ನೇತಾಜಿಯ ಮಹಾ – ಪಯಣ (India>Russia>Germany>Japan)

ನೇತಾಜಿಯ ಮಹಾ – ಪಯಣ

“ಸ್ವತಂತ್ರ ಭಾರತದ ನನ್ನ ಕನಸು ನನ್ನನ್ನು ಇಲ್ಲಿ ಕರೆತಂದಿದೆ , ಬ್ರಿಟೀಷರಿಗೆ ಪಾಠ ಕಲಿಸಲು ಜರ್ಮನಿ, ಇಟಲಿ ಮತ್ತು ಜಪಾನ್ ನಂತಹ ಸ್ನೇಹಿತ ರಾಷ್ಟ್ರಗಳ ಬೆಂಬಲ ಬೇಕು, ಸ್ವಾತಂತ್ರಕ್ಕಾಗಿ ನಮ್ಮ ರಕ್ತವನ್ನು ಚೆಲ್ಲಲು ನಾವು ಸಿದ್ಧರಿದ್ದೇವೆ” ಎಂದು ನುಡಿದದ್ದು ನಮ್ಮೆಲ್ಲರ ಪ್ರೀತಿಯ “ನೇತಾಜಿ ಸುಭಾಷ್ ಚಂದ್ರ ಬೋಸ್” ಅದೂ ಯಾರ ಕೂಡ? ಜಗತ್ತು ಕಂಡ ವಿಲಕ್ಷಣ ದಂಡನಾಯಕ, ಪರಮ ಕ್ರೂರಿಯೂ ಆದ ನಾಜಿ ನಾಯಕ “ಅಡಾಲ್ಫ್ ಹಿಟ್ಲರ್” ನೊಂದಿಗೆ.

ಬ್ರಿಟೀಷರ ಕಣ್ತಪ್ಪಿಸಿ 20 ನೇ ಶತಮಾನದಲ್ಲಿ ಭಾರತದಿಂದ ಸುಭಾಷ್ ಚಂದ್ರ ಬೋಸ್ ಮಾಡಿದ “ಮಹಾಯಾನ” ಎಂತವರಿಗೂ ಮೈ ರೋಮಾಂಚನಗೊಳ್ಳುವಂತೆ ಮಾಡಿದ್ದು ಹಾಗು ಸ್ವತಂತ್ರ ಭಾರತಕ್ಕೆ ಅವರು ಕೈಗೊಂಡ ಈ ಅದ್ಬುತ ಯೋಜನೆ ಬ್ರಿಟಿಷರ ತೊಡೆಗಳಲ್ಲಿ ನಡುಕ ಹುಟ್ಟಿಸಿದ್ದು ಸುಳ್ಳಲ್ಲ.

ಸುಭಾಷ್ I N A ಅಧಿಕಾರಿಗಳಾದ ಎ. ಸಿ ಚಾರ್ರೆರ್ಜಿ , ಎಂ ಝೆಡ್ ಕಿಯಾನಿ ಹಾಗು ಹಬೀಬುರ್ ರೆಹಮಾನ್ ರೊಂದಿಗೆ

