ಪರಾಭವ ಭಾವನಾ – 5 ಯತಿರಾಜ್‌ ವೀರಾಂಬುಧಿ

ಹಿಂದಿನ ಸಂಚಿಕೆಯಲ್ಲಿ…
ಅಪ್ರಮೇಯ ಅಳಗರ್ ಕೋವಿಲ್ ದೇವಸ್ಥಾನದ ಸುಂದರಬಾಹು ವಿಗ್ರಹದ ಬೆರಗನ್ನು ಸವಿಯುತ್ತ ಅಲ್ಲಿನ ಅಳಗಪ್ಪ ಚೆಟ್ಟಿಯಾರ್ ಕೋರಿಕೆಯ ಮೇರೆಗೆ ತನ್ನ ಪ್ರವಚನವನ್ನು ಶುರು ಮಾಡುತ್ತಾನೆ ಈ ಮದ್ಯದಲ್ಲಿ ಅವನಿಗೆ ಗೊತ್ತಿಲದೆ ನಾಯಕ್ ನ ಕಡೆಯವರು ಪಿಸ್ತೂಲಿನೊಂದಿಗೆ ಸಭೆಯ ಮದ್ಯೆ ಹೊಂಚು ಹಾಕುತ್ತಿರುತ್ತಾರೆ.

ಐದು

ಆ ಸಂಜೆ ಮೀನಾಕ್ಷಿ, ಸುಂದರೇಶ್ವರರ ದರುಶನ ಮಾಡಿ ಹೊರಡುವ ಸನ್ನಾಹ ನಡೆಸಿದ ಅಪ್ಪು

ಅಳಗಪ್ಪ ಚೆಟ್ಟಿಯಾರ್‌ ಬಹಳವೇ ಸಂತೋಷ ಪಟ್ಟು ಅನೇಕ ಕಾಣಿಕೆಗಳನ್ನು ನೀಡಲು ಹೋದ. “ದಯವಿಟ್ಟು ಕ್ಷಮಿಸಿ. ನಾನು ಇವನ್ನೆಲ್ಲಾ ಸ್ವೀಕರಿಸಲಾರೆ. ಆದರೂ ನನ್ನ ಶಿಷ್ಯರ ಬಗ್ಗೆ ನನಗೆ ತಿಳಿಯದು. ಅವರಿನ್ನೂ ಚಿಕ್ಕವರು. ಆಸೆಗಳಿದ್ದಾವು” ಎಂದ.

ನಾಲ್ವರು ಶಿಷ್ಯರೂ ಯಾವ ಕಾಣಿಕೆ ಪಡೆಯಲೂ ಒಪ್ಪಲಿಲ್ಲ.

ಅಪ್ರಮೇಯನಿಗೆ ಮುಚ್ಚಟೆ ಎನಿಸಿತು.

ಅಂದು ಸಂಜೆ ಅಪ್ರಮೇಯ ಹೊರಟು ನಿಂತ.

ತನ್ನ ವಸ್ತುಗಳನ್ನು ಒಮ್ಮೆ ನೋಡಿಕೊಂಡಾಗ ಯಾರೋ ಅವನ್ನು ಪರೀಕ್ಷಿಸಿದ್ದು ನೆನಪಾಯಿತು.

ಮುಗುಳ್ನಗು ಬಂದಿತು ಅವನ ವದನದ ಮೇಲೆ.

ಹಣದ ಆಮಿಷ ಅಷ್ಟು ದೊಡ್ಡದಾ? ದೇವರನ್ನೂ ಮಾರುವಷ್ಟು? ಏನೋ ಈಗಿನ ಪೀಳಿಗೆಯ ನೈತಿಕತೆಯ ಅಳತೆಗೋಲು ಬದಲಾಗಿದೆಯೇನೋ…

ಎಲ್ಲರೂ ಹೊರಡುವ ಮೊದಲು ತಾನು ಒಳಗೆ ಹೋದ ಅಪ್ರಮೇಯ ತನ್ನ ವಸ್ತುಗಳೆಲ್ಲಾ ಸರಿಯಾಗಿವೆಯೇ ಎಂದು ಪರೀಕ್ಷಿಸಿಕೊಂಡು ಅವನ್ನು ಎತ್ತಿಕೊಂಡು ಹೊರಬಂದ.

ನಂತರ ಬಂದರು ಇತರರು.

ಅಳಗಪ್ಪ ಚೆಟ್ಟಿಯಾರ್‌ ಔತಣವನ್ನೇ ಮಾಡಿಸಿದ್ದ. ಎಲ್ಲರೂ ಪುಷ್ಕಳವಾಗಿ ಉಂಡರು. ಅಪ್ರಮೇಯ ಹಣ್ಣುಗಳು ಮತ್ತು ಬಾದಾಮಿ ಪುಡಿ ಮಾಡಿ ಹಾಕಿದ್ದ ಹಾಲನ್ನು ಕುಡಿದ.

