ಪರಾಭವ ಭಾವನಾ – ಅಂತಿಮ ಭಾಗ ಯತಿರಾಜ್ ವೀರಾಂಬುಧಿ

ಹಿಂದಿನ ಸಂಚಿಕೆಯಿಂದ…

ತಮ್ಮನ್ನು ಬೆಂಬೆತ್ತಿದ ಫಿಲಿಪ್‌ ಮತ್ತು ನೀಲಂ ಬಗ್ಗೆ ಶ್ಯಾಮ್ ಗೆ ಅರಿವಿತ್ತು ಆದರಿಂದ ಒಂದು ನಿರ್ಜನ ಪ್ರದೇಶದಲ್ಲಿ ಗಾಡಿಯನ್ನು ನಿಲ್ಲಿಸುತ್ತಲೇ ಅಪ್ರಮೇಯನಿಗೆ ತಾನು ಇಂಟರ್ಪೋಲ್ ಏಜೆಂಟ್ ಎಂದು ತಿಳಿಸಿದ. ಅಷ್ಟರಲ್ಲಿ ಫಿಲಿಪ್ ಕಡೆಯವರಿಂದ ಗುಂಡಿನ ಚಕಮಕಿ ಶುರುವಾಗಿ ನೀಲಂ ಹಿಂದಿನಿಂದ ಬಂದು ಶ್ಯಾಮ್ ತಲೆಗೆ ಹೊಡೆದು ಮೂರ್ಛೆಗೊಳಿಸಿ ಅಪ್ರಮೇಯನನ್ನು ಪೂರ್ತಿ ಹುಡುಕಾಡಿ ವಿಗ್ರಹಗಳು ಇಲ್ಲವೆಂದು ಖಚಿತಪಡಿಸಿಕೊಂಡು ಲಗೇಜ್ ಗಳನ್ನಾದರೂ ಹುಡುಕೋಣ ಎಂದು ಹೋದರು. ಅಷ್ಟರಲ್ಲಿ ಶ್ಯಾಮ್ ಗೆ ಎಚ್ಚರವಾಗಿ ದಾಳಿ ಮಾಡಿದ್ದು ಫಿಲಿಪ್ ಎಂದು ಖಚಿತಪಡಿಸಿಕೊಂಡ. ಮುಂದಿನ ದಾಳಿಯಲ್ಲಿ ಶ್ಯಾಮ್ ಪಿಸ್ತೂಲಿನ ಗುಂಡು ಫಿಲಿಪ್ ನ ಬಲಭುಜ ಸೇರಿತು. ಮುಂದೆ…

–ಇಪ್ಪತ್ತೆರಡು–

ಉತ್ತರಾಕಾಂಡದ ಜೋಷಿಮಠ ಅಥವಾ ಜ್ಯೋತಿರ್ಮಠದಲ್ಲಿನ ಆಶ್ರಮದಲ್ಲಿ ಆಸೀನರಾಗಿದ್ದ ಅಪ್ರಮೇಯಸ್ವಾಮಿ. ಅವನ ಎದುರಿಗೆ ಚಕ್ಕಬಕ್ಕಳ ಹಾಕಿ ಕುಳಿತಿದ್ದವರು ಅವನ ನಾಲ್ವರು ಶಿಷ್ಯರು. ಮಠದಲ್ಲೇ ಇದ್ದ ಇನ್ನೂ ಕೆಲವು ಜನರು.

ಹೊರಗಿನಿಂದ ಬಂದ ಶ್ಯಾಮ್‌  ಕೂಡ ಎದುರಿಗೆ ಕುಳಿತಿದ್ದ. ಅದೇಕೋ ಅಪ್ರಮೇಯನಿಗೆ ಇವನನ್ನು ಸ್ಯಾಮ್‌ ಎನ್ನುವ ಬದಲು ಶ್ಯಾಮ್‌ ಎಂದೇ ಕರೆಯುವ ಇಚ್ಛೆಯಾಗಿತ್ತು. ಶ್ಯಾಮ ಒಬ್ಬ ರಕ್ಷಕ. ದ್ವಾಪರಯುಗದಲ್ಲಿ ಧರ್ಮಿಷ್ಠರಾದ ಪಾಂಡವರಿಗೆ ರಕ್ಷಣೆ ನೀಡಿ, ಅಧರ್ಮಿಗಳಾದ ಕೌರವರನ್ನು ಸಂಹಾರ ಮಾಡಿದ ನೀಲಮೇಘಶ್ಯಾಮ. ಇವನೂ ತನ್ನ ರಕ್ಷಣೆಗೆ ಬಂದಿದ್ದವನಲ್ಲವೇ!

ಅಲ್ಲಿ ಇದ್ದ ಉಳಿದಿಬ್ಬರು ಅಪ್ರಮೇಯನ ಬಂಧುಗಳಾದ ನಾಗ ಗಾಂಧಾರಿ ಮತ್ತು ಅಗಸ್ತ್ಯ.

ಪರಸ್ಪರ ಪರಿಚಯಗಳಾದ ಮೇಲೆ ಅಪ್ರಮೇಯ ತನ್ನ ಅನುಭವಗಳನ್ನು ವಿವರಿಸಿದ.

ನಾನು ಈ ಸುಂದರ ಜಾಗದ ಈ ಆಶ್ರಮದಲ್ಲಿ ಸುಮಾರು ಇಪ್ಪತ್ತು ವರ್ಷಗಳಿಂದ ಇದ್ದೇನೆ. ಮೊದಲ ಕೆಲವು ವರ್ಷಗಳು ನನ್ನ ಸ್ವಾಮಿ ಕುಮಾರಾನಂದರ ಜೊತೆಗೆ. ಸ್ವಲ್ಪ ಕಾಲದ ನಂತರ ಅವರು ದಕ್ಷಿಣದ ದನುಷ್ಕೋಟಿಗೆ ಹೊರಟುಹೋದರು.

