ಪರಾಭವ ಭಾವನಾ – 9 ಯತಿರಾಜ್ ವೀರಾಂಬುಧಿ

ಹಿಂದಿನ ಸಂಚಿಕೆಯಿಂದ…

ಅಪ್ರಮೇಯ ಬೆಂಗಳೂರನ್ನು ಇಷ್ಟು ಬೇಗ ಬಿಡಬೇಕೆಂಬ ಇಚ್ಛೆ ಇರಲಿಲ್ಲ ಆದರೆ ತನ್ನಲ್ಲಿರುವ ವಿಗ್ರಹಗಳ ಭದ್ರತೆಗಾಗಿ ನಿಂತಲ್ಲೇ ನಿಲ್ಲದೆ ದಕ್ಷಿಣ ಭಾರತವನ್ನು ಒಂದಿಷ್ಟು ಧರ್ಮ ಪ್ರಚಾರವನ್ನು ಮಾಡುತ್ತಾ ಸುತ್ತೋಣವೆಂದು ಹೈದರಾಬಾದ್ ಗೆ ಹೋಗೋಣವೆಂದು ನಿರ್ಧರಿಸಿ ಶಿಷ್ಯರ ಹಾಗು ನಾಗ ಗಾಂಧಾರಿಯ ಜೊತೆ ರೈಲು ಹತ್ತಿದ. ಮುಂದೆ…

ಒಂಬತ್ತು-

ಹೈದರಾಬಾದಿನ ಸಾಲಾರ್‌ ಜಂಗ್‌ ಮ್ಯೂಸಿಯಂ ನೋಡಿದರು ಬೆಳಗ್ಗೆ. ನಂತರ ಹೊಟೇಲ್‌ಗೆ ಮರಳಿ ಮಧ್ಯಾಹ್ನ ಸ್ವಲ್ಪ ವಿಶ್ರಾಂತಿ ಪಡೆದರು.

ಸಂಜೆ ಸಣ್ಣ ಗುಡ್ಡವೊಂದರ ಮೇಲಿನ ಬಿರ್ಲಾ ಮಂದಿರ್‌ನವರ ಹಾಲ್‌ನಲ್ಲಿ ಪ್ರವಚನವೇರ್ಪಡಿಸಿದ್ದರು.

ಹೊಟೇಲ್‌ಗೆ ಕಾರು ಬಂದು ಇವರನ್ನು ಕರೆದೊಯ್ದಿತು.

ಬಿರ್ಲಾ ಮಂದಿರ್‌ನಲ್ಲಿ ವೇಂಕಟೇಶ್ವರನ ಭವ್ಯ ಮೂರ‍್ತಿ ಇದೆ. ಮೆಟ್ಟಿಲುಗಳನ್ನು ಹತ್ತಿ ವೇಂಕಟೇಶ್ವರನ ದರ್ಶನ ಪಡೆದರು.

ಹಾಲ್‌ ಪ್ರವೇಶಿಸಿದಾಗ ಅಲ್ಲಿ ಕಿಕ್ಕಿರಿದ್ದ ಜನಸಂದಣಿ ನೋಡಿ ಮನಸ್ಸಿಗೆ ಸಮಾಧಾನವಾಯಿತು. ಈ ಜನ ಕೇವಲ ಸಿನಿಮಾ ನಟರನ್ನು ಮಾತ್ರ ನೋಡಲು ಸೇರುವುದಿಲ್ಲ. ಪ್ರವಚನ ಕೇಳಲು ವಿಶೇಷ ಸೈರಣೆಯುಳ್ಳ ಮನಸ್ಸಿರಬೇಕು. ಅನೇಕ ಸಲ ಹೇಳಿದ ವಿಷಯವನ್ನೇ ಮತ್ತೆ ಮತ್ತೆ ಹೇಳಿದರೂ ಅದರಿಂದ ಕಿರಿಕಿರಿಗೊಳ್ಳಕೂಡದು. ಅಂದರೆ ಮನಸ್ಸನ್ನು ಪ್ರವಚನ ಕೇಳಲು ಹದಮಾಡಿಕೊಂಡು ಬಂದವರು ಮಾತ್ರವೇ ಅದನ್ನು ಕೇಳಲು ಸಾಧ್ಯ.

“ಸಭೆಗೆ ನಮಸ್ಕಾರ. ಈ ವೇಂಕಟೇಶ್ವರನ ದಿವ್ಯಸನ್ನಿಧಿಯಲ್ಲಿ ನನಗೆ ನಿಮ್ಮವರೇ ಆದ ಅಣ್ಣಮಾಚಾರ್ಯ ನೆನಪಾಗುತ್ತಿದ್ದಾರೆ. ಜೀವನವನ್ನು ಅವರು ಬಹಳ ಸೊಗಸಾಗಿ ವರ್ಣಿಸಿರುವ ಗಾನವೊಂದಿದೆ” ಎಂದಾಗ ಶಿಷ್ಯ ಕನಕದಾಸ ಹಾಡಿದ.