ಮದುರೈ ಜಂಕ್ಷನ್‌ಗೆ ಬಂದ ನಂತರ ಬಾತ್‌ರೂಮಿಗೆಂದು ಹೇಳಿ ಹೊರಟ ಒಬ್ಬ ಶಿಷ್ಯ.

ದೇವಸ್ಥಾನದಂತೆ ಕಟ್ಟಲ್ಪಟ್ಟಿದ್ದ ರೈಲು ನಿಲ್ದಾಣದ ಹೊರಭಾಗದಲ್ಲಿ ಬಲಗಡೆಗೆ ಇದ್ದ ಒಂದು ಕಟ್ಟೆಯ ಮೇಲೆ ಕುಳಿತು ನಾಯಕ್‌ನ ಕಡೆಯವರಿಗೆ ಫೋನ್‌ ಮಾಡಿದ.

“ನೀನೊಬ್ಬ ದಡ್ಡ. ಇನ್ನೂ ನಿನ್ನ ಕೈಗೆ ಸಿಗಲಿಲ್ವಾ ಆ ವಿಗ್ರಹಗಳು? ನಿನಗೆ ಒಬ್ಬನೇ ಆ ರೂಮಿಗೆ ಹೋಗುವ ಅವಕಾಶ ಸಿಗಲಿಲ್ವಾ?” ಎಂದು ಗದರಿದ ನಾಯಕ್‌ನ ಕಡೆಯವನು.

“ಸಿಕ್ಕಿತ್ತು ಗುರೂ. ತಡಕಾಡಿದೆ. ಎಲ್ಲೂ ಸಿಗಲಿಲ್ಲ. ಎಲ್ಲಿ ಬಚ್ಚಿಟ್ಟಿದ್ದಾನೋ ಪುಣ್ಯಾತ್ಮ!” ಎಂದ ಶಿಷ್ಯ.

“ಈಗ ಎಲ್ಲಿಗೆ ಹೊರಟಿದ್ದೀರಿ?”

“ಬೆಂಗಳೂರು”

“ಅಂದರೆ ಮತ್ತೆ ಅನ್‌ರಿಸರ್ವ್ಡ್‌ ಬೋಗಿಯಲ್ಲಿ ಪ್ರಯಾಣವಾ? ಬಹಳ ಜಾಣ ನಿನ್ನ ಗುರು. ಅಲ್ಲಿ ಜನಗಳ ಗುಂಪಲ್ಲಿ ನಾವು ಏನು ಮಾಡಲೂ ಆಗೋದಿಲ್ಲ. ಅದಕ್ಕೇ ನೀನೇ ಈ ಕೆಲಸ ಮಾಡಬೇಕು. ಸರೀನಾ?” ಎಂದ ನಾಯಕ್‌ನ ಕಡೆಯವನು.

“ಸರಿ” ಎಂದು ಹೇಳಿ ಬೇಗನೆ ಒಳಗೆ ಬರತೊಡಗಿದ ಶಿಷ್ಯ. ಅವನೆದುರಿಗೆ ಬಂದ ಮತ್ತೊಬ್ಬ ಶಿಷ್ಯ “ಎಲ್ಲಿ ಹೋಗಿದ್ದೆ?” ಎಂದ.

“ಬಾತ್‌ರೂಂ” ಎಂದು ಹೇಳಿ ತಪ್ಪಿಸಿಕೊಳ್ಳಲು ನೋಡಿದ.

“ಏನೂ? ನೀನು ಹೋಗಿದ್ದು ಹೊರಗಡೆ. ಬಾತ್‌ರೂಮ್‌ ಇರೋದು ಇಲ್ಲಿ ಒಳಗಡೆ” ಎಂದ ಅನುಮಾನದಿಂದ.

“ನನಗೆ ಈ ಪಬ್ಲಿಕ್‌ ಬಾತ್‌ರೂಮ್‌ ಎಂದರೆ ಭಯ. ಯಾವುದಾದರೂ ವೈರಸ್‌ ಆ ಮೂತ್ರಪಾತ್ರೆಯಿಂದ ಎಗರಿ ನನಗೆ ಆಕ್ರಮಣ ಮಾಡಿದ್ರೆ ಅಂತ ಭಯ” ಎಂದ ಅವನಿಗೇ ಆ ನೆಪವು ಕ್ಷೀಣವಾಗಿದೆಯೆಂದು ತಿಳಿದಿದ್ದರೂ.

