ಪರಾಭವ ಭಾವನಾ – 18 ಯತಿರಾಜ್ ವೀರಾಂಬುಧಿ

ಹಿಂದಿನ ಸಂಚಿಕೆಯಿಂದ…
ನೆಡೆಯುತ್ತಿರುವ ಬೆಳವಣಿಗೆಗಳನ್ನು ಕಂಡ ಅಪ್ರಮೇಯ ಮಾನಸಿಕವಾಗಿ ಸಾಯಲು ಸಿದ್ದನಾದ. ಶ್ಯಾಮ್ ಗೆ ಕಳ್ಳ ಶಿಷ್ಯ ಜಿ ಪಿ ಎಸ್ ಆನ್ ಮಾಡಿ ಶಾರ್ಪ್ ಶೂಟರ್ ಗೆ ದಾರಿ ತೋರುತಿದ್ದದ್ದು ಗೊತ್ತಾಗಿ ಅಪ್ರಮೇಯನನ್ನು ಕೃಷ್ಣನ ಗುಡಿಯಿಂದ ಹೊರಡಿಸಿಬಿಟ್ಟ. ಅವನಿಗೆ ಗೊತ್ತು ಆ ಶಾರ್ಪ್‌ ಶೂಟರ್‌ ತಮ್ಮ ಬೆನ್ನಟ್ಟುವನೆಂದು. ಈಗ ಅಪ್ರಮೇಯ ಸ್ವಾಮಿಯ ಜೀವ ರಕ್ಷಣೆ ಶ್ಯಾಮ್ ನ ಕೈಯಲ್ಲಿದೆ. ಮುಂದೆ…

–ಹದಿನೆಂಟು–

ನೀಲಂ ತನ್ನ ಕೈಲಿದ್ದ ಮೊಬೈಲ್‌ ನೋಡಿ “ಛೇ, ಇದೇನು ಈ ಶಿಷ್ಯನಿಗೆ ಬುದ್ಧಿಯೇ ಇಲ್ಲ. ಯಾವುದಾದರೂ ನೆಪ ಹೇಳಿ ನಾವು ಬರೋವರೆಗೂ ಅಲ್ಲೇ ಇರಿಸಿಕೋ ಎಂದರೂ ಹೋಗ್ತಾನೇ ಇದಾನಲ್ಲ!” ಎಂದು ಬೇಸರದಿಂದ ಹೇಳಿದಳು.

ಫಿಲಿಪ್‌ ಸುಮ್ಮನೆ ನಕ್ಕ.

ಅವನಿಗೆ ಅಪ್ರಮೇಯನನ್ನು ಕೊಲೆ ಮಾಡುವುದು ಒಂದು ಸವಾಲಾಗಿ ಪರಿಣಮಿಸಿತ್ತು. ಅವನು ಆ ಮೂರ್ತಿಗಳನ್ನು ಎಲ್ಲೂ ಹೊರಗಡೆ ಇಟ್ಟ ಹಾಗಿಲ್ಲ. ಅವನ ಉಡಿಯಲ್ಲೇ ಮುಚ್ಚಿಟ್ಟುಕೊಂಡಿರಬೇಕು ಎಂಬ ವಿಷಯ ಅವನಿಗೆ ಖಚಿತವಾಗಿತ್ತು. ಏಕೆಂದರೆ ಶಿಷ್ಯ ಅವನ ಲಗೇಜಿನಲ್ಲೆಲ್ಲಾ ಹುಡುಕಿ ಮೂರ್ತಿಗಳು ಇಲ್ಲವೆಂದು ನಿರ್ಧರಿಸಿ ನೀಲಂಗೆ ಫೋನ್‌ ಮಾಡಿ ಆ ವಿಷಯ ತಿಳಿಸಿದ್ದ.

ಈ ವಿಷಯವನ್ನು ತಾನು ಕೂಡ ಕೇಳಿಸಿಕೊಂಡಿದ್ದ ಶ್ಯಾಮ್‌ ಕೆಲವು ಕ್ಷಣಗಳ ಕಾಲ ಯೋಚಿಸಿದ. ಇರಬಹುದಾ? ಅವರಲ್ಲಿಯೇ ಮುಚ್ಚಿಟ್ಟುಕೊಂಡಿರಬಹುದಾ? ಮುಚ್ಚಿಟ್ಟುಕೊಳ್ಳಲು ಅಲ್ಲಿ ಅವಕಾಶವಿದೆಯಾ? ಏಕೆಂದರೆ ಅಪ್ರಮೇಯ ಸ್ವಾಮಿಯ ವೇಷವನ್ನೊಮ್ಮೆ ನೆನೆದ.

