ನೇಪಾಳದಲ್ಲಿ ಮಾಗಡಿ ಗಂಗಮ್ಮನ ಸಾಹಸ ಕಥೆ

ನೇಪಾಳದಲ್ಲಿ ಮಾಗಡಿ ಗಂಗಮ್ಮನ ಸಾಹಸ ಕಥೆ

ನಮ್ಮ ಕನ್ನಡ ನಾಡಲ್ಲಿ ಜನಿಸಿ ನೇಪಾಳ ರಾಷ್ಟ್ರದಲ್ಲಿ ಸಾಧನೆಗಳ ಮೂಲಕ ಗುರುತಿಸಲ್ಪಟ್ಟ ಮಹಿಳೆಯ ಜೀವಗಾಥೆ ಇದು. ಬಹಳ ಹಿಂದೆ 2012 ರಲ್ಲಿ ಈ ವರದಿಯು ಲೇಖನ ರೂಪದಲ್ಲಿ ಉದಯವಾಣಿಯ “ಅವಳು” ಸಂಚಿಕೆಯಲ್ಲಿ ಪ್ರಕಟವಾಗಿತ್ತು ಆನಂತರ ಅಂತರ್ಜಾಲದಲ್ಲಿ ಎಷ್ಟು ಹುಡುಕಿದರೂ ಇದರ ಬಗ್ಗೆ ಮಾಹಿತಿ ಹಾಗು ಫೋಟೋಗಳು ಲಭ್ಯವಿಲ್ಲ.

ಯಾವುದೊ ಒಂದು ಕಳ್ಳತನದ ಪ್ರಕರಣದ ಬೆನ್ನತ್ತಿದ ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗಳಾದ ಕೆ. ಪಿ. ಸತ್ಯನಾರಾಯಣ್, ಮಲ್ಲಿಕಾರ್ಜುನ್, ಸಿರಾಜುದ್ದೀನ್, ಹಾಗು ಮುನಿರಾಜು ತಂಡಕ್ಕೆ ಸ್ವತಃ ಗಂಗು ದೇವಿ ಕಡಾಯತ್ (ಮಾಗಡಿಯ ಗಂಗಮ್ಮ) ನೇಪಾಳಿನಲ್ಲಿ ಭೇಟಿಯಾಗಿ ಹೇಳಿಕೊಂಡ ಕಥೆ ಇದು.

ಮಾಗಡಿಯ ಬಡ ಅರ್ಚಕರಾದ ದೊಡ್ಡನಂಜಪ್ಪ ಹಾಗು ಭೈರಮ್ಮ ದಂಪತಿಗಳಿಗೆ ಜನಿಸಿದ ಗಂಗಮ್ಮ ಎಂಟು ಮಕ್ಕಳ ಪೈಕಿ ಒಬ್ಬಳು. ಹೊತ್ತು ಊಟಕ್ಕೂ ಕಷ್ಟಪಡುತ್ತಿದ್ದ ದೊಡ್ಡ ನಂಜಪ್ಪನವರು ಗಂಗಮ್ಮಳನ್ನು ಬೆಂಗಳೂರಿನ ಸದಾಶಿವನಗರದಲ್ಲಿ ತಮ್ಮ ಪರಿಚಯದ ಸಿಂದಿ ಕುಟುಂಬದಲ್ಲಿ ಮನೆಗೆಲಸಕ್ಕೆ ಸೇರಿಸುತ್ತಾರೆ. ಅವಳ ಕೆಲಸ ನಿಷ್ಠೆ ಕಂಡು ಆ ಮನೆಯವರು ತಮ್ಮ ಮನೆಯ ಕಾವಲುಗಾರ ನೇಪಾಳ ಮೂಲದ ರಾಮ್ ಲಾಲ್ ಕಡಾಯತ್ ಗೆ ಕೊಟ್ಟು ಮಾಡುವೆ ಮಾಡುತ್ತಾರೆ. 1975 ರಲ್ಲಿ ಸಂಪ್ರದಾಯದಂತೆ ರಾಮ್ ಲಾಲ್ ಗಂಗಮ್ಮಳನ್ನು ನೇಪಾಳದ ಬಜಾಂಗ್ ಜಿಲ್ಲೆಯ ತನ್ನ ಊರಾದ “ದೇವರಾ” ಗ್ರಾಮಕ್ಕೆ ಕರೆದೊಯ್ದನು. ಅದೊಂದು ಕುಗ್ರಾಮ, ವಿದ್ಯುತನ್ನು ಸಹ ಕಾಣದ ಊರಿಗೆ ಪತಿರಾಯ ಬೆಟ್ಟ ಗುಡ್ಡದ ಹಾದಿಯಲ್ಲಿ ಹತ್ತಾರು ಕಿಲೋಮೀಟರ್ ನೆಡೆಸಿಕೊಂಡೆ ಹೋದನು.

