ಪರಾಭವ ಭಾವನಾ – 14 ಯತಿರಾಜ್ ವೀರಾಂಬುಧಿ

ಹಿಂದಿನ ಸಂಚಿಕೆಯಲ್ಲಿ…
ತಾನಿಳಿದುಕೊಂಡಿದ್ದ ಹೋಟೆಲ್ ಗೆ ಹಿಂತಿರುಗಿದಾಗ ಅಪ್ರಮೇಯನಿಗೆ ಇಂಟರ್ಪೋಲ್ ಏಜೆಂಟ್ ಸ್ಯಾಮ್ ಎದುರಾದ. ನಾಯಕ್ ನೀಲಂ ಳನ್ನು ಅಪ್ರಮೇಯನ ಹಿಂದೆ ಬಿಟ್ಟು ವಿಗ್ರಹ ಕದಿಸಲು ಸಂಚು ಹೂಡಿದ ಮುಂದೆ…

-ಹದಿನಾಲ್ಕು-

ಅಹೋಬಿಲದಲ್ಲಿ ಹೊಟೇಲ್‌ ರೂಮಿನಲ್ಲಿದ್ದರೂ ಚಡಪಡಿಸುತ್ತಿದ್ದ ಅಪ್ರಮೇಯ.  ಏಕೋ ಏನೋ ಬಂದಿದ್ದು ತಪ್ಪಾಯಿತಾ? ನೇರವಾಗಿ ಹೊರಟುಹೋಗಬೇಕಿತ್ತಾ?

ಅವನ ಮನದಲ್ಲಿ ಅವನ ಶಿಷ್ಯರ ಬಗ್ಗೆ ಯಾವ ಕೆಟ್ಟ ಭಾವನೆಯೂ ಮೂಡದಿದ್ದುದು ಅವನಿಗೇ ಅಚ್ಚರಿಯಾಗಿತ್ತು.

ಜೊತೆಗೆ ನಾಗ ಗಾಂಧಾರಿ ತಾನು ಇನ್ನು ಅಪ್ರಮೇಯನನ್ನು ನೋಡುವುದಿಲ್ಲವೆಂದೂ, ಮರಳಿ ಬೆಂಗಳೂರಿಗೆ ಹೋಗುವೆನೆಂದೂ ಫೋನ್‌ ಮಾಡಿ ಹೇಳಿದ್ದಳು.

ಇದರ ಬಗ್ಗೆ ತನ್ನ ಕಜಿನ್‌ ಅಗಸ್ತ್ಯನಿಗೆ ಫೋನ್‌ ಮಾಡಿದಾಗ ಅವನು ಸಿಗಲಿಲ್ಲ. ಹೌದೂ, ಅವನೆಲ್ಲಿ ಕೆಲಸ ಮಾಡುತ್ತಾನೆಂದಿದ್ದ? ಬಹುರಾಷ್ಟ್ರೀಯ ಕಂಪೆನಿ ಎಂದಿದ್ದ. ಯಾವ ಕಂಪೆನಿ ಅದು?

ತಮ್ಮನ್ನು ಇಲ್ಲಿಗೆ ಕರೆತಂದ ಚಾಲಕ. ಅವನನ್ನು ತಾನು ಎಲ್ಲೋ ನೋಡಿದ್ದಾನೆ ಎಂಬುದು ಖಚಿತ. ಅವನ ಹೆಸರು ಶ್ಯಾಮ್‌ ಎಂದ.

ಏನೋ ಲೋಪವಿದೆ… ಎಲ್ಲೋ ಲೋಪವಿದೆ… ಏನು ಲೋಪ? ಎಲ್ಲಿ ಲೋಪ? ಅರ್ಥವಾಗುತ್ತಿಲ್ಲ.

ಮರುದಿನ ಬೆಳ್ಳಂಬೆಳಗ್ಗೆ ನರಸಿಂಹ ದರ್ಶನಕ್ಕೆ ಹೊರಟರು ಐವರೂ. ಶ್ಯಾಮ್‌ ತಾನು ಬರುವುದಿಲ್ಲವೆಂದುಬಿಟ್ಟ. ಬಹುಶಃ ಇಷ್ಟು ದೂರ ಅಷ್ಟು ಹೊತ್ತು ಡ್ರೈವ್ ಮಾಡಿದ್ದರಿಂದ ಆಯಾಸವಾಗಿರಲಿಕ್ಕೆ ಸಾಧ್ಯ ಎಂದು ಸುಮ್ಮನಾಗಿಬಿಟ್ಟ ಅಪ್ರಮೇಯ.

ಅವರು ಬೆಟ್ಟವನ್ನು ಹತ್ತತೊಡಗಿದರು.

