ಪರಾಭವ ಭಾವನಾ – 3 ಯತಿರಾಜ್‌ ವೀರಾಂಬುಧಿ

ಹಿಂದಿನ ಸಂಚಿಕೆಯಲ್ಲಿ

ಅಪ್ರಮೇಯನ ಮನಸಿನಲ್ಲಿ ಗುರುಗಳ ದೇಹದ ಮೇಲೆ ಸುತ್ತ ಗಾಯಗಳು ಹೇಗಾದವು ಎಂಬ ಚಿಂತೆಗೆ ಬೀಳುತ್ತಾನೆ.ಅವರು ಇಟ್ಟಿಕೊಂಡಿದ್ದ ರಹಸ್ಯಗಳಾದರು ಏನು ?

ಮೂರು

ಪ್ರಪಂಚದಲ್ಲಿನ ದುಷ್ಟತನಕ್ಕೆ ಕೊನೆಯೇ ಇಲ್ಲವೇನೋ…

ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ|

‍‍ಧರ‍್ಮಸಂಸ್ಥಾಪನಾರ‍್ಥಾಯ ಸಂಭವಾಮಿ ಯುಗೇ ಯುಗೇ||

ಎನ್ನುತ್ತಾನೆ ಆ ದೇವದೇವ. ಸಜ್ಜನರನ್ನು ಉಳಿಸಲೆಂದು, ಕೇಡಿಗರನ್ನು ಅಳಿಸಲೆಂದು, ಧರ‍್ಮವನ್ನು ನೆಲೆಗೊಳಿಸಲೆಂದು ಯುಗ ಯುಗದಲ್ಲೂ ಮೂಡಿ ಬರುತ್ತೇನೆ ಎಂದಿದ್ದಾನೆ. ಆದರೆ ಇನ್ನೂ ಒಂದು ಮಾತು ನಾವು ಕೇಳಿದ್ದೇವೆ. ಪಾಪದ ಕೊಡ ತುಂಬುವವರೆಗೂ ಶಿಕ್ಷೆ ಕೊಡಲು ಆ ಭಗವಂತ ಬರುವುದಿಲ್ಲ.

ಅಪ್ರಮೇಯನ ಗುರು ಕುಮಾರಾನಂದ ಸ್ವಾಮಿಯಾಗಲೀ, ರಾಮೇಶ್ವರಂ ದೇಗುಲದ ನಿವೃತ್ತ ಅರ್ಚಕ ಸೋಮಯಾಜಿಯಾಗಲೇ ಮಾಡಿದ ತಪ್ಪೇನು?

ಅವರ ಬಳಿ ಭದ್ರವಾಗಿದ್ದ ದೇವರ ವಿಗ್ರಹಗಳನ್ನು ಕಳ್ಳರಿಗೆ, ದುಷ್ಟರಿಗೆ ಕೊಡದೇ ಮುಚ್ಚಿಟ್ಟದ್ದು.

ಅದಕ್ಕೇ ಅವರಿಗೆ ಭಯಾನಕ ಶಿಕ್ಷೆಗಳನ್ನು ನೀಡಿದ್ದರು ದುರುಳರು.

ಕುಮಾರಾನಂದ ಸ್ವಾಮಿಗಳ ದೇಹದ ಮೇಲೆ ಆಗಿದ್ದ ಅಪಚಾರವನ್ನು ಅಪ್ಪು ತಾನೇ ಕಣ್ಣಾರೆ ಕಂಡಿದ್ದ. ಹೇಗಾದರೂ ಗುರುಗಳಿಂದ ಬಾಯಿ ಬಿಡಿಸಬೇಕೆಂದು ಬೇಕಾದಷ್ಟು ಹಿಂಸೆ ಮಾಡಿದ್ದರು ದುರುಳರು. ಆದರೆ ಆ ಪುಣ್ಯಾತ್ಮ ಬಾಯ್ಬಿಡದೇ ಪ್ರಾಣ ತೊರೆದಿದ್ದರು.

ಅಪ್ರಮೇಯ ಸೋಮಯಾಜಿಗಳ ಮನೆಯಿಂದ ಬಂದೊಡನೆಯೇ ಅವರ ಮನೆಗೆ ನುಗ್ಗಿದ್ದರು ಇಬ್ಬರು ದುಷ್ಟರು. ಅವರನ್ನು ನಾನಾ ರೀತಿಯ ಹಿಂಸೆ ಮಾಡಿ ಅವರಿಂದ ವಿಗ್ರಹಗಳ ಬಗ್ಗೆ ತಿಳಿದುಕೊಂಡುಬಿಟ್ಟರು.

ಅದೀಗ ಅಪ್ಪುವಿನ ಬಳಿ ಇದೆಯೆಂಬ ಸುಳಿವು ಸಿಕ್ಕಿತ್ತು.