ಇನ್ನೊಬ್ಬ ಶಿಷ್ಯ ತಲೆ ಚಚ್ಚಿಕೊಂಡು ಇವನನ್ನು ಹಿಂಬಾಲಿಸಿದ್ದ. ಅಪ್ರಮೇಯ ಮೊದಲು ಹೊರಗೆ ಹೋದ ಶಿಷ್ಯನನ್ನು ಹುಡುಕಿ ಕರೆತರಲು ಎರಡನೆಯವನನ್ನು ಕಳಿಸಿದ ವಿಷಯ ಮೊದಲನೆಯವನಿಗೆ ತಿಳಿಯಲಿಲ್ಲ!

ಯಥಾಪ್ರಕಾರ ಈ ಸಲವೂ ಬೆಂಗಳೂರು ಎಕ್ಸ್‌ಪ್ರೆಸ್‌ನ ಅನ್‌ರಿಜರ್ವ್ಡ್‌ ಬೋಗಿ ಏರಿದರು.

ರಾತ್ರಿ ಹನ್ನೊಂದೂಮುಕ್ಕಾಲಿಗೆ ರೈಲು ನಾಗರ್‌ಕೋಯಿಲ್‌ನಿಂದ ಹೊರಟುಬಂದಿತ್ತು.

ರೈಲಿನಲ್ಲಿ ತಮಿಳು, ಕನ್ನಡ ಭಾಷೆಗಳು ಕೇಳಿಸುತ್ತಿದ್ದವು. ಬೆಂಗಳೂರಿಗೆ ಮರಳುತ್ತಿರುವ ಕನ್ನಡಿಗರೂ ಇದ್ದಿರಬೇಕು.

ಅಪ್ರಮೇಯನನ್ನು ಕಂಡೊಡನೆ ಯಾರೋ ಒಬ್ಬ ತನ್ನ ಸೀಟು ಬಿಟ್ಟುಕೊಟ್ಟ. ಅವನ ಕಡೆಗೆ ಮುಗುಳ್ನಗೆ ಬೀರಿ ಅಪ್ಪು ಕುಳಿತ.

ಅವನ ಶಿಷ್ಯರು ಅವನ ಕಾಲಬುಡದಲ್ಲಿ ಕುಳಿತುಕೊಳ್ಳಲು ಅವಕಾಶವಾಗಿತ್ತಷ್ಟೇ.

“ಸ್ವಾಮೀ! ನಿಮ್ಮನ್ನು ಒಂದು ಮಾತು ಕೇಳಲಾ?” ಎಂದ ಒಬ್ಬ ಮಧ್ಯವಯಸ್ಕ.

“ಕೇಳಿ” ಎಂದ ಅಪ್ಪು ನಸುನಗೆ ಬೀರಿ.

“ಈ ಭಗವದ್ಗೀತೆಯನ್ನ ಯಾವ ವಯಸ್ಸಿನಲ್ಲಿ ಓದಬೇಕು?” ಎಂದ.

ಶಿಷ್ಯರತ್ತ ನೋಡಿದ. ನಾಲ್ವರೂ ಏಕ ಕಂಠದಲ್ಲಿ “ಸರ್ವೋಪನಿಷದೋ ಗಾವೋ ದೋಗ್ಧಾ ಗೋಪಾಲ ನಂದನಃ|

ಪಾರ್ಥೋ ವತ್ಸಃ ಸುಧೀರ್ಭೋಕ್ತಾ ದುಗ್ಧಂ ಗೀತಾಮೃತಂ ಮಹತ್||” ಎಂದು ಉಚ್ಚರಿಸಿದರು.

“ಎಲ್ಲಾ ಉಪನಿಷತ್‌ಗಳೂ ಆಕಳುಗಳು; ಗೋಪಾಲನಂದನನಾದ ‍‍ಶ್ರೀಕೃಷ್ಣ ಹಾಲು ಕರೆಯುವವನು. ಅರ್ಜುನನು ಕರು. ಹಾಲು ಕುಡಿಯುವವರು ಪಂಡಿತರು.  ಶ್ರೇಷ್ಠವಾದ ಗೀತಾಮೃತವು ಹೀಗೆ ಕರೆದ ಹಾಲು” ಎಂದು ವಿವರಣೆ ನೀಡಿದ ಅಪ್ರಮೇಯ.

ಅಲ್ಲಿ ಅನೇಕರು ಬಂದು ಕೆಳಗೆ ಕುಳಿತರು. ಕೆಲವರು ಮೇಲಿನ ಸೀಟ್‌ ಹತ್ತಿ ಕುಳಿತು ಇವನ ಮಾತುಗಳನ್ನು ಆಲಿಸತೊಡಗಿದರು.

