ನೆಮ್ಮದಿಯ ಹುಡುಕಾಟ……..?

ನೆಮ್ಮದಿಯ ಹುಡುಕಾಟ……..?

“ಬಿಕರಿಗಿದ್ದರೆ ಹೇಳಿ ನೆಮ್ಮದಿಯು ಒಂದಿಷ್ಟು… ಕೊಳ್ಳುವೆನು ಕೇಳದಲೆ ಮತ್ತದರ ಬೆಲೆಯೆಷ್ಟು”

“ನೆಮ್ಮದಿ” ಸಾಮಾನ್ಯವಾಗಿ ನಾವೆಲ್ಲರೂ ಹೆಚ್ಚಾಗಿ ದಿನನಿತ್ಯ ಬಳಸುವ ಪದ. ಎಷ್ಟೋ ಜನ ಹೇಳುವುದನ್ನು ಕೇಳುತ್ತಿರುತ್ತೇವೆ, “ನನ್ನ ಜೀವನದಲ್ಲಿ ಎಲ್ಲಾ ಇದೆ ಆದರೆ, ನೆಮ್ಮದಿ ಇಲ್ಲಅಂತ.” ಮೇಲಿನ ಉಲ್ಲೇಖದಂತೆ, ನೆಮ್ಮದಿಯು ಎಲ್ಲೋ ಅಂಗಡಿಯಲ್ಲಿ ದುಡ್ಡಿಗೆ ಸಿಗುವ ವಸ್ತುವಾಗಿದ್ದಿದ್ದರೆ ಇಂದು ಅಂಗಡಿಯ ಮುಂದೆ ಸರದಿ ಸಾಲಿನಲ್ಲಿ ನಿಂತು ಎಷ್ಟೇ ದುಡ್ಡು ಕೊಟ್ಟಾದರೂ ಎಷ್ಟೇ ಕಷ್ಟಪಟ್ಟಾದರು ಪಡೆಯುತ್ತಿದ್ದರು. ನೆಮ್ಮದಿ ಇಲ್ಲದ ಜೀವನ ತುಂಬಾ ಘೋರ. ನೆಮ್ಮದಿಯ ಬಗ್ಗೆ ಮಾತನಾಡುವಾಗ ಡಾ. ಜಿ ಎಸ್ ಶಿವರುದ್ರಪ್ಪ ಅವರ ಕವಿತೆ ಸಾಲುಗಳು ಹಾಗೆ ಕಣ್ಣ ಮುಂದೆ ಹಾದು ಹೋಗುತ್ತದೆ.

“ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ.
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆನು ನಮ್ಮೊಳಗೇ.”

ಹೌದಲ್ಲ. ನಮ್ಮೊಳಗಿರುವ ಶಕ್ತಿಯ ಬಗ್ಗೆ ಅರಿವಿಲ್ಲದೆ ನೆಮ್ಮದಿಕೊಸ್ಕರ ಓಡುತ್ತಲೇ ಇದ್ದೇವೆ. ಹುಡುಕುತ್ತಲೇ ಇದ್ದೇವೆ. ನಮ್ಮೊಳಗಡೆ ಇರುವ ಶಾಂತಿ ನೆಮ್ಮದಿಯನ್ನು ಕೂಡ ಬೇರೆಯವರೊಂದಿಗೆ ತುಲನೆ ಮಾಡುತ್ತೇವೆ. ಅವರು ಸರಿ ಇಲ್ಲ, ಇವರು ಸರಿ ಇಲ್ಲ. ಅವರಿಂದ ನನ್ನ ನೆಮ್ಮದಿ ಎಲ್ಲಾ ಹಾಳಾಯಿತು. ಅಯ್ಯೋ ಅವರ ಹತ್ತಿರ ನಾನು ಮಾತಾಡಿದ್ದೆ ತಪ್ಪಾಯಿತು ಎಂದು ಏನೇನೋ ಬಡಬಡಾಯಿಸುತ್ತ ನಾವು ನೆಮ್ಮದಿಯಾಗಿರದೆ, ಬೇರೆಯವರನ್ನು ನೆಮ್ಮದಿಯಾಗಿರಲು ಬಿಡದೆ, ಈ ದ್ವಂದದಲ್ಲೇ ಬದುಕಿನ ಅರ್ಧ ಆಯುಷ್ಯ ಕಳೆದುಕೊಳ್ಳುತ್ತೇವೆ.

