ನೇಪಥ್ಯ’ಕ್ಕೆ ಗುಡಿಹಳ್ಳಿ ನಾಗರಾಜ್

ರಂಗಭೂಮಿಯ ಅದರಲ್ಲೂ ವೃತ್ತಿ ರಂಗಭೂಮಿಯ ಮೇಲೆ ಅತೀವ ಪ್ರೀತಿ ಹೊಂದಿದ್ದ ಹಿರಿಯ ಪತ್ರಕರ್ತ ಗುಡಿಹಳ್ಳಿ ನಾಗರಾಜ್ ಅವರು ನಮ್ಮನ್ನಗಲಿದ್ದಾರೆ.

ರಂಗವನ್ನೆ ನಂಬಿ ಬದುಕಿದ ಹಾಗೂ ಬೆಳಕಿಗೆ ಬಾರದ ಕಲಾವಿದರನ್ನು ಪರಿಚಯಿಸುವ ಕೆಲಸವನ್ನು ಮಾಡುತ್ತಿದ್ದರು. ವಿಶೇಷವಾಗಿ ಹಿರಿಯ ರಂಗ ನಟಿಯರನ್ನು ಗುರುತಿಸಿ ಅವರ ಆತ್ಮಕತೆಗಳನ್ನು ಬರೆದಿದ್ದಾರೆ. ಅವರೆಲ್ಲರ ರಂಗದ ಮೇಲಿನ ಹಾಗೂ ನೇಪಥ್ಯದಲ್ಲಿನ ಹಲವಾರು ನೋವು-ನಲಿವುಗಳನ್ನು ದಾಖಲಿಸಿದ್ದಾರೆ. ವೃತ್ತಿ ರಂಗಭೂಮಿಯಲ್ಲಿನ ಹಿರಿಯ ನಟಿಯರು ರಂಗಗೀತೆಗಳನ್ನು ಹೇಳುವ ಪರಿಯನ್ನು ಮೆಚ್ಚಿದವರಲ್ಲದೇ ಅಂತಹ ಖಾಸಗಿ ಕಾರ್ಯಕ್ರಮಕ್ಕೆ ಸಮಾನ ಮನಸ್ಕರನ್ನು ಆಹ್ವಾನಿಸಿ ಆ ಸುಮಧುರ ಕ್ಷಣಗಳನ್ನು ಆಸ್ವಾದಿಸುವಂತೆ ಮಾಡುತ್ತಿದ್ದರು.

ಪತ್ರಿಕೆಯಲ್ಲಿ ತಮ್ಮ ಬಗ್ಗೆ ಬಂದರೆ ಸಾಕು ಎಂದು ಹಪಹಪಿಸುತ್ತಾ ಕಛೇರಿಯವರೆಗೆ ಬರುವವರ ಬಗ್ಗೆ ಬರೆಯುವುದು ಸಹಜ. ಆದರೆ ರಂಗದ ಮೇಲೆ ರಾರಾಜಿಸಿ ರಂಗ ನೇಪಥ್ಯದಲ್ಲಿ ನೋವಲ್ಲಿ ಬದುಕ ನೂಕುವವರ ಬಗ್ಗೆ, ಅವರಿದ್ದಲ್ಲಿಗೆ ಹೋಗಿ ಸಂದರ್ಶಿಸಿ ಬರೆದಿದ್ದಾರೆ. ಹಲವರಿಗೆ ಹಲವು ಪುರಸ್ಕಾರ-ಪ್ರಶಸ್ತಿಗಳನ್ನು ಕೊಡಿಸಲು ಶ್ರಮಿಸಿದ್ದಾರೆ. ಅಕಾಡೆಮಿಯ ಮೂಲಕ ರಂಗಭೂಮಿಯ ರಂಗಕರ್ಮಿಗಳಿಗೆ ಸಹಕಾರ ನೀಡಿದ್ದರು ಎಂಬ ಮಾತಿದೆ.