ಅದ್ಭುತವಾದ ಗಿರಿಶ್ರೇಣಿ. ಎರಡೂ ಕಡೆ ಮತ್ತು ಎದುರಿಗೂ ಹಸಿಹಸಿರು ಬಂಡೆಗಳ ಬೆಟ್ಟಗಳು. ಅಲ್ಲಿನ ಐತಿಹ್ಯವನ್ನು ನೆನೆದ ಅಪ್ರಮೇಯ. ಗುರುಗಳು ಒಮ್ಮೆ ಇಲ್ಲಿಗೆ ಬಂದು ಹೋದ ನಂತರ ಅವನಿಗೆ ಎಲ್ಲವನ್ನೂ ಕಣ್ಣಿಗೆ ಕಟ್ಟಿದಂತೆ ವಿವರಿಸಿದ್ದರು.

ಅಹೋ ಎಂದರೆ ಒಂದು ಉದ್ಗಾರ. ಬಿಲಂ ಅಥವಾ ಬಲಂ ಎಂದರೆ ಶಕ್ತಿ. ಅಂದರೆ ಇಲ್ಲಿ ಅಗಾಧ ಶಕ್ತಿ ಇದೆ ಎನ್ನುವ ಪ್ರತೀತಿ ಇದೆ.

ತನ್ನ ತಮ್ಮ ಹಿರಣ್ಯಾಕ್ಷನನ್ನು ವರಾಹಾವತಾರದಲ್ಲಿ ಕೊಂದ ಹರಿಯನ್ನು ಮುಗಿಸಲು ಉಗ್ರತಪಸ್ಸು ಮಾಡುತ್ತಾನೆ ಹಿರಣ್ಯಕಶಿಪು.  ಅವನು ಅಮರತ್ವದ ವರವನ್ನು ಬ್ರಹ್ಮನಿಂದ ಕೋರುತ್ತಾನೆ. ಅದಕ್ಕೆ ಬ್ರಹ್ಮ ನಕಾರ ಸೂಚಿಸಿದಾಗ ಪ್ರಪಂಚದಲ್ಲಿ ಸೃಷ್ಟಿಯಾಗದಿರುವಂತಹ ಒಂದು ವಿಶಿಷ್ಟ ಪ್ರಾಣಿಯಿಂದ ತನ್ನ ಸಂಹಾರವಾಗಬೇಕೆಂದು ಕೋರುತ್ತಾನೆ ಹಿರಣ್ಯಕಶಿಪು.

ಯೋನಿಯಲ್ಲಿ ಹುಟ್ಟದ, ನರನಲ್ಲದ, ಪ್ರಾಣಿಯಲ್ಲದ, ಆಯುಧ ಬಳಸದವನಾಗಿರಬೇಕು. ಬೆಳಗ್ಗೆ ಅಥವಾ ರಾತ್ರಿ ಕೊಲ್ಲಕೂಡದು. ಮನೆಯ ಒಳಗೆ ಅಥವಾ ಹೊರಗೆ ಕೊಲ್ಲಕೂಡದು. ಇವನು ಚಾಪೆ ಕೆಳಗೆ ನುಸುಳಿದರೆ ದೇವದೇವನು ರಂಗೋಲಿಯ ಕೆಳಗೆ ನುಸುಳುತ್ತಾನೆ. ಮನುಷ್ಯನ ದೇಹ, ಸಿಂಹದ ತಲೆ, ಉಗುರೇ ಆಯುಧ. ಸಂಜೆ ಮನೆಯ ಹೊರಗಲ್ಲದ, ಒಳಗಲ್ಲದ ಹೊಸ್ತಿಲ ಮೇಲೆ ಮಡಿಲಲ್ಲಿ ಮಲಗಿಸಿಕೊಂಡು ತನ್ನ ಹರಿತವಾದ ನಖಗಳಿಂದ ಅವನ ಕರುಳು ಬಗೆದು ಕೊಂದಿದ್ದು ಈ ಅಹೋಬಿಲದಲ್ಲಿಯೇ.

ನಾರಾಯಣನ ಈ ಭಯಾನಕ ರೂಪ ಕಂಡ ದೇವತೆಗಳು ʼಅಹೋ ಬಲಂʼ (ಓ ಅಗಾಧ ಶಕ್ತಿಯೇ) ಎಂದು ಜೈಕಾರ ಕೂಗಿದ್ದಕ್ಕೆ ಈ ಕ್ಷೇತ್ರ ಅಹೋಬಲ (ಅಹೋಬಿಲ) ಆಯಿತು.

ಅಪ್ರಮೇಯನ ತುಟಿಗಳು “ಅಹೋ ವೀರ್ಯಂ, ಅಹೋ ಶೌರ್ಯಂ ಅಹೋ ಬಾಹು ಪರಾಕ್ರಮ

ನರಸಿಂಹಂ ಪರಮದೈವಂ ಅಹೋ ಬಿಲಂ ಅಹೋ ಬಲಂ” ಎಂದು ಉಚ್ಚರಿಸಿದವು.

ನಮ್ಮ ದೇಹದ ನವರಂಧ್ರಗಳನ್ನು ಶಾಪಮುಕ್ತರನ್ನಾಗಿ ಮಾಡಲು, ಶತ್ರುಗಳಿಂದ ರಕ್ಷಿಸಲು ಈ ನವ ನರಸಿಂಹರ ಪೂಜೆ ಮಾಡುವರೆಂದು ಹಿರಿಯರು ಹೇಳುತ್ತಾರೆ.