ನಾಲ್ಕು ಜನ ಶಿಷ್ಯರಲ್ಲಿ ಒಬ್ಬ ಶಿಷ್ಯ ಆ ದುಷ್ಟರಿಂದ ಕೊಳ್ಳಲ್ಪಟ್ಟಿದ್ದ. ಅವರ ಬೆದರಿಕೆಯೂ ಇತ್ತು. ಆಮಿಷ ಮತ್ತು ಭಯ – ಇವೆರಡರ ಸಹಾಯದಿಂದ ಅವರು ಒಬ್ಬ ಶಿಷ್ಯನನ್ನು ತಮ್ಮ ಕಡೆಗೆ ಸೆಳೆದುಕೊಂಡಿದ್ದರು.

ಅವನೀಗ ರಾಮೇಶ್ವರಂ ರೈಲ್ವೇ ನಿಲ್ದಾಣದಿಂದ ಕಳ್ಳರ ನಾಯಕನಿಗೆ ಫೋನ್‌ ಮಾಡಿದ್ದ. ಆ ನಾಯಕನ ಅಡ್ಡ ಹೆಸರು ನಾಯಕ್‌ ಎಂದೇ ಇತ್ತು.

ನಾಯಕ್‌ ಅಪ್ಪುವಿನ ಶಿಷ್ಯ ಫೋನ್‌ ಮಾಡಿದಾಗ, “ನಿನ್ನ ಕೆಲಸ ಇಪ್ಪತ್ತನಾಲ್ಕು ಗಂಟೆಗಳೂ ಆ ಅಪ್ರಮೇಯನ ಮೇಲೆ ಕಣ್ಣಿಡುವುದು. ಸಮಯ ಸಿಕ್ಕಾಗ ನಾವು ಬಂದು ಆ ವಿಗ್ರಹಗಳನ್ನು ಕಿತ್ತೊಯ್ಯುತ್ತೇವೆ” ಎಂದಿದ್ದ.
“ಮೊದಲು ಅದನ್ನು ನಿಮ್ಮ ಗುರು ಎಲ್ಲಿ ಬಚ್ಚಿಟ್ಟಿದ್ದಾನೇಂತ ಕಂಡುಹಿಡಿ! ಆಮೇಲೆ ನನಗೆ ಫೋನ್‌ ಮಾಡು” ಎಂದು ಹೇಳಿ ಫೋನಿಟ್ಟಿದ್ದ.

ಈಗ ನಾಲ್ವರೂ ರಾಮೇಶ್ವರಂ ಸ್ಟೇಷನ್ನಿನಲ್ಲಿ ರೈಲಿಗೆ ಕಾಯುತ್ತಿದ್ದರು.

ಅಪ್ಪು ಈಗ ನೇರವಾಗಿ ದೆಹಲಿಗೆ ಡೈರೆಕ್ಟ್‌ ರೈಲಿನಲ್ಲಿ ಹೋಗುವನೆಂದು ಎಣಿಸಿದ್ದರು ಶಿಷ್ಯರು.

“ಈಗ ನಾವು ಮದುರೈಗೆ ಹೋಗ್ತಿದ್ದೇವೆ” ಎಂದ ಅಪ್ಪು.

“ಟಿಕೆಟ್‌ ರಿಸರ್ವೇಷನ್‌ ಸಿಗಲ್ವಲ್ಲಾ?” ಎಂದ ಕಬೀರ್.‌

“ಪರವಾಗಿಲ್ಲ. ಟಿಕೆಟ್‌ ತಾ” ಎಂದು ತುಲಸೀದಾಸ್‌ನನ್ನು ಕಳಿಸಿದ ಅಪ್ಪು.

“ಸಂಜೆ ಆರು ಗಂಟೆಯ ಪ್ಯಾಸೆಂಜರ್‌ ಟ್ರೈನಿಗೆ ಸಿಕ್ತು ಗುರೂಜೀ” ಎಂದ ಕಬೀರ್‌ ಟಿಕೆಟ್‌ ತರಲು ಹೋಗಿದ್ದವನು ಮರಳಿ ಬಂದು.

“ಒಳ್ಳೆಯದಾಯಿತು” ಎಂದ ಅಪ್ಪು. ಆ ರೈಲು ಅಲ್ಲಿಂದಲೇ ಹೊರಡುತ್ತಿದ್ದುದರಿಂದ ಬೇಗನೆ ಹೋಗಿ ರೈಲು ಹತ್ತಿ ಕುಳಿತರು.

ಎದುರೆದುರಿಗೆ ಐದು ಜನರೂ ಕುಳಿತರು. ಅಪ್ಪು ಕಿಟಕಿಯ ಪಕ್ಕದ ಸೀಟು ಹಿಡಿದ.

ಅವನ ಮನದಲ್ಲಿ ನೂರೆಂಟು ಆಲೋಚನೆಗಳು ಬುಲೆಟ್‌ ಟ್ರೈನಿನಂತೆ ಓಡುತ್ತಿದ್ದವು.