ಒಂದು ಕೇಸರಿ ಪಂಚೆ, ಮೇಲೆ ಒಂದು ಕೇಸರಿ ಶಲ್ಯ. ಒಳಗೆ ಬಹುಶಃ ಒಂದು ಕೌಪೀನ ಇದ್ದೀತು. ಎಲ್ಲಿ ಬಚ್ಚಿಡಲು ಸಾಧ್ಯ? ಇನ್ನೆರಡು ನಿಮಿಷ ಸ್ವಾಮಿ ಅಪ್ರಮೇಯನ ಚಿತ್ರವನ್ನು ನೆನೆಯಲು ಯತ್ನಿಸಿದ.

ಹ್ಞಾಂ… ಹೌದು! ಅವರು ಶಲ್ಯವನ್ನು ತಮ್ಮ ದೇಹದ ಮೇಲ್ಭಾಗಕ್ಕೆ ಸಂಪೂರ‍್ಣವಾಗಿ ಹೊದ್ದಿರುತ್ತಾರೆ. ಅವರ ಬಲಸೊಂಟದಲ್ಲಿ ಏನೋ ಒಂದು ಚಿಕ್ಕ ಗಂಟು ಇದ್ದಂತೆ ಕಾಣುತ್ತದೆ. ತಾನು ಪಿಸ್ತೂಲನ್ನು ಶರ್ಟ್‌ ಹಾಕಿಕೊಂಡು ಬಲಗಡೆ ತೋಳಿಗೂ ಸೊಂಟಕ್ಕೂ ಮಧ್ಯೆ ಹೋಲ್‌ಸ್ಟರ್‌ನಲ್ಲಿ ಹಾಕಿಕೊಂಡು ಮೇಲೆ ಕೋಟು ಹಾಕಿಕೊಂಡರೂ ಒಂದಿಷ್ಟು ಉಬ್ಬಿರುತ್ತದೆ ಆ ಜಾಗ.

ಸಮಯ ಸಿಕ್ಕಾಗ ಡ್ರೈವರ್‌ ಶ್ಯಾಮ್‌ ಕೂಡ ರೂಮಿನಲ್ಲಿದ್ದ ಅಪ್ಪುವಿನ ಲಗೇಜ್‌ ಹುಡುಕಾಡಿದ್ದ. ಅವನಿಗೆ ಈ ಮೂರು ಮೂರ್ತಿಗಳು ಸಿಕ್ಕಿರಲಿಲ್ಲ.

ಅಂದರೆ ಇದು ಆತನ ಮೈಮೇಲೇ ಇದೆ. ಬಹುಶಃ ಅದಕ್ಕೇ ಅದು ಕಳ್ಳ ಶಿಷ್ಯನಿಗೆ ಇನ್ನೂ ದೊರಕಿಲ್ಲ!

ಕಾರು ಮುಂದೋಡುತ್ತಿತ್ತು. ಅಲ್ಲಲ್ಲಿ ಊಟ, ತಿಂಡಿಗಳಿಗೆ ನಿಲ್ಲಿಸುತ್ತಿದ್ದ ಶ್ಯಾಮ್.‌ ಅಪ್ರಮೇಯನದು ಒಂದೇ ರೀತಿಯ ಊಟ. ಹಣ್ಣುಗಳು, ಹಾಲು, ಕೆಲವೆಡೆ ಹಣ್ಣಿನ ರಸ.

ಹಾದಿಯಲ್ಲೊಂದು ವಿಶಿಷ್ಟ ದೇವಸ್ಥಾನ ಕಂಡಿತ್ತು.

ಅದರ ಮೇಲ್ಭಾಗದಲ್ಲಿ ಗೋಪುರವಿರಲಿಲ್ಲ ಅದರ ಬದಲು ಒಂದು ದೊಡ್ಡ ರಥ. ಮುಂದೆ ಆಳೆತ್ತರದ ಕೃಷ್ಣನ ಮೂರ್ತಿ. ಮುಂದೆ ಮೊಣಕಾಲೂರಿ ಶಿರಬಾಗಿ ನಮಸ್ಕರಿಸುತ್ತಿರುವ ಅರ್ಜುನ.

ಎಂತಹ ಸುಂದರ ಜಾಗ! ಎಂದುಕೊಂಡ ಅಪ್ರಮೇಯ.

ಇವೆಲ್ಲವೂ ನಮಗೆ ಎಲ್ಲರೂ ಹೋಗುವಂತಹ ಪ್ರವಾಸದಲ್ಲಿ ಹೋದರೆ ಸಿಗುವುದೇ ಇಲ್ಲ.

ಇಂತಹ ವಿಶಿಷ್ಟ ಗುಡಿಯನ್ನು ನೋಡಲು ನಾವು ಕೂಡ ವಿಶಿಷ್ಟ ಪ್ರವಾಸ ಕೈಗೊಳ್ಳಬೇಕು.

