ಪರಾಭವ ಭಾವನಾ – 20 ಯತಿರಾಜ್ ವೀರಾಂಬುಧಿ

ಹಿಂದಿನ ಸಂಚಿಕೆಯಿಂದ…
ನಾಯಕ್ ಅಪ್ರಮೇಯನ ಹಿಂದೆ ಇಂಟರ್ಪೋಲ್ ಏಜೆಂಟ್ ಸ್ಯಾಮ್ ರಕ್ಷಣೆಗಿರುವುದು ತನ್ನ ನೆಟ್ವರ್ಕ್ ನಿಂದ ತಿಳಿಯುತ್ತದೆ. ಇತ್ತ ಸ್ಯಾಮ್ ಗೆ ವಿಗ್ರಹದ ಹಿಂದೆ ಬಿದ್ದಿರುವವರ್ಯಾರು ಎಂದು ತಿಳಿಯುತ್ತದೆ. ಅಪ್ರಮೇಯನನ್ನು ಕೊಂದಾದರೂ ಆ ರಾಮ, ಕೃಷ್ಣ ಮತ್ತು ನರಸಿಂಹ ವಿಗ್ರಹಗಳನ್ನು ಕೊಂಡೊಯ್ಯಲು ವೇಗವಾಗಿ ಆ ಊರಿಗೆ ಬಂದಿದ್ದರು ನಾಯಕ್‌ನ ಶಿಷ್ಯೆ ನೀಲಂ ಮತ್ತು ಇಂಗ್ಲೆಂಡಿನಿಂದ ಬಂದ ಶಾರ್ಪ್‌ ಶೂಟರ್‌ ಫಿಲಿಪ್‌ ಸ್ಟೋನ್‌ಬ್ರಿಡ್ಜ್.‌ ಮುಂದೆ…

–ಇಪ್ಪತ್ತು–

ತನ್ನ ಮೇಲೆ ಇಂತಹ ದಾಳಿ ನಡೆಯಬಹುದೆಂಬ ಪರಿವೆ ಇಲ್ಲದೇ ಅಪ್ರಮೇಯ ತನ್ನ ಪ್ರವಚನವನ್ನು ಮುಂದುವರೆಸಿದ್ದ.

“ಆಲದೆಲೆಯ ಮೇಲೆ ಮಲಗಿದಾ ಎಂಬ ಹಾಡಿದೆ ಕನ್ನಡ ಭಾಷೆಯಲ್ಲಿ. ಹೌದು ಇಡೀ ಪ್ರಪಂಚವು ಇಲ್ಲದಿದ್ದಾಗ ಅವನೊಬ್ಬನೇ ಆಲದೆಲೆಯೊಂದರ ಮೇಲೆ ಮಲಗಿದ್ದನಂತೆ. ಆಮೇಲೆ ಅವನಿಗೆ ಒಬ್ಬನೇ ಇದ್ದು ಬೇಸರವಾಗಿ

ಸುಮ್ಮನೊಬ್ಬಂಟಿಯೆಂತಿಹುದು? ಬೇಸರವಹುದು |
ಹೊಮ್ಮುವೆನು ಕೋಟಿರೂಪದಲಿ ನಾನೆಂದು ||
ಬೊಮ್ಮನೆಳಸಿದನಂತೆ. ಆ ಯೆಳಸಿಕೆಯೆ ಮಾಯೆ |
ನಮ್ಮಿರವು ಮಾಯೆಯಲಿ – ಮಂಕುತಿಮ್ಮ||

ಇದರ ಅರ್ಥ ಆ ಪರಬ್ರಹ್ಮವಸ್ತುವು ಒಂಟಿಯಾಗಿತ್ತು. ಅದಕ್ಕೆ ಸಂತೋಷವೂ ದುಃಖವೂ ಇರಲಿಲ್ಲ. “ಏಕಾಕೀ ನ ರಮತೇ” ಒಂಟಿಯಾಗಿರುವವನಿಗೆ ಸಂತೋಷವಿಲ್ಲ. ಅದು ಇನ್ನೊಬ್ಬರನ್ನು ಸಂಗಾತಿಯಾಗಿ ಬಯಸಿತು. ನಾನೇ ಬಹುರೂಪ ತಳೆಯುವೆನು ಎಂದು ನಿರ್ಧರಿಸಿತು. 