ಭಾರ್ಗವ ನರಸಿಂಹಸ್ವಾಮಿಯ ಗುಡಿಗೆ ಮೊದಲು ಹೋದ. ನರಸಿಂಹ ಮಾಮವ ಭಗವನ್‌ ನಿತ್ಯಂ  ಎಂಬ ಸ್ವಾತಿ ತಿರುನಾಳ್‌ ಮಹಾರಾಜರ ಕೀರ್ತನೆಯನ್ನು  ಆರಭಿ ರಾಗದಲ್ಲಿ ಹಾಡಿದ ಅಪ್ರಮೇಯ. ಉಳಿದ ನಾಲ್ವರೂ ಮಧ್ಯೆ ತಮ್ಮ ಧ್ವನಿ ಸೇರಿಸಿದರು.

ನಂತರ ಯೋಗಾನಂದ ನರಸಿಂಹಸ್ವಾಮಿ, ಚತ್ರವ್ರತ ನರಸಿಂಹಸ್ವಾಮಿ, ಉಗ್ರ ನರಸಿಂಹಸ್ವಾಮಿ,  ವರಾಹ ನರಸಿಂಹಸ್ವಾಮಿ, ಮಾಲೋಲ ನರಸಿಂಹಸ್ವಾಮಿ, ಜ್ವಾಲಾ ನರಸಿಂಹಸ್ವಾಮಿ ದರ್ಶಿಸಿದ ನಂತರ ಪಾವನ ನರಸಿಂಹಸ್ವಾಮಿಯ ದರ್ಶನ ಮಾಡಿದರು ಐವರೂ.

ಕಾರಂಜ ನರಸಿಂಹಸ್ವಾಮಿಯ ದರ್ಶನದ ನಂತರ ಅಲ್ಲೇ ಹೊರಗೆ ನಿಂತು

“ಜ್ವಾಲಾ ಅಹೋಬಿಲ ಕ್ರೋಧ ಕಾರಂಜ ಭಾರ್ಗವ ಯೋಗಾನಂದ ಕ್ಷತ್ರವತ ಪಾವನ ನವ ಮೂರ್ತಾಯಃ” ಎಂದು ಅನೇಕ ಸಲ ಪಠಿಸಿದ.

ಒಂಬತ್ತು ದೇವಾಲಯಗಳನ್ನು ದರ್ಶಿಸಲು ಬಂದ ದಾರಿಯನ್ನು ನೆನೆದ. ಕೆಲವೆಡೆ ನೀರ ಝರಿಗಳು, ಮತ್ತೆ ಕೆಲವೆಡೆ ಎತ್ತರದ ಬಂಡೆಗಳು, ನಡುನಡುವೆ ಕಿರಿದಾದ ದಾರಿಗಳು, ಗುಹೆಗಳು… ಪ್ರಕೃತಿಯ ಈ ವೈಭವವೂ ಅವನ ಮನಸ್ಸಿಗೆ ಮುದ ನೀಡಿತು.

ಮೇಲಿನ ನರಸಿಂಹಸ್ವಾಮಿಯ ದರ್ಶನದ ನಂತರ ಹತ್ತಿರದ ಉಗ್ರ ಸ್ಥಂಭಂ ಹತ್ತಿರ ಹೋದ ಅಪ್ಪು. ಶಿಷ್ಯರಿಗೆ ಇವನಲ್ಲಿದ್ದಷ್ಟು ಚೈತನ್ಯವೂ ಇದ್ದಂತಿರಲಿಲ್ಲ.