1941 ಶಿಶಿರ ಋತುವಾದ ಜನವರಿಯ ಒಂದು ದಿನ, ಬಹಳ ದಿನಗಳಿಂದ ರಚಿಸಿದ ಯೋಜನೆಯನ್ನು ಸುಭಾಷರು ಕಾರ್ಯರೂಪಕ್ಕೆ ತರಲೇಬೇಕಿತ್ತು. ಸೆರೆಮನೆಯಲ್ಲಿ ಮಾಡಿದ ಏಳು ದಿನಗಳ ಉಪವಾಸದ ಪರಿಣಾಮವಾಗಿ ಸುಭಾಷ್ ರನ್ನು ಬ್ರಿಟಿಷ್ ಸರ್ಕಾರವು ಕಲ್ಕತ್ತಾ ಜೈಲಿನಿಂದ ಎಲ್ಗಿನ್ ರಸ್ತೆಯ ಸುಭಾಷ್ ರ ನಿವಾಸದಲ್ಲೇ ಗೃಹಬಂಧನದಲ್ಲಿಟ್ಟಿತ್ತು. ಪೋಲೀಸರ ಬಿಗಿಯಾದ ಕಾವಲಿದ್ದ ಆ ಮನೆಗೆ ಹೋಗಿಬರುವುವರು, ನೆಂಟರು, ಕೆಲಸದವರು, ಅಪರಿಚಿತರು ಹಾಗು ವಿಳಾಸಕ್ಕೆ ಬರುತಿದ್ದ ಪತ್ರಗಳೆಲ್ಲದರ ಮೇಲೆ ಪೊಲೀಸ್  ಪಡೆಯ ಹದ್ದಿನ ಕಾವಲಿತ್ತು. ಒಂದು ತಿಂಗಳು ಹೊರಗೆ ಏನೂ ತಿಳಿಯದ ಹಾಗೆ ಸುಭಾಷ್ ಸೋದರಳಿಯ ಸಿಸಿರ್ ನೊಂದಿಗೆ ಯೋಜನೆಯೊಂದನ್ನು ರೂಪಿಸಿದ್ದರು. ಮನೆಗೆ ಪೊಲೀಸ್ ಪಡೆ ಅಷ್ಟೇ ಅಲ್ಲದೆ ಬ್ರಿಟಿಷ್ ಸರ್ಕಾರದ ಗುಪ್ತಚರ ಇಲಾಖೆಯ ಜನರು ಸಹ ಮಾರುವೇಷದಲ್ಲಿ ಕಾವಲಿದ್ದರು. ಗೃಹಬಂಧನದಲ್ಲಿದಾಗಿನಿಂದಲೇ ಸುಭಾಷರು ತಮ್ಮ ಮುಖ ಚೌರವನ್ನು ಮಾಡದೆ ದಟ್ಟವಾದ ಗಡ್ಡವನ್ನು ಬಿಟ್ಟಿದ್ದರು. ಮನೆಗೆ ಬರುತ್ತಿದ್ದ ತನ್ನ ಆಪ್ತರ ನೆರವಿನಿಂದ ಈಗಿನ ಪಾಕಿಸ್ತಾನದ ಪೇಷಾವರ ದಲ್ಲಿದ್ದ ತಮ್ಮ ಪಾರ್ಟಿಯ ಸದಸ್ಯರಾದ “ಮಿಯಾನ್ ಅಕ್ಬರ್ ಶಾಹ್” ವಿಳಾಸಕ್ಕೆ ನೆರವಿಗಾಗಿ ಟೆಲಿಗ್ರಾಂ ಕಳಿಸಿಯಾಗಿತ್ತು.

