ಪರಾಭವ ಭಾವನಾ – 10 ಯತಿರಾಜ್ ವೀರಾಂಬುಧಿ

ಹಿಂದಿನ ಸಂಚಿಕೆಯಿಂದ…
ಹೈದರಾಬಾದಿಗೆ ಪ್ರಯಾಣಿಸಿದ ಅಪ್ರಮೇಯ ಎಂದಿನಂತೆ ಪ್ರವಚನ ಕೊಡುತ್ತ ಅಲ್ಲಿ ನೆರೆದಿದ್ದ ಜನತೆಗೆ “ಅನ್ನಮಾಚಾರ್ಯ” ರ ಬಗ್ಗೆ ಹಾಗು ಕನಕದಾಸರ ವೆಂಕಟೇಶ್ವರ ಸ್ವಾಮಿಯ ಮೇಲಿನ ಭಕ್ತಿಯ ಬಗ್ಗೆ ಬಹಳ ಸುಂದರವಾಗಿ ನಿರೂಪಿಸಿದ. ಅಷ್ಟರಲ್ಲಿ ಅವನಿಗೆ ವಿಶಾಖಪಟ್ಟಣಂ ನಲ್ಲಿ ಪ್ರವಚನಕ್ಕೆ ಆಹ್ವಾನ ಬಂದಿತು. ಅಪ್ರಮೇಯನ ಮನದಲ್ಲಿ ಯಾಕೋ ಈ ವಿಗ್ರಹದ ದೆಸೆಯಿಂದ ಅಕಾಲ ಮೃತ್ಯುವಿಗೆ ಈಡಾಗಬಹುದು ಎನಿಸಿತು. ಮುಂದೆ…

-ಹತ್ತು-

ನಾಯಕ್‌ ತಲೆಯ ಮೇಲೆ ಕೈಹೊತ್ತು ಕುಳಿತಿದ್ದ. ಅವನ  ಮಾದಕ ವಸ್ತುಗಳಿದ್ದ ದೊಡ್ಡ ಕನ್‌ಸೈನ್‌ಮೆಂಟನ್ನು ನಾರ್ಕೋಟಿಕ್ಸ್‌ ಸ್ಕ್ವಾಡ್‌ನವರು ಇಂದು ಕಬ್ಜಾ ಮಾಡಿದ್ದರಿಂದ ಅವನ ಪರಿಸ್ಥಿತಿಯೇನೂ ಅಷ್ಟು ಚೆನ್ನಾಗಿರಲಿಲ್ಲ.

ಅವನು ಆ ಕನ್‌ಸೈನ್‌ಮೆಂಟಿಗಾಗಿ ಬಹಳ ದಿನಗಳಿಂದ ಕಾದಿದ್ದ.

ಅದನ್ನು ಭಾರತದ ವಿವಿಧ ನಗರಗಳಲ್ಲಿ ವಿದ್ಯಾರ್ಥಿಗಳಿಗೆ ಮಾರಿ ಕೋಟಿಗಟ್ಟಲೆ ಹಣ ಮಾಡಬೇಕೆಂದಿದ್ದ.

ದುರದೃಷ್ಟವಶಾತ್‌ ಅವನಿಂದ ಅನಗತ್ಯವಾಗಿ ಪೆಟ್ಟು ತಿಂದಿದ್ದ ಒಬ್ಬ ಚೇಲಾ ಹೆಡೆ ತುಳಿದ ನಾಗರಹಾವಿನಂತಾಗಿ ನಾರ್ಕೋಟಿಕ್ಸ್‌ ವಿಭಾಗಕ್ಕೆ ಕಳ್ಳತನದಲ್ಲಿ ಸುದ್ದಿ ನೀಡಿದ್ದ. ಅದರಿಂದ ನಾಯಕ್‌ನ ಆ ಕನ್‌ಸೈನ್‌ಮೆಂಟ್‌ ಸರ್ಕಾರದ ವಶವಾಯಿತು.  ಕೋಟಿಗಟ್ಟಲೆ ಹಣ ಬರುವುದೆಂಬ ಅವನ ಆಶೆಯ ಬೆಂಕಿಗೆ ಹಿಮದ ನೀರು ಸುರಿದಿದ್ದ ಅವನ ಚೇಲಾ.

ಉರಿ ಹೊತ್ತಿಕೊಂಡಿತ್ತು ಅವನಾರೆಂದು ತಿಳಿದುಬಂದಾಗ.

ಆದರೆ ಆ ಚೇಲಾ ಮೊದಲೇ ನಾರ್ಕೋಟಿಕ್ಸ್‌ ವಿಭಾಗದವರೊಂದಿಗೆ ತನ್ನ ಜೀವ ಉಳಿಯಲು ಎಲ್ಲ ಏರ್ಪಾಡುಗಳನ್ನು ಮಾಡಿಕೊಂಡೇ ಅವರಿಗೆ ಈ ಕನ್‌ಸೈನ್‌ಮೆಂಟ್‌ ಬಗ್ಗೆ ಸುಳಿವು ಕೊಟ್ಟಿದ್ದ. 