ಅಣ್ಣಮಾಚಾರ್ಯ

“ನಾನಾಟಿ ಬತುಕು ನಾಟಕಮು ಕಾನಕ ಕನ್ನದಿ ಕೈವಲ್ಯಮು. ಪುಟ್ಟುಟಯು ನಿಜಮು ಪೋವುಟಯು ನಿಜಮು ನಟ್ಟನಡಿ ಮೀ ಪನಿ ನಾಟಕಮು” ಎಂದಾಗ ಅಪ್ರಮೇಯ ಅವನಿಗೆ ಸನ್ನೆ ಮಾಡಿ ಹಾಡು ನಿಲ್ಲಿಸಲು ಹೇಳಿ “ನಮ್ಮ ಬದುಕು ಒಂದು ನಾಟಕ. ನಮಗೆ ಯಾವುದು ತಿಳಿಯದೋ ಅದು ಕೈವಲ್ಯ ಅಥವಾ ಮುಕ್ತಿ. ಹುಟ್ಟು ನಿಜ, ಹೋಗುವುದೂ ನಿಜ. ನಡುವಿನ ನಮ್ಮ ಕೆಲಸವೇನು? ಬರಿಯ ನಾಟಕ.  ಆದಿಶಂಕರರು ಪುನರಪಿ ಜನನಂ ಪುನರಪಿ ಮರಣಂ. ಇಹಸಂಸಾರೇ ಬಹುದುಸ್ತಾರೇ ಕೃಪಯಾಪಾರೇ ಪಾಹಿ ಮುರಾರೇ ಎಂದಿದ್ದಾರೆ. ಇಲ್ಲಿ ಅಣ್ಣಮಾಚಾರ್ಯರು ತೆಗದು ಪಾಪಮು ತೀರದು ಪುಣ್ಯಮು ನಗಿ ನಗಿ ಕಾಲಮು ನಾಟಕಮು. ಯೆಗುವನೆ ‍‍ ಶ್ರೀ ವೇಂಕಟೇಶ್ವರುಡೇಲಿಕ ಗಗನಮು ಮೀದಿದಿ ಕೈವಲ್ಯಮು ಎನ್ನುತ್ತಾರೆ. ಅಂದರೆ ನಮ್ಮ ಪಾಪವು ಕತ್ತರಿಸಲ್ಪಡದು. ನಮ್ಮ ಪುಣ್ಯವು ತೀರದು. ನಡುವೆ ನಾವು ನಡೆಸುವುದು ನಾಟಕವು. ಮೇಲಿರುವ ಶ್ರೀ ವೇಂಕಟೇಶ್ವರನಿಂದಲೇ ನಮಗೆ ಕೈವಲ್ಯ” ಎಂದ ಅಪ್ರಮೇಯ.

ಬಹಳ ಜನ ತೆಲುಗಿನವರು ಇದ್ದರು. ಒಬ್ಬ ಧೈರ್ಯ ಮಾಡಿ “ಸ್ವಾಮೀ, ಒಂದಿಷ್ಟು ಚಿಕ್ಕ ತಿದ್ದುಪಡಿ ಮಾಡಲಾ?” ಎಂದ.

ಅಪ್ರಮೇಯ ನಕ್ಕು, “ನೀವು ತೆಲುಗನ್ನು ಓದಿ ಬರೆದವರು. ನಿಮ್ಮ ವಿಶ್ಲೇಷಣೆ ಸರಿಯಾಗಿರುತ್ತದೆ ಹೇಳಿ” ಎಂದ. ಅದೇ ಅವನ ದೊಡ್ಡ ಗುಣ. ಯಾರು ತನ್ನಲ್ಲಿ ತಪ್ಪು ಕಂಡುಹಿಡಿದರೂ ಅದನ್ನು ಒಪ್ಪಿಕೊಳ್ಳಲು ಸಿದ್ಧನಿರುತ್ತಿದ್ದ.

ಆ ಮನುಷ್ಯ ತೆಲುಗು ಕವನಗಳಲ್ಲಿ ಡಾಕ್ಟರೇಟ್‌ ಮಾಡಿದವನಂತೆ. ಅನೇಕ ವಿಷಯಗಳನ್ನು ಸ್ಪಷ್ಟವಾಗಿ ಹೇಳಿದ.