ನೇತಾಜಿ ಸಿಸಿರ್ ನೊಂದಿಗೆ ಆ ರಾತ್ರಿ ಪ್ರಯಾಣಿಸಿದ ಕಾರು

ಸೋದರಳಿಯ ಸಿಸಿರ್ BLA – 7169 ನೋಂದಣಿ ಸಂಖ್ಯೆಯ ಪುಟ್ಟ ಕಾರೊಂದನ್ನು ಎರಡು ವಾರದ ಮುಂಚೆಯೇ ಖರೀದಿಸಿ ಅದನ್ನು ‘ಬುರ್ದ್ವಾನ್’ ಜಿಲ್ಲೆಯಲೆಲ್ಲಾ ತಿರುಗಾಡಿ ಪರೀಕ್ಷಿಸಿದ್ದರು. ಆ ಕಾರು ಗಂಟೆಗೆ 108 ಕಿ ಮೀ ವೇಗದಲ್ಲಿ ಚಲಿಸುವಂತದ್ದಾಗಿತ್ತು. ಆ ಕಾರಲ್ಲಿ ಸಿಸಿರ್ ಸುಭಾಷ್ ರ ಮನೆಗೆ ರಾತ್ರಿ ಆಗಮಿಸಿ ಪೋಲೀಸರ ಪ್ರಶ್ನೆಗೆ ತನ್ನ ಮಾವ ಎರಡನೇ ಮಹಾಯುದ್ಧದ ವಾರ್ತೆಯನ್ನು ಕೇಳಬೇಕಾಗಿದೆಯೆಂದು ಅದಕ್ಕಾಗಿ ಬಂದಿರುವೆನೆಂದು ತಾನು ತಂದಿದ್ದ ರೇಡಿಯೋ ಒಂದನ್ನು ತೋರಿಸಿದನು. ಸಂದೇಹಿಸದೆ ಪೊಲೀಸರು ಸಿಸಿರ್ ನನ್ನ ಒಳಗೆ ಬಿಟ್ಟಿದ್ದರು. ಸುಭಾಷ್ ಮತ್ತು  ಸಿಸಿರ್ ಮುಂಚೆಯೇ ಹೊಂದಿಸಿಕೊಂಡಿದ್ದ ಪಠಾಣರ ವೇಷದಲ್ಲಿ ಜನವರಿ 16 ರ ಮಧ್ಯರಾತ್ರಿ ಕಾವಲಿನವರ ಕಣ್ತಪ್ಪಿಸಿ ಕಾರಿನೊಳಗೆ ತಲುಪಿಕೊಂಡರು. ತುಂಬಾ ಚಿಕ್ಕದಾದ ಆ ಕಾರನ್ನು ಸಿಸಿರ್ ಎರಡು ವಾರದ ಮುಂಚೆಯೇ ಓಡಿಸಿ ಪರೀಕ್ಷಿಸಿ ಇಟ್ಟಿಕೊಂಡಿದ್ದರು. ಕಾರಿನೊಳಗೆ ತಲುಪಿಕೊಂಡ ಮೇಲೆ ತೆಗೆದಿದ್ದ ಎರಡು ಬಾಗಿಲುಗಳನ್ನು ಸದ್ದು ಬಂದೀತೆಂದು ಮುಚ್ಚದೇ ಹಾಗೆ ಮುಚ್ಚಿಯೂ ಮುಚ್ಚದ ಸ್ಥಿತಿಯಲ್ಲಿ ಕಾರನ್ನು ಸ್ಟಾರ್ಟ್ ಮಾಡಿ ಸ್ವಲ್ಪ ದೂರ ಕ್ರಮಿಸಿದ ಮೇಲೆಯೇ ಇಬ್ಬರು ಬಾಗಿಲುಗಳನ್ನು ಭದ್ರವಾಗಿ ಹಾಕಿಕೊಂಡಿದ್ದು.

ಕಾರು ಅಲ್ಲಿಂದ ಹೊರಟು ಸುಭಾಷರ ಸಂಬಂದಿಗಳಾದ ಅಶೋಕ್ ನಾಥ್ ಮತ್ತು ಮಿರಾ ಬೋಸ್ ರ ಮನೆಯ ಹತ್ತಿರ ನಿಂತಿತು. ಅಶೋಕ್ ನಾಥ್ ಹಾಗು ಮಿರಾ ಬೋಸರು ಸಿಸಿರ್ ನನ್ನ ಗುರುತಿಸಿದರು ಸಹ ಸುಭಾಷ್ ರನ್ನು ಗುರುತಿಸದೆ ಸಿಸಿರ್ ಕರೆತಂದ ಅಥಿತಿಯೆಂದು ಅವರುಗಳ ಜೊತೆ ಊಟವನ್ನು ಸಹ ಮುಗಿಸಿದರು. ಸಿಸಿರ್ ಅವರಿಬ್ಬರನ್ನು ತಮ್ಮ ಜೊತೆ ಕಾರಿನಲ್ಲಿ ಕರೆದುಕೊಂಡು ಹೋಗುವಾಗಲೇ ದಾರಿ ಮದ್ಯೆ ತಮ್ಮ ಮುಂದೆ ಕೂತಿರುವವರು ಸುಭಾಷ್ ಚಂದ್ರ ಬೋಸರೆಂದು ಇಬ್ಬರಿಗೂ ಗೊತ್ತಾಗಿದ್ದು.