ಒಂದು ಕಡೆ ಕಾರು ಹತ್ತಿ ಹೋಗುತ್ತಾ ಇರುವುದು. ಎಲ್ಲಿ ಯಾವ ಗುಡಿ ಕಂಡರೆ ಅಲ್ಲಿ ನಿಲ್ಲಿಸಿ ಆ ದೇವನ ಮೂರ್ತಿಗೆ ಕೈ ಮುಗಿಯುವುದು.

ಮಕ್ಕಳು, ಯುವಜನತೆ ಹೋದರೆ ಅವರು ಹುಡುಕುವುದು ಪ್ರಕೃತಿಯ ಸೌಂದರ್ಯವನ್ನು. ಬಹುಶಃ ಕಾಡು, ಜಲಪಾತ, ನದಿ ಇವುಗಳನ್ನು ಅವರು ಹುಡುಕಿಕೊಂಡು ಹೋಗುತ್ತಾರೆ.

ಸಾಹಸೀ ಮನೋಭಾವದ ಜನರಿಗೆ ಇಂತಹ ಪ್ರವಾಸಗಳು ಇಷ್ಟವಾಗುತ್ತವೆ.

“ಶ್ಯಾಮ್‌! ಕಾರು ನಿಲ್ಲಿಸಿ” ಎಂದ ಅಪ್ರಮೇಯ.

ಸಂಜೆಯಾಗಿತ್ತು. ಬಹಳ ಜನ ಆ ಗುಡಿಯೊಳಗೆ ಹೋಗುತ್ತಿದ್ದರು. ಮೇಲೆ ಗೀತಾ ಮಂದಿರ ಎಂದು ಹಿಂದಿ ಮತ್ತು ಆಂಗ್ಲಭಾಷೆಯಲ್ಲಿ ಫಲಕ ಹಾಕಲ್ಪಟ್ಟಿತ್ತು.

ಗರ್ಭಗುಡಿಯೊಳಗೆ ಶ್ರೀಕೃಷ್ಣನ ಸುಂದರ ಮೂರ್ತಿಯಿತ್ತು. ಕಪ್ಪುಶಿಲೆಯ ಗೋಡೆಗಳ ಮೇಲೆ ಭಗವದ್ಗೀತೆಯ ಶ್ಲೋಕಗಳನ್ನು ಕೆತ್ತಿ ಅದಕ್ಕೆ ಚಿನ್ನದ ಲೇಪವನ್ನು ನೀಡಲಾಗಿತ್ತು.

ದೇವರ ಮುಂದೆ ನಿಂತು ಅಪ್ರಮೇಯ ಭಕ್ತಿಯಿಂದ

“ಗೀತಾ ಸುಗೀತಾ ಕರ್ತವ್ಯಾ | ಕಿಮನ್ಯೈಃ ಶಾಸ್ತ್ರ ವಿಸ್ತರೈಃ ||

ಯಾ ಸ್ವಯಂ ಪದ್ಮನಾಭಸ್ಯ | ಮುಖ ಪದ್ಮಾದ್ವಿನಿಃಸೃತಾ ||”  ಎಂದು ಪಠಿಸಿದ.

ಅಲ್ಲಿದ್ದ ಜನರೆಲ್ಲಾ ಅವನ ಕಡೆಗೆ ಬಂದರು. ಅಪ್ರಮೇಯನ ಶಿಷ್ಯರಿಗೆ ಇದು ರೂಢಿಯಾಗಿದ್ದ ವಿಷಯ. ಯಾವ ಗುಡಿಗೆ ಹೋಗಲಿ, ಅಪ್ಪು ಸ್ವಾಮಿ ಒಂದು ಶ್ಲೋಕ ಹೇಳಿದೊಡನೆ ಜನ ಬಂದು ಅವರನ್ನು ಸುತ್ತುವರಿಯುತ್ತಾರೆ.

ಶ್ಯಾಮ್‌ ಆಲೋಚಿಸುತ್ತಿದ್ದ. ಬಹುಶಃ ಈ ಜನರೆಲ್ಲಾ ಅವರ ದೈನಂದಿನ ಚಟುವಟಿಕೆಗಳಲ್ಲಿ ಎಷ್ಟು ಮುಳುಗಿರುವರೆಂದರೆ ಇಂತಹ ಪರಿವ್ರಾಜಕರೊಬ್ಬರು ಬಂದರೆ ಸಾಕು, ಅವರಿಂದ ಕೆಲವು ಸದುಪದೇಶ ಕೇಳಿ ಮನಸ್ಸಿಗೆ ಶಾಂತಿ ತಂದುಕೊಳ್ಳಬೇಕೆಂದು ಆಲೋಚಿಸುವರೋ ಏನೋ!

ಅವನು ನೋಡಿದ ಎರಡು ಕಡೆಗಳಲ್ಲಿ ಅವನು ಕಂಡುಕೊಂಡ ವಿಷಯವಿದು…

“ಸ್ವಾಮೀ, ನೀವು ಭಗವದ್ಗೀತೆಯ ಬಗ್ಗೆ ನಮಗೆ ಹೇಳುವಿರಾ?” ಎಂದಳೊಬ್ಬ ಭಕ್ತೆ.

