ಒಂದು ನಿರ್ದಿಷ್ಟ ಜೀವಿಗೆ ಅದರ ಮೂಲ ಕಾರ್ಯಗಳನ್ನು ಪೂರೈಸಲು ಅಗತ್ಯವಾದ ಪೋಷಕಾಂಶಗಳು ಮತ್ತು ಶಕ್ತಿಯನ್ನು ನೀಡುವ ಒಂದು ಮೂಲ ಆಹಾರ. ಆಹಾರದಲ್ಲಿ ಅನ್ನದ ಅವಶ್ಯಕತೆ ಎಷ್ಟಿದೆ ಹಾಗೂ ಅದರ ಬೆಲೆ ಏನು ಎಂಬುದು ಹಸಿದಾತನಿಗೆ ಮಾತ್ರ ಗೊತ್ತಿರಲು ಸಾದ್ಯ.
ಪ್ರತಿಯೊಂದು ಜೀವಿಗೂ ಆಹಾರವಿಲ್ಲದೆ ಜೀವಿಸಲು ಸಾದ್ಯವಿಲ್ಲ. ಹಾಗೇಯೆ ಅದರ ಅವಶ್ಯಕತೆ ಎಷ್ಟಿದೆ ಎಂಬುವುದನ್ನು ತಿಳಿದುಕೊಳ್ಳುವುದು ಮುಖ್ಯ. ಬೇರೆ ಬೇರೆ ಪ್ರದೇಶಗಳಲ್ಲಿ, ಬೇರೆ ಬೇರೆ ಧರ್ಮಗಳಲ್ಲಿ, ಬೇರೆ ಬೇರೆ ಜೀವಿಗಳಲ್ಲಿ ಆಹಾರವು ವೈವಿದ್ಯಮಯವಾಗಿರುತ್ತದೆ.
ಗಾಳಿ, ನೀರು ನಮಗೆ ಎಷ್ಟು ಅವಶ್ಯಕವೋ ಅಷ್ಟೇ ನಮಗೆ ಆಹಾರವೂ ಅವಶ್ಯಕ. ಇವುಗಳು ಒಂದಕ್ಕೊಂದು ಪೂರಕವಾಗಿವೆ. ಪ್ರತಿಯೊಬ್ಬರು ದುಡಿಯುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಅಲ್ಲವೇ?.
ಹಸಿವೆಯ ಮುಂದೆ ಯಾವುದೇ ನಾಚಿಕೆ ಮಾನಮರ್ಯಾದೆಯ ಅಂಜಿಕೆ ಇಲ್ಲ. ಮನುಷ್ಯರು ಆಹಾರವನ್ನು ಅನ್ನದ ರೂಪದಲ್ಲಿ(ಮುಖ್ಯವಾಗಿ), ಸಸ್ಯಗಳು ಸೂರ್ಯನ ದ್ಯುತಿಸಂಶ್ಲೇಷಣೆ ಮೂಲಕ, ಪ್ರಾಣಿಗಳು ಕೆಲವೊಂದು ಮಾಂಸಹಾರ ಹಾಗೂ ಸಸ್ಯಹಾರದ ಮುಖಾಂತರ ತನ್ನ ಹಸಿವೆಯನ್ನು ತೀರಿಸಿಕೊಳ್ಳುತ್ತವೆ.
ಭಾರತೀಯ ಸಂಸ್ಕೃತಿಯಲ್ಲಿ ಅನ್ನಕ್ಕೆ ಅದರದೇ ಆದ ಮಹತ್ವವಿದೆ. ಅನ್ನವನ್ನು “ಪರಬ್ರಹ್ಮ ಸ್ವರೂಪಂ” ಎನ್ನಲಾಗುತ್ತದೆ. ಹಾಗೂ ಎಲ್ಲಾ ಧರ್ಮದಲ್ಲೂ ಅನ್ನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ.
“ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲವೇ?” ಎನ್ನುವು ಒಂದು ಗಾದೆ ಮಾತಿದೆ. ಅಂದರೆ, ಹುಟ್ಟಿದ ಪ್ರತೀ ಮನುಷ್ಯನಿಗೂ ಅವನ ಅನ್ನವನ್ನು ದೇವರು ಬರೆದಿರುತ್ತಾನಂತೆ. ಇದು ನಿಜ. ಯಾಕೆಂದರೆ ಒಂದು ವೇಳೆ ಇದು ಸುಳ್ಳಾಗಿದ್ದರೆ ಇಂದು ನಮ್ಮ ದೇಶದಲ್ಲಿ ಹಸಿವೆಯಿಂದ ಸಾಯುವವರ ಸಂಖ್ಯೆ ಜಾಸ್ತಿ ಇರುತಿತ್ತೇನೋ . ನೆರೆ ಬಂದಾಗ, ಕೋರೋನಾ ದಿಂದ ಲಾಕ್ಡೌನ್ ಆದ ಸಂದರ್ಭದಲ್ಲಿ ಹಸಿವೆ ಎಂದರೇನು ಹಾಗೂ ಹಸಿವೆಗೆ ನೀಡಿದ ಸ್ಪಂದನೆ ಇವೆರಡನ್ನೂ ಇಲ್ಲಿ ಕಾಣಬಹುದಾಗಿತ್ತು.ಕೆಲವೊಮ್ಮೆ ನಮ್ಮ ಕಣ್ಣೆದುರು ನೈಜತೆ ಇದ್ದರೂ ನಾವು ಒಪ್ಪಿಕೊಳ್ಳುವ ಮನಸ್ಸು ಮಾಡುವುದಿಲ್ಲ.
ಇರಲಿ, ಇವಾಗ ವಿಷಯಕ್ಕೆ ಬರೋಣ. ನಮಗೆ ಜೀವ, ಜೀವನ ಕೊಡುವ ಅನ್ನಕ್ಕೆ ನಾವು ಎಷ್ಟು ಕೃತಾರ್ಥರಾಗಿದ್ದೇವೆ ಎನ್ನುವಾದರೆ ಖಂಡಿತವಾಗಿಯೂ ನಾವು ಅನ್ನಕ್ಕೆ ಕೃತಜ್ಞರಾಗಿಲ್ಲ. ಇದು ಹೌದು ಅಲ್ಲವೋ ಎಂದು ನಮ್ಮನ್ನು ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ.
ಹಿಂದಿನ ಕಾಲದಲ್ಲಿ ಗೆಡ್ಡೆಗೆಣಸುಗಳನ್ನು, ಹಣ್ಣುಹಂಪಲುಗಳನ್ನು ತಿನ್ನುತ್ತಾ ದೀರ್ಘಾಕಾಲ ಯಾವುದೇ ಕಾಯಿಲೆಯಿಲ್ಲದೆ ಬದುಕುತ್ತಿದ್ದರು. ಅವರ ಆಚಾರ ವಿಚಾರಗಳು ಹಾಗೆಯೇ ಇದ್ದವು. ಊಟ ಬಡಿಸಿಕೊಂಡ ಮೇಲೆ ದೇವರನ್ನು ಹಾಗೂ ಅನ್ನಕ್ಕೆ ಪ್ರಾರ್ಥನೆ ಮಾಡಿ ಅನ್ನ ಸ್ವೀಕಾರ ಮಾಡುತ್ತಿದ್ದರು.
ಆದರೆ ಇಂದು ಮಕ್ಕಳಿಗೆ ಊರೆಲ್ಲಾ ಸುತ್ತಾಡಿಸಿಕೊಂಡು ಅನ್ನ ತಿನ್ನಿಸುತ್ತಾರೆ. ಟಿವಿ ಇಲ್ಲದೇ, ಮೊಬೈಲ್ ಇಲ್ಲದೇ ಅನ್ನ ಗಂಟಲಿನಿಂದ ಕೆಳಗಡೆ ಇಳಿಯುವುದೇ ಇಲ್ಲವೇನೋ ಎಂಬಂತಿದ್ದೇವೆ. ಕೆಲವರು ಹೇಳುವುದನ್ನು ಕೇಳಿದ್ದೇನೆ, ನನ್ನ ಮಗ ಅಥವಾ ಮಗಳು ಮೊಬೈಲ್ ನಲ್ಲಿ ಹಾಡು ಹಾಕಿ ಕೊಟ್ಟರೇನೇ ತಿನ್ನುವುದು ಅಂತ. ಇಂತಹ ಮಾತುಗಳು ನಿಜಕ್ಕೂ ಹಾಸ್ಯಾಸ್ಪದವಾಗಿ ಕಾಣುತ್ತಿದೆ.
