ಹಿಂದಿನ ಸಂಚಿಕೆಯಿಂದ…
ಅಪ್ರಮೇಯನ ಪ್ರವಚನದಿಂದ ಕಳ್ಳ ಶಿಷ್ಯನಿಗೆ ಮನಸಿನ್ನಲ್ಲಿ ದ್ವಂದ ಏರ್ಪಟ್ಟು ಏನಾದರೂ ಸರಿ ನಾಯಕ್ ಕಡೆಯವರಿಂದ ಅಪ್ಪು ಸ್ವಾಮಿಯನ್ನು ಉಳಿಸಬೇಕೆಂದು ತೀರ್ಮಾನಿಸಿದ. ಮತ್ತೊಬ್ಬ ಶಿಷ್ಯನಿಗೆ ಸಹ ಜ್ಞಾನೋದಯವಾಗಿ ಇನ್ನು ಮುಂದೆ ಅವರ ಹತ್ತಿರ ಇರುವ ವಿಗ್ರಹವನ್ನು ಕದಿಯಲು ಯೋಚಿಸುವುದಿಲ್ಲವೆಂದು ತೀರ್ಮಾನಿಸಿದ. ಆದರೆ ನಾಯಕ್ ಗೆ ಈ ಯೋಜನೆಯಿಂದ ವಾಪಸಾಗಲು ಆಗುವುದಿಲ್ಲ ಯಾಕೆಂದರೆ ವಾಪಸ್ಸಾದರೆ ತಮ್ಮ ತಲೆಗಳು ಉಳಿಯುವುದಿಲ್ಲವೆಂದು ಗೊತ್ತು. ಮುಂದೆ…
–ಇಪ್ಪತ್ತೊಂದು–
“ದೆಹಲಿ ಇನ್ನು ನಾಲ್ಕು ಕಿಮೀ” ಎಂದ ಡ್ರೈವರ್ ಶ್ಯಾಮ್, “ಸ್ವಾಮೀ, ನೀವು ಎಲ್ಲಿಗೆ ಹೋಗಬೇಕು” ಎಂದು ಕೇಳಿದ.
“ನನಗೆ ಬಿರ್ಲಾ ಮಂದಿರ್ನಲ್ಲಿ ಕೆಲಸವಿದೆ” ಎಂದ ಅಪ್ರಮೇಯ. ಅವನಾಗಲೇ ತಾನೇನು ಮಾಡಬೇಕೆಂಬುದನ್ನು ನಿರ್ಧರಿಸಿದ್ದ.
ಕಾರು ಬಿರ್ಲಾ ಮಂದಿರ್ ಬಳಿಗೆ ಹೋಗುವ ಬಹಳ ಮೊದಲೇ ಕೆಟ್ಟು ನಿಂತಿತ್ತು. ಅದೊಂದು ನಿರ್ಜನ ಪ್ರದೇಶ. ಯಾರಾದರೂ ಬಂದು ಕೊಲೆ ಮಾಡಿದರೂ ಕಾಯುವ ನಾಥರಿಲ್ಲದ ಜಾಗವದು.
“ಇಲ್ಲೇಕೆ ನಿಲ್ಲಿಸಿದಿರಿ ಶ್ಯಾಮ್?” ಕೇಳಿದ ಅಪ್ರಮೇಯ.
ಶ್ಯಾಮ್ ಅಲ್ಲಿ ಕಾರು ನಿಲ್ಲಿಸಲು ಬಲವಾದ ಕಾರಣವಿತ್ತು. ತಮ್ಮನ್ನು ಬೆಂಬತ್ತಿ ಬರುತ್ತಿರುವ ಫಿಲಿಪ್ ಮತ್ತು ನೀಲಂ ಬಗ್ಗೆ ಅವನಿಗೆ ಅರಿವಿತ್ತು.
ಅವರು ಬರಲಿ, ತಮ್ಮ ಪ್ರಯತ್ನ ನಡೆಸಲಿ ಎಂಬುದೇ ಶ್ಯಾಮ್ನ ಅಭಿಪ್ರಾಯವಾಗಿತ್ತು.
ಏಕೆಂದರೆ ಒಮ್ಮೆ ದೆಹಲಿಯನ್ನು ಪ್ರವೇಶಿಸಿದರೆ ನಿಷ್ಕರುಣಿಯಾದ ಫಿಲಿಪ್ ಗುಂಡಿಗೆ ಯಾವ ತಪ್ಪೂ ಮಾಡದ ಇತರ ಜನರೂ ಬಲಿಯಾಗಬಹುದು. ಏಕೆಂದರೆ ಅವನು ತನ್ನ ಕೆಲಸ ಆಗುವವರೆಗೂ ಒಂದಿಷ್ಟೂ ಹೇಸುವುದಿಲ್ಲ. ಯಾರನ್ನು ಬೇಕಾದರೂ ಕೊಂದುಬಿಡಬಲ್ಲ.
