ಪಕ್ಷಿಲೋಕ – ಕಾಗೆಗಳು

ಪಕ್ಷಿಲೋಕ – 1

ಕಾಗೆಗಳು

“…ಅನ್ನದಲ್ಲಿ ಕೂತ ಕಾಗೆ ತನ್ನ ಬಳಗವನ್ನೆಲ್ಲಾ ಕರೆಯುತ್ತದೆ!”

ಈ ಮಾತನ್ನು ನಾವು ಅನೇಕ ಬಾರಿ ಕೇಳಿರುತ್ತೇವೆ. ಒಳ್ಳೆಯದಕ್ಕೂ ಕೆಟ್ಟದಕ್ಕೂ ಇದನ್ನು ಒಪ್ಪವಿಡುತ್ತೇವೆ. “ಅವನು ಬದುಕಿದ್ದಾಗ ಒಬ್ಬರಿಗೆ ಕೈಯೆತ್ತಿ ಒಂದು ಕಾಸು ಕೊಡಲಿಲ್ಲ, ಅವನ ಪಿಂಡದಲ್ಲಿ ಕೂತ ಕಾಗೆ ತನ್ನ ಬಳಗವನ್ನೆಲ್ಲ ಕರೀತು ನೋಡಿ ಎಂದು”. ಹಾಗೆಯೇ “…ಇದನ್ನ ಮಾಡ್ದೆ ಇದ್ರೆ ಅವಗೆ ಕಾಕಿಪಿಂಡ ಆಗಂಗಿಲ್ಲ!” ಎಂಬುದೂ ಒಂದು ಮಾತು! ಅದನ್ನು ಅವನು ಮಾಡೇ ಮಾಡುತ್ತಾನೆ ಎಂಬುದು ಅರ್ಥ. ಒಟ್ಟಾರೆ, ನಮ್ಮ ಸಂಸ್ಕೃತಿಯಲ್ಲಿ ಕಾಗೆಗೆ ಬಹುದೊಡ್ಡ ಸ್ಥಾನವಿದೆ. ತೀರಿಕೊಂಡ ಪಿತೃಗಳು ಹಿಂದಿರುಗುವುದು ಈ ಕಾಗೆಗಳ ರೂಪದಲ್ಲಿ ಎಂದು ನಂಬಿಕೆ. ಹಾಗೆಯೇ, ತಿಥಿಯಂತಹ ಸಂದರ್ಭದಲ್ಲಿ ಇಟ್ಟ ಎಡೆಯನ್ನು ಕಾಗೆ ಬಂದು ತಿನ್ನಲೇ ಬೇಕು ಹಾಗಾಗದಿದ್ದರೆ ಏನಾದರೂ ಅಪಚಾರ, ಅಕಾರ್ಯ ನಡೆದಿದೆ ಎಂದೇ ಅರ್ಥ!

