ಹಿಂದಿನ ಸಂಚಿಕೆಯಿಂದ…
ಅಪ್ರಮೇಯ ಅಹೋಬಿಲಂ ನಲ್ಲಿನ ನರಸಿಂಹ ದೇವರ ಮೂರ್ತಿಗಳನ್ನು ನೋಡಿ ವಿಸ್ಮಯನಾಗಿದ್ದಾಗ ನಾಯಕ್ ನ ಆದೇಶದಂತೆ ನೀಲಾಂಬರಿ ಅಪ್ಪುವನ್ನು ಚಂಚಲಗೊಳಿಸಲು ಪ್ರಯತ್ನಿಸುತ್ತಾಳೇ ಆದರೆ ಪಾಲಿಸುವುದಿಲ್ಲ. ಆದರೆ ಅಪ್ರಮೇಯನಿಗೆ ಇವಳ ವಿಗ್ರಹ ಕಡಿಯುವ ಹುನ್ನಾರ ಬಹು ಬೇಗ ಅರ್ಥವಾಗುತ್ತದೆ. ಕೊಲ್ಲಾಪುರದ ಮಹಾಲಕ್ಷ್ಮಿಯ ದರ್ಶನಕ್ಕೆ ಅಪ್ರಮೇಯ ಪ್ರಯಾಣಿಸುತ್ತಾನೆ. ಮುಂದೆ…
—ಹದಿನೈದು–
ಸುಮಾರು ಎರಡೂವರೆ ಗಂಟೆ ಪ್ರಯಾಣ ಮಾಡಿ ಕರ್ನೂಲು ತಲುಪಿದ್ದರು.
ಕಳ್ಳ ಶಿಷ್ಯನಿಗೆ ಇದೊಂದು ಶಾಪದಂತಿತ್ತು. ಇದೆಂತಹ ಬೇಡದ ಉಪದ್ವ್ಯಾಪ! ನೇರವಾಗಿ ಆಶ್ರಮದ ಕಡೆಗೆ ಹೋಗಿದ್ದರೆ ಎಲ್ಲಾದರೂ ಆ ವಿಗ್ರಹಗಳನ್ನು ಅಪಹರಿಸಬಹುದಿತ್ತು. ಈ ಸುತ್ತುಬಳಸಿನ ದಾರಿಗಳಿಗೆಲ್ಲಾ ನಾಯಕ್‌ನ ಕಡೆಯವರನ್ನು ಬರಹೇಳುವುದು ಕಷ್ಟವಾದ ಕೆಲಸವಾಗಿತ್ತು.
ಹಾಗೆಂದು ಅವನು ಯಾರಿಗೂ ಏನೂ ಹೇಳಲಾರ. ಯಾರನ್ನೂ ಏನೂ ಕೇಳಲಾರದಂತಹ ಪರಿಸ್ಥಿತಿ.
ಇನ್ನೊಬ್ಬ ಶಿಷ್ಯ ನಿಜಕ್ಕೂ ಕೆಟ್ಟ ಬುದ್ಧಿ ಇರಲಿಲ್ಲ. ಅವನಿಗೆ ಮೂರು ವಿಗ್ರಹಗಳಿರುವ ವಿಷಯ ತಿಳಿದಾಗಿನಿಂದ ಅವನ್ನು ಹೇಗಾದರೂ ಲಪಟಾಯಿಸಿ ಯಾರಾದರೂ ಆಸಕ್ತರಿಗೆ ಮಾರಿ ಹಣ ಮಾಡಿಕೊಳ್ಳುವ ಅಭಿಲಾಷೆಯಿತ್ತು. ಅವನು ಇಲ್ಲಿ ಶಿಷ್ಯವೃತ್ತಿ ಪಡೆಯುವ ಮೊದಲು ತನ್ನ ಅಮ್ಮ, ಅಮ್ಮ, ಮೂವರು ತಂಗಿಯರು ಇವರೆಲ್ಲರನ್ನೂ ಹೇಗೆ ಸಾಕಬಲ್ಲೆನೆಂದು ಒದ್ದಾಡುತ್ತಿದ್ದ. ಒಂದಿಷ್ಟು ಹಣ ಶಿಷ್ಯವೃತ್ತಿಯಿಂದ ಬಂದದ್ದರಲ್ಲಿ ಸ್ವಲ್ಪ ಉಳಿಸಿಕೊಂಡು ಉಳಿದದ್ದು ಮನೆಗೆ ಕಳಿಸುತ್ತಿದ್ದ. ಆದರೆ ರಾವಣನ ಹೊಟ್ಟೆಗೆ ಅರೆಕಾಸು ಮಜ್ಜಿಗೆಯಂತೆ… ಅಪ್ಪನ ಕೆಲಸವೂ ಬಹಳ ಸಂಬಳ ಕೊಡುವಂತಹದ್ದಲ್ಲ. ಹೆಣ್ಣು ಮಕ್ಕಳು ದುಡಿಯುವುದು ಅವನ ತಂದೆಗೆ ಇಷ್ಟವಿರಲಿಲ್ಲ. ಡಿಮ್ಯಾಂಡ್ ಜಾಸ್ತಿ, ಸಪ್ಲೈ ಕಡಿಮೆ ಆದಾಗ ಅನೇಕ ದುಷ್ಟ ಆಲೋಚನೆಗಳೂ ಮನಸ್ಸಿಗೆ ಬರುತ್ತವೆ. ಯಾರು ಅವನ್ನು ಅತಿಕ್ರಮಿಸುವರೋ ಅವರು ಗೆಲ್ಲುತ್ತಾರೆ. ಈ ಗ್ಯಾಪ್ ಕಡಿಮೆ ಮಾಡಲು ಅಡ್ಡದಾರಿ ಹಿಡಿದವರು ಮೊದಲು ಗೆದ್ದಂತೆ ಅನಿಸಿದರೂ ಬಹಳವೇ ವೇಗವಾಗಿ ನೆಲಕಚ್ಚುತ್ತಾರೆ.
