ಪರಾಭವ ಭಾವನಾ – 13 ಯತಿರಾಜ್ ವೀರಾಂಬುಧಿ

ಹಿಂದಿನ ಸಂಚಿಕೆಯಿಂದ…
ಅಪ್ರಮೇಯ ವೈಜಾಗ್ ನಲ್ಲಿ ಎಂದಿನಂತೆ ಪ್ರವಚನ ಕೊಟ್ಟು ಭಗವದ್ಗೀತೆಯ ಸಾರವನ್ನು ನೆರೆದ ಜನಕ್ಕೆ ತಿಳಿಸಿ ಎಲ್ಲರೊಡನೆ ಭಜನೆ ಮಾಡ್ಡುತ್ತಿದ್ದ ಸಮಯದಲ್ಲಿ ಇಂಟರ್ಪೊಲೈನ ಏಜೆಂಟ್ “ಸ್ಯಾಮ್” ವಿಮಾನ ನಿಲ್ದಾಣಕ್ಕೆ ಬಂದಿಳಿದ್ದ. ಮುಂದೆ…

-ಹದಿಮೂರು-

ಅವರೀಗಾಗಲೇ ಎರಡೂವರೆ ಗಂಟೆಗಳ ಕಾಲ ಪ್ರಯಾಣ ಮಾಡಿದ್ದರು.

ಅಪ್ಪುವಿಗೆ ಹಿಂದಿನ ರಾತ್ರಿಯ ನೆನಪಾಯಿತು. ಪುರಂದರದಾಸರ ಬಗೆಗಿನ ಪ್ರವಚನ ಮುಗಿಸಿ ಬಂದಾಗ ಅವನ ರೂಮಿನಲ್ಲಿ ಏನೋ ವ್ಯತ್ಯಾಸ ಕಂಡಿತ್ತು. ಅವನೇನೂ ಯಾರ ಮೇಲೂ ಅಪನಂಬಿಕೆ ಇಟ್ಟವನಲ್ಲ. ಆದರೆ ಅವನ ವಸ್ತುಗಳನ್ನು ಯಾರೋ ಕದಲಿಸಿದಂತೆ ಕಂಡಿತು. ಕ್ಷಣಕಾಲ ಆಲೋಚಿಸಿದ.

ತನ್ನ ಶಿಷ್ಯರಲ್ಲಿ ಒಬ್ಬರಾ?

ಛೇ… ಇರಲಾರದು. ಆದರೂ ಹಣದ ಆಮಿಷ, ದುಡ್ಡಿನ ಮೋಹ ಯಾರನ್ನು ಯಾವ ಮಟ್ಟದಲ್ಲಿ ಹಿಡಿದಿಟ್ಟಿದೆಯೋ!

ಮುಖದಲ್ಲಿ ಒಂದು ಚಿಕ್ಕ ನಗೆ ಸುಳಿಯಿತು. ಅವನು ಯಾವುದನ್ನು ಬಚ್ಚಿಡಬೇಕಿತ್ತೋ ಅವು ಭದ್ರವಾಗಿದ್ದುದರಿಂದ ಅವನು ಹೆಚ್ಚು ಚಿಂತಿಸಲಿಲ್ಲ.

ಇನ್ನು ಕೆಲವು ನಿಮಿಷಗಳ ನಂತರ ಯಾರೋ ಬಾಗಿಲನ್ನು ತಟ್ಟಿದ್ದರು.

ಪಕ್ಕದ ರೂಮಿನಲ್ಲಿದ್ದ ಶಿಷ್ಯರ‍್ಯಾರಾದರೂ ಬಂದಿರಬಹುದೇನೋ ಎಂದು ಬಾಗಿಲು ತೆರೆದ.

ಅಲ್ಲೊಬ್ಬ ಯುವಕ ನಿಂತಿದ್ದ. ಅವನ ನಗೆಯನ್ನು ಕಂಡು ಅವನನ್ನು ಎಲ್ಲೋ ನೋಡಿದ ಹಾಗೆ ಅನಿಸಿತು. ಆದರೆ ಸರಿಯಾಗಿ ಯಾರೆಂದು ತಿಳಿಯಲಿಲ್ಲ. ಅದಕ್ಕೆ ಕಾರಣವೂ ಉಂಟು. ಇಷ್ಟು ವರ್ಷ ಜೋಷಿಮಠದಲ್ಲಿನ ತಮ್ಮ ಆಶ್ರಮಕ್ಕೆ ಬಂದವರನ್ನು ಬಿಟ್ಟರೆ ಬೇರೆ ಯಾರನ್ನೂ ಅವನು ಕಂಡಿರಲಿಲ್ಲ. ಈಗ ರಾಮೇಶ್ವರಂನಿಂದ ವಿಶಾಖಪಟ್ಟಣಂವರೆಗೂ ಅನೇಕ ಜನರನ್ನು ಕಂಡಿದ್ದಾನೆ.

