ನೋಡಬನ್ನಿರಿ ಶ್ರೀ ಜಗನ್ನಾಥದಾಸರ ತಂಬೂರಿ!!

ಶ್ರೀ ಜಗನ್ನಾಥದಾಸರ ತಂಬೂರಿ

ಮಲಗಿ ಪರಮಾದರದಿ ಪಾಡಲು |
ಕುಳಿತು ಕೇಳುವ |
ಕುಳಿತು ಪಾಡಲು ನಿಲುವ |
ನಿಂತರೆ ನಲಿವ | ನಲಿದರೆ ಒಲಿವೆ |
ನಿಮಗೆಂಬ ಸುಲಭನೋ ಹರಿ|
ತನ್ನವರನರಘಳಿಗೆ ಬಿಟ್ಟಗಲನು |
ರಮಾಧವನೊಲಿಸಲರಿಯದೆ |
ಪಾಮರರು ಬಳಲುವರು ಭವದೊಳಗೆ|

ಭಾರತದ ವೇದಾಂತ ಮತ್ತು ದರ್ಶನ ಶಾಸ್ತ್ರಗಳನ್ನು ಶ್ರೀಮಂತಗೊಳಿಸುವಲ್ಲಿ ಕರ್ನಾಟಕದ ದಾಸ ಸಾಹಿತ್ಯ ಪರಂಪರೆಯದ್ದು ಮಹತ್ತರವಾದ ಪಾತ್ರ. ಕರ್ನಾಟಕದಲ್ಲಿ ದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಅನೇಕ ಮಹನೀಯರಿದ್ದಾರೆ ಅಂಥಹವರಲ್ಲಿ ಪ್ರಮುಖರಾದವರು ಶ್ರೀ ಜಗನ್ನಾಥದಾಸರು. ಇವರು ಭಾರತೀಯ ವೇದಾಂತ ಮತ್ತು ದರ್ಶನ ಶಾಸ್ತ್ರಗಳಲ್ಲಿ ಅದ್ವಿತೀಯ ಪಾಂಡಿತ್ಯವನ್ನು ಹೊಂದಿದ್ದವರು ಹಾಗೂ ಇಡೀ ದಕ್ಷಿಣ ಭಾರತದಲ್ಲಿ ಏಕಮೇವಾದ್ವಿತೀಯ ಸಂಸ್ಕೃತ ವಿದ್ವಾಂಸರಾಗಿದ್ದರು. ಜಗನ್ನಾಥದಾಸರ ಪ್ರಭಾವಕ್ಕೆ ಒಳಗಾಗಿದ್ದ ಮಹಾನ್ ಜ್ಞಾನಿಗಳಾಗಿದ್ದ ಶ್ರೀ ವಿಜಯದಾಸರು ಹಾಗೂ ಶ್ರೀ ಗೋಪಾಲದಾಸರು ಜಗನ್ನಾಥದಾಸರ ಪ್ರಭಾವಕ್ಕೆ ಒಳಗಾಗಿ ವೇದಾಂತ ಮತ್ತು ದರ್ಶನಗಳ ಸಾರವನ್ನು ಕನ್ನಡಿಗರಿಗೆ ಉಣಬಡಿಸಲು ಕನ್ನಡದಲ್ಲೇ ತಮ್ಮ ಬರವಣಿಗೆಗಳನ್ನು ಆರಂಭಿಸಿದರು. “ಹರಿಕಥಾಮೃತಸಾರ” ದಂಥಹ ಮೇರು ಕೃತಿಯನ್ನು ಕನ್ನಡದಲ್ಲಿ ರಚಿಸಿದ ಮಹಾಮಹಿಮರು ಶ್ರೀಜಗನ್ನಾಥದಾಸರು.