ಎರಡು ತಿಂಗಳು ಸಂಸಾರ ಮಾಡಿದ ಪತಿರಾಯ ರಾಮ್ ಲಾಲ್ ಕಡಾಯತ್ ಊರಲ್ಲಿ ಇದ್ದರೆ ಹೊಟ್ಟೆ ತುಂಬುವುದಿಲ್ಲ ಎಂದು ಗಂಗಮ್ಮಳನ್ನು ಊರಿನಲ್ಲಿ ಒಬ್ಬಳೇ ಇರಲು ಬಿಟ್ಟು ಮತ್ತೆ ಬೆಂಗಳೂರು ಸೇರಿದ. ಭಾಷೆ ತಿಳಿಯದ ಗಂಗಮ್ಮ ಒಬ್ಬಳೇ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಕೆಲದಿನಗಳ ನಂತರ ಆ ಗ್ರಾಮದ ಜನರು ಆಕೆಯನ್ನು ತಮ್ಮವಳಲ್ಲ ಎಂದು ಊರಿನಿಂದ ಹೊರಹಾಕಿತು. ನೇಪಾಳಿ ಭಾಷೆಯೂ ಬಾರದ ಗಂಗಮ್ಮನ ಪರಿಸ್ಥಿತಿ ಊಹಿಸಲೂ ಕಷ್ಟ ಜೊತೆಗೆ ಗರ್ಭಿಣಿ ಬೇರೆ. ಆದರೆ ಅವಳು ಧೈರ್ಯ ಬಿಡಲಿಲ್ಲ. ಏನೇ ಆಗಲಿ ಇಲ್ಲೇ ಇದ್ದು ಜೀವಿಸಬೇಕು ಎಂದು ಛಲದಿಂದ ಗಂಗಮ್ಮ ಊರಿನಿಂದ ಆಚೆ ಕಾಡಿನಲ್ಲಿ ವ್ಯವಸಾಯ ಮಾಡಿಕೊಂಡು ಅವರಿವರಲ್ಲಿ ಕೂಲಿ ಕೆಲಸವನ್ನು ಸಹ ಮಾಡಿಕೊಂಡು ಹೇಗೋ ನೇಪಾಳಿ ಭಾಷೆಯನ್ನು ಕಲಿತುಬಿಟ್ಟಳು.

ಅಷ್ಟರಲ್ಲಿ ಗಂಗಮ್ಮಳಿಗೆ ಗಂಡು ಮಗುವಾಯಿತು, ದುಡಿದು ಬಂದ ಹಣದಲ್ಲಿ ಅಲ್ಪ ಸ್ವಲ್ಪ ಹಣವನ್ನು ಬಡವರಿಗೆ ದಾನ ಮಾಡತೊಡಗಿದಳು. ತನ್ನ ಮನೆಯಲ್ಲಿ ಕಷ್ಟಗಳಿದ್ದರು ಬೇರೆಯ ಮನೆಯ ಹೆಣ್ಣು ಮಕ್ಕಳ ನೋವಿಗೆ ಸ್ಪಂದಿಸತೊಡಗಿದಳು. ಇವಳ ಒಳ್ಳೆಯತನದಿಂದಾಗಿ ಊರವರೆಲ್ಲ ತಮ್ಮ ಕೃತ್ಯಕ್ಕೆ ತಾವೇ ನಾಚಿಕೆಪಟ್ಟು ಊರಿನ ಜನರು ಗಂಗಮ್ಮಳನ್ನು ಮತ್ತೆ ಊರೊಳಗೆ ಕರೆ ತಂದರು. ಬೇರೆಯವರ ಕಷ್ಟಕ್ಕೆ ಮಿಡಿದು ಸ್ಪಂದಿಸಿ ಸಹಾಯ ಮಾಡುತ್ತಿದ್ದ ಗಂಗಮ್ಮಳನ್ನು ಜನರು “ನೇತಾ” ಎಂದು ಕರೆದು ಗೌರವಿಸಲು ಶುರುಮಾಡಿದರು. ನೇಪಾಳ ದೇಶದ ಪೌರತ್ವವು ಲಭಿಸಿ ಗಂಗಮ್ಮ ಎಂಬ ಹೆಸರು ಹೋಗಿ ಗಂಗು ದೇವಿ ಕಡಾಯತ್ ಎಂದು ಗುರುತಿಸಲ್ಪಟ್ಟಳು.