ಬಹುಶಃ ಈ ವಿಗ್ರಹಗಳ ರಕ್ಷಣೆಗಾಗಿಯೇ ಇರಬಹುದು.

“ಬನ್ನಿ ಹೊರಗೆ ಹೋಗೋಣ. ಪ್ರಕೃತಿ ನಮಗೆ ಎಂತಹ ಸುಂದರ ಪ್ರಸಾದ ಒದಗಿಸಿದ್ದಾಳೆ ನೋಡೋಣ” ಎಂದು ಎದ್ದು ಹೊರಗೆ ಬಂದ. ಉಳಿದವರೂ ಅವನನ್ನು ಅನುಸರಿಸಿದರು.

ಆಶ್ರಮವು ಒಂದು ಬೆಟ್ಟದ ತುದಿಯಲ್ಲಿ ಕಟ್ಟಲ್ಪಟ್ಟಿತ್ತು. ಸ್ಯಾಮ್‌ ಯೂರೋಪ್‌ನಲ್ಲಿ ಸ್ವಿಟ್ಝರ್‌ಲ್ಯಾಂಡ್‌, ಫ್ರಾನ್ಸ್‌ಗಳಲ್ಲಿ ಸುಂದರ ಪ್ರಕೃತಿಯನ್ನು ನೋಡಿದ್ದಾನೆ. ಆದರೂ ಇಲ್ಲಿ ಆಶ್ರಮದ ಹಿಂದಿನ ಕಣಿವೆ, ಅದರಾಚೆಗೆ ಹಸಿರು ಮರಗಳಾವೃತ  ದೊಡ್ಡ ಗಿರಿಗಳು ಇದ್ದಿದ್ದು ಅವನಿಗೆ ಹಿಗ್ಗು ತಂದಿತ್ತು. ಎಲ್ಲಕ್ಕಿಂತ ಮುದ ನೀಡಿದ ದೃಶ್ಯವೆಂದರೆ ಆಶ್ರಮದ ಹಿಂಭಾಗಕ್ಕೂ , ಗಿರಿಗಳಿಗೂ ನಡುವೆ ಕೈಗೆ ಸಿಕ್ಕುವುವೇನೋ ಎಂಬಂತೆ ತೇಲಾಡುತ್ತಿದ್ದ ಶ್ವೇತಮೇಘಗಳು!

ದೂರದಲ್ಲಿ ವರ್ಷವಿಡೀ ಬಿಳಿಯ ಹಿಮದ ಹೊದ್ದಿಕೆ ಹೊದ್ದಿರುವ ಪರ್ವತಗಳು… ಓಹ್…‌

“ಈ ಜಾಗ ಮಹಾ ಪವಿತ್ರವಾದದ್ದು. ಭಗವತ್ಪಾದ ಶ್ರೀ ಆದಿ ಶಂಕರಾಚಾರ್ಯರು ಸ್ಥಾಪಿಸಿದ ಮಠವಿದೆ. ಬದರೀನಾರಾಯಣ ಮತ್ತು ರಾಜರಾಜೇಶ್ವರೀ ದೇವಿ ದೇವಸ್ಥಾನಗಳು ಅದೇ ಮಠಕ್ಕೆ ಸೇರಿವೆ.

ಉಳಿದವರು ಅಪ್ರಮೇಯನ ಮೋಹಕ ದನಿಯನ್ನು ಕೇಳುತ್ತಾ ಸುತ್ತಲಿನ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದರು. ಕೊಪ್ಪ, ತೀರ್ಥಹಳ್ಳಿಗಳಲ್ಲಿ ಓಡಾಡಿದ ಅಗಸ್ತ್ಯ, ನಾಗ ಗಾಂಧಾರಿಯರೂ ಇಲ್ಲಿನ ನಿಸರ್ಗಕ್ಕೆ ಸಂಪೂರ್ಣ ಮನಸೋತಿದ್ದರು.

“ಇಲ್ಲೊಂದು ನರಸಿಂಹ ಸ್ವಾಮಿ ಗುಡಿಯಿದೆ. ಇದನ್ನು ಆದಿ ಶಂಕರರೇ ಸ್ಥಾಪಿಸಿದರು ಎನ್ನುತ್ತಾರೆ” ಎಂದ ಅಪ್ರಮೇಯ.

“ಇಲ್ಲಿ ನೋಡುವುದು ಇನ್ನೂ ಬಹಳವಿದೆ. ಇಲ್ಲೇ ಕೆಲವು ದಿನವಿದ್ದು ಎಲ್ಲವನ್ನೂ ನೋಡಿಕೊಂಡು ಹೋಗಿಬನ್ನಿ” ಎಂದ ಅಪ್ರಮೇಯ.

ನಾಗ ಗಾಂಧಾರಿ ವ್ಯಥೆಗೊಂಡಳು. ಅಂದರೆ ಅಪ್ಪು ತನ್ನನ್ನು ಇಲ್ಲಿ ಇರಲು ಬಿಡುವುದಿಲ್ಲ. ಏಕೆಂದರೆ ಅವನು ಸಂನ್ಯಾಸಿ. ತಾನಿದ್ದರೆ ಅವನ ನಿಷ್ಠೆಗೆ ಭಂಗ ಆಗಬಹುದು.

ಶಿಷ್ಯರು ಅವರವರ ಕೆಲಸಗಳಲ್ಲಿ ಮಗ್ನರಾದ ನಂತರ ಆಶ್ರಮದಲ್ಲಿ ಪ್ಲೈವುಡ್‌ ಮರದ ಷೀಟ್‌ ಹಾಕಿ ಪಾರ್ಟಿಷನ್‌ ಮಾಡಿದ್ದ ಒಂದು ಕೊಠಡಿಯಲ್ಲಿ ಏಕಾಂತವಾಗಿ ಕುಳಿತರು ಸ್ಯಾಮ್‌ ಮತ್ತು ಅಪ್ರಮೇಯ.

ಅವನ ಅನೇಕ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಗಬೇಕಿತ್ತು.

