ಪರಾಭವ ಭಾವನಾ – 11 ಯತಿರಾಜ್ ವೀರಾಂಬುಧಿ

ಹಿಂದಿನ ಸಂಚಿಕೆಯಿಂದ…
ನಾಯಕ್ ತನ್ನ ಮಾದಕ ವಸ್ತುಗಳ ಸಾಗಾಣಿಕೆಯನ್ನು ನೊರ್ಕೋಟಿಕ್ ವಿಭಾಗದವರು ಪತ್ತೆ ಹಚ್ಚಿ ಸೀಜ್ ಮಾಡಿದ್ದರಿಂದ ಯೋಚನೆ ಹತ್ತಿ ಕ್ರೂರಿ ಆಲ್ಬೆರ್ತೋ ಗಾರ್ಸಿಯಾ ಗೆ ಏನು ಹೇಳುವುದೆಂದು ತಿಳಿಯದಾಯಿತು. ಅಷ್ಟರಲ್ಲಿ ವಿಗ್ರಹ ಕಳ್ಳ ಸಾಗಣೆದಾರ ಫಿಲಿಪ್ ಸ್ಟೋನ್ಬ್ರಿಡ್ಜ್ ಗೆ ಕರೆ ಮಾಡಿ ಅಪ್ರಮೇಯನ ಬಳಿ ಇರುವ ಮೂರು ವಿಗ್ರಹಗಳ ಬಗ್ಗೆ ಹಾಗು ಅದು ಉತ್ತರ ಭಾರತದ ಕಡೆಗೆ ಸಾಗುತ್ತಿರುವ ವಿಷಯವನ್ನು ಹೇಳಿ ಅದನ್ನು ಲಪಟಾಯಿಸಿ ಕಳಿಸುತ್ತೇನೆಂದು ಹೇಳುತ್ತಾನೆ. ಮುಂದೆ…

-ಹನ್ನೊಂದು-

ಬೆಳಗ್ಗೆ ಐದೂವರೆಗೇ ಹೊಟೇಲ್‌ ಚೆಕ್‌ ಔಟ್‌ ಮಾಡಿ ಹೊರಟರು ಅಪ್ರಮೇಯ ಮತ್ತು ಶಿಷ್ಯರು. ನಾಗ ಗಾಂಧಾರಿ ತನಗೆ ಹೈದರಾಬಾದ್‌ನಲ್ಲಿ ಕೆಲಸವಿದೆ ಎಂದುಬಿಟ್ಟಳು ಅವಳು ಬರುವಳೇ ಎಂದು ಅಪ್ರಮೇಯ ಕೇಳಿದಾಗ.

“ಮತ್ತೆ ಯಾವಾಗ ನಿನ್ನ ಭೇಟಿ?” ಎಂದ ಬಹಳವೇ ಸಾಮಾನ್ಯವಾಗಿ. ಅದರ ಹಿಂದೆ ಬೇರಾವ ವಿಶೇಷ ಅರ್ಥವೂ ಇರಲಿಲ್ಲ. ಆದರೆ ನಾಗ ಗಾಂಧಾರಿ ಅದನ್ನು ತಪ್ಪರ್ಥ ಮಾಡಿಕೊಂಡಿದ್ದಳು.

“ಯಾಕೆ ಭೇಟಿ?” ಎಂದು ಹೇಳಿ ಹತ್ತಿರಕ್ಕೆ ಬಂದು ಗುಟ್ಟು ಹೇಳುವಂತೆ, “ಸಂನ್ಯಾಸ ಬಿಟ್ಟು ನನ್ನ ಜೊತೆ ಸಂಸಾರ ಮಾಡ್ತೀಯಾ?” ಎಂದಳು.

ಅಪ್ರಮೇಯ ಅದಕ್ಕೆ ಹೇಗೆ ಪ್ರತಿಕ್ರಿಯಿಸಬೇಕೋ ಅರ್ಥವಾಗದೇ ದೂರಕ್ಕೆ ಸರಿದ.

ಅವನಿಗೆ ಅವಳ ಮೇಲೆ ಕೋಪ ಬರಲಿಲ್ಲ. ಅವನು ಈ ಹದಿನೆಂಟು ವರ್ಷಗಳಲ್ಲಿ ತನ್ನೆಲ್ಲಾ ಅರಿಷಡ್ವರ್ಗಗಳ ಮೇಲೆ ಕಡಿವಾಣ ಬೆಳೆಸಿಕೊಂಡಿದ್ದ.

ತನ್ನ ತಪ್ಪು ಅರ್ಥವಾಗಿ, “ಕ್ಷಮಿಸು ಅಪ್ಪು. ನಾನು ಮೂರ್ನಾಲ್ಕು ದಿನಗಳ ನಂತರ ಮತ್ತೆ ನಿಮ್ಮ ಜೊತೆ ಸೇರಿಕೊಳ್ತೇನೆ” ಎಂದಳು ನಾಗ ಗಾಂಧಾರಿ.

