ನೆನಪು

ನಿನ್ನ ನೆನಪುಗಳೆನ್ನ
ಮನದ ತಂತಿಯ
ಮೀಟಿ, ನೋವಿನಾ
ರಾಗವನು ತಾ
ನುಡಿಸುತಿಹುದು ;

ಬೆಳದಿಂಗಳೂ ಇಂದು
ಸುಡುವ ಬಿರುಬಿಸಿಲಾಗಿ
ಅದರ ಜ್ವಾಲೆಗಳೆನ್ನ
ಹೂ ಮನವ ಬೆಂಬೆತ್ತಿ
ಕಾಡುತಿಹುದು !

ನನ್ನ ಮನವದು ತಾನು
ನಿನ್ನ ಬರುವಿಕೆಗಾಗಿ
ಮಳೆಹನಿಗೆ ಬಾಯ್ದೆರೆದ
ಚಾತಕ ಪಕ್ಷಿಯೊಲು
ಕಾದು ಕುಳಿತಿಹುದು;

ನನ್ನ ಹೂ ಕಣ್ಗಳಲಿ
ನಿನ್ನ ಕಾಣುವ ಆಸೆ
ಮುಳ್ಳಂತೆ ಹೊಕ್ಕಿರಲು
ಕಣ್ರೆಪ್ಪೆಗಳದರೊಡನೆ
ಕಾವಲಿಹುದು !

ನನ್ನ ಮನದಾಗಸದ
ಚಂದ್ರ ನೀನಿಲ್ಲದೆಯೆ
ಬೆಲ್ಲ ಜಜ್ಜಿದ ಕಲ್ಲು
ಮೂಲೆಯಲ್ಲಿರುವಂತೆ
ಅಳುತಲಿಹುದು !

ನನ್ನನುಮತಿಯಿಲ್ಲದೆ,
ನೆನಪುಗಳ ರಾಶಿಯನು
ಮಡಿಲಿಗೆರೆದ ಓ ಸಖನೆ
ನೀನೆಲ್ಲಿರುವೆಯೆಂದು
ಮನ ಕೇಳುತಿಹುದು !!

ಶ್ರೀವಲ್ಲಿ ಮಂಜುನಾಥ

Related post