ಪಕ್ಷಿಲೋಕ – ಗಿಣಿಯು ಪಂಜರದೊಳಿಲ್ಲಾ

ಗಿಣಿಯು ಪಂಜರದೊಳಿಲ್ಲಾ, ರಾಮ ರಾಮಾ ಎಂಬ ದಾಸರ ಪದವನ್ನು ನಾವೆಲ್ಲರೂ ಕೇಳಿರುತ್ತೇವೆ. ಒಬ್ಬ ಸಂತನ ಮತ್ತು ಕಟುಕನ ಮನೆಯಲ್ಲಿ ಬೆಳೆದ ಒಂದೇ ಗಿಣಿಯ ಎರಡು ಮರಿಗಳು ಮುಂದೆ ಏನಾದವು ಎಂಬುದು ನಮಗೆ ತಿಳಿದೇ ಇದೆ. ಮದುವೆಗೆ ಮೊದಲು ಹುಡುಗಿಗೆ ಗಿಣಿಯಂತೆ ಮಾತಾಡುತ್ತೀಯಲ್ಲೇ ಎಂದವರು ಮುಂದೆ “ಗಿಣಿ ತರ ಮಾತಾಡ್ಬೇಡ ನೀನು ಎಂದಿರುತ್ತೇವೆ!” ಗಿಣಿ ಭವಿಷ್ಯ ಕೇಳಿರುವುದೂ ಉಂಟು! ಗಿಣಿಯ ಪ್ರಸ್ತಾಪವಿರುವ ಪ್ರಣಯ ಗೀತೆಗಳು ಕಡಿಮೆ ಇವೆಯೇ! (ಪಂಚರಂಗಿ!) ರಾಮ ರಾಮ!

ಇವೆಲ್ಲಾ ಏನೇ ಇರಲಿ, ಗಿಣಿ ಸಾಮಾನ್ಯವಾಗಿ ಸಕಾರಾತ್ಮಕ ವಿಚಾರಗಳಿಗೆ ಹೋಲಿಕೆಯಾಗಿಯೇ ಬರುತ್ತದೆ. ಶೇಷಶಾಸ್ತ್ರಿಗಳು ಕನ್ನಡಕ್ಕೆ ಅನುವಾದಿಸಿದ ತೆಲುಗು ಮೂಲದ “ಗಿಣಿ ಹೇಳಿದ ಅಪೋಲಿ ಕತೆಗಳು” ಎಂಬ ಪುಸ್ತಕವಿದೆ. ಗಿಣಿರಾಮಾ ಎಂಬ ಪ್ರೀತಿಯ ಸಂಬೋಧನೆ! ಇದು ನಮ್ಮ ಸುತ್ತಲಿನ ಸಾಮಾನ್ಯ ಪಕ್ಷಿ ಪ್ರಾಣಿಗಳು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿ ಸೇರಿರುವುದರ ಪ್ರತೀಕ. ಕತೆಕಾವ್ಯಗಳಲ್ಲಿ ಅನೇಕ ಕಡೆ ಕಾಣಿಸಿಕೊಂಡಿರುವುದು ಗಿಣಿಯೇ.