ಈ ವಿಷಯವನ್ನು ಅರಿಯುವಷ್ಟು ಜಾಣನಲ್ಲ ಈ ಶಿಷ್ಯ. ಗುರುಗಳು ಹೇಳಿಕೊಟ್ಟ, ಗುರುಗಳು ಕಲಿ ಎಂದ ದೇವರ ಹಾಡುಗಳನ್ನು ಕಲಿತಿದ್ದ ಅಷ್ಟೇ.
ಕರ್ನೂಲಿನಲ್ಲಿ ಡ್ರೈವರ್ ಶ್ಯಾಮ್ ಹೊಟೇಲ್‌ಗೆ ಹೋಗಿ ಒಂದು ಫ್ಲಾಸ್ಕ್‌ನಲ್ಲಿ ಹಾಲು ತಂದ. ಶಿಷ್ಯರಿಬ್ಬರು ಹೋಗಿ ಹಣ್ಣುಗಳನ್ನು ತಂದುಕೊಟ್ಟು ತಾವು ಊಟಕ್ಕೆ ಹೊಟೇಲ್‌ಗೆ ಹೋದರು. ಕಳ್ಳ ಶಿಷ್ಯ ಮತ್ತೆ ನಾಯಕ್‌ನ ಕಡೆಯವರಿಗೆ ಫೋನ್ ಮಾಡಿದ್ದ. ಅವನಿಗೆ ತಿಳಿಯದ ವಿಷಯವೆಂದರೆ ಡ್ರೈವರ್ ಶ್ಯಾಮ್ ಈ ಕರೆಗಳನ್ನು ಕೇಳಿಸಿಕೊಳ್ಳುವುದಲ್ಲದೇ ಮುಂದೆ ಬೇಕಾಗುತ್ತದೆಂದು ಧ್ವನಿ ಮುದ್ರಿಸಿಕೊಳ್ಳುತ್ತಿದ್ದ.
ಇತ್ತ ನೀಲಂ ಫಿಲಿಪ್‌ಗೆ ಫೋನ್ ಮಾಡಿದಳು.
“ಏನಾಯ್ತು?” ಎಂದ ಫಿಲಿಪ್. ಅವನಿಗೆ ಹೈದರಾಬಾದ್‌ನಲ್ಲಿ ಹೊಟೇಲ್‌ನಲ್ಲಿ ಕುಳಿತು ಬೋರ್ ಆಗುತ್ತಿತ್ತು.
ಅವನಿಗೆ ಯಾವಾಗ ರಂಗಕ್ಕಿಳಿದೇನೋ, ಯಾವಾಗ ಆ ಸ್ವಾಮಿಯನ್ನು ಫಿನಿಷ್ ಮಾಡಿ ವಿಗ್ರಹಗಳನ್ನು ಕದ್ದೊಯ್ಯುವೆನೋ, ಯಾವಾಗ ಅವನ್ನು ಮಾರಿ ನಾಯಕ್‌ಗೆ ಅವನು ಕೇಳಿದಷ್ಟು ಕೊಟ್ಟು ಹೆಚ್ಚಿನ ಲಾಭ ಮಾಡಿಕೊಳ್ಳುವೆನೋ ಎಂಬ ತಹತಹವಿತ್ತು. ಆದರೆ ತಾನು ಬಿಳಿಚರ್ಮದವನಾದ್ದರಿಂದ, ಎತ್ತರವಾಗಿಯೂ ಇದ್ದಿದ್ದರಿಂದ ಬೇಗನೆ ಗುರುತಿಸಲ್ಪಡುವೆನೆಂಬ ಚಿಂತೆ ಇತ್ತಷ್ಟೇ.