ಉಗ್ರಸ್ಥಂಭಂದಿಂದಲೇ ನರಸಿಂಹಸ್ವಾಮಿ  ಹೊರಗೆ ಬಂದು ಹಿರಣ್ಯಕಶಿಪುವಿನ ಸಂಹಾರ ಮಾಡಿದನೆಂದು ಗುರುಗಳು ಅಪ್ರಮೇಯನಿಗೆ ಹೇಳಿದ್ದು ನೆನಪಿತ್ತು. ಅದಕ್ಕೆ ನಮಸ್ಕರಿಸಿ ಅಲ್ಲಿಂದ ಪ್ರಹ್ಲಾದ ಮೆಟ್ಟು (ಪ್ರಹ್ಲಾದನ ಮೆಟ್ಟಿಲು) ಬಳಿಗೆ ಬಂದ. ಅಲ್ಲಿನ ಒಂದು ಚಿಕ್ಕ ಗುಹೆಯಲ್ಲಿದ್ದ ಪ್ರಹ್ಲಾದನ ವಿಗ್ರಹಕ್ಕೆ ನಮಸ್ಕರಿಸಿದ. ನಂತರ ಆ ವಿಗ್ರಹವನ್ನೇ ನೋಡುತ್ತಾ, “ಎಂತಹ ಭಕ್ತಿ ನಿನ್ನದು ಓ ಪ್ರಹ್ಲಾದ! ಹುಟ್ಟುವ ಮೊದಲೇ ನಿನ್ನ ತಾಯಿಯ ಗರ್ಭದಲ್ಲಿದ್ದುಕೊಂಡೇ ನಾರದರಿಂದ ನಾರಾಯಣ ನಾಮವನ್ನು ಅರಿತ ಮಹಾಕೂಸು ನೀನು. ನಿನ್ನ ತಂದೆ ಲೋಕವನ್ನೆಲ್ಲಾ ಗೆದ್ದು ಬೀಗುತ್ತಿದ್ದಾಗ ಹರಿಯೇ ಸತ್ಯ, ಹರಿಯೇ ನಿತ್ಯ ಎಂದು ಒಂದಿಷ್ಟೂ ಬೆದರದೇ ತಂದೆಗೆ  ಹೇಳಿದವ ನೀನು. ತಂದೆ ನೀಡಿದ ಯಾವ ಶಿಕ್ಷೆಯೂ ನಿನಗೇನೂ ಮಾಡಲಿಲ್ಲ. ತಾಯಿಯೇ ವಿಷಪ್ರಾಶನ ಮಾಡಿದರೂ ಹರಿಯ ಅನುಗ್ರಹದಿಂದ ಬದುಕುಳಿದೆ. ಎಲ್ಲಿರುವನೋ ಆ ನಿನ್ನ ಹರಿ? ಎಂದು ತಂದೆಯು ಅಬ್ಬರಿಸಿದಾಗ ಒಂದಿಷ್ಟೂ ಬೆದರದೇ ಕಂಬವನ್ನು ತೋರಿದೆ. ನರಸಿಂಹ ಸ್ವಾಮಿ ಬಂದು ನಿಮ್ಮ ತಂದೆಯನ್ನು ಕೊಂದು ಇನ್ನೂ ಉಗ್ರಕೋಪದಲ್ಲಿದ್ದಾಗ ಲಕ್ಷ್ಮೀದೇವಿಯೂ ಸ್ವಾಮಿಯ ಬಳಿ ಹೋಗಲು ಹೆದರಿದಾಗ ನೀನು ಸ್ವಾಮಿಯನ್ನು ಪ್ರಾರ್ಥಿಸಿ ಅವನ ಕೋಪವನ್ನು ಶಮನ ಮಾಡಿದೆ. ತಂದೆಯ ಆತ್ಮಕ್ಕೆ ಶಾಂತಿ ಕೊಡೆಂದು ಸ್ವಾಮಿಯನ್ನು ಬೇಡಿದೆ. ನಿನ್ನ ಒಳ್ಳೆಯತನ ಸದಾ ಉಳಿಯಲೆಂದು ಸ್ವಾಮಿಯನ್ನು ಬೇಡಿಕೊಂಡ ಅಪ್ರತಿಮ ಭಕ್ತ ನೀನು” ಎಂದು ಪ್ರಹ್ಲಾದನನ್ನು ಹೊಗಳಿ ಮಾತಾಡಿದ.

ಸ್ವಲ್ಪ ಹೊತ್ತು ಅಲ್ಲೇ ಕಣ್ಮುಚ್ಚಿಕೊಂಡು ಕುಳಿತ.

ಶಿಷ್ಯರು ನಾಲ್ವರೂ ಪರಸ್ಪರ ಮುಖ ನೋಡಿಕೊಂಡರು.

ಸ್ವಲ್ಪ ಹೊತ್ತಿನ ನಂತರ ಅಪ್ರಮೇಯ ಕಣ್ಣು ಬಿಟ್ಟಾಗ ಎದುರಿಗೆ ಯಾರೋ ನಿಂತಂತಿತ್ತು.

ನೀಲಿ ಪತ್ತಲ, ನೀಲಿ ರವಿಕೆ ತೊಟ್ಟು, ಸಂಪೂರ್ಣ ನೀಲಮಯವಾಗಿ ಮ್ಯಾಚಿಂಗ್‌ ಮಾಡಿಕೊಂಡಿದ್ದ ಒಬ್ಬ ಯುವತಿ ನಿಂತಿದ್ದಳು.

ನೋಡಲು ಆಕರ್ಷಕವಾಗಿದ್ದಳು.

ಅಪ್ರಮೇಯ ಕಣ್ಬಿಟ್ಟಾಗ ಅವಳು ತನ್ನ ಎದೆಯ ಮೇಲೆ ತನ್ನೆರಡೂ ಕರಗಳನ್ನು ಜೋಡಿಸಿ “ನಮಸ್ತೇ ಅಪ್ರಮೇಯ ಸ್ವಾಮೀ” ಎಂದಳು.

ಮೇಲೆದ್ದು ನಿಂತ ಅಪ್ರಮೇಯ ತಲೆದೂಗಿದ.