ಸಾಮಾನ್ಯವಾಗಿ ನಾವು ಗಿಣಿ ಎಂದಾಗ ಒಂದೇ ತರದ ಗಿಣಿ ಇರುವುದು ಎಂದುಕೊಂಡಿರುತ್ತೇವೆ, ಅದರಲ್ಲಿಯೂ ಪೂರಾ ನಗರಪ್ರದೇಶಗಳಲ್ಲಿರುವವರು. ಆದರೆ,  ದಕ್ಷಿಣ ಏಷ್ಯಾದಲ್ಲಿ ಹದಿಮೂರು ಬಗೆಯ ಗಿಣಿಗಳಿವೆ. ಮತ್ತೊಂದು ಬಗೆಯ ಗಿಣಿ ಇರಬಹುದು ಎಂಬ ಊಹೆಯೂ ಇದೆ. ಜಗತ್ತಿನಲ್ಲಿ ಬರೋಬ್ಬರಿ ಮುನ್ನೂರ ಇಪ್ಪತ್ತೊಂದು ಬಗೆಯ ಗಿಣಿಗಳಿವೆ. ನಮ್ಮ ಮಲೆನಾಡಿನಲ್ಲಿ ಮಾತ್ರ ಕಂಡುಬರುವ “ಮಲೆಗಿಣಿ” (Malabar Parakeet (Blue-winged Parakeet) Psittacula columboides) ಇದೆ. ರಾಮಗಿಣಿ ಎಂಬ ಮತ್ತೊಂದು ಬಗೆಯ ಗಿಣಿಯಿದೆ (Alexandrine Parakeet Psittacula eupatria). ಸಾಮಾನ್ಯವಾಗಿ ನಾವು ನೋಡುವುದು ಗುಲಾಬಿ ಕೊರಳಿನ ಗಿಣಿ (Rose-ringed Parakeet, Psittacula krameri). ಭವಿಷ್ಯ ಹೇಳುವವರು ಇಟ್ಟುಕೊಳ್ಳುವ ಗಿಣಿ ಇದೇ (ಹೀಗೆ ಇಟ್ಟುಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧ).

ನಮ್ಮ ಕಾಡುಗಳಲ್ಲಿ ಚಿಟ್ಟುಗಿಣಿ ಎಂಬ ಪುಟ್ಟಗಾತ್ರದ ಗಿಣಿ ಕಂಡುಬರುತ್ತದೆ. ಪುಟ್ಟಬಾಲದ ಗುಬ್ಬಚ್ಚಿಯ ಗಾತ್ರದ ಗಿಣಿಯಿದು. ಹಣ್ಣುಗಳಿಗಾಗಿ ತಲೆಕೆಳಕಾಗಿಯೂ ನೇತಾಡಬಲ್ಲ ಗಿಣಿ ಇದು. ಇದಕ್ಕಾಗಿ ಇದರ ಕಾಲ್ಬೆರಳು ಬಿಗಿ ಹಿಡಿತಕೊಡುವಂತೆ ವಿಕಾಸಗೊಂಡಿದೆ. ಈ ಗಿಣಿಯನ್ನು ಇಂಗ್ಲಿಷಿನಲ್ಲಿ ಹ್ಯಾಂಗಿಂಗ್ ಪ್ಯಾರೆಟ್ (Vernal Hanging-Parrot (Indian Lorikeet) Loriculus vernalis) ಎಂದೇ ಕರೆಯುತ್ತಾರೆ. ಇದೇ ಬಗೆಯ ಗಿಣಿ ಶ್ರೀಲಂಕಾದಲ್ಲಿಯೂ ಇದೆ.