ಜೊತೆಗೆ ನಾಯಕ್‌ನ ಶಿಷ್ಯ ಒಬ್ಬ ಇದ್ದಾನೆ, ಅವನ ಬಳಿ ವಿಷಯ ಸಂಗ್ರಹಿಸಬಹುದು. ನೀಲಂ ಕೂಡ ಬರಲಿ. ಇಬ್ಬರೂ ಜೋಡಿಗಳಂತೆ ಓಡಾಡಬಹುದು ಎಂದು ಆಲೋಚಿಸಿ ನೀಲಂಗೆ ಫೋನ್ ಮಾಡಿದ.
ಫಿಲಿಪ್ ಸ್ಟೋನ್‌ಬ್ರಿಡ್ಜ್ ಹೇಳಿದುದನ್ನು ಗಮನವಿಟ್ಟು ಕೇಳಿದಳು ಅವಳು.
“ಸರಿ, ನಾನು ಮೇಕಪ್ ಕಿಟ್ ತರ್ತೀನಿ. ನೀವು ಕೊಲ್ಹಾಪುರ್ ತಲುಪಿ. ಒಂದಿಷ್ಟು ಇಂಡಿಯನ್ ಡ್ರೆಸಸ್ ಲೈಕ್ ಪಠಾಣ್ ಡ್ರೆಸ್ ತಗೊಂಡು ಬನ್ನಿ” ಎಂದಳು ನೀಲಂ
ಅವನು ಅತ್ತ ಹೊರಡಲು ತಯಾರಾಗುತ್ತಿದ್ದಂತೆ ಅಪ್ಪು ಮತ್ತು ಪಾರ್ಟಿ ಮುಂದೆ ಮುಂದೆ ಸಾಗುತ್ತಿದ್ದರು.
ಸುಮಾರು ಹದಿನಾಲ್ಕು ಗಂಟೆಗಳ ದೀರ್ಘ ಪ್ರಯಾಣದ ನಂತರ ಅವರು ಕೊಲ್ಹಾಪುರ್ ತಲುಪಿದರು.
ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೋದ ಅಪ್ರಮೇಯ ಭಕ್ತಿಪರವಶನಾದ.
“ನಮಸ್ತೇಽಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ|
ಶಂಖಚಕ್ರಗದಾಹಸ್ತೇ ಮಹಾಲಕ್ಷ್ಮಿ ನಮೋಽಸ್ತುತೇ||” ಎಂದು ಸ್ತುತಿಸಿದ.
ಅವನ ಸುಶ್ರಾವ್ಯವಾದ ಕಂಠದಿಂದ ಹೊರಹೊಮ್ಮಿದ ಶ್ಲೋಕವನ್ನು ಕೇಳಿ ಬಹಳ ಜನ ಭಕ್ತರು ಅವನತ್ತ ತಿರುಗಿದರು.
“ಸ್ವಾಮೀ, ನೀವು ಪ್ರವಚನ ಮಾಡುವಿರಾ?” ಎಂದು ಕೇಳಿದನೊಬ್ಬ ಭಕ್ತ.
“ಹೂಂ” ಎಂದ ಅಪ್ಪು.
ಅವನಿಗೆ ತಾನು ಹೋಗುವ ಊರುಗಳಲ್ಲೆಲ್ಲಾ ಒಂದಿಷ್ಟು ಧರ್ಮ, ದೇವರ ಹೆಸರುಗಳನ್ನು ಹರಡಬೇಕೆಂಬ ಅಭಿಲಾಷೆ ಇದ್ದೇ ಇತ್ತು. ಅದಕ್ಕೇ ಅವನು ಒಂದು ಅವಕಾಶವನ್ನೂ ಬಿಡದೇ ಉಪಯೋಗಿಸಿಕೊಂಡ.
“ನನಗೆ ಮರಾಠಿ ಬರುವುದಿಲ್ಲ. ಹಿಂದಿಯಲ್ಲಿ ಮಾತಾಡಬಲ್ಲೆ” ಎಂದ ಅಪ್ಪು.
“ಅದಕ್ಕೇನಂತೆ. ದೇವರ ಹೆಸರು ಹೇಳೋಕ್ಕೆ ಯಾವ ಭಾಷೆಯಾದರೇನು?” ಎಂದಳು ಅಲ್ಲಿದ್ದ ಮತ್ತೊಬ್ಬ ಭಕ್ತೆ.
“ನಿಮ್ಮೂರಿನಲ್ಲಿ ನಾನು ಲಕ್ಷ್ಮಿಯ ಬಗ್ಗೆಯೇ ಮಾತಾಡಲು ಇಷ್ಟಪಡುತ್ತೇನೆ” ಎಂದು ಹೇಳಿ
“ಪಾಲಿಸೆ ಎನ್ನ ಶ್ರೀ ಮಹಾಲಕ್ಷ್ಮಿ ಪಾಲಿಸು ಎನ್ನನು ಪಾಲಾಬ್ದಿ ಸಂಜಾತೇ” ಎಂದು ಹಾಡಿದ.