ಅನ್ನದ ವಿಷಯಕ್ಕೆ ಬಂದಾಗ ಒಂದು ಕತೆ ನೆನಪಾಗುತ್ತದೆ. ಒಬ್ಬ ಅಕ್ಕಿ ವ್ಯಾಪಾರಿ ಇದ್ದನಂತೆ ಅವನು ಒಬ್ಬರಿಗೆ ಅಕ್ಕಿ ತೂಕ ಹಾಕಿ ಕೊಡುವಾಗ ಸ್ವಲ್ಪ ಅಕ್ಕಿ ಕಾಳುಗಳು ಕೆಳಗೆ ಬಿದ್ದವಂತೆ ಅದನ್ನು ಆ ವ್ಯಾಪಾರಿ ಹೆಕ್ಕುತ್ತಿರುವಾಗ ಒಬ್ಬ ವ್ಯಕ್ತಿ ತಮಾಷೆ ಮಾಡಿದನಂತೆ, ಇಷ್ಟು ದೊಡ್ಡ ವ್ಯಾಪಾರಿಗೆ ಈ ಅಕ್ಕಿ ಕಾಳುಗಳೇನು ಮಹಾ ಅಂತ. ಅದಕ್ಕೆ, ವ್ಯಾಪಾರಿ ನಗುತ್ತಾ ನಾಳೆ ನೀವು ನಮ್ಮ ಮನೆಗೆ ಊಟಕ್ಕೆ ಬನ್ನಿ ಅಂದನಂತೆ ಸರಿ ಆ ವ್ಯಕ್ತಿ ಶ್ರೀಮಂತ ವ್ಯಾಪಾರಿಯ ಮನೆಯ ಊಟ ತುಂಬಾ ಭರ್ಜರಿಯಾಗಿರುತ್ತದೆ ಎಂದೆನಿಸಿ ಹೋಗುತ್ತಾನೆ ವ್ಯಾಪಾರಿ ಅವನನ್ನು ತುಂಬಾ ಆದರದಿಂದ ಸ್ವಾಗತಿಸಿ ಊಟಕ್ಕೆ ಕೂರಿಸುತ್ತಾನೆ. ವ್ಯಾಪಾರಿ ಹೆಂಡತಿ ಒಂದು ತಟ್ಟೆ ತುಂಬಾ ಚಿನ್ನಗಳನ್ನು ತುಂಬಿಸಿ ತಿನ್ನಿ ಅಂತ ಹೇಳುತ್ತಾನೆ ಮೊದಲೇ ಹಸಿದಿದ್ದ ವ್ಯಕ್ತಿಗೆ ಸಿಟ್ಟು ಬಂದು ವ್ಯಾಪಾರಿಗೆ ಇದನ್ನು ತಿನ್ನಲು ಆಗುತ್ತದೆಯೇ ಎಂದು ಬೈಯಲು ಶುರುಮಾಡಿದಾಗ ವ್ಯಾಪಾರಿ ಅವನಿಗೆ ಊಟದ ವ್ಯವಸ್ಥೆ ಮಾಡುತ್ತಾನೆ. ಆ ವ್ಯಕ್ತಿ ತುಂಬಾ ಖುಷಿಯಿಂದ ಊಟ ಮಾಡಿ ತೃಪ್ತಿಯಾಗುತ್ತಾನೆ. ಆಗ ವ್ಯಾಪಾರಿ ಅವನಿಗೆ ಅಕ್ಕಿ ಕಾಳಿನ ಮಹತ್ವ ಪರೋಕ್ಷವಾಗಿ ತಿಳಿಸುತ್ತಾನೆ ಎಂಬುದು ಕಥೆಯ ಸಾರಾಂಶ.