‘ಗೊಮೊಹ್’ ರೈಲು ನಿಲ್ದಾಣಕ್ಕೆ ನೇತಾಜಿ ಅವರ ಹೆಸರನ್ನೇ ಇಡಲಾಗಿದೆ

ಕಾರು ಎಲ್ಲೂ ನಿಲ್ಲದೆ ಸೀದಾ ‘ಗೊಮೊಹ್’ ರೈಲು ನಿಲ್ದಾಣಕ್ಕೆ ಬಂದು ತಲುಪಿತು. ಸಿಸಿರ್ ಗೆ ಗೊತ್ತಿದ್ದಿಷ್ಟು, ಸುಭಾಷ್ ರನ್ನು ತಾನು ಯಾರಿಗೂ ತಿಳಿಯದಂತೆ  ದೆಹಲಿಗೆ ಹೊರಡುವ ಕಲ್ಕಾ ಮೇಲ್ ರೈಲನ್ನು ಹತ್ತಿಸಬೇಕೆಂದು ಅಷ್ಟೇ. ಅಲ್ಲಿಂದ ಮುಂದೆ ಸುಭಾಷ್ ದೆಹಲಿಗೆ  ಪಯಾಣಿಸಿದ್ದು ಒಂಟಿಯಾಗಿ. ದೆಹಲಿಯನ್ನು ತಲುಪಿ ಅಲ್ಲಿಂದ ಪೇಷಾವರಿಗೆ ತಲುಪಿದ ಸುಭಾಷರು ಕಾಬುಲ್ ಮೂಲಕ ಮಾಸ್ಕೋ (ರಷ್ಯಾ) ತಲುಪಬೇಕಿತ್ತು. ಪೇಶಾವರದಲ್ಲಿ ಇಳಿದುಕೊಂಡ ಸುಭಾಷರು ಮುಂಚೆಯೇ ಟೆಲಿಗ್ರಾಂ ಕೊಟ್ಟಿದಂತೆ ಅಲ್ಲಿ ‘ಮಿಯಾನ್ ಅಕ್ಬರ್ ಶಾಹ್’ ನನ್ನ ಭೇಟಿಯಾಗಿ ಅವರ ನೆರವಿನಿಂದ ಕಾಬುಲ್ ಗೆ ಪ್ರಯಾಣಿಸಿದರು. ಕಾಬುಲ್ ಪ್ರಯಾಣದುದ್ದಕ್ಕೂ ಪಸ್ತೂನಿಗಳಿರುವುದರಿಂದ ಭಾಷೆ ಸುಭಾಷ್ ರಿಗೆ ತೊಡಕಾಗಿ ಬ್ರಿಟೀಷ್ ಸರ್ಕಾರಕ್ಕಾಗಿ ಕೆಲಸ ಮಾಡುವ ಪಸ್ತೂನಿಗಳು ಕಂಡುಹಿಡಿದುಬಿಡಬಹುದೆಂದು ಮಿಯಾನ್ ಅಕ್ಬರ್ ಶಾಹ್ ಸುಭಾಷರಿಗೆ ಕಿವುಡ ಮೂಕರಂತೆ ನಟಿಸಿ ಪ್ರಯಾಣಿಸಬೇಕೆಂದು ಉಪಾಯ ಸೂಚಿಸಿದ್ದರು. ಅವರ ಸಲಹೆಯಂತೆ ಸುಭಾಷರು ಕಾಬುಲ್ ಗೆ ಬೇಗ ಪ್ರಯಾಣಿಸಿದರು ಸಹ ಅಲ್ಲಿಂದ ಮಾಸ್ಕೋ ಗೆ ತೆರಳಲು 48 ದಿನಗಳ ತನಕ ಕಾಯಬೇಕಾಯ್ತು. ಅಲ್ಲಿಯವರೆಗೂ ಕಾಬೂಲಿನ ಶೋರ್ ಬಜಾರ್ ಎಂಬ ಪ್ರದೇಶದಲ್ಲಿನ ಒಂದು ಮನೆಯಲ್ಲಿ ತಾನು ಒಬ್ಬ ಇನ್ಶೂರೆನ್ಸ್ ಏಜೆಂಟ್ ಎಂದು ಹೆಸರು ಜಿಯಾಉದ್ದೀನ್ ಎಂದು ಪರಿಚಯಿಸಿಕೊಂಡು ಕಾಲ ಕೆಳೆದಿದ್ದರು.