ಕಾಗೆ ನಮ್ಮ ಜೀವಿನದಲ್ಲಿ ಪಡೆದಿರುವ ಸ್ಥಾನ ವಿಚಿತ್ರವಾದದ್ದು! ಇಷ್ಟವಾಗದ್ದನ್ನೋ ಅಥವಾ ನಮಗಿಷ್ಟವಾಗದವರು ಹೇಳಿದ್ದನ್ನೂ “ಕಾಗುಟ್ಟಿದ!” ಎನ್ನುವುದುಂಟು. ಅದೇನು ಹಾಗೆ ಕಾಗೆಗಳಂತೆ ಕಾ ಕಾ ಕಾ ಅಂತ ಬಡಕೊತೀರಾ ಎಂಬುದೂ ಉಂಟು! ಕಾಗೆ ಬಳಗ ಎನ್ನುವುದೂ ಉಂಟು! ಕಛೇರಿಯಲ್ಲಿ ನಮ್ಮ ಬಾಸು ನಾವು ಕೊಟ್ಟ ವಿವರಣೆಯನ್ನು ಕೇಳಿ ಬೈದು “ಇದುವರೆಗೂ ನೀವು ಹೇಳಿದ್ದು ಕಾಗಕ್ಕ, ಗುಬ್ಬಕ್ಕನ ಕತೆ!” ಎನ್ನುವುದೂ ಉಂಟು! ಹೂಜಿಯ ತಳದಲ್ಲಿದ್ದ ನೀರನ್ನು ಮೇಲೆ ತರಲು ಕಾಗೆ ಕಲ್ಲುತುಂಬಿಸಿದ್ದನ್ನು ಹೇಳಿ ಅದರ ಬುದ್ಧಿವಂತಿಕೆಯನ್ನು ಹೊಗಳುವುದೂ ಉಂಟು, ಮಕ್ಕಳಿಗೆ ಕಾಗಕ್ಕ ಗುಬ್ಬಕ್ಕನ ಕತೆ ಹೇಳುವುದೂ ಉಂಟು! ಇಷ್ಟಾದರೂ ಕಾಗೆ ಮನೆಯೊಳಗೆ ಬರಬಾರದು! ಅಪಶಕುನ‼ ಇಂತಿಪ್ಪ ಕಾಗೆ ನಿಜದಲ್ಲಿ ಪರಿಸರದ ರಕ್ಷಕ! ಒಬ್ಬ ಜಾಡಮಾಲಿ! ಕಸದಂತಹ ವಸ್ತುಗಳನ್ನು ತಿಂದು ಪರಿಸರವನ್ನು ಶುದ್ಧವಾಗಿಡುತ್ತದೆ.

ಪಕ್ಷಿ ವಿಜ್ಞಾನದಲ್ಲಿ ವಿವರಿಸಿರುವಂತೆ ಕಾರ್ವಿಡೇ ಕುಟುಂಬಕ್ಕೆ ಸೇರಿದ ಇತರ ಕೆಲವು ಹಕ್ಕಿಗಳನ್ನೂ ಸೇರಿ ನಮ್ಮಲ್ಲಿ ಸುಮಾರು ಹದಿನಾರು ಬಗೆಯ ಕಾಗೆಗಳಿದ್ದು ಜಾಗತಿಕವಾಗಿ ಸುಮಾರು 116 ಪ್ರಭೇದದ ಕಾಗೆ, ಜೇ (ನೀಲಕಂಠ), ಕಳ್ಳಹಕ್ಕಿ ಅಥವಾ ಮಟಪಕ್ಷಿಗಳಿವೆ.