“ಅದಕ್ಕೇನಂತೆ? ಬನ್ನಿ. ನಿಮ್ಮೊಂದಿಗೆ ನನಗೆ ತಿಳಿದಿರುವುದನ್ನು ಹಂಚಿಕೊಳ್ಳಲು ನನಗೂ ಸಂತೋಷವೇ” ಎಂದ ಅಪ್ಪು ಅಲ್ಲಿಯೇ ಇದ್ದ ಒಂದು ಹಜಾರದಲ್ಲಿ ಒಂದು ಕಡೆ ಪದ್ಮಾಸನ ಹಾಕಿಕೊಂಡು ಕುಳಿತ. ಜನರು ಅವನೆದುರಿಗೆ ಚಕ್ಕಬಕ್ಕಳ ಹಾಕಿಕೊಂಡು ಕುಳಿತರು.

“ಪಾರ್ಥಾಯ ಪ್ರತಿಬೋಧಿತಾಂ ಭಗವತಾ ನಾರಾಯಣೇನ ಸ್ವಯಂ

ವ್ಯಾಸೇನ ಗ್ರಥಿತಾಂ ಪುರಾಣಮುನಿನಾ ಮಧ್ಯೇ ಮಹಾಭಾರತಮ್ |

ಅದ್ವೈತಾಮೃತವರ್ಷಿಣೀಂ ಭಗವತೀಂ ಅಷ್ಟಾದಶಾಧ್ಯಾಯಿನೀಮ್

ಅಂಬ ತ್ವಾಮನುಸಂದಧಾಮಿ ಭಗವದ್ಗೀತೆ ಭವದ್ವೇಷಿಣೀಮ್||” ಎಂದು ಪಠಿಸಿದ.

ಎಲ್ಲರೂ ಮೌನವಾಗಿ ಕುಳಿತು ಅವನ ಮಾತುಗಳನ್ನು ಕೇಳಲು ಉತ್ಸುಕರಾಗಿದ್ದರು.

“ಸರ್ವೋಪನಿಷದೋ ಗಾವೋ ದೋಗ್ಧಾ ಗೋಪಾಲ ನಂದನಃ|

ಪಾರ್ಥೋ ವತ್ಸಃ ಸುಧೀರ್ಭೋಕ್ತಾ ದುಗ್ಧಂ ಗೀತಾಮೃತಂ ಮಹತ್ ||

ಅಂದರೆ ಎಲ್ಲ ಉಪನಿಷತ್‌ಗಳೂ ಹಸುಗಳು. ಗೋಪಾಲನ ನಂದನನಾದ ಶ್ರೀಕೃಷ್ಣನೇ ಹಾಲು ಕರೆಯುವವನು. ಅರ್ಜುನನೇ ಕರು. ಹಾಲು ಕುಡಿಯುವವರು ಪಂಡಿತರು. ಹೀಗೆ ಗೀತೆ ಎಂಬ ಅಮೃತವು ಶ್ರೇಷ್ಠವಾಗಿ ಕರೆದ ಹಾಲು.” ಎಂದ ಅಪ್ರಮೇಯ.

ಒಬ್ಬ ಭಕ್ತ ಎದ್ದು ನಿಂತು “ಸ್ವಾಮೀ ಭಗವದ್ಗೀತೆಯನ್ನು ಓದಿದರೆ ಯಾರ‍್ಯಾರಿಗೆ ಏನು ಲಾಭ?” ಎಂದು ಕೇಳಿದ.

ಮುಗುಳ್ನಕ್ಕ ಅಪ್ರಮೇಯ.

“ನಮ್ಮಲ್ಲಿ ಪುರಂದರ ದಾಸರು ಎನ್ನುವ ಮಹಾನ್‌ ಭಕ್ತರು ಈಗ ಮಾಡು ರಾಮಧ್ಯಾನ ಎಂದಿದ್ದಾರೆ. ಈಗ ಎಂದರೆ ಎನ್ನುವುದೇ ಅನೇಕರ ಪ್ರಶ್ನೆ. ಈಗ ಎಂದರೆ ಈ ಕ್ಷಣವಾ? ಶಾಲಾಕಾಲೇಜುಗಳಲ್ಲಿ ಓದುವಾಗಲಾ? ಅಥವಾ ಕೆಲಸಕ್ಕೆ ಸೇರಿದ ನಂತರವಾ? ಅಥವಾ ಮದುವೆ ಆದ ಮೇಲಾ? ಇಲ್ಲವೇ ನಿವೃತ್ತಿ ಹೊಂದಿದ ಮೇಲಾ?” ಎಂದು ನಕ್ಕು “ಭಗವದ್ಗೀತೆ ಎನ್ನುವುದು ಭಗವಂತನ ವಾಣಿ. ಅವನು ಕುರುಕ್ಷೇತ್ರದಲ್ಲಿ ಅರ್ಜುನನ ಸಂದೇಹಗಳನ್ನು ನಿವಾರಿಸಿ, ಅವನ ವಿಷಾದವನ್ನು ಹೊಡೆದೋಡಿಸಲು ಹೇಳಿದ ಗೀತೆ”