ಅಪ್ರಮೇಯ ಮುಗುಳ್ನಕ್ಕ.

“ಆಯಿತು. ಆರೋಗ್ಯ ನೋಡಿಕೋ. ಮನಸ್ಸಿಗೆ ಆದಷ್ಟೂ ಶಾಂತಿ ತಂದುಕೋ. ಓಂ ನಮೋ ನಾರಾಯಣಾಯ” ಎಂದು ಅವಳ ತಲೆಯ ಮೇಲೆ ಒಮ್ಮೆ ತನ್ನ ಬಲ ಅಂಗೈಯಿಟ್ಟು ಕಣ್ಮುಚ್ಚಿ ಪ್ರಾರ್ಥಿಸಿ ಅಲ್ಲಿಂದ ಹೊರಟುಬಿಟ್ಟ.

ಶಿಷ್ಯನೊಬ್ಬ ಗೊಂದಲದಲ್ಲಿ ಬಿದ್ದ.

ಹೇಗಾದರೂ ನಾಗ ಗಾಂಧಾರಿಯ ಸಹಾಯದಿಂದ ವಿಗ್ರಹಗಳನ್ನು ಅಪಹರಿಸುವ ಯೋಜನೆ ಹಾಕಿದರೆ ಈ ಹೆಣ್ಣು ಇಲ್ಲೇ ಉಳಿದಳೇಕೆ?

ಅವನಿಗೆ ಅಂದು ಬಂದ ನಾಯಕ್‌ನ ಚೇಲಾನ ಕರೆ ಸ್ವಲ್ಪ ಗಂಭೀರವಾದದ್ದು.

“ಗುರೂ, ಬಾಸ್‌ ಬಹಳ ಗರಮ್‌ ಆಗಿದ್ದಾರೆ. ಬೇಗ ಕೆಲಸ ಆಗದಿದ್ದರೆ ಅವರೇ ಫೀಲ್ಡಿಗ್‌ ಇಳೀತಾರಂತೆ” ಎಂದಿದ್ದ.

“ಬೇಡ ಬೇಡ!” ಎಂದ ಅವಸರದಿಂದ ಶಿಷ್ಯ.

ಅವರಾರಾದರೂ ಬಂದರೆ ಅಪ್ಪು ಗುರುಗಳ ಪ್ರಾಣಕ್ಕೆ ಸಂಚಕಾರ ಎಂಬುದು ಅವನಿಗೆ ವೇದ್ಯವಾಗಿತ್ತು. ಅದಕ್ಕೇ ಅವನು ಈ ಕೆಲಸವನ್ನು ತಾನೇ ಸ್ವಲ್ಪ ಶೀಘ್ರವಾಗಿ ಮಾಡಬೇಕೆಂದು ನಿರ್ಧರಿಸಿದ.

ಈ ಅಪ್ಪು ಗುರುಗಳು ಕೇವಲ ಹೈದರಾಬಾದ್‌ ಅಂದಿದ್ದರು. ಈಗ ವೈಝಾಗ್‌ ಹೋಗುತ್ತಿದ್ದಾರೆ. ಅಲ್ಲಿಂದ ಮುಂದಕ್ಕೇನು ಮಾಡುವರೋ! ಏಕೆಂದರೆ ಜೋಷಿಮಠ ಬಹಳವೇ ದೂರವಿದೆ…

ಜನ್ಮಭೂಮಿ ಎಕ್ಸ್‌ಪ್ರೆಸ್‌ ಬೆಳಗ್ಗೆ ಏಳೂ ಹತ್ತಕ್ಕೆ ಹೊರಟಿತು. ಇದು ಛೇರ್‌ ಕಾರ್.‌ ಒಬ್ಬೊಬ್ಬರದೂ ಪ್ರತ್ಯೇಕ ಕುರ್ಚಿ. ಲಕ್ಷುರಿ ಬಸ್ಸಿನಂತೆ.

ಅಂದು ಸಂಜೆ ಏಳು ಗಂಟೆ ನಲವತ್ತು ನಿಮಿಷಕ್ಕೆ ಜನ್ಮಭೂಮಿ ಎಕ್ಸ್‌ಪ್ರೆಸ್‌ ವಿಶಾಖಾಪಟ್ಟಣ ಅಥವಾ ವೈಝಾಗ್‌ ತಲುಪಲಿತ್ತು.

ಅಪ್ಪುವಿನ ಖ್ಯಾತಿ ಸಾಕಷ್ಟು ಹೆಚ್ಚಿತ್ತು ಮದುರೈ, ಬೆಂಗಳೂರು ಮತ್ತು ಹೈದರಾಬಾದ್‌ ನಗರಗಳಲ್ಲಿನ ಪ್ರವಚನಗಳಿಂದ.