ಈ ಪ್ಯಾರೆಟ್ ಮತ್ತು ಪ್ಯಾರಾಕೀಟ್‍ ಈ ಪದಗಳನ್ನು ಅರ್ಥಮಾಡಿಕೊಳ್ಳೋಣ. ಪ್ಯಾರೆಟ್‍ಗಳ ದೊಡ್ಡ ಗಾತ್ರದ ಹಕ್ಕಿಗಳ ಸಮುದಾಯದಲ್ಲಿ ತುಸು ಸಣ್ಣಗಾತ್ರದ ಗಿಳಿಗಳೇ ಪ್ಯಾರಕೀಟ್‍ಗಳು. ಭಾರತದಲ್ಲಿನ ಚಿಟ್ಟುಗಿಣಿಗಳನ್ನು ಹೊರತುಪಡಿಸಿ ಉಳಿದವನ್ನು ಪ್ಯಾರಕೀಟ್ ಎಂದೇ ಕರೆಯುತ್ತಾರೆ. ಅಮೇರಿಕಾ, ನ್ಯೂಜಿಲಾಂಡ್‍ ಇತ್ಯಾದಿ ದೇಶಗಳಲ್ಲಿ ಬಹುದೊಡ್ಡಗಾತ್ರದ ಪ್ಯಾರೆಟ್‍ಗಳು ಕಂಡುಬರುತ್ತವೆ. ಹಾಗೆಯೇ ಅಲ್ಲಿ ಮೆಕಾವ್‍ ಎಂಬ ಮತ್ತೊಂದು ಪಕ್ಷಿಯೂ ಕಂಡುಬರುತ್ತದೆ. ಅಂದರೆ, ನಮ್ಮಲ್ಲಿ ಕಂಡುಬರುವ ಚಿಟ್ಟುಗಿಳಿ ಬಿಟ್ಟು ಉಳಿದೆಲ್ಲವುಗಳ ಸಾಮಾನ್ಯ ಇಂಗ್ಲಿಷ್‍ ಹೆಸರು ಪ್ಯಾರಕೀಟ್‍ ಎಂದೇ. ರೋಸ್‍ ರಿಂಗ್ಡ್  ಪ್ಯಾರಕೀಟ್, ಬ್ಲೂವಿಂಗ್ಡ್‍ ಪ್ಯಾರಕೀಟ್‍ ಹೀಗೆ. ಒಟ್ಟಾರೆ, ಭಾರತಲ್ಲಿ ಪಾರೆಟ್‍ಗಳು ಇಲ್ಲ, ಇರುವುದು ಪ್ಯಾರಕೀಟ್‍ಗಳು ಮಾತ್ರ ಎಂಬುದನ್ನು ನಮ್ಮ ಮಕ್ಕಳಿಗೆ ತಿಳಿಹೇಳಬೇಕು. ಈ ಪ್ಯಾರಕೀಟ್ ಗಿಣಿಗಳ ಬಾಲ ಉದ್ದವಾಗಿರುತ್ತದೆ. ಚಿಟ್ಟುಗಿಣಿಯ ಬಾಲ ಪುಟ್ಟದು. ಎಲ್ಲವೂ ಪ್ರಧಾನವಾಗಿ ಹಸಿರು ಬಣ್ಣವನ್ನು ಹೊಂದಿರುತ್ತವೆ. ಕೂಗು ಕರ್ಕಶವೆಂದೇ ಹೇಳಬೇಕು. ಮರದ ಪೊಟರೆಗಳಲ್ಲಿ ಗೂಡುಮಾಡುತ್ತವೆ. ಗಂಡು ಇಂತಹ ಗೂಡು ಕಟ್ಟಬಹುದಾದ ಜಾಗವನ್ನು ಪತ್ತೆ ಮಾಡಿ ಹೆಣ್ಣಿಗೆ ತೊರಿಸುತ್ತದೆ. ಅದು ಒಪ್ಪಿದರೆ ಮುಂದಿನ ಮಾತು!

ಗಿಣಿಗಳ ಕೊಕ್ಕು ಹಣ್ಣಿನ ಬೀಜಗಳನ್ನು ತಿನ್ನಲು ವಿಕಾಸಗೊಂಡಿದೆ. ಆದರೆ ಇದನ್ನು ಅವು ಮೂರನೆಯ ಕಾಲಿನಂತೆ ಬಳಸುವುದನ್ನು ನೋಡಬಹುದು. ಕಾಲನ್ನು ಕೈಯಂತೆ ಹಣ್ಣು, ಕಾಯಿ ಇತ್ಯಾದಿಯನ್ನು ಹಿಡಿದು ತಿನ್ನುವುದನ್ನೂ ಗಮನಿಸಬಹುದು. ಇನ್ನೊಂದು ಪ್ರಮುಖವಾದ ಅಂಶವೆಂದರೆ ಇವುಗಳಿಗೆ ಕೆಲವು ಪದಗಳನ್ನು ಉಚ್ಛರಿಸಲು ಕಲಿಸಬಹುದು. ಕೆಲವು ಶಿಳ್ಳೆಹಾಕಲು ಕಲಿಸಬಹುದು. (ಆದರೆ, ಸಿನೆಮಾಗಳಲ್ಲಿ ತೋರಿಸುವಂತೆ ಭಾವನೆಗಳನ್ನು ಅರ್ಥಮಾಡಿಕೊಂಡು ಮಾತನಾಡುವುದಿಲ್ಲ). ಈ ಕಾರಣದಿಂದಾಗಿಯೇ ಅವು ಸಾಕುಪ್ರಾಣಿಗಳಾಗಿ ಪ್ರಸಿದ್ಧವಾಗಿಬಿಟ್ಟಿವೆ. ಒಂದು ವಿಷಯ ನಾವು ನೆನಪಿನಲ್ಲಿಡಬೇಕು, ಭಾರತದಲ್ಲಿನ ಯಾವುದೇ ಗಿಣಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವಂತಿಲ್ಲ. ಹಾಗೆ ಇಟ್ಟುಕೊಂಡರೆ ಅದು ವನ್ಯ ಜೀವಿ ಕಾಯಿದೆ ಪ್ರಕಾರ ಅಪರಾಧವಾಗುತ್ತದೆ.

