ನೀ ನನ್ನ ಎಡಗೈ ಆಗುವೆಯಾ?
ಎಂದೂ ಇರುವಿಕೆಯ ತೊರ್ಪಡಿಸದ,
ಮುಂದು ನಾನೆಂದು, ಮುಂದೆ ಬಾರದ
ಹಿಂದಿದ್ದರೂ ಪಕ್ಕೆಲುಬಿನಂತೆ ದೃಢವಾದ
ನನ್ನ ಎಡಗೈ ಆಗುವೆಯಾ?
ಬಲಗೈ ಉತ್ಸವಮೂರ್ತ, ಎಲ್ಲಕ್ಕೂ ಮುಂದೆ,
ಎಲ್ಲ ಕಾರ್ಯಕು ತಾ ಮುಂದೆ
ನಾನು ಎಂದು ಅಹಮಿಕೆ ಪಡುವ ಮನುಜನಂತೆ
ಅದಕೆ ಪೆಟ್ಟುಬೀಳುವ ತನಕ
ಅಯ್ಯೋ ಎಂದು ಬಲಗೈ ನೋವಲಿ ಮುಲುಗುವ ಸಮಯ
ಎಲ್ಲಿದ್ದೀತೋ ಎಡಗೈ, ನಾನಿದ್ದೀನಿ ಎಂದು ಬಂತು ಮುಂದೆ
ಅಳುವ ಕಂದನ ತಾಯಿ ಹಿಡಿದಪ್ಪಿ ಸಂತೈಸುವಂತೆ
ನೋವಲಿ ಮಿಡಿದ ಬಲಗೈಯ ಹಿಡಿದು ನುಡಿಯಿತು, ಇನ್ನು ನೀ ವಿಶ್ರಮಿಸು
ನಾನಿರುವೆ ನಿನ್ನ ಹಿಂದೆ
ನಡೆಸಿತು ಎಲ್ಲ ಕಲಾಪ,ಆಗತಾನೆ ನಡೆಯಲು ಆರಂಭಿಸಿದ ಮಗುವಂತೆ
ಏಳುತ ಬೀಳುತ, ಆದರೆ ಛಲ ಬಿಡದ
ತ್ರಿವಿಕ್ರಮನಂತೆ
ಆಗುವೆಯ ನೀ ನನ್ನ ಎಡದ ಕೈ
ಬಿದ್ದಾಗ ಒದುಗುವ ರಕ್ಷಣಾ ಕವಚದಂತೆ
ಮೇಲಿಂದ ಉರುಳುವಾಗ ತೆರೆಯುವ ಪಾರಾಚ್ಯುಟಿನಂತೆ
ಇದ್ದು ಕಾಣದಿರುವ ಅಂತರಾತ್ಮದಂತೆ
ಡಾ. ರುಕ್ಮಿಣಿ