ಉದಾಹರಣೆಗೆ ಆ ಮೂರ್ತಿಗಳು ಎಲ್ಲಿ ಹೋದವು?

ಅವರಿಬ್ಬರೇ ಕುಳಿತೊಡನೆ ಅದೇ ಪ್ರಶ್ನೆ ಹಾಕಿದ ಸ್ಯಾಮ್.‌ ಏಕೆಂದರೆ ಅವನ ಇಷ್ಟು ದಿನದ ಮಿಷನ್‌ ಈಗ ಒಂದು ಕೊನೆ ಮುಟ್ಟಿತ್ತು.

ಫಿಲಿಪ್‌ನನ್ನು ಅಂತಾರಾಷ್ಟ್ರೀಯ ಪೊಲೀಸರು ಫ್ರಾನ್ಸ್‌ ದೇಶಕ್ಕೆ ಕರೆದೊಯ್ದರು. ನೀಲಂ ತಾನು ಸಿಕ್ಕಿಕೊಂಡೊಡನೆ ನಾಯಕ್‌ನನ್ನೂ ಪೊಲೀಸರು ಹಿಡಿಯುವಂತೆ ಮಾಡಿದಳು.

ಅವಳಿಂದ ನಾಯಕ್‌ನ ಇಡೀ ಗ್ಯಾಂಗ್‌ ಸಿಕ್ಕಿಕೊಂಡಿತು.

ಆಲ್ಬೆರ್ತೋ ಗಾರ್ಸಿಯಾ ಹುಚ್ಚನಂತಾಗಿದ್ದ. ಅವನಿಗೆ ಕೋಟಿಗಟ್ಟಲೆ ಸಂಪಾದಿಸಿಕೊಡಬಹುದಾಗಿದ್ದ ಮತ್ತುಕಾರಕ ಪದಾರ್ಥ  ಹೋಗಿತ್ತು. ಅವನಿಗೆ ಹಣವೂ ಬರಲಿಲ್ಲ.

ಅವನ ಅತ್ಯಂತ ಚಾಣಾಕ್ಷ ಬಾಡಿಗೆ ಹಂತಕನೊಬ್ಬನನ್ನು ಭಾರತಕ್ಕೆ ಕಳಿಸಿದ. ಅವನ ಕೆಲಸ – ನಾಯಕ್‌ನ ವಧೆ!

“ನಾವು ರಾಮೇಶ್ವರಂನಿಂದ ಮದುರೈಗೆ ಬಂದೆವು. ಅಲ್ಲಿಂದ ಬೆಂಗಳೂರಿಗೆ ಬಂದೆವು” ಎಂದು ಅಪ್ರಮೇಯ ಆರಂಭಿಸಿದ.

ಸ್ಯಾಮ್‌ ಕುತೂಹಲದಿಂದ ಕೇಳುತ್ತಿದ್ದ.

ಬೆಂಗಳೂರಿನಲ್ಲಿ ಒಂದು ದಿನ ರೂಮಿನಲ್ಲಿ ಅಪ್ರಮೇಯ ಮತ್ತು ಅವನ ಕಸಿನ್‌ ಅಗಸ್ತ್ಯ ಇಬ್ಬರೇ ಇದ್ದರು. ಜೋರುಜೋರಾಗಿ ಮಾತಾಡುತ್ತಾ ಇದ್ದರು ಇಬ್ಬರೂ. ಹೊರಗಿನವರಿಗೆ ಕೇಳಿಸಿದ್ದು ಅದೇ.

ಆದರೆ ಎದುರೆದುರಿಗೆ ಕುಳಿತು ಒಂದು ರಟ್ಟಿನ ಮೇಲೆ ಒಂದು ಬಿಳಿಯ ಏಫೋರ್‌ ಸೈಜ್‌ ಕಾಗದ ಸಿಕ್ಕಿಸಿ, ಕಾಗದದ ಮೇಲೆ ಅಪ್ರಮೇಯ ಹೀಗೆ ಬರೆದ.

ʼನನ್ನ ಬಳಿ ಮೂರು ವಿಶಿಷ್ಟ ಮೂರ್ತಿಗಳಿವೆ. ನನ್ನ ಬಳಿ ಇದ್ದರೆ ನನಗೆ ಪ್ರಾಣಾಪಾಯವಿದೆ. ಅದೇನೂ ನನಗೆ ಹೆಚ್ಚು ಅನಿಸಲ್ಲ. ಯಾಕೆಂದರೆ ಆಯಸ್ಸು ನಮ್ಮ ಕೈಲಿಲ್ಲ. ಆದರೆ ಈ ವಿಗ್ರಹಗಳು ಯಾವುದೋ ದೇಶದ ಕಲಾಪ್ರೇಮಿಗೆ ಮಾರಾಟವಾಗಿ ಅವನ ಮನೆಯ ಶೋಕೇಸ್‌ನಲ್ಲಿ ಇಡಲ್ಪಡುವುದು ನನಗೆ ಇಷ್ಟವಿಲ್ಲ. ಏನು ಮಾಡಲಿ?ʼ ಎಂದು ಬರೆದ.

ಅದನ್ನು ತನ್ನ ಕೈಗೆತ್ತಿಕೊಂಡ ಅಗಸ್ತ್ಯ, ʼನಾನು ಬಹುರಾಷ್ಟ್ರೀಯ ಕಂಪೆನಿಯಲ್ಲಿರುವೆ ಅಂತ ಇಲ್ಲೆಲ್ಲಾ ಸುದ್ದಿ ಹಬ್ಬಿಸಿರುವೆ. ಆದರೆ ನಾನಿರೋದು ಗುಪ್ತಚರ ವಿಭಾಗದಲ್ಲಿ. ನನ್ನ ಕೆಲಸ ಬಹಳವೇ ರಹಸ್ಯವಾದದ್ದು. ಅದಕ್ಕೇ ಅದರ ಬಗ್ಗೆ ಎಲ್ಲಿಯೂ ಸುಳಿವು ಸಿಗದ ಹಾಗೆ ಇರ್ತೇನೆʼ ಎಂದು ಬರೆದ.