Nepal's hydropower project, aided by China, operational - Global Times
ಸೇತಿ ಗಂಗಾ ಜಲ ವಿದ್ಯುತ್ ಯೋಜನೆ

ದಿನಗಳೆದಂತೆ ಗಂಗಮ್ಮಳ ಜನಪ್ರಿಯತೆ ಹೆಚ್ಚಾಯಿತು. ಭಜಂಗ್ ಜಿಲ್ಲೆಯ ಮಹಿಳಾ ಸಭಲೀಕರಣಕ್ಕೆ ಟೊಂಕ ಕಟ್ಟಿ ಹಗಲು ಇರಳು ಗಂಗಮ್ಮ ಶ್ರಮಿಸಿದಳು. ಮುಂದೆ ಜನರು ಗಂಗಮ್ಮಳನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿದರು. ಗಂಗಮ್ಮಳ ಜನಪ್ರಿಯತೆ ಕಂಡು ಸ್ಥಳೀಯ ಮಾಧ್ಯಮಗಳು ಸಾಲಾಗಿ ಹೊಗಳಿ ಬರೆದು ಪ್ರಕಟಿಸಿದವು. ಇದರಿಂದ ನೆರೆಯ ಚೀನಾ ದೇಶ ಅವಳನ್ನು ಒಂದು ಕಾರ್ಯಕ್ರಮಕ್ಕೆ ಅತಿಥಿಯಾಗಿ ಕರೆಯಿತು. ನೇಪಾಳದ 64 ಜಿಲ್ಲೆಯ ಪೈಕಿ ಭಜಂಗ್ ಜಿಲ್ಲೆಯು ಚೀನಾದ ಗಡಿ ಪ್ರದೇಶದಲ್ಲಿದೆ. ದೇವರಾ ಗ್ರಾಮವು ಪ್ರಾಕೃತಿಕವಾಗಿ ಶ್ರೀಮಂತವಾಗಿದ್ದರು ಸಹ ಅಲ್ಲಿನ ಊರಿನ ಜನಕ್ಕೆ ವಿದ್ಯುತ್ ಭಾಗ್ಯವಿರಲಿಲ್ಲ. ನೆರೆಯ ಚೀನಾ ದೇಶಕ್ಕೆ ಅಥಿತಿಯಾಗಿ ಹೋದ ಗಂಗಮ್ಮ ತನ್ನೂರಿಗೆ ವಿದ್ಯುತ್ ಕೊಡಿಸಿ ಎಂದು ಮನವಿ ಮಾಡಿಕೊಂಡಳು. ಆಕೆಯ ಮನವಿಯ ಮೇರೆಗೆ ಸೇತಿ ಗಂಗಾ ನದಿಗೆ (ಅಲ್ಲಿ ಗಂಗಾ ನದಿಯನ್ನು ಸೇತಿ ಗಂಗಾ ಎಂದು ಕರೆಯುತ್ತಾರೆ) ಅಡ್ಡಲಾಗಿ ಅಣೆಕಟ್ಟನ್ನು ನಿರ್ಮಿಸಿ ಜಲವಿದ್ಯುತ್ ಉತ್ಪಾದನೆ ಯೋಜನೆಗೆ ಚೀನಾ ದೇಶ ಆರ್ಥಿಕವಾಗಿ ಸಹಾಯಮಾಡಿದೆ. ಈಗ ಗಂಗಮ್ಮಳ ಭಗೀರಥ ಪ್ರಯತ್ನದಿಂದ ಊರಲ್ಲಿ ಬೆಳಕು ಬಂದಿರಬಹುದು. ಗಂಗು ದೇವಿಯನ್ನು ಕಂಡರೆ ಭಜಂಗ್ ಜಿಲ್ಲೆಯ ಸರ್ಕಾರೀ ಅಧಿಕಾರಿಗಳು ಕೂಡ ಗೌರವಾದರ ತೋರ್ಪಡಿಸುತ್ತಾರೆ.