ಶ್ಯಾಮ್ ಈಗ ಮತ್ತೊಂದು ವಿಷಯವನ್ನು ಅರಿಯಬೇಕಿತ್ತು. “ಸ್ವಾಮೀಜಿ, ನನ್ನ ಜೊತೆ ಬನ್ನಿ” ಎಂದು ಹೇಳಿ ಸ್ವಲ್ಪ ಮರಗಳಿದ್ದ ಜಾಗದ ಮರೆಗೆ ಕರೆದೊಯ್ದ.
ಅಪ್ರಮೇಯ ಪ್ರಶ್ನಾರ್ಥಕವಾಗಿ ಅವನತ್ತ ನೋಡಿದಾಗ “ನಿಮ್ಮ ಸೊಂಟಕ್ಕೆ ಕಟ್ಟಿಕೊಂಡಿರುವ ಗಂಟನ್ನು ತೋರಿಸುವಿರಾ?” ಎಂದ ಗಂಭೀರವಾಗಿ.
ಅಂದರೆ… ಅಂದರೆ… ಈತನೂ ಆ ವಿಗ್ರಹಗಳಿಗಾಗಿ ಬಂದವನೇನು? ಎಂದು ಅನುಮಾನ ಪಡಬೇಕೇನೋ ಎನ್ನುವಷ್ಟರಲ್ಲಿ ಶ್ಯಾಮ್ ತನ್ನ ಜೇಬಿಗೆ ಕೈ ಹಾಕಿ ಸ್ವಾಮಿಗಳಿಗೆ ಒಂದು ಕಾರ್ಡ್ ತೋರಿಸಿದ.
ಸ್ಯಾಮ್, ಇಂಟರ್ಪೋಲ್ ಎಂದಿತ್ತು ಆ ಕಾರ್ಡಿನಲ್ಲಿ. ಸ್ಯಾಮ್ನ ಫೋಟೋ ಕೂಡ ಇತ್ತು.
“ಸ್ಯಾಮ್!” ಎಂದು ಉದ್ಗರಿಸಿದ ಅಪ್ರಮೇಯ “ಒಟ್ಟಿನಲ್ಲಿ ಆ ನೀಲಮೇಘ ಶ್ಯಾಮನೇ ನನ್ನ ರಕ್ಷಣೆಗೆ ಶ್ಯಾಮ್ ಆಗಿ ಬಂದಿದ್ದಾನೆ” ಎಂದ ಅಪ್ರಮೇಯ ಭಾವುಕನಾಗಿ. ನಂತರ ತನ್ನ ಸೊಂಟದಲ್ಲಿ ಬಿಗಿದಿದ್ದ ಗಂಟನ್ನು ಬಿಚ್ಚಿ ಶ್ಯಾಮ್ನಿಗೆ ತೋರಿಸಿದ.
ಅದನ್ನು ನೋಡಿದ ಸ್ಯಾಮ್ನ ಮುಖ ಗಂಭೀರವಾಯಿತು.
“ಮತ್ತೆ… ? ಮತ್ತೆ…?” ಎಂದ ಮುಂದಕ್ಕೆ ಮಾತು ಹೊರಡದೇ.
ಅಪ್ರಮೇಯ ಏನು ಹೇಳುತ್ತಿದ್ದನೋ ಅಷ್ಟರಲ್ಲಿ “ಹ್ಞಾಂ!” ಎಂದು ಜೋರಾಗಿ ಚೀರಿದ್ದ ಒಬ್ಬ ಶಿಷ್ಯ.
ಇಬ್ಬರೂ ಕಾರಿನ ಬಳಿಗೆ ಓಡಿದರು.
ಅಲ್ಲಿ ಬಿದ್ದಿದ್ದ ಒಬ್ಬ ಶಿಷ್ಯ. ಅವನಿಗೆ ಗಾಯವೇನೂ ಆಗಿರಲಿಲ್ಲ. ಆದರೆ ವಿಪರೀತ ಹೆದರಿಬಿಟ್ಟಿದ್ದ.
ಅಷ್ಟರಲ್ಲಿ ಅಲ್ಲಿ ಮತ್ತೆ ಸುಂಯ್ ಎಂದು ಒಂದು ದುಂಬಿ ಹೋದಂತೆ ಸದ್ದಾಯಿತು.
ಶ್ಯಾಮ್ಗೆ ಅದು ಪಿಸ್ತೂಲಿನಿಂದ ಹಾರಿದ ಗುಂಡಿನ ಸಪ್ಪಳವೆಂದು ಅರ್ಥವಾಗಿತ್ತು.
ತಕ್ಷಣವೇ ಶಿಷ್ಯರನ್ನೆಲ್ಲಾ ಕಾರಿನ ಹಿಂದೆ ಅವಿತುಕೊಳ್ಳಲು ಹೇಳಿ ಅಪ್ಪು ಸ್ವಾಮಿಯ ಕೈ ಹಿಡಿದು ಎಳೆದುಕೊಂಡು ಮರಗಳ ಹಿಂದಕ್ಕೆ ಮತ್ತೆ ಓಡಿದ.