ಇವರಲ್ಲಿ ಯಾರಿಬ್ಬರು ನನಗೆ ಬೇಕಾದವರು? ಯಾರಿಬ್ಬರು ನನಗೆ ಶತ್ರುಗಳು? ಹೇಗೆ ಇವರನ್ನು ಕಂಡುಹಿಡಿಯಲಿ? ನಾಲ್ವರನ್ನೂ ಹೋಗಿ ಎಂದುಬಿಟ್ಟರೆ! ಎಂಬ ಪ್ರಶ್ನೆಯೂ ಒಮ್ಮೆ ಅವನ ಮನದಲ್ಲಿ ಮೂಡಿತ್ತು. ಆಮೇಲೆ ಅನ್ನಿಸಿತು. ಬೇಡ. ಶತ್ರು ಪಕ್ಕದಲ್ಲಿದ್ದರೇನೇ ಅವನ ಮುಂದಿನ ಹೆಜ್ಜೆ ಏನೆಂದು ನನಗೆ ಅರ್ಥವಾಗುವುದು ಸುಲಭ. ಅದು ಬಿಟ್ಟು ನಾನು ಅವರನ್ನು ಕಳಿಸಿಬಿಟ್ಟರೆ ತನಗೇ ಆಪತ್ತು!

ಇನ್ನೂ ಒಂದು ಲಾಭವಿದೆ ಇವರು ಜೊತೆಯಲ್ಲಿದ್ದರೆ! ತನ್ನ ಸುತ್ತಲೂ ನಾಲ್ವರಿದ್ದಾರೆಂದು ಇವರಲ್ಲದೇ ಬೇರಾರಾದರೂ ಶತ್ರುಗಳಿದ್ದರೆ ಅವರಿಂದ ತನಗೆ ಇವರೇ ರಕ್ಷಣಾಗೋಡೆ…

ಹೀಗೇ ಓಡುತ್ತಿದ್ದವು ಅವನ ತಲೆಯಲ್ಲಿ ಆಲೋಚನೆಗಳು. ರೈಲು ಕೂಡ ಪಾಂಬನ್‌ ಜಂಕ್ಷನ್‌ ದಾಟಿ ಮಂಡಪಂ ಸ್ಟೇಷನ್‌ ಕಡೆಗೆ ಧಾವಿಸುತ್ತಿತ್ತು.

ಡಗ್‌ ಡಗ್‌ ಎಂಬ ಸದ್ದಿಗೆ ಕಣ್ತೆರೆದು ನೋಡಿದ ಅಪ್ಪು. ಪ್ರತಿಸಲ ಈ ಜಾಗ ಅವನಿಗೆ ಅದ್ಭುತವೆನಿಸುತ್ತಿತ್ತು.

ಮಾನವನ ಕ್ರಿಯಾಶಕ್ತಿಗೆ ಪ್ರತೀಕದಂತಿತ್ತು ಈಗ ರೈಲುಗಾಡಿ ಹೋಗುತ್ತಿದ್ದ ಪಾಂಬನ್‌ ಬ್ರಿಡ್ಜ್.‌

ಬೂದಿಯಾದರೂ ಮೇಲೆ ಮತ್ತೆ ಬಂದ ಫೀನಿಕ್ಸ್‌ ಪಕ್ಷಿಯಂತೆ ಈ ಸೇತುವೆಯನ್ನು ಮೂರನೇ ಸಲ ನಿರ್ಮಿಸಲಾಗಿತ್ತು. ಸುಮಾರು ೨ ಕಿಮೀ ದೂರ. ನಡುವೆ ಒಂದು ಕಮಾನ್‌ ಇತ್ತು. ಯಾವುದಾದರೂ ಹಡಗು ಬಂದಾಗ ಸೇತುವೆ ಎರಡಾಗಿ ಹಡಗು ಹೋಗಲು ಜಾಗ ಮಾಡಿಕೊಡುತ್ತಿತ್ತು.

ಸಮುದ್ರದ ಮೇಲಿನ ಅದ್ಭುತ ಈ ಪಾಂಬನ್‌ ಸೇತುವೆ. ೧೯೬೪ರಲ್ಲಿ ಹುಚ್ಚು ಮಳೆಯ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿತ್ತು. ಮತ್ತೆ ಕಟ್ಟಲ್ಪಟ್ಟು ಮತ್ತೆ ಮುಳುಗಿ ಈಗ ಮೂರನೆಯ ಸಲ ಭದ್ರವಾಗಿ ನಿಂತಿದೆ. ಆ ಸೇತುವೆಗೆ ಬಳಸಿದ ಸಿಮೆಂಟ್‌ ಕಂಪೆನಿಯವರು ಭದ್ರತೆಗೆ ನಮ್ಮ ಸಿಮೆಂಟ್.‌ ಉದಾಹರಣೆ ಪಾಂಬನ್‌ ಬ್ರಿಡ್ಜ್ ಎಂದು ಜಾಹೀರಾತು ನೀಡುತ್ತಿದ್ದರು.

ರೈಲುಗಾಡಿ ಹತ್ತು ಗಂಟೆಗೆ ಸೇರಲಿದೆ ಎಂದು ಅಪ್ಪು ಅರಿತಿದ್ದ. ರಾತ್ರಿ ಹತ್ತು ಗಂಟೆಯಲ್ಲಿ ತನ್ನಲ್ಲಿರುವ ಅಪರೂಪದ ವಿಗ್ರಹಗಳ ಭದ್ರತೆ ಹೇಗೆ ಎಂದು ಆಲೋಚಿಸುತ್ತಲೇ ಇದ್ದ.