“ಯಾವ ವಯಸ್ಸಿನಲ್ಲಿ ಬೇಕಾದರೂ ಓದಬಹುದು. ಬಹುಶಃ ಪ್ರತಿ ಒಂದು ವಯಸ್ಸಿನಲ್ಲಿ ನಮ್ಮ ಅನುಭವಗಳ ಮೇರೆಗೆ ಗೀತೆ ನಮಗೆ ಹೊಸ ಹೊಸ ಅರ್ಥಗಳನ್ನು ಕೊಡುತ್ತದೆ. ಅನೇಕರು ನಿವೃತ್ತಿ ಆದ ಮೇಲೆ ಓದೋಣ ಎಂದುಕೊಳ್ಳುತ್ತಾರೆ. ಅಷ್ಟು ಹೊತ್ತಿಗೆ ನಮ್ಮ ಜೀವನದ ಆದ್ಯತೆಗಳು, ನಮ್ಮ ಆರೋಗ್ಯ ಎಲ್ಲವೂ ಬದಲಾಗಿಬಿಡಬಹುದು. ನನ್ನ ಪ್ರಕಾರ ಗೀತೆಯನ್ನು ಮಿಡಲ್‌ಸ್ಕೂಲ್‌ ಮಕ್ಕಳಿಗೆ ಕಲಿಸಬೇಕು. ಆಗ ಅವು ಅಪರಾಧ ಮಾಡದೇ ಇರಬಹುದು. ಅಪರಾಧಿಗಳಿಗೆ ನ್ಯಾಯಾಲಯದಲ್ಲಿ ಗೀತಾಗ್ರಂಥದ ಮೇಲೆ ಕೈಯಿರಿಸಿ ಸತ್ಯವನ್ನೇ ಹೇಳುತ್ತೇನೆ ಸತ್ಯವನ್ನು ಬಿಟ್ಟು ಬೇರೇನೂ ಹೇಳುವುದಿಲ್ಲ ಎಂದು ಹೇಳಿಸುವುದು ಹಾಸ್ಯಾಸ್ಪದ. ಏಕೆಂದರೆ ಕೋರ್ಟಿಗೆ ಬಂದ ಇಬ್ಬರಲ್ಲಿ ಒಬ್ಬ ಸುಳ್ಳು ಸುಳ್ಳೇ ಸತ್ಯ ಹೇಳುವೆನೆನ್ನುತ್ತಾನೆ. ಅವನಿಗೆ ಕುಮ್ಮಕ್ಕು ಕೊಡಲು ಒಬ್ಬ ವಕೀಲ ಇರುತ್ತಾನೆ” ಎಂದ ಅಪ್ರಮೇಯನ ಧ್ವನಿಯಲ್ಲಿ ವ್ಯಥೆ ಅಲ್ಲಿದ್ದ ಎಲ್ಲರಿಗೂ ವಿದಿತವಾಗಿತ್ತು.

“ಹೋಗಲಿ ಸ್ವಾಮಿ. ಎಲ್ಲರಿಗೂ ಅನ್ವಯ ಆಗುವ ಒಂದು ಶ್ಲೋಕವನ್ನು ಹೇಳಿ, ಅದರ ಅರ್ಥ ಹೇಳಿ” ಎಂದ ಇನ್ನೊಬ್ಬ.

“ದುಃಖೇಷ್ವನುದ್ವಿಗ್ನಮನಾಃ ಸುಖೇಷು ವಿಗತಸ್ಪೃಹಃ।
ವೀತರಾಗಭಯಕ್ರೋಧಃ ಸ್ಥಿತಧೀರ್ಮುನಿರುಚ್ಯತೇ ॥೫೬॥

ಇದು ಎರಡನೇ ಅಧ್ಯಾಯ ಸಾಂಖ್ಯಯೋಗದ ಐವತ್ತಾರನೇ ಶ್ಲೋಕ” ಎಂದು ಆರಂಭಿಸಿದ ಅಪ್ರಮೇಯ.

ಎಲ್ಲರೂ ಅತಿ ಉತ್ಸಾಹ, ಕುತೂಹಲಗಳಿಂದ ಕೇಳಿಸಿಕೊಳ್ಳುತ್ತಿದ್ದರು.