ಶ್ರೀ ಜಗನ್ನಾಥದಾಸರು

ದಾಸವರೇಣ್ಯರ ವಿಚಾರ ಬಂದಾಗ ನಮ್ಮ ಕಣ್ಣ ಮುಂದೆ ಬರುವ ಚಿತ್ರ ಕೈಯಲ್ಲಿ ತಂಬೂರಿ ಹಿಡಿದ ದಾಸವರೇಣ್ಯರುಗಳದ್ದು, ದಾಸವರೇಣ್ಯರಿಗೂ ತಂಬೂರಿಗೂ ಅವೀನಭಾವ ಸಂಬಂಧ, ತಂಬೂರಿ ಇಲ್ಲದ ದಾಸರುಗಳ ಚಿತ್ರಗಳನ್ನು ಕಲ್ಪಿಸಿಕೊಳ್ಳುವುದೇ ಕಷ್ಟ, ಇಲ್ಲಿ ತಂಬೂರಿಯ ವಿಷಯವನ್ನು ಪ್ರಸ್ತಾಪಿಸಲು ಕಾರಣವಿದೆ, ಅದೇನೆಂದರೆ ಇನ್ನೂರು ವರ್ಷಗಳ ಹಿಂದೆ ಶ್ರೀ ಜಗನ್ನಾಥದಾಸರು ಉಪಯೋಗಿಸಿದ ತಂಬೂರಿ ಈಗಲೂ ದರ್ಶನಕ್ಕೆ ಲಭ್ಯ ಎಂದರೆ ನಿಮಗೆ ಆಶ್ಚರ್ಯವಾಗಬಹುದು, ಇದೂ ಆಶ್ಚರ್ಯವಾದರೂ ಸತ್ಯ ತಮ್ಮ ಕೊನೆಯ ದಿನಗಳಲ್ಲಿ ಶ್ರೀ ಜಗನ್ನಾಥದಾಸರು ಈ ತಂಬೂರಿಯನ್ನು ತಮ್ಮ ಪ್ರಿಯ ಶಿಷ್ಯರಾದ ಶ್ರೀದವಿಠ್ಠಲದಾಸರಿಗೆ ಕಾಣಿಕೆಯಾಗಿ ಕೊಟ್ಟಿದ್ದರು.

ಶ್ರೀ ಜಗನ್ನಾಥದಾಸರು ಉಪಯೋಗಿಸಿದ್ದ ಈ ತಂಬೂರಿ ಈಗ ಬೆಂಗಳೂರಿನ ವಿದ್ವಾನ್ ಶ್ರೀ ಸತ್ಯನಾರಾಯಣಾಚಾರ್ಯರ ಬಳಿ ಭದ್ರವಾಗಿದೆ. “ಭೃಂಗಿ ತಂಬೂರಿ” ಅಥವಾ “ಸುರಶೃತ ವೀಣೆ” ಎಂದು ಕರೆಯಲ್ಪಡುವ ಇದನ್ನು 18 ನೇ ಶತಮಾನದಲ್ಲಿ ಶ್ರೀ ಜಗನ್ನಾಥದಾಸರು ಉಪಯೋಗಿಸುತ್ತಿದ್ದರು ಎಂಬುದೇ ಇಲ್ಲಿ ವಿಶೇಷ. ದಾಸ ಸಾಹಿತ್ಯವನ್ನು ಪ್ರಚಾರ ಪಡಿಸುವ ಉದ್ದೇಶದಿಂದ ಶ್ರೀ ಪೂರ್ಣಪ್ರಜ್ಙ ತತ್ವಜ್ಙಾನ ಪ್ರಚಾರ ಸಭಾ ಎಂಬ ಸಂಸ್ಥೆಯನ್ನು ಕಟ್ಟಿ ನಡೆಸುತ್ತಿರುವ ಶ್ರೀ ಸತ್ಯನಾರಾಯಣಾಚಾರ್ಯರಿಗೆ ಈ ತಂಬೂರಿ 1995 ರಲ್ಲಿ ದಾವಣಗೆರೆಯ ದೀಕ್ಷಿತ್ ಗಲ್ಲಿ ಯಲ್ಲಿರುವ ಶ್ರೀ ರಾಘವೇಂದ್ರಸ್ವಾಮಿ ಮಠದಿಂದ ಪ್ರಾಪ್ತಿಯಾಯಿತು. ಮಠದ ಆಶ್ರಯಕ್ಕೆ ಬರುವವರೆಗೂ ಹಲವಾರು ಕೈಗಳನ್ನು ಈ ತಂಬೂರಿ ಬದಲಾಯಿಸಿತ್ತು, ಹಾಗಾಗಿ ಶ್ರೀ ಸತ್ಯನಾರಾಯಣಾಚಾರ್ಯರ ಕೈಗೆ ಈ ತಂಬೂರಿ ಸಿಕ್ಕಾಗ ಅದು ತುಂಬಾ ಶೀಥಲಾವಸ್ಥೆಯಲ್ಲಿತ್ತು ಅಷ್ಟೇ ಅಲ್ಲ ಅಪರೋಕ್ಷ ಜ್ಙಾನಿಗಳಾದ ಯತಿಗಳ ಮತ್ತು ದಾಸವರೇಣ್ಯರ ಕರಾರ್ಚಿತಗಳಿಂದ ಉಪಯೋಗಿಸಲ್ಪಟ್ಟ ಈ ತಂಬೂರಿಯಲ್ಲಿ ವಿಶೇಷ ಶಕ್ತಿ ಅವಾಹನೆಯಾಗಿರುವುದರಿಂದ ಇದಕ್ಕೆ ದಿನವೂ ಪೂಜೆ ಪುನಸ್ಕಾರಗಳು ನೆರವೇರಬೇಕು. ಹರಿಹರದ ಭೀಮಾಚಾರ್ಯ ಕಟ್ಟಿ ಎಂಬುವವರು ಈ ತಂಬೂರಿಯನ್ನು ಮಠಕ್ಕೆ ಕಾಣಿಕೆಯಾಗಿ ಕೊಟ್ಟಿದ್ದರು.

