿಸಿಕೊಟ್ಟ ಮಹಿಳೆಯ ಕಾದಂಬರಿಯೇ ನೀ
ದೂರ ಹೋದಾಗ.

ಹೀಗೆ, ಜೀವನ ಸಾಗುತ್ತಿರುವಾಗ ಗೆಳೆತನದ ಬಾಂಧವ್ಯ ಮಡಿಕೇರಿಯ ದೊಡ್ಡಪ್ಪನ ಮನೆಯಲ್ಲಿ ಇವರನ್ನು
ನೋಡಿಕೊಂಡ ರೀತಿ. ಅವರು ಪಟ್ಟ ಕಷ್ಟಗಳು ಎಲ್ಲವೂ ಸೇರಿ ದೃಢ ನಿರ್ಧಾರದಿಂದ  ಬೆಳೆದು ದೊಡ್ಡವಳಾಗಿ
ಎಲ್ಲರಂತೆ ತಾನು ಒಬ್ಬಳು ದಿಟ್ಟ ಮಹಿಳೆಯಾಗಿ ಬೆಳೆಯಬೇಕೆಂಬ ಆಸೆಯಿಂದ ಕನಸುಗಳನ್ನು ಕಟ್ಟಿಕೊಂಡು
ಕೆಲಸಗಳನ್ನು ಹುಡುಕುತ್ತಾ ಜೀವನವನ್ನು ಸಾಗಿಸುವ ರೀತಿ.  ಹೆಣ್ಣು ಮಗಳೊಬ್ಬಳು ಯಾರ ಸಹಾಯವೂ ಇಲ್ಲದೆ
ಯಾರಿಂದಲೂ ಹಣವನ್ನು ಪಡೆಯುತ್ತೆ ತಾನು ದುಡಿದ ಹಣದಲ್ಲೇ ಸ್ವಲ್ಪವನ್ನು ಶೇಖರಣೆ ಮಾಡಿ ಇಟ್ಟುಕೊಂಡು ದುಬೈಗೆ ಆರುವ ರೀತಿ ಅವಳು ಪಡುವ ಕಷ್ಟಗಳನ್ನು ಇಂಚಿಂಚಾಗಿ ಪ್ರತಿಯೊಂದು ವಿವರಣಾತ್ಮಕವಾಗಿ ತಿಳಿಸಿಕೊಟ್ಟಿದ್ದಾರೆ ಇಲ್ಲಿ ಹೆಣ್ಣು ಮಗಳೋಒಬ್ಬಳು ತನ್ನ ಜೀವನವನ್ನು ಯಾವ ರೀತಿ ಯಾರ ಸಹಾಯವೂ ಇಲ್ಲದೆಯೇ ಬಂಧು-ಬಳಗ,  ಕುಟುಂಬ ವರ್ಗದವರ ಸಹಾಯವು ಇಲ್ಲದೇ  ಜೀವನದ ಹೋರಾಟದಲ್ಲಿ ಬದುಕುತ್ತಾಳೆ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ.

ಇಲ್ಲಿ ಬರುವ ಕೊನೆಯ ಪ್ರವಾಸಿಯಲ್ಲಿ ಆ ಹೆಣ್ಣು ಮಗಳು ದುಬೈಗೆ ಹೋದಾಗ ಅವಳು ಅನುಭವಿಸುವ
ಕಷ್ಟಗಳು ಉದ್ಯೋಗ ಸಿಗದೇ ಯಾವ ರೀತಿ ಜೀವನ ನಡೆಸುತ್ತಿದಳು ಎಂಬುದನ್ನು ನೀವು ಈ ಕಾದಂಬರಿಯಲ್ಲಿ
ತಿಳಿಯಬೇಕಾದ ಮುಖ್ಯ ಅಂಶ. ಕೊನೆಗೆ ಅವಳಿಗೆ ಕೆಲಸ ಸಿಕ್ಕಿತೆ..! ಕೊನೆಗೆ ಆ ಹೆಣ್ಣು ಮಗಳು ಭಾರತಕ್ಕೆ
ಬರುವಳೇ….! ಎಂಬುದನ್ನು ನೀವು ಕಾದಂಬರಿಯನ್ನು ಓದಿ ತಿಳಿದುಕೊಳ್ಳಬೇಕಾಗಿ ವಿನಂತಿ. ಇದು ಸ್ತ್ರೀವಾದಿ
ದೃಷ್ಟಿಯಿಂದ ಮಹತ್ತ್ವದ ಕೃತಿಯಾಗಿದೆ.