ನಂತರ “ಗೀತೆಯನ್ನು ಯಾರು ಯಾವಾಗ ಓದಬಹುದು ಎನ್ನುವುದಕ್ಕೆ ಕೆಲವು ವಿಷಯ ಇಲ್ಲಿ ಹೇಳುತ್ತೇನೆ” ಎಂದು ಮುಗುಳ್ನಕ್ಕು, “700 ಶ್ಲೋಕಗಳ ಭಗವದ್ಗೀತೆಯನ್ನು ಯಾರು ಯಾವಾಗ ಬೇಕಾದರೂ ಓದಬಹುದು. ಇದಕ್ಕೆ ವಯಸ್ಸಿನ ಪರಿಮಿತಿಯಿಲ್ಲ. ಸಮಯದ ಮಿತಿಯಿಲ್ಲ. ಮೊದಲೆಲ್ಲಾ ಜನರು ಈಗ ಸಮಯವಿಲ್ಲ. ನಿವೃತ್ತಿಯಾದ ಮೇಲೆ ಓದೋಣ ಎಂದುಕೊಳ್ಳುತ್ತಿದ್ದರು. ಆದರೆ ಇದು ಅನೇಕ ರೀತಿಯ ಜನರಿಗೆ ಉಪಯೋಗಿಯಾಗಿದೆ.

ಯಾವ ಯಾವ ರೀತಿಯ ಜನರಿಗೆ ಏನೇನು ಉಪಯೋಗವನ್ನು ಭಗವದ್ಗೀತೆ ಕೊಡುತ್ತದೆ ಎನ್ನುವುದನ್ನು ಕೆಳಗೆ ನೋಡೋಣ.

ಯಾರಿಗೆ                            ಗೀತೆ ಏಕೆ ಬೇಕು?

ಯುವಜನತೆಗೆ                   ಹೇಗೆ ಬದುಕಬೇಕೆನ್ನುವುದಕ್ಕೆ

ವೃದ್ಧರಿಗೆ                           ಹೇಗೆ ಜೀವನದ ಕೊನೆಯನ್ನು ಕಳೆಯಬೇಕೆನ್ನುವುದಕ್ಕೆ

ಅಜ್ಞಾನಿಗಳಿಗೆ                            ತಿಳಿವಳಿಕೆ ಪಡೆಯುವುದಕ್ಕೆ

ಚೆನ್ನಾಗಿ ಓದಿಕೊಂಡವರಿಗೆ          ನಮ್ರತೆಯನ್ನು ಕಲಿಯುವುದಕ್ಕೆ

ಶ್ರೀಮಂತರಿಗೆ                             ದಯಾಗುಣ ಕಲಿಯುವುದಕ್ಕೆ

ಕನಸುಗಾರರಿಗೆ                           ಸಮ್ಮೋಹನವುಂಟು ಮಾಡುವುದಕ್ಕೆ

ಕಾರ್ಯನಿರತರಿಗೆ                       ಹಿತವಚನಗಳಿಗಾಗಿ

ಬಲಹೀನರಿಗೆ                             ಶಕ್ತಿಗಾಗಿ

ವಿನೀತರಿಗೆ                         ಮೇಲಕ್ಕೆ ಬರಲು

ಸುಸ್ತಾದವರಿಗೆ                            ವಿಶ್ರಾಂತಿಗೆ

ತೊಂದರೆಗೊಳಗಾದವರಿಗೆ          ಶಾಂತಿಗೆ

ಅನುಮಾನ ಪಡುವವರಿಗೆ           ಭರವಸೆಗಾಗಿ

ಪಾಪಿಗಳಿಗೆ                                ಉದ್ಧಾರಕ್ಕೆ

ಹುಡುಕುವವರಿಗೆ                        ಮೋಕ್ಷ ನೀಡಲು

ಸಕಲ ಮಾನವಕುಲಕ್ಕೆ                       ಮಾರ್ಗದರ್ಶನಕ್ಕಾಗಿ“ ಎಂದು ವಿವರಿಸಿದಾಗ ಜನರು ಬಾಯ ಮೇಲೆ ಬೆರಳಿಟ್ಟುಕೊಂಡರು.