“ನಮ್ಮ ಜೀವನದಲ್ಲಿ ದುಃಖವೂ ಉಂಟು, ಸುಖವೂ ಉಂಟು. ನಾವು ಸಂತೋಷ ಬಂದಾಗ ಎಗರಿ ಕುಣಿಯದೇ, ದುಃಖ ಉಂಟಾದಾಗ ಕುಗ್ಗಿಹೋಗದೇ ಇರುವುದು ಬಹಳ ಮುಖ್ಯ. ಏಕೆಂದರೆ ನಮ್ಮ ಜೀವನವೆಲ್ಲಾ ರಂಗುರಾಟೆಯಂತೆ. ಇಂದು ಮೇಲೆ ಹೋಗುವೆವು. ನಾಳೆ ಕೆಳಗೆ ಬರುವೆವು, ಮತ್ತೆ ಮೇಲೆ ಹೋಗುವೆವು. ನಮ್ಮ ದುಃಖಕ್ಕೆ ಕಾರಣ ಏನು ಗೊತ್ತೇ? ಗೌತಮ ಬುದ್ಧ ಹೇಳಿದಂತೆ ಆಸೆಯೇ ದುಃಖಕ್ಕೆ ಕಾರಣ. ಎಲ್ಲವೂ ಬೇಕೆನ್ನುವ ಆಸೆ, ಅವು ಸಿಗದಿದ್ದಾಗ ಕೋಪ, ಅವು ಸಿಕ್ಕಿದ ಮೇಲೆ ಅವು ಎಲ್ಲಾದರೂ ಕಳೆದುಹೋದರೆ ಎಂಬ ಭಯ. ಇವು ಮೂರೇ ನಮ್ಮನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿರುವಂತಹ ನಮ್ಮ ಭಾವನೆಗಳು. ಇವನ್ನು ಯಾವಾಗ ನಾವು ಮಿತಿಯಲ್ಲಿಡುತ್ತೇವೋ ಆಗ ನಮ್ಮನ್ನು ಸ್ಥಿತಪ್ರಜ್ಞರು ಎನ್ನುತ್ತಾನೆ ಶ್ರೀಕೃಷ್ಣ. ನಾವು ಆಗ ಮುನಿಗಳಂತೆ”

ಎಲ್ಲರೂ ಇವನ ಮಾತುಗಳನ್ನು ಜೀರ್ಣಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು.

ಶಿಷ್ಯನೊಬ್ಬ ಅಪ್ಪುವಿನ ಕೈಚೀಲದತ್ತ ನೋಡುತ್ತಿದ್ದ. ಇದರಲ್ಲೇ ಇರಬೇಕು ಆ ವಿಗ್ರಹಗಳು. ಅವು ಅದರಲ್ಲಿದ್ದಿದ್ದರೆ ತನಗೇಕೆ ಸಿಗಲಿಲ್ಲ? ಏನೋ ವಿಷಯ ಮಿಸ್‌ ಆಗುತ್ತಿದೆ. ಏನದು?

“ಗೀತೆ ಅಂದರೆ ಮನುಷ್ಯನ ಸ್ವಭಾವದ ಬಗ್ಗೆ ಇರುವುದಾ ಗುರುಗಳೇ?” ಎಂದು ಕೇಳಿದ ಯುವಕನೊಬ್ಬ.

“ಹೌದು. ಗೀತೆಯಲ್ಲಿ ನಮ್ಮ ಮಾತಿನ ಶುದ್ಧತೆ, ದೇಹದ ಶುದ್ಧತೆಗಳ ಬಗ್ಗೆ ಹೇಳುತ್ತದೆ. ಇವೆರಡೂ ಎದುರಿನವರಿಗೆ ಕಾಣುವಂತಹವು. ಆದರೆ ಯೋಗೇಶ್ವರ ಗೀತಾಚಾರ್ಯ ಶ್ರೀಕೃಷ್ಣ ಮನಸ್ಸಿನ ಶುದ್ಧತೆಯ ಬಗ್ಗೆಯೂ ಹೇಳುತ್ತಾನೆ. ಉದಾಹರಣೆಗೆ ಯಾರನ್ನಾದರೂ ನೋಡಿ ಅವರ ಮುಖದ ಮೇಲೆ ಅವರನ್ನು ಹೊಗಳಿ, ನಮ್ಮ ಮನಸ್ಸಿನೊಳಗೆ ಇವನು ನಾಶ ಆಗಬೇಕು ಎಂದುಕೊಂಡರೆ ಅದೆಂತಹ ಮನಸ್ಸಿನ ಶುದ್ಧಿ?” ಅಪ್ಪುವಿನ ಈ ಮಾತು ಚಾಟಿಯೇಟಿನಂತೆ ಕೇಳಿಸಿತ್ತು.

ಅವನ ಇಬ್ಬರು ಶಿಷ್ಯರೂ ಕುಳಿತಲ್ಲಿಯೇ ಮಿಸುಕಾಡಿದರು. ಅವರಲ್ಲಿ ಏನೋ ತಪ್ಪಿತಸ್ಥ ಭಾವನೆ ಉಂಟಾಗಿತ್ತು, ಕ್ಷಣಕಾಲ.

ನಂತರ ಮತ್ತೆ ಹಣದ ಆಸೆ ತನ್ನ ಕುರೂಪಿ ಹೆಡೆಯನ್ನೆತ್ತಿತ್ತು.

ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ತಮಗೆ ಬಂದ ಅನುಮಾನಗಳನ್ನೆಲ್ಲಾ ಕೇಳತೊಡಗಿದರು ಜನರು. ಇವರೆಷ್ಟು ಮುಗ್ಧರು ಎಂದುಕೊಂಡ ಅಪ್ರಮೇಯ, ತನಗೆ ತಿಳಿದಿರುವಷ್ಟು ವಿಷಯವನ್ನು ನಿರ್ವಂಚನೆಯಿಂದ ತಿಳಿಸಿದ.

ಬೆಂಗಳೂರು ತಲುಪುವ ಮೊದಲು ಎರಡು ಗಂಟೆಗಳ ಕಾಲ ಮಲಗಿದ್ದನೇನೋ ಅಪ್ರಮೇಯ.

ಏಳು ಗಂಟೆಗೆ ಹೊಸೂರು ರೈಲ್ವೇ ನಿಲ್ದಾಣ ತಲುಪಿತ್ತು ರೈಲು. ಫ್ಲಾಸ್ಕಿನಲ್ಲಿ ಹಾಕಿಟ್ಟಿದ್ದ ಹಾಲನ್ನು ಬಗ್ಗಿಸಿ ಕೊಟ್ಟ ಶಿಷ್ಯನೊಬ್ಬ. ಅವನಿಗೆ ಒಂದು ಕ್ಷಣ ಅನ್ನಿಸಿತ್ತು. ಇದರಲ್ಲಿ ತಾನು ನಿದ್ರೆಯ ಔಷಧಿ ಹಾಕಿಬಿಟ್ಟು… ಗುರುಗಳು ಮಲಗಿದಾಗ ಮೆಲ್ಲನೆ ಅವರ ಎಲ್ಲ ವಸ್ತುಗಳನ್ನೂ, ಅವರ ಮೈಮೇಲೂ ಎಲ್ಲ ಕಡೆ ಹುಡುಕಿ ವಿಗ್ರಹಗಳನ್ನು ತೆಗೆದುಕೊಂಡುಬಿಟ್ಟು ನಾಯಕ್‌ನ ಕಡೆಯವರಿಗೆ ಒಪ್ಪಿಸಿಬಿಟ್ಟರೆ… ಊಹೂಂ… ತಾನೇ ನಾಯಕ್‌ನನ್ನು ಭೇಟಿ ಮಾಡಿ ಕೊಟ್ಟುಬಿಡಬೇಕು. ಆಗಲೇ ಹಣ ಸಂದಾಯವಾಗುವುದು ಸುಲಭವಾಗುತ್ತದೆ. ಈ ನಾಯಕ್‌ನ ಕಡೆಯವರು ನನಗೆ ಹಣ ಕೊಟ್ಟಾರೆಂದು ಏನು ಖಾತ್ರಿ?

ಈ ಶಿಷ್ಯರಲ್ಲಿ ಯಾರಿಬ್ಬರು ತನಗೆ ವಿರುದ್ಧ? ತನ್ನ ಮೇಲೆ ಕತ್ತಿ ಮಸೆಯುತ್ತಿರುವವರಾರು? ಇವರನ್ನು ತಾನು ತಿದ್ದಲಾರನೇ? ಹಣ ಬೇಕು. ಹಣವಿಲ್ಲದೇ ಜೀವನವಿಲ್ಲ. ಆದರೆ ಹಣವೇ ಜೀವನವಲ್ಲ. ಯಾಕೆ ಈ ಹುಡುಗರಿಗೆ ಅರ‍್ಥವಾಗುತ್ತಿಲ್ಲ?

ಸುಮಾರು ಮೂವತ್ತರ ಅವರನ್ನು ಸುಮಾರು ಮೂವತ್ತೈದರ ತಾನು ಹುಡುಗರು ಎಂದುಕೊಂಡಿದ್ದು ಅವನಿಗೇ ನಗು ಬರಿಸಿತ್ತು. ಆದರೆ ಅವನಿಗೆ ಅಂತಹ ಒಳ್ಳೆಯ ಶಿಕ್ಷಣ ದೊರೆತಿತ್ತು. ತನ್ನ ಶಿಷ್ಯರಿಗೂ ಅದನ್ನೇ ಕೊಡಬೇಕೆಂಬುದು ಅವನ ಆಸೆ. ತಮ್ಮ ಶಿಷ್ಯರಲ್ಲೂ ಒಬ್ಬ ಸರಿಯಿಲ್ಲ ಎಂದರಲ್ಲ ಗುರುಗಳು! ಅವನು ಯಾರಿರಬಹುದು?

ಒಂಬತ್ತು ದಾಟುತ್ತಿದ್ದಂತೆ ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ರೈಲು ಗಾಡಿ ಬಂದು ನಿಂತಿತು.