ನಂತರ ಸುಭಾಷರು ಅಗಾಖಾನ್ (ಆಲ್ ಇಂಡಿಯಾ ಮುಸ್ಲಿಂ ಲೀಗ್ ನ ಅಧ್ಯಕ್ಷ) ನೆರವಿನಿಂದ “ಕೌಂಟ್ ಒರ್ಲ್ಯಾಂಡೊ ಮಝೊಟ್ಟಾ” ಎಂಬ ನಕಲಿ ಹೆಸರಿನಲ್ಲಿ ಇಟಾಲಿಯನ್ ಪಾಸ್ಪೋರ್ಟ್ ಸಂಪಾದಿಸಿ ಮಾಸ್ಕೋ ನಗರಕ್ಕೆ ತೆರಳಿದರು. ಬ್ರಿಟೀಷರು ಯಾವತ್ತಿದ್ದರೂ ರಷ್ಯಾಕ್ಕೆ ಹಳೆಯ ವೈರಿಯಾದ್ದರಿಂದ ರಷ್ಯಾ ಬ್ರಿಟಿಷರ ವಿರುದ್ಧ ಹೋರಾಡಲಿಕ್ಕೆ ನೆರವು ನೀಡುತ್ತದೆಂದು ಸುಭಾಷರ ಊಹೆಯಾಗಿತ್ತು, ಆದರೆ ಸುಭಾಷ್ ನಿರೀಕ್ಷಿಸಿದ್ದ ನೆರವು ರಷ್ಯಾ ದಲ್ಲಿ ಸಿಗದಿದ್ದ ಕಾರಣ ಅಲ್ಲಿನ ಜರ್ಮನ್ ದೂತವಾಸಕ್ಕೆ ಭೇಟಿ ನೀಡಿ ರಾಯಭಾರಿ “ಕೌಂಟ್ ವಾನ್ ಡೆರ್ ಸ್ಚುಲೆನ್‌ಬರ್ಗ್‌” ನೆರವಿನಿಂದ ವಿಶೇಷ ವಿಮಾನದಲ್ಲಿ ಬರ್ಲಿನ್ ತಲುಪಿದರು.

ನೇತಾಜಿ ಬರ್ಲಿನ್ ನಲ್ಲಿ ಅಡಾಲ್ಫ್ ಹಿಟ್ಲರ್ ನೊಂದಿಗೆ

ತನ್ನಲ್ಲಿದ್ದ ಸಂಪರ್ಕಗಳನೆಲ್ಲಾ ಬಳಸಿ ಸುಭಾಷರು ಹಿಟ್ಲರ್ ನನ್ನು ಭೇಟಿ ಮಾಡುತ್ತಾರೆ. ಸುಭಾಷರು ತಮ್ಮ ಪತ್ನಿ ಎಮಿಲಿ ತಿಳಿಸಿದಂತೆ ತಮ್ಮೊಡನೆ ಹಿಟ್ಲರ್ ಗಾಗಿ ಬುದ್ಧನ ಚಿಕ್ಕ ಪ್ರತಿಮೆಯೊಂದನ್ನು ಉಡುಗೊರೆಯಾಗಿ ಕೊಡುತ್ತಾರೆ.