ಇಷ್ಟು ಹೊತ್ತು ದೂರದಿಂದ ಎರಡು ಗುಂಡು ಹಾರಿಸಿದ್ದಳು ನೀಲಂ. ಫಿಲಿಪ್ ಅವಳನ್ನು ಮುಂದಿನ ಗುಂಡನ್ನು ಹೊಡೆಯಲು ಬಿಡದೇ “ಒಮ್ಮೆ ಸ್ವಾಮಿಯ ಮೈಮೇಲೆ ವಿಗ್ರಹಗಳಿವೆಯಾ ಪರೀಕ್ಷಿಸಬೇಕು” ಎಂದು ಹತ್ತಿರ ಬರಲು ನಿರ್ಧರಿಸಿದ.
ನೀಲಂ ಅವನನ್ನು ತಡೆದಳು. ಅವಳ ಕೈ ಅವನ ಕಣ್ಣಿಗೆ ತಾಕಿತು. ಅವನ ಒಂದು ಕಾಂಟ್ಯಾಕ್ಟ್ ಲೆನ್ಸ್ ಉದುರಿಹೋಯಿತು. ಅದು ಅವರಿಬ್ಬರಿಗೂ ತಿಳಿಯಲಿಲ್ಲ.
ಅವನಿಗೆ ತನ್ನ ಲೆನ್ಸ್ ಬಿದ್ದಿದ್ದು ತಿಳಿಯಲಿಲ್ಲ. ಇವಳು ಅವನೆಡೆಗೆ ನೋಡದೇ ಗುಂಡು ಹಾರಿಸುವುದರಲ್ಲಿ ಮಗ್ನಳಾಗಿದ್ದಳಲ್ಲ! ಅದಕ್ಕೇ ಅವಳಿಗೂ ಅವನ ಒಂದು ಕಣ್ಣಿನ ಲೆನ್ಸ್ ಬಿದ್ದಿದ್ದು ತಿಳಿಯಲಿಲ್ಲ.
“ಒಂದು ನಿಮಿಷ ಇರು ಮಿ. ಫಿಲಿಪ್!” ಎಂದು ಹೇಳಿ ತನ್ನ ಬಳಿಯಿದ್ದ ಪಿಸ್ತೂಲನ್ನು ತೆಗೆದುಕೊಂಡು ಮೆಲ್ಲನೆ ಸ್ಯಾಮ್ ಮತ್ತು ಅಪ್ರಮೇಯ ಇದ್ದ ಜಾಗಕ್ಕೆ ಬರತೊಡಗಿದಳು.
ಅವಳು ಅವರಿಬ್ಬರನ್ನೂ ಸಮೀಪಿಸಿದಾಗ ಅವಳಿಗೆ ಅವರಿಬ್ಬರ ಪಾರ್ಶ್ವ ನೋಟ ಕಂಡಿತು.
ಅಬ್ಬ! ಅಂದರೆ ಇಬ್ಬರೂ ತನ್ನನ್ನು ಗಮನಿಸುತ್ತಿಲ್ಲ ಎಂದು ಉಸಿರು ಬಿಗಿಹಿಡಿದು ಅವರನ್ನು ಸಮೀಪಿಸಿ ಕ್ಷಣಕಾಲ ಮೈ ಮರೆತಿದ್ದ ಸ್ಯಾಮ್ನ ತಲೆಯ ಹಿಂಭಾಗಕ್ಕೆ ಪಿಸ್ತೂಲಿನ ಹಿಂಭಾಗದಿಂದ ಬಲವಾಗಿ ಬಾರಿಸಿದಳು.
ಸ್ಯಾಮ್ ಸದ್ದಿಲ್ಲದೇ ನೆಲಕಚ್ಚಿದ.
ಅವನು ಬಿದ್ದೊಡನೆ ಅಪ್ರಮೇಯ ನೀಲಂಳತ್ತ ತಿರುಗಿ ನೋಡಿ, “ನೀಲಾಂಬರಿ” ಎಂದ.
“ಹೌದು ಸ್ವಾಮಿ. ನಾನೇ. ನಮಸ್ಕಾರ” ಎನ್ನುತ್ತಲೇ ಫಿಲಿಪ್ನಿಗೆ ಸನ್ನೆ ಮಾಡಿ ಬಾ ಎಂದು ಕರೆದಳು.
ಶಿಷ್ಯರು ನಾಲ್ವರೂ ಗದಗದನೆ ಕಂಪಿಸುತ್ತಾ ಕಾರಿನ ಹಿಂದೆಯೇ ಅವಿತು ಕುಳಿತಿದ್ದರು.