“ಮಹಾಲಕ್ಷ್ಮಿ ಎನ್ನುವುದು ಒಂದು ಶಕ್ತಿ. ಎಲ್ಲರೂ ತಮಗೆ ಬೇಕು ಎಂದು ಬಯಸುವ ಲಕ್ಷ್ಮಿ, ಅವಳಿಗೆ ಮನಸ್ಸು ಬಂದವರೊಂದಿಗೆ ಇರುತ್ತಾಳೆ. ಚಂಚಲಲಕ್ಷ್ಮಿ ಎಂಬ ಒಂದು ಹೆಸರೂ ಅವಳಿಗಿದೆ.
ಶ್ರೀವಿಷ್ಣುರುರುಸ್ಥಿತ ಎಂದರೆ ನಾರಾಯಣದ ಎದೆಯಲ್ಲಿ ವಾಸಿಸುವಳು ಎನ್ನುತ್ತಾರೆ ಭಕ್ತರು. ಒಮ್ಮೆ ಪಾದದಲ್ಲಿ ಕಣ್ಣಿದ್ದ ಭೃಗು ಮಹರ್ಷಿಯ ಗರ್ವಭಂಗ ಮಾಡಲು ನಾರಾಯಣ ತನ್ನ ಎದೆಗೆ ಅವನಿಂದ ಒದೆಸಿಕೊಂಡು, ಅವನ ಪಾದವನ್ನು ಮುಟ್ಟುವ ನೆಪದಲ್ಲಿ ಆ ಕಣ್ಣನ್ನೂ, ಅವನ ಗರ್ವವನ್ನೂ ಕಿತ್ತು ಹಾಕಿದ.
ಆದರೆ ಭೃಗು ಎದೆಗೆ ಒದ್ದನೆಂಬುದನ್ನೇ ನಿಮಿತ್ತ ಮಾಡಿಕೊಂಡು ಕೊಲ್ಹಾಪುರಕ್ಕೆ ಬಂದು ತಪಸ್ಸಿಗೆ ಕುಳಿತು ಭೂಲೋಕದ ಭಕುತರಿಗೆ ವಸುಪ್ರದಳಾದಳು ಮಹಾಲಕ್ಷ್ಮಿ.
ಪುರಂದರದಾಸರು ಕರ್ನಾಟಕದ ಮಹಾನ್ ವಿಠಲನ ಭಕ್ತರು. ಮಹಾರಾಷ್ಟ್ರದ ಪುರಂದರ ವಿಠಲನನ್ನು ಅವರ ಎಲ್ಲ ಕೃತಿಗಳಲ್ಲಿ ನೆನೆಯುತ್ತಾರೆ.
ಅವರ ಎರಡು ದೇವರನಾಮಗಳ ಬಗ್ಗೆ ಒಂದಿಷ್ಟು ಮಾತಾಡಬಹುದೇ?” ಕೇಳಿದ ವಿನಮ್ರನಾಗಿ.
“ನಿಮ್ಮ ಮಾತಾಡುವ ರೀತಿಯೇ ನಮಗೆ ಇಷ್ಟವಾಗಿದೆ ಸ್ವಾಮೀ. ಮಾತಾಡಿ. ದಾಸರ ಪದ ನಮಗೆಲ್ಲ ಹೊಸದೇ. ನಮಗಿಲ್ಲಿ ಅಭಂಗ್‌ಗಳ ಪರಿಚಯ ಹೆಚ್ಚಾಗಿದೆ” ಎಂದನೊಬ್ಬ ಆಸ್ತಿಕ ಮಹಾಶಯ.
“ಅಭಂಗ್! ಹ್ಞಾಂ… ಮಹಾರಾಷ್ಟ್ರದ ಅತ್ಯಂತ ಭಕ್ತಿಭಾವಪೂರ್ಣ ಸಂಗೀತ. ನನಗೆ ತಿಳಿದಿರುವ ಮಟ್ಟಿಗೆ ದೇವರ ಉತ್ಸವಮೂರ್ತಿಯನ್ನು ಊರಿಂದೂರಿಗೆ ಕೊಂಡೊಯ್ಯುವಾಗ ಮಾರ್ಗಾಯಾಸ ಪರಿಹಾರಕ್ಕೆಂದು ಹಾಡುತ್ತಿದ್ದರೆಂದು ಕೇಳಿದ್ದೇನೆ. ಸಂತ ನಾಮದೇವ, ಸಂತ ಜ್ಞಾನದೇವ, ಸಂತ ತುಕಾರಾಂ ಒಬ್ಬರೇ ಇಬ್ಬರೇ? ಅನೇಕಾನೇಕ ಅದ್ಭುತವಾಗಿ ಹಾಡಿದ ಭಕ್ತರು. ಸಂತ ಜಾನಾಬಾಯಿ ಎಂಬ ಮಹಿಳೆ ಸಂತ ನಾಮದೇವರ ಮನೆಯಲ್ಲಿ ಊಳಿಗದಲ್ಲಿದ್ದಾಕೆ ಒಂದು ಅದ್ಭುತ ಅಭಂಗ್ ಹಾಡಿದ್ದಾಳೆ” ಎಂದು ಹೇಳಿ ತುಲಸೀದಾಸ್ ಕಡೆಗೆ ನೋಡಿದ.
