ನೆನಪಿನ ಸಖ
ಒಂದು ಕಾಲದಲ್ಲವನು
ನನ್ನ ಮಾತುಗಳಿಗೆಲ್ಲಾ
ಕಿವಿಯಾದವನು
ನನ್ನ ನಗುವನ್ನೂ
ಬೊಗಸೆಯಲ್ಲಿ ಹಿಡಿದವನು
ನನ್ನ ಹುಚ್ಚು ಆಸೆಗಳಿಗೆ
ಬಣ್ಣ ಹಚ್ಚಲು ಸಹಕರಿಸಿದವನು
ಹೇಗೆ ಮರೆಯಲಿ ಅವನನ್ನು
ಅವನ ಸರಳತೆಯನ್ನು
ಸಜ್ಜನಿಕೆಯನ್ನು
ನಾನು ಅತ್ತರೆ
ಏನು ಮಾಡಬೇಕೆಂದು
ತಿಳಿಯದೆ ಪೇಚಾಡುತ್ತಿದ್ದವನು
ಪೆಚ್ಚು ಮೋರೆ ಹಾಕುತ್ತಿದ್ದವನು
ಎಷ್ಟೋ ಕಾಲ ನಾನು
ಅವನ ಕಡೆಗಣಿಸಿದ್ದರೂ
ಕಂಗೆಡದೆ, ತುಂಬು
ಹೃದಯದಿಂದ ಹಾರೈಸಿದವನು
ಹರಸುತ್ತಲೇ ಇರುವವನು
ಹೇಗೆ ಮರೆಯಲಿ ಅವನನ್ನು
ಮರೆತಿದ್ದೇನೆ ಎಂಬಂತೆ
ನಟಿಸಬಹುದು ಅಷ್ಟೇ
ಮರೆತರೆ, ಬಾಳ ಹೊತ್ತಿಗೆಯಲ್ಲಿ
ಎಲ್ಲೋ ಒಮ್ಮೊಮ್ಮೆ
ಮಾತ್ರವೇ ಇಣುಕುವ
ಸುಂದರ, ಸುಮಧುರ
ಹರೆಯದ, ಹಸಿ ಹೃದಯದ
ಹಾಳೆಯೊಂದನ್ನೂ, ಅದರ
ಆರ್ದ್ರತೆಯನ್ನು ನಾನೇ
ಕಳೆದುಕೊಂಡಂತೆ ಅಲ್ಲವೇ……..

ಸೌಜನ್ಯ ದತ್ತರಾಜ