ಅವನು ರೈಲು ಹತ್ತಿದಾಗಿನಿಂದ ಒಂದು ವಿಷಯವನ್ನು ಗಮನಿಸಿದ್ದ. ಅನೇಕರು ಅವನ ಪರಿವ್ರಾಜಕ ಉಡುಪು ಕಂಡು ಕೈಯೆತ್ತಿ ನಮಸ್ಕರಿಸುತ್ತಿದ್ದರು. ಕೆಲವರು ಮಹಿಳೆಯರು ತಮ್ಮ ಮಕ್ಕಳನ್ನು ಅವನ ಕಾಲಿಗೆ ಬೀಳಿಸುತ್ತಿದ್ದರು.

ಶ್ರೀನಾರಾಯಣಾರ್ಪಣಮಸ್ತು ಎಂದು ಮೆಲ್ಲನೆ ಹೇಳಿ ಅವರಿಗೆ ಆಶೀರ್ವದಿಸುತ್ತಿದ್ದ.

ಮನಮದುರೈ ಜಂಕ್ಷನ್‌ ಬಂದಾಗ ಊಟ ಊಟ ಎಂದು ತಮಿಳಿನಲ್ಲಿ ಕೂಗುತ್ತಾ ಓಡಾಡಿದರು ಅಲ್ಲಿನ ಜನ.

ಕನಕದಾಸನನ್ನು ಕಳಿಸಿ ಹಣ್ಣುಗಳನ್ನು ತರಿಸಿಕೊಂಡ. ಅವನು ಸ್ವಲ್ಪ ಆಲೋಚನೆ ಮಾಡಿ ಅಲ್ಲಿದ್ದ ಒಂದು ಬೂತ್‌ನಿಂದ ಹಾಲಿನ ಸೀಸೆಯೊಂದನ್ನೂ ತಂದ.

ಉಳಿದವರು ಊಟ ಮಾಡಿದರು.

ಅಪ್ಪುವಿನ ಸ್ವಭಾವವೇ ಅದು. ತನ್ನ ಕೆಲಸ ತಾನು ಮಾಡಿಕೊಳ್ಳುತ್ತಾನೆ. ಇತರರ ಸ್ವಂತ ವಿಷಯದಲ್ಲಿ ಮೂಗು ತೂರಿಸುವುದಿಲ್ಲ. ಅದಕ್ಕೇ ಬಹುಶಃ ಅವನು ಎಲ್ಲರಿಗೂ ಬೇಕಾದವನಾಗಿದ್ದ.

ಜೋಷಿಮಠಕ್ಕೆ ಅವನು ಬಂದು ಸೇರಿಕೊಂಡಾಗ ಹದಿನಾರು ವರ್ಷದವನು. ಕುಮಾರಾನಂದಸ್ವಾಮಿಗಳು ಅವನನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದರು. ಅವರು ಬಹಳವೇ ಪ್ರ್ಯಾಕ್ಟಿಕಲ್‌ ಸ್ವಭಾವದವರು. ಮಕ್ಕಳನ್ನು ಭವಿಷ್ಯಕ್ಕೆ ತಕ್ಕಂತೆ ಬೆಳೆಸಬೇಕೆಂಬ ಕಾರಣದಿಂದ ಅಪ್ರಮೇಯನಿಗೆ ಕೇರಳದ ಕಳರಿಪಯಟ್ಟು, ಜ್ಯೂಡೊ, ಕರಾಟೆ ಇತ್ಯಾದಿಗಳನ್ನು ಕಲಿಯಲು ಅನುಕೂಲ ಮಾಡಿಕೊಟ್ಟಿದ್ದರು.

ಜೊತೆಗೆ ಅಪ್ರಮೇಯ ಎಲ್ಲ ರೀತಿಯ ಪುಸ್ತಕಗಳನ್ನೂ ಓದಿ, ಗುರುಗಳು ಮತ್ತು ಅವರ ಅನೇಕ ಸಮಕಾಲಿಕರ ಪ್ರವಚನಗಳನ್ನು ಕೇಳಿದ್ದ. ಅವರೆಲ್ಲರ ಬಳಿ ತನ್ನ ಅನುಮಾನಗಳನ್ನು ಕೇಳಿ ಪರಿಹರಿಸಿಕೊಳ್ಳುತ್ತಿದ್ದ. ಕೆಲವು ಗುರುಗಳು ಕೇವಲ ಕನ್ನಡ ಮಾತಾಡುವವರು, ಕೇವಲ ತಮಿಳು ಅಥವಾ ತೆಲುಗು ಮಾತಾಡುವವರು ಬಂದಾಗ ಅವರ ಮಾತುಗಳನ್ನು ಸಂಪೂರ‍್ಣವಾಗಿ ಅರ‍್ಥ ಮಾಡಿಕೊಳ್ಳಲು ಆ ಭಾಷೆಗಳನ್ನು ಕಲಿತ. ಹಿಂದಿ ಹೇಗೂ ಬರುತ್ತಿತ್ತು. ಮಲಯಾಳಂ ಕೂಡ ಕಲಿತ. ಒಂದಿಷ್ಟು ಗುಜರಾಥಿ, ಮರಾಠಿ ಮತ್ತು ಬೆಂಗಾಲಿ ಭಾಷೆ ಕೂಡ ಅಲ್ಪಸ್ವಲ್ಪ ಅರ‍್ಥ ಮಾಡಿಕೊಳ್ಳುತ್ತಿದ್ದ.

