ನೋವು ನಲಿವುಗಳ ಅಸ್ಮಿತೆ “ಚಿರಸ್ಮಿತ”

 ನೋವು ನಲಿವುಗಳ ಅಸ್ಮಿತೆ “ಚಿರಸ್ಮಿತ”

ನೋವು ನಲಿವುಗಳ ಅಸ್ಮಿತೆ “ಚಿರಸ್ಮಿತ”

ನನಗನಿಸಿದ ಹಾಗೇ, ಚಿರಸ್ಮಿತ ಕಾದಂಬರಿಯಲ್ಲಿ ಬರುವ ಸುಹಾಸಿನಿಯ ಮೃದು ಹಾಗೂ ಸರಳ ಸ್ವಭಾವಕ್ಕೆ ಪ್ರೇರಣೆಯೇ ಲೇಖಕರಾದ “ಯತಿರಾಜ್ ವೀರಾಂಬುಧಿ” ಅವರ ವ್ಯಕ್ತಿತ್ವ. ಕೆಲ ದಿನಗಳ ಹಿಂದೆ ಲೇಖಕರನ್ನು ಭೇಟಿಯಾಗಿ ನನ್ನ ನಗುವಿನಲ್ಲಿ ಅವರ ಖುಷಿ ಹುಡುವ ಮಗು ಮನಸ್ಸನ್ನು ಕಂಡು ಬಂದಿದ್ದೆ. ನಲವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವ ಪರಿಪೂರ್ಣ ವ್ಯಕ್ತಿತ್ವದ ಲೇಖಕರೊಬ್ಬರನ್ನು ಭೇಟಿಯಾಗಿ ಹರಟಿಸುವ ಅದೃಷ್ಟ ನನ್ನ ಪೀಳಿಗೆಯ ಎಷ್ಟು ಜನರಿಗೆ ಸಿಗುತ್ತದೆ ಹೇಳಿ??

ಭೇಟಿಯಾಗಿ ಬಂದ ದಿನದಿಂದಲೂ ಓದಿಸಿಕೊಳ್ಳದೆಯೇ ಚಿರಸ್ಮಿತ ಬಹುವಾಗಿ ಕಾಡುತ್ತಿದ್ದಳು. ಓದಿ ಮುಗಿಸಿದ ಮೇಲೆ ಆ ಕಾಡುವಿಕೆ ಇನ್ನೂ ಹೆಚ್ಚಾಗಿದೆ. ಯತಿರಾಜ್ ವೀರಾಂಬುಧಿ ಅವರು ಸ್ವತಃ ಅವರೇ ಇಷ್ಟಪಟ್ಟು ಸೂಚಿಸುವ ಅವರ ಪುಸ್ತಕಗಳಲ್ಲಿ ಚಿರಸ್ಮಿತ ಕಾದಂಬರಿ ಮೊದಲನೆಯದು. ಸಾಮಾಜಿಕ ಕಳಕಳಿಯ ಹಾಗೂ ಮಾನವೀಯ ಗುಣಗಳನ್ನು ಓದುಗನಲ್ಲಿ ಬಿತ್ತುವ ಕೌಟುಂಬಿಕ ಕಾದಂಬರಿ ಇದಾಗಿದ್ದು, ಸರಳ ಭಾಷೆ, ಹೆಪ್ಪುಗಟ್ಟಿದ ಭಾವನೆಗಳ ಮೂಲಕ ಓದುಗನನ್ನು ಮಂತ್ರಮುಗ್ಧನನ್ನಾಗಿ ಮಾಡುತ್ತದೆ. ಈ ಕೃತಿಯನ್ನು ಕಾದಂಬರಿಯಾಗಿಯೂ, ಆತ್ಮಕತೆಯಾಗಿಯೂ, ಪ್ರವಾಸಕಥನವಾಗಿಯೂ ಓದಿಕೊಳ್ಳಬಹುದು. ಓದುತ್ತಾಹೋದಂತೆ ಮೂರು ಪ್ರಕಾರಗಳ ರುಚಿ ಓದುಗನಿಗೆ ಗಹನವಾಗುತ್ತದೆ.