ಅವನು, ಅವನ ಹೆಂಡತಿ ಮತ್ತು ಒಂದು ಪುಟ್ಟ ಮಗು ಮೂವರೂ ಸಾಕ್ಷಿ ಭದ್ರತಾ ಕಾರ್ಯಕ್ರಮದಲ್ಲಿ ಬೇರಾವುದೋ ಊರಿನಲ್ಲಿ ನೆಲೆಸಿಬಿಟ್ಟರು.

ಅವರಿರುವ ಊರು ಹುಡುಕುವುದು ಸುಲಭವಲ್ಲ. ಏಕೆಂದರೆ ಅವರ ಹೆಸರು, ಐಡೆಂಟಿಟಿ ಮತ್ತು ಮುಖ ಎಲ್ಲವನ್ನೂ ಸೂಕ್ತವಾಗಿ ಬದಲಾಯಿಸಿಯೇ ಅವರನ್ನು ಕಳಿಸಿರುತ್ತಾರೆ.

ಈಗ ನಾಯಕ್‌ಗೆ ಪೀಕಲಾಟಕ್ಕೆ ಬಂದಿದ್ದ ವಿಷಯ ಆ ಕನ್‌ಸೈನ್‌ಮೆಂಟ್‌ ಬಂದಿದ್ದು ದಕ್ಷಿಣ ಅಮೆರಿಕಾದ ಒಂದು ದೇಶದ ಒಂದು ಕಾರ್ಟೆಲ್‌ (ಡ್ರಗ್‌ ಮಾರುವ ನಿಯಂತ್ರಣ ಕೂಟ)ದಿಂದ. ಆ ಕಾರ್ಟೆಲ್‌ನ ಮುಖ್ಯಸ್ಥನಿಗೆ ಮಹಾಕ್ರೂರಿ ಎಂದೇ ಹೆಸರು.

ಆಲ್ಬೆರ್ತೋ ಗಾರ್ಸಿಯಾ ಎಂಬ ಹೆಸರಿನ ಅವನು ಬಹಳ ಜನರನ್ನು ನಿರ್ದಾಕ್ಷಿಣ್ಯವಾಗಿ ಕೊಲೆ ಮಾಡಿದ್ದ. ಅವನು ಯಾರಿಗೂ ತಿಳಿಯದಂತೆ ಮಾದಕವಸ್ತುಗಳ ತಯಾರಿಕೆ ಮಾಡುವ ಜನರ ಬಗ್ಗೆಯೂ ಅವನಿಗೆ ದಯೆ ದಾಕ್ಷಿಣ್ಯಗಳಿರಲಿಲ್ಲ.

ಪ್ರತಿ ಸಲ  ಆಲ್ಬೆರ್ತೋ ಗಾರ್ಸಿಯಾ ಎಂದು ಹಣವನ್ನು ಕೇಳುವನೋ ಆ ದಿನ ಕಳಿಸಿಬಿಡುತ್ತಿದ್ದ.

ಅವನು ಆಲ್ಬೆರ್ತೋ ಗಾರ್ಸಿಯಾನ ಕ್ರೌರ್ಯದ ಬಗ್ಗೆ ಕೇಳಿದ್ದ. ಆದರೆ ತನ್ನ ವ್ಯವಹಾರದಲ್ಲಿ ಎಂದಿಗೂ ತಡ ಇಲ್ಲದೇ ಇರುತ್ತಿದ್ದುದರಿಂದ ಎಲ್ಲವೂ ಸುಗಮವಾಗಿ ಸಾಗಿತ್ತು.

ಆದರೆ ಈ ಸಲ ಈ ಕನ್‌ಸೈನ್‌ಮೆಂಟ್‌ ಸೀಝ್‌ ಆದದ್ದು ಅವನಿಗೆ ಪೀಕಲಾಟಕ್ಕೆ ತಂದಿತ್ತು. ಒಂದು ವಾರದ ನಂತರ ಆಲ್ಬೆರ್ತೋ ಗಾರ್ಸಿಯಾನಿಂದ ಒಂದು ವೀಡಿಯೋ ಕ್ಲಿಪ್ಪಿಂಗ್‌ ಬಂದಿತ್ತು ನಾಯಕ್‌ಗೆ ಅವನ ವಾಟ್ಸ್ಯಾಪ್‌ನಲ್ಲಿ.

ಅದನ್ನು ನೋಡುತ್ತಿದ್ದಂತೆ ನಾಯಕ್‌ಗೆ ಮೈಯೆಲ್ಲಾ ಬೆವರಲಾರಂಭಿಸಿತು.