ಸೋಽಕಾಮಯತ

ಬಹುಸ್ಯಾಂ ಪ್ರಜಾಯೇಯೇತಿ

ತದಾಽತ್ಮಾನಾಂ ಸ್ವಯಮಕುರುತ

ತಸ್ಮಾತ್‌ ಸುಕೃತ ಮುಚ್ಯತೇ

ಪರಬ್ರಹ್ಮವಸ್ತುವು ಒಂದೇ ಆಗಿದ್ದುಕೊಂಡು, ನಾನು ಅನೇಕವಾಗಿ ಹುಟ್ಟಿಯೇನು ಎಂದು ಆಶಿಸಿತು ಆಗ ತನ್ನನ್ನು ತಾನೇ ಬಹುಪ್ರಕಾರವಾಗಿ ಜಗತ್ತನ್ನಾಗಿ ಮಾಡಿಕೊಂಡಿತು. ಅದು ಹಾಗೆ ಒಳ್ಳೆಯದನ್ನು (ಸುಕೃತಂ) ಮಾಡಿತು ಎಂದು ತತ್ತ್ವಜ್ಞಾನಿಗಳು ಹೇಳುತ್ತಾರೆ” ಎಂದ ಅಪ್ರಮೇಯ.

ಇದು ಸ್ವಲ್ಪ ಹೆಚ್ಚು ಗಾಢವಾಯಿತೆಂದುಕೊಂಡು “ಈಗ ದೇವರಿಗೆ ಗಾಡ್‌ (ಜಿಓಡಿ) ಎನ್ನುವರಲ್ಲವೇ? ಅಂದರೆ ಸಂಸ್ಕೃತದಲ್ಲಿ ಸೃಷ್ಟಿ ಸ್ಥಿತಿ ಲಯ ಎನ್ನುವ ಪದಗಳವು. ದೇವರು ತನ್ನ ಮೂರು ರೂಪಗಳನ್ನು ಸೃಷ್ಟಿಸಿದನಂತೆ. ಅವರೇ ತ್ರಿಮೂರ್ತಿಗಳು. ಬ್ರಹ್ಮನು ಸೃಷ್ಟಿಯ ಕೆಲಸವನ್ನು ಮಾಡುತ್ತಾನೆ. ಮಹೇಶ್ವರ ಲಯದ ಕೆಲಸ ಅಂದರೆ ಭೂಭಾರ ಹೆಚ್ಚಿದಾಗ ಅದನ್ನು ಇಳಿಸಲು ಪ್ರಪಂಚದ ಪ್ರಾಣಿ ಮತ್ತು ಜನರ ನಾಶ ಮಾಡುತ್ತಾನೆ. ಇನ್ನು ಹುಟ್ಟಿದವರು ಹುಲ್ಲು ಮೇಯುವುದು ಬೇಡವೆಂದು ಅವರು ಬದುಕಿರುವಾಗ ಅವರನ್ನು ನೋಡಿಕೊಳ್ಳುವವನು ವಿಷ್ಣು. ಅದಕ್ಕೇ ದೇವರಿಗೆ ಗಾಡ್‌ ಎನ್ನುತ್ತಾರೆ. ಜಿ ಎಂದರೆ ಜನರೇಟರ್‌ ಅಥವಾ ಹುಟ್ಟಿಸುವವನು. ಓ ಎಂದರೆ ಆಪರೇಟರ್.‌ ಎಲ್ಲರನ್ನೂ ನೋಡಿಕೊಳ್ಳುವವನು. ಡಿ ಎಂದರೆ ಡಿಸ್ಟ್ರಕ್ಟರ್‌ ಅಂದರೆ ನಾಶ ಮಾಡುವವನು. ಮೂವರೂ ಅವರವರ ಕೆಲಸಗಳನ್ನು ಮಾಡುತ್ತಾ ಹೋಗುವುದರಿಂದ ಈ ಭೂಮಿಯಲ್ಲಿ ಎಲ್ಲವೂ ಒಂದು ಒಳ್ಳೆಯ ಹಂತದಲ್ಲಿದೆ. ಹಿಂದೂ ಧರ್ಮದ ಎಲ್ಲ ಗ್ರಂಥಗಳಲ್ಲಿಯೂ ಮನುಷ್ಯರ ನಡುವೆ ಇರಬೇಕಾದ ಸದ್ಭಾವನೆ, ಪರೋಪಕಾರಗಳ ಬಗ್ಗೆ ಇದೆ. ಇದೇ ರೀತಿ ಕುರಾನ್‌, ಬೈಬಲ್‌, ಗುರುಗ್ರಂಥ ಸಾಹಿಬ್‌ ಎಲ್ಲರದಲ್ಲಿಯೂ ಮಾನವತ್ವದ ಬಗ್ಗೆ ವಿವರವಾಗಿ ಹೇಳಲ್ಪಟ್ಟಿದೆ.