ಎದುರಿಗೆ ಕಂಡ ಯುವಕ ದಪ್ಪಗಿನ ಮೀಸೆ ಬಿಟ್ಟಿದ್ದ. ಎತ್ತರವಾಗಿದ್ದ.

“ನಮಸ್ತೆ ಸ್ವಾಮೀಜೀ. ನಿಮ್ಮ ಅಹೋಬಿಲ ಟೂರ್‌ಗೆ ಒಂದು ದೊಡ್ಡ ಕ್ಯಾಬ್‌ ಬುಕ್‌ ಆಗಿದೆ. ನಾನೇ ಡ್ರೈವರ್.‌ ಬೆಳಗ್ಗೆ ಬೇಗ ಹೊರಡಬೇಕಲ್ವಾ?” ಎಂದ.

ಅವನ ಧ್ವನಿಯೂ ಮಧುರವಾಗಿತ್ತು.

“ಸರಿ, ಬೆಳಗ್ಗೆ ಹೋಗೋಣ” ಎಂದು ಹೇಳಿ, ಮತ್ತೆ, “ನಿನ್ನ ಹೆಸರೇನಪ್ಪಾ?” ಎಂದು ಕೇಳಿದ. ಅವನು “ಶ್ಯಾಮ್”‌ ಎಂದಾಗ ತಲೆದೂಗಿ ಅವನನ್ನು ಕಳಿಸಿಬಿಟ್ಟು, ಬಾಗಿಲು ಹಾಕಿ ಮಲಗಿದ ಮೇಲೆ ತಾನು ಯಾರಿಗೆ ಹೇಳಿದ್ದ ಅಹೋಬಿಲದ ಬಗ್ಗೆ ಎಂದು ಆಲೋಚಿಸಿದ. ಬಹುಶಃ ವಿಶಾಖಪಟ್ಟಣಂನ ಪ್ರವಚನದ ಸಮಯದಲ್ಲಿ ಬಹಳ ಜನರೊಂದಿಗೆ ಮಾತುಕತೆ ಆಡಿದಾಗ ಇದನ್ನು ಹೇಳಿದ್ದಿರಬೇಕು ಎಂದುಕೊಂಡ ಅಪ್ರಮೇಯ.

ಅವನಿಗೆ ತಾನು ರಿಸೆಪ್ಶನ್ನಿನಲ್ಲಿ ಅಹೋಬಿಲಕ್ಕೆ ಯಾವ ರೈಲು ಎಂದು ವಿಚಾರಿಸಿದ್ದು ಮರೆತುಹೋಗಿತ್ತು!

ತನ್ನ ಮೊಬೈಲ್‌ನಲ್ಲಿ ನರಸಿಂಹದೇವರ ಸ್ತೋತ್ರಗಳನ್ನು ಓದುತ್ತಿದ್ದ. ದಾಸರ ದೇವರ ನಾಮವೊಂದು ಅವನನ್ನು ಬಲವಾಗಿ ಆಕರ್ಷಿಸಿತ್ತು.