ಕುರ್ಚಿಗೆ ಕಟ್ಟಿಹಾಕಲ್ಪಟ್ಟ ಯುವಕನೊಬ್ಬನ ಚೀರಾಟ ಮೊದಲು ಕೇಳಿಸಿತ್ತು. ನಂತರ ಅವನ ಬಾಯಿಗೆ ಬಟ್ಟೆಯೊಂದನ್ನು ತುರುಕಿದ್ದರು. ಅವನೆದುರಿಗೆ ಆಲ್ಬೆರ್ತೋ ಗಾರ್ಸಿಯಾ ತಾನೇ ಒಂದು ಹರಿತವಾದ ಉದ್ದನೆಯ ಕತ್ತಿ ತಂದ. ಅವನ ಚೇಲಾ ಒಬ್ಬ ಆ ಬಂಧಿಸಲ್ಪಟ್ಟ ಯುವಕನ ಕೈಗಳೆರಡನ್ನೂ ಬಿಡಿಸಿ ಮುಂಗೈ ಮೇಲೆ ಬರುವಂತೆ ಯುವಕನ ಮುಂದಿದ್ದ ಟೇಬಲ್‌ ಮೇಲೆ ಇರಿಸಿದ.

ಅಷ್ಟೇ!

ಒಂದಲ್ಲ ಎರಡಲ್ಲ, ಆ ಬಂಧಿಸಲ್ಪಟ್ಟ ಯುವಕನ ಇಡೀ ಹತ್ತು ಬೆರಳುಗಳನ್ನು ಬೆಂಡೆಕಾಯಿ ಕತ್ತರಿಸುವಂತೆ ಕತ್ತರಿಸಿಬಿಟ್ಟ ಆಲ್ಬೆರ್ತೋ ಗಾರ್ಸಿಯಾ. ಆ ಯುವಕನ ಪ್ರಾಣಾಂತಿಕ ಕೂಗು ಅವನ ಬಾಯಿಗೆ ತುರುಕಲ್ಪಟ್ಟ ಬಟ್ಟೆಯ ಹಿಂದೆಯೇ ಮಾಯವಾಗಿತ್ತು. ಆದರೆ ಅವನ ಕಣ್ಣುಗಳಲ್ಲಿನ ಭಯವನ್ನು ನಾಯಕ್‌ ಮರೆಯದಾದ.

ನಂತರ ಆಲ್ಬೆರ್ತೋ ಗಾರ್ಸಿಯಾ ಕ್ಯಾಮೆರಾ ಕಡೆ ತಿರುಗಿ, “ನಾಯಕ್‌, ನಿನ್ನ ಕೈಗಳು ಭದ್ರವಾಗಿ ಉಳಿಯಬೇಕಾದರೆ ನನ್ನ ಹಣ ಬೇಗ ಕಳಿಸು. ಇಲ್ಲವೇ ಕನ್‌ಸೈನ್‌ಮೆಂಟ್‌ ವಾಪಸ್‌ ಮಾಡು” ಎಂದು ಹೇಳಿದ. ವೀಡಿಯೋ ಆಫ್‌ ಆಗಿತ್ತು.

ನಾಯಕ್‌ ಕೂಡ ಕ್ರೂರಿಯೇ. ಆದರೆ ಅವನ ಕ್ರೌರ್ಯದ ಮುಂದೆ ಇವನದು ಏನೇನೂ ಇಲ್ಲವೆನ್ನಬಹುದು.

ಬಹಳ ಹೊತ್ತು ಆಲೋಚಿಸಿದ ನಾಯಕ್.‌ ನಂತರ ಒಂದು ನಿರ್ಧಾರಕ್ಕೆ ಬಂದ.

ನಂತರ ತನ್ನ ಯೂರೋಪ್‌ನ ಒಬ್ಬ ಕಾಂಟ್ಯಾಕ್ಟ್‌ಗೆ ಫೋನ್‌ ಮಾಡಿದ.

ಅವನು ಫಿಲಿಪ್‌ ಸ್ಟೋನ್‌ಬ್ರಿಡ್ಜ್ ಎಂಬ ವಿಗ್ರಹಗಳ ಕಳ್ಳಮಾಲನ್ನು ಯೂರೋಪಿನ ಅನೇಕ ದೇಶಗಳ ಕಲಾಪ್ರೇಮಿಗಳಿಗೆ ಮಾರುವವನು.‌

“ಹಲೋ ಫಿಲಿಪ್, ನಾಯಕ್‌ ದಿಸ್‌ ಸೈಡ್” ಎಂದ ನಾಯಕ್.‌

“ಹೇ, ಲಾಂಗ್‌ ಟೈಂ ನೋ ಸೀ? ಏನು ಸಮಾಚಾರ? ನೀನು ವಿಗ್ರಹಗಳ ಬಿಜಿನೆಸ್‌ ಬಿಟ್ಟು ಇನ್ನೂ ಹೆಚ್ಚು ಹಣ ಕೊಡೋ ಬಿಜಿನೆಸ್‌ಗೆ ಹೋದೆ ಅಂತ ತಿಳೀತು” ಎಂದ ಎರಡನೇ ಬಿಜಿನೆಸ್‌ ಎನ್ನುವ ಪದವನ್ನು ಒತ್ತಿ ಹೇಳಿ.

