ನುಗ್ಗೆ ಎಂಬ ಸಂಜೀವಿನಿ

ನುಗ್ಗೆ ಎಂಬ ಸಂಜೀವಿನಿ

ನಮ್ಮ ದಕ್ಷಿಣ ಭಾರತದಲ್ಲಿ ಮೂಲಭೂತವಾಗಿ ಬೆಳೆದುಕೊಂಡು ಬಂದಿರುವ ನುಗ್ಗೆಯ ಮರವು ನಮ್ಮೆಲರಿಗೂ ಚಿರಪರಿಚಿತವೇ. ಬರಗಾಲವಿದ್ದರೂ ಹಸಿರು ಎಲೆಗಳಿಂದ ಈ ಮರವು ಕಂಗೊಳಿಸುತ್ತದೆ. ಈ ಮರವನ್ನು ಬೆಳೆಸುವುದು ಅತೀ ಸುಲಭ ಹಾಗು ಆರೈಕೆಯೂ ಕಡಿಮೆ.

ಮೋರಿಂಗ ಒಲಿಫೆರಾ” ಎಂಬ ವೈಜ್ಞಾನಿಕ ಹೆಸರಿಂದ ಕರೆಯಲ್ಪಡುವ ನುಗ್ಗೆಯು ಬಹಳ ಬೇಡಿಕೆಯುಳ್ಳ ತರಕಾರಿಯಾಗಿದೆ. ಇದರ ಹೂವನ್ನು “ಮೋರಿಂಗ ಫ್ಲವರ್” ನುಗ್ಗೆಕಾಯಿಯನ್ನು “ಡ್ರಮ್ ಸ್ಟಿಕ್” ಎಂದು ಕರೆಯಲಾಗುತ್ತದೆ. ಎತ್ತರಕ್ಕೆ ಬೆಳೆದು ರೆಂಬೆಗಳನ್ನು ಚಾಚಿ ಬೆಳೆವ ಮರದಲ್ಲಿ ಪುಟ್ಟ ಹಸಿರು ಎಲೆಗಳು, ಬಿಳಿಯ ಹೂಗಳು ಹಾಗು ಹಸಿರು ಉದ್ದನೆಯ ನುಗ್ಗೆಕಾಯಿ ಕೂಡ ಕಂಡುಬರುತ್ತದೆ. ನುಗ್ಗೆಯ ಎಲೆಗಳಿಂದ ಪಲ್ಯ, ಕೂಟುಗಳು, ಹೂವಿನಿಂದ ಪಲ್ಯ, ಹಾಗು ಕಾಯಿಯಿಂದ ಸಾರು, ಪಲ್ಯಗಳನ್ನು ತಯಾರಿಸಲಾಗುತ್ತದೆ.

ತನ್ನ ಪ್ರತಿಯೊಂದು ಭಾಗಗಳಲ್ಲಿ ತನ್ನದೇ ವೈಶಿಷ್ಟ ಹೊಂದಿರುವ ನುಗ್ಗೆಯು ಅನಾದಿಕಾಲದಿಂದಲೂ ಆಯುರ್ವೇದ, ಯುನಾನಿ ಹಾಗು ನಾಟಿ ಔಷಧಗಳಲ್ಲಿ ನುಗ್ಗೆಯ ಬೇರು, ತೊಗಟೆ, ಅಂಟು, ಎಲೆ, ಕಾಯಿ ಹೂ, ಬೀಜಗಳನ್ನೂ ಬಳಸಲ್ಪಟ್ಟಿದೆ. ನುಗ್ಗೆಯ ಸೊಪ್ಪು ಸಂಜೀವಿನಿಯೆಂದು ಹೇಳಿದರೆ ತಪ್ಪಾಗಲಾರದು. ಎಲ್ಲಾ ರೀತಿಯ ಪೌಷ್ಟಿಕಾಂಶಕಗಳನ್ನು ಹೊಂದಿರುವ ನುಗ್ಗೆಯಲ್ಲಿ ಔಷಧೀಯ ಗುಣಗಳು ಬಹಳಷ್ಟಿವೆ. ಮಧುಮೇಹ, ರಕ್ತದೊತ್ತಡ, ಹೃದಯ ರೋಗಗಳನ್ನು ತಡೆಗಟ್ಟುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಮುತ್ತಿನ ಸಮಸ್ಯೆ, ಬಂಜೆತನ, ಬಿಳಿ ಸೆರಗಿನಂತಹ ಸಮಸ್ಯೆ ಉಳ್ಳವರು ನಿತ್ಯ ನುಗ್ಗೆಯ ಸೊಪ್ಪಿನಿಂದ ತಯಾರಿಸಿದ ಆಹಾರವನ್ನು ಸೇವಿಸುವುದರಿಂದ ಕ್ರಮೇಣ ಆರೋಗ್ಯದಲ್ಲಿ ವೃದ್ಧಿ ಕಾಣಬಹುದಾಗಿದೆ, ಅಲ್ಲದೆ ಪುರುಷರ ಬಂಜೆತನಕ್ಕೂ ಉಪಾಯಕಾರಿ. ನುಗ್ಗೆ ಕಾಯಿ ಕ್ಯಾಲ್ಸಿಯಂ, ಫಾಸ್ಪರಸ್, ಕಬ್ಬಿಣ ಮತ್ತು ಪೊಟ್ಯಾಸಿಯಮ್ ಮುಂತಾದ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ಫೈಬರ್, ವಿಟಮಿನ್ ಎ, ಬಿ, ಸಿ, ಡಿ, ಕ್ಯಾಲ್ಸಿಯಂ, ಪ್ರೋಟೀನ್, ಕಾರ್ಬೋಹೈಡ್ರೇಟ್, ರಂಜಕ, ಪೊಟ್ಯಾಸಿಯಮ್, ಕಬ್ಬಿಣ, ಮೆಗ್ನೀಸಿಯಮ್, ತಾಮ್ರ, ಮ್ಯಾಂಗನೀಸ್, ಸೋಡಿಯಂ, ಸತು, ಸೆಲೆನಿಯಮ್ ಇತ್ಯಾದಿ ಪೋಷಕಾಂಶಗಳಿಂದ ಕೂಡಿದ್ದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.

ಅತಿಯಾಗಿ ಜನರಲ್ಲಿ ಕಾಡುವ ಬೊಜ್ಜು, ಹಾಗು ತೂಕ ಇಳಿಸುವುದಕ್ಕೂ ಸಹ ನುಗ್ಗೆ ಉಪಯುಕ್ತ. ಮೂಳೆಗಳಲ್ಲಿನ ಕ್ಯಾಲ್ಸಿಯಂ ಕೊರತೆಗೆ ಇದು ಬಹಳ ಉಪಯುಕ್ತ. ಆಹಾರವಾಗಿ ಅಲ್ಲದೆ ನುಗ್ಗೆಯ ಎಲೆಗಳಿಂದ ಸೂಪ್ ಗಳನ್ನೂ ಸಹ ತಯಾರಿಸುತ್ತಾರೆ. ನುಗ್ಗೆಯ ಸೇವನೆಯಿಂದ ಚರ್ಮದ ಕಾಂತಿಯು ಹೆಚ್ಚುತ್ತದೆ. ಇದರ ಎಲೆಗಳಲ್ಲಿ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಮತ್ತು ಗಾಯಗಳನ್ನು ಗುಣಪಡಿಸುವ ಶಕ್ತಿ ಇದೆ. ನುಗ್ಗೆಯ ಪುಡಿಯು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳುತ್ತಿರುವರು.

ರುಚಿಕರ ಖಾದ್ಯಗಳನ್ನು ತಯಾರಿಸುವದಕ್ಕಲ್ಲದೆ ಬಹಳಷ್ಟು ಔಷಧೀಯ ಗುಣಗಳನ್ನು ಹೊಂದಿರುವ ನುಗ್ಗೆಯು ಸಂಜೀವಿನಿಯೇ ಸರಿ.

ಶಿಲ್ಪ

Related post

Leave a Reply

Your email address will not be published. Required fields are marked *