ಅವನು “ದಳಿತಾ ಕಾಂಡಿತಾ ತುಜ ಗಾಯೀನ ಅನಂತಾ ನ ವಿಸಂಬೇ ಕ್ಷಣಭರೀ ತುಝೇ ನಾಮ ಗಾ ಮುರಾರೀ” ಎಂದು ಹಾಡಿದ.
ಅವನ ಹಾಡು ಮುಗಿದಾಗ ಎಲ್ಲರೂ ಮಂತ್ರಮುಗ್ಧರಾಗಿದ್ದರು.
ಅಪ್ಪು ಮಾತು ಮುಂದುವರೆಸಿದ. “ನೋಡಿ, ಜ್ಞಾನವೆನ್ನುವುದು ಸಾಗರದಂತೆ. ಅಥವಾ ಅಗರಬತ್ತಿಯ ಸುವಾಸನಾಯುಕ್ತ ಧೂಮ್ರದಂತೆ. ಸಂತರ ನಡುವೆ ಇದ್ದ ಆಕೆಗೂ ಸರಸ್ವತಿ ಒಲಿದಿದ್ದಳು. ಅವಳೂ ತನ್ನ ಪ್ರೀತಿಯ ಮುರಾರಿ ಅಥವಾ ಜಗನ್ನಾಟಕ ಸೂತ್ರಧಾರಿ ಶ್ರೀಕೃಷ್ಣನ ಬಗ್ಗೆ ಅಭಂಗ್ ರಚಿಸಿದಳು” ಎಂದು ಹೇಳಿದ ನಂತರ, “ಇದೇ ಮುರಾರಿಯ ಬಗ್ಗೆಯೇ ಇದೆ ಪುರಂದರದಾಸರ ಕೀರ್ತನೆ. ಈ ಕೀರ್ತನೆಯ ವೈಶಿಷ್ಟ್ಯವೆಂದರೆ ಇದರಲ್ಲಿ ಶ್ರೀ ಮಹಾಲಕ್ಷ್ಮಿಗೆ ವರ ಹುಡುಕಿದ್ದಾರೆ ದಾಸರು. ಒಬ್ಬನಲ್ಲ, ಅನೇಕ ಜನ. ಅವರಲ್ಲಿ ಅವಳಾರಿಗೆ ವಧುವಾಗಬೇಕೆಂದು ಕೇಳುತ್ತಿದ್ದಾರೆ!
ಕ್ಷೀರಾಬ್ದಿ ಕನ್ನಿಕೆ ಶ್ರೀ ಮಹಾಲಕ್ಷ್ಮಿ ಯಾರಿಗೆ ವಧುವಾಗುವೆ…” ಎಂದು ಹಾಡಿ ನಂತರ ಮಾತು ಮುಂದುವರೆಸಿ, “ಶರಧಿ ಬಂಧನ ರಾಮಚಂದ್ರಮೂರ್ತಿಗೋ, ಪರಮಾತ್ಮ ಅನಂತ ಪದ್ಮನಾಭಗೋ ಸರಸಿಜನಾಭ ಶ್ರೀ ಜನಾರ್ದನ ಮೂರ್ತಿಗೋ ಉಭಯ ಕಾವೇರಿ ರಂಗ ಪಟ್ಟಣದರಸಗೋ… ಹೌದು ಸೇತುವೆ ಕಟ್ಟಿದ ಶ್ರೀರಾಮ ನಿನ್ನ ಪತಿಯಾಗಬೇಕೇ, ಹೊಕ್ಕಳಿನಲ್ಲಿ ಕಮಲವನ್ನೂ, ಅದರೊಳಗೆ ಬ್ರಹ್ಮನನ್ನೂ ಹೊಂದಿದ ಪರಮಾತ್ಮ ಅನಂತ ಪದ್ಮನಾಭ ನಿನ್ನ ಗಂಡನಾಗಬೇಕೇ ಅಥವಾ ಜನಾರ್ದನನೇ” ಎಂದು ಹೇಳಿ, “ಕಾವೇರಿ ನಾರಾಯಣನನ್ನು ಕುರಿತು ತಪಸ್ಸು ಮಾಡಿ ತನ್ನಲ್ಲಿ ನೀನು ಹುಟ್ಟಬೇಕು ಎಂಬ ವರವನ್ನು ಕೇಳಿದಳಂತೆ. ಅದಕ್ಕಾಗಿ ನಾರಾಯಣ ರಂಗನಾಥನ ರೂಪದಲ್ಲಿ ಶ್ರೀರಂಗಪಟ್ಟಣದಲ್ಲಿ, ಶಿವನಸಮುದ್ರದಲ್ಲಿ ಮತ್ತು ಶ್ರೀರಂಗಂನಲ್ಲಿ ಕಾವೇರಿ ನದಿಯ ನಡುವೆ ದ್ವೀಪಗಳಲ್ಲಿದ್ದಾನೆ. ಎರಡೂ ಕಡೆ ಹರಿಯುವ ಕಾವೇರಿಯ ನಡುವೆ ಇರುವನಾದ್ದರಿಂದ ಉಭಯ ಕಾವೇರಿ ರಂಗ ಎಂದು ಆ ನಾರಾಯಣನಿಗೆ ಹೆಸರು. ಬೇಲೂರ ಚೆನ್ನಿಗರಾಯ, ಉಡುಪಿಯ ಶ್ರೀಕೃಷ್ಣ, ಪಾಂಡುರಂಗ ವಿಠ್ಠಲ, ಬದರಿ ನಾರಾಯಣ” ಎಂದು ಹೇಳಿ ನಡುನಡುವೆ ಕೀರ್ತನೆ ಹಾಡಿ ವಿವರಿಸುತ್ತಾ ಹೋದ. ಜನರು ಅವನ ಹಾಡನ್ನೂ, ಅವನ ವಿವರಣೆಯನ್ನೂ ಇಷ್ಟದಿಂದ ಕೇಳಲಾರಂಭಿಸಿದ್ದರು.
“ಬಿಂದು ಮಾಧವರಾಯ, ಪುರುಷೋತ್ತಮ, ನಿತ್ಯಮಂಗಳ ದಾಯಕ, ಶ್ರೀ ವೇಂಕಟೇಶ…ಕಂಚಿಯ ವರದರಾಜ, ಶ್ರೀಮುಷ್ಣದ ಆದಿವರಾಹ, ಶ್ರೀಮನ್ನಾರಾಯಣ, ಅಳಗಿರೀಶ… ಸಾರಂಗಪಾಣಿ, ಶ್ರೀನಿವಾಸ, ರಾಜಗೋಪಾಲಮೂರ್ತಿ ಎಂದು ಎಲ್ಲರ ಬಗ್ಗೆಯೂ ಹೇಳಿ ಕೊನೆಗೆ ತಮ್ಮ ನಾಮಾಂಕಿತ ಪುರಂದರ ವಿಠ್ಠಲ ರಾಯಗೋ ಯಾರಿಗೆ ವಧುವಾಗುವೇ” ಎಂದು ಹಾಡಿ ಮುಗಿಸಿದ.
ಎಲ್ಲರೂ ಚಪ್ಪಾಳೆ ತಟ್ಟಿದರು. ನಂತರ ಒಬ್ಬ ಎದ್ದು ನಿಂತು, “ನೀವು ಹಾಡಿದ್ದು ಅಮೋಘವಾಗಿತ್ತು ಸ್ವಾಮೀಜೀ. ಆದರೆ ಸ್ವಲ್ಪ ಸ್ವಲ್ಪ ದೂರಕ್ಕೆ ಬೇರೆ ಬೇರೆ ರೀತಿ ಕೇಳಿಸಿತಲ್ಲಾ ಯಾಕೆ?” ಎಂದ.
“ಸಂಗೀತದಲ್ಲಿ ರಾಗ, ತಾನ ಮತ್ತು ಪಲ್ಲವಿ ಎಂಬ ಮೂರು ಭಾಗಗಳಿರುತ್ತವೆ. ರಾಗಗಳು ಅನೇಕ. ಉದಾಹರಣೆಗೆ ನಾನು ಈ ಹಾಡಿನ ಚರಣವನ್ನು ಕುರಿಂಜಿ ರಾಗದಲ್ಲೂ, ಆಮೇಲೆ ಯಮನ್ ಕಲ್ಯಾಣಿ, ದರ್ಬಾರಿ ಕಾನಡ, ಸಿಂಧು ಭೈರವಿ ಮತ್ತು ಮಣಿರಂಗು ಎನ್ನುವ ರಾಗಗಳಲ್ಲ ಹಾಡಿದೆ. ಇವು ನಮ್ಮ ಜೀವನದ ಅನೇಕ ರಾಗಗಳನ್ನು ಪ್ರತಿನಿಧಿಸುತ್ತವೆ. ಕೆಲವು ವಿಷಯಗಳಿಂದ, ಕೆಲವು ಸನ್ನಿವೇಶಗಳಿಂದ ನಾವು ಸಂತಸ ಪಡುತ್ತೇವೆ, ದುಃಖಗೊಳ್ಳುತ್ತೇವೆ, ಕೋಪಗೊಳ್ಳುತ್ತೇವೆ… ಹೀಗೆ ಎಲ್ಲವೂ ರಾಗಗಳು. ರಾಗವನ್ನು ಭಾವನೆ ಎಂದಿದ್ದಾನೆ ಶ್ರೀಕೃಷ್ಣ ಗೀತೆಯಲ್ಲಿ” ಎಂದು ಹೇಳಿ ಸಾಂಖ್ಯ ಯೋಗದ ಕೆಲವು ಶ್ಲೋಕಗಳನ್ನು ವಿವರಿಸಿದ.