ಫಿಲಿಪ್ ಈಗ ಅಪ್ರಮೇಯನನ್ನು ಸಮೀಪಿಸಿದ.
ಆ ಆಜಾನುಬಾಹು ಫಿಲಿಪ್ನನ್ನು ನೋಡಿದ ಅಪ್ರಮೇಯ. ಅಪ್ರಮೇಯನೂ ಸುಮಾರು ಆರಡಿ ಇದ್ದ. ಫಿಲಿಪ್ ಅವನಿಗಿಂತ ಕಾಲಡಿ ಹೆಚ್ಚು ಎತ್ತರವಿದ್ದ.
“ಅವನಿಗೆ ಅವನ ಬಟ್ಟೆಗಳನ್ನು ಕಳಚಲು ಹೇಳು!” ಎಂದ ಇಂಗ್ಲಿಷ್ ಭಾಷೆಯಲ್ಲಿ ಫಿಲಿಪ್ ಅಲ್ಲಿಯೇ ಇದ್ದ ನೀಲಂಗೆ.
“ಓ ಮಹಾಶಯಾ, ನನಗೂ ಇಂಗ್ಲಿಷ್ ಅರ್ಥವಾಗುತ್ತದೆ. ನಿನ್ನ ಕುತೂಹಲವನ್ನು ತಣಿಸಿಕೋ” ಎಂದು ಹೇಳಿದ ಅಪ್ರಮೇಯ ತನ್ನ ಮೇಲ್ವಸ್ತ್ರವನ್ನು ಕಳಚಿ ಪಕ್ಕದಲ್ಲಿ ಮಡಿಚಿಟ್ಟ.
ನಂತರ ತನ್ನ ಉಡಿಗೆ ಕೈ ಹಾಕಿ ತನ್ನ ಧೋತಿಯನ್ನು ಕಳಚಿದ.
ಒಬ್ಬ ಸರ್ವಸಂಗ ಪರಿತ್ಯಾಗಿಯಂತೆ ಅವನ ಮೈಮೇಲೀಗ ಮಾನ ಮುಚ್ಚುವ ಕೌಪೀನ ಒಂದೇ ಇತ್ತು. ನೀಲಂ ಅವನ ಅಂಗಸೌಷ್ಠವ ಕಂಡು ಬೆರಗಾದಳು.
“ಅವನ ಸೊಂಟದಲ್ಲಿನ ಗಂಟಿನಲ್ಲಿ ಏನಿದೆ ಎಂದು…” ಎಂದವನು ಅಪ್ರಮೇಯನಿಗೇ ಇಂಗ್ಲಿಷ್ ಬರುವುದೆಂದು ನೆನಪಾಗಿ, “ಗಂಟಿನಲ್ಲಿ ಏನಿದೆ ತೋರಿಸು” ಎಂದ ಫಿಲಿಪ್.
ಹೆಚ್ಚು ಕಡಿಮೆ ನಿರ್ವಾಣಸ್ಥಿತಿಯಲ್ಲಿದ್ದರೂ ನಿರ್ವಿಕಾರವಾಗಿ ಅವನ ಸೊಂಟದಲ್ಲಿದ್ದ ಗಂಟನ್ನು ತೆಗೆದು ತೋರಿಸಿದ.
ಅದರಲ್ಲಿದ್ದುದು ಅವನ ಗುರು ಕುಮಾರಾನಂದ ಸ್ವಾಮಿಯವರ ಒಂದೆರಡು ಅಸ್ಥಿಗಳು. ಅವನ್ನು ಗಂಗೆಯಲ್ಲಿ ವಿಸರ್ಜಿಸಲು ಸಂಗ್ರಹಿಸಿ ತನ್ನ ಟೊಂಕದಲ್ಲಿ ಗಂಟು ಹಾಕಿಕೊಂಡಿದ್ದ.
ಅವಳು ಅಚ್ಚರಿಯಿಂದ ನೋಡಿದಳು.
ಅಂದರೆ ಈ ಸ್ವಾಮಿಯ ಬಳಿ ವಿಗ್ರಹಗಳಿಲ್ಲವೇ? ಮತ್ತೆ ತಾವ್ಯಾಕೆ ಈ ಸ್ವಾಮಿಯನ್ನು ಬೆಂಬತ್ತಿದ್ದೇವೆ?
“ಇದೊಂದು ಚಿಕ್ಕ ಬಟ್ಟೆ ಚೂರು ನನ್ನ ಮೈಮೇಲಿದೆ. ಇದರಲ್ಲಿ ಖಂಡಿತ ನಾನು ದೇವರ ವಿಗ್ರಹಗಳನ್ನು ಇಟ್ಟುಕೊಳ್ಳುವ ಪಾಪದ ಕೆಲಸ ಮಾಡಲಾರೆ. ನಿಮಗೆ ಅನುಮಾನವಿದ್ದರೆ ಅದನ್ನು ಪರಿಹರಿಸಿಕೊಳ್ಳಬಹುದು. ನನಗೆ ಯಾವುದೇ ಸಂಕೋಚವಿಲ್ಲ. ನಿಮಗೆ ಇದ್ದರೆ ದಯವಿಟ್ಟು ಆ ಕಡೆ ತಿರುಗಿಕೊಳ್ಳಿ” ಎಂದ ಮತ್ತದೇ ವಿಕಾರವಿಲ್ಲದ ದನಿಯಲ್ಲಿ ನೀಲಂಳಿಗೆ ಹೇಳಿದ.