“ನಮಸ್ಕಾರ ಸ್ವಾಮೀ” ಎಂದಿದ್ದ ಒಬ್ಬ ಐವತ್ತರ ವಯಸ್ಕ.

“ನಮಸ್ಕಾರ” ಎಂದು ಮುಗುಳ್ನಕ್ಕ ಅಪ್ಪು.

“ತಾವು ಅನೇಕ ವಿಷಯಗಳ ಬಗ್ಗೆ ಮೂರು ಊರುಗಳಲ್ಲಿ ಪ್ರವಚನ ಮಾಡಿದಿರಂತೆ. ನನ್ನ ಕಸಿನ್‌ ಒಬ್ಬ ನಿಮ್ಮ ಪ್ರವಚನವನ್ನು ಮದುರೈ ಬೆಂಗಳೂರು ರೈಲಿನಲ್ಲಿ ಕೇಳಿದನಂತೆ. ಈಗ ವೈಝಾಗ್‌ನಲ್ಲಿ ನಿಮ್ಮ ಪ್ರವಚನ ಇದೆಯಾ?”

“ಹೌದು” ಎಂದು ಮತ್ತೆ ನಸುನಕ್ಕ ಅಪ್ರಮೇಯ.

“ಎಲ್ಲಿ ಸ್ವಾಮಿ?” ಎಂದು ವಿಚಾರಿಸಿಕೊಂಡು ನಂತರ “ನಾನು ನಂದ್ಯಾಲದ ಬಳಿಯ ಅಹೋಬಿಲದವನು. ಅಲ್ಲಿ ನಿಮ್ಮ ಪ್ರವಚನ ಇಡಿಸಬೇಕೆಂಬ ಅಭಿಲಾಷೆ ಇದೆ ನನಗೆ” ಎಂದ.

ಅಹೋಬಿಲ! ನವ ನರಸಿಂಹರಿರುವ ವಿಶಿಷ್ಟ ಬೆಟ್ಟ. ಅದನ್ನು ನೋಡಬೇಕೆಂದು ಬಹಳ ವರ್ಷಗಳಿಂದ ಆಶಿಸುತ್ತಿದ್ದ ಅಪ್ಪು.

Ahobila

ಆದರೆ ಈಗ ಸಿಕಂದರಾಬಾದ್‌ನಿಂದ ಸುಮಾರು ಆರುನೂರ ಐವತ್ತು ನೂರು ಕಿ.ಮೀ. ಮೇಲೆ ಹೋಗಿ ಮತ್ತೆ ಏಳು ನೂರು ಕಿ.ಮೀ. ದಕ್ಷಿಣಕ್ಕೆ ಹೋಗಬೇಕು!

ಅಪ್ರಮೇಯ ವಿಧಿ, ನಿಯತಿಗಳನ್ನು ನಂಬುವವನು. ಇದು ಕೂಡ ದೇವರ ಆಟ. ನನ್ನ ಪಾಡಿಗೆ ನಾನು ಜೋಷಿಮಠದ ನಮ್ಮ ಆಶ್ರಮದಲ್ಲಿದ್ದೆ. ಅಲ್ಲಿಂದ ಗುರುಗಳ ಕರೆ ಬರುವುದೆಂದರೇನು? ಅವರು ತೀರಿಕೊಂಡ ನಂತರ ಅವರು ಜತನವಾಗಿರಿಸಿದ್ದ ಮೂರು ವಿಗ್ರಹಗಳು ರಾಮ, ಕೃಷ್ಣ ಮತ್ತು ನರಸಿಂಹ ಸಿಗುವುದೆಂದರೇನು?

ತಾನು ವಿಗ್ರಹಗಳ ಭದ್ರತೆಗಾಗಿ ಜನನಿಬಿಡ ರೈಲಿನಲ್ಲಿ ಹೊರಟರೆ ಅಳಗಪ್ಪ ಚೆಟ್ಟಿಯಾರ್‌ ಸಿಕ್ಕಿ ಎರಡು ಪ್ರವಚನ ಏರ್ಪಡಿಸಿದ್ದ. ನಂತರ ಮದುರೈ ರೈಲಿನಲ್ಲೊಂದು. ಅಲ್ಲಿಂದ ಬೆಂಗಳೂರಿಗೆ ಬಂದರೆ ಎರಡು ಪ್ರವಚನಗಳು. ಅಲ್ಲಿಂದ ಹೈದರಾಬಾದಿಗೆ ಹೊರಟರೆ ರೈಲಿನಲ್ಲೊಂದು. ಮತ್ತೆ ಹೈದರಾಬಾದ್‌, ಸಿಕಂದರಾಬಾದ್‌ಗಳಲ್ಲಿ ಒಂದೊಂದು. ವೈಝಾಗ್‌ನಲ್ಲಿ ಒಂದು. ಈಗ ಅಹೋಬಿಲದಲ್ಲಿ ಒಂದು…

ಏನಾಗುತ್ತಿದೆ? ಬಹುಶಃ ದೇವದೇವನ ಇಚ್ಛೆ ಇದೇ ಇರಬೇಕು. ತಾನು ಎಲ್ಲೆಡೆ ಭಗವಂತನ ಹೆಸರು, ಅವನ ಭಕ್ತ ಶಿರೋಮಣಿಗಳ ವಿಷಯ ಹೇಳಬೇಕು ಎಂದು ಅವನು ಆಶಿಸಿರಬೇಕು. ನಡೆಯಲಿ!