ನಾವು ದಿನನಿತ್ಯ ಎಷ್ಟು ಆಹಾರವನ್ನು ವ್ಯರ್ಥ ಮಾಡುತ್ತೇವೆ. ಮನೆ ಊಟದ ಬದಲು ಹೊರಗಡೆ ತಿಂಡಿತಿನಿಸುಗಳನ್ನು ಬಯಸುತ್ತೇವೆ. ಹೊಸ ಹೊಸ ಕಾಯಿಲೆಗಳು ಹುಟ್ಟಿಕೊಳ್ಳಲು ಕಾರಣ ನಮ್ಮ ಆಹಾರದ ಪದ್ಧತಿ. ಇವಾಗ ಪ್ರತೀ ಆಹಾರದಲ್ಲೂ ವಿಟಮಿನ್ ಇದೆಯೇ ಮಿನರಲ್ ಇದೆಯೇ ಪ್ರೋಟಿನ್ಸ್ ಇದೆಯೇ ಪರೀಕ್ಷೆ ಮಾಡಿ ತಿನ್ನುತ್ತಿದ್ದೇವೆ. ಆದರೂ ಕಾಯಿಲೆಗೆ ತುತ್ತಾಗುತ್ತೇವೆ. ಹಿಂದಿನ ಕಾಲದಲ್ಲಿ ಅವರಿಗೆ ವಿಟಮಿನ್ ಅಂದ್ರೆ ಏನು, ಪ್ರೋಟಿನ್ ಏನು ಅಂತಾನೇ ಗೊತ್ತಿರಲಿಲ್ಲ ಹೊರಗಡೆ ಊಟ ತಿನ್ನುತ್ತಿರಲಿಲ್ಲ ಕಾಯಿಲೆಗಳಿಂದಲೂ ದೂರವಿದ್ದು ಆರೋಗ್ಯವಂತರಾಗಿದ್ದರು.
ನಮಗೆ ತಿನ್ನುವ ಆಹಾರದ ಮೇಲೆ ನಂಬಿಕೆ ಕಡಿಮೆಯಾಗಿದೆ. ಅದರಲ್ಲಿ ಏನಿದೆ ಏನಿಲ್ಲ ಅನ್ನುವುದರ ಮೇಲಿನ ನಂಬಿಕೆ ಜಾಸ್ತಿಯಾಗಿದೆ. ಹಸಿವೆಯ ಮುಂದೆ ಯಾವ ನಂಬಿಕೆಯೂ ಇಲ್ಲ. ನಮಗೆ ಆಹಾರದ ಬಗ್ಗೆ ಭಕ್ತಿ ಇರಬೇಕು, ನಂಬಿಕೆ ಇರಬೇಕು. ಹಸಿದಾತನಿಗೆ ಕೇಳಿ ಇದರಲ್ಲಿ ಏನೇನಿದೆ ಅಂತ ಅವನಿಂದ ಬರುವುದು ಒಂದೇ ಉತ್ತರ ಇದು ನನ್ನ ಹಸಿವೆಯನ್ನು ನೀಗಿಸಿತಲ್ಲ, ನನಗೆ ಶಕ್ತಿಯನ್ನು ಕೊಟ್ಟಿತಲ್ಲ ಇನ್ನೇನು ಬೇಕು ಅದರಲ್ಲಿ ಅಂತ.
ನನ್ನ ಅಮ್ಮ ಅನ್ನವನ್ನು ವ್ಯರ್ಥ ಮಾಡಿದಾಗ ಹೇಳುತ್ತಿದ್ದ ಮಾತು ನೆನಪಾಗುತ್ತದೆ, ಅನ್ನವನ್ನು ವ್ಯರ್ಥ ಮಾಡಿದಾಗ ಅನ್ನ ಹೇಳುತ್ತದಂತೆ, ಇಂದು ನೀನು ನನ್ನ ಬಿಸಾಕಿದೆ ಮುಂದೊಂದು ದಿನ ನಾನು ನಿನಗೆ ಅನ್ನದ ಬೆಲೆಯನ್ನು ತಿಳಿಸುವಂತೆ ಮಾಡುತ್ತೇನೆ ಎಂದು.