“ಇದನ್ನು ನಾನು ಅನೇಕ ಸಲ ಹೇಳಿದ್ದೇನೆ. ಮತ್ತೆ ಹೇಳುತ್ತೇನೆ. ಗೀತೆಯ ಬಗ್ಗೆ ಸರಳವಾದ ಅರ್ಥ ಕೊಡುವ ಪುಸ್ತಕಗಳಿವೆ. ಮಹಾನ್‌ ಆಚಾರ್ಯರಾದ ಶಂಕರ, ಮಧ್ವ, ರಾಮಾನುಜ ಹೀಗೆ ಅನೇಕಾನೇಕ ಪಂಡಿತರೂ, ವಿದೇಶೀಯರೂ ಗೀತೆಯ ಬಗ್ಗೆ ಭಾಷ್ಯ ಬರೆದಿದ್ದಾರೆ. ಮಕ್ಕಳಿಗೆ ಶಾಲೆಯಲ್ಲಿ ಸರಳವಾದ ಭಾಷೆಯ ಗೀತೆಯನ್ನು ಕಲಿಸಿದರೆ ಬಹುತೇಕ ಮಕ್ಕಳು ಅವನ್ನು ಅರ್ಥ ಮಾಡಿಕೊಳ್ಳುತ್ತವೆ. ಆಗ ದೊಡ್ಡವರಾಗಿ ಅಪರಾಧ ಮಾಡಿ, ಆಪಾದಿತನ ಸ್ಥಾನದಲ್ಲಿ ನ್ಯಾಯಾಲಯದಲ್ಲಿ ನಿಂತು ಗೀತೆಯನ್ನು ಮುಟ್ಟಿ ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನು ಬಿಟ್ಟು ಬೇರೇನೂ ಹೇಳುವುದಿಲ್ಲ ಎನ್ನುವ ಪ್ರಮೇಯವೇ ಬರಲಾರದು” ಎಂದ ವ್ಯಥೆಯಿಂದ.

ಅಲ್ಲಿಗೆ ಬಂದಿದ್ದವರಲ್ಲಿ ಊರ ಸರಪಂಚನೊಬ್ಬನಿದ್ದ. ಅವನು ಆಲೋಚಿಸುತ್ತಿದ್ದ. ಹೌದಲ್ಲವೇ? ಚಿಕ್ಕಂದಿನಲ್ಲಿ ಭಗವದ್ಗೀತೆಯನ್ನು ಕಲಿಸಿದರೆ ಬೆಳೆಯುವ ಪೈರು ಮೊಳಕೆಯಲ್ಲಿ ಎಂಬಂತೆ ಆ ವಯಸ್ಸಿಗೇ ಅವರಲ್ಲಿ ತಿಳಿವಳಿಕೆ ಮೂಡುತ್ತದೆ. ಅಪರಾಧ ಮಾಡಕೂಡದೆಂಬ ಪ್ರಜ್ಞೆಯೂ ಉಂಟಾಗುವ ಸಾಧ್ಯತೆ ಇದೆ.

ಅಪ್ರಮೇಯ ತನ್ನ ಗಂಭೀರ ಧ್ವನಿಯಲ್ಲಿ

“ಸುಖದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯೌ |
ತತೋ ಯುದ್ಧಾಯ ಯುಜ್ಯಸ್ವ ನೈವಂ ಪಾಪಮವಾಪ್ಸ್ಯಸಿ ||” ಎಂದು ಪಠಿಸಿ, “ಸುಖ, ದುಃಖ, ಗೆಲುವು ಸೋಲುಗಳನ್ನು ಸಮನಾಗಿ ನೋಡಿಕೊಂಡು ಯುದ್ಧಕ್ಕೆ ಅನುವಾಗು. ಹಾಗಾದಲ್ಲಿ ನೀನು ಪಾಪವನ್ನು ಗಳಿಸುವುದಿಲ್ಲ ಎನ್ನುತ್ತಾನೆ ಕೃಷ್ಣ ಅರ್ಜುನನನ್ನು ವಿಷಾದದಿಂದ ಮೇಲೆತ್ತಲು ಪ್ರಯತ್ನಿಸುತ್ತಾ.

ಸುಖ ಮತ್ತು ದುಃಖಗಳು ಬೌದ್ಧಿಕ ಪ್ರಜ್ಞೆಯ ಉಪಯುಕ್ತ ಮತ್ತು ನಿರುಪಯುಕ್ತ ಅನುಭವಗಳು. ಲಾಭ ಮತ್ತು ನಷ್ಟ ಮಾನಸಿಕವಾದುದು. ಗೆಲುವು ಸೋಲುಗಳು ಶಾರೀರಿಕವಾದದ್ದು. ಈ ಎಲ್ಲಾ ದ್ವಂದ್ವಗಳಲ್ಲೂ ಸಮಚಿತ್ತತೆಯನ್ನು ಕಾಪಾಡಿಕೊಂಡು ಇರಬೇಕೆಂದು ಇಲ್ಲಿ ‍ಶ್ರೀಕೃಷ್ಣ ಹೇಳುತ್ತಿದ್ದಾನೆ.