“ಹೇಗೂ ಈ ರೈಲು ವೈಝಾಗ್‌ ತಲುಪೋದು ಸಂಜೆ ಏಳೂಮುಕ್ಕಾಲಿಗೆ. ದಯವಿಟ್ಟು ನಮಗೆ ನಿಮ್ಮ ಪುರಂದರದಾಸರ ಬಗ್ಗೆ ಹೇಳುವಿರಾ? ನಾನು ಬಹಳ ಕೇಳಿದ್ದೇನೆ. ಅವರ ಬಗ್ಗೆ ಒಂದಿಷ್ಟು ವಿಷಯ ತಿಳಿಯಬೇಕು” ಎಂದ ಸಹಪ್ರಯಾಣಿಕನೊಬ್ಬ.

ತನ್ನ ಕಾವಿ ಉಡುಪು ಈ ಕೆಲಸಗಳನ್ನು ಮಾಡಿಸುತ್ತಿರಬಹುದು ಎಂದು ಮನದಲ್ಲೇ ನಕ್ಕು, “ಆಯಿತು. ಶುರು ಮಾಡೋಣ” ಎಂದ.

ಶಿಷ್ಯರು ಕೆಲವು ತಾಳಗಳನ್ನು ಸಿದ್ಧ ಪಡಿಸಿಕೊಂಡರು. ಶಿಷ್ಯ ಪುರಂದರದಾಸ ಹಾಡಲು ಕುಳಿತ.

ದುರ್ಗಾ ರಾಗದಲ್ಲಿ “ಬಾರೆ ಗೋಪಿ ಬಾಲಕನಳುತಾನೆ ಯಾರು ತೂಗಿದರೂ ಮಲಗನು ಮುರವೈರಿ… ದಿಟ್ಟ ಶ್ರೀ ಪುರಂದರ ವಿಠಲಗೆ ಹಾಲು ಕೊಡೇ” ಎಂದು ಹಾಡಿದ ಪುರಂದರದಾಸ.

“ನಮಸ್ಕಾರ. ಇದೊಂದು ವಿಶಿಷ್ಟ ದೇವರನಾಮ. ಇದನ್ನು ವಿವರಿಸುವ ಮೊದಲು ನಾನು ನಿಮಗೆ ಶ್ರೀನಿವಾಸ ನಾಯಕ ಎನ್ನುವ ಅತಿ ದೊಡ್ಡ ಶ್ರೀಮಂತನ ಕಥೆ ಹೇಳಬೇಕು” ಎಂದು ಹೇಳಿ “ಶ್ರೀಕೃಷ್ಣದೇವರಾಯನ ಕಾಲದಲ್ಲಿ ‍ಶ್ರೀನಿವಾಸ ನಾಯಕ ಎಂಬ ಅತಿ ದೊಡ್ಡ ಸಾಹುಕಾರ ಇದ್ದ. ಅವನನ್ನು ಜನ ನವಕೋಟಿ ನಾರಾಯಣ ಎನ್ನುತ್ತಿದ್ದರು…” ಎಂದು ಕಥೆ ಹೇಳತೊಡಗಿದ.