ನರಸಿಂಹ ಮಂತ್ರವೊಂದಿರಲು ಸಾಕು

ದುರಿತ ಕೋಟೆಯ ತರಿದು ಭಾಗ್ಯವನು ಕೊಡುವ

ಶಿಶುವಾದ ಪ್ರಹ್ಲಾದನ ಬಾಧೆ ಬಿಡಿಸಿದ ಮಂತ್ರ

ಅಸುರ ಕುಲದವರಿಗೆ ಶತ್ರು ಮಂತ್ರ

ವಸುಧೆಯೊಳು ಪಾತಕಿಗಳಘವ ಹೀರುವ ಮಂತ್ರ

ಪಶುಪತಿಗೆ ಪ್ರಿಯವಾದ ದಿವ್ಯ ಮಂತ್ರ

ದಿಟ್ಟ ಧ್ರುವರಾಯನಿಗೆ ಪಟ್ಟಗಟ್ಟಿದ ಮಂತ್ರ

ಶಿಷ್ಟ ವಿಭೀಷಣನ ಪೊರೆದ ಮಂತ್ರ

ಕಟ್ಟ ಕಡೆಯಲಿ ಅಜಾಮಿಳನ ಸಲಹಿದ ಮಂತ್ರ

ಮುಟ್ಟಿ ಭಜಿಸಿದವರಿಗೆ ಮೋಕ್ಷ ಮಂತ್ರ

ಹಿಂಡು ಭೂತವ ಕಡಿದು ತುಂಡು ಮಾಡುವ ಮಂತ್ರ

ಕೊಂಡಾಡೊ ಲೋಕಕೆ ಪ್ರಚಂಡ ಮಂತ್ರ

ಗಂಡುಗಲಿ ಕದನ ಉದ್ದಂಡ ವಿಕ್ರಮ ಮಂತ್ರ

ಪುಂಡರೀಕಾಕ್ಷನ ಪುರಂದರವಿಠಲ ಮಂತ್ರ

ಅಬ್ಬಾ… ಅದೆಷ್ಟು ಭಕ್ತಶಿರೋಮಣಿಗಳ ವಿಷಯ ಒಂದು ದಾಸರಪದದಲ್ಲಿ! ಎಂದು ಆಲೋಚಿಸುತ್ತಾ ತಲೆಯೆತ್ತಿ ರಸ್ತೆಯತ್ತ ನೋಡಿದಾಗ ʼಅನ್ನವರಂ ಹದಿನೈದು ಕಿ.ಮೀʼ ಎಂದಿತ್ತು ಅಲ್ಲಿದ್ದ ಫಲಕವೊಂದು.

ಅನ್ನವರಂ ಸತ್ಯನಾರಾಯಣಸ್ವಾಮಿ ದೇವಸ್ಥಾನದ ಬಗ್ಗೆ ಕೇಳಿದ್ದ.

“ಶ್ಯಾಮ್!”‌ ಎಂದ ಅಪ್ಪು.

“ಹೇಳಿ ಸ್ವಾಮೀಜೀ” ಎಂದ. ಅದೇ ವಿನೀತ ಭಾವ. ಎಲ್ಲಿ ನೋಡಿದ್ದೇನೆ ಇವನನ್ನು? ಎಂದು ಮತ್ತೆ ಆಲೋಚಿಸಿದ.

“ಅನ್ನವರಂ ದೇವಸ್ಥಾನಕ್ಕೆ ಹೋಗೋಣ ಹದಿನೈದು ಕಿಲೋಮೀಟರ್‌ ಇದೆ ಅಷ್ಟೇ ಇಲ್ಲಿಂದ” ಎಂದ ಅಪ್ಪು.

“ಸರಿ ಸ್ವಾಮೀಜಿ” ಎಂದು ಹೇಳಿ ಕಾರನ್ನು ಓಡಿಸಿದ ಶ್ಯಾಮ್.‌

ಶಿಷ್ಯರು ಸಾಕಷ್ಟು ಆಯಾಸಗೊಂಡಿದ್ದರು. ಇದೇನು ಈ ಸಲ ಈ ಗುರುಗಳು ಇಷ್ಟು ಸುತ್ತಿಸುತ್ತಿದ್ದಾರೆ ತಮ್ಮನ್ನು? ಎಂಬ ಆಲೋಚನೆ ಅನೇಕ ಸಲ ಅವರ ಮೆದುಳಲ್ಲಿ ಹಾದುಹೋಗಿತ್ತು.

ಅನ್ನವರಂ ಹತ್ತಿರವಾಗುತ್ತಿದ್ದಂತೆ ದೊಡ್ಡ ದೇವಸ್ಥಾನ ಕಂಡಿತು.

ಅನ್ನವರಂ ಶ್ರೀ ವೀರ ವೆಂಕಟ ಸತ್ಯನಾರಾಯಣಸ್ವಾಮಿವಾರಿ ದೇವಸ್ಥಾನಮು ಎಂಬ ಫಲಕ ತೆಲುಗಿನಲ್ಲಿತ್ತು.

ದೊಡ್ಡ ದೇವಸ್ಥಾನ. ದೊಡ್ಡ ರಾಜಗೋಪುರ. ಒಳಗೆ ಹೋದರೆ ದೊಡ್ಡ ಪ್ರಾಂಗಣ. ನೇರವಾಗಿ ಇನ್ನೂ ಮುಂದೆ ಹೋದರೆ ಎರಡು ಮಹಡಿಗಳಲ್ಲಿ ಸತ್ಯನಾರಾಯಣಸ್ವಾಮಿಯ ದರ್ಶನ.