ಅಪ್ರಮೇಯನೂ ಅಲ್ಲಿ ‍ಶ್ರೋತ್ರುವಾಗಿ ಕುಳಿತು ಕೇಳತೊಡಗಿದ. ಅವನು ಮುಗಿಸಿದ ನಂತರ ಮೊದಲ ಚಪ್ಪಾಳೆ ತಾನೇ ಹೊಡೆದಿದ್ದ ಅಪ್ರಮೇಯ.

ನಂತರ ಅಪ್ರಮೇಯ ಅಣ್ಣಮಾಚಾರ್ಯರ ಮತ್ತೊಂದು ಕೀರ್ತನೆಯ ಕೆಲವು ನಾಮಗಳನ್ನು ಹೇಳಿ ತನ್ನೊಂದಿಗೆ ಎಲ್ಲರೂ ಹೇಳುವಂತೆ ಮಾಡಿದ.

“ಮಾಧವಾ ಕೇಶವಾ ಮಧುಸೂದನಾ ವಿಷ್ಣು ಶ್ರೀಧರಾ” ಎಂದ. ಎಲ್ಲರೂ ಖೋರಸ್‌ನಲ್ಲಿ ಹಾಡತೊಡಗಿದರು.

“ವಾಮನ ಗೋವಿಂದ ವಾಸುದೇವ ಪ್ರದ್ಯುಮ್ನಾ ರಾಮ ರಾಮ ಕೃಷ್ಣ ನಾರಾಯಣಾಚ್ಯುತಾ

ದಾಮೋದರಾನಿರುದ್ಧ ದೈವ ಪುಂಡರೀಕಾಕ್ಷ” ಎಂದು ಅಪ್ರಮೇಯ ಹಾಡಿದೊಡನೆ ಇಡೀ ಸಭಾಂಗಣ ಅವನೊಂದಿಗೆ ಹಾಡಿದರು.

ನಂತರ ಅವನು “ವೇಂಕಟೇಶ್ವರನ ಮಹಿಮೆಯ ಬಗ್ಗೆ ಬಹಳ ಕತೆಗಳಿವೆ. ಬಾವಾಜಿ ಎಂಬ ಭಕ್ತನೊಂದಿಗೆ ಪಗಡೆ ಹಾಡಿದ್ದು, ಅವನು ದೇವರನ್ನು ಜೋಗುಳ ಹಾಡಿ ಮಲಗಿಸಿದ್ದು ಎಲ್ಲವೂ ಜನಜನಿತ” ಎಂದು ಹೇಳಿ ಒಂದಿಷ್ಟು ಪ್ರಶ್ನೆಗಳನ್ನು ಎತ್ತಿಕೊಂಡ.

ಸಮಯ ಸರಿದಿದ್ದೇ ತಿಳಿಯಲಿಲ್ಲ.

ದುಷ್ಟ ಶಿಷ್ಯ ನಾಯಕ್‌ನ ಲೋಕಲ್‌ ಗೂಂಡಾಗೆ ಫೋನ್‌ ಮಾಡಿದ.

ಹೊಟೇಲ್‌ ರೂಮಿಗೆ ಕದ್ದು ಹೋಗಿ ಅಪ್ರಮೇಯನ ಲಗ್ಗೇಜನ್ನು ಹುಡುಕಿದರಂತೆ. ಸಿಗಲಿಲ್ಲವೆಂದು ಫೋನಿನಲ್ಲೇ ಬೈದ ಆ ಲೋಕಲ್‌ ಗೂಂಡಾ.

“ಹೊಟೇಲ್‌ ಸೇಫ್‌ನಲ್ಲಿ ಹುಡುಕಬೇಕಿತ್ತು” ಎಂದ ಆ ಶಿಷ್ಯ. ಅಪ್ರಮೇಯ ಆ ಹೊಟೇಲ್‌ ಮ್ಯಾನೇಜರ್‌ನೊಂದಿಗೆ ಮಾತಾಡಿದ್ದನ್ನು ಗಮನಿಸಿದ್ದು ನೆನಪಾಗಿ.

“ಛೇ, ನಾಳೆ ನೋಡ್ತೀನಿ. ಎಲ್ಲಿದೆ ನಾಳೆ ಪ್ರವಚನ?” ಎಂದ ಆ ಗೂಂಡಾ.

“ಸಿಕಂದರಾಬಾದ್‌ನಲ್ಲೆಲ್ಲೋ. ನಾವು ನಾಂಪಲ್ಲಿಗೆ ಹತ್ತಿರವೇ ಇರುವುದಿಲ್ಲ. ಅದಕ್ಕೇ ನೀವು ಆರಾಮವಾಗಿ ನಿಮ್ಮ ಕೆಲಸ ನಡೆಸಿ” ಎಂದ ಶಿಷ್ಯ.