ಇದರಿಂದ ಗುರು ಕುಮಾರಾನಂದರಿಗೆ ಇವನೆಂದರೆ ಬಲು ಇಷ್ಟ.

ಅವರಿಗೆ ಈ ಮೂರು ವಿಗ್ರಹಗಳ ಬಗ್ಗೆ ಹೇಳಿದ್ದು ಅವರ ಗುರುಗಳು. ದನುಷ್ಕೋಟಿಗೆ ಅದಕ್ಕೇ ಅವರು ಬಂದಿದ್ದುದು. ಅಪ್ರಮೇಯ ಬರುವೆನೆಂದಾಗ ತನ್ನ ಗೈರುಹಾಜರಿಯಲ್ಲಿ ಜೋಷಿಮಠದಲ್ಲಿನ ತಮ್ಮ ಆಶ್ರಮ ನಡೆಸೆಂದು ಆಣತಿ ಇತ್ತು ದನುಷ್ಕೋಟಿಗೆ ಬಂದರು. ಅವರ ಗುರುಗಳಿಗೆ ಬಹಳ ವಯಸ್ಸಾಗಿದ್ದರಿಂದ, ಅವರಿಗೆ ರಾಮೇಶ್ವರದ ನಿವೃತ್ತ ಅರ್ಚಕರ ಪರಿಚಯವಿದ್ದಿದ್ದರಿಂದ ಮೂರೂ ವಿಗ್ರಹಗಳನ್ನು ಅವರಲ್ಲಿ ಜತನವಾಗಿ ಇಟ್ಟಿದ್ದರು.

ಆದರೆ ಎಲ್ಲ ಕಡೆ ಕೇವಲ ಒಳ್ಳೆಯ ಜನರೇ ಇರುವುದಿಲ್ಲವಲ್ಲ! ಕುಮಾರಾನಂದರ ಶಿಷ್ಯನೊಬ್ಬ ನಾಯಕ್‌ನಿಗೆ ಈ ವಿಷಯ ತಿಳಿಸಿಬಿಟ್ಟಿದ್ದ.

ಈ ವಿಗ್ರಹಗಳನ್ನು ವಿದೇಶಕ್ಕೆ ಮಾರಿದರೆ ಬರುವ ಹಣದ ಮೊತ್ತ ಅವನ ಬಾಯಲ್ಲಿ ನೀರೂರಿಸಿ ನಾನಾ ರೀತಿಯ ಹಿಂಸೆ ಕೊಟ್ಟು ಕುಮಾರಾನಂದರನ್ನು ಸಾಯುವಂತೆ ಮಾಡಿದ್ದ. ಅವರು ಬಾಯಿ ಬಿಡದೇ ತೀರಿಕೊಂಡಿದ್ದರು.

ಈಗ ಆ ವಿಗ್ರಹಗಳು ಅಪ್ಪುವನ್ನು ತಲುಪಿದ್ದವು. ಆದರೆ ತನ್ನ ಶಿಷ್ಯರಲ್ಲೊಬ್ಬ, ಗುರುಗಳ ಶಿಷ್ಯರಲ್ಲೊಬ್ಬ ಖತರ್‌ನಾಕ್‌ ಎಂಬ ಅರಿವು ಅಪ್ಪುವಿಗೆ ಉಂಟಾಗಿತ್ತು. ಹೇಗೆ ಇವರನ್ನು ಕಂಡುಕೊಳ್ಳುವುದು?

ಮದುರೈ ಈಸ್ಟ್‌ ಸ್ಟೇಷನ್‌ ಬಂದಾಗ ಅಪ್ಪು ಮಾತನ್ನಾರಂಭಿಸಿದ.

“ಇನ್ನು ಸರಿಸುಮಾರು ಒಂದು ಗಂಟೆ ಕಾಲದಲ್ಲಿ ನಾವು ಮದುರೈ ತಲುಪಲಿದ್ದೇವೆ” ಎಂದು ಹೇಳಿ ನಾಲ್ವರ ಗಮನವನ್ನೂ ತನ್ನೆಡೆಗೆ ಸೆಳೆದುಕೊಂಡ.