ನಮ್ಮಲ್ಲಿ ಆಕಾಶಾತ್‌ ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ

ಸರ್ವದೇವ ನಮಸ್ಕಾರಃ ಕೇಶವಂ ಪ್ರತಿ ಗಚ್ಛತಿ

ಹೇಗೆ ಆಕಾಶದಿಂದ ಬಿದ್ದ ಮಳೆಯ ನೀರು ಪುನಃ ಸಮುದ್ರವನ್ನು ಸೇರುತ್ತದೆಯೋ ಹಾಗೆಯೇ ಎಲ್ಲ ದೇವರನ್ನೂ ಕುರಿತು ಮಾಡಿದ ಪೂಜೆ ಪುನಸ್ಕಾರಗಳು ಕೇಶವನನ್ನೇ ಸೇರುತ್ತವೆ…

ಧರ್ಮಾರ್ಥ ಕಾಮ ಮೋಕ್ಷಾಖ್ಯ ಪುರುಷಾರ್ಥ ಪ್ರದಾಯಿನೇ

ನಾರಾಯಣ ನಮಸ್ತೇಸ್ತು ಪುನಸ್ತೇಸ್ತು ನಮೋ ನಮಃ” ಎಂದು ಪ್ರಾರ್ಥನೆ ಮಾಡಿ ಪ್ರವಚನವನ್ನು ಮುಗಿಸಿದ.

“ಸ್ವಾಮೀ, ಅದೆಷ್ಟು ವಿಷಯಗಳನ್ನು ಇಷ್ಟು ಕಡಿಮೆ ಸಮಯದಲ್ಲಿ ಹೇಳಿದಿರಿ! ನಮಗಿನ್ನೂ ತಿಳಿಯುವ ಆಸೆ ಇದೆ” ಎಂದರು ಅನೇಕರು.

ಅಪ್ರಮೇಯ ಮುಗುಳ್ನಕ್ಕು “ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಮಾಳ್ಪರಿಂದ ತಿಳಿದು ಕೆಲವಂ ಓದಿ…ಹೀಗೆ ಸ್ವ ಶಿಕ್ಷಣ ಮಾಡಿಕೊಳ್ಳಬೇಕು. ಎಲ್ಲಿ ಅನುಮಾನಗಳಿರುವುದೋ ಅವನ್ನೆಲ್ಲಾ ಗುರುತು ಹಾಕಿಕೊಂಡು ತಿಳಿದವರ ಬಳಿ, ನಿಮ್ಮ ಗುರುಗಳ ಬಳಿ ಕೇಳಿ ಅರಿಯಬೇಕು” ಎಂದು ಹೇಳಿ ಮತ್ತೆ ನಾರಾಯಣನ ಮೂರ್ತಿಯತ್ತ ತಿರುಗಿ ಭಕ್ತಿಯಿಂದ ಶಿರಬಾಗಿ ನಮಸ್ಕರಿಸಿ ಹೊರಗೆ ಹೊರಟ.

ಕಳ್ಳ ಶಿಷ್ಯ ಈಗ ಎರಡೆರಡು ಮನದವನಾಗಿದ್ದ. ಈಗಾಗಲೇ ತಾನು ನಾಯಕ್‌ನ ಕಡೆಯವರಿಗೆ ಆಹ್ವಾನ ನೀಡಿ ಆಗಿದೆ. ಈಗೇಕೋ ಅಪ್ಪು ಸ್ವಾಮಿಯನ್ನು ಈ ಅಪಾಯಕ್ಕೆ ದೂಡುವುದು ಬೇಡವೆನಿಸಿಬಿಟ್ಟಿದೆ.

ತಾನೇನೋ ತನ್ನ ದುಷ್ಟತನ ಬಿಟ್ಟು ಒಳ್ಳೆಯವನಾಗಿಬಿಡಬಹುದು. ಆದರೆ ತಾನು ಫೋನ್‌ ಮಾಡಿ ಕರೆಸಿದ ದುರುಳರು ಸುಮ್ಮನಿರುವರೇನು?

ಏನು ಮಾಡಲಿ ಏನು ಮಾಡಲಿ ಎಂದು ಚಿಂತಿಸಿದ. ನಂತರ ಅವನೊಂದು ನಿರ್ಧಾರಕ್ಕೆ ಬಂದ.

ಒಂದು ವೇಳೆ ಅಪ್ಪು ಸ್ವಾಮಿಯನ್ನು ಕೊಲ್ಲಲು ಅವರು ಬಂದಾಗ ತಾನೇ ಎದೆಯೊಡ್ಡಿ ಮೊದಲ ಬಲಿಯಾಗಬೇಕು ಎಂದುಕೊಂಡ.

ಮತ್ತೊಬ್ಬ ಶಿಷ್ಯ ಈಗ ಈ ಮೂರ್ತಿಗಳ ಬಗ್ಗೆ ಮರೆತ. ಎಂತಹ ಒಳ್ಳೆಯ ಗುರು ಇವರು! ಎಷ್ಟು ಜನಕ್ಕೆ ಇವರಿಂದ ಉಪಕಾರವಾಗಿದೆ! ಬಹಳ ಜನ ಇವರ ಪ್ರವಚನಗಳಿಂದ ಪ್ರಭಾವಿತರಾಗಿ ಒಳ್ಳೆಯ ಹಾದಿ ಹಿಡಿಯಬಹುದು.