ಹಿಟ್ಲರ್ ಅಚ್ಚರಿಯಿಂದ ಸುಮಾರು ಹೊತ್ತು ಅದನ್ನು ದಿಟ್ಟಿಸಿ “ಯಾರೀ ಕುಸ್ತಿಪಟ್ಟು” ಎಂದು ನಗೆಯಾಡುತ್ತಾನೆ.

ಆದರೆ ಸುಭಾಷರು ಬುದ್ಧ ಹಾಗು ಆತನ ಶಾಂತಿ – ಅಹಿಂಸಾ ತತ್ವದ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸುತ್ತಾರೆ.

ಆಗ ಹಿಟ್ಲರ್ “ಶಾಂತಿ? ಅಹಿಂಸಾ? ಹಾಗಾದರೆ ಈ ಮಹಾನುಭಾವರು ಗಾಂಧಿಯವರಿಗಿಂತ ಹಿರಿಯರೋ ಕಿರಿಯರೋ?” ಎಂದು ತನ್ನ ಕೈಯಲ್ಲಿದ್ದ ಆಕೃತಿಯನ್ನು ಪರೀಕ್ಷಿಸುತ್ತಾ ಕೇಳುತ್ತಾನೆ.

ಆಗ ಸುಭಾಷರು ಗೌತಮ ಬುದ್ಧರು ನಮ್ಮೆಲರಿಗಿಂತ ಹಿರಿಯರು ಎಂದು ನಗುತ್ತ ಉತ್ತರಿಸುತ್ತಾರೆ.

ಸುಭಾಷರು “ಸ್ವತಂತ್ರ ಭಾರತದ ನನ್ನ ಕನಸು ನನ್ನನ್ನು ಇಲ್ಲಿ ಕರೆತಂದಿದೆ , ಬ್ರಿಟೀಷರಿಗೆ ಪಾಠ ಕಲಿಸಲು ಜರ್ಮನಿ, ಇಟಲಿ ಮತ್ತು ಜಪಾನ್ ನಂತಹ ಸ್ನೇಹಿತ ರಾಷ್ಟ್ರಗಳ ಬೆಂಬಲ ಬೇಕು, ಸ್ವಾತಂತ್ರಕ್ಕಾಗಿ ನಮ್ಮ ರಕ್ತವನ್ನು ಚೆಲ್ಲಲು ನಾವು ಸಿದ್ಧರಿದ್ದೇವೆ” ಎಂದು ತಿಳಿಸುತ್ತಾರೆ.

ಹಿಟ್ಲರ್ ಸುಭಾಷರಿಗೆ “ಭಾರತೀಯರ ಚೈತನ್ಯವು ಅಸ್ತವ್ಯಸ್ತವಾಗಿದೆ, ನಿಮ್ಮಲಿರುವ ಸಂಪತ್ತು ನನ್ನಲಿದ್ದಿದರೆ ನಾನು ಅಲೆಕ್ಸಾಂಡರ್ ನಂತೆ ಜಗತ್ತನ್ನೇ ಆಳುತ್ತಿದ್ದೆ” ಎನ್ನುತ್ತಾನೆ.

