ನೋವ ನುಂಗಿದ ನಂಜುಂಡರು
ಎಂತಹ ನೆನಪುಗಳ ಸಂತೆ ನಮ್ಮ ಬಾಲ್ಯ !
ಈಗ ನೆನೆಸಿಕೊಂಡರೆ ಮನಸ್ಸಿಗೆ ಮುದ !
ಒಮ್ಮೊಮ್ಮೆ ನೋವು ಬಂದು ಬೇಸರವೆನಿಸುತ್ತದೆ !
ಕಾಂಡಕಿ ಕಲ್ಲಿನ ಗಚ್ಚಿನಮನೆ, ಕೂಡು ಕುಟುಂಬ, ತಂದೆ-ತಾಯಿ, ದೊಡ್ಡಪ್ಪ-ದೊಡ್ಡವ್ವ, ಚಿಕ್ಕಪ್ಪ- ಚಿಕ್ಕವ್ವ
ಎಲ್ಲರಿಗೂ ಮೂರು-ನಾಲ್ಕು ಮಕ್ಕಳು !
ಮನೆಯಲ್ಲಿ ದಿನವು ಸಂತೆ ನೆರೆದಂತೆ !
ಅಪ್ಪನೇ ಮನೆಯ ಯಜಮಾನ
ಆತ ಹಾಕಿದ ಗೆರೆಯನ್ನು ಯಾರೂ ದಾಟುತ್ತಿರಲಿಲ್ಲ !
ಮನೆಯಲ್ಲಿಯ ಎಲ್ಲ ಹಿರಿಯರು ನಮ್ಮಂಥ ಚಿಕ್ಕವರನ್ನು ಎಷ್ಟು ಅಗಾಧ
ಪ್ರೀತಿಯಿಂದ ನೋಡುತ್ತಿದ್ದರು !
ಬೇಡ ಬೇಡವೆಂದರು ಒತ್ತಾಯ ಮಾಡಿ
ಊಟ ಮಾಡಿಸುವ ದೊಡ್ಡವ್ವ-ಚಿಕ್ಕವ್ವ !
ಸ್ನಾನಕ್ಕೆ ಬಿಸಿ ನೀರು ಕಾಯಿಸಿ ದಿನವೂ ಸ್ನಾನ ಮಾಡಿಸುವ ಅವರು ನಮಗೆ ಕಣ್ಣಿಗೆ ಕಾಣುವ ದೇವತೆಗಳಾಗಿದ್ದರು !
ರಜಾ ದಿನಗಳಂದು ಹೊಲ-ಗದ್ದೆಗಳಿಗೆ ಹೋಗಿ ನಾವೆಲ್ಲರೂ ದನ ಮೇಯಿಸುತ್ತಿದ್ದೆವು !
ಕಳ್ಳ-ಕೊಳ್ಳಗಳಲ್ಲಿ ದಣಿವಾಗುವವರೆಗೂ
ಈಜು ಹೊಡೆಯುತ್ತಿದ್ದೆವು !
ಹಬ್ಬ-ಹರಿದಿನಗಳು ಬಂದರೆ ಎಲ್ಲರಿಗೂ
ಒಂದೇ ರೀತಿಯಾದ ಹೊಸ ಬಟ್ಟೆ ! ಸಿಹಿ ಭೋಜನ !!
ಮುಂದೆ ಕೂಡು ಕುಟುಂಬಗಳು ಬೇರೆ ಬೇರೆಯಾಗಿ ಮನೆಯೊಂದು ಮೂರು ಬಾಗಿಲುಗಳಾದವು !
ಊರಪಂಚರ ಸಮ್ಮುಖದಲ್ಲಿ
ನ್ಯಾಯ ಸೇರಿಸಿ ಹೊಲ-ಮನೆಗಳನ್ನು
ಪಾಲು ಮಾಡಿಕೊಂಡರು !
ಪ್ರೀತಿಯಿಂದ ಜೀವಕ್ಕೆ ಜೀವವಾಗಿದ್ದ
ಸಹೋದರರು ಕತ್ತಿ ಮಸೆಯತೊಡಗಿದರು !
ಅಣ್ಣ-ತಮ್ಮಂದಿರು ದಾಯಾದಿಗಳಾದರು !
ಒಕ್ಕಲುತನ ಮಾಡಲು ಮಕ್ಕಳೆಲ್ಲ ಹಿಂಜರಿದು
ಉದ್ಯೋಗ ಅರಸಿ ಪಟ್ಟಣ ಸೇರಿದರು !!
ಊರಲ್ಲಿ ಈಗ ನನ್ನ ತಂದೆ-ತಾಯಿ, ದೊಡ್ಡಪ್ಪ-ದೊಡ್ಡಮ್ಮ, ಚಿಕ್ಕಪ್ಪ-ಚಿಕ್ಕಮ್ಮ ಮಾತ್ರ !
ಮಕ್ಕಳೆಲ್ಲ ದಿಕ್ಕಾಪಾಲಾಗಿ ಹರಡಿ ಹೋಗಿದ್ದೇವೆ
ವರ್ಷದಲ್ಲಿ ಒಂದೆರಡು ಸಲ ಊರಿಗೆ ಬಂದಾಗ
ಕೂಡುಮನೆಯಲ್ಲಿದ್ದ ನಮ್ಮನ್ನು ಈಗ
ಯಾರೂ ಮಾತನಾಡಿಸುವುದಿಲ್ಲ!
ನಮ್ಮ ಮುಖ ನೋಡಿ ಮತ್ಸರದಿಂದ
ಮೂಗು ಮುರಿದು ದೂರ ಹೋಗುತ್ತಾರೆ !
ಪ್ರೀತಿಯಿಂದ ತುತ್ತು ತಿನ್ನಿಸುತ್ತಿದ್ದ ದೊಡ್ಡವ್ವ-ಚಿಕ್ಕವ್ವ ಈಗ ಅಪರಿಚಿತರಂತೆ ವರ್ತಿಸುತ್ತಾರೆ !
ಇದನ್ನು ನೋಡಿ ಕಣ್ಣಲ್ಲಿ ನೀರು ಜಿನುಗುತ್ತವೆ !
ಏನು ಹೇಳಲಾಗದೆ ನನ್ನಪ್ಪ-ನನ್ನವ್ವ ಮಕ್ಕಳ ಮೇಲಿನ
ಕುರುಡು ಪ್ರೀತಿಯಿಂದ ಸುಮ್ಮನಾಗಿದ್ದಾರೆ !
ಮಕ್ಕಳು ಬಲು ದೂರವಾಗಿದ್ದಾರೆ
ಎಂಬ ನೋವನ್ನು ನುಂಗಿ ನಂಜುಂಡರಾಗಿದ್ದಾರೆ !!
ಪ್ರೊ. ಸಿದ್ದು ಸಾವಳಸಂಗ
ಹಿರಿಯ ಕನ್ನಡ ಉಪನ್ಯಾಸಕರು
ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜು
ವಿಜಯಪುರ – 586101
ಮೊಬೈಲ್ ನಂ – 9611789355