ಭಕ್ತರು ಬಿಡಲಾರದೇ ಅವನನ್ನು ಬಿಟ್ಟರು.
“ಇನ್ನೊಂದು ವಿಶಿಷ್ಟ ಹಾಡಿದೆ. ಲಕ್ಷ್ಮಿಯನ್ನು ಕುರಿತು ದಾಸರದು. ನೀವು ಅದನ್ನು ಪಂತುವರಾಳಿ ರಾಗದಲ್ಲಿ ಹಾಡುತ್ತೀರಿ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಶ್ರೀರಾಗ ಅಥವಾ ಮಧ್ಯಮಾವತಿಯಲ್ಲಿ ಹಾಡುತ್ತೇವೆ” ಎಂದು ಹೇಳಿ ತನ್ನ ಶಿಷ್ಯ ಪುರಂದರದಾಸ್‌ನತ್ತ ನೋಡಿದ.
“ಭಾಗ್ಯದಾ ಲಕ್ಷ್ಮೀ ಬಾರಮ್ಮ ನಮ್ಮಮ್ಮ ನೀ ಸೌ ಭಾಗ್ಯಾದ ಲಕ್ಷ್ಮೀ ಬಾರಮ್ಮ” ಎಂದು ಮಧುರವಾಗಿ ಹಾಡಿದ ಪುರಂದರದಾಸ್.
“ಸರ್ವ ಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರ್ಯಮ್ಬಕೇ ಗೌರೀ ನಾರಾಯಣಿ ನಮೋಽಸ್ತುತೇ” ಎಂದು ಅಪ್ಪು ಮತ್ತು ನಾಲ್ವರು ಶಿಷ್ಯರು ಆರಂಭಿಸಿದೊಡನೆ ಅಲ್ಲಿದ್ದ ಎಲ್ಲರೂ ಒಟ್ಟಿಗೇ ಅದನ್ನು ಉಚ್ಚರಿಸಿದರು.
ಮಹಾಲಕ್ಷ್ಮಿಯ ತೀರ್ಥ ಪ್ರಸಾದ ಪಡೆದು ಕೃತಕೃತ್ಯನಾಗಿ ಹೊರಬಂದ ಅಪ್ಪು.
ಇವರು ಕೊಲ್ಹಾಪುರದ ಹೊಟೇಲ್ ಒಂದರಲ್ಲಿ ರೂಮು ಪಡೆದು ಅಂದು ಅಲ್ಲಿಯೇ ಇದ್ದು ಮರುದಿನ ಬೆಳಗ್ಗೆ ಹೊರಡುವುದೆಂದು ನಿರ್ಧಾರವಾಯಿತು.
ಡ್ರೈವರ್ ಶ್ಯಾಮ್ ಅಪ್ಪುವಿನ ಬಳಿಗೆ ಬಂದು “ನಿಮಗೆ ಇನ್ನೂ ಯಾವುದಾದರೂ ಜಾಗ ನೋಡಬೇಕೆಂದಿದೆಯಾ? ಅಥವಾ ಇಲ್ಲಿಂದ ಪುಣೆಗೆ ಡ್ರಾಪ್ ಮಾಡಿದರೆ ಅಲ್ಲಿಂದ ದೆಹಲಿಗೆ ವಿಮಾನದಲ್ಲಿ ಹೋಗಿ ಅಲ್ಲಿಂದ ಜೋಷಿಮಠಕ್ಕೆ ಕಾರಲ್ಲಿ ಹೋಗುವಿರಾ?” ಎಂದ.
“ನನಗೆ ಎಷ್ಟೋ ಸಂತೋಷವಿದೆ ಈ ದರ್ಶನಗಳಿಂದ. ನನಗೆ ಇನ್ನೂ ಅನೇಕ ಜಾಗಗಳನ್ನು ನೋಡುವ ಇಚ್ಛೆ ಇದೆ. ಆದರೆ ನನ್ನ ಕರ್ತವ್ಯ ಒಂದು ನನಗಾಗಿ ಕಾದಿದೆ. ಅದನ್ನು ಮುಗಿಸದೇ ನನಗೆ ನೆಮ್ಮದಿ ಇಲ್ಲ. ನೀವು ಹೇಳಿದಂತೆ ಮಾಡೋಣ” ಎಂದ ಅಪ್ರಮೇಯ.