ಇಲ್ಲಿ ಯುದ್ಧ ಎಂದರೆ ನಾವು ದೈನಂದಿನಲ್ಲಿ ಮಾಡುವ ಕರ್ತವ್ಯಗಳೇ. ಮಾಡುವ ಕೆಲಸಗಳಲ್ಲೆಲ್ಲಾ ಲಾಭ, ಜಯ, ಸುಖವನ್ನು ನಿರೀಕ್ಷಿಸುವುದು ತಪ್ಪಲ್ಲ. ಆದರೆ ನಷ್ಟ, ಸೋಲು, ದುಃಖಗಳು ಉಂಟಾಗುವ ಸಂದರ್ಭ ಬಂದಾಗ ನಾವು ಎಲ್ಲವನ್ನೂ ಕೈಚೆಲ್ಲಿ ಕೂರಬಾರದು. ಸುಖ ಬಂದಾಗ ದೇವರನ್ನು ಏಕೆ ಸುಖ ಕೊಟ್ಟೆ ಎಂದು ಕೇಳುವೆವೇ? ಇಲ್ಲವಲ್ಲ! ಹಾಗೆಯೇ ನಷ್ಟವಾದಾಗ ಕೂಡ ಲಾಭ ಬಂದಾಗ ಇಟ್ಟುಕೊಳ್ಳುವ ಮನಸ್ಥಿತಿಯನ್ನೇ ಇಟ್ಟುಕೊಳ್ಳೆನ್ನುತ್ತಾನೆ ಶ್ರೀಕೃಷ್ಣ” ಎಂದ.

ಇನ್ನೂ ಅನೇಕ ಪ್ರಶ್ನೆಗಳು ಬಂದವು ಭಕ್ತಾದಿಗಳಿಂದ. ಅವೆಲ್ಲಕ್ಕೂ ತನಗೆ ತಿಳಿದ ಮಟ್ಟಿಗೆ ಉತ್ತರ ಕೊಡುತ್ತಾ ಹೋದ.

ನಂತರ “ಭೀಷ್ಮದ್ರೋಣತಟಾ ಜಯದ್ರಥಜಲಾ ಗಾಂಧಾರನೀಲೋತ್ಪಲಾ|

ಶಲ್ಯಗ್ರಾಹವತೀ ಕೃಪೇಣ ವಹನೀ ಕರ್ಣೇನ ವೇಲಾಕುಲಾ|

ಅಶ್ವತ್ಥಾಮವಿಕರ್ಣಘೋರಮಕರಾ ದುರ್ಯೋಧನಾವರ್ತಿನೀ

ಸೋತ್ತೀರ್ಣ ಖಲು ಪಾಂಡವೈ ರಣ-ನದೀ ಕೈವರ್ತಕಃ ಕೇಶವಃ||

ಭೀಷ್ಮ ಮತ್ತು ದ್ರೋಣರು ಎರಡು ದಡಗಳು, ಜಯದ್ರಥ ನೀರು, ನೀಲ ಕಮಲವು ಶಕುನಿ, ಶಲ್ಯ ತಿಮಿಂಗಿಲ, ನದಿಯ ಸೆಳೆತ ಕೃಪ, ಅದರ ಬಡಿದೇಳುವ ಅಲೆಗಳು ಕರ್ಣ, ಅಶ್ವತ್ಥಾಮ ಮತ್ತು ವಿಕರ್ಣರು ಭಯಾನಕ ಮೊಸಳೆಗಳು, ದುರ್ಯೋಧನನು ಸುಳಿ… ಇಂತಹ ರಣನದಿ (ಯುದ್ಧವೆಂಬ ನದಿ)ಯನ್ನು ಕೃಷ್ಣನೆಂಬ ಅಂಬಿಗನ ಸಹಾಯದಿಂದ ಪಾಂಡವರು ದಾಟಿದರು.

ನಮ್ಮ ಜೀವನದಲ್ಲಿ ಕೂಡ ನಾವು ದಿನವೂ ಯಾವುದೋ ಒಂದು ಯುದ್ಧವನ್ನು ಮಾಡುತ್ತಲೇ ಇರುತ್ತೇವೆ. ಜಗವೇ ಒಂದು ರಣರಂಗ ಎಂದು ನಮಗೆ ತಿಳಿದಿದೆ.