ನಾವು ಸಾಮಾನ್ಯವಾಗಿ ಕಾಣುವುದು ಎರಡು ಬಗೆಯ ಕಾಗೆಗಳನ್ನು. ಒಂದು ಪೂರ್ತಿ ಕಪ್ಪುಬಣ್ಣವಿರುವ ಕಾಗೆ. ಇದನ್ನು ಕಾಡುಕಾಗೆ (Jungle Crow or Large-billed Crow 1054 Corvus macrorhynchos) ಎನ್ನುತ್ತಾರೆ. (ಇಂಗ್ಲಿಷಿನ ಹೆಸರು, ಪಕ್ಷಿ ಸಂಖ್ಯೆ ಇದು ಸಲೀಂ ಅಲಿಯವರ ಸಿನಾಪ್ಸಿಸ್‍ ಪುಸ್ತಕದಲ್ಲಿನ ಪಕ್ಷಿಸಂಖ್ಯೆ, ಕೊನೆಯದು ವೈಜ್ಞಾನಿಕ ನಾಮದ್ವಯ) ಇನ್ನೊಂದು ಕುತ್ತಿಗೆ ಬಳಿ ಬೂದು ಬಣ್ಣವನ್ನು ಹೊಂದಿರುತ್ತದೆ. ಇದನ್ನು ಮನೆಕಾಗೆ ಎನ್ನುತ್ತಾರೆ (House crow, 1049 Corvus splendens).  ಮನೆಕಾಗೆ, ಕಾಡು ಕಾಗೆಗಿಂತ ಗಾತ್ರದಲ್ಲಿ ಚಿಕ್ಕದಾಗಿಯೂ ಇರುತ್ತದೆ. ಕಾಡುಕಾಗೆಯ ಕೊಕ್ಕು ಹೆಚ್ಚು ದಪ್ಪ ಮತ್ತು ಹೆಚ್ಚು ಉದ್ದ. ಮೇಲ್ಕೊಕ್ಕು ಮುಂದಕ್ಕೆ ಬಾಗಿರುತ್ತದೆ. ಇವನ್ನು ಗಂಡು ಕಾಗೆ, ಹೆಣ್ಣು ಕಾಗೆ ಎಂದುಕೊಂಡುಬಿಡುತ್ತಾರೆ. ಆದರೆ, ಹಾಗಲ್ಲ. ಕಾಡು ಕಾಗೆ, ಮನೆಕಾಗೆಗಳಲ್ಲಿಯೇ ಗಂಡು ಹೆಣ್ಣುಗಳು ಇರುತ್ತವೆ. ಅವು ನೋಡಲು ಒಂದೇ ತರಹ ಕಾಣುವುದರಿಂದ ನೇರವಾಗಿ ಯಾವುದು ಗಂಡು ಯಾವುದು ಹೆಣ್ಣು ಎಂದು ಹೇಳಲಾಗುವುದಿಲ್ಲ. ಈ ಗುಣಲಕ್ಷಣವನ್ನು ವೈಜ್ಞಾನಿಕವಾಗಿ ಸೆಕ್ಸುಯಲ್ ಡೈಮಾರ್ಫಿಸಮ್‍ ಎನ್ನುತ್ತಾರೆ.

ವರ್ಷಪೂರ್ತಿ ಮರಿಮಾಡುವ ಇವು ಗೂಡುಕಟ್ಟಲು ಆಧುನಿಕ ವಸ್ತುಗಳನ್ನು ಬಳಸುವಲ್ಲಿ ಬುದ್ಧಿವಂತಿಕೆ ತೋರಿಸುತ್ತವೆ. ಕಬ್ಬಿಣದ ತಂತಿ, ಗೇರ್‍ ವೈರು, ಕೊನೆಗೆ ಹ್ಯಾಂಗರ್‍ಗಳನ್ನು ಸಹ ಗೂಡು ಕಟ್ಟಲು ಬಳಸುತ್ತವೆ. ಒರಟಾಗಿ ರಚಿತವಾದ ಗೂಡು. ಮರಮೇಲೆ, ವಿದ್ಯುತ್ ತಂತಿಯ ಮೇಲೆ ಹೀಗೆ ಎಲ್ಲಿ ತುಸು ಸ್ಥಳವಿರುತ್ತದೆಯೋ ಅಲ್ಲೇ ಗೂಡುಕಟ್ಟಿ ಮರಿಮಾಡುತ್ತವೆ.

ದಕ್ಷಿಣಭಾರತದಿಂದ ಉತ್ತರಭಾರತಕ್ಕೆ ಹೋದಂತೆ ನಮಗೆ ಇನ್ನು ಅನೇಕ ಬಗೆಯ ಕಾಗೆಗಳು ಕಾಣಸಿಗುತ್ತವೆ. ರಾವೆನ್‍ ಎಂದು ಕರೆಯಲಾಗುವ ದೊಡ್ಡಗಾತ್ರದ ಕಾಗೆಗಳು, ಹಿಮಾಲಯ ಪ್ರದೇಶದಲ್ಲಿ ಕಂಡುಬರುವ ಕಾಗೆಗಳು, ಕೆಂಪು ಕೊಕ್ಕಿನ ಕಾಗೆಗಳು ಹೀಗೆ ಅನೇಕ ಪ್ರಭೇದದ ಕಾಗೆಗಳು ನಮಗೆ ಕಾಣುತ್ತವೆ.