ಇಂತಹ ಸಾತ್ವಿಕ ಸ್ವಾಮಿಯ ಬಳಿ ವಿಗ್ರಹಗಳನ್ನು ಅಪಹರಿಸಿ ತಾನೇನು ಪಡೆದೇನು? ಕೆಲವು ದಿನಗಳ ಕಾಲ ಖುಷಿಯಾಗಿರಲು ಸ್ವಲ್ಪ ಹಣ? ಆದರೆ ತನ್ನ ಬಗ್ಗೆ ಯಾರಿಗಾದರೂ ಅನುಮಾನ ಹುಟ್ಟಿದರೆ ಇಡೀ ಜೀವನ ತಿರುಗಿ ತಿರುಗಿ ನೋಡುತ್ತಿರಬೇಕು, ಯಾರು ತನ್ನನ್ನು ಕಳ್ಳ ಎಂದು ಆಪಾದನೆ ಮಾಡಿ ಜೈಲಿಗೆ ತಳ್ಳುವರೋ ಎಂದು.

ಈಗ ತನ್ನ ಜೀವನ ಚೆನ್ನಾಗಿಯೇ ಇದೆ. ದಿನವೂ ದೇವರ ಹೆಸರುಗಳನ್ನು ಹೇಳುತ್ತಾ, ಆಶ್ರಮದಲ್ಲಿನ ಕರ್ತವ್ಯಗಳನ್ನು ಮಾಡುತ್ತಾ ಇದ್ದೇನೆ. ಇದಕ್ಕೆ ತಾನು ಕಲ್ಲು ಹಾಕಿಕೊಳ್ಳಬೇಕೇ? ಇಲ್ಲ, ತಾನಿನ್ನು ಈ ವಿಗ್ರಹಗಳ ಬಗ್ಗೆ ಮನಸ್ಸಿನಲ್ಲಿಯೂ ಆಲೋಚಿಸಕೂಡದು ಎಂದುಕೊಂಡ.

ಆದರೆ ದುಷ್ಟರ ಅನಿವಾರ್ಯಗಳಿವೆಯಲ್ಲ!

ಆಲ್ಬೆರ್ತೋ ಗಾರ್ಸಿಯಾ ಬಲು ದೊಡ್ಡ ಡ್ರಗ್‌ ಕಾರ್ಟೆಲ್‌ ಮಾಲೀಕ. ಅವನಿಗೆ ನಾಯಕ್‌ ಹಣ ನೀಡಲೇಬೇಕು. ಇಲ್ಲದಿದ್ದರೆ ನಾಯಕ್‌ನ ಹೆಣ ಬೀಳುತ್ತದೆ. ಫಿಲಿಪ್‌ ಸ್ಟೋನ್‌ಬ್ರಿಡ್ಜ್‌ ಅಪ್ರಮೇಯನನ್ನು ಕೊಂದಾದರೂ ಆ ವಿಗ್ರಹಗಳನ್ನು ಪಡೆಯಲೇಬೇಕು. ಏಕೆಂದರೆ ಅವನು ನಾಯಕ್‌ನಿಂದ ದೊಡ್ಡ ಮೊತ್ತದ ಹಣ ಪಡೆಯಲಿದ್ದಾನೆ. ಅದು ಅವನ ಶೇಷಜೀವನಕ್ಕೆ ಸಾಕಾಗುತ್ತದೆ.

ನೀಲಂಗೆ ಇದೊಂದು ಸವಾಲು. ಅವಳನ್ನು ಅಪ್ರಮೇಯ ಅಹೋಬಿಲಂನಲ್ಲಿ ಲಕ್ಷಿಸಲಿಲ್ಲ. ಅದು ಅವಳ ಅಹಂಗೆ ಪೆಟ್ಟು ಕೊಟ್ಟಿದೆ. ಅದಲ್ಲದೇ ನಾಯಕ್‌ನಿಂದ ಅವಳಿಗೆ ದೊಡ್ಡ ಮೊತ್ತದ ಹಣ ಸಿಗಲಿದೆ.

ಇಂಟರ್‌ಪೋಲ್‌ನ ಸ್ಯಾಮ್‌ ಅಥವಾ ಈಗ ಅಪ್ರಮೇಯನ ಡ್ರೈವರ್‌ ಆಗಿರುವ ಶ್ಯಾಮ್.‌ ಅವನು ಬಂದಿರುವುದು ಫಿಲಿಪ್‌ನನ್ನು ಹಿಡಿದುಹಾಕಲು. ಅವನಿಗೆ ತನ್ನ ಹುಟ್ಟಿದ ನೆಲದ ಮೇಲಿನ ಪ್ರೀತಿಯಿಂದ ಭಾರತಕ್ಕೆ ಬಂದಿದ್ದ. ಅವನಿಗೆ ಅಪ್ರಮೇಯನೆಂದರೆ ಒಂದು ರೀತಿಯ ಗೌರವ ತುಂಬಿದ ಪ್ರೀತಿ ಹುಟ್ಟಿತ್ತು. ಹೇಗಾದರೂ ಈ ಸಜ್ಜನನನ್ನು ರಕ್ಷಿಸಬೇಕು ಎಂಬುದನ್ನು ತನ್ನ ಧ್ಯೇಯ ಮಾಡಿಕೊಂಡ.