ದೇವರನ್ನು ನೋಡುತ್ತಿದ್ದಂತೆ ಭಕ್ತಿಯಿಂದ ಪರವಶನಾಗಿ ಅಪ್ರಮೇಯ “ಶ್ರೀ ಸತ್ಯನಾರಾಯಣಂ ಉಪಾಸ್ಮಹೇ ನಿತ್ಯಂ ಸತ್ಯಜ್ಞಾನಾನಂದಮಯಂ ಸರ್ವಂ ವಿಷ್ಣುಮಯಂ” ಎಂದು ಶುಭ ಪಂತುವರಾಳಿ ರಾಗದ ಮುತ್ತುಸ್ವಾಮಿ ದೀಕ್ಷಿತರ ಕೃತಿ ಹಾಡಿದ.

ಅನೇಕರು ಅವನ ಸುತ್ತಲೂ ಸೇರಿದರು. ಅವನ ಧ್ವನಿ, ಹಾಡುಗಾರಿಕೆ, ಅವನ ನಿಲುವು, ಮುಖದ ಪ್ರಭೆ ಮಾತ್ರವಲ್ಲ ಆ ಜನರನ್ನು ಆಕರ್ಷಿಸಿದ್ದು, ಅವನ ಹಾಡಿನಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿದ್ದ ಅವನ ಭಕ್ತಿ.

ಸುಮಾರು ಅರ್ಧ ಗಂಟೆ ಅಲ್ಲಿದ್ದ ಅಪ್ಪು. ಅವನಿಗೆ ಭಕ್ತಿಯ ಪಾರವಶ್ಯದಿಂದ ಕಣ್ಣುಗಳಲ್ಲಿ ಧಾರೆ ಧಾರೆ ನೀರು.

ಶಿಷ್ಯನೊಬ್ಬ ಹೊರಗೆ ನಡೆದ. ಅವನಿಗೆ ನಾಯಕ್‌ನ ಚೇಲಾಗಳನ್ನು ಸಂಪರ್ಕಿಸುವ ಕಾತರ.

ಅವನು ಡಯಲ್‌ ಮಾಡಿ ಇನ್ನೇನು ಮಾತಾಡಬೇಕು ಅಷ್ಟರಲ್ಲಿ ಅಲ್ಲಿಗೆ ಬಂದಿದ್ದ ಡ್ರೈವರ್‌ ಶ್ಯಾಮ್.‌ ಅವನು ಇವನಿಗೆ ತಿಳಿಯದಂತೆ ಹಿಂದೆ ನಿಂತು ತನ್ನ ಫೋನ್‌ ಆನ್‌ ಮಾಡಿ ಅದನ್ನು ಅಪ್ಪುವಿನ ಶಿಷ್ಯನ ಫೋನ್‌ ಜೊತೆ ʼಪೇರ್‌ʼ ಮಾಡಿದ.

ಶಿಷ್ಯನ ಎಲ್ಲ ಕರೆಗಳ ವಿವರಗಳೂ, ಉಳಿದ ಫೋಟೋಗಳು, ವಿಡಿಯೋ ಕ್ಲಿಪ್ಪಿಂಗ್‌ ಏನಿವೆಯೋ ಎಲ್ಲವೂ ಶ್ಯಾಮ್‌ನ ಫೋನಲ್ಲಿ ರೆಕಾರ್ಡ್‌ ಆದವು. ನಂತರ ಅವನು ಅಲ್ಲಿಂದ ತನ್ನ ಕಾರಿನ ಬಳಿ ಹೊರಟು ಅಪ್ಪುವಿಗೆ ಕಾಯತೊಡಗಿದ.

ಈಗ ಅವನು ಅಪ್ಪುವಿನ ಶಿಷ್ಯ ಯಾರೊಂದಿಗೆ ಮಾತಾಡಿದರೂ ಅವರ ಮಾತುಗಳನ್ನು ತಾನೂ ಕೇಳಬಲ್ಲವನಾಗಿದ್ದ.

ಶಿಷ್ಯ ಯಾರಿಗೋ ಹೇಳುತ್ತಿದ್ದುದು ಅವನು ತನ್ನ ಕಿವಿಗೆ ಸಿಕ್ಕಿಸಿಕೊಂಡ ಹೆಡ್‌ಫೋನ್ಸ್‌ ಮೂಲಕ ಕೇಳಿಸಿಕೊಳ್ಳತೊಡಗಿದ.