ಫೋನುಗಳಲ್ಲಿ ಅನೇಕ ಸಲ ರಹಸ್ಯ ಮಾತಾಡುವುದು ಅಪಾಯಕಾರಿ. ಏಕೆಂದರೆ ಪ್ರಪಂಚದ ಅನೇಕ ಗುಪ್ತಚರ ವಿಭಾಗಗಳು ಉದಾಹರಣೆಗೆ ಎಂಐಸಿಕ್ಸ್‌ (ಬ್ರಿಟಿಷ್)‌, ಸಿ.ಐ.ಏ (ಅಮೆರಿಕಾ) ಮತ್ತು ಇಂಟರ್‌ಪೋಲ್‌ (ಇದು ಅಂತಾರಾಷ್ಟ್ರೀಯ ಗುಪ್ತಚರ ವಿಭಾಗ) ಇವರುಗಳ ಕೆಲವು ಆಪರೇಟರುಗಳ ಕೆಲಸವೇ ʼಇಂಟೆಲ್‌ʼ ಸಂಪಾದನೆ. ಇಲ್ಲಿ ಇಂಟೆಲ್‌ ಅಂದರೆ ಗುಟ್ಟಿನ ಸುದ್ದಿ ಎಂದರ್ಥ.

“ಏನೋ… ನನ್ನ ಉದ್ಯೋಗಿಗಳ ಸಂಖ್ಯೆ ಹೆಚ್ಚಾಯಿತು. ನಾನು ಹೆಚ್ಚು ಹಣ ಬರುವ ಬಿಜಿನೆಸ್‌ ಮಾಡಬೇಕಾಯಿತು” ಎಂದವನು “ಪ್ರಸ್ತುತ ನಿನಗೊಂದು ವಿಷಯ ಹೇಳಬೇಕು. ಅದೇನೆಂದರೆ ನನ್ನ ಬಳಿ ಮೂರು ಹಿಂದೂ ದೇವರ ವಿಗ್ರಹ…” ಎಂದು ನಾಯಕ್‌ ಹೇಳಿದೊಡನೆ ಅವನ ಮಾತನ್ನು ಕಟ್‌ ಮಾಡಿದ್ದ ಫಿಲಿಪ್‌ ಸ್ಟೋನ್‌ಬ್ರಿಡ್ಜ್.‌

“ಹೋಲ್ಡಾನ್‌ ನಾಯಕ್.‌ ಈಗೆಲ್ಲಾ ಇಂತಹ ಓಪನ್‌ ಲೈನಿನಲ್ಲಿ ಈ ತರಹದ ಮಾತು ಬೇಡ. ನಾನೊಂದು ಸೆಕ್ಯೂರ್‌ ಲೈನಿನಿಂದ ಫೋನ್‌ ಮಾಡ್ತೀನಿ” ಎಂದು ಹೇಳಿ ಫೋನಿಟ್ಟುಬಿಟ್ಟ ಫಿಲಿಪ್.‌

ಸೆಕ್ಯೂರ್‌ ಲೈನ್‌ ಎಂದರೆ ಆ ಕರೆ ಎಲ್ಲಿಂದ ಉತ್ಪನ್ನವಾಗುತ್ತದೆಂದು ಪೊಲೀಸರು ಹುಡುಕಿದರೂ ಸಿಗುವುದಿಲ್ಲ. ಅದು ಒಂದು ಕ್ಷಣ ಪೊಲೀಸರಿಗೆ ಇದು ಚೀನಾದ ಬೀಜಿಂಗ್‌ನಿಂದ ಎಂದು ತೋರಿಸಿದರೆ ಮುಂದಿನ ಕ್ಷಣ ಭಾರತದ ಡೆಲ್ಲಿ ಎಂದು ತೋರಿಸುತ್ತದೆ. ನಂತರ ಸ್ಪೇನ್‌ ದೇಶದ ಮ್ಯಾಡ್ರಿಡ್‌, ಪೋರ್ಚುಗಲ್‌ನ ಲಿಸ್ಬನ್…‌ ಹೀಗೆ ಬದಲಾಗುತ್ತಾ ಹೋದಾಗ ಪೊಲೀಸರು ತಬ್ಬಿಬ್ಬಾಗುತ್ತಾರೆ. ಆ ಕರೆಯನ್ನು ಅವರು ಟ್ರೇಸ್‌ ಮಾಡುವ ಮೊದಲು ಅದು ಡಿಸ್ಕನೆಕ್ಟ್‌ ಆಗಿಬಿಟ್ಟಿರುತ್ತದೆ. ಕಳ್ಳರು ತಮ್ಮ ಬೇಳೆಕಾಳನ್ನು ಅಷ್ಟರಲ್ಲಿ ಬೇಯಿಸಿಕೊಳ್ಳುತ್ತಾರೆ.