“ನಾವು ಮತ್ತೆ ಇಷ್ಟು ದೂರ ಬರುವೆವೋ ಇಲ್ಲವೋ… ನಮ್ಮ ದೇಶದಲ್ಲಿ ಅನೇಕ ಕಡೆ ನಮ್ಮ ಸಂಸ್ಕೃತಿಯ ಬಗ್ಗೆ ಏನೆಂದರೇನೂ ಅರಿಯದ ಜನರಿದ್ದಾರೆ. ಅವರಿಗೆ ಬೇಕಾಗಿರುವುದೆಲ್ಲಾ ಒಂದಿಷ್ಟು ಪರಿಜ್ಞಾನ. ಅದಕ್ಕೇ ನನ್ನದೊಂದು ಯೋಜನೆ ಇದೆ. ನಿಮ್ಮೆಲ್ಲರ ಸಹಕಾರವಿದ್ದರೆ ಮಾತ್ರ ನನಗೆ ಇದನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗುತ್ತದೆ” ಎಂದ ತನ್ನ ಮಾತುಗಳಿಗೆ ಪೀಠಿಕೆಯಂತೆ.

“ಸರಿ ಗುರುಗಳೇ” ಎಂದರು ಒಕ್ಕೊರಲಿನಲ್ಲಿ ನಾಲ್ವರೂ.

ಇಬ್ಬರ ಮನದಲ್ಲಿ ಏನಿರಬಹುದು ಈತನ ಯೋಜನೆ ಎಂಬ ಚಿಂತೆ. ಮತ್ತಿಬ್ಬರು ಆಹಾ… ನಮ್ಮ ಗುರುಗಳೊಂದಿಗೆ ಇಷ್ಟು ಸಮಯ ಕಳೆಯುವುದೇ ಪುಣ್ಯ ಎಂಬ ಸಂತಸದ ಭಾವನೆ ಉಂಟಾಗಿತ್ತು.

“ನಾವು ಈಗ ಮದುರೈನಲ್ಲಿ ಕೆಲವು ದಿನ ಉಳಿಯೋಣ. ನಂತರ ಬೆಂಗಳೂರು, ರಾಜಮಹೇಂದ್ರಿ… ಹೀಗೆ ಬೇರೆ ಬೇರೆ ಊರುಗಳಿಗೆ ಹೋಗೋಣ. ನನಗೆ ಗೊತ್ತು ನೀವು ನಾಲ್ವರೂ ನಿಮ್ಮ ಹೆಸರಿನ ದಾಸರ ಬಗ್ಗೆ ಬಹಳ ಚೆನ್ನಾಗಿ ಓದಿದ್ದೀರಿ, ಮಾತಾಡಬಲ್ಲಿರಿ ಎಂದು. ಅದಕ್ಕಾಗಿಯೇ ನಿಮಗೆ ನಿಮ್ಮ ಮೂಲ ಹೆಸರು ಬೇಡವೆಂದು ಆಯಾ ದಾಸರ ಹೆಸರು ಇಟ್ಟಿದ್ದಾರೆ ಹಿರಿಯರು…” ಎಂದು ಹೇಳಿ ತನ್ನ ಮನದಿಂಗಿತವನ್ನು ವಿವರಿಸಿದ.

ನಾಲ್ವರಿಗೂ ಸಂತೋಷವಾಗಿತ್ತು. ಸಾಮಾನ್ಯವಾಗಿ ಶಿಷ್ಯರನ್ನು ಯಾರೂ ಮೇಲೆ ಬರಲು ಬಿಡುವುದಿಲ್ಲ. ಏಕೆಂದರೆ ಒಮ್ಮೆ ಶಿಷ್ಯ ಚೆನ್ನಾಗಿ ಸಂವಹನ ಮಾಡುವನೆಂದು ಅರಿತರೆ ಗುರುವಿನ ಪ್ರಾಮುಖ್ಯತೆ ಕುಂಠಿತಗೊಳ್ಳುತ್ತದೆ.

ರೈಲು ರಾತ್ರಿ ಹತ್ತು ಗಂಟೆಗೆ ಮದುರೈ ಜಂಕ್ಷನ್ನಿಗೆ ಬಂದಿತು.

ಅಲ್ಲಿಯೇ ಪ್ಲಾಟ್‌ಫಾರ್ಮ್‌ ಮೇಲೆ ಇದ್ದ ಬೆಂಚೊಂದರ ಮೇಲೆ ಅಪ್ಪು ಕುಳಿತ.

ಅವನು ಪದ್ಮಾಸನ ಹಾಕಿ ಕುಳಿತ ಬಗೆಯು ಅಲ್ಲಿದ್ದ ಅನೇಕ ಪ್ರಯಾಣಿಕರನ್ನು ಆಕರ್ಷಿಸಿತು. ಅವರೆಲ್ಲರೂ ತಡರಾತ್ರಿಯಲ್ಲಿ ಬೇರೆ ಬೇರೆ ಊರಿಗೆ ರೈಲು ಹಿಡಿಯಬೇಕಾದವರು.

ಅಪ್ಪುವಿನ ಮನದಲ್ಲಿ ಒಂದೇ ಸಮನೆ ಓಡುತ್ತಿದ್ದ ಆಲೋಚನೆಯೊಂದಕ್ಕೆ ಮೂರ‍್ತ ರೂಪ ಬಂದಿತು.