ಅವನಿಗೆ ಒಂದಿಷ್ಟೂ ತಪ್ಪಿತಸ್ಥ ಮನೋಭಾವನೆ ಇರಲಿಲ್ಲ. ಹಣವೆಂದರೆ ಹೆಣವೇ ಬಾಯ್ಬಿಡುವಾಗ ಯಃಕಶ್ಚಿತ್‌ ಸಾಮಾನ್ಯ ಮನುಷ್ಯ, ಅವನೇಕೆ ಹಣ ಬೇಡವೆನ್ನುತ್ತಾನೆ?

ಸಿಕಂದರಾಬಾದ್‌ನಲ್ಲಿ ಕನ್ನಡ ಸಂಘದ ವತಿಯಿಂದ ಈ ಪ್ರವಚನ ಏರ್ಪಟ್ಟಿತ್ತು.

ಈಗಾಗಲೇ ಮದುರೈ, ಬೆಂಗಳೂರು ಪ್ರವಚನಗಳ ಬಗ್ಗೆ ಈ ಕನ್ನಡ ಸಂಘಕ್ಕೆ ಸುದ್ದಿ ಸಿಕ್ಕಿತ್ತು. ಬಿರ್ಲಾ ಮಂದಿರ್‌ನಲ್ಲಿ ನಡೆದ ಪ್ರವಚನವನ್ನೂ ಯಾರೋ ಒಬ್ಬ ಭಕ್ತ ಈ ಸಂಘದಿಂದ ಬಂದಿದ್ದವನು ಕೇಳಿದ್ದ.

“ಸ್ವಾಮೀ ನಿಮ್ಮ ಕನ್ನಡದ ದಾಸರ ಬಗ್ಗೆ ಹೇಳಲು ಸಾಧ್ಯವೇ?” ಎಂದು ಕೇಳಿದ ಅವನು.

“ಕನಕದಾಸರು ಮತ್ತು ಪುರಂದರದಾಸರು ಸಮಕಾಲೀನರು. ಇಬ್ಬರೂ ಅವರವರ ಛಾಪನ್ನು ಕನ್ನಡ ದಾಸರಪದಗಳಲ್ಲಿ ಬಿಟ್ಟುಹೋಗಿದ್ದಾರೆ. ಕನಕದಾಸರ ಬಗ್ಗೆ ಇಂದು ಮಾತಾಡೋಣ” ಎಂದ ಅಪ್ರಮೇಯ.

ಅಂದು ಸಂಜೆ ಇವರುಗಳು ಹೊಟೇಲ್‌ನಿಂದ ಕ್ಯಾಬ್‌ ಮಾಡಿಕೊಂಡು ಹೊರಟಾಗ ನಾಗ ಗಾಂಧಾರಿ ಬರುವುದಿಲ್ಲವೆಂದಳು.

“ಯಾಕೆ? ಆರೋಗ್ಯ ಸಾಲದೇನು?” ಎಂದ ಅಪ್ರಮೇಯ ಕಳಕಳಿಯಿಂದ.

“ನಿಮಗೇನಾಗಬೇಕಾಗಿದೆ ಸ್ವಾಮಿಗಳೇ? ನನ್ನ ಆರೋಗ್ಯ ಯಾವ ಮಟ್ಟದಲ್ಲಿದ್ದರೆ ನಿಮಗೇನು ಹೇಳಿ? ದಯವಿಟ್ಟು ನನ್ನನ್ನು ನನ್ನ ಪಾಡಿಗೆ ಬಿಟ್ಟು ನಿಮ್ಮ ಭಕ್ತಾದಿಗಳಿಗೆ ನಿಮ್ಮ ಧರ್ಮೋಪದೇಶ ಮಾಡಿ” ಎಂದಳು ವ್ಯಂಗ್ಯ ತುಂಬಿದ ನಾಟಕೀಯ ಶೈಲಿಯಲ್ಲಿ.

ಅಪ್ರಮೇಯ ವ್ಯಥಿತನಾದ. ಆದರೆ ಕೆಲವೇ ಕ್ಷಣ. ನಂತರ ಶ್ರೀಕೃಷ್ಣ ತನ್ನ ಗಾನವಾಣಿಯಾದ ಭಗವದ್ಗೀತೆಯಲ್ಲಿ ಹೇಳಿದ್ದು ನೆನಪು ಮಾಡಿಕೊಂಡ.

ನನ್ನನ್ನು ಸದಾ ಧ್ಯಾನಿಸುವವನಿಗೆ ದೇಹದ ಶೀತ ಉಷ್ಣಗಳು, ಮನಸ್ಸಿನ ಸುಖ ದುಃಖಗಳು, ಬುದ್ಧಿಗಾಗುವ ಮಾನ, ಅಪಮಾನಗಳು ಒಂದೇ ಎಂದಿದ್ದಾನೆ ಆ ಗೀತಾಚಾರ್ಯ.