ಸೆಕ್ಯೂರ್‌ ಲೈನೊಂದರಿಂದ ನಾಯಕ್‌ಗೆ ಫಿಲಿಪ್‌ ಸ್ಟೋನ್‌ಬ್ರಿಡ್ಜ್‌ ಫೋನ್‌ ಮಾಡಿದ.

“ಏನು ವಿಷಯ? ಯಾವ ಇಂಡಿಯನ್‌ ಐಡಲ್ಸ್‌?” ಎಂದು ಕೇಳಿದ ಫಿಲಿಪ್.‌

ನಾಯಕ್‌ ತನಗೆ ತಿಳಿದ ವಿಷಯಗಳನ್ನು ತಿಳಿಸಿದ. “ಚಿನ್ನದ ರಾಮ, ಬೆಳ್ಳಿಯ ಕೃಷ್ಣ, ಸ್ಫಟಿಕ ಶಿಲೆಯ ನರಸಿಂಹ… ಈ ಮೂರೂ ಉತ್ತರ ಇಂಡಿಯಾಗೆ ಈಗ ಪ್ರಯಾಣಿಸುತ್ತಿವೆ. ನಡುವೆ ಎಲ್ಲಾದರೂ ಇಂಟರ್‌ಸೆಪ್ಟ್‌ ಮಾಡಿ ನಿನಗೆ ಕಳಿಸ್ತೇನೆ. ನನಗೆ ಹೆಚ್ಚು ಹಣ ಬೇಕು. ಬೇಗ ಹಣ ಬೇಕು” ಎಂದ.

ಅವನ ಧ್ವನಿಯಲ್ಲಿನ ಗಾಬರಿಯನ್ನು ಅರ್ಥ ಮಾಡಿಕೊಂಡ ಫಿಲಿಪ್.‌ ಕಳ್ಳನ ಹೆಜ್ಜೆ ಮತ್ತೊಬ್ಬ ಕಳ್ಳನಿಗೇ ತಾನೇ ಚೆನ್ನಾಗಿ ಗೊತ್ತಾಗೋದು!

“ಸರಿ, ಕಳಿಸು. ಏನು ನಿನ್ನ ಪ್ಲಾನ್?” ಎಂದು ಕೇಳಿದ‌ ಫಿಲಿಪ್‌ ಸ್ಟೋನ್‌ಬ್ರಿಡ್ಜ್.

“ಈಗ ನೀನೇನು ಮಾಡ್ತಿದ್ದೀ?” ಕೇಳಿದ ನಾಯಕ್.‌

“ಪ್ರಸ್ತುತ ಏನೂ ಮಾಡ್ತಿಲ್ಲ. ಯಾವ ಹೊಸ ಡೀಲ್‌ ಕೂಡ ಇಲ್ಲ. ಅಲ್ಲಿಗೇ ಬರಲಾ?” ಎಂದ ಫಿಲಿಪ್.‌

ನಾಯಕ್‌ನಿಗೆ ಹೇಳತೀರದಷ್ಟು ಸಂತಸವಾಗಿತ್ತು. ಇದಲ್ಲವೇ ರೊಟ್ಟಿ ಜಾರಿ ತುಪ್ಪದಲ್ಲಿ ಬೀಳೋದೆಂದರೆ!

“ಫಿಲಿಪ್! ಒಬ್ಬ ಖರೀದಿದಾರನನ್ನು ಹುಡುಕಿ ಅವನಿಗೆ ಹಣ ಸಿದ್ಧ ಮಾಡಲು ಹೇಳು. ನೀನು ಇಲ್ಲಿಗೆ ಬಾ. ನೀನು ವಿಗ್ರಹದ ಬಿಜಿನೆಸ್‌ ಮಾಡುವುದಷ್ಟೇ ಅಲ್ಲದೇ ಶಾರ್ಪ್‌ ಶೂಟರ್‌, ಸ್ನೈಪರ್‌ ಅಂತ ನನಗೆ ಗೊತ್ತಿದೆ. ಸಾಧ್ಯ ಆದರೆ ಆ ವಿಗ್ರಹಗಳನ್ನು ತಗೊಂಡು ಹೋಗ್ತಿರೋ ಸ್ವಾಮಿಯನ್ನು ದೂರದಿಂದಲೇ ಗುಂಡಿಟ್ಟು ಕೊಂದುಬಿಡು. ನಾವು ವಿಗ್ರಹಗಳನ್ನು ಎತ್ತಿಬಿಡೋಣ. ನಿನಗೆ ಹ್ಯಾಂಡೋವರ್‌ ಮಾಡ್ತೀನಿ. ನೀನು ನನಗೆ ಹಣ ಕೊಡು. ಈಗೆಲ್ಲಾ ಭೌತಿಕವಾಗಿ ಹಣ ಕೊಡಬೇಕಿಲ್ಲವಲ್ಲಾ! ಮನಿ ಟ್ರಾನ್ಸ್‌ಫರ್‌ ಮಾಡೋದು ಕೆಲವೇ ಸೆಕೆಂಡುಗಳಲ್ಲಿ ಆಗಿಬಿಡುತ್ತೆ” ಎಂದ.