ಈ ಎಲ್ಲದರ ನಡುವೆ ಕಾರು ತನ್ನ ಪಾಡಿಗೆ ದೆಹಲಿಯ ಕಡೆಗೆ ಧಾವಿಸುತ್ತಿತ್ತು.

ನೀಲಂ ಮತ್ತು ಫಿಲಿಪ್‌ ನಾರಾಯಣನ ಗುಡಿಗೆ ಬರುವ ವೇಳೆಗೆ ಅಲ್ಲಿಂದ ಹೊರಟುಹೋಗಿದ್ದರು ಅಪ್ರಮೇಯ ಮತ್ತು ಪಾರ್ಟಿ.

ನೀಲಂ ಅಪ್ಪುವಿನ ಶಿಷ್ಯನಿಗೆ ಫೋನ್‌ ಮಾಡಿದಳು. ಆದರೆ ಅವನು ಫೋನೆತ್ತಲಿಲ್ಲ.

“ಬಹುಶಃ ಅಪ್ರಮೇಯ ಜೊತೆಯಲ್ಲಿರಬೇಕು” ಎಂದಳು ನೀಲಂ ಫಿಲಿಪ್‌ನತ್ತ ತಿರುಗಿ.

ಈಗ ಫಿಲಿಪ್‌ ನೋಡಲು ಶತ ಪ್ರತಿಶತ ಭಾರತೀಯನಂತೆ ಇದ್ದ. ಕಂದು ಬಣ್ಣ, ಕಂದು ಬಣ್ಣದ ಜುಬ್ಬಾ, ಕಂದು ಬಣ್ಣದ ಪಾಯಿಜಾಮಾ, ಕಣ್ಣುಗಳಿಗೆ ಕಪ್ಪು ಬಣ್ಣದ ಕಾಂಟ್ಯಾಕ್ಟ್‌ ಲೆನ್ಸ್‌ಗಳು. ಯಾರೂ ಅವನನ್ನು ಇಂಗ್ಲಿಷಿನವನೆಂದು ಕಂಡುಹಿಡಿಯಲು ಸಾಧ್ಯವಾಗದಂತೆ ಇದ್ದ ಈಗ.

ಆದರೆ ನೀಲಂಗೆ ತಿಳಿಯದ ವಿಷಯವೊಂದಿತ್ತು. ಅಪ್ರಮೇಯನ ಶಿಷ್ಯನ ಮನಃಪರಿವರ್ತನೆ ಆಗಿರುವ ವಿಷಯ.

ಅದಕ್ಕೆ ಮೊದಲ ಹೆಜ್ಜೆಯಾಗಿ ನಾಯಕ್‌ನ ಕಡೆಯವರಿಗೆ ಫೋನ್‌ ಮಾಡುವುದಿರಲಿ, ಅವರ ಕಡೆಯವರ ಫೋನ್‌ ರಿಸೀವ್‌ ಕೂಡ ಮಾಡುವುದನ್ನು ಬಿಟ್ಟ. ಜೊತೆಗೆ ಅವನು ಮಾಡಿದ ಬಲು ಮುಖ್ಯ ಕೆಲಸವೆಂದರೆ ತನ್ನ ಮೊಬೈಲ್‌ನ ಜಿ.ಪಿ.ಎಸ್.‌ ಆಫ್‌ ಮಾಡಿದ. ಲೊಕೇಶನ್‌ ಷೇರ್‌ ಮಾಡುವುದನ್ನು ನಿಲ್ಲಿಸಿದ.

ಇದು ತನ್ನ ಜೀವಕ್ಕೆ ಅಪಾಯ ತರಬಹುದೆಂಬ ಕಲ್ಪನೆ ಅವನಿಗಿರಲಿಲ್ಲ. ಅವನಾಗಲೇ ಅಪ್ರಮೇಯ ಸ್ವಾಮಿಗೆ ಬೀಳಬಹುದಾದ ಕತ್ತಿಯೇಟಿಗೆ ಗುರಾಣಿ ಆಗಲು ನಿರ್ಧರಿಸಿ ಆಗಿತ್ತು.

“ಶ್ಯಾಮ್‌ ಅವರೇ, ಇಲ್ಯಾವುದೋ ದೊಡ್ಡ ದೇವಿಯ ಗುಡಿ ಇದೆ. ನಿಲ್ಲಿಸುವಿರಾ?” ಎಂದ ಅಪ್ರಮೇಯ ಸ್ವಾಮಿ ವಿನೀತಭಾವದಿಂದ.