ಹಾಗಿರುವಾಗ ತನ್ನ ಸ್ವಂತ ಮಾವನ ಮಗಳು, ತನ್ನೊಂದಿಗೆ ಬೆಳೆದವಳು, ಅದರಲ್ಲೂ ತನ್ನನ್ನು ಇಷ್ಟಪಟ್ಟು ತನ್ನಿಂದ ನಿರಾಕರಿಸಲ್ಪಟ್ಟವಳು ಬೇರಾವ ರೀತಿ ಹೇಳಲು ಸಾಧ್ಯ?

ಏನೋ ಸಬೂಬು ಹೇಳಿ ಇಲ್ಲಿಯವರೆಗೆ ಬಂದಿದ್ದಾಳೆ. ಬಹುಶಃ ಮುಂದಿನ ಊರಿಗೆ ಇವಳು ಬರಲಾರಳು. ಏಕೆಂದರೆ ತನ್ನ ಇಂದಿನ ನಿರಾಕರಣ ಅವಳನ್ನು ಪ್ರಪಾತದ ಅಂಚು ಹಿಡಿಯುವಂತೆ ಮಾಡಿದೆ.

ಅಂದು ಸಂಜೆ ಸಿಕಂದ್ರಾಬಾದ್‌ನ ಹಾಲ್‌ಗೆ ಹೋದಾಗ ಬೇಕಾದಷ್ಟು ಜನರಿದ್ದರು.

ಹೇಗೆ ಇದು? ಈಗಿನ ಕಾಲದ ತಂತ್ರಜ್ಞಾನವು ಎಷ್ಟು ಆಳವಾಗಿದೆ ಎಂದರೆ ಯಾರಿಗೆ ನ್ಯಾಯ, ನೀತಿ, ಧರ್ಮಗಳ ಬಗ್ಗೆ, ನಮ್ಮ ಮಹಾ ಗ್ರಂಥಗಳ ಬಗ್ಗೆ, ನಮ್ಮ ವಾಗ್ಗೇಯಕಾರರ ಬಗ್ಗೆ ಕೇಳುವಷ್ಟು ಪುರುಸೊತ್ತು, ವ್ಯವಧಾನ ಮತ್ತು ಆಸಕ್ತಿ ಇರುತ್ತದೆ ಎಂದುಕೊಂಡಿದ್ದೆನಲ್ಲಾ…

ಒಂದು ಕಾಲದಲ್ಲಿ ವಿಶೇಷವಾಗಿ ಹಿಪ್ಪೀ ಚಳುವಳಿಯ ಸಮಯದಲ್ಲಿ ಅನೇಕ ಹಿಪ್ಪೀಗಳು ಶಾಂತಿಯನ್ನರಸುತ್ತಾ ಭಾರತಕ್ಕೆ ಬಂದಿದ್ದರಂತೆ. ಗುರುಗಳಾದ ಕುಮಾರಾನಂದಸ್ವಾಮಿಗಳು ಅವನಿಗೆ ಒಮ್ಮೆ ಈ ವಿಷಯ ಹೇಳಿದ್ದರು.

ವಿದೇಶೀಯರೇ ತಮ್ಮಲ್ಲಿ ಶಾಂತಿಯನ್ನರಸಿ ಬಂದಿದ್ದಾರೆಂದರೆ ನಮ್ಮ ಮನಸ್ಸಿನ ಶಾಂತಿಯನ್ನು ನಾವೆಂದಿಗೂ ಕದಡಿಕೊಳ್ಳಕೂಡದು. ಆಗಾಗ ತೊಂದರೆ ಎನ್ನುವ ಕಲ್ಲು, ದುಃಖ ಎನ್ನುವ ರಾಡಿ ನಮ್ಮ ಮನದ ಕೊಳದಲ್ಲಿ ಇರುತ್ತದೆ. ಸ್ವಲ್ಪ ಹೊತ್ತು ನಾವು ಏನೂ ಪ್ರತಿಕ್ರಿಯೆ ತೋರದಿದ್ದರೆ ನೀರು ಮತ್ತೆ ತಿಳಿಯಾಗುತ್ತದೆ.

“ಸರಿ, ಆರೋಗ್ಯ ಜೋಪಾನ” ಎಂದು ಹೇಳಿ ಹೊರಟುಬಿಟ್ಟ.