ಅದನ್ನು ಓದಿದ ಅಪ್ರಮೇಯ ʼಹಾಗಾದರೆ ಈ ವಿಗ್ರಹಗಳನ್ನು ನೀನು ದೆಹಲಿಗೆ ಸಾಗಿಸಿಬಿಡು. ನನಗೆ ಈ ದೇಶದ ಕೆಲವು ಊರುಗಳನ್ನು, ದೇವಸ್ಥಾನಗಳನ್ನು ನೋಡುವ ಬಯಕೆ ಇದೆ. ಇದೇ ಒಳ್ಳೆಯ ಸಮಯʼ ಎಂದು ಬರೆದ.

ʼಸರಿ. ನಿನ್ನ ಪರ್ಯಟನೆಗೆ ಶುಭವಾಗಲಿʼ ಎಂದು ಬರೆದ ಅಪ್ರಮೇಯ ತನ್ನ ಬಳಿಯಿದ್ದ ಪೆಟ್ಟಿಗೆಯನ್ನು ಅಗಸ್ತ್ಯನಿಗೆ ನೀಡಿದ.

ಅದನ್ನು ತೆಗೆದ ಅಗಸ್ತ್ಯ ಆ ಮೂರು ವಿಗ್ರಹಗಳನ್ನು ನೋಡಿ ಆಶ್ಚರ್ಯಭರಿತನಾದ. ಎಷ್ಟು ಪುರಾತನವಾದ ವಿಗ್ರಹಗಳೋ ತಿಳಿಯದು ಎಂದುಕೊಂಡು ಅವನ್ನು ತನ್ನ ಬಳಿ ಭದ್ರ ಮಾಡಿದ…

“ಅಂದರೆ ಅಗಸ್ತ್ಯ ಆ ವಿಗ್ರಹಗಳನ್ನು ಇಲ್ಲಿಗೆ ತಂದಿದ್ದಾರಾ? ನಾನು ನೋಡಬಹುದಾ?” ಎಂದ ಸ್ಯಾಮ್‌ ಆಸೆಯಿಂದ.

ಅಪ್ರಮೇಯ ತಲೆಯಾಡಿಸಿದ.

ಅವನ ತಲೆಯಾಡಿಸುವಿಕೆ ನಕಾರವೋ ಸಕಾರವೋ ತಿಳಿಯದಾಯಿತು ಸ್ಯಾಮ್‌ಗೆ.

“ನಿಮ್ಮ ಶಿಷ್ಯನೊಬ್ಬ ಹಿಂದಿನಿಂದ ನಿಮಗೆ ಚೂರಿ ಹಾಕಬೇಕು ಅಂತ ಇದ್ದಿದ್ದು ತಿಳಿದಿದೆ ಅಂದಿರಿ?” ಎಂದ ಸ್ಯಾಮ್.‌

ತಲೆದೂಗಿದ ಅಪ್ರಮೇಯ.

“ಹೇಗೆ ತಿಳಿಯಿತು?”

“ನಾಗ ಗಾಂಧಾರಿ!” ಎಂದ ಕ್ಲುಪ್ತವಾಗಿ ಅಪ್ರಮೇಯ.

ಅಗಸ್ತ್ಯ ವಿಗ್ರಹಗಳನ್ನು ಭದ್ರವಾಗಿ ಎತ್ತಿಟ್ಟ ಮರುಕ್ಷಣ ಅಲ್ಲಿಗೆ ಬಂದ ನಾಗ ಗಾಂಧಾರಿ ʼನಾನು ಜಗಳವಾಡಿದಂತೆ ನಟಿಸುತ್ತೇನೆ. ನನಗ್ಯಾಕೋ ಈ ಶಿಷ್ಯರಲ್ಲಿ ಒಬ್ಬನ ಮೇಲೆ ಅನುಮಾನವಿದೆʼ ಎಂದು ಬರೆದಳು.

ʼಸರಿ, ನಿನ್ನ ನಾಟಕ ಆರಂಭಿಸುʼ ಎಂದು ಬರೆದ ಅಪ್ರಮೇಯ.

ಅವಳು ಕೂಗಾಡುತ್ತಾ ಹೊರಗೆ ಹೋದಳು.

ಅವಳು ಹೈದರಾಬಾದ್‌ನಲ್ಲಿದ್ದಾಗ ಅವಳಿಗೆ ಅಪ್ಪೂ ಸ್ವಾಮಿ ಎಂದು ಒಬ್ಬ ಶಿಷ್ಯ ಫೋನ್‌ ಮಾಡಿದ.

ಅವನಾರೆಂದು ಅವಳಿಗೆ ತಿಳಿದುಹೋಯಿತು.

ಅಪ್ರಮೇಯನಿಗೆ ಸುದ್ದಿ ಕೊಟ್ಟಳು…

“ನೀವು ಅವನನ್ನು ಓಡಿಸುವುದಿಲ್ಲವೇನು?” ಕೇಳಿದ ಸ್ಯಾಮ್.‌

“ಇಲ್ಲ” ಎಂದ ಅಪ್ರಮೇಯ.

“ಶ್ಯಾಮ್‌ ಅವರೇ, ಪಶ್ಚಾತ್ತಾಪಕ್ಕಿಂತ ದೊಡ್ಡ ಪ್ರಾಯಶ್ಚಿತ್ತವಿಲ್ಲ. ಅವನಿಗೆ ತನ್ನ ತಪ್ಪಿನ ಅರಿವು ಆಗಿದೆ. ಒಂಟಿಯಾಗಿ ಸಿಕ್ಕಿದೊಡನೆ ನನ್ನ ಕಾಲಿಗೆ ಬಿದ್ದು ಕ್ಷಮೆ ಬೇಡಿದ. ಅವನನ್ನು ಜೈಲಿಗೆ ಹಾಕಿಬಿಟ್ಟರೆ ಇಷ್ಟು ದಿನ ನಾನು ಅವನ ಮನವನ್ನು ದೇವರೆಡೆಗೆ ತಿರುಗಿಸುವ ಪ್ರಯತ್ನವೆಲ್ಲವೂ ಹೋಮದ ಮೇಲೆ ನೀರು ಚೆಲ್ಲಿದಂತಾಗುತ್ತದೆ. ಅದರಿಂದ ಅವನ ಬಗ್ಗೆ ಇನ್ನು ಚಿಂತೆ ಬೇಡ” ಎಂದ ಖಚಿತವಾಗಿ.