ಕನ್ನಡದ ರಂಗಭೂಮಿಯ ಮೇಲಿನ ಎಲ್ಲ ಚಟುವಟಿಕೆಯನ್ನು ಗಮನಿಸುತ್ತಾ ಅಲ್ಲಿ ತೊಡಗಿಕೊಂಡ ಎಲ್ಲರ ಬಗ್ಗೆ ಬರೆಯುತ್ತಾ ಬಂದಿದ್ದರು. ನಿಸ್ವಾರ್ಥ ಸೇವೆ ಮಾಡುವ ವ್ಯಕ್ತಿಗಳ ಪಟ್ಟಿಯಲ್ಲಿ ಮೇಲ್ವರ್ಗದಲ್ಲಿ ಗುಡಿಹಳ್ಳಿ ಇರುತ್ತಾರೆ ಎಂಬುದಂತೂ ಸತ್ಯ. ಗುಬ್ಬಿ ವೀರಣ್ಣ, ಏಣಗಿ ಬಾಳಪ್ಪ, ಧುತ್ತರಗಿ, ಮಳವಳ್ಳಿ ಸುಂದರಮ್ಮ, ಸುಭದ್ರಮ್ಮ ಮನ್ಸೂರು, ಚಿಂದೋಡಿ ಲೀಲಾ, ಮಾಲತಿಶ್ರೀ, ನಾಗರತ್ನಮ್ಮ ಹಾಗೂ ಲಕ್ಷ್ಮಣದಾಸ್ ಹೀಗೆ ಹಲವರ ಬಗ್ಗೆ ಬರೆದಿದ್ದಾರೆ.

ನಾನು ಫ್ರೀಲ್ಯಾನ್ಸರ್ ಆಗಿ ಸಾಂದರ್ಭಿಕ ಚಿತ್ರಗಳನ್ನೂ ಹಾಗೂ ವ್ಯಂಗ್ಯಚಿತ್ರಗಳನ್ನು ರಚಿಸುತ್ತಿದ್ದ ಕಾಲದಲ್ಲಿ `ಸುಧಾ’ ಪತ್ರಿಕಾ ಕಛೇರಿಗೆ ಭೇಟಿ ಕೊಟ್ಟಿದ್ದಾಗ ಗುಡಿಹಳ್ಳಿ ನಾಗರಾಜ್ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದೆ. ಅಲ್ಲಿಯೂ ಅವರು ದೊಡ್ಡ ವ್ಯಕ್ತಿಯಂತೆ ಸೋಗು ತೋರಲಿಲ್ಲ. ನ್ಯೂಸ್ ಪ್ರಿಂಟ್ನ ಒತ್ತಿಗೆ ಬೋರ್ಡೊಂದನ್ನು ಇಟ್ಟುಕೊಂಡು ಏನೋ ಬರೆಯುತ್ತಿದ್ದರು. ಅವರಷ್ಟಕ್ಕೆ ಅವರು ತಮ್ಮ ಕಾಯಕದಲ್ಲಿ ತೊಡಗಿದ್ದರು. ಆಗಾಗ ಸುಧಾ ಕಛೇರಿಗೆ ಭೇಟಿ ಕೊಟ್ಟಾಗಲೂ ಅವರು ಹಾಗೇ ಕಾಣ ಸಿಗುತ್ತಿದ್ದರು. ಹೆಚ್ಚಿನ ಮಾತಿಲ್ಲ. ಕೃತಿಗೆ ಪ್ರಮುಖ್ಯತೆ ಎಂದು ಈಗ ಅರಿವಾಗ್ತಿದೆ.

ಅಲ್ಲಲ್ಲಿ ನಾಟಕಗಳಲ್ಲಿ ಹಾಗೂ ರಂಗೋತ್ಸವಗಳಲ್ಲಿ ಸಿಗುತ್ತಿದ್ದರು. ಹೆಗಲಿಗೆ ಒಂದು ಬ್ಯಾಗು ತಗುಲಿಸಿ ಗೆಳೆಯರನ್ನು ಕಂಡಾಕ್ಷಣ ಒಂದ ಮುಕ್ತ ನಗೆಯನ್ನು ಬೀರುವ ಒಂದೇ ಥರದ ಚಿತ್ರದಲ್ಲಿ ಗುಡಿಹಳ್ಳಿ ಅವರು ಕಾಣಸಿಗುತ್ತಿತ್ತು. ಹೀಗೆ ಆಗಾಗ ಸಿಕ್ಕಾಗ `ಚೆನ್ನಾಗಿ ಬರೆಯುತ್ತಿದ್ದೀರ ಮುಂದುವರೆಸಿ’ ಎಂದು ಬೆನ್ನು ತಟ್ಟುತ್ತಿದ್ದರು. ಆದರೆ ಥಿಯೇಟರ್ ಒಳಗೆ ಪ್ರವೇಶಿಸಿದರೆ ಯಾರೊಂದಿಗೂ ಮಾತಾಡದೇ ರಂಗದ ಮೇಲೆ ಕಣ್ಣು ನೆಡುತ್ತಿದ್ದರು!