“ನಾನು ನೀಲಾಂಬರಿ.  ನಿಮ್ಮ ಗುರುಗಳ ಬಗ್ಗೆ ಅಪಾರ ಭಕ್ತಿ ಇಟ್ಟುಕೊಂಡಿದ್ದ ಮದುರೈನಲ್ಲಿದ್ದ ಒಬ್ಬ ಬಟ್ಟೆ ವ್ಯಾಪಾರಿಯ ಮಗಳು ನಾನು” ಎಂದಳು.

ಅವಳ ನಗೆಯಿಂದ ಅವನು ಚಂಚಲನಾಗಬೇಕೆಂಬುದು ಅವಳ ಇಚ್ಛೆಯಾಗಿದ್ದರೆ ಅದು ನಡೆಯಲಿಲ್ಲ.

ಅವಳಿಗಾಗ ಪರಾಭವ ಭಾವನೆ ಉಂಟಾಯಿತು.

ಈ ಸನ್ಯಾಸಿಯನ್ನು  ತನ್ನ ಬುಟ್ಟಿಗೆ ಕೆಡವಿಕೊಳ್ಳಲು ಸಾಧ್ಯವಾಗದು. ಇನ್ನು ತನ್ನ ಚೋರಿ ಕೆಲಸವನ್ನೇ ಮಾಡಬೇಕು ಎಂದು ನಿರ್ಧರಿಸಿದಳು.

“ಸಂತೋಷ ನೀಲಾಂಬರಿಯವರೇ. ಇದೇನು ಇಲ್ಲಿ ಇದ್ದಕ್ಕಿದ್ದಂತೆ ಬಂದಿದ್ದೀರಿ?” ಎಂದು ಮುಗುಳ್ನಕ್ಕ.

“ನರಸಿಂಹಸ್ವಾಮಿಯ ದರ್ಶನಕ್ಕೆ ಬಂದಿದ್ದೆ.  ಅಕಸ್ಮಾತ್ತಾಗಿ ನೀವು ಕಣ್ಣಿಗೆ ಬಿದ್ದಿರಿ” ಎಂದಳು ಮತ್ತೆ ಅವನ ಮೇಲೆ ತನ್ನ ಮೋಹನಾಸ್ತ್ರ ಬೀರುವ ಪ್ರಯತ್ನ ಮಾಡುತ್ತಾ.

ಆದರೆ ಅವನ ಮನಸ್ಸಿನಲ್ಲಿ ಈ ಭೇಟಿ ಖಂಡಿತ ಯಾದೃಚ್ಛಿಕವಿರಲಾರದು… ಎಂಬ ಆಲೋಚನೆ ಬಂದಿತು.

“ಸಂತೋಷ. ನಿಮ್ಮ ತಂದೆಯವರಿಗೆ ಗುರುಗಳು ದೇವರ ಸನ್ನಿಧಿ ಸೇರಿದರು ಅನ್ನೋ ವಿಷಯ ತಿಳಿಸಿಬಿಡಿ” ಎಂದ.

ಅವಳು ಅದಕ್ಕೆ ಯಾವ ರೀತಿಯೂ ಪ್ರತಿಕ್ರಿಯೆ ವ್ಯಕ್ತಪಡಿಸದಿದ್ದುದರಿಂದ ತನ್ನ ಅನುಮಾನ ನಿಜವೆಂದುಕೊಂಡ.

ವಿಗ್ರಹಗಳನ್ನು ತಸ್ಕರ ಮಾಡಲು ಬಂದಿರಬೇಕೆಂದು ಸರಿಯಾಗಿಯೇ ಊಹಿಸಿದ್ದ ಅಪ್ರಮೇಯ.

ಅಲ್ಲಿಂದ ಕೆಳಗೆ ನಡೆದು ಹೋಗುವಾಗ ನಾಲ್ವರು ಶಿಷ್ಯರೂ ಪ್ರತ್ಯೇಕವಾಗಿ ಹೋಗುತ್ತಿದ್ದರು. ಅದನ್ನೇ ಅಸ್ತ್ರವನ್ನಾಗಿ ಬಳಸಿಕೊಂಡು ಪ್ರತಿಯೊಬ್ಬನ ಬಳಿಗೆ ಹೋಗಿ ಮೆಲ್ಲನೆ ʼನಾಯಕ್‌ʼ ಎಂದಳು.

ಮೂವರು ಏನೂ ಭಾವನೆ ವ್ಯಕ್ತ ಪಡಿಸಲಿಲ್ಲ. ಆದರೆ ಒಬ್ಬ ಮಾತ್ರ ಒಮ್ಮೆ ಕಣ್ಣರಳಿಸಿ ಮತ್ತೆ ಅವನ ಪಾಡಿಗೆ ಹೋಗತೊಡಗಿದ.

ಆಹಾ… ಇವನೇ ನಾಯಕ್‌ ಹೇಳಿದ ಆ ಸ್ವಾಮಿಯ ಶಿಷ್ಯ! ಅವನಿಗೆ ಉಳಿದವರ ಮುಂದೆ ತನ್ನನ್ನು ತಾನು ಪ್ರಕಟಿಸಿಕೊಳ್ಳಲು ಭಯ ಎಂದು ಸರಿಯಾಗಿಯೇ ಊಹಿಸಿದ್ದಳು ನೀಲಾಂಬರಿ.