ಅದೇ ಭಾವವೇ ಸ್ಯಾಮ್‌ಗೆ ಬಹಳ ಇಷ್ಟವಾಗಿತ್ತು. ತನಗೆ ಅಪ್ಪಣೆ ಮಾಡಿದ್ದರೂ ತಾನು ಕಾರು ನಿಲ್ಲಿಸಿರುತ್ತಿದ್ದ. ಅದೆಂತಹ ವಿನಯ ಈ ಸ್ವಾಮಿಯ ಮಾತುಗಳಲ್ಲಿ!

ದೇವಿಯ ಗುಡಿಯೊಳಗೆ ನಡೆದ ಅಪ್ಪು ಗರ್ಭಗುಡಿಯಲ್ಲಿದ್ದ ಮೂರ್ತಿಗಳನ್ನು ನೋಡಿ ಆನಂದತುಂದಿಲನಾದ.

ಒಂದು ಕಡೆ ಲಕ್ಷ್ಮಿ, ಮತ್ತೊಂದು ಕಡೆ ಸರಸ್ವತೀ, ಮಧ್ಯೆ ಪಾರ್ವತಿ.

ಸರಸ್ವತಿಯ ಮೂರ್ತಿಯ ಮುಂದೆ ನಿಂತು ಪದ್ಮಪತ್ರ ವಿಶಾಲಾಕ್ಷಿ ಪದ್ಮಕೇಸರಿ ವರ್ಣನೇ ನಿತ್ಯಂ ಪದ್ಮಾಲಯಾಂದೇವಿ ಸಾಮಾಂಪಾತು ಸರಸ್ವತಿ ಭಗವತಿ ಪೂರ್ಣೇಂದು ಬಿಂಬಾನನ” ಎಂದು ಹಾಡಿದ.

ನಂತರ ಲಕ್ಷ್ಮಿಯ ವಿಗ್ರಹದ ಮುಂದೆ ನಿಂತು “‌ ಜಯ ಪದ್ಮಪಲಾಶಾಕ್ಷಿ ಜಯ ತ್ವಂ ಶ್ರೀಪತಿಪ್ರಿಯೇ| ಜಯ ಮಾತರ್ಮಹಾಲಕ್ಷ್ಮಿ ಸಂಸಾರಾರ್ಣವತಾರಿಣಿ” ಎಂದು ಪಠಿಸಿದ.

ನಂತರ ನಡುವೆ ಇದ್ದ ಪಾರ್ವತಿಯ ಮೂರ್ತಿಯ ಮುಂದೆ ನಿಂತು “ಸರ್ವಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣೀ ನಮೋಸ್ತುತೇ” ಎಂದು ಉಚ್ಚರಿಸಿದ.

ಅವನ ಈ ಭಕ್ತಿಭಾವವನ್ನು ನೋಡುತ್ತಿದ್ದ ಶ್ಯಾಮ್‌ಗೆ ಬಹಳ ಖೇದವಾಗಿತ್ತು. ಇಂತಹ ವ್ಯಕ್ತಿಯನ್ನು ಕೊಲ್ಲಲು ಮನಸ್ಸಾದರೂ ಹೇಗೆ ಬರುತ್ತದೆ?

ಹಣ ಮುಖ್ಯ ಜೀವನಕ್ಕೆ, ಆದರೆ ಹಣವೇ ಮುಖ್ಯವಲ್ಲ.

ಅವನು ಸುಮಾರು ಐದು ವರ್ಷಗಳಿಂದ ಫ್ರಾನ್ಸ್‌ ಲಿಯೋನ್‌ನ ಇಂಟರ್‌ಪೋಲ್‌ ಆಫೀಸಿನಲ್ಲಿದ್ದಾನೆ. ಅನೇಕ ಒಳ್ಳೆಯ ಜನರನ್ನು ದುಷ್ಟರಿಂದ ಕಾಪಾಡಲು ಅವನು ಹೋಗಿರುವುದುಂಟು. ಹಾಗೆಯೇ ದುರುಳರನ್ನು ಮುಗಿಸಿರುವುದೂ ಉಂಟು.