ಅವನು ಮಹಾ ಜಿಪುಣ. ಎಂಜಲು ಕೈಯಲ್ಲಿ ಕೂಡ ಒಂದು ಕಾಸು ಇತರರಿಗೆ ಕೊಡದಿದ್ದವನು. ಒಬ್ಬ ಬಡವ ತನ್ನ ಮಗಳ ಮದುವೆಗೆ ಸಹಾಯ ಮಾಡೆಂದು ಬೇಡಿದ. ಆಗುವುದಿಲ್ಲ ಎಂದ ಶ್ರೀನಿವಾಸ ನಾಯಕ. ಬಡವ ಶ್ರೀನಿವಾಸ ನಾಯಕನ ಹೆಂಡತಿಯ ಬಳಿಗೆ ಹೋಗಿ ಬೇಡಿದ. ಅವಳ ಬಳಿ ಅವಳ ಸ್ವಂತದ್ದೆಂದು ಕೇವಲ ಅವಳ ತವರು ಮನೆಯವರು ನೀಡಿದ್ದ ಮೂಗುತಿ ಇತ್ತು. ಅದನ್ನು ಕೊಟ್ಟುಬಿಟ್ಟಳು. ಮತ್ತೆ ಬಡವ ಶ್ರೀನಿವಾಸ ನಾಯಕನ ಬಳಿಗೆ ಬಂದು ಈ ಮೂಗುತಿಗೆ ಹಣ ಕೊಡಿ ಎಂದ. ಅದನ್ನು ನೋಡಿದೊಡನೆ ಶ್ರೀನಿವಾಸ ನಾಯಕನಿಗೆ ಅನುಮಾನ ಬಂದು ಆ ಬಡವನನ್ನು ಅಲ್ಲಿಯೇ ಕುಳ್ಳಿರಲು ಹೇಳಿ ಮೂಗುತಿಯನ್ನು ಭದ್ರಮಾಡಿ ಬೀಗ ಹಾಕಿ ಮನೆಗೆ ಓಡಿದ. ಹೆಂಡತಿಯನ್ನು ಮೂಗುತಿ ಎಲ್ಲೆಂದು ಕೇಳಿದ. ಇವಳಿಗೆ ತಿಳಿದುಹೋಯಿತು, ತನಗಿನ್ನು ಉಳಿಗಾಲವಿಲ್ಲವೆಂದು. ಬಟ್ಟಲಲ್ಲಿ ವಿಷ ಹಾಕಿಕೊಂಡು ಕುಡಿಯಲು ಮೇಲೆತ್ತಿದಾಗ ಅದರೊಳಗೆ ಠಣ್‌ ಎಂದು ಬಿತ್ತು ಮೂಗುತಿ. ಅದನ್ನು ಪತಿಗೆ ತೋರಿದಳು. ಅವನು ದಿಗ್ಭ್ರಾಂತನಾಗಿ ಅಂಗಡಿಗೆ ಓಡಿ ಬಂದ. ಅಲ್ಲಿರಲಿಲ್ಲ ಮೂಗುತಿ. ಅಲ್ಲಿರಲಿಲ್ಲ ಆ ಬಡವ.

ಆಗ ಅವನಿಗೆ ಜ್ಞಾನೋದಯವಾಗಿತ್ತು.

“ತನ್ನೆಲ್ಲಾ ಸಂಪತ್ತನ್ನೂ ಬಡಬಗ್ಗರಿಗೆ ಹಂಚಿ ವ್ಯಾಸರಾಯರ ಶಿಷ್ಯನಾದ. ಕರ್ನಾಟಕ ಶಾಸ್ತ್ರೀಯ ಸಂಗೀತದ ಬುನಾದಿ ಹಾಕಿದರು ದಾಸರು. ಲಂಬೋದರ ಲಕುಮಿಕರಾ ಇಂದ ಹಿಡಿದು ಅನೇಕ ದಾಸರ ಪದಗಳನ್ನು ಬರೆದರು”

“ಅವರೇ ಬರೆದರಾ ಸ್ವಾಮೀ?” ಎಂದ ಒಬ್ಬ.

“ಇದರ ಬಗ್ಗೆ ಅನೇಕ ಕಥೆಗಳಿವೆ. ಅವರು ಭಿಕ್ಷೆ ಬೇಡಲು ಹೋದಾಗ ಅವರಿಂದ ಹೊರಬೀಳುತ್ತಿದ್ದ ಹಾಡುಗಳನ್ನು ಶಿಷ್ಯರು ಬರೆದುಕೊಂಡರೆನ್ನುತ್ತಾರೆ. ಏನೇ ಆಗಲಿ, ಆ ದೊಡ್ಡ ಸಾಹಿತ್ಯ ಸಂಪತ್ತು ನಮ್ಮದಾಯಿತು. ದಾಸರನ್ನು ನಾರದರ ಅವತಾರವೆಂದೂ ಹೇಳುತ್ತಾರೆ” ಎಂದ ಅಪ್ರಮೇಯ.

“ಪುರಂದರ ಹಾಡಿದ ಬಾರೆ ಗೋಪಿ ಹಾಡು ಕೇಳಿದಿರಿ. ಸುಮ್ಮನೆ ಕೇಳಲು ಒಬ್ಬ ಪುಟ್ಟ ಹುಡುಗ ಅಂದರೆ ಶ್ರೀಕೃಷ್ಣ ಗೋಪಿ ಎಂದರೆ ಯಶೋದೆಯ ಬಳಿ ತನ್ನ ಭಯವನ್ನು ಸೂಚಿಸುವಂತೆ ಅನಿಸುತ್ತದೆ.

ಉದಾಹರಣೆಗೆ ನೀರೊಳು ಮುಳುಗಿ ಮೈ ಒರಸು ಎಂದು ಅಳುತಾನೆ ಅಂದರೆ ಇಲ್ಲಿ ಮತ್ಸ್ಯಾವತಾರದ ವಿಷಯವನ್ನು ಮಾರ್ಮಿಕವಾಗಿ ಹೇಳಿದ್ದಾರೆ ದಾಸರು.