ಕನಕದಾಸ್, ಪುರಂದರದಾಸ್‌, ಕಬೀರ್‌ ದಾಸ್‌ ಅಥವಾ ತುಲಸೀ ದಾಸ್‌ ಇವರು ನಾಲ್ವರಲ್ಲಿ ಆ ಒಬ್ಬ ಶಿಷ್ಯ ಯಾರು? ನಾಯಕ್‌ನೊಂದಿಗೆ ಹಣದ ಆಸೆಗಾಗಿ ಸಂಪರ್ಕವಿಟ್ಟುಕೊಂಡವನು?

ಸ್ಯಾಮ್‌ಗೆ ಗೊತ್ತಿತ್ತು. ಈಗ ಅಪ್ರಮೇಯನಿಗೂ ಗೊತ್ತಿದೆ. ಸ್ಯಾಮ್‌ ಹೇಳುವುದಿಲ್ಲ. ಅಪ್ರಮೇಯನಿಗೆ ಅವನು ಹೇಳುವುದೂ ಬೇಕಿಲ್ಲ.

ಆದರೂ… ಏನೋ ಒಂದು ನೋವಿನ ಎಳೆ ಕಂಡಿತ್ತು ಸ್ಯಾಮ್‌ಗೆ ಅಪ್ರಮೇಯನ ಮುಖದ ಮೇಲೆ.

ಏನದು ಆ ಭಾವನೆ?

ಬಹಳ ಹೊತ್ತು ತಲೆಕೆಡಿಸಿಕೊಂಡರೂ ಅದೇನೆಂದು ಹೊಳೆಯಲಿಲ್ಲ ಸ್ಯಾಮ್‌ಗೆ.

“ಅಲ್ಲಾ ಸ್ವಾಮೀ, ನಿಮ್ಮ ಗುರುಗಳ ಅಂತಿಮ ದರ್ಶನ ಮಾಡಿದಿರಿ. ಅವರು ನಿಮಗೆ ಒಪ್ಪಿಸಿದ ಕೆಲಸವಾದ ಅವರ ಶಿಷ್ಯರನ್ನು ಕರೆತಂದಿರಿ. ಅವರು ನೀಡಿದ ಕೆಲಸವಾದ ಮೂರ್ತಿಗಳ ಸುರಕ್ಷಿತ ಸಾಗಣೆ ಮಾಡಿದಿರಿ. ನಿಮಗೆ ಇಷ್ಟವಾದ ಅನೇಕ ಗುಡಿಗಳಿಗೆ ಹೋದಿರಿ. ನಿಮ್ಮ ಪ್ರೀತಿಯ ಕೆಲಸವಾದ ಪ್ರವಚನವನ್ನು ಎಲ್ಲ ಕಡೆ ಮಾಡಿದಿರಿ. ಮಾನವ ಧರ್ಮದ ಬಗ್ಗೆ, ಅನೇಕ ದಾರ್ಶನಿಕರ ಬಗ್ಗೆ  ನಿಮ್ಮದೇ ಆದ ರೀತಿಯಲ್ಲಿ ಜನರಿಗೆ ಅವರದೇ ಭಾಷೆಯಲ್ಲಿ ತಿಳಿಸಿಕೊಟ್ಟಿರಿ. ನಿಮ್ಮ ಶಿಷ್ಯನನ್ನು ಕ್ಷಮಿಸಿದ್ದೀರಿ. ಆದರೂ ನಿಮ್ಮ ಮುಖದ ಮೇಲೆ ಏನೋ ಒಂದು ಅರ್ಥವಾಗದ ಭಾವನೆ ಇದೆ” ಎಂದ ಸ್ಯಾಮ್.‌

ಹೇಳಿದ ನಂತರ ಹೇಳಬಾರದ್ದು ಏನಾದರೂ ಹೇಳಿದನೋ ಎಂಬ ಅಳುಕು ಕೂಡ ಆಗಿತ್ತು.

ಅಪ್ರಮೇಯ ಮುಗುಳುನಕ್ಕರೂ ಅವನ ಕಣ್ಣುಗಳಲ್ಲಿ ಆ ನಗೆ ಬಿಂಬಿತವಾಗಿರಲಿಲ್ಲ.

ನಾಗ ಗಾಂಧಾರಿ ಮತ್ತು ಅಗಸ್ತ್ಯ ಬೆಂಗಳೂರಿಗೆ ಹೊರಟರು.

“ನೀವು ಯಾವಾಗ ಬೇಕಾದರೂ ಇಲ್ಲಿಗೆ ಬರಬಹುದು” ಎಂದು ಮುಕ್ತಮನದ ಆಹ್ವಾನ ನೀಡಿದ ಅಪ್ರಮೇಯ.

ನಾಗ ಗಾಂಧಾರಿಗೆ ವ್ಯಥೆಯಾದರೂ ಲಭ್ಯವಿಲ್ಲದೇ ಏನೂ ನಮ್ಮದಾಗುವುದಿಲ್ಲ. ನನಗೆ ಈ ಜನ್ಮದಲ್ಲಿ ಅಪ್ಪು ಲಭ್ಯವಿಲ್ಲ ಎಂದು ನಿರಾಸೆಗೊಂಡರೂ ಮನಸ್ಸನ್ನು ಸಾಂತ್ವನಗೊಳಿಸಿಕೊಂಡಳು.