ಅವನಿಗೆ ತನ್ನ ದೇಶ ಭಾರತ ಎಂದರೆ ಬಹಳ ಹೆಮ್ಮೆ. ಅವನ ಜೀವನದ ಧ್ಯೇಯ ದೊಡ್ಡ ದೊಡ್ಡ ದುಷ್ಟರನ್ನು ಹಿಡಿದು ಶಿಕ್ಷಿಸುವ ವ್ಯವಸ್ಥೆಯಲ್ಲಿ ಇರಬೇಕೆಂಬುದು. ಅದಕ್ಕೇ ಅವನು ಭಾರತದ ಸಿ.ಬಿ.ಐ.ಯಲ್ಲಿ ಕೆಲಸ ಮಾಡಿ ಇಂಟರ್‌ಪೋಲ್‌ಗೆ ಅಪ್ಲೈ ಮಾಡಿ ಅಲ್ಲಿಗೆ ಆಯ್ಕೆಯಾಗಿದ್ದ. ಅಲ್ಲಿಯ ಆಯ್ಕೆಯ ಪರೀಕ್ಷೆಗಳು ಬಹಳವೇ ಕಠಿಣವಾಗಿದ್ದವು. ಆದರೆ ಗುರಿ ಗಟ್ಟಿಯಾಗಿದ್ದಾಗ ಅದನ್ನು ಸಾಧಿಸುವತ್ತ ಏಕನಿಷ್ಠೆಯಿಂದ ಮುಂದುವರೆದಿದ್ದ. ಯಶಸ್ವಿಯೂ ಆಗಿದ್ದ.

ಆ ದೇವಸ್ಥಾನದ ಒಂದೆಡೆ ಇದ್ದ ದೊಡ್ಡ ಹಜಾರದಲ್ಲಿ ಪದ್ಮಾಸನ ಹಾಕಿ ಕುಳಿತು “ಓಂ ನಮೋ ಭಗವತೇ ವಾಸುದೇವಾಯ” ಎಂದು ಧ್ಯಾನ ಮಾಡತೊಡಗಿದ. ಕೆಲವು ನಿಮಿಷಗಳ ನಂತರ ಅವನು ಕಣ್ತೆರೆದಾಗ ಅನೇಕ ಜನರು ಅವನ ಎದುರಿಗೆ ಆಸೀನರಾಗಿದ್ದರು.

ಇವನು ಕಣ್ಬಿಟ್ಟೊಡನೆ ನಮಸ್ಕರಿಸಿ “ಏನಾದರೂ ಹೇಳಿ ಸ್ವಾಮಿ ದೇವರದು” ಎಂದು ವಿನಂತಿಸಿದರು ಒಂದಿಬ್ಬರು.

“ಇದು ದೇವಿಯ ಗುಡಿ. ಅದಕ್ಕೇ ದೇವಿಯ ವಿಷಯವನ್ನೇ ಮಾತಾಡೋಣ. ಮಹಿಷಪುರ ಎಂಬ ಊರಲ್ಲಿ ಮಹಿಷಾಸುರನೆಂಬ ರಕ್ಕಸ ವಿಪರೀತವಾಗಿ ಜನರಿಗೆ ತೊಂದರೆ ಕೊಟ್ಟಾಗ ಅವನನ್ನು ಕೊಲ್ಲಲು ದೇವರನ್ನು ಪ್ರಾರ್ಥಿಸಿದರು ಭಕ್ತರು, ದೇವತೆಗಳು.

ಅವನಿಗೆ ಒಂದು ವರವಿತ್ತು. ತ್ರಿಮೂರ್ತಿಗಳಿಂದಲೂ ಅವನನ್ನು ಕೊಲ್ಲುವುದು ಸಾಧ್ಯವಿರಲಿಲ್ಲ. ಒಬ್ಬ ಹೆಂಗಸು ನನ್ನನ್ನು ಕೊಲ್ಲಬಹುದು. ಆದರೆ ಅವಳಿಗೆಲ್ಲಿ ನನ್ನನ್ನು ಎದುರಿಸುವ ಧೈರ್ಯ ಎಂಬ ತಪ್ಪು ಧೋರಣೆ ಹೊಂದಿದ್ದನ್ನೇ ಅವಕಾಶವಾಗಿ ಮಾಡಿಕೊಂಡು ತ್ರಿಮೂರ್ತಿಗಳು ದೇವಿಯ ಒಂದು ರೂಪವಾದ ಚಾಮುಂಡೇಶ್ವರಿಗೆ ತಮ್ಮ ಶಕ್ತಿಗಳನ್ನು ಪ್ರಸಾದಿಸಿದರು. ಕೋಣನ ವೇಷ ಧರಿಸಿದ ಅವನನ್ನು ಚಾಮುಂಡೇಶ್ವರಿ ಭೀಕರ ಕಾಳಗ ಮಾಡಿ ಕೊಂದಳು.