ಮೇರು ಪೊತ್ತು ಮೈ ಭಾರವೆಂದಳುತಾನೆ – ಕೂರ್ಮಾವತಾರ

ಧರಣಿ ಕೋರೆಯೊಳಿಟ್ಟು ದವಡೆ ನೊಂದಳುತಾನೆ – ವರಾಹಾವತಾರ

ದುರುಳ ಹಿರಣ್ಯಕನ ಕರುಳು ಕಂಡಳುತಾನೆ – ನರಸಿಂಹಾವತಾರ. ಕರುಳು ಎಂಬ ಪದದ ಬಳಕೆ ಇಲ್ಲಿ ಗಮನಾರ್ಹ.

ನೆಲವನಳೆದು ಪುಟ್ಟ ಬೆರಳು ನೊಂದಳುತಾನೆ – ವಾಮನಾವತಾರ

ಛಲದಿಂದ ಕೊಡಲಿಯ ಪಿಡಿವೆನೆಂದಳುತಾನೆ – ಪರಶುರಾಮಾವತಾರ

ಬಲುಸೈನ್ಯ ಕಪಿಗಳ ನೋಡೆನೆಂದಳುತಾನೆ –  ಶ್ರೀರಾಮವತಾರ

ನಿಲುವಿನ ಬೆಣ್ಣೆಯು ನಿಲುಕದೆಂದಳುತಾನೆ –  ಶ್ರೀಕೃಷ್ಣಾವತಾರ. ಬೆಣ್ಣೆ ಕದ್ದ ನಮ್ಮ ಕೃಷ್ಣ ಬೆಣ್ಣೆ ಕದ್ದ ಎಂಬ ಹಾಡು ಇದೆ ಕನ್ನಡದಲ್ಲಿ. ಬೆಣ್ಣೆ ಅಥವಾ ನವನೀತವು ನಮ್ಮ ಮನಸ್ಸಿನಂತೆ ಎನ್ನುತ್ತಾರೆ ಭಕ್ತಶಿರೋಮಣಿಗಳು. ಅದು ಪರಿಶುದ್ಧವಾದಷ್ಟೂ ನಾವು ದೇವದೇವನಿಗೆ ಹತ್ತಿರವಾಗುವೆವಂತೆ

ಬೆತ್ತಲೆ ನಿಂತವನ ಎತ್ತಿಕೊ ಎಂದಳುತಾನೆ – ಎಲ್ಲವನ್ನೂ ಬಿಟ್ಟು ನಿರ್ವಾಣಕ್ಕೆ ಹೋದ ಬುದ್ಧಾವತಾರ.

ಉತ್ತಮ ತೇಜಿಯ ಹತ್ತೆನೆಂದಳುತಾನೆ – ಉತ್ತಮ ಕುದುರೆ ಎಂದರೆ ಕಲ್ಕ್ಯಾವತಾರ.

ಕೊನೆಯಲ್ಲಿ ಮತ್ತೆ ಮಗುವಾಗಿಬಿಡುತ್ತಾನೆ ಪುರಂದರ ವಿಠಲ. ಎಷ್ಟು ನಿಗೂಢವಾಗಿ ಮಾರ್ಮಿಕವಾಗಿ ಹೇಳಿದ್ದಾರೆ ದಾಸರು. ಅಲ್ಲವೇ?” ಎಂದು ಮಾತು ನಿಲ್ಲಿಸಿದ.

ಅನೇಕರು ಈ ಮಾತುಗಳನ್ನು ಮೆಲುಕು ಹಾಕುತ್ತಾ ಕುಳಿತಿದ್ದರು.

ಅಲ್ಲಿದ್ದ ಕನ್ನಡದಾಕೆ ಒಬ್ಬಳು, “ಈ ಕೀರ್ತನೆ ನನಗೆ ಗೊತ್ತು. ಆದರೆ ನನಗೆ ಇದು ದಶಾವತಾರದ ವರ್ಣನೆ ಎಂದು ಎಂದೂ ಅರಿತಿರಲಿಲ್ಲ. ನಮಸ್ಕಾರ ಗುರುವರ್ಯ” ಎಂದಳು.

ಇನ್ನೂ ಅನೇಕ ಪ್ರಶ್ನೆಗಳನ್ನು ಕೇಳಿದರು. ಕೆಲವು ಹಾಡುಗಳನ್ನು ಒಂದಿಷ್ಟಿಷ್ಟು ಹಾಡಿ ಎಲ್ಲರಿಗೂ ಉತ್ತರ ಕೊಡುವ ಪ್ರಯತ್ನ ಮಾಡಿದ.