ಉದಾಹರಣೆಗೆ ಒಬ್ಬ ವ್ಯಾಪಾರಿಗೆ ಪ್ರತಿಸ್ಪರ್ಧಿಯ ಕಡೆಯಿಂದ ಬರುವ ಜನ ಮೋಸ ಮಾಡುವ ನೀಲವರ್ಣದ ಹೂಗಳು, ತಿಮಿಂಗಿಲ, ಮೊಸಳೆ, ಸುಳಿ, ಬಡಿದೇಳುವ ಅಲೆಗಳಂತಿರುತ್ತಾರೆ. ಅವರನ್ನೆಲ್ಲಾ ದಾಟಿದರೆ ನಷ್ಟವಾಗಬಹುದೆಂಬ ಭಯದ ಸುಳಿ ಅವನ ಮನಸ್ಸಿನಲ್ಲಿ ಸುತ್ತುತ್ತಿರುತ್ತದೆ. ಆದರೂ… ಅವನ ಮನಸ್ಸಿನಲ್ಲಿ ಭದ್ರವಾಗಿ ಕುಳಿತಿರುವ ಶ್ರೀಕೃಷ್ಣನಂತಹ ಆತ್ಮವಿಶ್ವಾಸ, ಎದೆಗಾರಿಕೆ, ಧೈರ್ಯ ಇವುಗಳು ಅವನನ್ನು ಯಶಸ್ಸು ಕಾಣುವಂತೆ ಮಾಡುತ್ತವೆ” ಎಂದು ಹೇಳಿ ನಂತರ ದೇವರ ವಿಗ್ರಹದತ್ತ ನೋಡಿ ಕೈ ಮುಗಿದು, “ಚಿದಾನಂದೇನ ಕೃಷ್ಣೇನ ಪ್ರೋಕ್ತಾ ಸ್ವಮುಖತೋಽರ್ಜುನಂ| ವೇದತ್ರಯೀ ಪರಾನಂದಾ ನಿತ್ಯ ತತ್ವಾರ್ಥ ಜ್ಞಾನ ಸಂಯುತಾ||

ಅಂದರೆ ವೇದಸಾರವಾದ ಈ ತತ್ತ್ವಶಾಸ್ತ್ರವನ್ನು ಚಿದಾನಂದಘನನಾದ ‍ಶ್ರೀಕೃಷ್ಣನು ಅರ್ಜುನನಿಗೆ ಸ್ವಯಂ ಬೋಧಿಸಿದನು” ಎಂದು ಹೇಳಿ

“ಏಕ ಶಾಸ್ತ್ರಂ ದೇವಕೀಪುತ್ರ ಗೀತಂ

ಏಕೋ ದೇವೋ ದೇವಕೀಪುತ್ರ ಏವ

ಏಕೋ ಮಂತ್ರಸ್ತಸ್ಯ ನಾಮಾನಿ ಯಾನಿ

ಕರ್ಮಾಪ್ಯೇಕಂ ತಸ್ಯ ದೇವಸ್ಯ ಸೇವಾ” ಎಂದು ಮಂಗಳ ಹಾಡಿದ.

ಅಲ್ಲಿಂದ ಎದ್ದಾಗ ಅವನಿಗೆ ಏನೋ ಒಂದು ರೀತಿಯ ಸಂತೃಪ್ತಿ. ಬಹಳ ದಿನಗಳಿಂದ ಭಗವದ್ಗೀತೆಯ ಬಗ್ಗೆ ಹೇಳುವ ಇಚ್ಛೆ ಅವನಲ್ಲಿತ್ತು.

ಇನ್ನು ತಾನು ಸತ್ತರೂ ಯಾರಿಗೂ ನಷ್ಟವಿಲ್ಲ. ತಾನಿಂದು ಮಾಡಿದ ಪ್ರವಚನದಲ್ಲಿ ಕೆಲವು ಭಾಗಗಳನ್ನಾದರೂ ಕೆಲವರಾದರೂ ಮನನ ಮಾಡಿ ಇನ್ನೊಬ್ಬರಿಗೆ ಹಂಚಿದರೆ ಅದೇ ಭಗವದ್ಧ್ಯಾನ ಎಂದುಕೊಂಡು ಹೊರಗೆ ಹೊರಟ.

ಅತ್ತ ನೀಲಂ ಮತ್ತು ಫಿಲಿಪ್‌ ಇವರಿದ್ದೆಡೆಗೆ ಧಾವಿಸಿ ಬರುತ್ತಿದ್ದರು. ಹೊಟೇಲ್‌ ಒಂದರಲ್ಲಿ ಅವರಿಬ್ಬರೂ ಊಟ ಮಾಡುತ್ತಿದ್ದಾಗ ನೀಲಂ “ಫಿಲಿಪ್‌ ಓ ಗಾಡ್‌!” ಎಂದಳು.

“ಏನಾಯ್ತು?” ಎಂದ ಫಿಲಿಪ್‌ ಅವಳ ಗಾಬರಿ ಕಂಡು ನಗೆ ಬೀರುತ್ತಾ.

“ನಿನ್ನ ಕಣ್ಣುಗಳು…!” ಎಂದಳು ನೀಲಂ ಚಿಂತಿತಳಾಗಿ.

ಮುಂದುವರೆಯುವುದು…

ಯತಿರಾಜ್ ವೀರಾಂಬುಧಿ

Related post

Leave a Reply

Your email address will not be published. Required fields are marked *