ಹೇಗೂ ಯಾವಾಗ ಬೇಕಾದರೂ ಬಾ ಎಂದು ಆಹ್ವಾನಿಸಿರುವನಲ್ಲ… ನೋಡಬೇಕೆನಿಸಿದಾಗ ಬಂದರಾಯಿತು. ತನಗೂ ಇನ್ನು ಮದುವೆಯಲ್ಲಿ ಆಸಕ್ತಿಯಿಲ್ಲ. ಮನಸ್ಸೆಂದೋ ಅಪ್ಪುವಿನ ವಶವಾಗಿದೆ…

ಅಗಸ್ತ್ಯ ತನ್ನ ಕಸಿನ್‌ ಅಪ್ರಮೇಯನ ಈ ಪುಣ್ಯಕಾರ್ಯದಲ್ಲಿ ಭಾಗಿಯಾಗಿದ್ದು ತನ್ನ ಸುಕೃತವೆಂದುಕೊಂಡ.

ಸ್ಯಾಮ್‌ ಅಪ್ರಮೇಯನನ್ನು ಬಿಡಲಾರದೇ ಬಿಟ್ಟುಹೊರಟ.

“ಸ್ವಾಮೀ, ನನಗೆ ಇಲ್ಲಿಂದ ಹೋಗಲು ಮನಸ್ಸೇ ಇಲ್ಲ” ಎಂದ.

ʼನಿಮ್ಮನ್ನು ಬಿಟ್ಟು ಹೋಗಲುʼ ಎನ್ನುವ ಮಾತನ್ನು ನುಂಗಿಕೊಂಡ.

ಅಪ್ರಮೇಯ ಮುಗುಳ್ನಕ್ಕು , ಅವನ ಬೆನ್ತಟ್ಟಿ, “ನೀವು ಮಾಡ್ತಿರೋ ಕೆಲಸ ಸ್ತುತ್ಯರ್ಹವಾದದ್ದು ಶ್ಯಾಮ್‌ ಅವರೇ. ನನ್ನ ಪ್ರಯತ್ನ ಅಪರಾಧಿಗಳೇ ಇಲ್ಲದ ಹಾಗೆ ಮಾಡುವುದು. ನಿಮ್ಮ ಪ್ರಯತ್ನ ಈಗಾಗಲೇ ಅಪರಾಧಿಗಳಾಗಿರುವವರನ್ನು ಹಿಡಿದು ಅವರಿಂದ ಇತರರಿಗೆ ತೊಂದರೆಯಾಗದಂತೆ ಮಾಡುವುದು” ಎಂದವನು, “ಹೋಗಿಬನ್ನಿ. ಯಾವಾಗ ಬೇಕಾದರೂ ನಿಮಗೆ ಇಲ್ಲಿ ಸ್ವಾಗತವುಂಟು” ಎಂದ.

ಶಿಷ್ಯರು ನಾಲ್ವರನ್ನೂ ಎದುರಿಗೆ ಕೂರಿಸಿಕೊಂಡು, “ನನ್ನ ಈ ಪ್ರವಾಸದಿಂದ ನನಗೆ ಅನೇಕ ಸತ್ಯಗಳು ಗೊತ್ತಾಗಿವೆ. ಎಂತಹ ತರಬೇತಿ ನೀಡಿದರೂ, ಯಾವ ರೀತಿಯ ಸಾತ್ವಿಕ ವಾತಾವರಣದಲ್ಲಿದ್ದರೂ ಮನಸ್ಸೆಂಬ ಚಿಗರೆ ಅಲ್ಲಿ ಇಲ್ಲಿ ಜಿಗಿದಾಡುತ್ತದೆ. ಈಗಲೂ ನಿಮಗೆ ನಾನು ಹೇಳುವುದು ಒಂದೇ. ನಿಮಗೆ ಇಲ್ಲಿ ಇರಲು ಇಷ್ಟವಿಲ್ಲದಿದ್ದರೆ ಹೋಗಿ ಎನ್ನಲು ನನಗೆ ಮನಸ್ಸು ಬರುವುದಿಲ್ಲ. ಏಕೆಂದರೆ ನಿಮ್ಮ ಮನದ ಮೂಲೆಯಲ್ಲಿರುವ ಈ ಧನದ ಮೋಹವನ್ನು ಬಡಿದೋಡಿಸುವ ಅಭಿಲಾಷೆ ನನಗಿದೆ. ನೀವು ಈ ಆಶ್ರಮಕ್ಕೆ ಬಂದಾಗ ಏನೆಂದಿದ್ದಿರಿ ಎಂಬುದನ್ನು ನೆನೆಯಿರಿ. ಕಾಯಾ ವಾಚಾ ಮನಸಾ ತ್ರಿಕರಣಶುದ್ಧಿಯಿಂದ ಇಲ್ಲಿ ಇರಬೇಕೆಂಬುದು ನನ್ನ ಆಸೆ. ಇರುವಿರಾ? ನಿಮಗೆ ಆಗದೇ ಹೋದರೆ ನಾನ್ಯಾರು ನಿಮ್ಮನ್ನು ತಡೆಯಲು?” ಎಂದ. ಕೊನೆಯ ವಾಕ್ಯ ಹೇಳುವಾಗ ಅವನ ಧ್ವನಿ ಕಂಪಿಸಿತ್ತು. ತಪ್ಪು ಮಾಡಿದ ಶಿಷ್ಯ ಇನ್ನೊಮ್ಮೆ ಅಂತಹ ತಪ್ಪು ಮಾಡುವುದಿಲ್ಲವೆಂದು ಮನದಲ್ಲೇ ನಿರ್ಧರಿಸಿದ.