ಜೀವನದಲ್ಲಿ ನೆಮ್ಮದಿಯಿಂದಿದ್ದರೆ, ನಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಅಂದರೆ ನಮ್ಮ ಮಾನಸಿಕ ನೆಮ್ಮದಿ ಚೆನ್ನಾಗಿಲ್ಲದೆ ಹೋದಲ್ಲಿ ನಮ್ಮ ಆರೋಗ್ಯದ ಮೇಲೆ ಅದು ಕೆಟ್ಟ ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ. ನಮ್ಮ ಮಾನಸಿಕ ಸಮತೋಲನವನ್ನು ಕಾಪಾಡುವುದಕ್ಕೆ ನಾವು ನೆಮ್ಮದಿಯಾಗಿರಬೇಕು. ನಮ್ಮ ಜೀವನದಲ್ಲಿ ನಮ್ಮ ಗುರಿಯನ್ನು ತಲುಪಲು ಎಂತಹ ಸಹಾಸಕ್ಕಾದರು ಕೈ ಹಾಕುತ್ತೇವೆ. ಕಷ್ಟ ಪಡುತ್ತೇವೆ. ಸಾಧಿಸುತ್ತೇವೆ ಕೂಡಾ. ಆ ಸಾಧನೆಗಾಗಿ ರಾತ್ರಿ ಹಗಲು ಶ್ರಮ ಪಡುತ್ತೇವೆ. ದಿನನಿತ್ಯ ಸಾಧನೆಗಾಗಿ ಒತ್ತಡ ಸಹಿತ ಬದುಕಿನ ಮಧ್ಯೆ ಜೀವಿಸುತ್ತಿದ್ದೇವೆ. ಆದರೆ, ಸಾಧಿಸಿದಾಗ ಅಂತಿಮವಾಗಿ ದೊರೆಯುವುದು ತೃಪ್ತಿಯೇ ಹೊರತು ನೆಮ್ಮದಿ ಮಾತ್ರ ಮರೀಚಿಕೆ.

ಆದುನಿಕ ಯುಗದಲ್ಲಿ ನಾವು ವ್ಯಕ್ತಿಗಳನ್ನು ಪ್ರೀತಿಸುವ ಬದಲು ವಸ್ತುಗಳನ್ನು ಪ್ರೀತಿಸುತ್ತಿದ್ದೇವೆ. ಸಂಬಂಧಗಳ ಪರಿಕಲ್ಪನೆ ಬದಲಾಗುತ್ತಿದೆ. ಜೀವನ ಯಾಂತ್ರಿಕವಾಗುತ್ತಿದೆ. ನಮ್ಮ ಜೀವನದ ಸುಧೀರ್ಘ ಪಯಣದಲ್ಲಿ ನಾವು ಯಾವುದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೇವೆ ಎಂಬುವುದರ ಮೇಲೆ ನಮ್ಮ ನೆಮ್ಮದಿ ಇದೆ. ನಮ್ಮವರೊಂದಿಗೆ ಸಮಯ ಕಲೆತು ನಗುನಗುತ್ತಾ ಮಾತನಾಡಲು ನಮ್ಮಲ್ಲಿ ಸಮಯವಿಲ್ಲ. ನಮ್ಮವರಿಗೆ ನಾವೇ ಪರಕೀಯರಾಗುತ್ತಿದ್ದೇವೆ. ಯಾಂತ್ರಿಕ ಬದುಕಿನೊಂದಿಗಿನ ಜೀವನಕ್ಕೆ ನೆಮ್ಮದಿ ಸಿಗಲು ಸಾಧ್ಯವೇ?.