ಇನ್ನೊಮ್ಮೆ ಇಡೀ ಭಾರತವನ್ನು ಸುತ್ತಬೇಕು. ಜನರ ನಡುವೆ ಈ ಭಕ್ತಿಭಾವವನ್ನು ಹರಡಬೇಕು ಎಂದು ಅಂದುಕೊಂಡ.

ತಕ್ಷಣವೇ ಅವನ ಮನದ ಆಗಸದ ಮೇಲೆ ಕರಿಮೋಡವೊಂದು ಚಲಿಸಿತ್ತು.

ತನ್ನ ಜೀವ ಉಳಿದಿದ್ದರೆ ತಾನೇ?

ಈ ಮೂರು ವಿಗ್ರಹಗಳ ಬಗ್ಗೆ ಬಹಳ ಜನ ಅಭಿಲಾಷೆ ಬೆಳೆಸಿಕೊಂಡಂತಿದೆ. ಅದಕ್ಕೇ ಏನೋ ನನ್ನ ಗುರು ಕುಮಾರಾನಂದಸ್ವಾಮಿ ಅದನ್ನು ಅಷ್ಟು ಭದ್ರವಾಗಿ ಕಾಪಿಟ್ಟಿದ್ದರು!

ಈಗ ಇದನ್ನು ನಾನು ಜೋಷಿಮಠದ ನನ್ನ ಆಶ್ರಮಕ್ಕೆ ಒಯ್ಯುವ ಸಾಹಸ ಮಾಡಿದರೆ ಅದಕ್ಕೆ ನಾನಾ ರೀತಿಯ ಅಡ್ಡಗಾಲುಗಳು.

ಪ್ರತಿಯೊಂದು ಒಳ್ಳೆಯ ಕೆಲಸಕ್ಕೆ ಇವು ಸಾಧಾರಣವಾದ ಪ್ರತಿಕ್ರಿಯೆಯಾ?

ತಾನಂತೂ ಕುಮಾರಾನಂದಸ್ವಾಮಿಗಳ ಶಿಷ್ಯನಾಗಿ ತನ್ನ ಹದಿನಾರನೆಯ ವಯಸ್ಸಿನಿಂದ ಜೋಷಿಮಠ ಬಿಟ್ಟವನಲ್ಲ. ಅಲ್ಲಿಯೇ ಸ್ವರಕ್ಷಣೆ, ಸ್ವಶಿಕ್ಷಣ ಎಲ್ಲವನ್ನೂ ಕಲಿತ.

ಕುಮಾರಾನಂದ ಸ್ವಾಮಿಗಳು ತನಗೆ ಆಶ್ರಮವನ್ನು ಒಪ್ಪಿಸಿ ಅವರು ದನುಷ್ಕೋಟಿಗೆ ಬಂದರು. ಅಲ್ಲಿ ಅವರಿಗೆ ಏನು ಕೆಲಸವಿತ್ತೋ … ತಾನಂತೂ ಒಂದು ದಿನವೂ ಪ್ರಶ್ನಿಸಿರಲಿಲ್ಲ. ಅವರ ಮೇಲೆ ಆಕ್ರಮಣ ನಡೆದಾಗ ತನಗೆ ಸಂದೇಶ ನೀಡಿದರು.

ತಾನು ಬಂದ ನಂತರ ಏನೇನೋ ಆಗಿಹೋಗಿದೆ! ಇನ್ನೂ ಏನೇನು ಆಗಲಿದೆಯೋ!

ಜನರು ಚಪ್ಪಾಳೆ ಹೊಡೆದಾಗ ಕಣ್ಣು ಬಿಟ್ಟು ತನ್ನ ಮನದ ಲಹರಿಗೆ ಅಣೆಕಟ್ಟು ಹಾಕಿ ಎದುರಿಗಿದ್ದವರನ್ನು ಕಂಡು ಮುಗುಳುನಕ್ಕ.

“ದಾಸರ ಆರತಿಯ ಹಾಡೊಂದಿದೆ. ಇದರಲ್ಲಿ ನೀವು ಏನು ವಿಶೇಷ ಕಾಣುವಿರೋ ನನಗೆ ಕೊನೆಯಲ್ಲಿ ಹೇಳುವಿರಾ?” ಎಂದು ಮುಗುಳ್ನಕ್ಕು ಪ್ರಶ್ನಿಸಿ, “ನಾನೇ ಹಾಡ್ತೀನಿ ಪುರಂದರ!” ಎಂದು ಅವನತ್ತ ನೋಡಿ ಹೇಳಿ,