ಎಲ್ಲರೂ ಕಾರಿನ ಬಳಿಗೆ ಬಂದಾಗ ಅಲ್ಲಿ ಡ್ರೈವರ್‌ ಶ್ಯಾಮ್‌ ಕಾಣಿಸಲಿಲ್ಲ.

ಅವನು ಇವರ ಹಿಂದೆಯೇ ಕಾರಿನ ಬಳಿಗೆ ವೇಗವಾಗಿ ಬಂದ.

ಅವನು ಒಂದಿಷ್ಟು ಪತ್ತೇದಾರಿಕೆ ನಡೆಸಲು ಹೋಗಿದ್ದ. ಅಪ್ರಮೇಯನನ್ನು ಹಾಡುವಾಗ ಕಂಡ. ನಂತರ ಪ್ರಹ್ಲಾದನ ಮೂರ‍್ತಿಯ ಬಳಿ ಕುಳಿತು ಧ್ಯಾನಿಸುವುದನ್ನು ಕಂಡ.

ಅವನ ದೃಷ್ಟಿ ಅಲ್ಲಿಗೆ ಬಂದಿದ್ದ ಯುವತಿಯನ್ನು ದಾಟಿ ಹೋಗಿರಲಿಲ್ಲ.

ಅವಳ ಫೋಟೋವನ್ನು ಚಕ್ಕನೆ ಅವಳಿಗೇ ತಿಳಿಯದೇ ತೆಗೆದ.

ಅಲ್ಲಿಯೇ ಸ್ವಲ್ಪ ಮರೆಯಾಗಿ ಕುಳಿತು ತನ್ನ ಬಳಿ ಇದ್ದ ಕಳ್ಳಕೊರಮರ ಡೇಟಾ ಬೇಸ್‌ನಲ್ಲಿ ಅವಳ ಚಿತ್ರವನ್ನು ಹಾಕಿ ಅದಕ್ಕೆ ಯಾವುದಾದರೂ ಮ್ಯಾಚ್‌ ಸಿಗುವುದೇನೋ ಎಂದು ಹುಡುಕಿದ.

ಸುಮಾರು ಹೊತ್ತಾದರೂ ಅವನಿಗೆ ಅವಳು ಕಳ್ಳರ ಗುಂಪಿನವಳು ಎಂದು ತಿಳಿಯಲಿಲ್ಲ.

ಅದೇ ಸಮಯಕ್ಕೆ ನಾಯಕ್‌ನ ಗುಂಪಿನೊಂದಿಗೆ ಸಂಪರ್ಕವಿಟ್ಟಿದ್ದ ಶಿಷ್ಯ ನಾಯಕ್‌ ಕಡೆಯವರಿಗೆ ಫೋನ್‌ ಮಾಡಿದಾಗ ಶ್ಯಾಮ್‌ನ ಫೋನ್‌ ಆನ್‌ ಆಯಿತು.

“ಯಾರನ್ನೋ ಕಳಿಸಿದ್ದೀರಿ? ಅವಳೂ ನನ್ನ ಹತ್ತಿರ ಬಂದು ನಾಯಕ್‌ ಅಂದ್ಳು. ಅವಳನ್ನು ನಂಬಬೋದಾ?” ಎಂದ.

ಶ್ಯಾಮ್‌ನ ತುಟಿಗಳ ಮೇಲೆ ನಗೆ ಅರಳಿತು.

ಅಂತೂ ತನ್ನ ಡೇಟಾ ಬೇಸ್‌ನಲ್ಲಿಲ್ಲದಿದ್ದರೂ ಈ ಹೆಣ್ಣು ಖಚಿತವಾಗಿ ಖತರ್‌ನಾಕ್‌ ಎಂದು ನಿರ್ಧರಿಸಿ, ಅವಳ ಮೇಲೆ ಒಂದು ಕಣ್ಣಿಡಲು ನಿರ್ಧರಿಸಿದ.

ಇವ್ಯಾವುದರ ಪರಿವೆಯೂ ಇಲ್ಲದೇ ಅಪ್ಪು ಕಾರಿನ ಬಳಿ ನಿಂತು ಅಹೋಬಿಲದ ಬೆಟ್ಟಗಳನ್ನು ನೋಡಿ ಆನಂದಿಸುತ್ತಿದ್ದ. ಪ್ರಕೃತಿಯ ಹಿರಿಮೆಗೆ ಸಂತೋಷಿಸುತ್ತಿದ್ದ.

ಅಬ್ಬಾ! ನಾವು ಈ ಪ್ರಕೃತಿಯ ರುದ್ರರಮಣೀಯತೆಯ ಮುಂದೆ ಹುಲುಮಾನವರು! ಏನನ್ನೂ ಸೃಷ್ಟಿ ಮಾಡಲಾಗದಿದ್ದರೂ ನಾಶ ಮಾಡುವುದರಲ್ಲಿ ನಿಸ್ಸೀಮರು!