ಆಗ ಸುಭಾಷರು “ಸರ್ ಬ್ರಿಟೀಷರು ನನ್ನ ದೇಶವನ್ನು ಕಬ್ಬಿಣದ ಸರಳಿನ ಹಿಂದೆ ಬಂಧಿಸಿದ್ದಾರೆ ನಿಜ ಆದರೆ ಆ ಸರಳುಗಳನ್ನು ಬೇಧಿಸುತ್ತ ಯುವಕನೊಬ್ಬ ಜಗತ್ತಿನ ಶ್ರೇಷ್ಠ ಕಮ್ಯಾಂಡರ್ ನ ಮುಂದೆ ನಿಂತಿರುವ ಸಮಯದಲ್ಲಿ ಅದು ಹೇಗೆ ನೀವು ಹಾಗೆ ಆರೋಪಿಸುತ್ತೀರಾ” ಎಂದು ಚುರುಕಾಗಿ ಉತ್ತರಿಸುತ್ತಾರೆ.

ಆಗ ಹಿಟ್ಲರ್ ಸುಭಾಷರ ಧೈರ್ಯ ಹಾಗು ಕೆಚ್ಚೆದೆಯ ಮಾತುಗಳಿಂದ ಅವಾಕಾಗುತ್ತಾನೆ ಹಾಗು ಮುಂದಿನ ಸುಧೀರ್ಘ ಸಭೆಯಲ್ಲಿ ತನ್ನ ಸಂಪೂರ್ಣ ಬೆಂಬಲವನ್ನು ಹಿಟ್ಲರ್ ಘೋಷಿಸುತ್ತಾನೆ.

ನೇತಾಜಿ ಅಜಾದ್ ಹಿಂದ್ ಫೌಜ್ ಪಡೆಯೊಂದಿಗೆ

ಎರಡನೇ ಮಹಾಯುದ್ಧದಲ್ಲಿ ಜರ್ಮನ್ ವಿರುದ್ಧ ಬ್ರಿಟಿಷರ ಪರವಾಗಿ ಯುದ್ಧ ಮಾಡುತಿದ್ದ ನಾಲ್ಕು ಸಾವಿರದ ಐನೂರು ಭಾರತೀಯ ಸೈನಿಕರನ್ನು ಜರ್ಮನ್ ಸೆರೆ ಹಿಡಿದಿರುತ್ತದೆ. ಆಗ ಸುಭಾಷರು ಹಿಟ್ಲರ್ ನನ್ನ ಒಪ್ಪಿಸಿ ಅವರೆಲ್ಲರನ್ನು ಬಿಡಿಸಿಕೊಂಡು ಇಂಡಿಯನ್ ಲೀಜನ್ ಸೈನಿಕ ಪಡೆ ಸ್ಥಾಪಿಸುತ್ತಾರೆ. ನಂತರ ಸಿಂಗಪೋರಿಗೆ ತೆರಳಿ ಜಪಾನಿನ ರಾಜತಾಂತ್ರಿಕೆಯ ನೆರವು ಪಡೆದು ಅಲ್ಲಿನ ಭಾರತೀಯ ಸೆರೆಯಾಳುಗಳನ್ನು ಸಹ ಬಿಡಿಸಿ ಅಕ್ಟೋಬರ್ 1943 ರಲ್ಲಿ ರಾಸ್ ಬಿಹಾರಿ ಬೋಸ್ ನೇತೃತ್ವದ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ನನ್ನು ಒಟ್ಟುಗೂಡಿಸಿ “ಅಜಾದ್ ಹಿಂದ್ ಫೌಜ್” (ಇಂಡಿಯನ್ ನ್ಯಾಷನಲ್ ಆರ್ಮಿ) ಸ್ಥಾಪಿಸುತ್ತಾರೆ. ಒಟ್ಟು 85,000 ಸೈನಿಕರ ಮಹಾ ಸೈನ್ಯದ ಬಲದೊಂದಿಗೆ ಸುಭಾಷರು ತಾತ್ಕಾಲಿಕ ಸರ್ಕಾರವನ್ನು ಸ್ಥಾಪಿಸಿ ಬ್ರಿಟಿಷ್ ಸರ್ಕಾರದ ವಿರುದ್ಧ ಯುದ್ಧ ಸಾರುತ್ತಾರೆ.