ನಂತರ ನೇರವಾಗಿ ಫಿಲಿಪ್ನ ಮುಖ ನೋಡಿದ.
ಅವನ ಮುಖದಲ್ಲಿ ಏನೋ ವಿಚಿತ್ರ ಕಂಡಿತ್ತು ಅಪ್ಪುವಿಗೆ. ಇದೇನು? ಈ ಮನುಷ್ಯನ ಒಂದು ಕಣ್ಣು ನೀಲಿ, ಮತ್ತೊಂದು ಕಣ್ಣು ಕಪ್ಪು?
ಫಿಲಿಪ್ ಈಗ ನೀಲಂಳತ್ತ ತಿರುಗಿ, “ಇವರುಗಳ ಲಗೇಜ್ ಚೆಕ್ ಮಾಡೋಣ ಬಾ” ಎಂದು ಕಾರಿನತ್ತ ದಾಪುಗಾಲು ಹಾಕಿದ.
ನಾಲ್ವರು ಶಿಷ್ಯರೂ ಒಮ್ಮೆ ಕಿಟಾರನೆ ಚೀರಿ ರಸ್ತೆಯ ಆ ಬದಿಗೆ ಓಡಿಹೋದರು.
ಕಾರಿನ ಬಾಗಿಲು ತೆರೆದಿತ್ತು.
ಅದರಲ್ಲಿ ಜೋತಾಡುತ್ತಿದ್ದ ಬೀಗದ ಕೈ ತೆಗೆದುಕೊಂಡು ಕಾರಿನ ಹಿಂದಿನ ಡಿಕ್ಕಿ ತೆರೆದಳು ನೀಲಂ.
ಅಷ್ಟರಲ್ಲಿ ಅಪ್ರಮೇಯ ತನ್ನ ಉಡುಪುಗಳನ್ನು ಮತ್ತೆ ಧರಿಸಿದ.
ನೆಲದ ಮೇಲೆ ಬಿದ್ದಿದ್ದ ಸ್ಯಾಮ್ಗೆ ನಿಧಾನವಾಗಿ ಎಚ್ಚರವಾಯಿತು.
“ಸ್ವಾಮೀ! ಏನಾಯಿತಿಲ್ಲಿ?” ಎಂದ ತಲೆಯ ಹಿಂಭಾಗವನ್ನು ನೇವರಿಸಿಕೊಳ್ಳುತ್ತಾ.
“ಅಂದು ಬಂದಿದ್ದ ನೀಲಾಂಬರಿ ನಿಮ್ಮ ತಲೆಯ ಹಿಂಭಾಗಕ್ಕೆ ಆಕೆಯ ಪಿಸ್ತೂಲಿನಿಂದ ಹೊಡೆದಳು. ನೀವು ಪ್ರಜ್ಞೆ ತಪ್ಪಿ ಬಿದ್ದಿರಿ” ಎಂದ ಅಪ್ಪು.
“ಅವರೆಲ್ಲಿ ಈಗ?” ಎಂದ.
“ಕಾರಿನಲ್ಲಿ ಏನನ್ನೋ ಹುಡುಕುತ್ತಿದ್ದಾರೆ. ಬಹುಶಃ ವಿಗ್ರಹಗಳನ್ನಿರಬೇಕು” ಎಂದ ವ್ಯಥೆಯಿಂದ ಅಪ್ರಮೇಯ.
ಅವನಿಗೆ ಈ ಎಲ್ಲ ವಿದ್ಯಮಾನಗಳಿಂದ ಬಹಳವೇ ಖೇದವಾಗಿತ್ತು. ದೇವರು ಎಂಬ ಭಯವೂ ಇಲ್ಲದ ಜನ. ಇತರರ ಪ್ರಾಣಕ್ಕೆ ಸಂಚಕಾರ ತರಲು ಕೂಡ ಹೇಸದ ಜನ.
“ಯಾರು ಸ್ವಾಮಿ ಆಕೆಯ ಜೊತೆ ಬಂದಿರುವುದು?” ಎಂದ ಎದ್ದು ಕುಳಿತ ಸ್ಯಾಮ್.