ನೀಲಾಂಬರಿ ಅಪ್ಪುವಿನ ಬಳಿಗೆ ಬಂದು “ಸ್ವಾಮೀ… ನಿಮ್ಮ ಕಾರ್ಯಕ್ರಮ ಏನು?” ಎಂದಳು. ಅವಳ ನಗೆ, ವೈಯ್ಯಾರಗಳು ಬ್ರಹ್ಮಚರ್ಯ ಪಾಲಿಸುವವರನ್ನೂ ಅಲುಗಾಡಿಸುವಂತಹದ್ದಾಗಿದ್ದವು.

ಆದರೆ ಅವನು ಅಪ್ರಮೇಯ. ಕುಮಾರಾನಂದಸ್ವಾಮಿಗಳ ಶಿಷ್ಯ. ಅವನು ಚಲಿಸದ ಶಿಲೆಯಂತಾಗಿದ್ದ ಅವಳ ವಿಷಯದಲ್ಲಿ.

“ಗೊತ್ತಿಲ್ಲ. ನಾವು ಪರಿವ್ರಾಜಕರು. ಆ ದೇವರು ಎಲ್ಲಿಗೆ ಬಾ ಎಂದು ಕರೆಯುತ್ತಾನೋ ಅಲ್ಲಿಗೆ ಹೋಗುವುದಷ್ಟೇ ನಮ್ಮ ಕೆಲಸ” ಎಂದ. ಮೇಲೆ ತನ್ನ ತೋರುಬೆರಳನ್ನು ತೋರಿಸಿ.

ಓಹೋ! ಅಂದರೆ ಆ ಮೂರು ವಿಗ್ರಹಗಳನ್ನು ಹೊತ್ತುಕೊಂಡು ಭಾರತದರ್ಶನ ಮಾಡುವ ಇರಾದೆ ಇದೆಯೋ ಏನೋ ಈ ಸ್ವಾಮಿಗೆ ಎಂದುಕೊಂಡಳು.

ಅಷ್ಟರಲ್ಲಿ ಅಲ್ಲಿಗೆ ವೇಗವಾಗಿ ಬಂದಿದ್ದ ‍ಶ್ಯಾಮ್.‌

ಅಪ್ಪುವಿಗೆ ಈ ಹೆಣ್ಣಿನ ನೈಜಸ್ವರೂಪ ಪರಿಚಯಿಸುವ ಧಾವಂತವಿತ್ತು ಅವನ ನಡೆಯಲ್ಲಿ.

ಆದರೆ ಸ್ವಾಮಿ ಅವಳತ್ತ ನೋಡಿಯೂ ಚಲಿಸಿಲ್ಲವೆಂದು ಅನುಭವಿಯಾದ ಅವನು ಅರಿತುಕೊಂಡ.

ಆದರೆ ಅವನ ಮನದಲ್ಲಿ ಒಂದೇ ಒಂದು ನಿರ್ಧಾರವಿತ್ತು.

ಈ ಸ್ವಾಮಿಯನ್ನು ತಾನು ಕಾಪಾಡಬೇಕು. ಈತ ನಿಜವಾಗಿಯೂ ಒಳ್ಳೆಯವನು.

ಇವನ ಆ ದುಷ್ಟ ಶಿಷ್ಯನ ಬಗ್ಗೆ ಸ್ವಾಮಿಗೆ ಹೇಳಬೇಕು.

“ಸ್ವಾಮೀ… ಮುಂದಿನ ಪ್ರಯಾಣ ಎಲ್ಲಿಗೆ?” ಎಂದ ಶ್ಯಾಮ್.‌ ಅಪ್ರಮೇಯ ಒಬ್ಬನೇ ಇದ್ದ.

“ನಿಮಗೆ ನಿಜವಾಗಿಯೂ ನನ್ನಿಂದ ತೊಂದರೆ ಆಗಿದೆಯಾ?” ಎಂದ ಗಂಭೀರವಾಗಿ ಅಪ್ಪು.

“ಯಾಕೆ ಹಾಗೆ ಕೇಳ್ತೀರಿ?” ಎಂದ ಶ್ಯಾಮ್‌ ಅಚ್ಚರಿ ವ್ಯಕ್ತಪಡಿಸುತ್ತಾ.

“ನನಗೆ ಅವರು ಅಹೋಬಿಲಕ್ಕೆ ಬರಲು ಕಾರಿನ ವ್ಯವಸ್ಥೆ ಮಾಡಿದರೆನಿಸುತ್ತದೆ.   ನೇರವಾಗಿ ಜೋಷಿಮಠದ ನಮ್ಮ ಆಶ್ರಮಕ್ಕೆ ಹೋಗುವ ಮೊದಲು ನನಗೆ ಈಗ ದೇವಿಯ ದರ್ಶನ ಮಾಡಬೇಕೆನ್ನಿಸಿದೆ” ಎಂದ.