ಸ್ವತಂತ್ರಪೂರ್ವದಲ್ಲಿ ಮೈಸೂರಿನಲ್ಲಿ ನಡೆಯುವ ಸಾಮಾನ್ಯ ಸ್ತ್ರೀಯೊಬ್ಬಳ ಅಸಮಾನ್ಯ ಕಥಾಹಂದರವೇ ಕಾದಂಬರಿಯ ಮೇಲ್ಮೈ ಸಿಪ್ಪೆ. ಇದನ್ನು ಓದುವಾಗ ಅನಕೃ ಅವರ ಸಂಧ್ಯಾರಾಗ ಕಾದಂಬರಿ ಹಾಗೇ ನೆನಪಿಗೆ ಬಂದು ಹೋಗುತ್ತದೆ. ಹಾಗಾಗಿ ಈ ಕೃತಿಯ ಲೇಖಕರು ನನಗೆ ಅನಕೃ ಅವರಂತೆಯೇ ಕಾದಂಬರಿಯುದ್ದಕ್ಕೂ ಮರುಪರಿಚಯವಾದರು. ಇಲ್ಲಿ ಒಂದು ಹೆಣ್ಣಿನ ಪೂರ್ತಿ ಬದುಕಿನ ಅನಾವರಣವಾಗಿದ್ದು, ಪ್ರತೀ ಅಧ್ಯಾಯದಲ್ಲೂ ಅನೇಕಾನೇಕ ತಿರುವುಗಳೊಂದಿಗೆ ಕಾದಂಬರಿ ಸಾಗುತ್ತದೆ. ಕಥೆಯೊಳಗೊಂದು ಕಥೆ ಹೇಳುವ ಈ ವಿಭಿನ್ನ ಪ್ರಯೋಗವು ಎಲ್ಲಿಯೂ ಓದುಗರನ್ನು ಆಕರ್ಷಿಸಲು ಪಾತ್ರಗಳನ್ನಾಗಲೀ, ಸನ್ನಿವೇಶಗಳನ್ನಾಗಲೀ ವೈಭವೀಕರಿಸಿರುವುದು ಕಂಡುಬರುವುದಿಲ್ಲ.

ಒಂದು ಮಧ್ಯಮವರ್ಗ ಕುಟುಂಬದ ಹೆಣ್ಣು. ಹುಟ್ಟಿನಿಂದ ತಂದೆಯನ್ನು ಮಗುವಿನಂತೆ ನೋಡಿಕೊಳ್ತಾಳೆ. ನಂತರ ತನ್ನ ಬಾಳು ಬೆಳಕಿಸಬೇಕಾದ ಮಾವನೇ ಆಕೆಯ ಮೇಲೆ ಅತ್ಯಾಚಾರವೆಸಗುತ್ತಾನೆ. ಇದರಿಂದ ಇಪ್ಪತೈದು ವರ್ಷಗಳ ವಯೋ ಅಂತರದಿಂದ ಕೂಡಿದ ದಾಂಪತ್ಯ ಶುರುವಾಗುತ್ತದೆ. ಆಗ ಗಂಡನನ್ನು ಸಲಹುತ್ತಾಳೆ. ನಂತರ ದುಷ್ಚಟಗಳಿಗೆ ಬಲಿಯಾದ ತನ್ನ ಮಗನ್ನನ್ನು ಕೊನೆಯವರೆಗೂ ಕಣ್ಣಲ್ಲಿ ಕಣ್ಣಿಟ್ಟು ಕಾಯುವ ಪರಿಸ್ಥಿತಿಯೂ ಎದುರಾಗುತ್ತದೆ. ಇನ್ನ ಆ ಜೀವ ತನಗೆ ಅಂತ ತಾನು ಬಿಡುವು ಮಾಡಿಕೊಂಡ ಉದಾಹರಣೆಗಳೇ ಇಲ್ಲ.

ನಮ್ಮ ನಮ್ಮ ಹವ್ಯಾಸಗಳೇ ನಮ್ಮ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ ಎಂಬ ಮಾತು ಸುಹಾಸಿನಿ ಆರಿಸಿಕೊಳ್ಳುವ ಪುಸ್ತಕ ಓದುವಿಕೆ ಹಾಗೂ ಸಂಗೀತ ಎರಡೂ ಅವಳಿಗೆ ಒಂದು ಪರಿಪೂರ್ಣ ಬದುಕು ಕಟ್ಟಿಕೊಡುತ್ತವೆ. ಇನ್ನೊಂದು ಕಡೆ ಒಬ್ಬ ಸ್ವತಂತ್ರ ಹೋರಾಟಗಾರನ ಮಗನಾದ ಭಾರತೀಪ್ರಿಯನ ಮದ್ಯ ಸೇವನೆ, ಧೂಮಪಾನಗಳು ಅವನ ಬದುಕನ್ನು ಹಾಳುಗೆಡವುತ್ತವೆ. ಆ ಕಾಲದ ರಾಜ್ ಕುಮಾರ್ ವಿಷ್ಣುವರ್ಧನ್ ಅಭಿನಯದ ಚಲನಚಿತ್ರಗಳು ನೋಡುಗರ ಮನಸ್ಸಿನಲ್ಲಿ ಧನಾತ್ಮಕ ಚಿಂತನೆಗಳನ್ನು ಹೇಗೆ ಹುಟ್ಟಿಹಾಕುತ್ತಿದ್ದವು ಎಂಬುದನ್ನು ಕಾದಂಬರಿಯ ದ್ವಿತಿಯಾರ್ಧದಲ್ಲಿ ಕಾಣಬಹುದಾಗಿದೆ.