“ಇಲ್ಲ ಗುರೂ. ನಾನು ಮೊನ್ನೆ ಮೈಯಲ್ಲಿ ಆರಾಮಿಲ್ಲ ಅಂತ ವೈಝಾಗ್‌ ಪ್ರವಚನಕ್ಕೆ ಹೋಗ್ಲಿಲ್ಲ. ಅಪ್ಪೂ ಸ್ವಾಮೀಯ ಇಡೀ ಲಗೇಜ್‌ ಹುಡುಕಿಬಿಟ್ಟೆ. ನನಗೆ ಆ ವಿಗ್ರಹಗಳು ಸಿಗಲಿಲ್ಲ”

ಆ ಮಾತುಗಳನ್ನು ಕೇಳುತ್ತಿದ್ದಂತೆ ಡ್ರೈವರ್‌ ಶ್ಯಾಮ್‌ನ ಮುಖ ಗಂಭೀರವಾಯಿತು.

ಆ ಕಡೆಯ ಮಾತುಗಳನ್ನು ಕೇಳಿದಾಗ ಇನ್ನಷ್ಟು ಗಂಭೀರವಾಗಿತ್ತು ಶ್ಯಾಮ್‌ನ ಮುಖ. “ಯೋಚಿಸ್ಬೇಡ. ಒಬ್ಬ ಇಂಗ್ಲೀಷ್‌ನೋನು ಬರ್ತಾನೆ. ಅವನು ನಿಮ್ಮ ಅಪ್ಪು ಸ್ವಾಮಿಗೆ ಒಂದು ಗತಿ ಕಾಣಿಸ್ತಾನೆ” ಎಂದ.

ಇಂಗ್ಲೀಷ್‌ನೋನು? ಫಿಲಿಪ್‌ ಸ್ಟೋನ್‌ಬ್ರಿಡ್ಜ್‌? ಇರಲಿ, ಇದೇನೆಂದು ವಿಚಾರಿಸಬೇಕು ಎಂದುಕೊಂಡ ಶ್ಯಾಮ್.‌

ಅಪ್ಪುವನ್ನು ಅನೇಕರು ಬಹಳ ಪ್ರಶ್ನೆಗಳನ್ನು ಕೇಳಿದ್ದರು. ಇನ್ನೊಂದು ಹಾಡು ಎಂದು ವಿನಂತಿಸಿದರು.

ಸಿಂಧುಭೈರವಿ ರಾಗದಲ್ಲಿ “ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ ಪಂಕಜ ನೇತ್ರಂ ಪರಮ ಪವಿತ್ರಂ ಶಂಖ ಚಕ್ರಧರ ಚಿನ್ಮಯ ರೂಪಂ” ಎಂಬ ಪುರಂದರದಾಸರ ಅಪರೂಪದ ಸಂಸ್ಕೃತ ಕೀರ್ತನೆಯನ್ನು ಹಾಡಿದ.

ಭಕ್ತಪೋಷಕ ಶ್ರೀ ಪುರಂದರವಿಠಲಂ ಎನ್ನುವಾಗ ಅಪ್ಪುವಿನ ಗಂಟಲು ಗದ್ಗದವಾಯಿತು. ಹೇ ಭಕ್ತವತ್ಸಲಾ ಬಾರಾ ನಿನ್ನ ನಿತ್ಯ ನಿರ್ಮಲಾಕಾರವನ್ನು ತೋರಾ ನನ್ನ ಪ್ರಯತ್ನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಶಕ್ತಿ ನೀಡು ಎಂದು ಮನಸಾರೆ ಬೇಡಿಕೊಂಡು ಹೊರಗೆ ಬಂದು ಕಾರು ಹತ್ತಿದ.

ನಾಲ್ವರು ಶಿಷ್ಯರೂ ಕಾರು ಹತ್ತಿದ ನಂತರ ಶ್ಯಾಮ್‌ ಕಾರನ್ನು ಮುಂದಕ್ಕೆ ಚಾಲಿಸಿದ.

ಈ ನಾಲ್ಕು ಜನ ಶಿಷ್ಯರಲ್ಲಿ ಮತ್ತೊಬ್ಬನಿಗೆ ಕೂಡ ಈ ಮೂರು ವಿಗ್ರಹಗಳ ಸುಳಿವು ಎಂದೋ ಒಂದು ಸಲ ಸಿಕ್ಕಿತ್ತು. ಅದಕ್ಕೇ ಅವನು ಸಮಯ ಸಿಕ್ಕಾಗ ಅವನ್ನು ಅಪಹರಿಸಿ ಆಮೇಲೆ ಯಾರಾದರೂ ಕೊಳ್ಳುವವರನ್ನು ಹುಡುಕುವ ಆಲೋಚನೆ ಮಾಡುತ್ತಿದ್ದ. ಆದರೆ ಉಳಿದ ಇಬ್ಬರು ಶಿಷ್ಯರು ನಿಜಕ್ಕೂ ಅಮಾಯಕರು ಮತ್ತು ನೈಜವಾದ ಗುರುಭಕ್ತಿ  ಇರುವವರು.