ಆಮೇಲೆ ನಾನು ಕನ್ನಡಪ್ರಭಕ್ಕೆ ಚಿತ್ರಕಾರರನಾಗಿ ಸೇರಿ, ನಂತರದಲ್ಲಿ ರಂಗಭೂಮಿಯ ಚಟುವಟಿಕೆಗಳ ಬಗ್ಗೆ, ರಂಗಕರ್ಮಿಗಳ ಬಗ್ಗೆ ಲೇಖನ, ಸಂದರ್ಶನಗಳನ್ನು ಮಾಡುವ ಸಂದರ್ಭದಲ್ಲಿ ನನ್ನ ಲೇಖನಗಳನ್ನು ಓದಿ ಫೋನಾಯಿಸಿ `ರಂಗಭೂಮಿಯ ಬಗ್ಗೆ ಬರೆಯುವವರು ಕಡಿಮೆ, ಹಾಗಾಗಿ ನೀವು ಬರೆಯಲು ಆರಂಭಿಸಿದ್ದು ಖುಷಿಯ ವಿಷಯ ಹೀಗೆ ಮುಂದುವರಿಸಿ ಎನ್ನುತ್ತಿದ್ದರಲ್ಲದೇ, ಅವರ ಬಗ್ಗೆ ಬರೆಯಿರಿ, ಇವರ ಬಗ್ಗೆ ಬರೆಯಿರಿ. ಇಂತಿಂಥವರು ಬೆಳಕಿಗೆ ಬರಬೇಕು. ಇಂತಿಂಥವರ ಶ್ರಮ ಹಾಗೂ ಪ್ರತಿಭೆಯನ್ನು ಯಾರು ಗುರುತಿಸಿಲ್ಲ’ ಎಂದೆಲ್ಲಾ ಕೊರಗುತ್ತಿದ್ದರು.

ಒಮ್ಮೆ ಹಿರಿಯ ರಂಗಕರ್ಮಿ ನಾಗೇಂದ್ರ ಶಾ ಅವರ ನಿರ್ದೇಶನದ `ಬಣ್ಣದ ರಾಣಿ’ ಎಂಬ ನಾಟಕ ನೋಡಲು ಕಲಾಗ್ರಾಮಕ್ಕೆ ಬಂದಿದ್ದರು. ನಾಟಕ ಮುಗಿದ ನಂತರ ಅವರನ್ನು ಅವರ ಮನೆಯವರೆಗೂ ನನ್ನ ಗಾಡಿಯಲ್ಲಿ ಕರೆ ತಂದು ಬಿಟ್ಟಿದ್ದು ಈಗಲೂ ಮರೆಯಲಾಗದು! ಆಗ ಸಾಕಷ್ಟು ಮಾತಾಡಿದ್ದರು. ನಾನು ಅವರನ್ನು ನೋಡಿದ್ದು ಅದೇ ಕೊನೆಯ ಬಾರಿ. ಅವರ “ರಂಗ ನೇಪಥ್ಯ” ಪತ್ರಿಕೆಗೆ ಬರೆಯಲು ಹೇಳಿದ್ದರು. ಕೆಲವನ್ನು ಪ್ರಕಟಿಸಿದ್ದರು ಕೂಡ. ಪತ್ರಿಕೆಯನ್ನು ತಪ್ಪದೇ ಕಳಿಸುತ್ತಿದ್ದರು. ಆಗಾಗ ಫೋನ್ ಮಾಡಿ ಪತ್ರಿಕೆ ಬಂತಾ? ಎಂದು ಕೇಳುತ್ತಿದ್ದರು. ಬಂದಿಲ್ಲವೆಂದರೆ ಕಳಿಸಿ ಮತ್ತೆ ಫೋನ್ ಮಾಡಿ ಖಚಿತ ಮಾಡಿಕೊಳ್ಳುತ್ತಿದ್ದರು. ರಂಗ ನೇಪಥ್ಯ’ದ ಮೇಲೆ ಅಪಾರವಾದ ಪ್ರೀತಿ ಇತ್ತು. ಅದನ್ನು ರಂಗಾಸಕ್ತರಿಗೆ ತಲುಪಿಸುವ ಹುರುಪು ಮಾತ್ರ ಹೇಳತೀರದು.