“ಯಾವ ದೇವಿ ಸ್ವಾಮೀ?” ಕೇಳಿದ ಶ್ಯಾಮ್.‌ ಅವನ ಕೆಲಸವೇ ಅವರ ರಕ್ಷಣೆಯೆಂದು ಅವರಿಗೆ ಹೇಳಲಾರದಾದ. ಪಾಪ! ಈ ಸ್ವಾಮಿಗೆ ತನ್ನ ಬೆನ್ನ ಹಿಂದೆಯೇ ಇರುವ ವಿಪತ್ತಿನ ಬಗ್ಗೆ ಅರಿವಿದೆಯೋ ಇಲ್ಲವೋ…

“ಮಹಾಲಕ್ಷ್ಮಿ!” ಎಂದ ಅಪ್ರಮೇಯ.

“ಎಲ್ಲಿ? ಕೊಲ್ಹಾಪುರ?” ಕೇಳಿದ ಶ್ಯಾಮ್‌ ತನ್ನ ಮೊಬೈಲ್‌ ಓಪನ್‌ ಮಾಡಿ.

“ಹೌದು. ನಾನು ಇಲ್ಲಿಂದ ಬೇರೆ ವಾಹನ ಹಿಡೀತೇನೆ. ನೀವು ವಿಶಾಖಪಟ್ಟಣಂಗೆ ಹೋಗ್ಬನ್ನಿ” ಎಂದ ಅಪ್ಪು.

ಮೊಬೈಲ್‌ ಮುಚ್ಚಿಟ್ಟು ಅಪ್ಪುವನ್ನೇ ಸೀರಿಯಸ್ಸಾಗಿ ನೋಡುತ್ತಾ, “ಸ್ವಾಮೀ, ನಿಮ್ಮನ್ನು ನಿಮ್ಮ ಆಶ್ರಮಕ್ಕೆ ತಲುಪಿಸುವವರೆಗೂ ಜೊತೆಯಲ್ಲೇ ಇದ್ದು ಅವರೆಲ್ಲಿ ಹೋಗ್ಬೇಕೋ ಅಲ್ಲೆಲ್ಲಾ ಕರಕೊಂಡು ಹೋಗಿ ಅಂದಿದ್ದಾರೆ” ಎಂದ ಶ್ಯಾಮ್.‌

ದೇವರಿಗೆ ಮನದಲ್ಲೇ ಕೃತಜ್ಞತೆ ಅರ್ಪಿಸಿದ ಅಪ್ಪು “ಹಾಗಾದರೆ ನಡೆಯಿರಿ” ಎಂದು ಹೇಳಿ ತನ್ನ ನಾಲ್ವರು ಶಿಷ್ಯರನ್ನೂ ಕರೆದ.

ಇಬ್ಬರು ಸಂತೋಷಗೊಂಡರೂ ಇನ್ನಿಬ್ಬರಿಗೆ ಈ ಹೊಸ ಪ್ರವಾಸ ಇರುಸುಮುರಿಸು ತಂದಿತು.

“ಹದಿಮೂರು ಗಂಟೆಗಳಿಗೂ ಹೆಚ್ಚಿನ ಪ್ರಯಾಣ ಇದೆ. ಹೊರಡೋಣ” ಎಂದ ಶ್ಯಾಮ್‌ ಡ್ರೈವರ್‌ ಸೀಟಲ್ಲಿ ಕೂತು.

ಎಲ್ಲರೂ ಕುಳಿತೊಡನೆ ಕಾರು ಕೊಲ್ಹಾಪುರದತ್ತ ಧಾವಿಸತೊಡಗಿತು.

ತನ್ನ ಬಾಸ್‌ ನಾಯಕ್‌ಗೆ ಫೋನ್‌ ಮಾಡಿದಳು ನೀಲಂ.

“ಅವನೆಲ್ಲಿ ಹೋಗ್ತಾನೋ ಅಲ್ಲೆಲ್ಲೋ ಹೋಗು. ಈ ಸಲ ಎಚ್ಚರಿಕೆಯಿಂದ ಇರು. ನಿನ್ನನ್ನು ಅವನು ನೋಡಿರೋದ್ರಿಂದ ಅವನ ಹಿಂದೆ ಮತ್ತೆ ಹೋದರೆ ಅನುಮಾನ ಬರಬಹುದು ಅವನಿಗೆ” ಎಂದ ನಾಯಕ್.‌

“ಯೋಚಿಸ್ಬೇಡಿ ಮಿ.ನಾಯಕ್.‌ ನನಗೆ ನನ್ನ ಕೆಲಸ ಗೊತ್ತಿದೆ. ವಿಗ್ರಹಗಳನ್ನು ತರ್ತೇನೆ. ಸ್ವಾಮಿಯನ್ನು ಹಿಡಿದು ಹಾಕುತ್ತೇನೆ, ಡೆಡ್‌ ಆರ್‌ ಅಲೈವ್!”‌ ಎಂದಳು.

(ಸಶೇಷ)

ಯತಿರಾಜ್ ವೀರಾಂಬುಧಿ

Related post

Leave a Reply

Your email address will not be published. Required fields are marked *