ರೈಲಿಳಿಯುತ್ತಿದ್ದಂತೆ “ಓಹೋಹೋ ಬರಬೇಕು ಭ್ರಾತೃಶ್ರೀ!” ಎಂದಿದ್ದ ಸುಮಾರು ಮೂವತ್ತರ ಯುವಕನೊಬ್ಬ.

“ಅಗಸ್ತ್ಯ!” ಎಂದು ಉದ್ಗರಿಸಿ ಅವನನ್ನು ಆಲಿಂಗಿಸಿಕೊಂಡ ಅಪ್ರಮೇಯ.

ಗುರುಗಳು ಇನ್ನೊಬ್ಬರನ್ನು ಅಪ್ಪಿಕೊಂಡಿದ್ದನ್ನು ನೋಡಿ ಅಚ್ಚರಿ ಪಟ್ಟರು ಅಪ್ಪುವಿನ ಶಿಷ್ಯರು. ಎಂದಿಗೂ ಒಂದಿಷ್ಟು ದೂರವನ್ನು ತಮಗೂ ಇನ್ನೊಬ್ಬರಿಗೂ ನಡುವೆ ಇಡುತ್ತಿದ್ದ ಗುರುಗಳು ಈ ಅಪರಿಚಿತ ಯುವಕನನ್ನು ತಬ್ಬಿಕೊಂಡಿದ್ದಾರೆ!

ಅವನ ಹಿಡಿತದಿಂದ ಬಿಡಿಸಿಕೊಂಡು ಶಿಷ್ಯರತ್ತ ತಿರುಗಿ, “ನನ್ನ ಬಾಲ್ಯಸ್ನೇಹಿತ. ನಾನು ಸಂನ್ಯಾಸ ತೆಗೆದುಕೊಳ್ಳುವ ಮೊದಲು ಇವನೊಂದಿಗೆ ಇದ್ದೆ” ಎಂದ ಅಪ್ಪು.

“ಬಾಲ್ಯ ಸ್ನೇಹಿತ? ಇವನು … ಇವರು ನನ್ನ ಅಣ್ಣ. ಅಂದರೆ ನಾನು ಧರ್ಮರಾಯ, ಇವರು ದುರ್ಯೋಧನ” ಎಂದು ನಕ್ಕ.

ನಾಲ್ವರ ಜೊತೆಗೆ ಅಪ್ಪುವೂ ನಕ್ಕ.

“ನಾನು ಧರ್ಮರಾಯ, ನೀನು ದುರ್ಯೋಧನ… ಹೇಗೆ ಗೊತ್ತಾ? ವಯಸ್ಸಿನಲ್ಲಿ ನಾನು ದೊಡ್ಡವನು” ಎಂದ ಅಪ್ಪು.

ಹೊರಗಡೆ ಅಗಸ್ತ್ಯನ ಇನ್ನೋವಾ ಕಾರು ಕಾಯುತ್ತಿತ್ತು. ಆರುಜನರೂ ಹತ್ತಿದ ಮೇಲೆ ಕಾರು ಬೆಂಗಳೂರಿನ ಆಫೀಸ್‌ಗೆ ಹೋಗುವ ಜನರ ನಡುವೆ ತೆವಳುತ್ತಾ, ನುಸುಳುತ್ತಾ ಚಲಿಸಿತು.

“ಅಂದರೆ ನೀವು ಒಂದೇ ಮನೆಯಲ್ಲಿ ಬೆಳೆದವರಾ?” ಕೇಳಿದ ಕನಕದಾಸ.

“ಹೌದು, ನಾವಾಗ ಜಯನಗರದಲ್ಲಿದ್ವು. ಆಡಿದ್ದೇ ಆಟ. ಆದರೆ ಇವನು… ಇವರು ಬೇಗನೆ ನಮ್ಮನ್ನು ಬಿಟ್ಟು ಹೊರಟುಹೋದ…ರು” ಎಂದು ಪಕ್ಕದಲ್ಲಿ ಕೂತಿದ್ದ ಅಪ್ಪುವಿನ ಸೊಂಟಕ್ಕೆ ಎಡಗೈಯಿಂದ ಗುದ್ದಿದ. ನಂತರ “ಸಾರಿ, ಸಾರಿ, ನೀನು… ನೀವು ಸ್ವಾಮಿ ಅಂತ ನನಗೆ ಮರೆತೇ ಹೋಗುತ್ತೆ” ಎಂದ ಕ್ಷಮಾಪಣಾ ಸ್ವರದಲ್ಲಿ. ಆದರೆ ಅವನ ತುಂಟನಗೆ ಕಂಡ ಅಪ್ರಮೇಯ, ಇವನಿಗೇನೂ ಪಶ್ಚಾತ್ತಾಪವಾಗಿಲ್ಲ ಎಂದು ತಕ್ಷಣವೇ ಅರಿತುಕೊಂಡ.