“ಆತ ಪಠಾಣನಂತೆ ಕಂಡ. ಆದರೆ ನನ್ನ ಬಳಿ ಆಕೆಯ ಬಳಿ ಇಂಗ್ಲಿಷ್ ಮಾತಾಡಿದ. ಆತನಲ್ಲಿ ಒಂದು ವಿಚಿತ್ರ ಕಂಡೆ” ಎಂದ ಅಪ್ರಮೇಯ.
“ಏನು ಸ್ವಾಮೀ?” ಎಂದ ಸ್ಯಾಮ್ ಆತುರದಿಂದ.
ದೂರದಲ್ಲಿ ಅವನಿಗೆ ದೊಡ್ಡ ರೈಫಲ್ ಹಿಡಿದಿದ್ದ ಆಜಾನುಬಾಹು ಕಂಡಿದ್ದ.
“ಪಠಾಣನಾ? ಅವನಲ್ಲಿ ಏನು ವಿಚಿತ್ರ ಕಂಡಿರಿ?” ಅವಸರದಿಂದ ಕೇಳಿದ ಸ್ಯಾಮ್.
“ಆತನ ಒಂದು ಕಣ್ಣು ಕಪ್ಪಗಿತ್ತು. ಮತ್ತೊಂದು ನೀಲವರ್ಣದ್ದು” ಎಂದ ಅಪ್ರಮೇಯ.
ತಕ್ಷಣವೇ ಜಾಗೃತನಾದ ಸ್ಯಾಮ್ ತನ್ನ ಜೇಬಿನಿಂದ ಮೊಬೈಲ್ ತೆಗೆದು ಅದರಲ್ಲಿದ್ದ ಫಿಲಿಪ್ನ ಭಾವಚಿತ್ರವನ್ನು ಅಪ್ರಮೇಯನಿಗೆ ತೋರಿಸಿದ.
ಅಪ್ರಮೇಯ ಅದನ್ನು ಕೂಲಂಕಷವಾಗಿ ನೋಡಿ, “ಹೀಗೇ ಕಾಣುವನೇನೋ ಅವನು ಬಿಳಿ ಬಣ್ಣದ ಚರ್ಮ ಹೊಂದಿದವನಾಗಿದ್ದು, ಎರಡೂ ಕಣ್ಣುಗಳೂ ನೀಲವರ್ಣದ್ದಾಗಿದ್ದರೆ” ಎಂದ.
ಆಗ ಹೊಳೆಯಿತು ಸ್ಯಾಮ್ಗೆ, ಇವನು ಷಾರ್ಪ್ ಶೂಟರ್ ಫಿಲಿಪ್ ಸ್ಟೋನ್ ಬ್ರಿಡ್ಜ್ ಎಂದು.
ಅವನು ತನ್ನ ಪಿಸ್ತೂಲು ಸಿದ್ಧ ಮಾಡಿಕೊಳ್ಳುತ್ತಿದ್ದಂತೆ …
ಇತ್ತ ಕಾರಿನ ಎಲ್ಲಾ ಲಗೇಜನ್ನೂ ತೆಗೆದು ಕಿತ್ತು ಹಾಕಿದ್ದರು ಫಿಲಿಪ್ ಮತ್ತು ನೀಲಂ.
ಅವರಲ್ಲಿ ಹತಾಶೆ ಎದ್ದು ಕಾಣುತ್ತಿತ್ತು.
ವಿಗ್ರಹಗಳು ಇಲ್ಲದೇ ಹೋಗಿಬಿಟ್ಟವಲ್ಲಾ? ಎಲ್ಲಿ ಬಚ್ಚಿಟ್ಟಿದ್ದಾನೆ ಈ ಸನ್ಯಾಸಿ? ಎಂದುಕೊಂಡರು ಇಬ್ಬರೂ.
ಇತ್ತ ಸ್ಯಾಮ್ ತನ್ನ ಬಳಿಯಿದ್ದ ಬೈನಾಕ್ಯುಲರ್ಸ್ನಿಂದ ಆ ಆಜಾನುಬಾಹುವನ್ನು ಗಮನಿಸಿದ.
ಹೌದು, ಇವನು ಇಂಗ್ಲಿಷ್ಮನ್ ಆಗಿರಲಿಕ್ಕೆ ಸಾಧ್ಯವಿಲ್ಲ. ಇವನ ಬಣ್ಣ ಕಂದು. ಬಹುಶಃ ಸ್ವಾಮಿಗಳು ಅವನ ಕಣ್ಣಿನ ಬಣ್ಣದ ಬಗ್ಗೆ ಸರಿಯಾಗಿ ಅರಿಯಲಿಲ್ಲವೇನೋ…
ಆಗ ಅವನ ದೃಷ್ಟಿ ಮುಂದಕ್ಕೆ ಬಾಗಿ ಕಾರಿನ ಒಳಗೆ ಹುಡುಕಾಡುತ್ತಿದ್ದ ಫಿಲಿಪ್ನ ಕಾಲುಗಳ ಹಿಂಭಾಗದ ಮೇಲೆ ಬಿದ್ದಿತು.