ಶ್ರೀ ಜಗನ್ನಾಥದಾಸರು 1780 ರಲ್ಲಿ ತಮ್ಮ ಪ್ರೀತಿಯ ಶಿಷ್ಯರಾಗಿದ್ದ ಶ್ರೀದವಿಠ್ಠಲದಾಸರಿಗೆ ಕಾಣಿಕೆಯಾಗಿ ಈ ತಂಬೂರಿಯನ್ನು ಕೊಟ್ಟಿದ್ದರು. ದಾಸಪ್ಪ ಎಂದು ಕರೆಸಿಕೊಳ್ಳುತ್ತಿದ್ದ ಶ್ರೀದವಿಠ್ಠಲದಾಸರು ಶ್ರೀದವಿಠ್ಠಲದಾಸರಾಗುವುದಕ್ಕೆ ಮುಂಚೆ ಈಗಿನ ಹಾವೇರಿ ಜಿಲ್ಲೆಯ ಕರ್ಜಗಿ ಗ್ರಾಮದಲ್ಲಿ ಶಾನುಭೋಗರಾಗಿದ್ದರು. ಶ್ರೀದವಿಠ್ಠಲದಾಸರು ದೈವಾಧೀನರಾಗುವ ಮುನ್ನಾದಿನ ಇದನ್ನು ಕರಡಗಿ ನಾರಾಯಣಾಚಾರ್ಯ ಎಂಬುವರಿಗೆ ಕಾಣಿಕೆಯಾಗಿ ಕೊಟ್ಟಿದ್ದರು ಕರಡಗಿ ನರಾಯಣಾಚಾರ್ಯ ವಂಶಸ್ಥರು ಈ ತಂಬೂರಿಯನ್ನು ಹರಿಹರದ ಕುಮಾರಪಟ್ಟಣದ ಶ್ರೀ ಭೀಮಾಚಾರ್ಯ ಕಟ್ಟಿಯವರಿಗೆ ಕೊಟ್ಟಿದ್ದರು ಹೀಗೆ ಹಲವರ ಕೈ ಬದಲಾಯಿಸಿ ಶಿಥಿಲವಾಗಿದ್ದ ತಂಬೂರಿ ಈಗ ಬೆಂಗಳೂರಿನ ಶ್ರೀ ಸತ್ಯನಾರಾಯಣಾಚಾರ್ಯರವರ ಕೈಗೆ ಬಂದ ಮೇಲೆ ತನ್ನ ಮೊದಲ ಸ್ಥಿತಿಗೆ ಬಂದಿದೆ. ಇದನ್ನು ಮೊದಲಿನ ಒಳ್ಳೆಯ ಸ್ಥಿತಿಗೆ ತರಲು ವಾರಗಳೇ ಬೇಕಾಯಿತಂತೆ. ಶ್ರೀ ಜಗನ್ನಾಥದಾಸರು ಉಪಯೋಗಿಸಿದ್ದ ಈ ತಂಬೂರಿಯನ್ನು ನೋಡುವುದೇ ಒಂದು ಭಾಗ್ಯ!!! ಪೂರ್ಣಪ್ರಜ್ಙ ತತ್ವಜ್ಙಾನ ಪ್ರಚಾರ ಸಭಾದ ಸಂಸ್ಥಾಪಕರು ದಾಸವರೇಣ್ಯರ ಬಗ್ಗೆ ಅನೇಕ ಪುಸ್ತಕಗಳನ್ನು ಬರೆದಿರುವ ಶ್ರೀ ಸತ್ಯನಾರಾಯಣಾಚಾರ್ಯರವರು, ಭಕ್ತರು ಅರಿಕೆ ಮಾಡಿಕೊಂಡ ಕಡೆಯೆಲ್ಲಾ ರಾಜ್ಯಾದ್ಯಂತ ಭಕ್ತರ ದರ್ಶನಕ್ಕೆ ಈ ತಂಬೂರಿಯನ್ನು ತೆಗೆದುಕೊಂಡು ಹೋಗುತ್ತಾರೆ.