ಅವನ ಮನಸ್ಸಿನಲ್ಲಿ ಆಲ್ಬೆರ್ತೋ ಗಾರ್ಸಿಯಾ ಬಗೆಗಿನ ಚಿಂತೆ ಇನ್ನೂ ಧಗಧಗನೆ ಉರಿಯುತ್ತಿತ್ತು.

ಅವನ ಕ್ರೌರ್ಯ ನಾಯಕ್‌ನ ಶರೀರ ಕಂಪಿಸುವಂತೆ ಮಾಡಿತ್ತು.

ಎಲ್ಲವೂ ಸರಿಯಿದ್ದರೆ ಗಡಿಯಾರದಂತೆ ನಡೆಯುತ್ತಿತ್ತು. ಆದರೆ ನನ್ನ ಗ್ರಹಚಾರ. ನಾನು ನನ್ನ ಚೇಲಾನನ್ನು ಹೊಡೆದು ಅವಮಾನಿಸುವುದೆಂದರೇನು? ಅವನು ಹೋಗಿ ನಾರ್ಕೋಟಿಕ್ ಸ್ಕ್ವಾಡ್‌ಗೆ ವಿಷಯವನ್ನು ಅರುಹುವುದೆಂದರೇನು? ಅವರು ಕನ್‌ಸೈನ್‌ಮೆಂಟ್‌ ಹಿಡಿದುಹಾಕುವುದೆಂದರೇನು? ಆಲ್ಬೆರ್ತೋ ಗಾರ್ಸಿಯಾ ತನ್ನನ್ನು ಹೆದರಿಸುವುದೆಂದರೇನು?

ಛೇ! ತಲೆ ಒದರಿಕೊಂಡ ನಾಯಕ್.‌

ಇಷ್ಟು ದಿನ ಅವನ ತಲೆಗೂದಲನ್ನೂ ಯಾರೂ ಅಲುಗಾಡಿಸಿರಲಿಲ್ಲ. ಈಗ ನೋಡಿದರೆ ಜೀವಭಯ, ಅವಸರದ ಕಳ್ಳತನ, ಬಹುಶಃ ಕೊಲೆ ಕೂಡ ಮಾಡಬೇಕಾದ ಅವಸ್ಥೆ ತನಗೆ ಬಂದೊದಗಿದೆ.

ಬಟರ್‌ಫ್ಲೈ ಎಫೆಕ್ಟ್‌ ಎಂದರೆ ಇದೇ ಏನೋ!

ಎಲ್ಲೋ ಒಂದು ಚಿಕ್ಕ ಬದಲಾವಣೆ, ಒಂದು ಚಿಕ್ಕ ಚಲನೆ. ಅದರಿಂದ ಇಡೀ ಸಾಮ್ರಾಜ್ಯವೇ ಅಲುಗಾಡುವಂತಹ ಪರಿಸ್ಥಿತಿ… ಇಲ್ಲಿ ಸಾಮ್ರಾಜ್ಯವಲ್ಲ, ತನ್ನ ಅಸ್ತಿತ್ವವೇ ನಾಶವಾಗಿಬಿಡುವಂತಹ ದುರವಸ್ಥೆ!

ದೂರದಲ್ಲೆಲ್ಲೋ ಒಂದು ಚಿಟ್ಟೆ ಕೆಲವು ವಾರಗಳ ಮೊದಲು ತನ್ನ ರೆಕ್ಕೆಗಳನ್ನು ಬಡಿಯುವುದರಿಂದ ಮುಂದೆಂದೋ ಬೇರೆಲ್ಲೋ ಒಂದು ಚಂಡಮಾರುತ ಉಂಟಾಗುವ ಹಾಗೆ.

ನಾಯಕ್‌ ಅನಕ್ಷರಸ್ಥನಲ್ಲ. ಚೆನ್ನಾಗಿಯೇ ಓದಿಕೊಂಡಿರುವವನು. ಅವನ ಬುದ್ಧಿಮತ್ತೆಯನ್ನು ಕಾನೂನಿಗೆ ವಿರುದ್ಧವಾದ ಚಟುವಟಿಕೆಗಳಿಗೆ ಬಳಸಿ ಬೇಗನೆ ಹಣ ಸಂಪಾದಿಸಲು ಉಪಯೋಗಿಸುತ್ತಿದ್ದ.