ಅವನ ತಣ್ಣಗಿನ ಪ್ರತಿಕ್ರಿಯೆಗೆ ಅವನು ಹೋದ ಮೇಲೆ ಬಿಕ್ಕಿ ಬಿಕ್ಕಿ ಅತ್ತಳು ನಾಗ ಗಾಂಧಾರಿ.

ತನಗೇಕೆ ಬೇರೆ ಯಾರನ್ನೂ ಪ್ರೇಮಿಸುವ ಆಸಕ್ತಿ ಕೊಡಲಿಲ್ಲ ಆ ದೇವರು? ಈ ಏಕಮುಖ ಪ್ರೇಮವು ಎಂದಿಗೂ ಯಶಸ್ವಿಯಾಗದು.

ಆದರೂ ಅದೇನೋ ದೂರದ ಆಸೆ. ಹೇಗೂ ತನಗೆ ಬೇರಾರ ಮೇಲೂ ಆಸಕ್ತಿ ಇಲ್ಲ. ಇವನ ಜೊತೆಗೆ ಜೋಷಿಮಠದ ಆಶ್ರಮಕ್ಕೆ ಹೋಗುವುದು. ಅಲ್ಲಿನ ಪರಿಸ್ಥಿತಿ ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳುವುದು.

ಹಾಲ್‌ ತುಂಬಾ ಜನರಿದ್ದರು.

ವೇದಿಕೆ ಹತ್ತಿ ಎಲ್ಲರಿಗೂ ವಂದಿಸಿ ಕುಳಿತ. ಶಿಷ್ಯರು ನಾಲ್ವರೂ ಕುಳಿತರು. ಒಬ್ಬೊಬ್ಬರ ಬಳಿ ಒಂದೊಂದು ಚಿಕ್ಕ ತಾಳಗಳಿದ್ದವು.

ಮೊಬೈಲ್‌ನಲ್ಲಿ ತಂಬೂರಿ ಶ್ರುತಿ ಆನ್‌ ಮಾಡಿ “ಸಭೆಗೆ ನಮಸ್ಕಾರ. ನಾನು ಕನ್ನಡದಲ್ಲಿ ಮಾತಾಡಬಹುದಾ?” ಎಂದ.

“ಇದು ಕನ್ನಡ ಸಂಘವೇ ಸ್ವಾಮಿ. ತೆಲುಗು ಮಾತ್ರ ತಿಳಿದ ಜನರೂ ಇದ್ದಾರೆ. ಅದಕ್ಕೇ ಕನ್ನಡ ಮತ್ತು ತೆಲುಗು ಬಲ್ಲ ಒಬ್ಬರನ್ನು ನಿಮ್ಮ ಬಳಿ ಕೂರಿಸಬಹುದಾ?” ಎಂದ ವ್ಯವಸ್ಥಾಪಕ.

“ಹಾಗೇ ಆಗಬಹುದು. ಆದರೆ ನಾನಿಲ್ಲಿ ಅನೇಕ ಪದಗಳನ್ನು ವಿವರಿಸಲೆತ್ನಿಸುತ್ತೇನೆ” ಎಂದ ಅಪ್ರಮೇಯ.

ಅಬ್ರಾಹ್ಮಣನಾದ ಕನಕನನ್ನು ಬಹಳ ಜನ ಅನಾದರಿಸಿದರು. ವ್ಯಾಸರಾಯತೀರ್ಥರ ಮೆಚ್ಚಿನ ಶಿಷ್ಯನಾದ ಕನಕ ಕನಕದಾಸರೆಂದು ಹೆಸರು ಪಡೆದರು.

ಚಿಕ್ಕಂದಿನಿಂದಲೂ ಬಹಳವೇ ವಿಶಿಷ್ಟವಾಗಿದ್ದರು ಕನಕದಾಸರು.

ಕನಕದಾಸರು

ಒಮ್ಮೆ ವ್ಯಾಸರಾಯರು “ಯಾರು ಸ್ವರ್ಗಕ್ಕೆ ಹೋಗಬಹುದು?” ಎಂದರೆ ಕನಕದಾಸರು “ನಾನು ಹೋದರೆ ಹೋದೇನು” ಎಂದಾಗ ಉಳಿದ ಶಿಷ್ಯರು ಗಾಬರಿಯಾದರು. ಇವನದು ದುರಹಂಕಾರ ಎಂದುಕೊಂಡರು. ಆಗ ವ್ಯಾಸರಾಯರು, “ಇಲ್ಲಿ ನಾನು ಎಂದರೆ ಕನಕನಲ್ಲ. ಎಲ್ಲರ ಮನಸ್ಸಿನಲ್ಲಿರುವ ಅಹಂ. ಹೌದು ಅಹಂ ಹೋದರೆ ಮಾತ್ರ ನಾವು ಪರಮಾತ್ಮನಿಗೆ ಹತ್ತಿರವಾಗಬಲ್ಲೆವು” ಎಂದರು.