ಕಳೆದ ಸೆಪ್ಟೆಂಬರ್ 4 ರಿಂದ ಪೂರ್ಣಪ್ರಜ್ಙ ತತ್ವಜ್ಙಾನ ಪ್ರಚಾರ ಸಭಾ, ಶ್ರೀ ದಶಮಪ್ರತಿ ದಾಸವೃಂದ ಮತ್ತು ನಾಗರಭಾವಿ ಪಾಪರೆಡ್ಡಿಪಾಳ್ಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಶ್ರೀ ತಾಮ್ರಪರ್ಣಿ ಶ್ರೀ ಮಧ್ವರಾಘವೇಂದ್ರ ಟ್ರಸ್ಟ್ ವತಿಯಿಂದ ಶ್ರೀ ಜಗನ್ನಾಥದಾಸರ ಆರಾಧನೆಯನ್ನು ಹಮ್ಮಿಕೊಳ್ಳಲಾಗಿತ್ತು. “ಶ್ರೀ ಹರಿದಾಸ ನವರಾತ್ರೋತ್ಸವ” ಎಂಬ ಕಾರ್ಯಕ್ರಮದಡಿಯಲ್ಲಿ ಒಂಭತ್ತು ದಿನ ವಿಜೃಂಭಣೆಯಿಂದ ಆರಾಧನೆಯನ್ನು ಆಚರಿಸಲಾಯಿತು, ಈ ಕಾರ್ಯಕ್ರಮವನ್ನು ಉದ್ಘಾಟಿಸಲು ಬಂದಿದ್ದ ಭಾರತೀಯ ವಿದ್ಯಾಭವನದ ಅಧ್ಯಕ್ಷರಾಗಿರುವ ಶ್ರೀ ಡಾ. ಮತ್ತೂರು ಕೃಷ್ಣಮೂರ್ತಿಯವರು ಶ್ರೀ ಜಗನ್ನಾಥದಾಸರ ತಂಬೂರಿಯನ್ನು ನೋಡಿ ಮುಟ್ಟಿ ಪುಳಕಿತರಾದರು ಇದನ್ನು ಜತನದಿಂದ ಕಾಪಾಡಿಕೊಂಡು ಬಂದಿರುವ ಶ್ರೀ ಸತ್ಯನಾರಾಯಣಾಚಾರ್ಯರವರು ಕಾರ್ಯವನ್ನು ಶ್ಲಾಘಿಸಿದರು. ಶ್ರೀ ಜಗನ್ನಾಥದಾಸರ ಆರಾಧನೆ ಪ್ರಯುಕ್ತ ಈ ವಿಶೇಷ ತಂಬೂರಿಯನ್ನು ನಾಗರಭಾವಿಯ ಪಾಪರೆಡ್ಡಿಪಾಳ್ಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದು ಸಾವಿರಾರು ಜನ ಆಸ್ತಿಕ ಬಾಂಧವರು ಈ ತಂಬೂರಿಯ ದರ್ಶನ ಪಡೆದು ಪುಳಕಿತರಾದರು.

ಡಾ|| ಪ್ರಕಾಶ್.ಕೆ.ನಾಡಿಗ್

Related post

Leave a Reply

Your email address will not be published. Required fields are marked *