ಕಾರು ಮೈಸೂರು ರಸ್ತೆಯಲ್ಲಿ ಓಡಿ ರಾಜರಾಜೇಶ್ವರಿ ಆರ್ಚ್‌ ಒಳಗೆ ನುಗ್ಗಿತು.

ಸ್ವಲ್ಪ ದೂರ ಸಾಗಿದ ಮೇಲೆ ಬಲಕ್ಕೆ ತಿರುಗಿತು.

“ಅರೆ, ಇದು ರಾಜರಾಜೇಶ್ವರಿ ದೇವಸ್ಥಾನ ಅಲ್ವಾ? ಅದೆಷ್ಟು ದೊಡ್ಡದಾಗಿ ಬೆಳೆದುಬಿಟ್ಟಿದೆ! ಓ ರಾಜಗೋಪುರ ಕೂಡ ಕಟ್ಟಿಬಿಟ್ಟಿದ್ದಾರೆ. ನಾನು ನೋಡಿದಾಗ ಪುಟ್ಟ ಗುಡಿ. ಪಕ್ಕದಲ್ಲಿ ಕೈಲಾಸ ಆಶ್ರಮ” ಎಂದು ನೆನೆದ ಅಪ್ಪು.

ದೇವೀ, ನನ್ನ ಈ ನಿರ್ದಿಷ್ಟ ಕರ್ತವ್ಯ ಮಾಡಲು ಶಕ್ತಿ ಕೊಡು ಎಂದು ಮನಸಾರೆ ಬೇಡಿಕೊಂಡ ಅಪ್ಪು.

ಪಾಹಿಮಾಂ ಶ್ರೀ ರಾಜರಾಜೇಶ್ವರಿ ಕೃಪಾಕರಿ ಶಂಕರಿ ಎಂದು ಅವನ ಮನ ಹಾಡಿತ್ತು. ಅವನಿಗೆ ಸಂಗೀತಪಾಠವೂ ಆಗಿದ್ದರಿಂದ ಸಮಯಕ್ಕೆ ತಕ್ಕ ಹಾಡುಗಳನ್ನು ಹೇಳಬಲ್ಲವನಾಗಿದ್ದ.

“ಬನ್ನಿ, ಇದೇ ನಮ್ಮ ಕೆಂಚೇನಹಳ್ಳಿಯ ಅರಮನೆ” ಎಂದು ನಾಟಕೀಯವಾಗಿ ಹೇಳಿ ಸಂದುಗೊಂದಿನಲ್ಲಿ ಹೋದ ನಂತರ ಸಿಕ್ಕ ಒಂದು ದೊಡ್ಡ ಮನೆಯ ಮುಂದೆ ನಿಲ್ಲಿಸಿ ಹೇಳಿದ ಅಗಸ್ತ್ಯ.

“ಮನೇಲಿ ಇನ್ಯಾರ‍್ಯಾರಿದ್ದಾರೆ?” ಎಂದ ಅಪ್ರಮೇಯ.

“ನಿನಗೆ… ನಿಮಗೆ… ಛೇ… ನಾನೀ ಬಹುವಚನವನ್ನು ಕಲಿಯಲಾರೆ ಎನಿಸುತ್ತಿದೆ!” ಎಂದು ಹೇಳಿ ನಂತರ “ನಿಮಗೆ ಒಂದು ಅಚ್ಚರಿ ಕಾದಿದೆ” ಎಂದ ಅಗಸ್ತ್ಯ.

ಬಾಗಿಲು ಬಡಿದ.

ಬಾಗಿಲು ತೆರೆದ ವ್ಯಕ್ತಿಯನ್ನು ಕಂಡು ಮಾತಾಡದೇ ಮೂಕನಾಗಿ, ಶಿಲೆಯಂತೆ ನಿಂತ ಅಪ್ರಮೇಯ. ಯಾರನ್ನು ಈ ಜೀವನದಲ್ಲಿ ಮತ್ತೆ ನೋಡಲಾರೆ, ನೋಡಬಾರದು ಎಂದುಕೊಂಡಿದ್ದನೋ ಆ ವ್ಯಕ್ತಿ ಬಾಗಿಲಲ್ಲಿದ್ದದ್ದು.

ಅವನ ಬಾಯಿಯಿಂದ ಒಂದೇ ಪದ ಹೊರಬಿದ್ದಿತ್ತು.

“ನಾಗ ಗಾಂಧಾರಿ!”

(ಸಶೇಷ)

ಯತಿರಾಜ್‌ ವೀರಾಂಬುಧಿ

Related post

Leave a Reply

Your email address will not be published. Required fields are marked *