ಪಯಣದ ಹಾದಿಯಲಿ

ಪಯಣದ ಹಾದಿಯಲಿ

ಮುಸ್ಸಂಜೆ ವೇಳೆಯ ತಂಪಿನಲಿ
ಸಾಗಿರಲು ದೂರದೂರಿನ ಪಯಣಕೆ..! ‌
ಕರಗಳ ಹಿಡಿದು ಜೊತೆಯಲಿ ನಡೆದಿರೆ…
ಭಯವು ಇನ್ನೆಲ್ಲಿಹುದು ಮನಕೆ!!

ಸಾಗುವ ಹಾದಿಯು ಬಲು ದೂರವಿರಲು
ಆಪ್ತವೆನಿಸಿದೆ ಭರವಸೆಯ ನೋಟ..!
ಗಗನದಿ ನೀಲಿಮೋಡದ ಚಿತ್ತಾರವಿರಲು..
ಹೊಂಬಿಸಿಲಲರಳಿದೆ ಹಸಿರ ಭೂಪಟ!!

ರೈಲಿನ ಹಳಿಯಂತೆ ಬದುಕಿನ ಚಿತ್ತ
ಜೊತೆಯಲಿ ಸಾಗಿಯೂ ಅಂತರ..!
ಅರಳಿ ಮರಳುತಾ ಮರಳಿ ಅರಳುತಾ…
ಕಲ್ಲುಮುಳ್ಳಿನ ಇರಿತ ಕಾಲಿಗೆ ನಿರಂತರ!!

ಹಸಿರ ಕಾನನದಿ ನಡೆದಿರೆ ಹೀಗೆ
ಪಯಣವಿದು ಸಾಗಿದೆ ಅನವರತ!
ಸಂಕಟವನರಿತ ಮನವಿರಲು ಜೊತೆಗೆ..
ಬೇಸರವೇ ಓಡುವುದು ನಗುನಗುತ!!

ಸುಮನಾ ರಮಾನಂದ

Related post

Leave a Reply

Your email address will not be published. Required fields are marked *