ಅಂಡಮಾನ್ ಸ್ವತಂತ್ರ ಭಾರತದ ಪ್ರದೇಶ ಎಂದು ಘೋಷಿಸಿದಾಗ ನೇತಾಜಿ ಜಪಾನ್ ಸೈನಿಕರೊಂದಿಗೆ

ಸುಭಾಷರ ಸೈನಿಕ ಪಡೆಯು ಮೊದಲಿನ ಯುದ್ಧದಲ್ಲಿ ವಿಜಯವಾಗಿ ಅಂಡಮಾನ್ ದ್ವೀಪದಲ್ಲಿ ಮೊದಲ ಬಾರಿಗೆ ಭಾರತದ ಧ್ವಜವನ್ನು ಹಾರಿಸಿ ಅಂಡಮಾನ್ ನನ್ನು ಭಾರತದ ಮೊದಲ ಸ್ವತಂತ್ರ ಪ್ರದೇಶ ಎಂದು ಘೋಷಿಸುತ್ತಾರೆ.

ಈ ವಿಜಯ ಹೀಗೆ ನೆಡೆದಿದ್ದರೆ ಭಾರತದ ಸ್ವಾತಂತ್ರಾ ನಂತರದ ಭವಿಷ್ಯ ಬೇರೆಯೇ ಆಯಾಮವನ್ನು ಖಂಡಿತವಾಗಿಯೂ ಪಡೆಯುತಿತ್ತು. ಆದರೆ ಭಾರತೀಯರ ದೌರ್ಭಾಗ್ಯ! ಎರಡನೇ ಮಹಾಯುದ್ಧದಲ್ಲಿ ಮೈತ್ರಿ ಕೂಟದ ವಿಜಯದಿಂದ ಜರ್ಮನ್ ಸೋತು ಹಿಟ್ಲರ್ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ನಂತರ ಜಪಾನ್ ಹಿರೋಷಿಮಾ ಹಾಗು ನಾಗಸಾಕಿ ನಗರಗಳ ಮೇಲಾದ ಅಣು ಬಾಂಬ್ ದಾಳಿಯಿಂದ ಶರಣಾಗುತ್ತದೆ. ಈ ಸಮಯದಲ್ಲಿ ಸುಭಾಷರ ಕಣ್ಮರೆಯಾಗುತ್ತದೆ ಇಂದಿಗೂ ಭಾರತದ ಬಹುಪಾಲು ಜನರು ಸುಭಾಷ್ ರ ಕಣ್ಮರೆಯನ್ನು ಸಾವೆಂದು ಒಪ್ಪುವುದಿಲ್ಲ.

ಸುಭಾಷರ ಈ ಪ್ರಯಾಣವು 20 ನೇ ಶತಮಾನ ಭಾರತ ಕಂಡ “ಮಹಾ ಪಯಣ” ಎಂದೇ ಜನ ಮಾನಸದಲ್ಲಿ ಗುರುತಿಸಲ್ಪಟ್ಟಿದೆ.

ಇಂದು ಆ ಮಹಾ ವೀರ ಚೇತನದ ಜನ್ಮ ದಿನ. ಎಲ್ಲಾ ದೇಶಭಕ್ತರಿಗೂ ಹಾಗು ವೀರ ಸೈನಿಕರಿಗೂ ಸುಭಾಷ್ ಚಂದ್ರ ಬೋಸ್ ಸಾಹಸದ ಬದುಕು ಸ್ಪೂರ್ತಿಯಾಗಲಿ. ಜೈ ಹಿಂದ್…

ಕು ಶಿ ಚಂದ್ರಶೇಖರ್

ಚಿತ್ರ ಕೃಪೆ : ನೇತಾಜಿ ರಿಸರ್ಚ್ ಬ್ಯೂರೋ

Related post

Leave a Reply

Your email address will not be published. Required fields are marked *