ಅನ್ನ ನಮ್ಮ ತಟ್ಟೆಗೆ ಬಂದು ಬೀಳಬೇಕಾದರೆ ಅದರ ಹಿಂದೆ ಎಷ್ಟೋ ಕಾಣದ ಕೈಗಳ ಶ್ರಮವಿದೆ. ಬದುಕಲು ದುಡ್ಡು ಅವಶ್ಯಕ ದುಡ್ಡಿನಿಂದ ಎಲ್ಲಾ ಪಡೆಯಬಹುದೆಂದು ಬೀಗುವ ಮನುಷ್ಯನಿಗೆ ಹಸಿವೆಯನ್ನು ದುಡ್ಡಿನಿಂದ ನೀಗಿಸಲು ಸಾಧ್ಯವೇ?. ಇದಕ್ಕೆ ಉತ್ತರವಾಗಿ ಲಾಕ್ಡೌನ್ ಸಂದರ್ಭದಲ್ಲಿ ನಾವು ಕಂಡಂತಹ ಹಲವಾರು ಪ್ರತ್ಯಕ್ಷೀಯ ಘಟನೆಗಳಿಂದ ಯಾವುದು ಮುಖ್ಯ ಎನ್ನುವುದು ಗೊತ್ತಾಗುತ್ತದೆ. ಒಂದು ವೇಳೆ ನಮಗೆ ಆಹಾರ ಮುಖ್ಯವಾಗದೇ ಇಲ್ಲವಾದಲ್ಲಿ ನಾವು ಅಲ್ಲಲ್ಲಿ ಸಿಗುವ ಆಹಾರಕ್ಕಾಗಿ, ಸಿಗುವ ರೇಷನ್ ಗಾಗಿ ಅಲ್ಲಲ್ಲಿ ಸರದಿ ಸಾಲಿನಲ್ಲಿ ನಿಲ್ಲಬೇಕಾಗಿರಲಿಲ್ಲ. ಆ ಸಮಯದಲ್ಲಿ ಯಾವ ಆಭರಣ ಹಾಗೂ ಯಾವ ಕಾರು ಕೊಂಡುಕೊಳ್ಳಬೇಕೆಂದು ಯಾರೂ ಯೋಚಿಸಲಿಲ್ಲ. ರೇಷನ್ ಅಂಗಡಿ ತೆರೆದಿದ್ದರೆ ಸಾಕು ಎಂಬ ಯೋಚನೆ ಒಂದೇ ಇದ್ದದ್ದು.
ಯಾವುದೇ ವಸ್ತುವನ್ನು ಇತಮಿತವಾಗಿ ಬಳಸಬೇಕು. ಇಲ್ಲವಾದಲ್ಲಿ ಸಂಪನ್ಮೂಲಗಳ ಕೊರತೆ ಉಂಟಾಗುವ ಸಾಧ್ಯತೆಗಳು ಜಾಸ್ತಿ. ಇಂದು ಕಾರ್ಯಕ್ರಮ ಸಮಾರಂಭಗಳಲ್ಲಿ, ಮನೆಗಳಲ್ಲಿ, ಹೋಟೆಲುಗಳಲ್ಲಿ ಎಷ್ಟೊಂದು ಆಹಾರಗಳನ್ನು ವ್ಯರ್ಥ ಮಾಡುತ್ತಿದ್ದೇವೆ. ಪ್ರತಿಯೊಬ್ಬರು ಆಹಾರದ ಅವಶ್ಯಕತೆ ತಿಳಿಯಬೇಕು. ವ್ಯರ್ಥ ಮಾಡುವಂತಹ ಆಹಾರ ಯಾವುದೋ ವ್ಯಕ್ತಿಯ ಅಥವಾ ಜೀವಿಗೆ ಸಂಬಂಧಿಸಿದ ಆಹಾರವಾಗಿರಬಹುದು. ಪ್ರತಿಯೊಂದು ಅಕ್ಕಿ ಕಾಳಿನಲ್ಲೂ ತಿನ್ನುವವನ ಹೆಸರು ಬರೆದಿರುತ್ತದಂತೆ.