“ಪಂಕಜ ಮುಖಿಯರೆಲ್ಲರು ಬಂದು ಲಕ್ಷ್ಮೀ

ವೇಂಕಟರಮಣಗಾರತಿ ಎತ್ತಿರೆ ||ಪ||

ಮತ್ಸ್ಯಾವತಾರಗೆ ಮಂದರೋದ್ಧಾರಗೆ

ಅಚ್ಚರಿಯಿಂದ ಭೂಮಿಯ ತಂದವಗೆ

ಹೆಚ್ಚಾದ ಉಕ್ಕಿನ ಕಂಭದಿಂದಲಿ ಬಂದ ಲಕ್ಷ್ಮೀ

ನರಸಿಂಹಗಾರತಿ ಎತ್ತಿರೆ||

ವಾಮನ ರೂಪಲಿ ದಾನ ಬೇಡಿದವಗೆ

ಪ್ರೇಮದಿ ಕೊಡಲಿಯ ಪಿಡಿದವಗೆ

ರಾಮಚಂದ್ರನಾಗಿ ದಶ ಶಿರನನು ಕೊಂದ

ಸ್ವಾಮಿ ಶ್ರೀ ಕೃಷ್ಣಗಾರತಿ ಎತ್ತಿರೆ||

ಬತ್ತಲೆ ನಿಂತವಗೆ ಬೌದ್ಧಾವತಾರಗೆ

ಉತ್ತಮ ಅಶ್ವನೇರಿದಗೆ

ಭಕ್ತರ ಸಲಹುವ ಪುರಂದರ ವಿಠಲಗೆ

ಮುತ್ತೈದೆಯರಾರತಿ ಎತ್ತಿರೆ||”

ಎಂದು ಹಾಡಿ ನಿಲ್ಲಿಸಿದ.

“ದಶಾವತಾರ!” ಎಂದು ಅನೇಕರು ತಕ್ಷಣ ಕೂಗಿ ಹೇಳಿದರು.

“ಹೌದು. ನಿಮ್ಮ ಊಹೆ ಸರಿ. ಯಾವಾಗೆಲ್ಲಾ ದುಷ್ಕೃತ್ಯಗಳು ಪ್ರಪಂಚದಲ್ಲಿ ಹೆಚ್ಚಿ ಜನರಿಗೆ ಗ್ಲಾನಿ ಆಗುವುದೋ ಆಗೆಲ್ಲಾ ಧರ್ಮಸಂಸ್ಥಾಪನೆಗೆ ತಾನು ಪ್ರತಿ ಯುಗದಲ್ಲೂ ಅವತಾರವೆತ್ತುವೆ ಎಂದಿದ್ದಾನೆ ದೇವದೇವ” ಎಂದ ಅಪ್ಪು.

“ಪರಿತ್ರಾಣಾಯ ಸಾಧೂನಾಂ…” ಎಂದು ಒಬ್ಬ ಯುವಕ ಶ್ಲೋಕ ಹೇಳಿದಾಗ “ಬಹಳ ಸಂತೋಷ. ಇವೆಲ್ಲವೂ ನಮ್ಮ ಸಂಸ್ಕಾರದಲ್ಲಿ ಬರಬೇಕು” ಎಂದು ಹೇಳಿದ.

ರೈಲು ಅದರ ಪಾಡಿಗೆ ವಿಶಾಖಪಟ್ಟಣಂದತ್ತ ಧಾವಿಸುತ್ತಿತ್ತು.

ಅವನಿಗೆ ತಿಳಿಯದೇ ಎರಡು ವಿಷಯಗಳು ನಡೆದಿದ್ದವು.

ಒಂದು ಕಾಲದ ಸ್ನೈಪರ್‌, ವಿಗ್ರಹಗಳ ಕಳ್ಳ ಮಾರಾಟ ಮಾಡುವ ಫಿಲಿಪ್‌ ಸ್ಟೋನ್‌ಬ್ರಿಡ್ಜ್‌ ಹೈದರಾಬಾದ್‌ಗೆ ಬಂದು ಇಳಿದ.

ಅವನು ಮತ್ತು ನಾಯಕ್‌ ಓಪನ್‌ ಲೈನ್‌ನಲ್ಲಿ ಆಡಿದ ಮೊದಲ ಮಾತುಗಳನ್ನು ಕೇಳಿಸಿಕೊಂಡಿದ್ದ ಇಂಟರ್‌ಪೋಲ್‌ ಇಂಟೆಲ್‌ ಸಂಗ್ರಹಕಾರರು ಅವರ ಕಡೆಯ ಒಬ್ಬ ಜಾಣ ಉದ್ಯೋಗಿಯನ್ನು ಹೈದರಾಬಾದ್‌ಗೆ ಕಳಿಸಿದರು.

ಅವರಿಬ್ಬರೂ ಒಂದೇ ವಿಮಾನದಲ್ಲಿ ಬಂದು ಇಳಿದಿದ್ದು ಯಾದೃಚ್ಛಿಕ!

ಈಗ ಬೆಕ್ಕು ಇಲಿ ಆಟ ಶುರು!

(ಸಶೇಷ)

ಯತಿರಾಜ್ ವೀರಾಂಬುಧಿ

Related post

Leave a Reply

Your email address will not be published. Required fields are marked *