ಈಗಾಗಲೇ ಹೇಳಿದಂತೆ ಕಾಗೆಗಳು ಪರಿಸರದ ಜಾಡಮಾಲಿಗಳು. ಕಸ ಇಲ್ಲದಿದ್ದಲ್ಲಿ ಇವು ಇರುವುದಿಲ್ಲ. ಕಾಡುಗಳಲ್ಲಿ ಕಾಗೆಗಳು ತೀರಾ ಕಡಿಮೆ ಸಂಖ್ಯೆಯಲ್ಲಿರುತ್ತವೆ.

ಆತಂಕದ ಸುದ್ದಿಯೆಂದರೆ ಗುಬ್ಬಚ್ಚಿ ಮಾತ್ರವಲ್ಲ ಕಾಗೆಗಳ ಸಂತತಿಯೂ ಕ್ಷೀಣವಾಗುತ್ತಿದೆ ಎಂಬುದು. ತಿಥಿಗಳನ್ನು ನಡೆಸುವ ಮಠ, ಭವನಗಳಲ್ಲಿ ಕಾಗೆಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಸ್ಪಷ್ಟವಾಗಿ ತಿಳಿಯುತ್ತಿದೆ. ಪರಿಸರದ ಶುದ್ಧಕಾರಕದ ಜೊತೆಗೆ ಅವುಗಳ ನಿಜವಾದ ಸ್ಥಾನವೇನು ಎಂಬುದು ಇನ್ನು ತಿಳಿದಿಲ್ಲ. ಸ್ಥಾನವಿಲ್ಲದ ಯಾವುದೂ ವಿಕಾಸವಾಗುವುದಿಲ್ಲ. ಕಾಗೆಗಳ ಕಣ್ಮರೆ ನಮಗೆ ಯಾವ ಕೆಡುಕನ್ನು ತರುವುದೋ ಯಾರಿಗೆ ಗೊತ್ತು? ಒಂದಂತೂ ಸ್ಷಷ್ಟ ಒಂದು ಕಾಲದಲ್ಲಿ ಸಾಕಷ್ಟಿದ್ದ ಕಾಗೆಗಳು, ಇಂದು ಗಣನೀಯವಾಗಿ ಕಡಿಮೆಯಾಗಿವೆ. ಹಿಂದೆ ನೂರಾರು ಕಾಗೆಗಳು ಒಟ್ಟಿಗೆ ಕೂತು ಸಮ್ಮೇಳನ ನಡುಸುವಂತೆ ಕೂಗಾಡುತ್ತಿದ್ದವು. ಅವುಗಳ ಈ ಕ್ರಮ ಯಾಕೆಂದು ತಿಳಿದಿಲ್ಲ. ಇಂತಹ “ಸಮ್ಮೇಳನಗಳು” ಒಂದು ಗಣನೀಯ ಕಾಲಮಾನದಿಂದ ಕಂಡೇ ಇಲ್ಲ. ಇದು ಆಂತಕಕಾರಿ ವಿಷಯ. ಕಾಗೆಗಳನ್ನು ಕುರಿತ ಅಧ್ಯಯನಗಳು ಅಲ್ಲಿಷ್ಟು ಇಲ್ಲಿಷ್ಟು ನಡೆಯುತ್ತಿವೆ. ಕಾಗೆಗಳ ಸಂತತಿ ಉಳಿಯಲಿ ಎಂದು ಹಾರೈಸೋಣ. ಮುಂದಿನ ಬಾರಿ ಕಾಗೆ ಕಂಡಾಗ ಇವನ್ನೆಲ್ಲ ನೆನಪಿಸಿಕೊಳ್ಳಿ, ನಮಗೆ ಬರೆಯಿರಿ.

ಕಲ್ಗುಂಡಿ ನವೀನ್

(ಕೆ.ಎಸ್. ನವೀನ್)

Facebook: www.facebook.com/ksn.bird

kalgundi.naveen@yahoo.com

–           ಚಿತ್ರಗಳು:  ಶ್ರೀ ಜಿ ಎಸ್‍ ಶ್ರೀನಾಥ್

Related post