ಕೆಲ ಸಾಧನೆ ಮಾಡಿರುವವರಲ್ಲಿಗೆ ಹೋಗಿ ಅನ್ನದ ಬಗ್ಗೆ ಕೇಳಿದರೆ ಅದರ ಬೆಲೆಯನ್ನು ಅತ್ತುತ್ತಮ ವಿವರಣೆಯೊಂದಿಗೆ ನೀಡಬಲ್ಲರು. ಮಕ್ಕಳಿಗೆ ಅನ್ನಕ್ಕೆ ಗೌರವ ಕೊಡುವುದನ್ನು ಕಲಿಸಿ ಕೊಡುವುದು ಉತ್ತಮ. ಆಹಾರವನ್ನು ವ್ಯರ್ಥ ಮಾಡದೇ ಇತಮಿತವಾಗಿ ಬಳಸಬೇಕು. ದೇವರು ಪ್ರತೀ ಒಂದು ಜೀವರಾಶಿಗಳಿಗೆ ಅದರದೇ ಆದಂತಹ ಆಹಾರ ಪದ್ಧತಿ ಕೊಟ್ಟಿದ್ದಾನೆ. ಹಂಚಿತಿನ್ನುವುದನ್ನು ರೂಢಿಸಿಕೊಳ್ಳೋಣ. ಅನ್ನದಾನ ಶ್ರೇಷ್ಠವಾದ ದಾನವಾಗಿದೆ.
‘’ಅನ್ನ ದೇವರಿಗಿಂತ ಇನ್ನು ದೇವರು ಇಲ್ಲ, ಅನ್ನಕ್ಕೆ ಮೇಲು ಹಿರಿದಿಲ್ಲ-ಲೋಕಕ್ಕೆ ಅನ್ನವೇ ಪ್ರಾಣ ಸರ್ವಜ್ಞ”
ಹಿಂದೂ ಧರ್ಮದ ಪ್ರಕಾರ ಸಕಲ ಜೀವರಾಶಿಗಳನ್ನು ಸಲಹುವ ಶಿವನು, ಅನ್ನವೂ ಕೂಡ ಒಂದು ಭ್ರಮೆ ಎಂದು ಹೇಳಿದ್ದಕ್ಕೆ ಶಿವನಿಗೆ ಅನ್ನದ ಮಹತ್ವನ್ನು ತಿಳಿಸಲು ಪಾರ್ವತಿ ದೇವಿಯು ಅನ್ನಪೂರ್ಣೇಶ್ವರಿಯಾಗಿ ಅವತರಿಸಬೇಕಾಯಿತು.. ಹೀಗಾಗಿಯೇ ಅನ್ನವನ್ನು ಜಗನ್ಮಾತೆ ಅನ್ನಪೂರ್ಣೇಶ್ವರಿಗೆ ಹೋಲಿಸಲಾಗಿದೆ. ಊಟಮಾಡುವುದಕ್ಕಿಂತ ಮೊದಲು ನಮಗೆ ಅನ್ನವನ್ನು ನೀಡಿದ ದೇವರಿಗೂ, ಅದರ ಹಿಂದಿರುವ ಶ್ರಮಿಕರನ್ನೂ ನೆನೆಯೋಣ. ಆರೋಗ್ಯಯುತ ಜೀವನಕ್ಕೆ ಮುನ್ನುಡಿ ಬರೆಯೋಣ, ಅನ್ನ ಪೋಲು ಮಾಡದಂತೆ ನೋಡಿಕೊಳ್ಳೋಣ.
ಅನ್ನದಾತೋ ಸುಖಿ ಭವಂತೂ
ಸೌಮ್ಯ ನಾರಾಯಣ್
2 Comments
Well written.. 👍
Very good.. nice one