ಮಧ್ಯ ಮಧ್ಯ ಸಿಗುವ ಭಗವದ್ಗೀತೆ, ಮಂಕುತಿಮ್ಮನ ಕಗ್ಗದ ಸಾಲುಗಳು ಓದುಗನಿಗೆ ಆಧ್ಯಾತ್ಮದ ಪಯಣದಿಂದ ಸ್ವಪ್ರೇರಣಾ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಬಗೆಯನ್ನು ಕಾದಂಬರಿಕಾರರು ಚಿರಸ್ಮಿತ ಪಾತ್ರದ ಮೂಲಕ ಚೆನ್ನಾಗಿ ಚಿತ್ರಿಸಿದ್ದಾರೆ.

ಸುಫಲ, ಶಂಭು, ಮಿಥಿಲೆ, ಭಾರತೀಪ್ರಿಯ, ನಾಗಮ್ಮಜ್ಜಿ, ಗಜಾನನ, ಭಾಗ್ಯ, ಮನೋಹರ ಸೇರಿದಂತೆ ಮತ್ತೆಲ್ಲಾ ಪಾತ್ರಗಳು ಒಂದನ್ನೊಂದು ಬಿಟ್ಟುಕೊಡಲಾರದಂತೆ ಸಂಬಂಧಗಳನ್ನು ಹೆಣೆದುಕೊಂಡಿವೆ. ಗಜಾನನ ಮಾಡುವ ಅಚಾತುರ್ಯ ಘಟನೆಯನ್ನು ಮರುಕಳಿಸುವಂತೆ ಭಾರತೀಪ್ರಿಯ ಕಾರಣನಾಗುತ್ತಾನೆ. ಸ್ನೇಹಿತೆಯನ್ನು ಬಿಟ್ಟಿರದ ಸುಫಲ, ಸುಹಾಸಿನಿಯ ಧ್ಯಾನದಲ್ಲೇ ಇರುತ್ತಾಳೆ. ಶಂಭು ಹೇಳಿಕೊಟ್ಟ ಜೀವನ ಪಾಠಗಳು, ಅವನು ಕೊಟ್ಟ ಪುಸ್ತಕಗಳು ಚಿರಸ್ಮಿತಳ ಬದುಕನ್ನು ಅರ್ಥಪೂರ್ಣವಾಗಿ ಮಾರ್ಪಾಡಿಸುತ್ತವೆ. ಕೊನೆಗೆ ಸಿಗುವ ಕಿಷಾನ್ ಮಡಿಲಲ್ಲಿ ಚಿರಸ್ಮಿತ ಪ್ರಾಣಬಿಡುತ್ತಾಳೆ.

ಒಂದು ಹೆಣ್ಣಿನ ಅಂತರಾಳವನ್ನು ಒಬ್ಬ ಗಂಡು ಎಷ್ಟು ಆಳಕ್ಕೆ ಹೊಕ್ಕಬಹುದೋ.. ಅಷ್ಟು ದೂರದ ಪ್ರಯಾಣವನ್ನು ಸುಹಾಸಿನಿ ಉರ್ಫ್ ಚಿರಸ್ಮಿತ ಪಾತ್ರದ ಮೂಲಕ ಲೇಖಕರು ನಮ್ಮಂಥ ಓದುಗರನ್ನೂ ಹೊಕ್ಕಿಬಿಟ್ಟಿದ್ದಾರೆ. ಕಾದಂಬರಿ ಓದುವಾಗ ಮೂರ್ನಾಲ್ಕು ಬಾರಿಯಾದರೂ ಗಂಟಲು ಕಟ್ಟದೆ ಇರಲಾರದು. ಒಂದು ಪರಿಪೂರ್ಣ ಕಾದಂಬರಿ ಓದಿದ ಅನುಭವಕ್ಕಾಗಿ ಈ ಕಾದಂಬರಿಯನ್ನು ನಾವು ಓದಲೇಬೇಕು. ಈ ಕೃತಿಯಿಂದ ಲೇಖಕರ ಮತ್ತಷ್ಟು ಕೃತಿ ಓದುವ ಇರಾದೆಯಾಗಿದೆ.

ಧನ್ಯವಾದಗಳು “ಯತಿರಾಜ್ ವೀರಾಂಬುಧಿ” ಸರ್ ಇಂಥದ್ದೊಂದು ಕಾದಂಬರಿಯನ್ನು ನಮ್ಮ ಮುಂದೆ ತೆರೆದು ಇಟ್ಟಿದ್ದಕ್ಕೆ.

ಅನಂತ್ ಕುಣಿಗಲ್

Related post

Leave a Reply

Your email address will not be published. Required fields are marked *