ಸುಮಾರು ಹದಿನಾರು ಗಂಟೆಗಳ ಪ್ರಯಾಣದ ನಂತರ ಅವರು ಅಹೋಬಿಲವನ್ನು ತಲುಪಿದ್ದರು. ರಾಜಮಹೇಂದ್ರಿಯ ಗೋದಾವರಿ, ವಿಜಯವಾಡದ ಕೃಷ್ಣಾನದಿಗಳನ್ನು ದಾಟಿ, ಗುಂಟೂರು ಮೂಲಕ ಅವರು ಅಹೋಬಿಲ ತಲುಪಿದ್ದರು.

ಇತ್ತ ಲಂಡನ್‌ನಿಂದ ಬಂದ ಇಂಗ್ಲೀಷ್‌ಮನ್‌ ಫಿಲಿಪ್‌ ಬ್ರಿಡ್ಜ್‌ಸ್ಟೋನ್‌ ತೀವ್ರವಾಗಿ ಆಲೋಚಿಸುತ್ತಿದ್ದ. ಅವನು ಹೈದರಾಬಾದ್‌ನಲ್ಲಿ ಇಳಿದಿದ್ದ. ಮುಖದಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಂಡು ಕಳ್ಳ ಪಾಸ್‌ಪೋರ್ಟ್‌ನಲ್ಲಿ ಬಂದಿದ್ದರಿಂದ ಅದೇ ಫ್ಲೈಟಿನಲ್ಲಿದ್ದ ಸ್ಯಾಮ್‌ ಕಣ್ಣಿಗೆ ಅವನು ಗೋಚರಿಸಲಿಲ್ಲ.

ಆದರೆ ಅವನಿಗೆ ಒಂದು ಆಲೋಚನೆ ಬಂದಿತ್ತು. ತಾನು ಈಗ ಆ ಸ್ವಾಮಿಯನ್ನು ಕೊಲ್ಲುವ ಕಾರ್ಯವನ್ನು ಮಾಡುವ ಮೊದಲು ಅವನೆಲ್ಲಿರುವನು, ಅವನ ಪ್ರಯಾಣದ ಹಾದಿ ಯಾವುದು ಎಂದು ಕಂಡುಕೊಳ್ಳಬೇಕು. ಅದಕ್ಕೆ ಅವನೇ ಹೋದರೆ ಅವನ ಬಿಳಿಯ ಬಣ್ಣ, ನೀಲಿಕಣ್ಣುಗಳಿಂದ ಬಹಳ ಸುಲಭವಾಗಿ ಎಲ್ಲರ ಕಣ್ಣಿಗೆ ಸುಲಭವಾಗಿ ಬೀಳುತ್ತಾನೆ. ಅದಕ್ಕೇ ಅವನು ಇನ್ಯಾರನ್ನಾದರೂ ಹುಡುಕಬೇಕು.

ನಾಯಕ್‌ಗೆ ಫೋನ್‌ ಮಾಡಿದ.

“ನಾನು ಬಂದು ತಲುಪಿದ್ದೇನೆ. ಈ ಸ್ವಾಮಿ ಹೈದರಾಬಾದ್‌ನಿಂದ ಹೊರಟುಬಿಟ್ಟಿದ್ದಾನೆ” ಎಂದ ಫಿಲಪ್.‌

ನಾಯಕ್‌ ಅದಕ್ಕೆ ಉತ್ತರವಾಗಿ, “ಅವನೀಗ ವೈಝಾಗ್‌ ಮುಗಿಸಿ, ಅನ್ನವರಂಗೆ ಹೋಗಿ, ಈಗ ಅಹೋಬಿಲಂನಲ್ಲಿದ್ದಾನೆ. ನೀನು ಅಲ್ಲಿನ ನಲ್ಲಮಲ್ಲ ಬೆಟ್ಟಗಳಲ್ಲಿ ಮುಗಿಸೋದು ಸುಲಭ” ಎಂದ.

“ನಾನು ಬಹಳ ಆಬ್ವಿಯಸ್‌ ಆಗಿ ಎಲ್ಲರ ಕಣ್ಣಿಗೆ ಬೀಳ್ತೇನೆ. ಅದಕ್ಕೇ ನನಗೊಂದು ಸಹಾಯ ಮಾಡು. ಒಬ್ಬ ಚಮಕ್‌ ಆಗಿ ಇರುವ, ಬಲು ಬುದ್ಧಿವಂತ ಹೆಣ್ಣೊಬ್ಬಳನ್ನು ನನ್ನ ಬಳಿಗೆ ಕಳಿಸು. ಅವಳನ್ನು ಟ್ರೈನ್‌ ಮಾಡಿ ಆ ಸ್ವಾಮಿಯ ಹಿಂದೆ ಬಿಡ್ತೇನೆ” ಎಂದು ಹೇಳಿದ ಫಿಲಿಪ್ ಫೋನ್‌ ಡಿಸ್ಕನೆಕ್ಟ್‌ ಮಾಡಿದ.