ಆ ಸಮಯದಲ್ಲಿ ಬಂದಿತ್ತು ಮತ್ತೊಂದು ರೈಲುಗಾಡಿ.

ಅದರಿಂದ ಇಳಿದಿದ್ದ ಒಬ್ಬ. ಅವನ ಕೈಯಲ್ಲಿ ನಾಲ್ಕೈದು ಉಂಗುರಗಳು. ಕುತ್ತಿಗೆಯಲ್ಲಿ ದಪ್ಪ ಚಿನ್ನದ ಸರ, ಕೈಯಲ್ಲಿ ಚಿನ್ನದ ಕಡಗ.

ಅವನು ರೈಲಿನಿಂದ ಇಳಿದೊಡನೆ ಅವನ ಕಣ್ಣಿಗೆ ಬಿದ್ದಿದ್ದ ಅಪ್ರಮೇಯ.

ಅವನ ಹೆಸರು ಅಳಗಪ್ಪ ಚೆಟ್ಟಿಯಾರ್.‌ ಅವನಿಗೆ ಸ್ವಾಮಿಗಳು, ಸಾಧುಗಳು ಎಂದರೆ ಬಹಳ ಭಕ್ತಿ.

ನೇರವಾಗಿ ಇವರ ಕಾಲಿಗೆ ಬಿದ್ದು, “ಇದೇನು ಸ್ವಾಮೀ, ನೀವು ಇಲ್ಲಿ? ಬೇರೆ ಊರಿಗೆ ಹೋಗೋಕ್ಕೆ ಕಾಯ್ತಿದ್ದೀರಾ?” ಎಂದ.

ಅಪ್ಪು ಕಣ್ತೆರೆದು ಅಳಗಪ್ಪ ಚೆಟ್ಟಿಯಾರನನ್ನು ಕಂಡು “ಇಲ್ಲ, ನನಗೆ ಇಲ್ಲಿ ಯಾರೂ ತಿಳಿಯದು. ಇಲ್ಲಿಯೇ ಇದ್ದು ನಾಳೆ ಬೆಂಗಳೂರಿಗೆ ರೈಲು ಹಿಡಿಯಬೇಕು” ಎಂದ.

ಅಳಗಪ್ಪ ಚೆಟ್ಟಿಯಾರ್‌ ಹೌಹಾರಿದ. “ಈ ಊರಿಗೆ ಬಂದ ನಿಮ್ಮಂಥ ಸ್ವಾಮಿಗಳು ನನ್ನ ಆತಿಥ್ಯ ಸ್ವೀಕರಿಸದೇ ಹೋಗೋದೆಂದರೇನು? ಬನ್ನಿ. ನಮ್ಮ ಪುಟ್ಟ ಗುಡಿಸಲಲ್ಲಿ ನಿಮಗೆ ಜಾಗ ಇದೆ. ನಾಳೆ ಹೋಗಿಬರುವಿರಂತೆ” ಎಂದ ಬೇಡಿಕೆಯ ಸ್ವರದಲ್ಲಿ.

ಇಲ್ಲವೆನ್ನದಾದ ಅಪ್ಪು. ತನ್ನ ಉಳಿದ ಶಿಷ್ಯರೆಡೆಗೆ ನೋಡಿದ. “ಅವರೂ ಬರಲಿ” ಎಂದ ಅಳಗಪ್ಪ ಚೆಟ್ಟಿಯಾರ್.‌

ಹೊರಗೆ ಕಾಯುತ್ತಿದ್ದ ತನ್ನ ದೊಡ್ಡ ಕಾರಿನಲ್ಲಿ ಐವರನ್ನು ಕುಳ್ಳಿರಹೇಳಿ ಅವರನ್ನು ಕರೆದೊಯ್ದ.

ತಮಿಳು ಅಕ್ಷರಗಳನ್ನು ಓದಬಲ್ಲವನಾಗಿದ್ದ ಅಪ್ಪುವಿಗೆ ತಾವು ಅಳಗರ್‌ ಕೋವಿಲ್‌ ರಸ್ತೆಗೆ ಹೋಗುತ್ತಿರುವುದು ಗೊತ್ತಾಯಿತು.

ಅಳಗಪ್ಪ ಚೆಟ್ಟಿಯಾರನ ಗುಡಿಸಲು ಸುಮಾರು ನೂರು ಬೈ ನೂರು ಚದರಡಿಯ ಮೇಲೆ ಕಟ್ಟಲ್ಪಟ್ಟಿದ್ದ ಬಲು ದೊಡ್ಡ ಬಂಗಲೆ.

ಕಾರು ಹಡಗಿನಂತೆ ತೇಲುತ್ತಾ ಬಂದು ಬಂಗಲೆಯ ಮುಂದೆ ನಿಂತಿತು.