ಅವನಿಗೆ ಬಟರ್‌ಫ್ಲೈ ಎಫೆಕ್ಟ್‌ ಬಗೆಗಿನ ಒಂದು ಚಾರಿತ್ರಿಕ ಘಟನೆ ನೆನಪಾಯಿತು.

ಬಹಳ ಕ್ಷುಲ್ಲಕ ಘಟನೆಯೊಂದು ಹೊಸ ದೇಶವೊಂದನ್ನು ಸೃಷ್ಟಿಸಿತು. ಹನ್ನೆರಡು ದಶಲಕ್ಷ ಜನರು ದೇಶದಿಂದ ದೇಶಕ್ಕೆ ಓಡಿ ಪರದಾಡಿದರು. ಇಪ್ಪತ್ತು ಲಕ್ಷ ಜನ ತಮ್ಮ ಜೀವ ಕಳೆದುಕೊಂಡರು. ಎರಡು ದೇಶಗಳ ನಡುವೆ ಎಂದೂ ಆರದ ದ್ವೇಷದ ಕಿಡಿಯೊಂದು ಸದಾ ಹೊಗೆಯಾಡಲಾರಂಭಿಸಿತು.

ಮಹಮ್ಮದ್‌ ಆಲಿ ಜಿನ್ನಾ ಎಂಬ ಪಾಕಿಸ್ಥಾನದ ಜನಕನ ಬಗ್ಗೆ ಈ ಬಟರ್‌ಫ್ಲೈ ಎಫೆಕ್ಟ್‌ ಬಹಳ ಕುತೂಹಲಕಾರಿಯಾದದ್ದು.

ಜಿನ್ನಾನ ತಾಯ ಪ್ರೇಮ್‌ಜೀಭಾಯ್‌ ಮೇಘ್‌ಜೀ ಠಕ್ಕರ್‌ ಗುಜರಾತಿನ ಕಾಥೇವಾಡದ ಮೀನಿನ ವ್ಯಾಪಾರಿ. ಅವನು ಬ್ರಾಹ್ಮಣನಾಗಿ ಮೀನು ಮಾರುವನೆಂದು ಅವನಿಗೆ ಬಹಿಷ್ಕಾರ ಹಾಕಿದರು ಅವನ ಜಾತಿಯ ಜನ. ಅವನು ಆ ವ್ಯಾಪಾರ ಬಿಟ್ಟರೂ ಅವನನ್ನು ಮತ್ತೆ ಸೇರಿಸಿಕೊಳ್ಳಲಿಲ್ಲ ಆ ಜನ. ಅವನ ಮಗ ಪುಂಜಾಲಾಲ್‌ ಠಕ್ಕರ್‌ (ಜಿನ್ನಾನ ತಂದೆ) ಬಹಳವೇ ಸಿಟ್ಟು, ಅವಮಾನಗಳಿಂದ ಮುಸ್ಲಿಮ್ಮನಾಗಿ ಪರಿವರ್ತನೆಗೊಂಡ.

ಇದೇ ಮೊದಲ ಬಟರ್‌ಫ್ಲೈ ಎಫೆಕ್ಟ್.‌ ಜಿನ್ನಾನ ತಾತನನ್ನು ಮತ್ತೆ ಅವನ ಜಾತಿಯ ಗುಂಪು ಹತ್ತಿರ ಸೇರಿಸಿಕೊಂಡಿದ್ದರೆ ಇದು ನಡೆಯುತ್ತಿರಲಿಲ್ಲ.

ಜಿನ್ನಾನ ಹೆಂಡತಿ ೧೯೨೯ರಲ್ಲಿ ಖಾಯಿಲೆ ಬಂದು ಸತ್ತಾಗ ಜಿನ್ನಾ ದುಃಖದಿಂದ ಲಂಡನ್‌ಗೆ ವಲಸೆ ಹೋದ. ತನ್ನ ಪಾಡಿಗೆ ತಾನು ಜೀವನ ನಡೆಸುತ್ತಿದ್ದ. ಜವಾಹರ್‌ಲಾಲ್‌ ನೆಹರು ಯಾವುದೋ ಒಂದು ಖಾಸಗಿ ಪಾರ್ಟಿಯಲ್ಲಿ ʼಜಿನ್ನಾ ಕತೆ ಮುಗಿಯಿತು. ಅವನು ಫಿನಿಷ್ಡ್‌ʼ ಎಂದು ಒಂದು ಮಾತು ಹೇಳಿದ್ದು ಜಿನ್ನಾನನ್ನು ಕೆರಳಿಸಿತು. ನೆಹರೂಗೆ ತಾನೇನೆಂದು ತೋರಿಸಲು ಮರಳಿ ಭಾರತಕ್ಕೆ ಬಂದ. ಆಗಲೇ ಅವನು ಮುಸ್ಲಿಂ ಲೀಗ್‌ಗೆ ಮತ್ತೆ ಜೀವ ತುಂಬಿದ್ದು. ಆಗ ಅದು ಭಾರತದ ಎರಡನೇ ಅತಿ ಶಕ್ತಿಶಾಲಿ ಪಕ್ಷವಾಗಿ ಬದಲಾಗಿದ್ದು.