ನಮ್ಮ ಮನಸ್ಸಿನಲ್ಲಿ ಚಿಂತೆಗಳ ಸರಮಾಲೆಯ ಯುದ್ಧ ನಡೆಯುತ್ತಿರುತ್ತದೆ. ಚಿಂತೆಗೆ ಕೊನೆ ಎಂಬುದಿದೆಯೇ? ಚಿಂತೆಗೂ ಚಿತೆಗೂ ಒಂದು ಸಣ್ಣ ವ್ಯತ್ಯಾಸ ಚಿತೆ ಇಡೀ ದೇಹವನ್ನು ಸುಟ್ಟರೆ, ಚಿಂತೆ ನಮ್ಮ ಇಡೀ ಜೀವನವನ್ನೇ ಹಂತ ಹಂತವಾಗಿ ನಾಶ ಮಾಡುತ್ತದೆ. ನಮ್ಮ ನಮ್ಮಲ್ಲೇ ಪರಕೀಯ ಭಾವನೆ. ಆಗೊಂದು ಕಾಲದಲ್ಲಿ ಕೂಡು ಕುಟುಂಬ ಪದ್ಧತಿ ಇತ್ತು. ಸಾಯಂಕಾಲ ಆದರೆ ಸಾಕು ಎಲ್ಲಾರು ಸೇರಿ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಾ ಮನಸ್ಸಿಗೆ ಮುದ ನೀಡುವಂತಹ ಆಟಗಳನ್ನು ಆಡುತ್ತಾ ತಮ್ಮ ಜೀವನದಲ್ಲಿ ನೆಮ್ಮದಿ ಕಾಣುತ್ತ ಇದ್ದರು. ಆದರೆ ಕಾಲಕ್ರಮೇಣ ಅನೇಕ ಬದಲಾವಣೆಗಳು ಆಗುತ್ತಾ ಕೂಡು ಕುಟುಂಬ ಕಿರಿ ಕಿರಿ ಅನ್ನುವ ಮಟ್ಟಕ್ಕೆ ಇಂದು ಬಂದು ನಿಂತಿದ್ದೇವೆ.

ನೆಮ್ಮದಿ ಸಿಗುವಂತಹ ಅನೇಕ ಸೌಲಭ್ಯಗಳು ನಮ್ಮ ಸುತ್ತ ಮುತ್ತಲೇ ಇದೆ. ಆದರೆ, ಹುಡುಕುವ ಪ್ರಯತ್ನದಲ್ಲಿ ಹಾಗು ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವುದರಲ್ಲಿ ನಾವು ಸೋಲುತ್ತಾ ಇದ್ದೇವೆ. ನಮ್ಮ ಮನಸ್ಸನ್ನು ಕೆಟ್ಟ ಯೋಚನೆಗಳೊಂದಿಗೆ ರಾಡಿ ಮಾಡಿಕೊಂಡಿದ್ದೇವೆ. ನೆಮ್ಮದಿ ಸಿಗಲು ಹಲವಾರು ಅವಕಾಶಗಳು ನಮ್ಮ ಕಣ್ಣ ಮುಂದಿವೆ. ನಮ್ಮ ಮನಸ್ಸನ್ನು ಹಾಗು ನಮ್ಮ ಕಣ್ಣನ್ನು ತೆರೆದು ನೋಡಿದಾಗ ಪ್ರಪಂಚ ಎಷ್ಟು ಸುಂದರವಾಗಿದೆ ಎಂದು ಅನಿಸದೆ ಇರಲಾರದು.

ಬದಲಾಗಲೇಬೇಕು. ಬದಲಾವಣೆ ಜಗದ ನಿಯಮ. ನಾವು ನಮಗಾಗಿ, ನಮ್ಮವರಿಗಾಗಿ, ಬದಲಾವಣೆ ಆಗಲೇಬೇಕು. ನಮ್ಮನ್ನು ನಾವು ಪ್ರೀತಿಸಬೇಕು. ದಿನದಲ್ಲಿ ಸ್ವಲ್ಪ ತಾಸು ನಮ್ಮವರಿಗಾಗಿ ಮೀಸಲಿಡಬೇಕು ಮನ ಬಿಚ್ಚಿ ಮಾತಾಡಬೇಕು. ನೆಮ್ಮದಿ ಇರುವುದು ಪ್ರಾಪಂಚಿಕ ಸುಖಗಳಿಂದಲ್ಲ. ನಮ್ಮ ಮಾನಸಿಕ ಸ್ವಾಸ್ಥ್ಯದಿಂದ. ನಮ್ಮ ಸುತ್ತಮುತ್ತ ನಮ್ಮ ಮನಸ್ಸಿಗೆ ಕಿರಿ ಕಿರಿ ನೀಡುವಂತಹ ಹಲವಾರು ಘಟನೆಗಳು ಜರುಗುವ ಸಾಧ್ಯತೆಗಳಿವೆ. ಆದರೆ ನಾವು ಅದನ್ನು ನೋಡುವ ದೃಷ್ಟಿಕೋನಗಳು ಬದಲಾಗಬೇಕು. ಇಲ್ಲವೆಂದರೆ ಅದನ್ನು ಅಲ್ಲಿಯೇ ಮರೆತು ಮುಂದೆ ಸಾಗಬೇಕು. ನೆಮ್ಮದಿಯ ಹುಡುಕಾಟ ಕೊನೆಯಾಗಲಿ….