ಅರೆ! ಇವನು ಇಲ್ಲಿ ತಪ್ಪು ಮಾಡಿದ್ದಾನೆ. ಎಲ್ಲ ಕಡೆ ಕಂದು ಬಣ್ಣ ಬಳಿದುಕೊಂಡವನು ತನ್ನ ಹಿಮ್ಮಡಿಯ ಮೇಲ್ಭಾಗದ ಕಾಲಿನ ಕಂಬಕ್ಕೆ ಕಂದು ಬಣ್ಣ ಹಚ್ಚಿಕೊಳ್ಳಲು ಮರೆತು ದೊಡ್ಡ ತಪ್ಪು ಮಾಡಿದ್ದಾನೆ.
ಇತ್ತ ಫಿಲಿಪ್, “ಹೊರಡೋಣ. ನಾಯಕ್ಗೆ ಫೋನ್ ಮಾಡು. ಯಾರೋ ತಪ್ಪು ಮಾಹಿತಿ ಕೊಟ್ಟಿದ್ದಾರೆ ಈ ಸ್ವಾಮಿಯ ಬಳಿ ವಿಗ್ರಹಗಳಿವೆ ಅಂತ. ಈ ನಮ್ಮ ಕೆಲಸಗಳಿಗೆ ಯಾವುದೇ ಸಾಕ್ಷಿ ಉಳಿಸಕೂಡದು. ಸೋ, ನಾನೀಗ ಸ್ವಾಮಿಗೂ ಅವನ ಡ್ರೈವರ್ಗೂ ಇಲ್ಲಿಂದಲೇ ಗುಂಡು ಹಾರಿಸ್ತೇನೆ. ನೀನು ಆ ನಾಲ್ವರು ಶಿಷ್ಯರ ಕತೆ ಮುಗಿಸು” ಎಂದ.
ಹಾಗೆಂದವನೇ ಅಪ್ರಮೇಯ ಮತ್ತು ಸ್ಯಾಮ್ ಇದ್ದ ಮರದ ಕಡೆಗೆ ತಿರುಗಿ ತನ್ನ ರೈಫಲ್ಲಿನ ಮುಂಭಾಗಕ್ಕೆ ಸೈಲೆನ್ಸರ್ ಅನ್ನು ಸ್ಕ್ರೂನಂತೆ ತಿರುಗಿಸಿ ಜೋಡಿಸಲು ಶುರು ಮಾಡಿದ.
ಅದೇ ಅವನು ಮಾಡಿದ ತಪ್ಪು!
ಸ್ಯಾಮ್ನ ಪಿಸ್ತೂಲು ಸದ್ದಿಲ್ಲದೇ ಗುಂಡನ್ನು ಹೊರಡಿಸಿತ್ತು.
ಅವನು ಹಾರಿಸಿದ ಗುಂಡು ನೇರವಾಗಿ ಫಿಲಿಪ್ನ ಬಲಭುಜಕ್ಕೆ ಬಡಿಯಿತು. ಮುಂದಿನ ಗುಂಡು ಅವನ ಬಲಗೈಗೆ ಬಡಿಯಿತು.
“ಔಚ್!” ಎನ್ನುತ್ತಾ ಅವನು ಮುಗ್ಗರಿಸಿ ಬಿದ್ದ.
ಮಿಂಚಿನ ವೇಗದಲ್ಲಿ ಓಡಿದ ಸ್ಯಾಮ್ ಫಿಲಿಪ್ನ ಕೈಗಳನ್ನು ಹಿಂದೆ ಸೇರಿಸಿ ತನ್ನ ಕಾರಲ್ಲಿಟ್ಟಿದ್ದ ಪ್ಲಾಸ್ಟಿಕ್ನ ಗಟ್ಟಿ ದಾರದಲ್ಲಿ ಬಂಧಿಸಿದ.
ಮರುಕ್ಷಣ ನೀಲಂಳ ಹಿಂದೆ ಹೋದ.
ಅವಳು ಪಿಸ್ತೂಲು ಹಿಡಿದು ಬಂದಳೆಂದು ನಾಲ್ವರು ಶಿಷ್ಯರೂ ಚೆಲ್ಲಾಚೆದುರಾಗಿ ಓಡತೊಡಗಿದರು.
ನೀಲಂಳಿಗೆ ಉಳಿದ ಶಿಷ್ಯರನ್ನು ಕೊಲ್ಲುವುದರಲ್ಲಿ ಆಸಕ್ತಿ ಇರಲಿಲ್ಲ. ಮೊದಲು ನೆರವು ನೀಡಿ ನಂತರ ಸುಮ್ಮನಾಗಿದ್ದ ಕಳ್ಳ ಶಿಷ್ಯನನ್ನುಕೊಲ್ಲಲು ಅವನ ಹಿಂದೆ ಓಡುತ್ತಿದ್ದಳು.