ಇದು ಎರಡನೇ ಬಟರ್‌ಫ್ಲೈ ಎಫೆಕ್ಟ್.‌ ನೆಹರೂ ಬಾಯಿ ಮುಚ್ಚಿಕೊಂಡು ಇದ್ದಿದ್ದರೆ, ಜಿನ್ನಾ ಲಂಡನ್‌ನಲ್ಲಿಯೇ ಹಾಯಾಗಿ ಶೇಷಜೀವನ ಕಳೆದಿರುತ್ತಿದ್ದ. ಭಾರತ ಇಬ್ಭಾಗವಾಗುತ್ತಿರಲಿಲ್ಲ.

೧೯೪೬ರಲ್ಲಿ ಜಿನ್ನಾನ ವೈದ್ಯ ಜಿನ್ನಾನಿಗೆ ಕ್ಷಯರೋಗವೆಂದು ಕಂಡುಕೊಂಡ. ಅದಕ್ಕೇ ಜಿನ್ನಾ ಮೌಂಟ್‌ಬ್ಯಾಟನ್ನಿಗೆ ಬೇಗನೆ ಇಬ್ಭಾಗ ಮಾಡೆಂದು ಅವಸರಿಸಿದ. ತಾನು ಇನ್ನೆರಡು ವರ್ಷಗಳಿಗೆ ಸಾಯುವೆನೆಂದು ಅರಿವಾಗಿತ್ತು.

ಅವನನ್ನು ಪರೀಕ್ಷಿಸಿದ ಡಾ.ಪಟೇಲ್‌ ಈ ವಿಷಯವನ್ನು ಗಾಂಧೀಜಿಗೋ ಮೌಂಟ್‌ಬ್ಯಾಟನ್ನಿಗೋ ಹೇಳಿದ್ದರೆ ಆಗ ಜಿನ್ನಾ ಸಾಯುವವರೆಗೂ ದೇಶ ವಿಭಜನೆ ಮಾಡಿರದಿದ್ದರೆ, ಆಮೇಲೆ ಕೂಡ ಇಬ್ಭಾಗ ಆಗುತ್ತಿರಲಿಲ್ಲ.

ಜಿನ್ನಾನ ರೋಗವನ್ನು ಅವನ ವೈದ್ಯ ಮುಚ್ಚಿಟ್ಟಿದ್ದು ಮೂರನೇ ಬಟರ್‌ಫ್ಲೈ ಎಫೆಕ್ಟ್.‌

(ಇದು ಡೊಮಿನಕ್‌ ಲೇಪಿಯರ್‌ ಮತ್ತು ಲ್ಯಾರಿ ಕಾಲಿನ್ಸ್‌ನ ಫ್ರೀಡಂ ಅಟ್‌ ಮಿಡ್‌ನೈಟ್‌  ಪುಸ್ತಕದ ಭಾಗ).

ನಾವು ಜೀವನದಲ್ಲಿ ಮಾಡುವ ಕೆಲವು ಕೆಲಸಗಳು ನಿರಂತರವಾಗಿ ಪರಿಣಾಮ ಬೀರುತ್ತಲೇ ಇರುತ್ತವೆ ಎಂಬುದಕ್ಕೆ ಈ ಬಟರ್‌ಫ್ಲೈ ಎಫೆಕ್ಟ್‌ ಸಾಕ್ಷಿ.

ಈಗ ನಾಯಕ್‌ ತನ್ನ ಚೇಲಾನನ್ನು ಅವಮಾನಿಸಿದನೆಂಬ ಬಟರ್‌ಫ್ಲೈ ಎಫೆಕ್ಟ್‌ ಅಪ್ರಮೇಯನ ಜೀವಕ್ಕೆ ಅಪಾಯ ತರಲು ಸಿದ್ಧವಾಗಿತ್ತು. ವಿಗ್ರಹಗಳ ಕಳ್ಳತನ, ಅವನ ಕೊಲೆ ಎರಡೂ ಆಗಲು ಯೋಜನೆಗಳು ಸಿದ್ಧವಾದವು.

ಮುಂದುವರೆಯುವುದು…

ಯತಿರಾಜ್ ವೀರಾಂಬುಧಿ

Related post

Leave a Reply

Your email address will not be published. Required fields are marked *