ಪ್ರಜಾವಾಣಿ ಬಳಗದ ಸುಧಾ ಪತ್ರಿಕೆಯಿಂದ ನಿವೃತ್ತಿ ಆದ ನಂತರವೂ ತಮ್ಮದೇ ಆದ ‘ರಂಗ ನೇಪಥ್ಯ’ ಎಂಬ ಮಾಸ ಪತ್ರಿಕೆಯನ್ನು ನಡೆಸುವ ಮೂಲಕ ಮತ್ತಷ್ಟು ರಂಗದ ವಿಷಯಗಳನ್ನು ರಂಗಾಸಕ್ತರಿಗೆ ತಲುಪಿಸುತ್ತಾ ಬಂದಿದ್ದರು. ಆರೋಗ್ಯ ಕೈಕೊಟ್ಟರೂ ಪತ್ರಿಕೆಯ ನಡೆಗೆ ತೊಂದರೆಯಾಗದಂತೆ ಗೆಳೆಯರ ಸಹಕಾರದಿಂದ ಪ್ರಕಟಿಸಿದರು ಎಂಬುದು ಈಗ ತಿಳಿಯುತ್ತಿದೆ.

ಹೀಗೆ ವೃತ್ತಿ ಹಾಗೂ ಸಮಕಾಲೀನ ರಂಗಭೂಮಿಗೆ ಒಂದು ಕೊಂಡಿ ಎನಿಸಿದ್ದ ಗುಡಿಹಳ್ಳಿ ಅವರು ಇಲ್ಲವಾಗಿ ರಂಗ ಸಂಪರ್ಕದ ಕೊಂಡಿಯೊಂದು ಕಳಚಿದಂತಾಗಿದೆ. ಇದನ್ನು ಅರಗಿಸಿಕೊಳ್ಳಲು ಸ್ವಲ್ಪ ಕಾಲ ಬೇಕಾಗುತ್ತದೆ. ಕನ್ನಡ ರಂಗಭೂಮಿಯ ಸತ್ಸಂಗ ಹಾಗೂ ಚಟುವಟಿಕೆಗಳು ನಡೆವಲ್ಲಿ ಗುಡಿಹಳ್ಳಿ ನಾಗರಾಜ್ ಅವರು ನಮ್ಮೊಂದಿಗೆ ಇರುತ್ತಾರೆ. ಅವರ ರಂಗ ಪ್ರೀತಿಗೆ ನಮ್ಮ ದೊಡ್ಡ ನಮನ.

ಗುಡಿಹಳ್ಳಿ ನಾಗರಾಜ್ ರವರ ಕನಸಾದ ‘ರಂಗ ನೇಪಥ್ಯ’ ಪತ್ರಿಕೆಗೆ ಒಮ್ಮೆ ಕಣ್ಣಾಡಿಸಿ https://ranganepathya.in/

ತುಂಕೂರ್ ಸಂಕೇತ್

Related post

2 Comments

  • ಗುರುದತ್ ತುಂಬಾ ಚೆನ್ನಾಗಿ ಗುಡಿ ಹಳ್ಳಿ ನಾಗರಾಜ್ ಅವರ ಬಗ್ಗೆ ಬರೆದಿದ್ದೀರಿ…ನಿಮ್ಮ ಬರಹದ ಶೈಲಿ ಚೆನ್ನಾಗಿದೆ…ಗುಡಿ ಹಳ್ಳಿ ಅವರ ನೆನಪು ರಂಗಭೂಮಿಗೆ ನಿರಂತರ

  • ೇಖನ ಚೆನ್ನಾಗಿದೆ ಅದರೆ ಗುಡಿ ಹಳ್ಳಿ ಯವರು ಮರೆಯಾಗಿದ್ದು ತುಂಬಾ ೋವಾಯಿತು. ನಮ್ಮ ಪತ್ರಿಕೆಗು ಬರೆದಿದ್ದರು ಆಗ ನಮ್ಮ ಕಛೇರಿಗೆ ಹಲವು ಬಾರಿ ಬಂದಿದ್ದ ರು

Leave a Reply

Your email address will not be published. Required fields are marked *