ಕನಕದಾಸರ ಊರಿನ ಹೆಸರು ಕಾಗಿನೆಲೆ. ಅಲ್ಲಿ ಆದಿಕೇಶವನ ದೇವಸ್ಥಾನವಿದೆ. ಅವರ ಎಲ್ಲ ಕೀರ್ತನೆಗಳಲ್ಲೂ ಕಾಗಿನೆಲೆಯ ಆದಿಕೇಶವನನ್ನು ಸ್ಮರಿಸಿದ್ದಾರೆ.

ಜಾತಿ ಜಗಳವನ್ನು ಅವರು ಧಿಕ್ಕರಿಸಿದರು” ಎಂದಾಗ ಅಪ್ಪುವಿನ ಶಿಷ್ಯ ಕನಕದಾಸ, “ಕುಲಕುಲಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ” ಎಂದು ಹಾಡಿದ.

ಅವನ ಸುಶ್ರಾವ್ಯವಾದ ಹಾಡು ಅಲ್ಲಿದ್ದ ಎಲ್ಲರಿಗೂ ಹಿತವಾಗಿತ್ತು.

ಶರಣಾಗತಿಯ ಬಗ್ಗೆ ಅವರ ಅದ್ಭುತ ಹಾಡೊಂದಿದೆ ಎಂದಾಗ ಕನಕದಾಸ “ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ” ಎಂಬ ಕನಕರ ದೇವರ ನಾಮ ಹಾಡಿದ.

ಅಪ್ರಮೇಯ “ಕೊನೆಯ ಚರಣದಲ್ಲಿ ಪ್ರಾಣವನು ಪರರು ಬೇಡಿದರೆತ್ತಿ ಕೊಡಬಹುದು, ಮಾನಾಭಿಮಾನವ ತಗ್ಗಿಸಲು ಬಹುದು, ಪ್ರಾಣದಾಯಕನಾದ ಆದಿಕೇಶವರಾಯ ಜಾಣ ಶ್ರೀ ಕೃಷ್ಣ ನಿನ್ನಡಿಯ ಬಿಡಲಾಗದು ಎನ್ನುತ್ತಾರೆ. ಅಂದರೆ ಪ್ರಾಣವನ್ನು ಯಾರಾದರೂ ಕೇಳಿದರೆ ಅವರಿಗೆ ಕೊಟ್ಟುಬಿಡಬಹುದು” ಎಂದು ಹೇಳಿ ನಾಲ್ವರು ಶಿಷ್ಯರ ಮುಖಗಳನ್ನೂ ನೋಡಿದರು. ಅವರಲ್ಲಿ ಒಬ್ಬ ಆಲೋಚಿಸುತ್ತಿದ್ದ. ʼಅಂದರೆ ಅಪ್ಪು ಗುರು ಪ್ರಾಣ ಕೊಡಲೂ ಸಿದ್ಧ ಆದರೆ ನಿನ್ನ ಅಡಿಯ ಬಿಡಲಾಗದು ಅಂದರೆ ನಿನ್ನ ಪಾದವ ಬಿಡಲಾಗದು ಅಂದರೆ ದೇವರ ವಿಗ್ರಹಗಳನ್ನು ಬಿಡಲಾಗದು ಎನ್ನುತ್ತಿದ್ದಾರೆ. ನಾನು ತಕ್ಷಣವೇ ನಾಯಕ್‌ ಗುಂಪಿಗೆ ಮುಂದಿನ ಕ್ರಮವು ತೀವ್ರವಾಗಿರಲಿ ಎಂದು ಹೇಳಬೇಕು” ಎಂದುಕೊಂಡ.