ಒಳಗೆ ಕರೆದೊಯ್ದ ಚೆಟ್ಟಿಯಾರ್.‌ ಅತ್ಯಂತ ಆಧುನಿಕ ರೀತಿಯಲ್ಲಿ ಒಳಗೆ ಅಲಂಕರಿಸಲ್ಪಟ್ಟಿದ್ದ ಹಾಲ್‌,

ಅಪ್ಪುವಿಗೆ ಚೆಟ್ಟಿಯಾರನ ದೇವರ ಮನೆ ಬಹಳವೇ ಆಕರ‍್ಷಿಸಿತ್ತು.

ಅಲ್ಲಿತ್ತು ಒಂದು ಸುಂದರ ಚತುರ್ಭುಜ ನಾರಾಯಣನ ಮೂರ‍್ತಿ.

ಸುಮಾರು ಒಂದೂವರೆ ಅಡಿ ಎತ್ತರ. ಮೇಲಿನ ಬಲಗೈಯಲ್ಲಿ ಶಂಖ, ಎಡಗೈಯಲ್ಲಿ ಚಕ್ರ. ಕೆಳಗಿನ ಬಲಗೈಯಲ್ಲಿ ಪದ್ಮವಿತ್ತು. ಅದನ್ನು ಹಿಡಿದೇ ಅಭಯಹಸ್ತ ತೋರಿದ್ದ ದೇವದೇವ. ಎಡಗೈಯಲ್ಲಿ ಗದೆ.

“ಗುರುಗಳೇ!” ಎಂದು ಅವರ ಗಮನ ಸೆಳೆದ ತುಲಸೀದಾಸ.

“ಏನು ತುಲಸೀ?”

“ಇದೇನು ನಾರಾಯಣ ಎಡಗೈಯಲ್ಲಿ ಚಕ್ರವಿದೆ!” ಎಂದ. ಉಳಿದವರೂ ಅದನ್ನು ನೋಡಿ ಅಚ್ಚರಿಪಟ್ಟರು.

“ನಾರಾಯಣನ ನಾಲ್ಕು ಕೈಗಳಲ್ಲಿನ ಈ ಶಂಖ, ಚಕ್ರ, ಗದಾ ಪದ್ಮಗಳು ಒಂದೊಂದು ಕಡೆ ಇರುವ ಇಪ್ಪತ್ತನಾಲ್ಕು ವೈವಿಧ್ಯ ವಿಗ್ರಹಗಳಿವೆ. ಉದಾಹರಣೆಗೆ ಇದು ನಂಬಿ ನಾರಾಯಣ ಎಂಬ ಮೇಲುಕೋಟೆ ಬಳಿಯ ತೊಣ್ಣೂರಿನಲ್ಲಿ ಹೀಗೆಯೇ ಇದೆ” ಎಂದ.

ಅಳಗಪ್ಪ ಚೆಟ್ಟಿಯಾರ್‌ ಬಾಯ್ಬಿಟ್ಟುಕೊಂಡು ಇವನನ್ನೇ ನೋಡಿ, “ಸ್ವಾಮೀ, ನಿಮ್ಮ ಚಿಕ್ಕ ವಯಸ್ಸು ಕಂಡು ನಾನು ನಿಮ್ಮನ್ನು ತಪ್ಪು ತಿಳಿದೆ. ನೀವು ಮಹಾಜ್ಞಾನಿಗಳು. ದಯವಿಟ್ಟು ನಾಳೆ ನನ್ನದೊಂದು ಕೆಲಸ ಮಾಡಿಕೊಡಬೇಕು. ಇಲ್ಲವೆನ್ನಬೇಡಿ” ಎಂದ ಬೇಡಿಕೆಯ ಸ್ವರದಲ್ಲಿ.

ಏನೆಂಬಂತೆ ನೋಡಿದಾಗ “ಇಲ್ಲೇ ಹತ್ತಿರದಲ್ಲಿ ಅಳಗರ್‌ ಕೋವಿಲ್‌ ಇದೆ. ಅಲ್ಲಿ ನಾಳೆ ಸಂಜೆ ನಿಮ್ಮದೊಂದು ಪ್ರವಚನ ಇಡಿಸ್ತೀನಿ. ದಯವಿಟ್ಟು ಇಲ್ಲ ಎನ್ನಬೇಡಿ” ಎಂದ. ಅವನ ಕಣ್ಣುಗಳಲ್ಲಿದ್ದ ಕಳಕಳಿ ಅರ‍್ಥವಾಗಿ ಅಪ್ಪು ಒಪ್ಪಿದೆಯೆಂಬಂತೆ ತಲೆದೂಗಿದ.

ನಾಲ್ವರಲ್ಲಿ ಇಬ್ಬರು ಶಿಷ್ಯರು ಚಿಂತಿಸತೊಡಗಿದರು.

ಈಗ ವಿಗ್ರಹಚೌರ‍್ಯ ಇನ್ನೂ ತಡವಾಗಲಿದೆ! ಹೇಗೆ ಸರಿಯಾದ ಸಮಯ ಹುಡುಕುವುದು?

(ಸಶೇಷ)

ಯತಿರಾಜ್‌ ವೀರಾಂಬುಧಿ

Related post