ನಾಯಕ್‌ ತೀವ್ರವಾಗಿ ಆಲೋಚಿಸಿದ. ನಂತರ ತನ್ನ ಬಲಗೈ ಹೆಬ್ಬೆರಳು ಮತ್ತು ಮಧ್ಯದ ಬೆರಳನ್ನು ಬಳಸಿ ಚಿಟಿಕೆ ಹೊಡೆದ. ಅವನಿಗೆ ಯಾರನ್ನು ಕಳಿಸಬೇಕೆಂದು ಹೊಳೆದಿತ್ತು.

ಮೊಬೈಲ್‌ ಗುಂಡಿಗಳನ್ನೊತ್ತಿ ಡಯಲ್‌ ಮಾಡಿದ.

ಕೆಲವು ನಿಮಿಷಗಳ ನಂತರ ಒಳಗೆ ಬಂದಿದ್ದಳೊಬ್ಬ ಆಧುನಿಕ ಯುವತಿ. ಮೊಣಕಾಲ ಮೇಲಕ್ಕೆ ಫ್ರಾಕ್‌ ಅವಳ ನೀಳ ಕಾಲುಗಳನ್ನು ಇನ್ನಷ್ಟು ಸ್ಪಷ್ಟವಾಗಿ ತೋರಿಸುತ್ತಿತ್ತು. ಅವಳ ದೇಹಶ್ರೀ ನಿಜಕ್ಕೂ ಎಂತಹವರಿಗಾದರೂ ಮೋಹ ಉಂಟಾಗುವಂತೆ ಮಾಡುವಂತಿತ್ತು.

“ಹಾಯ್‌ ನೀಲಂ, ಹೇಗಿದ್ದೀ?” ಎಂದ. ನೀಲಂ ವಯಸ್ಸು ಇಪ್ಪತ್ತೆಂಟು ಇದ್ದೀತು.

“ಚೆನ್ನಾಗಿದ್ದೀನಿ ಮಿ.ನಾಯಕ್.‌ ನನ್ನನ್ನು ಬರಹೇಳಿದ್ದು ಯಾಕೆ?” ಎಂದಳು. ಅವಳ ಸ್ವಭಾವವೇ ಅದು. ಎಲ್ಲವೂ ನೇರ, ದಿಟ್ಟ. ಅದಕ್ಕೇ ಅವನು ಅವಳನ್ನೇ ಈ ಮಿಷನ್‌ಗೆ ಆರಿಸಿದ್ದ.

“ಒಬ್ಬ ಸ್ವಾಮಿ ಇದ್ದಾನೆ. ಅವನ ಬಳಿ…” ಎಂದು ಕೆಲವು ವಿವರ ಹೇಳಿ, ತನ್ನ ಮೊಬೈಲ್‌ನಲ್ಲಿ ಸ್ವಾಮಿಯ ಪಟ ತೋರಿಸಿದ.

ನೀಲಮ್‌ ಅಪ್ಪುವನ್ನು ಪರೀಕ್ಷಾದೃಷ್ಟಿಯಿಂದ ನೋಡಿದಳು. ಅವಳ ಮನದಲ್ಲಿನ ಭಾವವ್ಯಾವುದೂ ಅವಳ ಮುಖದ ಮೇಲೆ ಕಾಣಿಸದಂತೆ ಎಚ್ಚರ ವಹಿಸಿದಳು.

“ನೀನು ಅವನ ಬಳಿ ಹೋಗಿ…” ಎಂದು ವಿವರಿಸಿ, ಅವಳು “ಸರಿ” ಎಂದು ಹೊರಟಾಗ “ಹೀಗಲ್ಲ ನೀಲಂ. ನಿನ್ನ ವೇಷವು ಈಗಿನದಕ್ಕೆ ಪೂರ್ತಿ ವಿರುದ್ಧವಾಗಿರಬೇಕು” ಎಂದ.

ಅವಳು ನಕ್ಕು, “ಅರ್ಥವಾಯಿತು ಮಿ.ನಾಯಕ್”‌ ಎಂದು ಹೊರಟಾಗ “ನಿನ್ನ ಹೆಸರು ನೀಲಂ ಬೇಡ. ಬೇರೆ ಏನಾದರೂ…” ಎಂದು ಅವನು ಹೇಳುವ ಮೊದಲೇ “ನೀಲಾಂಬರಿ” ಎಂದಳು.