ಶ್ಯಾಮ್ ಸ್ವಲ್ಪ ಆಲೋಚಿಸಿ, “ಒಂದು ಕೆಲಸ ಮಾಡೋಣ ಸ್ವಾಮಿ. ಹೇಗೂ ನಾನೂ ಉತ್ತರ ಭಾರತಕ್ಕೆ ಬರಬೇಕು. ನನಗೆ ಅಲ್ಲಿ ಕೆಲಸವಿದೆ. ನಿಮ್ಮನ್ನು ಇದೇ ಕಾರಿನಲ್ಲಿ ಕರಕೊಂಡು ಹೋಗಿ ನಿಮ್ಮ ಆಶ್ರಮಕ್ಕೆ ಸುಭದ್ರವಾಗಿ ತಲುಪಿಸುತ್ತೇನೆ” ಎಂದ.
ಅದೇಕೋ ಅವನ ಬಳಿ ತಾನು ಸುರಕ್ಷಿತ ಎಂಬ ಭಾವನೆ ಬಂದಿತು. ಅವನ ಹೆಸರು ಶ್ಯಾಮ್ ಎಂದಾ ಆ ಆಲೋಚನೆ? ಏಕೆಂದರೆ ರಕ್ಷಮಾಂ ಶರಣಾಗತಂ ಎನ್ನುವಂತೆ ಶರಣಾಗತರನ್ನು ರಕ್ಷಿಸುತ್ತಾನೆ ಶ್ಯಾಮ ಶ್ರೀಕೃಷ್ಣ ಶ್ರೀಮನ್ನಾರಾಯಣ. ಅಥವಾ ಬೇರೆ ಯಾವ ಕಾರಣಕ್ಕೆ ಇವನು ತನ್ನನ್ನು ಕರೆದೊಯ್ಯುತ್ತಿದ್ದಾನೆ? ಇದರಿಂದ ಇವನಿಗೇನು ಲಾಭ?
ಹೌದೂ, ಇವನಿಗೆ ನಾನು ಹೇಳಿಯೇ ಇರಲಿಲ್ಲ ತಾನು ಜೋಷಿಮಠದ ತನ್ನ ಆಶ್ರಮಕ್ಕೆ ಹೋಗಬೇಕೆಂದು. ಇವನಿಗೆ ಹೇಗೆ ತಿಳಿಯಿತು?
ಇದೊಂದು ರಹಸ್ಯವಿದ್ದಂತಿದೆ ಎಂದುಕೊಂಡ ಅಪ್ರಮೇಯ.
ಅವನು ಇನ್ನೂ ಬಲು ಮುಖ್ಯವಾದ ರಹಸ್ಯವಾದ ಒಂದು ಕುತಂತ್ರದ ಬಗ್ಗೆ ತಿಳಿದಿಲ್ಲ. ಹೈದರಾಬಾದ್‌ನಿಂದ ದೆಹಲಿಗೆ ವಿಮಾನದಲ್ಲಿ ಒಂದು ಜೋಡಿ ಹೊರಟಿತ್ತು.
ಕಪ್ಪು ಕೂದಲು, ಕಂದು ಬಣ್ಣದ ಎತ್ತರದ ಮನುಷ್ಯ, ಚೂಡಿದಾರ್ ಧರಿಸಿದ ಪಂಜಾಬಿ ಹೆಣ್ಣು. ಆ ಮನುಷ್ಯನ ಕಣ್ಣುಗಳ ಬಣ್ಣ ಮಾತ್ರ ಸಾಗರದ ನೀಲವರ್ಣದ್ದು. ಆ ಹೆಣ್ಣು ಅತ್ಯಂತ ಆಕರ್ಷಕವಾಗಿದ್ದಳು.
ಅವನು ಕಂದು ಬಣ್ಣ ಬಳಿದುಕೊಂಡಿದ್ದ ಶಾರ್ಪ್ ಶೂಟರ್ ಫಿಲಿಪ್ ಮತ್ತು ಅವಳು ನೀಲಾಂಬರಿಯಂತೆ ಅಪ್ಪುವಿಗೆ ಕಾಣಿಸಿಕೊಂಡಿದ್ದ ನೀಲಂ!
ಇಬ್ಬರಿಗೂ ಈಗ ವಿಗ್ರಹಗಳು ಬೇಕೇ ಬೇಕಿದ್ದವು.
ಅದಕ್ಕೇ ಸ್ವಾಮಿ ಅವರಿಗೆ ಬೇಕಿತ್ತು ಡೆಡ್ ಆರ್ ಅಲೈವ್!
ಮುಂದುವರೆಯುವುದು…
ಯತಿರಾಜ್ ವೀರಾಂಬುಧಿ