ಅಪ್ಪು ತನ್ನ ಮಾತನ್ನು ಮುಂದುವರೆಸುತ್ತಾ, “ತಲ್ಲಣಿಸದಿರು ಕಂಡ್ಯ ತಾಳು ಮನವೆ ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ ಎಂಬ ಕೀರ್ತನೆ ಇದೆ. ಬೆಟ್ಟದ ತುದಿಯಲ್ಲಿರುವ ಮರಕ್ಕೆ ಯಾರು ಕಟ್ಟೆ ಕಟ್ಟಿ ನೀರು ಹಾಕುತ್ತಾರೆ? ದೇವರು ನಮ್ಮನ್ನು ಹುಟ್ಟಿಸಿದ್ದಾನೆ. ಹುಟ್ಟಿಸಿದ ದೇವರು ಹುಲ್ಲು ಮೇಯಿಸುವನೇ ಎಂದು ನಿಮ್ಮ ಹಿರಿಯರು ಹೇಳಿರುವುದನ್ನು  ನೀವು ಕೇಳಿಯೇ ಇರುತ್ತೀರಿ. ಅವನು ಗಟ್ಟಿಯಾಗಿ ಸಲಹುತ್ತಾನೆ. ಕಾಡಲ್ಲಿರುವ ಪ್ರಾಣಿ ಪಕ್ಷಿಗಳು ತಮಗೆ ಯಾವಾಗ ಬೇಕೋ ಆಗ ಆಹಾರ ಹುಡುಕಿಕೊಳ್ಳುತ್ತವೆ. ಅದು ದೇವದೇವನ ಅನುಗ್ರಹ. ಹೀಗೆ ಪ್ರತಿ ಪ್ರಾಣಿ, ಪಕ್ಷಿಗಳಿಗೆ ಆಹಾರ ರಕ್ಷಣೆ ಕೊಡುವವನು ಆದಿಕೇಶವ. ಅದಕ್ಕೇ ನಾವು ನಮ್ಮ ಕೆಲಸವನ್ನು ನಿರ್ವಂಚನೆಯಿಂದ, ನಿಷ್ಠೆಯಿಂದ, ನಿಯತ್ತಿನಿಂದ ಮಾಡಬೇಕು. ಆದರೆ ಫಲವನ್ನು ಮಾತ್ರ ಆ ದೇವದೇವನಿಗೆ ಬಿಟ್ಟುಬಿಡಬೇಕು. ನಿಮಗೆಲ್ಲಾ ತಿಳಿದೇ ಇರುವ ಗೀತೆಯ ಶ್ಲೋಕ ಕರ್ಮಣ್ಯೇವಾಧಿಕಾರಸ್ತೆ…” ಎಂದು ಮಾತು ಮುಗಿಸಿದ.

ಅನೇಕರು ಎದ್ದು ನಿಂತು ಅನುಮಾನಗಳನ್ನು ಕೇಳಿದರು. ಗೊತ್ತಿರುವಷ್ಟು ಹೇಳಿದ ನಂತರ “ಈಗ ಸ್ವಾಮಿಗೆ ಮಂಗಳ ಹಾಡೋಣ” ಎಂದು ಕನಕದಾಸನ ಕಡೆ ನೋಡಿದಾಗ ಅವನೂ ತಲೆದೂಗಿದ. ಅಪ್ಪು ಮತ್ತು ಕನಕದಾಸ “ಅಂಬುಜದಳಾಕ್ಷಗೆ ಮಂಗಳ ಸರ್ವಜೀವರಕ್ಷಕಗೆ ಮಂಗಳ… ಪುರ ತ್ರಯ ವಧುಗಳ ಗೆಲಿದಗೆ ಮಂಗಳತುರಗ ವಾಹನನಿಗೆ ಜಯ ಮಂಗಳವರ ನೆಲೆಯಾದಿಕೇಶವನಿಗೆ ಮಂಗಳ ಪರಮ ಪತ್ನಿವ್ರತಗೆ ಶುಭ ಮಂಗಳ” ಎಂದು ಮುಗಿಸಿ ಎದ್ದು ನಿಂತು ಸಭೆಗೆ ನಮಸ್ಕರಿಸಿದ.

ಅನೇಕರ ಪ್ರಶ್ನೆಗಳಿಗೆ ಉತ್ತರ ನೀಡಿದ ನಂತರ ಅವನಿಗೆ ವಿಶಾಖಪಟ್ಟಣಂನಲ್ಲಿ ಪ್ರವಚನಕ್ಕೆ ಆಹ್ವಾನ ದೊರಕಿತು. ಅದನ್ನು ಒಪ್ಪಿ ಹೊಟೇಲ್ಲಿಗೆ ಹೊರಟ ಶಿಷ್ಯರೊಂದಿಗೆ.

ಅಪ್ಪುವಿನ ಮನದಲ್ಲಿ ಒಂದೇ ವಿಚಾರ ಓಡುತ್ತಿತ್ತು. ಈ ವಿಗ್ರಹಗಳ ದೆಸೆಯಿಂದ ತನ್ನ ಸಾವು ಬೇಗನೆ ಉಂಟಾಗುತ್ತದೆ ಎನಿಸುತ್ತಿದೆ.

ನಾನು ದುಷ್ಟರ ಕೈಗೆ ಸಿಲುಕಿ ಅಕಾಲದ ಅಪಮೃತ್ಯು ಹೊಂದುವೆನೇ?
(ಮುಂದುವರೆಯುವುದು)

ಯತಿರಾಜ್ ವೀರಾಂಬುಧಿ

Related post

Leave a Reply

Your email address will not be published. Required fields are marked *