ಅಪ್ರಮೇಯನ ಮುಖದ ಮೇಲೆ  ಸ್ಯಾಮ್‌ ಗುರುತಿಸಿದ್ದ ಆ ಭಾವನೆ ಮತ್ತೆ ಕಂಡಿತ್ತು ಅಪ್ರಮೇಯನ ಮೊಗದ ಮೇಲೆ. ಆದರೆ ಆ ಶಿಷ್ಯರ‍್ಯಾರೂ ಅದನ್ನು ಗುರುತಿಸಲಾಗಲಿಲ್ಲ.

ಅವರಿಗೆ ಕೆಲವು ಕೃತ್ಯಗಳನ್ನು ಮಾಡಲು ಹೇಳಿ ಅಪ್ರಮೇಯ ಹೊರಗೆ ಹೊರಟ.

ʼಎಲ್ಲಿಗೆ ಹೋಗುವಿರಿ ಸ್ವಾಮೀ?ʼ ಎಂದು ಕೇಳಲು ಯಾರೂ ಧೈರ್ಯ ಮಾಡಲಿಲ್ಲ. ಏಕೆಂದರೆ ಅಪ್ರಮೇಯನ ಮುಖದ ಮೇಲೆ ಬಹಳ ಗಂಭೀರವಾದ ಭಾವವಿತ್ತು.

ಅಪ್ರಮೇಯ ತನ್ನ ಕಾಲ್ನಡಿಗೆಯ ಪ್ರಯಾಣವನ್ನು ಆರಂಭಿಸಿದ. ಸುಮಾರು ಮೂವತ್ತು ಕಿ.ಮೀ. ದೂರ ಕೇವಲ ಗಿಡ, ಮರ, ಬೆಟ್ಟ, ಝರಿಗಳಿದ್ದ ಸುಂದರವಾದ ಶಾಂತ ವಾತಾವರಣದಲ್ಲಿ ನಡೆದು ಹೋದ. ಆ ಪ್ರಕೃತಿಯ ಸೌಂದರ್ಯ ಸ್ವಲ್ಪ ಮಟ್ಟಿಗೆ ಅವನ ಮನಸ್ಸಿನ ಬೇಗುದಿಯನ್ನು ಕಡಿಮೆ ಮಾಡಿತ್ತು.

ಅವನು ತಲುಪಿದ ಜಾಗ ಅತ್ಯಂತ ನಯನ ಮನೋಹರವಾದದ್ದು. ಅದು ಅಲಕನಂದಾ ನದಿ ಹರಿಯುವ ವಿಷ್ಣುಪ್ರಯಾಗ ಎಂಬ ಸ್ಥಳ. ಗಂಗಾನದಿಗೆ ಧೌಳಿಗಂಗಾ, ಮಂದಾಕಿನಿ, ಪಿಂಡಾರ ಮತ್ತು ಭಾಗೀರಥಿ ನದಿಗಳು ಸೇರಿಕೊಳ್ಳುವ ಜಾಗವದು.

ಹತ್ತಿರದಲ್ಲಿದ್ದ ಸತೋಪಂತವೆಂಬ   ತ್ರಿಕೋಣಾಕಾರದ ಕೊಳದ ಬಳಿಗೆ ಬಂದ. ಆ ಜಾಗವು ತ್ರಿಮೂರ್ತಿಗಳಿರುವ ಸ್ಥಳವೆಂದು ಹೆಸರು ಪಡೆದಿತ್ತು. ಬ್ರಹ್ಮ, ವಿಷ್ಣು ಮತ್ತು ಶಿವರ ಆವಾಸಸ್ಥಾನವೆನ್ನುತ್ತಾರೆ ಆ ಸ್ಥಳವನ್ನು. ವಿಷ್ಣು ಪ್ರಯಾಗ, ನಂದಪ್ರಯಾಗ, ಕರ್ಣಪ್ರಯಾಗ, ರುದ್ರಪ್ರಯಾಗ ಮತ್ತು ದೇವಪ್ರಯಾಗಗಳಿರುವ ಈ ಪಂಚಪ್ರಯಾಗದ ಬಳಿ ಅವನು ನಿಂತುಕೊಂಡ.

ತನ್ನ ಟೊಂಕದಲ್ಲಿ ಕಟ್ಟಿಕೊಂಡಿದ್ದ ಗಂಟನ್ನು ಹೊರತೆಗೆದ. ಅದರಲ್ಲಿದ್ದವು ಅವನ ಗುರುಗಳ ಅಸ್ಥಿಯ ಕೆಲವು ಭಾಗಗಳು.

ಅತ್ಯಂತ ನಿರ್ಜನವಾಗಿದ್ದ ಪ್ರದೇಶವದು. ಅಲ್ಲಿ ನಿಂತು ಆಕಾಶಕ್ಕೆ ಮುಖ ಮಾಡಿದ.