“ವಾಹ್!‌ ನಾನು ಒಂದು ಹೆಜ್ಜೆಯಷ್ಟು ಯೋಚಿಸಿದರೆ, ನೀನು ನಾಲ್ಕು ಹೆಜ್ಜೆ ಜಾಸ್ತಿ ಯೋಚಿಸ್ತೀ. ಐ ಲೈಕಿಟ್!”‌ ಎಂದು ಹೇಳಿ ಫಿಲಿಪ್‌ ಸ್ಟೋನ್‌ಬ್ರಿಡ್ಜ್‌ ನಂಬರ್‌ ನೀಡಿ, “ಇವನನ್ನು ನೋಡು. ಮುಂದಿನ ಹೆಜ್ಜೆಗಳನ್ನು ಅವನು ಹೇಳ್ತಾನೆ” ಎಂದ.

ಅವಳು ತಲೆದೂಗಿ ಹೊರಟವಳು ನೇರವಾಗಿ ಫಿಲಿಪ್‌ನ ಹತ್ತಿರ ಬಂದಳು.

ಅವನು ಕೂಡ ಅವಳ ಮಾತಿನಿಂದ ಅವಳ ಬಗ್ಗೆ ಪ್ರಭಾವಿತನಾದ. ಅವಳಿಗೆ ತೆಲುಗು ಮತ್ತು ಹಿಂದಿ ಭಾಷೆಗಳು ಕರತಲಾಮಲಕ. ಇಂಗ್ಲಿಷ್‌ ಕೂಡ ಚೆನ್ನಾಗಿಯೇ ಬರುತ್ತಿತ್ತು.

ಸುಮಾರು ಅರ್ಧ ಗಂಟೆ ಮಾತಾಡಿದ. ತಾನು ಸರಿಯಾದ ಸಮಯದಲ್ಲಿ ಟೆಲಿಸ್ಕೋಪ್‌ ಅಳವಡಿಸಿದ ಉದ್ದನೆಯ ಬಂದೂಕಿನೊಂದಿಗೆ ಯಾವುದಾದರೊಂದು ನಿರ್ದಿಷ್ಟ ಸ್ಥಳಕ್ಕೆ ಬರುವನೆಂದೂ, ಅವಳು ಅಷ್ಟರಲ್ಲಿ ವಿಗ್ರಹಗಳನ್ನು ಎಲ್ಲಿದೆಯೆಂದು ಕಂಡುಕೊಂಡಿರಬೇಕೆಂದೂ ಹೇಳಿದ.

ಸರಿಯೆಂದು ತಲೆಯಾಡಿಸಿ ಅದೇ ಹೊಟೇಲ್‌ನ ಒಂದು ರೂಮಿಗೆ ಹೋದವಳು ಮತ್ತೆ ಬಂದು ಫಿಲಿಪ್‌ನ ರೂಮ್‌ ಬಾಗಿಲು ತಟ್ಟಿದಳು.

ಅವನು ಬಾಗಿಲು ತೆಗೆದು ಅವಳನ್ನೇ ಪ್ರಶ್ನಾರ್ಥಕ ದೃಷ್ಟಿಯಿಂದ ನೋಡಿದ. ಅವಳ ಗಂಭೀರ ಮುಖ, ಹಣೆಯ ಮೇಲಿನ ಅಗಲ ಕುಂಕುಮ, ಮೂಗಿನ ನತ್ತು, ಕಿವಿಯಲ್ಲಿನ ಬೆಂಡೋಲೆ, ಸ್ವಲ್ಪ ಹಳೆಯ ಕಾಲದ ಸೀರೆ ಸಂಪೂರ್ಣ ಸಂಪ್ರದಾಯಸ್ಥ ಹೆಣ್ಣಾಗಿ ತಯಾರಾಗಿದ್ದಳು ನೀಲಂ … ಊಹೂಂ… ನೀಲಾಂಬರಿ!

ಹೀಗೆ ಅಪ್ರಮೇಯನ ಬಳಿಯಿರುವ ವಿಗ್ರಹಗಳ ಕಳ್ಳತನಕ್ಕೆ ಮತ್ತು ಅವನ ಕೊಲೆಗೆ ಹುನ್ನಾರವೊಂದು ಸಿದ್ಧವಾಯಿತು!

ಮುಂದುವರೆಯುವುದು…

ಯತಿರಾಜ್ ವೀರಾಂಬುಧಿ

Related post