ಮತ್ತೆ ರಾಮ್ ಲಾಲ್ ಊರಿಗೆ ಬಂದು ಗಂಗಮ್ಮಳೊಂದಿಗೆ ಒಂದಾದ. ಮಗಳು ಸಹ ಜನಿಸಿದಳು. ಮುಂದೆ ಗಂಗಮ್ಮ ತನ್ನ ಊರಾದ ಮಾಗಡಿಯನ್ನು ನೆನೆದು ಪತಿಯೊಂದಿಗೆ ಊರಿಗೆ ಬಂದಳು. ಆದರೆ ಅಲ್ಲಿ ಇವಳನ್ನು ಗುರುತಿಸುವವರು ಯಾರು ಇರಲಿಲ್ಲ ತಂದೆ ತಾಯಿ ಸತ್ತು ಕಾಲವಾಗಿತ್ತು. ಇವಳು ಸತ್ತು ಹೋಗಿದ್ದಾಳೆ ಎಂದೇ ಎಲ್ಲರು ತಿಳಿದಿದ್ದರು. ಗಂಗಮ್ಮ ಎಲ್ಲರಲ್ಲೂ ತನ್ನ ಕಥೆಯನ್ನು ಹೇಳಿಕೊಂಡು ಮಗಳ ಮದುವೆಗೆ ಆಮಂತ್ರಣ ಪತ್ರಿಕೆಯನ್ನು ಕೊಟ್ಟು ವಾಪಸ್ಸು ನೇಪಾಳಕ್ಕೆ ಹೋದಳು. ವಿಚಿತ್ರವೆಂದರೆ ಆಕೆಯ ಪತಿ ರಾಮ್ ಲಾಲ್ ಹಾಗು ಅಳಿಯ ಇಬ್ಬರು ಕನಕಪುರದ ಕಲ್ಲಿನ ಕ್ವಾರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸುದ್ದಿ ಮೂಲಗಳು ಹೇಳುತ್ತವೆ ಅದ್ಯಾಕೆ! ಹೇಗೆ! ಗೊತ್ತಿಲ್ಲ. ಹೇಳಲು ಗಂಗಮ್ಮ ನೇಪಾಳದಲ್ಲಿ ಇದ್ದಾಳೆ.

ಕಾಣದ ದೇಶದ ಊರಿಗೆ ಸೊಸೆಯಾಗಿ ಹೋಗಿ ಅಲ್ಲಿನ ಜನರಿಂದ ತಿರಸ್ಕ್ರತಳಾಗಿ ದೃತಿಗೆಡದೆ ಅಲ್ಲಿನ ಭಾಷೆಯನ್ನೂ ಕಲಿತು ಎಲ್ಲರಿಗೂ ಸಹಾಯ ಮಾಡುತ್ತಾ ಊರಿಗೆ ಬೆಳಕಾಗಿ ಸಾಧನೆಯನ್ನು ಮಾಡಿದ ಮಾಗಡಿಯ ಗಂಗಮ್ಮ ನಿಜಕ್ಕೂ ಮಹಿಳೆಯರಿಗೆ ಮಾದರಿಯೇ ಸರಿ.

ಲೇಖನ: ಡಾ. ಗುರುಸಿದ್ಧಯ್ಯಾ ಸ್ವಾಮಿ
ಹಾಗು
ಕು ಶಿ ಚಂದ್ರಶೇಖರ್

ಚಿತ್ರಕೃಪೆ: ಉದಯವಾಣಿ

Related post

Leave a Reply

Your email address will not be published. Required fields are marked *