ನಂತರ ಮಾತಾಡಲು ತೊಡಗಿದ. “ಗುರುಗಳೇ, ಎಂತಹ ಇಕ್ಕಟ್ಟಿಗೆ ನಾನು ಸಿಲುಕಿದೆ! ನಿಮ್ಮ ತುರ್ತು ಕರೆಯನ್ನು ಕೇಳಿ ಬಂದ ನಾನು ನಿಮ್ಮ ಪಾರ್ಥಿವ ಶರೀರವನ್ನು ಭಸ್ಮ ಮಾಡುವಂತೆ ಆಯಿತು. ನೀವು ನನಗೆ ಒಪ್ಪಿಸಿದ ಮೂರ್ತಿಗಳನ್ನು ಸಾಗಿಸುವುದರಲ್ಲಿ ನಾನು ವಿಫಲನಾದೆ, ಪರಾಭವಗೊಂಡೆ ಎನ್ನುವ ಭಾವನೆ ನನ್ನನ್ನು ಸುಡುತ್ತಿದೆ. ಹೌದು, ನನ್ನೊಳಗೆ ಎಲ್ಲರಿಗೂ ಬಹುಶಃ ಕಾಣುತ್ತಿರುವುದು ಇದೇ ಪರಾಭವ ಭಾವನಾ. ನಾನೆಷ್ಟು ಪ್ರಯತ್ನ ಮಾಡಿದರೂ ನನ್ನಲ್ಲಿ ನಿಮ್ಮ ದಾಯವನ್ನು ನನ್ನ ಬಳಿ ಉಳಿಸಿಕೊಳ್ಳಲಾಗಲಿಲ್ಲ. ಒಂದು ವೇಳೆ ನಾನು ಕಷ್ಟಪಟ್ಟು ನಮ್ಮ ಆಶ್ರಮಕ್ಕೆ ತಂದಿದ್ದರೂ ಅದರ ರಕ್ಷಣೆಗಾಗಿ ನಾನು ಯಾರನ್ನಾದರೂ ನೇಮಿಸಬೇಕಿತ್ತು. ಅದನ್ನು ಯಾರು ಕದ್ದೊಯ್ಯುವರೋ ಎಂಬ ಆತಂಕ ನನ್ನನ್ನು ಎಂದೂ ನೆಮ್ಮದಿಯಾಗಿ ಇರಲು ಬಿಡುತ್ತಿರಲಿಲ್ಲ. ಇದರಿಂದಲೇ ನನಗೆ ಸೋತ ಭಾವನೆ ಉಂಟಾಗಿದೆ. ನನ್ನ ಶಿಷ್ಯರನ್ನು ಅಷ್ಟು ಪ್ರೀತಿಯಿಂದ ನೋಡಿಕೊಂಡರೂ ನನ್ನನ್ನು ಕೊಂದು ಮೂರ್ತಿಗಳನ್ನು ತೆಗೆದೊಯ್ಯುವ ದುಸ್ಸಾಹಸಕ್ಕೆ ಪ್ರಯತ್ನಿಸುವಂತೆ ಮಾಡಿತು. ಇದು ನನ್ನಲ್ಲಿ ಪರಾಭವ ಭಾವನೆಯನ್ನು ಉಂಟುಮಾಡಿದರೆ ಅಚ್ಚರಿಯೇನು? ಅದಕ್ಕೇ ನಾನದನ್ನು…” ಎಂದು ಹೇಳಿ, ಗುರು ಕುಮಾರಾನಂದಸ್ವಾಮಿಗಳ ಅಸ್ಥಿಗಳ ಚೂರುಗಳನ್ನು ಈ ಪುಣ್ಯಕ್ಷೇತ್ರದಲ್ಲಿನ ಜಲದಲ್ಲಿ ಬಿಟ್ಟ. ಅವು ನಿಧಾನವಾಗಿ ಅಷ್ಟು ದೂರ ತೇಲಿ ನಂತರ ಮುಳುಗಿದವು.

ವಾಪಸ್ಸು ಬರುತ್ತಾ ಅಪ್ರಮೇಯ, ʼಅಗಸ್ತ್ಯ ಒಳ್ಳೆಯ ಕೆಲಸ ಮಾಡಿದ್ದಾನೆ. ಅದನ್ನು ಸಶಸ್ತ್ರ ಕಾವಲು ಪಡೆಯಿರುವ ದೇವಸ್ಥಾನದಲ್ಲಿ ಇರಿಸಿದ್ದಾನೆ. ನಾನು ಒಮ್ಮೆ ಹೋಗಿ ನಿಧಾನವಾಗಿ ಅದನ್ನು ನೋಡಬೇಕು, ಅವುಗಳ ಸೌಂದರ್ಯವನ್ನು ಸವಿಯಬೇಕು. ಆಗಲಾದರೂ ನನ್ನ ಈ ಪರಾಭವ ಭಾವನಾ ಹೋಗುವುದೇನೋ ನೋಡಬೇಕುʼ ಎಂದುಕೊಂಡ.

ʼನೀನೇ ಅನಾಥಬಂಧು ಕಾರುಣ್ಯ ಸಿಂಧು ಹೇ ಜಗನ್ನಾಟಕ ಸೂತ್ರಧಾರಿʼ ಎಂದುಕೊಂಡವನು ಜೋರಾಗಿಯೇ,

“ಆರ್ತಾ ವಿಷಣ್ಣಾಃ ಶಿಥಿಲಾಶ್ಚ ಭೀತಾಃ ಘೋರೇಷು ಚ ವ್ಯಾಧಿಷು ವರ್ತಮಾನಾಃ|

ಸಂಕೀರ್ತ್ಯ ನಾರಾಯಣ ಶಬ್ದಮಾತ್ರಂ ವಿಮುಕ್ತದುಃಖಾಃ ಸುಖಿನೋ ಭವಂತಿ||” ಎಂದು ಹಾಡಿದ.

ನಂತರ ಆ ಸುಂದರ ಪ್ರಕೃತಿಯಲ್ಲಿ ಪದ್ಮಾಸನ ಹಾಕಿಕೊಂಡು ಕುಳಿತು, ಕಣ್ಣು ಮುಚ್ಚಿ,

“ಕಾಯೇನ ವಾಚಾ ಮನಸೇಂದ್ರಿಯೈರ್ವಾ
ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್ |
ಕರೋಮಿ ಯದ್ಯತ್ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ ||” ಎಂದು ಪಠಿಸಿದ.

ನಂತರ ತನ್ನ ಮನಸ್ಸು ತಹಬಂದಿಗೆ ಬಂದು ಇನ್ನು ಹೊರಡೋಣ ಎಂದು ಹೇಳುವವರೆಗೂ ಅಲ್ಲಿಯೇ ಕುಳಿತು ಒಂದೇ ಸಮನೆ ಉಚ್ಚಾರ ಮಾಡುತ್ತಿದ್ದ.

“ಓಂ ನಮೋ ನಾರಾಯಣಾಯ”

“ಓಂ ನಮೋ ನಾರಾಯಣಾಯ”

“ಓಂ ನಮೋ ನಾರಾಯಣಾಯ”….

ಮುಗಿಯಿತು…

ಯತಿರಾಜ್ ವೀರಾಂಬುಧಿ

Related post

Leave a Reply

Your email address will not be published. Required fields are marked *