“ಮನುಷ್ಯ ನೆಮ್ಮದಿಯಿಂದ ಇರಬೇಕಾದರೆ MONEY ಸ್ಥಿತಿ ಚೆನ್ನಾಗಿ ಇರಬೇಕು ಅಂತ ಇಲ್ಲ. ಮನಸ್ಥಿತಿ ಚೆನ್ನಾಗಿದ್ದರೆ ಸಾಕು”

ನಿಮ್ಮ
ಸೌಮ್ಯ ನಾರಾಯಣ್

Related post

8 Comments

 • “ಮನುಷ್ಯ ನೆಮ್ಮದಿಯಿಂದ ಇರಬೇಕಾದರೆ MONEY ಸ್ಥಿತಿ ಚೆನ್ನಾಗಿ ಇರಬೇಕು ಅಂತ ಇಲ್ಲ. ಮನಸ್ಥಿತಿ ಚೆನ್ನಾಗಿದ್ದರೆ ಸಾಕು”
  ಸತ್ಯವಾದ ಮಾತು….
  ನೆಮ್ಮದಿ ಎಲ್ಲೋ ಇಲ್ಲ… ನಮ್ಮೊಳಗೇ ಇದೆ ಅದನ್ನು ಕಾಣುವ ಅನುಭವಿಸುವ ಮನಸ್ಸಾಗಬೇಕು..

  ಉತ್ತಮ ಲೇಖನ…ಅಭಿನಂದನೆಗಳು

  ವಾಸುಕಿ
  ಬೆಂಗಳೂರು

 • True

 • ನೆಮ್ಮದಿ ಎನ್ನುವುದು ಅಂಗಡಿಯಲ್ಲಿ ಸಿಗುವ ವಸ್ತುಗಳಲ್ಲ. ಅದು ನಮ್ಮ-ನಿಮ್ಮಲ್ಲಿಯಿರುವ ಪ್ರೀತಿ-ವಿಶ್ವಾಸದಲ್ಲಿ ಎಂಥ ನೈಜವಾದ ಮಾತು. ಈ ಲೇಖನ ನೆಮ್ಮದಿಯ ಬದುಕಿಗೆ ಅರ್ಥಪೂರ್ಣವಾದ ಬರಹವಾಗಿದೆ.

 • ಉತ್ತಮ ಲೇಖನ, Soumya 🙂

 • ಧನ್ಯವಾದಗಳು ಸಾರ್ ನಿಮ್ಮ ಅನಿಸಿಕೆಗೆ. ನಿಮ್ಮ ಅಭಿಪ್ರಾಯಗಳೇ ನಮಗೆ ಪ್ರೇರಣಾಶಕ್ತಿ

 • Thank u for ur feedback ma.

 • ಧನ್ಯವಾದ ಸೌಮ್ಯ. ‌ನಿನ್ನ ಕೆಲಸಗಳ ನಡುವೆಯೂ ಓದಿ ನೀಡಿರುವ ಪ್ರತಿಕ್ರಿಯೆಗೆ . ಹೀಗೆ ನಿನ್ನ ಬೆಂಬಲ ಯಾವಾಗಲೂ ಇರಲಿ.‌ನಿಮ್ಮ ಹಾರೈಕೆಗೆ ಚಿರಋಣಿ

 • Thank u very much ur feedback ma’am. Ur blessing always with me.

Leave a Reply

Your email address will not be published. Required fields are marked *