ನಿರ್ಜನವಾಗಿದ್ದ ಆ ಪ್ರದೇಶವನ್ನು ಸ್ಯಾಮ್ ಬೇಕೆಂದೇ ಆರಿಸಿದ್ದ. ಬೇರಾರೂ ಅಲ್ಲಿ ಆ ಸಮಯದಲ್ಲಿ ಬರಕೂಡದೆಂಬುದು ಅವನ ಇಚ್ಛೆಯಾಗಿತ್ತು.
ಶಿಷ್ಯ ಇನ್ನು ಓಡಲಾಗದೇ ಆಯಾಸದಿಂದ ಮುಗ್ಗರಿಸಿ ಬಿದ್ದ.
ನೀಲಂ ಕ್ರೂರವಾಗಿ ನಗುತ್ತಾ, “ನನಗೆ ಮೋಸ ಮಾಡಿದ್ದಕ್ಕೆ ನಿನಗೆ ಇದೇ ಶಿಕ್ಷೆ” ಎಂದು ಗರ್ಜಿಸಿ ಟ್ರಿಗರ್ ಎಳೆಯುವಷ್ಟರಲ್ಲಿ ಅಲ್ಲಿಗೆ ಚಿಗರೆಯಂತೆ ಓಡಿ ಬಂದಿದ್ದ ಸ್ಯಾಮ್ ತನ್ನ ಪಿಸ್ತೂಲಿನಿಂದ ಅವಳ ಬಲಗೈಗೆ ಶೂಟ್ ಮಾಡಿದ್ದ.
ಅವಳು ಚೀರುತ್ತಾ ಕೆಳಗೆ ಬಿದ್ದಳು.
ಅವಳ ಕೈಗಳನ್ನೂ ಹಿಂದಕ್ಕೆ ಸೇರಿಸಿ, ಒಂದು ಪ್ಲಾಸ್ಟಿಕ್ ಹಗ್ಗದಲ್ಲಿ ಕಟ್ಟಿ ಹಾಕಿ ತನ್ನ ಮೊಬೈಲ್ ಬಳಸಿ ಕೆಲವು ಕರೆಗಳನ್ನು ಮಾಡಿದ.
ನಂತರ ಸ್ವಾಮಿ ಅಪ್ರಮೇಯನ ಬಳಿಗೆ ಹೋಗಿ “ನಿಮ್ಮನ್ನು ಕೊಲ್ಲಿಸಲು, ನಿಮ್ಮ ವಿಗ್ರಹಗಳನ್ನು ವಿದೇಶಕ್ಕೆ ಮಾರಲು ಮುಂದಾದವರಿಗೆ ನೆರವು ನೀಡಿದ ಶಿಷ್ಯನ ಹೆಸರು ಹೇಳಲೇ?” ಎಂದು ಕೇಳಿದ.
ಸ್ವಾಮಿ ಅಪ್ರಮೇಯ “ದಯವಿಟ್ಟು ಹೇಳಬೇಡಿ” ಎಂದ.
“ಯಾಕೆ? ನಿಮಗೆ ಅವನಾರೆಂದು ಅರಿಯುವ ಕುತೂಹಲ ಇಲ್ಲವೇ?” ಎಂದ ಸ್ಯಾಮ್ ಅಚ್ಚರಿಯಿಂದ.
“ನನಗೆ ಅವನಾರೆಂದು ತಿಳಿದಿದೆ” ಎಂದ ಅಪ್ರಮೇಯ ಗಂಭೀರವಾಗಿ.
ಸ್ಯಾಮ್ ಬೆಚ್ಚಿಬಿದ್ದ.
“ಮತ್ತೆ…?” ಎಂದ ಗಲಿಬಿಲಿಯಿಂದ.
“ನಿಮ್ಮ ಈ ಕೆಲಸಗಳನ್ನು ಮುಗಿಸಿ. ನಂತರ ಮಾತಾಡೋಣ” ಎಂದ ಅಪ್ರಮೇಯ ಅಲ್ಲೇ ನೆಲದ ಮೇಲೆ ಅಸೌಕರ್ಯದಿಂದ ಕುಳಿತಿದ್ದ ಫಿಲಿಪ್ ಮತ್ತು ನೀಲಂ ಕಡೆಗೆ ನೋಡಿ.
“ಸ್ವಾಮೀ, ನನ್ನದು ಇನ್ನೊಂದು ಪ್ರಶ್ನೆ ಇದೆ” ಎಂದ ಸ್ಯಾಮ್.
“ವಿಗ್ರಹಗಳು ಎಲ್ಲಿವೆ ಎಂಬ ಪ್ರಶ್ನೆಯೇ?” ಎಂದು ಮುಗುಳ್ನಕ್ಕ ಅಪ್ರಮೇಯ.
ಮುಂದುವರೆಯುವುದು…
ಯತಿರಾಜ್ ವೀರಾಂಬುಧಿ