ಗಿಣಿಗಳು, ಗೊರವಂಕಗಳೊಂದಿಗೆ (ಮೈನಾಗಳೊಂದಿಗೆ) ಗುಂಪು ಗುಂಪಾಗಿ ಗೊತ್ತಾದ ಸಾಮಾನ್ಯವಾಗಿ ಬೃಹತ್‍ಗಾತ್ರದ ಮರಗಳ ಮೇಲೆ ರಾತ್ರಿಯನ್ನು ಕಳೆಯುತ್ತವೆ. ಸಂಜೆ ಇಂತಹ ಮರಗಳ ಬಳಿ ಅಸಾಧ್ಯ ಗಲಾಟೆ ಇರುತ್ತದೆ. ನಮ್ಮಲ್ಲಿ ಅದರಲ್ಲಿಯೂ ಮುಖ್ಯವಾಗಿ ನಗರ ಪ್ರದೇಶಗಳಲ್ಲಿ ಇಂತಹ ಬೃಹತ್ ಮರಗಳು ಕಣ್ಮರೆಯಾಗುತ್ತಿರುವ ದಿನಮಾನಗಳಲ್ಲಿ ಇವುಗಳಿಗೆ ವಿಶ್ರಾಂತಿಯ ತಾಣ ಇಲ್ಲವಾಗುತ್ತಿದೆ. ಇದರಿಂದ ಇವುಗಳ ಸಂಖ್ಯೆ ಕಡಿಮೆಯಾಗುತ್ತದೆ. ಇದು ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ಕುರಿತಾಗಿ ಅಧ್ಯಯನಗಳು ನಡೆಯಬೇಕಾಗಿವೆ.

ನಮ್ಮ ಸಂಸ್ಕೃತಿ, ಸಾಹಿತ್ಯದಲ್ಲಿ ಹಾಸುಹೊಕ್ಕಾಗಿರುವ ಗಿಣಿಗಳು ನಮ್ಮ ಪ್ರಮುಖ ಬೀಜಪ್ರಸಾರಕಗಳು. ಇವುಗಳ ಉಳಿವು ನಮ್ಮ ಉಳಿವಿಗೂ ಸಂಬಂಧಿಸಿದೆ. ಅವುಗಳ ಉಳಿವಿನ ನಿಟ್ಟಿನಲ್ಲಿ ನಮ್ಮ ಪ್ರಾಮಾಣಿಕ, ವಿಜ್ಞಾನಾಧಾರಿತ ಪ್ರಯತ್ನ ಸಾಗಬೇಕಿದೆ. ನಿಮಗೆ ಗಿಣಿ ಕಂಡರೆ ಇವನ್ನೆಲ್ಲ ಯೋಚಿಸಿ, ನಮಗೆ ಬರೆಯಿರಿ.

ಕಲ್ಗುಂಡಿ ನವೀನ್

ಚಿತ್ರಗಳು: ಶ್ರೀ ಜಿ ಎಸ್ ಶ್ರೀನಾಥ, ಹಾಗು https://ebird.org/species/bchpar1

Related post