ಈ ಪುಸ್ತಕದಲ್ಲಿ ನನಗೆ ಇಷ್ಟವಾದ ಸಾಲುಗಳು ಎಂದರೇ, ‘ನನಗೆ ಯಾಕೋ ನಿನ್ನ ಮೇಲೆ ಬೇಸರ? ನಾನು
ಈ ಒಂದು ಅಂತಕ್ಕೆ ಬರಲು ಕಾರಣನೇ ನೀನು. ಯಾವ ಜನರ ಚುಚ್ಚು ಮಾತುಗಳಿಲ್ಲದೆ ನೆಮ್ಮದಿಯಿಂದ ಇದ್ದೇನೆ
ಕಣೋ. ತಂದೆ ದೂರ ಹೋದಾಗ ಬಡತನ ಏನೆಂದು ಅರಿತೆ. ಅಣ್ಣ ದೂರ ಹೋದಾಗ ಜವಾಬ್ದಾರಿ ಏನೆಂದು
ಅರಿತೆ. ಪ್ರೀತಿ ದೂರ ಹೋದಾಗ ಒಂಟಿತನ ಏನೆಂದು ಅರಿತೆ. ಈಗ ನಾನೇ ಎಲ್ಲರಿಂದ ದೂರ ಬಂದಾಗ
ಬದುಕುವುದನ್ನು ಕಲಿತೆ’ ಈ ಸಾಲುಗಳು ತುಂಬಾ ಅರ್ಥಗರ್ಭಿತವಾಗಿದ್ದು ಎಲ್ಲರ ಮನಸ್ಸಿನಲ್ಲಿಯೂ ಉಳಿಯುವಂತೆ
ಮಾಡುತ್ತದೆ.

ಏಕೆಂದರೆ ಇದು ಒಬ್ಬ ನೊಂದು-ಬೆಂದು ಹೋದ ದಿಟ್ಟ ಹೆಣ್ಣೊಬ್ಬಳ ಜೀವನದ ಹೋರಾಟದ ನೈಜ ಕಥೆ..!
ಒಂದು ಮುಸ್ಲಿಂ ಸಮುದಾಯದ ಹೆಣ್ಣು ಹಾಗೂ ಕೋಮು ಸೂಕ್ಷ್ಮ ಪ್ರದೇಶವಾಗಿರುವ ಕರಾವಳಿ ಪ್ರದೇಶದ ಕಥೆ.
ಜಾತಿ, ವರ್ಗ, ವರ್ಣ ವೈವಿಧ್ಯಗಳು ಸೃಷ್ಟಿಸುವ ಸಾಂಸ್ಕೃತಿಕ ಹಿನ್ನೆಲೆ ಭಾಷಗಿದ್ದೇ ಇರುತ್ತದೆ. ಅನುಭವ
ಕಥಾನಕಗಳಲ್ಲಿ ಹೊಮ್ಮುವ ವಿವರಗಳು, ಚಿತ್ರಗಳು ಸಾಂಸ್ಕೃತಿಕ ನಿಶ್ಚಿತತೆಯನ್ನು ಬಿಟ್ಟುಬಿಡಲು ಸಾಧ್ಯವಿಲ್ಲ.
ಹಾಗಾಗಿ ಕಾರಂತರ ಕಾದಂಬರಿಗಳಲ್ಲಿ ಕಾಣುವ ತುಳುನಾಡಿನ ವಿವರಗಳನ್ನು ವಿಭಿನ್ನವಾಗಿ ಪ್ರಕಟಗೊಳ್ಳಬಹುದಾದ ಸಾಧ್ಯತೆಗಳನ್ನು ಗಮನಿಸಬೇಕು.

ಕೃತಿಗಳಿಗಾಗಿ ಸಂಪರ್ಕಿಸಿ : 7022122121 / 8861212172
www.veeralokabooks.com

ಮೋಹನ್ ಕುಮಾರ್ ಟಿ
ಅರ್ಥಶಾಸ್ತ್ರ ಸಹಾಯಕ ಪ್ರಧ್ಯಾಪಕರು ಹಾಗೂ ಲೇಖಕರು

Related post

Leave a Reply

Your email address will not be published. Required fields are marked *