ಇವಳ ಅನೇಕ ರೂಪಗಳಿವೆ. ದುರ್ಗಾ, ಕಾಳಿ, ಪಾರ್ವತಿ ಮುಂತಾದವು. ನೀವು ಅನೇಕ ಗ್ರಾಮಗಳಲ್ಲಿ ನೋಡಿರಬಹುದು. ಮಾಂಕಾಳಮ್ಮ, ಜಲಧಿಗೇರಮ್ಮ, ಮಾರಮ್ಮ,  ಕಬ್ಬಾಳಮ್ಮ ಇತ್ಯಾದಿ ದೇವಿಯರು ಆಯಾ ಗ್ರಾಮದ ದೇವತೆ ಆಗಿರುತ್ತಾರೆ. ನಿಮ್ಮ ಕಡೆ ಕೂಡ ಇಂತಹ ದೇವಿಯರ ಗುಡಿಗಳಿರಬಹುದು ಗ್ರಾಮಗಳಲ್ಲಿ. ಸಾಮಾನ್ಯವಾಗಿ ಈ ದೇವತೆಗಳನ್ನು ತಮ್ಮ ಊರಿನ ರಕ್ಷಕಿ ಎಂದು ಭಾವಿಸುತ್ತಾರೆ ಜನರು. ಮನೆಯಲ್ಲಿ ಯಾರಿಗಾದರೂ ದಢಾರ, ಸಿಡುಬು, ಮೀಸಲ್ಸ್‌ ಬಂದರೆ ಅವರಿಗೆ ʼಅಮ್ಮʼ ಬಂದಿದೆ ಎಂದೇ ಹೇಳುತ್ತಾರೆ. ದೇವಿಗೆ ʼತಂಪುʼ ಕೊಡುತ್ತಾರೆ. ಏಕೆಂದರೆ ಈ ಸಿಡುಬು ಇತ್ಯಾದಿಗಳು ಬರುವುದೇ ದೇಹವು ಅತಿಯಾದ ಉಷ್ಣಕ್ಕೆ ಒಳಗಾದಾಗ. ದೇವಿಗೆ ತಂಪು ಕೊಟ್ಟರೆ ದೇಹದ ಉಷ್ಣವು ಕಡಿಮೆಯಾಗಿ ಆ ಅಮ್ಮ ಬಂದ ಜನ ಗುಣಮುಖರಾಗುತ್ತಾರೆ ಎನ್ನುತ್ತಾರೆ. ಇದಕ್ಕೆ ಇಂಗ್ಲಿಷ್‌ ಔಷಧಿ ಕೊಡುವುದಿಲ್ಲ. ಬೇವಿನ ಸೊಪ್ಪನ್ನು ಮೈಮೇಲೆ ಆಡಿಸುತ್ತಾ, ನವೆ ಬರದ ಹಾಗೆ ನೋಡಿಕೊಳ್ಳುತ್ತಾರೆ. ಇದು ಮೂಢನಂಬಿಕೆ ಎಂದು ಅನೇಕರು ಹೇಳುತ್ತಾರೆ. ಆದರೆ ಕೆಲವು ವೈದ್ಯರೇ ಈ ಅಮ್ಮ ಬಂದಾಗ ಔಷಧಿ ಕೊಡಕೂಡದೆನ್ನುತ್ತಾರೆ” ಎಂದ.

ಇನ್ನೂ ಅನೇಕ ಹೊತ್ತು ಪ್ರಶ್ನೋತ್ತರ ಕಾರ್ಯ ನಡೆದಿತ್ತು.

ಅಪ್ರಮೇಯನ ಸುಳಿವು ಇದ್ದಕ್ಕಿದ್ದಂತೆ ಸಿಗದಿದ್ದ ಕಾರಣ ಸಿಟ್ಟುಗೊಂಡಿದ್ದ  ನೀಲಂ ಫಿಲಿಪ್‌ನತ್ತ ತಿರುಗಿ, “ನನ್ನ ಕಾಂಟ್ಯಾಕ್ಟ್‌ ನನ್ನನ್ನು ಅವಾಯ್ಡ್‌ ಮಾಡುತ್ತಿದ್ದಾನೆ. ಮಿ.ಫಿಲಿಪ್‌, ನಿನಗೆ ಅಪ್ರಮೇಯ ಸ್ವಾಮಿಯ ಕೊಲೆ ಮಾಡಲು ಸುಪಾರಿ ಇದೆ. ಆದರೆ ನನಗೆ ಆತನ ಶಿಷ್ಯನನ್ನು ಕೊಲ್ಲಲು ಸುಪಾರಿ ಬೇಕಿಲ್ಲ. ನನಗೆ ಈ ರೀತಿ ನಂಬಿಸಿ ಕುತ್ತಿಗೆ ಕೊಯ್ಯುವವರೆಂದರೆ ಮಹಾ ಅಲರ್ಜಿ. ನೀನು ಸ್ವಾಮಿಯನ್ನು ಕೊಲ್ಲು. ನಾನು ಈ ಶಿಷ್ಯನನ್ನು ಕೊಲ್ಲುತ್ತೇನೆ” ಎಂದಳು ಬಿರುಸಿನಿಂದ.

ಅವರೀಗ ಅಪ್ರಮೇಯನಿಂದ ಕೇವಲ ಐದು ಕಿಮೀ ದೂರದಲ್ಲಿದ್ದರು!

ಮುಂದುವರೆಯುವುದು…

ಯತಿರಾಜ್ ವೀರಾಂಬುಧಿ

Related post

Leave a Reply

Your email address will not be published. Required fields are marked *